ಪ್ರಧಾನ ಮಂತ್ರಿಯವರ ಕಛೇರಿ
ಛತ್ರಪತಿ ಶಿವಾಜಿ ಮಹಾರಾಜರ 350ನೇ ವರ್ಷದ ಪಟ್ಟಾಭಿಷೇಕದ ದಿನಾಚರಣೆಯಂದು ಪ್ರಧಾನಮಂತ್ರಿಯವರು ಭಾಷಣ ಮಾಡಿದರು
"ರಾಷ್ಟ್ರೀಯ ಕಲ್ಯಾಣ ಮತ್ತು ಸಾರ್ವಜನಿಕ ಕಲ್ಯಾಣವು ಶಿವಾಜಿ ಮಹಾರಾಜರ ಆಡಳಿತದ ಮೂಲ ಅಂಶಗಳಾಗಿವೆ"
"ಶಿವಾಜಿ ಮಹಾರಾಜರು ಯಾವಾಗಲೂ ಭಾರತದ ಏಕತೆ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯಲು ಅತ್ಯುನ್ನತ ಪ್ರಾಮುಖ್ಯತೆಯನ್ನು ನೀಡಿದ್ದರು"
"ಛತ್ರಪತಿ ಶಿವಾಜಿ ಮಹಾರಾಜರ ಚಿಂತನೆಗಳ ಪ್ರತಿಬಿಂಬವನ್ನು “ಏಕ ಭಾರತ, ಶ್ರೇಷ್ಠ ಭಾರತ” ದೃಷ್ಟಿಕೋನದಲ್ಲಿ ಕಾಣಬಹುದು"
"ಶಿವಾಜಿ ಮಹಾರಾಜರು ಗುಲಾಮಗಿರಿಯ ಮನಸ್ಥಿತಿಯನ್ನು ಕೊನೆಗೊಳಿಸುವ ಮೂಲಕ ರಾಷ್ಟ್ರ ನಿರ್ಮಾಣಕ್ಕಾಗಿ ಜನರನ್ನು ಪ್ರೇರೇಪಿಸಿದರು"
"ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ದೂರದೃಷ್ಟಿಯಿಂದಾಗಿ ಇತಿಹಾಸದ ಇತರ ವೀರರಿಗಿಂತ ಸಂಪೂರ್ಣವಾಗಿ ಭಿನ್ನರಾಗಿದ್ದಾರೆ"
"ಬ್ರಿಟಿಷ್ ಆಳ್ವಿಕೆಯ ಗುರುತನ್ನು ಹೊಂದಿರುವ ಭಾರತೀಯ ನೌಕಾಪಡೆಯ ಧ್ವಜವನ್ನು ಬದಲಾಯಿಸಿ ಶಿವಾಜಿ ಮಹಾರಾಜರ ಲಾಂಛನವನ್ನು ಅನುಷ್ಠಾನಗೊಳಿಸಲಾಗಿದೆ"
"ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ಸಿದ್ಧಾಂತ ಮತ್ತು ನ್ಯಾಯವು ಅನೇಕ ತಲೆಮಾರುಗಳಿಗೆ ಸ್ಫೂರ್ತಿ ನೀಡಿದೆ"
“ಛತ್ರಪತಿ ಶಿವಾಜಿ ಮಹಾರಾಜರ ಕನಸಾದ ಸ್ವರಾಜ್, ಉತ್ತಮ ಆಡಳಿತ ಮತ್ತು ಸ್ವಾವಲಂಬನೆಯ ಭಾರತವನ್ನು ನಿರ್ಮಿಸುವುದು ನಮ್ಮ ಪಯಣವಾಗಿರುತ್ತದೆ. ಇದು ಅಭಿವೃದ್ಧಿ ಹೊಂದಿದ ಭಾರತದ ಪಯಣವಾಗಿರುತ್ತದೆ”
Posted On:
02 JUN 2023 11:11AM by PIB Bengaluru
ಛತ್ರಪತಿ ಶಿವಾಜಿ ಮಹಾರಾಜರ 350ನೇ ವರ್ಷದ ಪಟ್ಟಾಭಿಷೇಕ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೊ ಸಮಾವೇಶದ ಮೂಲಕ ಭಾಷಣ ಮಾಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, “ಸ್ವಾತಂತ್ರ್ಯದ 75ನೇ ವರ್ಷದ (ಆಜಾದಿ ಕಾ ಅಮೃತ್ ಮಹೋತ್ಸವ) ಸಂದರ್ಭದಲ್ಲಿ ಆಚರಿಸಲ್ಪಡುವ ಈ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ದಿನವು ಪ್ರತಿಯೊಬ್ಬರಿಗೂ ಹೊಸ ಪ್ರಜ್ಞೆ ಮತ್ತು ಹೊಸ ಶಕ್ತಿಯ ಹೊಸ ಹುರುಪನ್ನು ತುಂಬಿದೆ. ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕವು ಮುನ್ನೂರ ಐವತ್ತು ವರ್ಷಗಳ ಹಿಂದಿನ ಐತಿಹಾಸಿಕ ಕಾಲಘಟ್ಟದ ವಿಶೇಷ ಅಧ್ಯಾಯವಾಗಿದ್ದು, ಸ್ವರಾಜ್ಯ, ಉತ್ತಮ ಆಡಳಿತ, ಸಮೃದ್ಧಿಯ ಅಂದಿನ ಮಹಾನ್ ಕಥೆಗಳು ಇಂದಿಗೂ ಎಲ್ಲರಿಗೂ ಪ್ರೇರಣೆ ನೀಡುತ್ತಿವೆ” ಎಂದು ಹೇಳಿದರು. "ರಾಷ್ಟ್ರೀಯ ಕಲ್ಯಾಣ ಮತ್ತು ಸಾರ್ವಜನಿಕ ಕಲ್ಯಾಣವು ಶಿವಾಜಿ ಮಹಾರಾಜರ ಆಡಳಿತದ ಮೂಲಭೂತ ಅಂಶಗಳಾಗಿದ್ದವು" ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಸ್ವರಾಜ್ಯದ ಮೊದಲ ರಾಜಧಾನಿ ರಾಯಗಢ ಕೋಟೆಯ ಅಂಗಳದಲ್ಲಿ ಭವ್ಯವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, ಮತ್ತು ಈ ವಿಶೇಷ ದಿನವನ್ನು ಮಹಾರಾಷ್ಟ್ರದಾದ್ಯಂತ ಹಬ್ಬವಾಗಿ ಆಚರಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಅನೇಕ ಯೋಜನೆಗಳು ಮತ್ತು ಅವುಗಳ ಅನುಷ್ಠಾನಕ್ಕಾಗಿ ಮಹಾರಾಷ್ಟ್ರ ಸರ್ಕಾರವನ್ನು ಅಭಿನಂದಿಸಿದ ಪ್ರಧಾನಮಂತ್ರಿ ಅವರು, ಮಹಾರಾಷ್ಟ್ರದಲ್ಲಿ ವರ್ಷವಿಡೀ ಇಂತಹ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
“ಮುನ್ನೂರ ಐವತ್ತು ವರ್ಷಗಳ ಹಿಂದೆ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ನಡೆದಾಗ ಅದರಲ್ಲಿ ಸ್ವರಾಜ್ಯ ಮತ್ತು ರಾಷ್ಟ್ರೀಯತೆಯ ಚೈತನ್ಯ ಸೇರಿತ್ತು. ಶಿವಾಜಿ ಮಹಾರಾಜರು ಯಾವಾಗಲೂ ಭಾರತದ ಏಕತೆ ಮತ್ತು ಅಖಂಡತೆಯನ್ನು ಎತ್ತಿಹಿಡಿಯಲು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದರು. ಇಂದು, ಛತ್ರಪತಿ ಶಿವಾಜಿ ಮಹಾರಾಜರ ಚಿಂತನೆಗಳ ಪ್ರತಿಬಿಂಬವನ್ನು “ಏಕ ಭಾರತ, ಶ್ರೇಷ್ಠ ಭಾರತ” ಯೋಜನೆಯ ದೃಷ್ಟಿಕೋನದಲ್ಲಿ ನಾವು ಕಾಣಬಹುದು” ಎಂದು ಪ್ರಧಾನಮಂತ್ರಿ ಅವರು ಹೇಳಿದರು.
