ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

'ಅಂತರಾಷ್ಟ್ರೀಯ ಯೋಗ ದಿವಸ್ ಮೀಡಿಯಾ ಸಮ್ಮಾನ್' ಪುರಸ್ಕಾರಗಳನ್ನು ಘೋಷಿಸಿದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ


ಯೋಗದ ಸಂದೇಶವನ್ನು ಹರಡುವಲ್ಲಿ ಮಾಧ್ಯಮಗಳ ಕೊಡುಗೆಯನ್ನು ಗುರುತಿಸಿ 33 ಪ್ರಶಸ್ತಿಗಳ ಘೋಷಣೆ

ಭಾರತ ಮತ್ತು ವಿದೇಶಗಳಲ್ಲಿ ಯೋಗವನ್ನು ಪ್ರಚಾರ ಮಾಡುವಲ್ಲಿ ಮಾಧ್ಯಮಗಳು ವಹಿಸಿದ ಸಕಾರಾತ್ಮಕ ಪ್ರಮುಖ ಪಾತ್ರವನ್ನು ಈ ಸನ್ಮಾನವು ಗುರುತಿಸುತ್ತದೆ: ಶ್ರೀ ಅನುರಾಗ್ ಠಾಕೂರ್

ತಿಳುವಳಿಕೆ, ಮೆಚ್ಚುಗೆ ಮತ್ತು ಅಳವಡಿಕೆಯಲ್ಲಿ ಮಾಧ್ಯಮವು ವೇಗವರ್ಧಕವಾಗಿದೆ: ಶ್ರೀ ಠಾಕೂರ್

Posted On: 09 JUN 2023 5:42PM by PIB Bengaluru

ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಇಂದು 'ಅಂತರಾಷ್ಟ್ರೀಯ ಯೋಗ ದಿವಸ್ ಮೀಡಿಯಾ ಸಮ್ಮಾನ್' ನ ಎರಡನೇ ಆವೃತ್ತಿಯನ್ನು ಪ್ರಕಟಿಸಿದೆ.

'ಅಂತರಾಷ್ಟ್ರೀಯ ಯೋಗ ದಿವಸ್ ಮೀಡಿಯಾ ಸಮ್ಮಾನ್' 2023ರ ಅಡಿಯಲ್ಲಿ, ಮುದ್ರಣ, ದೂರದರ್ಶನ ಮತ್ತು ರೇಡಿಯೋ ಎಂಬ ಮೂರು ವಿಭಾಗಗಳಲ್ಲಿ ಮೂವತ್ತಮೂರು ಸನ್ಮಾನಗಳನ್ನು ಇಪ್ಪತ್ತೆರಡು ಭಾರತೀಯ ಭಾಷೆಗಳಲ್ಲಿ ಮತ್ತು ಇಂಗ್ಲಿಷ್ ನಲ್ಲಿ ಈ ಕೆಳಗಿನಂತೆ ನೀಡಲಾಗುವುದು:

1.  22 ಭಾರತೀಯ ಭಾಷೆಗಳು ಮತ್ತು ಇಂಗ್ಲಿಷ್ನಲ್ಲಿ 11 ಸನ್ಮಾನಗಳು - "ಪತ್ರಿಕೆಯಲ್ಲಿ ಯೋಗದ ಅತ್ಯುತ್ತಮ ಮಾಧ್ಯಮ ಪ್ರಸಾರ" ವಿಭಾಗದ ಅಡಿಯಲ್ಲಿ ನೀಡಲಾಗುವುದು. 

