ಇಂಧನ ಸಚಿವಾಲಯ
2023ರ ಜುಲೈನಲ್ಲಿ ಗೋವಾದಲ್ಲಿ ಭಾರತವು ʻಜಿ20 ಇಂಧನ ಪರಿವರ್ತನೆ ಮಂಡಳಿ’ ಸಮಾವೇಶದ ಜೊತೆಗೆ ʻ14ನೇ ಶುದ್ಧ ಇಂಧನ ಮಂಡಳಿʼ (ಸಿಇಎಂ-14) ಮತ್ತು 8ನೇ ʻಮಿಷನ್ ಇನ್ನೋವೇಶನ್ʼ ಸಭೆಯನ್ನೂ(ಎಂಐ-8) ಆಯೋಜಿಸಲಿದೆ
"ಶುದ್ಧ ಇಂಧನವನ್ನು ಒಟ್ಟಿಗೆ ಮುನ್ನಡೆಸಲು" ನೀತಿಗಳು ಮತ್ತು ತಂತ್ರಜ್ಞಾನಗಳ ಮೇಲೆ ʻಸಿಇಎಂ-14ʼ/ ʻಎಂಐ-8ʼ ಗಮನ ಕೇಂದ್ರೀಕರಿಸಲಿವೆ
ʻ14ನೇ ಶುದ್ಧ ಇಂಧನ ಮಂಡಳಿʼಯ ವೆಬ್‌ಸೈಟ್ ಮತ್ತು ಲಾಂಛನವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರೊಂದಿಗೆ ಇಂಧನ ಸಚಿವರು ಬಿಡುಗಡೆ ಮಾಡಿದರು
ಇಂಧನ ಪರಿವರ್ತನೆಗೆ ಹಲವು ಕ್ಷೇತ್ರಗಳಲ್ಲಿ ನಾವೀನ್ಯತೆ ಅಗತ್ಯ: ಇಂಧನ ಸಚಿವ ಆರ್.ಕೆ. ಸಿಂಗ್
Posted On:
26 MAY 2023 11:31AM by PIB Bengaluru
2023 ರ ಜುಲೈ 19 ರಿಂದ 22ರವರೆಗೆ ಗೋವಾದಲ್ಲಿ 14ನೇ ʻಶುದ್ಧ ಇಂಧನ ಮಂಡಳಿʼ ಮತ್ತು 8ನೇ ʻಮಿಷನ್ ಇನ್ನೋವೇಶನ್ʼ ಸಭೆ(ಸಿಇಎಂ-14 / ಎಂಐ -8) ನಡೆಯಲಿದೆ. ʻಜಿ20 ಇಂಧನ ಪರಿವರ್ತನೆ ಮಂಡಳಿʼಯ ಸಮಾವೇಶದ ನೇಪಥ್ಯದಲ್ಲಿ ನಿಗದಿಯಾಗಿರುವ ʻಸಿಇಎಂ-14 / ʻಎಂಐ-8ʼ ಸಭೆಯು "ಶುದ್ಧ ಇಂಧನವನ್ನು ಒಟ್ಟಿಗೆ ಮುನ್ನಡೆಸುವುದು" ಎಂಬ ವಿಷಯಾಧಾರಿತವಾಗಿ ನಡೆಯಲಿದೆ. ಈ ವರ್ಷದ ʻಶುದ್ಧ ಇಂಧನ ಮಂಡಳಿʼ(ಸಿಇಎಂ) ಮತ್ತು ʻಮಿಷನ್ ಇನ್ನೋವೇಶನ್ʼ(ಎಂಐ) ಸಭೆಗಳು- ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಸರಕಾರಗಳು, ಅಂತರರಾಷ್ಟ್ರೀಯ ಸಂಸ್ಥೆಗಳು, ಖಾಸಗಿ ವಲಯ, ಶೈಕ್ಷಣಿಕ ಸಂಸ್ಥೆಗಳು, ಆವಿಷ್ಕಾರಕರು, ನಾಗರಿಕ ಸಮಾಜ, ಆರಂಭಿಕ ವೃತ್ತಿಜೀವನದ ಸಂಶೋಧಕರು ಮತ್ತು ನೀತಿ ನಿರೂಪಕರನ್ನು ಒಟ್ಟುಗೂಡಿಸುತ್ತವೆ. ʻಸಿಇಎಂ 14ʼ / ʻಎಂಐ 8ʼ ಸಭೆಯು ಭಾರತ ಮತ್ತು ಪ್ರಪಂಚದಾದ್ಯಂತದ ಶುದ್ಧ ಇಂಧನದಲ್ಲಿ ಅತ್ಯಾಧುನಿಕ ಪ್ರಗತಿಯನ್ನು ಪ್ರದರ್ಶಿಸುವ ಸಾರ್ವಜನಿಕ ತಂತ್ರಜ್ಞಾನ ಪ್ರದರ್ಶನವನ್ನು ಸಹ ಒಳಗೊಂಡಿರುತ್ತದೆ. ಜುಲೈ 21, 2023 ರಂದು ಮಂಡಳಿಯ ಪೂರ್ಣ ಅಧಿವೇಶನ ನಡೆಯಲಿದ್ದು, ಜುಲೈ 22 ರಂದು ʻಜಿ 20 ಇಂಧನ ಪರಿವರ್ತನಾ ಮಂಡಳಿʼಯ ಸಭೆ ನಡೆಯಲಿದೆ.