ನಾಗರಿಕರನ್ನು ಪ್ರೇರೇಪಿಸುವ ಮತ್ತು ಆತ್ಮವಿಶ್ವಾಸದಿಂದ ಇರಿಸುವ ನಾಯಕರ ಜವಾಬ್ದಾರಿಯನ್ನು ವಿವರಿಸುತ್ತಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು "ಛತ್ರಪತಿ ಶಿವಾಜಿ ಮಹಾರಾಜರ ಸಮಯದಲ್ಲಿ ದೇಶದ ವಿಶ್ವಾಸ ಮಟ್ಟವನ್ನು ನಾವೆಲ್ಲರೂ ಊಹಿಸಿಕೊಂಡರೆ ಒಳ್ಳೆಯದು. ನೂರಾರು ವರ್ಷಗಳ ಗುಲಾಮಗಿರಿಯಿಂದ ನಾಗರಿಕರ ವಿಶ್ವಾಸವು ಅತ್ಯಂತ ಕೆಳಮಟ್ಟದಲ್ಲಿತ್ತು, ಅಲ್ಲಿ ಆಕ್ರಮಣಕಾರರ ಆಕ್ರಮಣಗಳು ಮತ್ತು ಬಡತನದೊಂದಿಗೆ ಶೋಷಣೆಗಳು ಸೇರಿಕೊಂಡು ಸಮಾಜವನ್ನು ದುರ್ಬಲಗೊಳಿಸಿದವು. "ನಮ್ಮ ಸಾಂಸ್ಕೃತಿಕ ಕೇಂದ್ರಗಳ ಮೇಲೆ ನಿರಂತರ ದಾಳಿ ಮಾಡುವ ಮೂಲಕ ಜನರ ನೈತಿಕ ಸ್ಥೈರ್ಯವನ್ನು ಮುರಿಯಲು ಪ್ರಯತ್ನಿಸಲಾಯಿತು" ಎಂದು ಪ್ರಧಾನಮಂತ್ರಿ ಅವರು ಹೇಳಿದರು, ಛತ್ರಪತಿ ಶಿವಾಜಿ ಮಹಾರಾಜರು ಆಕ್ರಮಣಕಾರರ ವಿರುದ್ಧ ಹೋರಾಡಿದರು ಮಾತ್ರವಲ್ಲದೆ ಸ್ವಯಂ ಆಡಳಿತದ ಒಂದು ಸಾಧ್ಯತೆ ಕೂಡಾ ಇದೆಯೆಂಬ ನಂಬಿಕೆಯನ್ನು ಸಾರ್ವಜನಿಕರಲ್ಲಿ ಮೂಡಿಸಿದರು. ಶಿವಾಜಿ ಮಹಾರಾಜರು ಗುಲಾಮಗಿರಿಯ ಮನಸ್ಥಿತಿಯನ್ನು ಕೊನೆಗೊಳಿಸುವ ಮೂಲಕ ರಾಷ್ಟ್ರ ನಿರ್ಮಾಣಕ್ಕಾಗಿ ಜನರನ್ನು ಪ್ರೇರೇಪಿಸಿದರು" ಎಂದು ಹೇಳಿದರು.