2.  22 ಭಾರತೀಯ ಭಾಷೆಗಳು ಮತ್ತು ಇಂಗ್ಲಿಷ್ನಲ್ಲಿ 11 ಸನ್ಮಾನಗಳು - "ವಿದ್ಯುನ್ಮಾನ ಮಾಧ್ಯಮದಲ್ಲಿ (ದೂರದರ್ಶನ) ಯೋಗದ ಅತ್ಯುತ್ತಮ ಮಾಧ್ಯಮ ಪ್ರಸಾರ" ವಿಭಾಗದ ಅಡಿಯಲ್ಲಿ ನೀಡಲಾಗುವುದು.
3.  22 ಭಾರತೀಯ ಭಾಷೆಗಳು ಮತ್ತು ಇಂಗ್ಲಿಷ್ನಲ್ಲಿ 11 ಸನ್ಮಾನಗಳು - "ವಿದ್ಯುನ್ಮಾನ ಮಾಧ್ಯಮದಲ್ಲಿ (ರೇಡಿಯೋ) ಯೋಗದ ಅತ್ಯುತ್ತಮ ಮಾಧ್ಯಮ ಪ್ರಸಾರ" ವಿಭಾಗದ ಅಡಿಯಲ್ಲಿ ನೀಡಲಾಗುವುದು. 

2023ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದ ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಅರ್ಪಿಸಿ, ಪ್ರತಿ ವರ್ಷ ಜೂನ್ 21ರಂದು ಆಚರಿಸಲಾಗುವ ಅಂತರಾಷ್ಟ್ರೀಯ ಯೋಗ ದಿನವು ವಿಶ್ವದಾದ್ಯಂತ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ಸಾಮೂಹಿಕ ಆಂದೋಲನವನ್ನು ಸೃಷ್ಟಿಸಿದೆ ಎಂದು ಹೇಳಿದರು.

ಯೋಗವು ಗಡಿ ಮತ್ತು ಸಂಸ್ಕೃತಿಗಳನ್ನು ಮೀರಿ, ವಿಶ್ವದಾದ್ಯಂತ ಲಕ್ಷಾಂತರ ಜನರ ಗಮನವನ್ನು ಸೆಳೆದಿದೆ ಎಂದು ಅವರು ಹೇಳಿದ್ದಾರೆ. ಮುಂದುವರೆದು ಅವರು "ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮದ ದೃಷ್ಟಿಯಲ್ಲಿ ಯೋಗದ ಸಮಗ್ರ ವಿಧಾನವು ಗಮನಾರ್ಹ ಆಸಕ್ತಿಯನ್ನು ಮೂಡಿಸಿದೆ, ಇದು ಜಾಗತಿಕ ವಿದ್ಯಮಾನವಾಗಿದೆ. ಜಾಗೃತಿ ಮೂಡಿಸುವಲ್ಲಿ ಮತ್ತು ಯೋಗದ ಪರಿವರ್ತಕ ಸಾಮರ್ಥ್ಯವನ್ನು ಪ್ರದರ್ಶಿಸುವಲ್ಲಿ ಮಾಧ್ಯಮಗಳ ಸತತ ಪ್ರಯತ್ನಗಳಿಂದ ಮಾತ್ರ ಈ ಸಾಧನೆಯು ಸಾಧ್ಯವಾಗಿದೆ. ಈ ಸಾಧನೆಯನ್ನು ಗುರುತಿಸಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ವರ್ಷ 'ಅಂತರಾಷ್ಟ್ರೀಯ ಯೋಗ ದಿವಸ್ ಮೀಡಿಯಾ ಸಮ್ಮಾನ್' ನ 2ನೇ ಆವೃತ್ತಿಯನ್ನು ಹೊರತರಲು ನಿರ್ಧರಿಸಿದೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ" ಎಂದು ತಿಳಿಸಿದರು.

"ಭಾರತ ಮತ್ತು ವಿದೇಶಗಳಲ್ಲಿ ಯೋಗದ ಪ್ರಸಾರದಲ್ಲಿ ಮಾಧ್ಯಮಗಳು ವಹಿಸುವ ಪ್ರಮುಖ ಪಾತ್ರವನ್ನು ಈ ಸಮ್ಮಾನ್ ಗುರುತಿಸುತ್ತದೆ. ನಾವು ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿರುವ ಈ  ಸಂದರ್ಭದಲ್ಲಿ, ಈ ಪ್ರಾಚೀನ ಅಭ್ಯಾಸವನ್ನು ಉತ್ತೇಜಿಸಲು ಮಾಧ್ಯಮಗಳು ಹೊಂದಿರುವ ಅಪಾರ ಸಕ್ಷಮ ಶಕ್ತಿ, ಜವಾಬ್ದಾರಿ, ಹಾಗೂ ಹಲವಾರು ಪ್ರಯೋಜನಗಳನ್ನು ಗುರುತಿಸುವುದು ಬಹಳ ಮುಖ್ಯ" ಎಂದು ಶ್ರೀ ಠಾಕೂರ್ ಹೇಳಿದರು.