"ಸ್ವಚ್ಛ ಇಂಧನವನ್ನು ಒಟ್ಟಾಗಿ ಮುನ್ನಡೆಸುವುದು" ಎಂಬ ಧ್ಯೇಯವಾಕ್ಯದ ಅಡಿಯಲ್ಲಿ, ಉನ್ನತ ಮಟ್ಟದ ದುಂಡುಮೇಜಿನ ಸಭೆಗಳು, ನೇಪಥ್ಯದ ಕಾರ್ಯಕ್ರಮಗಳು ಮತ್ತು ತಂತ್ರಜ್ಞಾನ ಪ್ರದರ್ಶನಗಳು ನಡೆಯಲಿವೆ. ಇವು ವಿಶ್ವದಾದ್ಯಂತ ಶುದ್ಧ ಇಂಧನ ತಂತ್ರಜ್ಞಾನ ಮತ್ತು ಪರಿಹಾರಗಳನ್ನು ಮುನ್ನಡೆಸುವಂತಹ ನೀತಿಗಳು ಮತ್ತು ಕಾರ್ಯಕ್ರಮಗಳ ಅಭಿವೃದ್ಧಿಯನ್ನು ಉತ್ತೇಜಿಸುವ ಮೂಲಕ, ಶುದ್ಧ ಇಂಧನದ ಬಳಕೆಯನ್ನು ವೇಗಗೊಳಿಸಲು ಮಧ್ಯಸ್ಥಗಾರರಿಗೆ ಅನುವು ಮಾಡಿಕೊಡುತ್ತದೆ.
ನವದೆಹಲಿಯ ಇಂಧನ ಸಚಿವಾಲಯದಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಇಂಧನ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್.ಕೆ.ಸಿಂಗ್ ಮತ್ತು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಜಿತೇಂದ್ರ ಸಿಂಗ್ ಅವರು 14ನೇ ʻಶುದ್ಧ ಇಂಧನ ಮಂಡಳಿʼ ಮತ್ತು 8ನೇ ʻಮಿಷನ್ ಇನ್ನೋವೇಷನ್ʼ ಸಭೆಗಳ ವೆಬ್‌ಸೈಟ್ ಹಾಗೂ ಲಾಂಛನವನ್ನು ಬಿಡುಗಡೆ ಮಾಡಿದರು. ಈ ʻವೆಬ್‌ಸೈಟ್ʼ ಅನ್ನು ಇಲ್ಲಿ ಪ್ರವೇಶಿಸಬಹುದು: https://www.cem-mi-india.org/. ಪ್ರತಿನಿಧಿ ನೋಂದಣಿ, ಕಾರ್ಯಕ್ರಮದ ಅವಲೋಕನ, ಭಾಷಣಕಾರರ ವಿವರಗಳು, ಭಾಗವಹಿಸುವ ಮತ್ತು ಸದಸ್ಯ ಪೋರ್ಟ್‌ಗಳು ಮುಂತಾದವುಗಳ ಬಗ್ಗೆ ಈ ವೆಬ್‌ಸೈಟ್‌ಟ್ ಮಾಹಿತಿಯನ್ನು ಒದಗಿಸುತ್ತದೆ.