“ಇತಿಹಾಸದಲ್ಲಿ, ಸೈನ್ಯದಲ್ಲಿ ತಮ್ಮ ಪ್ರಾಬಲ್ಯಕ್ಕೆ ಹೆಸರುವಾಸಿಯಾದ ಅನೇಕ ಆಡಳಿತಗಾರರು ಇದ್ದಾರೆ, ಆದರೆ ಅವರ ಆಡಳಿತ ಸಾಮರ್ಥ್ಯ ದುರ್ಬಲವಾಗಿತ್ತು ಮತ್ತು ಅದೇ ರೀತಿ ಅತ್ಯುತ್ತಮ ಆಡಳಿತಕ್ಕೆ ಹೆಸರುವಾಸಿಯಾದ ಅನೇಕ ಆಡಳಿತಗಾರರು, ಆದರೆ ಅವರ ಸೈನ್ಯ(ಮಿಲಿಟರಿ) ನಾಯಕತ್ವ ಬಹಳ ದುರ್ಬಲವಾಗಿತ್ತು. ಆದರೆ, ಛತ್ರಪತಿ ಶಿವಾಜಿ ಮಹಾರಾಜರು ‘ಸ್ವರಾಜ್ಯ’ ಹಾಗೂ ‘ಸೂರಜ್’ ಅನ್ನು ಸ್ಥಾಪಿಸಿದ್ದರಿಂದ ಅವರ ವ್ಯಕ್ತಿತ್ವ ಸದಾಕಾಲ ಭವ್ಯವಾಗಿತ್ತು” ಎಂದು ಪ್ರಧಾನಮಂತ್ರಿ ಅವರು ಹೇಳಿದರು. “ಶಿವಾಜಿ ಮಹಾರಾಜರು ಚಿಕ್ಕ ವಯಸ್ಸಿನಲ್ಲಿಯೇ ಕೋಟೆಗಳನ್ನು ಗೆದ್ದು ಶತ್ರುಗಳನ್ನು ಸೋಲಿಸುವ ಮೂಲಕ ತಮ್ಮ ಮಿಲಿಟರಿ ನಾಯಕತ್ವದ ಉದಾಹರಣೆಯನ್ನು ನೀಡಿದರು, ಮತ್ತೊಂದೆಡೆ, ರಾಜನಾಗಿ ಅವರು ಸಾರ್ವಜನಿಕ ಆಡಳಿತದಲ್ಲಿ ಸುಧಾರಣೆಗಳನ್ನು ಜಾರಿಗೆ ತರುವ ಮೂಲಕ ಉತ್ತಮ ಆಡಳಿತದ ಮಾರ್ಗವನ್ನು ತೋರಿಸಿದರು. ಒಂದೆಡೆ ದಾಳಿಕೋರರಿಂದ ತನ್ನ ರಾಜ್ಯ ಮತ್ತು ಸಂಸ್ಕೃತಿಯನ್ನು ರಕ್ಷಿಸಿದರೆ, ಮತ್ತೊಂದೆಡೆ ರಾಷ್ಟ್ರ ನಿರ್ಮಾಣದ ಸಮಗ್ರ ದೃಷ್ಟಿಕೋನವನ್ನು ಮುಂದಿಟ್ಟರು” ಎಂದು ಪ್ರಧಾನಮಂತ್ರಿ ಅವರು ವಿವರಿಸಿದರು. "ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ದೂರದೃಷ್ಟಿಯಿಂದಾಗಿ ಇತಿಹಾಸದ ಇತರ ವೀರರಿಗಿಂತ ಸಂಪೂರ್ಣವಾಗಿ ಭಿನ್ನರಾಗಿದ್ದಾರೆ, ಅವರ ಸಾರ್ವಜನಿಕ ಕಲ್ಯಾಣ ಆಡಳಿತದ ಪಾತ್ರದಿಂದಾಗಿ ಜನರು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು. “ಛತ್ರಪತಿ ಶಿವಾಜಿ ಮಹಾರಾಜರು ಸ್ವರಾಜ್ಯ, ಧರ್ಮ, ಸಂಸ್ಕೃತಿ ಮತ್ತು ಪರಂಪರೆಗೆ ಧಕ್ಕೆ ತರಲು ಪ್ರಯತ್ನಿಸುವವರಿಗೆ ಬಲವಾದ ಸಂದೇಶವನ್ನು ರವಾನಿಸಿದ್ದರು, ಇದು ಅಂದಿನ ಕಾಲದ ಜನರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿತು ಮತ್ತು ಸ್ವಾವಲಂಬನೆಯ ಮನೋಭಾವವನ್ನು ಎಲ್ಲಡೆ ಪ್ರಚುರಪಡಿಸಿತು. ಇದು ರಾಷ್ಟ್ರದ ಗೌರವವನ್ನು ಹೆಚ್ಚಿಸಲು ಕಾರಣವಾಯಿತು” ಎಂದು ಪ್ರಧಾನಮಂತ್ರಿ ಅವರು ಹೇಳಿದರು. “ಇಂದು ರೈತರ ಕಲ್ಯಾಣವಾಗಲಿ, ಮಹಿಳಾ ಸಬಲೀಕರಣವಾಗಲಿ ಅಥವಾ ಸಾಮಾನ್ಯ ಜನರಿಗೆ ಆಡಳಿತ ವ್ಯವಸ್ಥೆ ಲಭ್ಯವಾಗವಂತೆ ಮಾಡುವುದಾಗಲಿ, ಎಲ್ಲದರಲ್ಲೂ ಛತ್ರಪತಿ ಶಿವಾಜಿ ಮಹಾರಾಜರವರ ಅಂದಿನ ಆಡಳಿತ ವ್ಯವಸ್ಥೆ ಮತ್ತು ಅವರ ನೀತಿಗಳು ಸಮಾನವಾಗಿ ಪ್ರಸ್ತುತವಾಗಿವೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು.