ಈ ಪ್ರಾಚೀನ ಅಭ್ಯಾಸದ ತಿಳುವಳಿಕೆ, ಮೆಚ್ಚುಗೆ ಮತ್ತು ಅಳವಡಿಕೆಯನ್ನು ಬೆಳೆಸುವಲ್ಲಿ ಮಾಧ್ಯಮವು ವೇಗವರ್ಧಕವಾಗಿದೆ. ಇದನ್ನು ಎಲ್ಲಾ ವಯಸ್ಸಿನ, ಎಲ್ಲಾ ಹಿನ್ನೆಲೆಯ ಮತ್ತು ಎಲ್ಲಾ ಸಾಮರ್ಥ್ಯಗಳ ಜನರಿಗೆ ದೊರಕಿಸುವ ಸಾರ್ವತ್ರಿಕ ಅಭ್ಯಾಸವಾಗಿ ಯೋಗವನ್ನು ಪ್ರಸ್ತುತಪಡಿಸುವಲ್ಲಿ ಮಾಧ್ಯಮವು ಯಶಸ್ವಿಯಾಗಿದೆ, ಎಂದು ಅವರು ಹೇಳಿದರು.

ಈ ನಿಟ್ಟಿನಲ್ಲಿ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಕ್ಕಾಗಿ ಮಾಧ್ಯಮಗಳಿಗೆ ಧನ್ಯವಾದ ಅರ್ಪಿಸಿದ ಶ್ರೀ ಠಾಕೂರ್, "ಭಾರತ ಮತ್ತು ಪ್ರಪಂಚದಾದ್ಯಂತ ಯೋಗವನ್ನು ಪ್ರಸಾರ ಮಾಡುವಲ್ಲಿ ಮಾಧ್ಯಮಗಳು ನೀಡಿದ ಅಮೂಲ್ಯ ಕೊಡುಗೆಗಳಿಗಾಗಿ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಈ ಪ್ರಾಚೀನ ಅಭ್ಯಾಸದ ಪರಿವರ್ತಕ ಶಕ್ತಿಯನ್ನು ಪ್ರಚಾರ ಮಾಡುವ ನಿಮ್ಮ ಅಚಲ ಸಮರ್ಪಣೆ ನಿಸ್ಸಂದೇಹವಾಗಿ ಯೋಗವನ್ನು ಸ್ವಾಸ್ಥ್ಯದ ಸಾರ್ವತ್ರಿಕ ಭಾಷೆಯನ್ನಾಗಿ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ" ಎಂದು ಹೇಳಿದರು.

ಈ ಸನ್ಮಾನಗಳನ್ನು ಸ್ವತಂತ್ರ ತೀರ್ಪುಗಾರರು ಶಿಫಾರಸು ಮಾಡುತ್ತಾರೆ. ಈ ಸನ್ಮಾನವು ವಿಶೇಷ ಮಾಧ್ಯಮ / ಫಲಕ / ಟ್ರೋಫಿ ಮತ್ತು ಪ್ರಶಂಸಾ ಪತ್ರವನ್ನು ಒಳಗೊಂಡಿರುತ್ತದೆ.

ಜೂನ್ 10, 2023ರಿಂದ ಜೂನ್ 25, 2023ರ ಅವಧಿಯಲ್ಲಿ ರಚಿಸಿ ಪ್ರಕಟಿಸಿದ, ಆಡಿಯೋ ಅಥವಾ ದೃಶ್ಯ ವಿಷಯ ಪ್ರಸಾರ ಸಂಬಂಧಿತ ತುಣುಕುಗಳೊಂದಿಗೆ ಮಾಧ್ಯಮ ಸಂಸ್ಥೆಗಳು ನಿಗದಿತ ನಮೂನೆಯಲ್ಲಿ ವಿವರಗಳನ್ನು ಸಲ್ಲಿಸಬೇಕು ಎಂದು ಮಾರ್ಗಸೂಚಿಗಳು ತಿಳಿಸುತ್ತವೆ. ಅರ್ಜಿ ಸಲ್ಲಿಸಲು ಜುಲೈ 1, 2023 ಕೊನೆಯ ದಿನವಾಗಿದೆ.

ವಿವರವಾದ ಮಾರ್ಗಸೂಚಿಗಳನ್ನು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (https://pib.gov.in/indexd.aspx) ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯಗಳ (https://mib.gov.in/) ವೆಬ್ ಸೈಟ್ ಗಳಿಂದ ಪಡೆಯಬಹುದು.

ಅಂತರಾಷ್ಟ್ರೀಯ ಯೋಗ ದಿವಸ ಮಾಧ್ಯಮ ಸನ್ಮಾನದ ಬಗ್ಗೆ ಸ್ವಲ್ಪ ಮಾಹಿತಿ:

ಭಾರತ ಮತ್ತು ವಿದೇಶಗಳಲ್ಲಿ ಯೋಗವನ್ನು ಪ್ರಸಾರ ಮಾಡುವಲ್ಲಿ ಮಾಧ್ಯಮಗಳ ಸಕಾರಾತ್ಮಕ ಪಾತ್ರ ಮತ್ತು ಜವಾಬ್ದಾರಿಯನ್ನು ಗುರುತಿಸಿ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 2019ರ ಜೂನ್ ನಲ್ಲಿ ಮೊದಲ ಅಂತರಾಷ್ಟ್ರೀಯ ಯೋಗ ದಿವಸ್ ಮೀಡಿಯಾ ಸಮ್ಮಾನ್ (ಎವೈಡಿಎಂಎಸ್) ಅನ್ನು ಸ್ಥಾಪಿಸಿತ್ತು. ಈ ಪ್ರಶಸ್ತಿಯ ಮೊದಲ ಆವೃತ್ತಿಯನ್ನು 2020ರ ಜನವರಿ 7ರಂದು ನೀಡಲಾಯಿತು. ನಂತರದ ಕಾಲದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಈ ಪ್ರಶಸ್ತಿಗೆ ವಿರಾಮ ನೀಡಲಾಯಿತು. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ಪ್ರಶಸ್ತಿಯನ್ನು ಪುನರುಜ್ಜೀವನಗೊಳಿಸಿ 2023ರಲ್ಲಿ ಎರಡನೇ ಆವೃತ್ತಿಯನ್ನು ಆಯೋಜಿಸಲು ನಿರ್ಧರಿಸಿದೆ.

2015ರಿಂದ ಪ್ರಾರಂಭಿಸಿ ಪ್ರತಿ ವರ್ಷ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಯೋಗ ದಿನದ ಕಲ್ಪನೆಯನ್ನು ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2014ರ ಸೆಪ್ಟೆಂಬರ್ 27ರಂದು ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ (ಯುಎನ್ ಜಿಎ) ಮಾಡಿದ ಭಾಷಣದಲ್ಲಿ ಮೊದಲ ಬಾರಿಗೆ ಪ್ರಸ್ತಾಪಿಸಿದರು.