ಹಿಂದಿನ ಮಂಡಳಿಯ ಸಂಪ್ರದಾಯವನ್ನು ಅನುಸರಿಸಿ, ಈ ಉನ್ನತ ಮಟ್ಟದ ಕಾರ್ಯಕ್ರಮಕ್ಕೆ ವಿಶಿಷ್ಟ ಗುರುತನ್ನು ನೀಡುವ ನಿಟ್ಟಿನಲ್ಲಿ ʻಸಿಇಎಂ 14ʼ / ʻಎಂಎಲ್ -8ʼರ ಭಾರತ ಸರಕಾರವು ಪ್ರತ್ಯೇಕ ಲೋಗೋವನ್ನು ವಿನ್ಯಾಸಗೊಳಿಸಿದೆ.
ವೈವಿಧ್ಯಮಯ ಬಣ್ಣಗಳನ್ನು ಚಿತ್ರಿಸುವ ಲೋಗೋ(ಮೇಲೆ ನೀಡಲಾಗಿದೆ), ದೇಶಗಳು ಮತ್ತು ಪಾಲುದಾರರ ನಡುವೆ ಕಾರ್ಯಕಲಾಪಗಳಲ್ಲಿ ವೈವಿಧ್ಯತೆಯನ್ನು ಪ್ರತಿನಿಧಿಸುತ್ತದೆ. ಸೂರ್ಯ, ಗಾಳಿ ಮತ್ತು ನೀರಿನಂತಹ ನವೀಕರಿಸಬಹುದಾದ ಸಂಪನ್ಮೂಲಗಳನ್ನು ಇದರಲ್ಲಿ ಎತ್ತಿ ತೋರಿಸಲಾಗಿದೆ. ಹಸಿರು ಮತ್ತು ನೀಲಿ ಬಣ್ಣವನ್ನು ಹೊಂದಿರುವ ಶಿಖರ ಮತ್ತು ಭೂಗರ್ಭವು, ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳ ವ್ಯತ್ಯಾಸವನ್ನು ಸೂಚಿಸುತ್ತದೆ. ಮಿಶ್ರಣವು ಶಕ್ತಿಯ ಬಳಕೆಯ ಎಲ್ಲಾ ಅಂಶಗಳನ್ನು ಕಡಿತಗೊಳಿಸುವ ಇಂಧನ ದಕ್ಷತೆಯ ಮೊದಲ ಇಂಧನವನ್ನು ಒತ್ತಿಹೇಳುತ್ತದೆ.
ವೆಬ್‌ಸೈಟ್ ಮತ್ತು ಲಾಂಛನವನ್ನು ಉದ್ಘಾಟಿಸಿದ ಇಂಧನ ಸಚಿವರು, "ಶುದ್ಧ ಇಂಧನ ಮಂಡಳಿ ವೇದಿಕೆಯು ಜಾಗತಿಕ ಶುದ್ಧ ಇಂಧನ ಸಮುದಾಯವನ್ನು ಒಂದೆಡೆ ಸೇರಿಸಲು ಮತ್ತು ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡುತ್ತದೆ. ಜೊತೆಗೆ ಶುದ್ಧ ಇಂಧನ ನಾವೀನ್ಯತೆಯ ವ್ಯಾಪ್ತಿಯನ್ನು ವಿಸ್ತರಿಸಲು ದೇಶಕ್ಕೆ ಅವಕಾಶವನ್ನು ಒದಗಿಸುತ್ತದೆ," ಎಂದು ಹೇಳಿದರು.
ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವರು ಮಾತು ಮುಂದುವರಿಸಿ, “ಭಾರತವು ವಿಶ್ವದಲ್ಲಿ ಅತ್ಯಂತ ವೇಗವಾಗಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಅಡೆತಡೆಗಳ ಹೊರತಾಗಿಯೂ ಈ ಬೆಳವಣಿಗೆ ಮುಂದುವರಿಯುತ್ತಿದೆ ಎಂದು ಹೇಳಿದರು. ಇಂಗಾಲ ಹೊರಸೂಸುವಿಕೆಯ ತೀವ್ರತೆಯನ್ನು ಕಡಿಮೆ ಮಾಡುವಲ್ಲಿಯೂ ಭಾರತ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ ಎಂದು ಸಚಿವರು ಹೇಳಿದರು. ಇಂಧನ ಪರಿವರ್ತನೆಯಲ್ಲಿ ಭಾರತವು ನಾಯಕನಾಗಿ ಹೊರಹೊಮ್ಮಿದೆ ಮತ್ತು ಹವಾಮಾನ ಉಪಕ್ರಮಗಳಲ್ಲಿ ನಾಯಕನಾಗಿ ಮುಂದುವರಿಯುವ ಗುರಿಯನ್ನು ಹೊಂದಿದೆ ಎಂದರು.
ʻನಿವ್ವಳ ಶೂನ್ಯ ಹೊರಸೂಸುವಿಕೆʼಗಾಗಿ ಹಸಿರು ಜಲಜನಕದ ಬಳಕೆ, ಹಸಿರು ಜಲಜನಕದಲ್ಲಿ ಅಂತರರಾಷ್ಟ್ರೀಯ ವ್ಯಾಪಾರಕ್ಕಾಗಿ ಸಾಮಾನ್ಯ ಮಾನದಂಡಗಳನ್ನು ರೂಪಿಸುವುದು ಮತ್ತು ಇಡೀ ಜಗತ್ತು ಹಸಿರಿನಿಂದ ಕಂಗೊಳಿಸುತ್ತಿದೆ ಎಂಬ ಪರಿಕಲ್ಪನೆಯಂತಹ ವಿಷಯಗಳ ಬಗ್ಗೆ ಚರ್ಚಿಸಲು ಶುದ್ಧ ಇಂಧನ ಸಚಿವಾಲಯವು ವೇದಿಕೆಯನ್ನು ಒದಗಿಸುತ್ತದೆ ಎಂದು ಸಚಿವರು ಹೇಳಿದರು. "ವ್ಯವಹಾರವು ಮುಕ್ತವಾಗಿರುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಇಡೀ ಜಗತ್ತು ಹಸಿರು ಇಂಧನ ಅಳವಡಿಸಿಕೊಳ್ಳಬೇಕೆಂದು ನಾವು ಬಯಸುವುದಾದರೆ, ರಕ್ಷಣಾತ್ಮಕತೆಯಿಂದ ನಾವು ಹೊರಬರಬೇಕು. ಆಗ ಮಾತ್ರ ಇಡೀ ಜಗತ್ತು ಹಸಿರಾಗಲು ಸಾಧ್ಯ. ಏಕೆಂದರೆ ಒಂದು ಅಥವಾ ಎರಡು ದೇಶಗಳು ಮಾತ್ರ ಹಸರಾಗುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ," ಎಂದು ಸಚಿವರು ಹೇಳಿದರು.
`ಮಿಷನ್ ಇನ್ನೋವೇಶನ್’ ಸಭೆಯ ಬಗ್ಗೆ ಮಾತನಾಡಿದ ಸಚಿವರು, ಪಳೆಯುಳಿಕೆಯಲ್ಲದ ಇಂಧನ ಪ್ರಪಂಚದತ್ತ ಸಾಗುವ ಸಂಪೂರ್ಣ ಪ್ರಯತ್ನವೇ ʻಮಿಷನ್ ಇನ್ನೋವೇಶನ್ʼ ಎಂದು ಹೇಳಿದರು. "ಇಂಧನ ಪರಿವರ್ತನೆಗೆ ಹಲವಾರು ಕ್ಷೇತ್ರಗಳಲ್ಲಿ ನಾವೀನ್ಯತೆಯ ಅಗತ್ಯವಿದೆ; ಹಸಿರು ಉಕ್ಕು, ಹಸಿರು ರಸಗೊಬ್ಬರಗಳು, ಹಸಿರು ಅಲ್ಯೂಮಿನಿಯಂ, ಹಸಿರು ವಿದ್ಯುತ್, ಹಸಿರು ಕಚ್ಚಾವಸ್ತುಗಳು ಮತ್ತು ದಿನದ 24 ಗಂಟೆಯೂ ನವೀಕರಿಸಬಹುದಾದ ಇಂಧನ ಪಡೆಯಲು ನಾವೀನ್ಯತೆ ಅಗತ್ಯವಿದೆ. ನಾವೀನ್ಯತೆಯು ಹವಾಮಾನ ಸ್ನೇಹಿ ಮತ್ತು ಭೂಗ್ರಹ ಸ್ನೇಹಿಯಾದ ಹೊಸ ಜಗತ್ತಿಗೆ ಪರಿವರ್ತನೆಯಾಗಲು ದಾರಿ ಮಾಡಬಲ್ಲದು. ಈ ಸವಾಲುಗಳನ್ನು ಎದುರಿಸಲು, ಸೋಡಿಯಂ ಅಯಾನುಗಳಂತಹ ಪರ್ಯಾಯಗಳನ್ನು ಅನ್ವೇಷಿಸಲು ಮಾನವಕುಲ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಇದು ವೈವಿಧ್ಯಮಯ ಪೂರೈಕೆ ಸರಪಳಿಗಳನ್ನು ಹೊಂಲದು ಸಹಾಯ ಮಾಡುತ್ತದೆ ಮತ್ತು ಮಾನವಕುಲದ ಒಳಿತಿಗಾಗಿ ಕಾರ್ಯತಂತ್ರಗಳನ್ನು