ಛತ್ರಪತಿ ಶಿವಾಜಿ ಮಹಾರಾಜರ ವ್ಯಕ್ತಿತ್ವದ ವಿವಿಧ ಅಂಶಗಳು ಇಂದು ನಮ್ಮ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರುತ್ತಿವೆ. ಭಾರತದ ಸಾಗರ ಸಾಮರ್ಥ್ಯವನ್ನು ಗುರುತಿಸಿ, ಅವರು ಮಾಡಿದ ನೌಕಾಪಡೆಯ ವಿಸ್ತರಣೆ ಮತ್ತು ಅವರ ನಿರ್ವಹಣಾ ಕೌಶಲ್ಯಗಳು ಇಂದಿಗೂ ಎಲ್ಲರಿಗೂ ಸ್ಫೂರ್ತಿಯಾಗಿದೆ. ಅವರು ನಿರ್ಮಿಸಿದ ಕೋಟೆಗಳು ಪ್ರಬಲವಾದ ಅಲೆಗಳು ಮತ್ತು ಉಬ್ಬರವಿಳಿತಗಳ ಭಾರವನ್ನು ಹೊಂದಿದ್ದರೂ ಸಹ ಸಾಗರದ ಮಧ್ಯದಲ್ಲಿ ಇನ್ನೂ ಹೆಮ್ಮೆಯಿಂದ ನಿಂತಿವೆ. ತಮ್ಮ ಸಾಮ್ರಾಜ್ಯದ ವಿಸ್ತರಣೆ ಮಾಡಿದರು ಮತ್ತು ಅವರು ಸಮುದ್ರ ತೀರದಿಂದ ಪರ್ವತಗಳವರೆಗೆ ಕೋಟೆಗಳನ್ನು ನಿರ್ಮಿಸಿದರು. ಆ ಅವಧಿಯಲ್ಲಿ, ನೀರು ನಿರ್ವಹಣೆಗೆ ಸಂಬಂಧಿಸಿದ ಅವರ ವ್ಯವಸ್ಥೆಗಳು ತಜ್ಞರನ್ನು ವಿಸ್ಮಯಗೊಳಿಸಿದವು” ಎಂದು ಪ್ರಧಾನಮಂತ್ರಿ ತಿಳಿಸಿದರು. “ಬ್ರಿಟಿಷ್ ಆಳ್ವಿಕೆಯ ಗುರುತನ್ನು ಹೊಂದಿರುವ ಭಾರತೀಯ ನೌಕಾಪಡೆಯ ಧ್ವಜವನ್ನು ಶಿವಾಜಿ ಮಹಾರಾಜರ ಲಾಂಛನದಿಂದ ಬದಲಾಯಿಸಲಾಗಿದ್ದು, ಕಳೆದ ವರ್ಷ ಭಾರತವು ನೌಕಾಪಡೆಯನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಿದೆ” ಎಂದು ಶಿವಾಜಿ ಮಹಾರಾಜರಿಂದ ಪಡೆದ ಸ್ಫೂರ್ತಿಯ ಮೇಲೆ ಬೆಳಕು ಚೆಲ್ಲುತ್ತಾ ಪ್ರಧಾನಮಂತ್ರಿ ಅವರು ಹೇಳಿದರು. "ಈಗ, ಈ ಧ್ವಜವು ಸಮುದ್ರಗಳು ಮತ್ತು ಆಕಾಶಗಳಲ್ಲಿ ನವ ಭಾರತದ ಹೆಮ್ಮೆಯನ್ನು ಸಂಕೇತಿಸುತ್ತಿವೆ" ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.
“ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ, ಸಿದ್ಧಾಂತ ಮತ್ತು ನ್ಯಾಯವು ಹಲವು ತಲೆಮಾರುಗಳಿಗೆ ಸ್ಫೂರ್ತಿ ನೀಡಿದೆ. ಅವರ ದಿಟ್ಟ ಕ್ರಮದ ಶೈಲಿ, ಕಾರ್ಯತಂತ್ರದ ಕೌಶಲ್ಯ ಮತ್ತು ಶಾಂತಿಯುತ ರಾಜಕೀಯ ವ್ಯವಸ್ಥೆಯು ಇಂದಿಗೂ ನಮಗೆ ಸ್ಫೂರ್ತಿಯಾಗಿದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು. “ಛತ್ರಪತಿ ಶಿವಾಜಿ ಮಹಾರಾಜರ ನೀತಿಗಳನ್ನು ವಿಶ್ವದ ಅನೇಕ ದೇಶಗಳಲ್ಲಿ ಚರ್ಚಿಸಲಾಗಿದೆ, ಅಲ್ಲಿ ಸಂಶೋಧನೆ ನಡೆಸಲಾಗಿದೆ ಎಂಬುದು ನಮಗೆ ಹೆಮ್ಮೆಯ ವಿಷಯವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಒಂದು ತಿಂಗಳ ಹಿಂದೆ ಮಾರಿಷಸ್ನಲ್ಲಿ ಸ್ಥಾಪಿಸಲಾಗಿದೆ” ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು. “ಆಜಾದಿ ಕಾ ಅಮೃತ ಕಾಲ್ ಸಂದರ್ಭದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350 ವರ್ಷಗಳನ್ನು ಪೂರ್ಣಗೊಳಿಸಿರುವುದು ಒಂದು ಸ್ಪೂರ್ತಿದಾಯಕ ಸಂದರ್ಭವಾಗಿದೆ. ಇಷ್ಟು ವರ್ಷಗಳ ನಂತರವೂ ಅವರು ಸ್ಥಾಪಿಸಿದ ಮೌಲ್ಯಗಳು ನಮಗೆ ಸದಾ ಮುಂದಿನ ದಾರಿಯನ್ನು ತೋರಿಸುತ್ತಿವೆ”, ಈ ಮೌಲ್ಯಗಳ ಆಧಾರದ ಮೇಲೆ ನಾವು ನಮ್ಮ ದೇಶದ ಅಮೃತ ಕಾಲದ 25 ವರ್ಷಗಳ ಪ್ರಯಾಣವನ್ನು ಪೂರ್ಣಗೊಳಿಸಬೇಕು ಎಂದು ಪ್ರಧಾನಮಂತ್ರಿ ಅವರು ಹೇಳಿದರು. “ನಮ್ಮ ಈ ಪ್ರಯಾಣವು ಛತ್ರಪತಿ ಶಿವಾಜಿ ಮಹಾರಾಜರ ಕನಸುಗಳಾದ ಸ್ವರಾಜ್, ಉತ್ತಮ ಆಡಳಿತ ಮತ್ತು ಸ್ವಾವಲಂಬನೆ ಭಾರತವನ್ನು ನಿರ್ಮಿಸಲು ಮಾಡುತ್ತಿರುವ ಪಯಣವಾಗಿದೆ. ಇದು ಅಭಿವೃದ್ಧಿ ಹೊಂದಿದ ಭಾರತದ ಪಯಣವಾಗಿರುತ್ತದೆ” ಎಂದು ಐತಿಹಾಸಿಕ ಹೆಮ್ಮೆಯ ವಿಷಯಗಳನ್ನು ವಿವರಿಸುತ್ತಾ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
*****
(Release ID: 1929346)
Visitor Counter : 321
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam