ಪ್ರಧಾನ ಮಂತ್ರಿಯವರ ಕಛೇರಿ

ಜಿ-20 ಕೃಷಿ ಸಚಿವರ ಸಮಾವೇಶ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ


"ಕೃಷಿ ಸಚಿವರ ಜವಾಬ್ದಾರಿಗಳು ಆರ್ಥಿಕತೆಯ ಒಂದು ವಲಯವನ್ನು ನಿರ್ವಹಿಸುವುದಕ್ಕೆ ಮಾತ್ರ ಸೀಮಿತವಾಗದೆ,  ಮನುಕುಲದ  ಭವಿಷ್ಯವನ್ನು ಭದ್ರಪಡಿಸುವ ಕಡೆಗೆ ವಿಸ್ತರಣೆ ಆಗಬೇಕು"

"ಭಾರತದ ನೀತಿಯು 'ಬ್ಯಾಕ್ ಟು ಬೇಸಿಕ್ಸ್' ಮತ್ತು 'ಮಾರ್ಚ್ ಟು ಫ್ಯೂಚರ್'ಗಳ ಸಮ್ಮಿಳನವಾಗಿದೆ"

"ಶ್ರೀ ಅನ್ನ ಸಿರಿಧಾನ್ಯಗಳನ್ನು ನಮ್ಮ ಆಯ್ಕೆಯ ಆಹಾರವಾಗಿ ಸ್ವೀಕರಿಸೋಣ"

"ವಿಶ್ವದ ವಿವಿಧ ಭಾಗಗಳ ಸಾಂಪ್ರದಾಯಿಕ ಅಭ್ಯಾಸಗಳು ಪುನರುತ್ಪಾದಕ ಕೃಷಿಗೆ ಪರ್ಯಾಯಗಳನ್ನು ಅಭಿವೃದ್ಧಿಪಡಿಸಲು ನಮಗೆ ಸ್ಫೂರ್ತಿ ನೀಡಬಹುದು"

"ಭಾರತದ ಕೃಷಿಯಲ್ಲಿನ ಜಿ-20 ಆದ್ಯತೆಗಳು ನಮ್ಮ 'ಒಂದು ಭೂಮಿ'ಯನ್ನು ಗುಣಪಡಿಸುವುದರ ಮೇಲೆ ಕೇಂದ್ರೀಕರಿಸುತ್ತವೆ, ನಮ್ಮ 'ಒಂದು ಕುಟುಂಬ'ದಲ್ಲಿ ಸಾಮರಸ್ಯ ಸೃಷ್ಟಿಸುತ್ತವೆ ಮತ್ತು ಉಜ್ವಲವಾದ 'ಒಂದು ಭವಿಷ್ಯ'ದ ಭರವಸೆ ನೀಡುತ್ತವೆ"

Posted On: 16 JUN 2023 11:17AM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವೀಡಿಯೊ ಸಂದೇಶದ ಮೂಲಕ ಜಿ-20 ಕೃಷಿ ಸಚಿವರ ಸಮಾವೇಶ ಉದ್ದೇಶಿಸಿ ಭಾಷಣ ಮಾಡಿದರು.

ಸಭೆಯಲ್ಲಿ ನೆರೆದಿದ್ದ ಎಲ್ಲಾ ಗಣ್ಯರನ್ನು ಅವರು ಭಾರತಕ್ಕೆ ಸ್ವಾಗತಿಸಿದರು. ಕೃಷಿ ಮಾನವ ನಾಗರಿಕತೆಯ ಹೃದಯವಾಗಿದೆ. ಕೃಷಿ ಸಚಿವರ ಜವಾಬ್ದಾರಿಗಳು ಆರ್ಥಿಕತೆಯ ಒಂದು ವಲಯವನ್ನು ನಿರ್ವಹಿಸಲು ಮಾತ್ರ ಸೀಮಿತವಾಗದೆ, ಮನುಕುಲದ ಭವಿಷ್ಯವನ್ನು ಭದ್ರಪಡಿಸುವ ಕಡೆಗೆ ವಿಸ್ತರಣೆ ಆಗಬೇಕು ಎಂದು ಪ್ರತಿಪಾದಿಸಿದರು. ಕೃಷಿಯು ಜಾಗತಿಕವಾಗಿ 2.5 ಶತಕೋಟಿ ಜನರಿಗೆ ಜೀವನೋಪಾಯ ನೀಡುತ್ತದೆ. ಇದು ಜಿಡಿಪಿಯ ಸುಮಾರು 30% ಮತ್ತು ಜಾಗತಿಕ ದಕ್ಷಿಣದಲ್ಲಿ 60%  ಉದ್ಯೋಗಗಳನ್ನು ಹೊಂದಿದೆ. ಜಗತ್ತಿನ ದಕ್ಷಿಣ ಭಾಗ ಇಂದು ಎದುರಿಸುತ್ತಿರುವ ಸವಾಲುಗಳನ್ನು ಪ್ರಸ್ತಾಪಿಸಿದ ಅವರು, ಸಾಂಕ್ರಾಮಿಕ ರೋಗದ ಪ್ರಭಾವ ಮತ್ತು ಹದಗೆಡುತ್ತಿರುವ ಭೌಗೋಳಿಕ, ರಾಜಕೀಯ ಒತ್ತಡವು ಪೂರೈಕೆ ಸರಪಳಿಯನ್ನು ಅಡ್ಡಿಪಡಿಸುತ್ತಿದೆ ಎಂದರು. ಹವಾಮಾನ ಬದಲಾವಣೆಯ ಆತಂಕಗಳನ್ನು ಹೊರಹಾಕಿದ ಅವರು, ಇದು ಹೆಚ್ಚಿನ ಪ್ರಮಾಣದಲ್ಲಿ ಆಗಾಗ್ಗೆ ಪ್ರತೀಕೂಲ ಹವಾಮಾನಗಳನ್ನು ಉಂಟುಮಾಡುತ್ತದೆ ಎಂದರು.