ರೂಪಿಸುತ್ತದೆ ಎಂದು ಸಚಿವರು ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಜಿತೇಂದ್ರ ಸಿಂಗ್ ಮಾತನಾಡಿ, "ಕಡಿಮೆ ಇಂಗಾಲ ಹೊರಸೂಸುವಿಕೆಯುಳ್ಳ ಭವಿಷ್ಯಕ್ಕೆ ಭಾರತವು ಬದ್ಧವಾಗಿದೆ ಮತ್ತು ಶುದ್ಧ ಇಂಧನ ನಾವೀನ್ಯತೆಯನ್ನು ವೇಗಗೊಳಿಸುವ ಮೂಲಕ ದೇಶದ ಇಂಧನ ಭೂದೃಶ್ಯವನ್ನು ಪರಿವರ್ತಿಸುವ ಗುರಿಯನ್ನು ಹೊಂದಿದೆ. ಹೆಚ್ಚು ಸುರಕ್ಷಿತ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಒಟ್ಟಾಗಿ ಕೆಲಸ ಮಾಡಲು ನಾವೆಲ್ಲರೂ ಸಾಮೂಹಿಕ ಜವಾಬ್ದಾರಿಯನ್ನು ಹೊಂದಿದ್ದೇವೆ. ಹವಾಮಾನ ಬದಲಾವಣೆಯ ನಿರಂತರವಾಗಿ ಬೆಳೆಯುತ್ತಿರುವ ಸವಾಲುಗಳು ಒಂದು ದೇಶ, ಸಂಸ್ಥೆ, ಕಂಪನಿ ಅಥವಾ ಯಾವುದೇ ವೈಯಕ್ತಿಕ ಪ್ರಯತ್ನದ ನಿಯಂತ್ರಣವನ್ನು ಮೀರಿದೆ,ʼʼ ಎಂದು ಹೇಳಿದರು.
ಶುದ್ಧ ಇಂಧನ ಮಂಡಳಿ
ಶುದ್ಧ ಇಂಧನ ತಂತ್ರಜ್ಞಾನವನ್ನು ಮುನ್ನಡೆಸುವ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಉತ್ತೇಜಿಸಲು, ಕಲಿತ ಪಾಠಗಳು ಮತ್ತು ಉತ್ತಮ ಕಾರ್ಯವಿಧಾನಗಳನ್ನು ಹಂಚಿಕೊಳ್ಳಲು ಹಾಗೂ ಜಾಗತಿಕ ಶುದ್ಧ ಇಂಧನ ಆರ್ಥಿಕತೆಗೆ ಪರಿವರ್ತನೆಯನ್ನು ಉತ್ತೇಜಿಸಲು 2009ರಲ್ಲಿ ಉನ್ನತ ಮಟ್ಟದ ಜಾಗತಿಕ ವೇದಿಕೆಯಾಗಿ ʻಶುದ್ಧ ಇಂಧನ ಮಂಡಳಿʼಯನ್ನು(ಸಿಇಎಂ) ಸ್ಥಾಪಿಸಲಾಯಿತು. ಇದರ ಉಪಕ್ರಮಗಳು ಭಾಗವಹಿಸುವ ಸರಕಾರಗಳು ಮತ್ತು ಇತರ ಮಧ್ಯಸ್ಥಗಾರರಲ್ಲಿ ಸಾಮಾನ್ಯ ಆಸಕ್ತಿಯ ಕ್ಷೇತ್ರಗಳನ್ನು ಆಧರಿಸಿವೆ. 2021ರಲ್ಲಿ 12ನೇ ʻಶುದ್ಧ ಇಂಧನ ಮಂಡಳಿ ಸಭೆʼಯಲ್ಲಿ ಪುನರುಚ್ಚರಿಸಲಾದ ಶುದ್ಧ ಇಂಧನ ಮಂಡಳಿಯ ನೀತಿಗಳು, ʻಸಿಇಎಂʼ ಆಡಳಿತ ರಚನೆಯನ್ನು ವ್ಯಾಖ್ಯಾನಿಸುತ್ತವೆ. ಧ್ಯೇಯವಾಕ್ಯ, ಉದ್ದೇಶಗಳು, ಸದಸ್ಯತ್ವ ಮತ್ತು ಮಾರ್ಗದರ್ಶಿ ತತ್ವಗಳನ್ನು ಇವು ವಿವರಿಸುತ್ತದೆ. ʻಸಿಇಎಂʼ ಒಂದು ಅಂತರರಾಷ್ಟ್ರೀಯ ಶುದ್ಧ ಇಂಧನ ನಾಯಕತ್ವ ವೇದಿಕೆ, ಸಮಾವೇಶ ವೇದಿಕೆ, ಕ್ರಿಯಾ ವೇದಿಕೆ ಮತ್ತು ವೇಗವರ್ಧಕ ವೇದಿಕೆಯಾಗಿದೆ.