ಈ ವಿಚಾರವನ್ನು ಪ್ರಸ್ತಾಪಿಸುತ್ತಾ ಪ್ರಧಾನಮಂತ್ರಿಯವರು:

"ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಇದು ಮನಸ್ಸು ಮತ್ತು ದೇಹದ ಏಕತಾನತೆಯನ್ನು ಸಾಕಾರಗೊಳಿಸುತ್ತದೆ; ಆಲೋಚನೆ ಮತ್ತು ಕ್ರಿಯೆ; ಸಂಯಮ ಮತ್ತು ಪೂರೈಕೆ; ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯ; ಆರೋಗ್ಯ ಮತ್ತು ಯೋಗಕ್ಷೇಮದ ಸಮಗ್ರ ವಿಧಾನವಾಗಿದೆ. ಇದು ವ್ಯಾಯಾಮವಲ್ಲ, ಆದರೆ ನಿಮಗೆ ಐಕಮತ್ಯತೆಯನ್ನು ಕಾಪಾಡಿಕೊಳ್ಳಲು ಸಹಕರಿಸುತ್ತದೆ. ಜಗತ್ತು ಮತ್ತು ಪ್ರಕೃತಿಯೊಂದಿಗೆ ಏಕತೆಯ ಪ್ರಜ್ಞೆಯನ್ನು ಮೂಡಿಸುತ್ತದೆ. ನಮ್ಮ ಜೀವನಶೈಲಿಯನ್ನು ಬದಲಾಯಿಸಿ, ಪ್ರಜ್ಞೆಯನ್ನು ಸೃಷ್ಟಿಸುವ ಮೂಲಕ, ಯೋಗವು ನಮ್ಮ ಸಮಗ್ರ ಯೋಗಕ್ಷೇಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಂತಾರಾಷ್ಟ್ರೀಯ ಯೋಗ ದಿನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗೋಣ' ಎಂದು ಹೇಳಿದ್ದಾರೆ.

ಈ ಆರಂಭಿಕ ಪ್ರಸ್ತಾಪವನ್ನು ಅನುಸರಿಸಿ, ಯುಎನ್ ಜಿಎ 2014ರ ಅಕ್ಟೋಬರ್ 14ರಂದು "ಅಂತರರಾಷ್ಟ್ರೀಯ ಯೋಗ ದಿನ" ಎಂಬ ಕರಡು ನಿರ್ಣಯದ ಬಗ್ಗೆ ಅನೌಪಚಾರಿಕ ಸಮಾಲೋಚನೆಗಳನ್ನು ನಡೆಸಿತು. ಈ ಬಗ್ಗೆಯ ಸಮಾಲೋಚನೆಗಳನ್ನು ಭಾರತದ ನಿಯೋಗವು ಆಯೋಜಿಸಿತ್ತು. ಡಿಸೆಂಬರ್ 11, 2014ರಂದು, ಭಾರತದ ಖಾಯಂ ಪ್ರತಿನಿಧಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕರಡು ನಿರ್ಣಯವನ್ನು ಮಂಡಿಸಿದರು. ಈ ಕರಡು ಪ್ರತಿಯು ಇದನ್ನು ಪ್ರಾಯೋಜಿಸಿದ 177 ಸದಸ್ಯ ರಾಷ್ಟ್ರಗಳಿಂದ ವ್ಯಾಪಕ ಬೆಂಬಲವನ್ನು ಪಡೆಯಿತು, ಇದನ್ನು ಎಲ್ಲರ ಅನುಮೋದನೆಯೊಂದಿಗೆ ಅಂಗೀಕರಿಸಲಾಯಿತು. ಈ ಉಪಕ್ರಮವು ಹೆಚ್ಚಿನ ಜಾಗತಿಕ ನಾಯಕರ ಬೆಂಬಲವನ್ನು ಪಡೆಯಿತು. ಒಟ್ಟು 177 ರಾಷ್ಟ್ರಗಳು ಈ ನಿರ್ಣಯವನ್ನು ಸಹ-ಪ್ರಾಯೋಜಿಸಿದವು. ಈ ಅನುಮೋದನೆಯು ಅಂತಹ ಯಾವುದೇ ಯುಎನ್ ಜಿಎ ನಿರ್ಣಯವನ್ನು ಇದುವರೆಗೆ ಅಂಗೀಕರಿಸಿದ ಅತಿ ಹೆಚ್ಚಿನ ಸಹ-ಪ್ರಾಯೋಜಕರನ್ನು ಹೊಂದಿದೆ.


(Release ID: 1931666) Visitor Counter : 127