ಕೃಷಿ ಕ್ಷೇತ್ರಕ್ಕೆ ಭಾರತ ನೀಡುತ್ತಿರುವ ಕೊಡುಗೆಯ ಮೇಲೆ ಬೆಳಕು ಚೆಲ್ಲಿದ  ಪ್ರಧಾನ ಮಂತ್ರಿ, 'ಬ್ಯಾಕ್ ಟು ಬೇಸಿಕ್ಸ್' ಮತ್ತು 'ಮಾರ್ಚ್ ಟು ಫ್ಯೂಚರ್' ಎಂಬ ಭಾರತದ ನೀತಿಯನ್ನು ಪುನರುಚ್ಚರಿಸಿದರು. ಭಾರತವು ನೈಸರ್ಗಿಕ ಕೃಷಿ ಮತ್ತು ತಂತ್ರಜ್ಞಾನ-ಶಕ್ತ ಕೃಷಿ ಉತ್ತೇಜಿಸುತ್ತಿದೆ. "ಭಾರತದಾದ್ಯಂತ ರೈತರು ಈಗ ನೈಸರ್ಗಿಕ ಕೃಷಿ ಕೈಗೊಳ್ಳುತ್ತಿದ್ದಾರೆ". ಅವರು ಸಂಶ್ಲೇಷಿತ ರಸಗೊಬ್ಬರಗಳು ಅಥವಾ ಕೀಟನಾಶಕಗಳನ್ನು ಬಳಸುತ್ತಿಲ್ಲ. ಆದರೆ ಈಗ ಅವರ ಗಮನವು ಭೂಮಿ ತಾಯಿಯನ್ನು ಪುನರುಜ್ಜೀವನಗೊಳಿಸುವುದು, ಮಣ್ಣಿನ ಆರೋಗ್ಯ ರಕ್ಷಿಸುವುದು, 'ಪ್ರತಿ ಹನಿ, ಹೆಚ್ಚು ಬೆಳೆ' ಉತ್ಪಾದಿಸುವುದು ಮತ್ತು ಸಾವಯವ ಗೊಬ್ಬರಗಳು ಮತ್ತು ಕೀಟ ನಿರ್ವಹಣೆ ಪರಿಹಾರಗಳನ್ನು ಉತ್ತೇಜಿಸುವ ಕಡೆಗೆ ವಾಲಿದೆ.  ಅದೇ ಸಮಯದಲ್ಲಿ, ನಮ್ಮ ರೈತರು ಉತ್ಪಾದಕತೆ ಹೆಚ್ಚಿಸಲು ತಂತ್ರಜ್ಞಾನವನ್ನು ಪೂರ್ವಭಾವಿಯಾಗಿ ಬಳಸುತ್ತಿದ್ದಾರೆ. ತಮ್ಮ ಜಮೀನಿನಲ್ಲಿ ಸೌರಶಕ್ತಿ ಉತ್ಪಾದಿಸುವ ಮತ್ತು ಬಳಸುವ ಉದಾಹರಣೆ ಉಲ್ಲೇಖಿಸಿದ ಪ್ರಧಾನ ಮಂತ್ರಿ, ಬೆಳೆ ಆಯ್ಕೆ ಉತ್ತಮಗೊಳಿಸಲು ಮಣ್ಣಿನ ಆರೋಗ್ಯ ಕಾರ್ಡ್‌ಗಳ ಬಳಕೆ ಮತ್ತು ಪೋಷಕಾಂಶಗಳನ್ನು ಸಿಂಪಡಿಸಲು  ಮತ್ತು ಅವರ ಬೆಳೆಗಳನ್ನು ಮೇಲ್ವಿಚಾರಣೆ ಮಾಡಲು ಡ್ರೋನ್‌ಗಳನ್ನು ಬಳಸುತ್ತಿದ್ದಾರೆ. ಕೃಷಿಯ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಈ 'ಸಮಾವೇಶ ವಿಧಾನ' ಅತ್ಯುತ್ತಮ ಮಾರ್ಗವಾಗಿದೆ ಎಂಬ ನಂಬಿಕೆಯನ್ನು ಶ್ರೀ ಮೋದಿ ವ್ಯಕ್ತಪಡಿಸಿದರು.