ಭಾರತವು 2013ರಲ್ಲಿ 4ನೇ ʻಶುದ್ಧ ಇಂಧನ ಮಂಡಳಿʼ ಸಭೆಗೆ (ಸಿಇಎಂ -4) ಆತಿಥ್ಯ ವಹಿಸಿತು. ʻಸಿಇಎಂʼನ ʻಗ್ಲೋಬಲ್ ಲೈಟಿಂಗ್ ಚಾಲೆಂಜ್ ಅಭಿಯಾನʼವು ಎಲ್ಲರಿಗೂ ಕೈಗೆಟುಕುವ ದರದಲ್ಲಿ ಎಲ್ಇಡಿ ಬಲ್ಬ್ ನೀಡಲು ಭಾರತ ರೂಪಿಸಿದ ʻಉಜಾಲಾʼ ಯೋಜನೆಗೆ ಕಾರ್ಯಕ್ರಮಕ್ಕೆ ಪ್ರೇರಣೆಯಾಗಿದೆ. ಇದರ ಮೂಲಕ ಭಾರತವು ಜಾಗತಿಕವಾಗಿ 10 ಶತಕೋಟಿ ʻಎಲ್ಇಡಿʼಗಳ ಜಾಗತಿಕ ಸಾಮೂಹಿಕ ಗುರಿಯನ್ನು ಸಾಧಿಸಲು ಇತರ ಅನೇಕ ಸರಕಾರಗಳು ಮತ್ತು ಉದ್ಯಮ ಪಾಲುದಾರರಿಗೆ ಸಹಾಯ ಮಾಡಿತು. ಈ ಪ್ರಯತ್ನವನ್ನು ಭಾರತ ಸರಕಾರದ ಪರವಾಗಿ ʻಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿʼ ನಿರ್ವಹಿಸಿತು. .
ʻಸಿಇಎಂʼ ಒಟ್ಟು 29 ಸದಸ್ಯರನ್ನು ಹೊಂದಿದೆ: ಯುರೋಪಿಯನ್ ಆಯೋಗ ಮತ್ತು ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚಿಲಿ, ಚೀನಾ, ಡೆನ್ಮಾರ್ಕ್, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ಕೊರಿಯಾ, ಮೆಕ್ಸಿಕೊ, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ನಾರ್ವೆ, ಪೋಲೆಂಡ್, ಪೋರ್ಚುಗಲ್, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಸ್ಪೇನ್, ಸ್ವೀಡನ್, ಯುನೈಟೆಡ್ ಅರಬ್ ಎಮಿರೇಟ್ಸ್, ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್.
ಮಿಷನ್ ಇನ್ನೋವೇಶನ್
ʻಮಿಷನ್ ಇನ್ನೋವೇಶನ್ʼ(ಎಂಐ) ಎಂಬುದು ಶುದ್ಧ ಇಂಧನ ಕ್ರಾಂತಿಯನ್ನು ವೇಗಗೊಳಿಸಲು ಮತ್ತು ಪ್ಯಾರಿಸ್ ಒಪ್ಪಂದದ ಗುರಿಗಳು ಮತ್ತು ನಿವ್ವಳ ಶೂನ್ಯ ಇಂಗಾಲದ ಹಾದಿಗಳ ಕಡೆಗೆ ಪ್ರಗತಿ ಸಾಧಿಸಲು 23 ದೇಶಗಳು ಹಾಗೂ ಯುರೋಪಿಯನ್ ಕಮಿಷನ್’ (ಯುರೋಪಿಯನ್ ಒಕ್ಕೂಟದ ಪರವಾಗಿ) ರೂಪಿಸಿರುವ ಸಚಿವರ ಮಟ್ಟದ ಜಾಗತಿಕ ವೇದಿಕೆಯಾಗಿದೆ. ಶುದ್ಧ ಇಂಧನವನ್ನು ಕೈಗೆಟುಕುವ, ಆಕರ್ಷಕ ಮತ್ತು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಸಂಶೋಧನೆ, ಒಂದು ದಶಕದ ಅವಧಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಕ್ರಿಯೆ ಹಾಗೂ ಹೂಡಿಕೆಯನ್ನು ವೇಗವರ್ಧಿಸುವುದು ಈ ವೇದಿಕೆಯ ಮುಖ್ಯ ಉದ್ದೇಶವಾಗಿದೆ. ಅಂತರರಾಷ್ಟ್ರೀಯ ಪಾಲುದಾರರಿಂದ ಕಡಿಮೆ ಬಡ್ಡಿದರದಲ್ಲಿ ಹಣಕಾಸು ಸಂಗ್ರಹಿಸಲು, ಖಾಸಗಿ ವಲಯದ ಹೂಡಿಕೆಗಳನ್ನು ಹೆಚ್ಚಿಸಲು ಹಾಗೂ ಶುದ್ಧ ಇಂಧನ ತಂತ್ರಜ್ಞಾನದ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಮುನ್ನಡೆಸುವ ಶುದ್ಧ ತಂತ್ರಜ್ಞಾನಗಳಿಗೆ ಬೇಡಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶುದ್ಧ ಇಂಧನ ಕ್ಷೇತ್ರದಲ್ಲಿ ನಾವೀನ್ಯತೆಯನ್ನು ವೇಗಗೊಳಿಸಲು ಕ್ರಮ ಕೈಗೊಳ್ಳುವ ಮೂಲಕ ಈ ವೇದಿಕೆಯು ಉದ್ದೇಶಿತ ಗುರಿಗಳನ್ನು ಸಾಧಿಸುತ್ತದೆ.
ʻಮಿಷನ್ ಇನ್ನೋವೇಶನ್ʼ(ಎಂಐ)ನ (2015-2020) ಮೊದಲ ಹಂತವನ್ನು ನವೆಂಬರ್ 30, 2015 ರಂದು ʻಪ್ಯಾರಿಸ್ ಹವಾಮಾನ ಶೃಂಗಸಭೆʼಯಲ್ಲಿ(ʻಸಿಒಪಿ-21ʼ) ಘೋಷಿಸಲಾಯಿತು. ಹವಾಮಾನ ಬದಲಾವಣೆಯನ್ನು ಎದುರಿಸುವ ಮಹತ್ವಾಕಾಂಕ್ಷೆಯ ಪ್ರಯತ್ನಗಳಿಗೆ ಬದ್ಧರಾಗಲು ವಿಶ್ವ ನಾಯಕರು ಅಂದು ಪ್ಯಾರಿಸ್‌ನಲ್ಲಿ ಒಟ್ಟುಗೂಡಿದ್ದರು. ಉದ್ಘಾಟನಾ ಹೇಳಿಕೆಯ ಭಾಗವಾಗಿ, ಎಲ್ಲಾ ಸದಸ್ಯ ರಾಷ್ಟ್ರಗಳು 5 ವರ್ಷಗಳಲ್ಲಿ ಶುದ್ಧ ಇಂಧನ ಸಂಶೋಧನೆ, ಅಭಿವೃದ್ಧಿ ಮತ್ತು ಪ್ರಾತ್ಯಕ್ಷಿಕೆ (ಆರ್ ಡಿ & ಡಿ) ಮೇಲೆ ಸರಕಾರದ ಧನಸಹಾಯವನ್ನು ದ್ವಿಗುಣಗೊಳಿಸಲು