2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವನ್ನಾಗಿ ಆಚರಿಸಲಾಗುತ್ತಿದೆ, ಸಿರಿಧಾನ್ಯ ಅಥವಾ ಶ್ರೀ ಅನ್ನವನ್ನು ಆಧರಿಸಿ ಅನೇಕ ಭಕ್ಷ್ಯಗಳನ್ನು ತಯಾರಿಸುವುದರಿಂದ ಗಣ್ಯರು ಹೈದರಾಬಾದ್‌ನಲ್ಲಿ ತಮ್ಮ ತಟ್ಟೆಗಳಲ್ಲಿ ಇದರ ಪ್ರತಿಬಿಂಬ ಕಾಣುತ್ತಾರೆ ಎಂದರು. ಈ ಉತ್ಕೃಷ್ಟ ಆಹಾರಗಳು ಸೇವಿಸಲು ಆರೋಗ್ಯಕರ ಮಾತ್ರವಲ್ಲ, ಬೆಳೆಗೆ ಕಡಿಮೆ ನೀರು ಮತ್ತು ಗೊಬ್ಬರದ ಅಗತ್ಯವಿರುವುದರಿಂದ ರೈತರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಿರಿಧಾನ್ಯಗಳನ್ನು ಸಾವಿರಾರು ವರ್ಷಗಳಿಂದ ಬೆಳೆಯಲಾಗುತ್ತಿದೆ. ಆದರೆ ಮಾರುಕಟ್ಟೆ ಸಮಸ್ಯೆಯಿಂದಾಗಿ ಸಾಂಪ್ರದಾಯಿಕವಾಗಿ ಬೆಳೆದ ಆಹಾರ ಬೆಳೆಗಳ ಮೌಲ್ಯ ಕಳೆದುಹೋಗಿದೆ. "ಶ್ರೀ ಅನ್ನ ಅಥವಾ ಸಿರಿಧಾನ್ಯಗಳನ್ನು ನಮ್ಮ ಆಯ್ಕೆಯ ಆಹಾರವಾಗಿ ಸ್ವೀಕರಿಸೋಣ", ಸಿರಿಧಾನ್ಯಗಳಲ್ಲಿರುವ ಉತ್ತಮ ಅಭ್ಯಾಸಗಳು, ಸಂಶೋಧನೆ ಮತ್ತು ತಂತ್ರಜ್ಞಾನಗಳನ್ನು ಹಂಚಿಕೊಳ್ಳಲು ಭಾರತವು ಸಿರಿಧಾನ್ಯ ಸಂಶೋಧನಾ ಸಂಸ್ಥೆಯನ್ನು ಉತ್ಕೃಷ್ಟತೆಯ ಕೇಂದ್ರವಾಗಿ ಅಭಿವೃದ್ಧಿಪಡಿಸುತ್ತಿದೆ ಎಂದು ಪ್ರಧಾನಿ ತಿಳಿಸಿದರು.