ಬದ್ಧವಾಗಿವೆ. ಜೊತೆಗೆ ಶುದ್ಧ ಇಂಧನ ಕ್ಷೇತ್ರದ ಅಭಿವೃದ್ಧಿ ಮತ್ತು ಸಂಶೋಧನಾ ಕಾರ್ಯಕ್ರಮಗಳಲ್ಲಿ ಅಂತರರಾಷ್ಟ್ರೀಯ ಹಾಗೂ ಖಾಸಗಿ ವಲಯದ ತೊಡಗಿಸಿಕೊಳ್ಳುವಿಕೆ, ಸಹಕಾರ ಮತ್ತು ಹೂಡಿಕೆಗಳನ್ನು ಹೆಚ್ಚಿಸಲು ಬದ್ಧವಾಗಿವೆ. ಈ ವೇದಿಕೆಯು ಮೊದಲ ಹಂತವನ್ನು ಯಶಸ್ವಿಯಾಗಿ 5 ವರ್ಷಗಳು ಮುಗಿಸಿತು. ಬಳಿಕ ನಾವೀನ್ಯತೆಯನ್ನು ವೇಗಗೊಳಿಸುವ ನಿಟ್ಟಿನಲ್ಲಿ ಶುದ್ಧ ಇಂಧನ ಹೂಡಿಕೆಯ ಅಗತ್ಯದ ಮಹತ್ವವನ್ನು ಗುರುತಿಸಿದ ಹಿನ್ನೆಲೆಯಲ್ಲಿ, ʻಮಿಷನ್ ಇನ್ನೋವೇಶನ್ʼ(ಎಂಐ 2.0) ಎರಡನೇ ಹಂತವನ್ನು ಜೂನ್ 2, 2021 ರಂದು ಪ್ರಾರಂಭಿಸಲಾಯಿತು. ಒಂದು ದಶಕದಲ್ಲಿ (2021-2030) ಕೈಗೊಳ್ಳುವ ಕ್ರಮಗಳ ಮೇಲೆ ʻಎಂಐ 2.0ʼನ ಗಮನ ಕೇಂದ್ರೀಕರಿಸಿದೆ. ಜೊತೆಗೆ ನವೀನ ಶುದ್ಧ ಇಂಧನ ತಂತ್ರಜ್ಞಾನದ ನಿಯೋಜನೆಯನ್ನು ಹೆಚ್ಚಿಸಲು ಮತ್ತು ಶುದ್ಧ ಇಂಧನವನ್ನು ಕೈಗೆಟುಕುವ, ಆಕರ್ಷಕ ಮತ್ತು ಎಲ್ಲರಿಗೂ ಲಭ್ಯವಾಗುವಂತೆ ಮಾಡಲು ಒತ್ತು ನೀಡಲಾಗಿದೆ. ಇದು ಪ್ಯಾರಿಸ್ ಒಪ್ಪಂದದ ಗುರಿಗಳು ಮತ್ತು ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆ ಹಾದಿಗಳ ಕಡೆಗೆ ಪ್ರಗತಿಯನ್ನು ವೇಗಗೊಳಿಸುತ್ತದೆ.
ʻಸಿಇಎಂʼ ಮತ್ತು ʻಎಂಐʼ ಎರಡೂ ವೇಇಕೆಗಳು ಜಾಗತಿಕ ಶುದ್ಧ ಇಂಧನ ಆರ್ಥಿಕತೆಗೆ ಪರಿವರ್ತನೆಗೆ ಅನುಕೂಲವಾಗುವಂತೆ ಕಲಿತ ಪಾಠಗಳನ್ನು ಮತ್ತು ಉತ್ತಮ ಕಾರ್ಯವಿಧಾನಗಳನ್ನು ಹಂಚಿಕೊಳ್ಳುವ ಗುರಿಯನ್ನು ಹೊಂದಿವೆ. ಮಂಡಳಿ ಸಭೆಗಳು, ನೇಪಥ್ಯದ ಕಾರ್ಯಕ್ರಮಗಳು, ಸರ್ವ ಸದಸ್ಯರ ಸಭೆಗಳು, ಉನ್ನತ ಮಟ್ಟದ ದುಂಡುಮೇಜಿನ ಸಭೆಗಳನ್ನು ಒಳಗೊಂಡ ವಾರ್ಷಿಕ ಸಭೆಗಳ ಮೂಲಕ ʻಸಿಇಎಂʼ ಮತ್ತು ʻಎಂಐʼ ಈ ಗುರಿಗಳನ್ನು ಸಾಧಿಸುವ ಪ್ರಯತ್ನ ಮಾಡುತ್ತವೆ. ಈ ಸಭೆಗಳ ಜೊತೆಗೆ ಉಪಕ್ರಮಗಳು ಹಾಗೂ ಅಭಿಯಾನಗಳ ರೂಪದಲ್ಲಿ ವರ್ಷವಿಡೀ ತಾಂತ್ರಿಕ ಕೆಲಸಗಳ ಮೂಲಕ ಈ ವೇದಿಕೆಗಳು ನಿಗದಿತ ಗುರಿಗಳತ್ತ ಪಯಣ ಮುಂದುವರಿಸುತ್ತವೆ.
***
(Release ID: 1927604)
Visitor Counter : 154