ಜಾಗತಿಕ ಆಹಾರ ಭದ್ರತೆ ಸಾಧಿಸಲು ಸಂಘಟಿತ ಕ್ರಮಗಳನ್ನು ಹೇಗೆ ಕೈಗೊಳ್ಳಬೇಕು ಎಂಬುದರ ಕುರಿತು ಚರ್ಚಿಸಬೇಕು ಮೋದಿ ಅವರು ಕೃಷಿ ಸಚಿವರನ್ನು ಒತ್ತಾಯಿಸಿದರು. ಕನಿಷ್ಠ ರೈತರ ಮೇಲೆ ಕೇಂದ್ರೀಕರಿಸುವ ಮತ್ತು ಜಾಗತಿಕ ರಸಗೊಬ್ಬರ ಪೂರೈಕೆ ಸರಪಳಿಗಳನ್ನು ಬಲಪಡಿಸುವ ಸುಸ್ಥಿರ ಮತ್ತು ಎಲ್ಲರನ್ನೂ ಒಳಗೊಂಡ ಆಹಾರ ವ್ಯವಸ್ಥೆ ನಿರ್ಮಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುವಂತೆ ಅವರು ಸಲಹೆ ನೀಡಿದರು. ಅದೇ ಸಮಯದಲ್ಲಿ, ಉತ್ತಮ ಮಣ್ಣಿನ ಆರೋಗ್ಯ, ಬೆಳೆಗಳ ಆರೋಗ್ಯ ಮತ್ತು ಹೆಚ್ಚಿನ ಇಳುವರಿಯ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ಪ್ರಧಾನಿ ಮನವಿ ಮಾಡಿದರು. ವಿಶ್ವದ ವಿವಿಧ ಭಾಗಗಳ ಸಾಂಪ್ರದಾಯಿಕ ಪದ್ಧತಿಗಳು ಪುನರುತ್ಪಾದಕ ಕೃಷಿಗೆ ಪರ್ಯಾಯಗಳನ್ನು ಅಭಿವೃದ್ಧಿಪಡಿಸಲು ನಮಗೆ ಸ್ಫೂರ್ತಿ ನೀಡಬಹುದು. ನಾವೀನ್ಯತೆ ಮತ್ತು ಡಿಜಿಟಲ್ ತಂತ್ರಜ್ಞಾನದೊಂದಿಗೆ ರೈತರನ್ನು ಸಬಲೀಕರಣಗೊಳಿಸುವ ಅಗತ್ಯವಿದೆ. ಜಾಗತಿಕ ದಕ್ಷಿಣ ಭಾಗದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಪರಿಹಾರಗಳನ್ನು ಕೈಗೆಟುಕುವಂತೆ ಮಾಡಬೇಕು. ತ್ಯಾಜ್ಯದಿಂದ ಸಂಪತ್ತು ಸೃಷ್ಟಿಸಲು ಹೂಡಿಕೆ ಮಾಡುವಾಗ ಕೃಷಿ ಮತ್ತು ಆಹಾರ ತ್ಯಾಜ್ಯ ಕಡಿಮೆ ಮಾಡುವ ತುರ್ತು ಅಗತ್ಯವಿದೆ ಎಂದರು.

“ಭಾರತದ ಕೃಷಿಯಲ್ಲಿನ ಜಿ-20 ಆದ್ಯತೆಗಳು ನಮ್ಮ ‘ಒಂದು ಭೂಮಿ’ಯನ್ನು ಗುಣಪಡಿಸುವತ್ತ ಗಮನ ಹರಿಸುತ್ತವೆ. ನಮ್ಮ ‘ಒಂದು ಕುಟುಂಬ’ದಲ್ಲಿ ಸಾಮರಸ್ಯ ಸೃಷ್ಟಿಸುತ್ತವೆ ಮತ್ತು ಉಜ್ವಲವಾದ ‘ಒಂದು ಭವಿಷ್ಯ’ದ ಭರವಸೆ ನೀಡುತ್ತವೆ”. ‘ಆಹಾರ ಭದ್ರತೆ ಮತ್ತು ಪೌಷ್ಟಿಕಾಂಶ ಕುರಿತು ಡೆಕ್ಕನ್ ಉನ್ನತ ಮಟ್ಟದ ತತ್ವಗಳು’ ಮತ್ತು ರಾಗಿ ಮತ್ತು ಇತರ ಧಾನ್ಯಗಳಿಗೆ ‘ಮಹಾರಿಷಿ’ ಎಂಬ  2 ಉಪಕ್ರಮಗಳ ಮೇಲೆ ಕೆಲಸ ನಡೆಯುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. "ಈ 2 ಉಪಕ್ರಮಗಳಿಗೆ ಬೆಂಬಲವು ಎಲ್ಲರನ್ನೂ ಒಳಗೊಂಡ, ಸುಸ್ಥಿರ ಮತ್ತು ಚೇತರಿಸಿಕೊಳ್ಳುವ ಕೃಷಿಗೆ ಬೆಂಬಲದ ಹೇಳಿಕೆಯಾಗಿದೆ" ಎಂದು ಪ್ರಧಾನ  ಮಂತ್ರಿ, ತಮ್ಮ ಭಾಷಣ ಮುಕ್ತಾಯಗೊಳಿಸಿದರು.

*****



(Release ID: 1932839) Visitor Counter : 271