ಪ್ರಧಾನ ಮಂತ್ರಿಯವರ ಕಛೇರಿ

ವಿಡಿಯೋ ಸಂದೇಶದ ಮೂಲಕ ಅಸ್ಸಾಂ ರೋಜ್ ಗಾರ್ ಮೇಳ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ


"ಇಂದಿನ ರೋಜ್ ಗಾರ್ ಮೇಳವು ಅಸ್ಸಾಂನ ಯುವಕರ ಭವಿಷ್ಯದ ಬಗೆಗಿನ ಗಂಭೀರತೆಯ ಪ್ರತಿಬಿಂಬವಾಗಿದೆ"

" ಆಜಾದಿ ಕಾ ಅಮೃತ ಕಾಲದಲ್ಲಿ ನಮ್ಮ ದೇಶವನ್ನು ವಿಕಸಿತ ರಾಷ್ಟ್ರವನ್ನಾಗಿ ಮಾಡುವ ಪ್ರತಿಜ್ಞೆಯನ್ನು ನಾವೆಲ್ಲರೂ ಕೈಗೊಂಡಿದ್ದೇವೆ"

"ಸರ್ಕಾರಿ ವ್ಯವಸ್ಥೆಗಳು ಪ್ರಸ್ತುತ ಸಮಯಕ್ಕೆ ಅನುಗುಣವಾಗಿ ರೂಪಾಂತರಗೊಳ್ಳಬೇಕು"

"ಪ್ರತಿ ಹೊಸ ಮೂಲಸೌಕರ್ಯ ಯೋಜನೆಯೊಂದಿಗೆ ಉದ್ಯೋಗ ಮತ್ತು ಸ್ವಯಂ-ಉದ್ಯೋಗ ಅವಕಾಶಗಳು ಪ್ರತಿ ಕ್ಷೇತ್ರದಲ್ಲೂ ಉತ್ತೇಜನವನ್ನು ಪಡೆಯುತ್ತಿವೆ"

"ಇಂದು, ಯುವಕರು ಹತ್ತು ವರ್ಷಗಳ ಹಿಂದೆ ಯಾರೂ ಊಹಿಸದಂತಹ ಅನೇಕ ಕ್ಷೇತ್ರಗಳಲ್ಲಿ ಮುಂದುವರಿಯುತ್ತಿದ್ದಾರೆ"

"ನಾವು ನವ ಭಾರತವನ್ನು ನಿರ್ಮಿಸುವತ್ತ ತ್ವರಿತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ"

Posted On: 25 MAY 2023 5:26PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಸ್ಸಾಂ ರೋಜ್ ಗಾರ್ ಮೇಳ ಉದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಭಾಷಣ ಮಾಡಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಅಸ್ಸಾಂ ಸರ್ಕಾರದಲ್ಲಿ ಸರ್ಕಾರಿ ಉದ್ಯೋಗಗಳಿಗೆ ನೇಮಕಗೊಂಡ ಯುವಕರು ಮತ್ತು ಅವರ ಕುಟುಂಬಗಳನ್ನು ಅಭಿನಂದಿಸಿದರು. ಕಳೆದ ತಿಂಗಳು ಬಿಹು ಸಂದರ್ಭದಲ್ಲಿ ತಾವು ರಾಜ್ಯಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿದ ಅವರು, ಅಸ್ಸಾಮಿ ಸಂಸ್ಕೃತಿಯ ವೈಭವೀಕರಣದ ಸಂಕೇತವಾದ ಭವ್ಯ ಸಮಾರಂಭದ ನೆನಪು ಅವರ ಮನಸ್ಸಿನಲ್ಲಿ ಇನ್ನೂ ಹಸಿರಾಗಿದೆ ಎಂದರು. ಇಂದಿನ ರೋಜ್ ಗಾರ್ ಮೇಳವು ಅಸ್ಸಾಂನ ಯುವಜನರ ಭವಿಷ್ಯದ ಬಗೆಗಿನ ಗಂಭೀರತೆಯ ಪ್ರತಿಬಿಂಬವಾಗಿದೆ ಎಂದರು. ಇದಕ್ಕೂ ಮುನ್ನ ಅಸ್ಸಾಂನಲ್ಲಿ ರೋಜ್ ಗಾರ್ ಮೇಳದ ಮೂಲಕ 40 ಸಾವಿರಕ್ಕೂ ಹೆಚ್ಚು ಯುವಕರಿಗೆ ಸರ್ಕಾರಿ ಉದ್ಯೋಗ ನೀಡಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ಸುಮಾರು 45 ಸಾವಿರ ಯುವಕರಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಗಿದೆ ಎಂಬ ಮಾಹಿತಿ ನೀಡಿದ ಅವರು, ಯುವಕರಿಗೆ ಉಜ್ವಲ ಭವಿಷ್ಯದ ಶುಭ ಹಾರೈಸಿದರು. 

"ಅಸ್ಸಾಂ ಶಾಂತಿ ಮತ್ತು ಅಭಿವೃದ್ಧಿಯ ಹೊಸ ಯುಗಕ್ಕೆ ಸಾಕ್ಷಿಯಾಗಿದೆ ಮತ್ತು ಅಭಿವೃದ್ಧಿಯ ಈ ವೇಗವು ಅಸ್ಸಾಂನಲ್ಲಿ ಧನಾತ್ಮಕತೆ ಮತ್ತು ಸ್ಫೂರ್ತಿಯನ್ನು ಪಸರಿಸಿದೆ", ಎಂದು ಪ್ರಧಾನಮಂತ್ರಿ ಹೇಳಿದರು. ಸರ್ಕಾರಿ ನೇಮಕಾತಿಯನ್ನು ಹೆಚ್ಚು ಪಾರದರ್ಶಕವಾಗಿಸಲು ಅಸ್ಸಾಂ ಸರ್ಕಾರ ಆರಂಭಿಸಿರುವ ಪ್ರಕ್ರಿಯೆಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ವಿವಿಧ ಇಲಾಖೆಗಳಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲು ರಚಿಸಲಾಗಿರುವ 'ಅಸ್ಸಾಂ ನೇರ ನೇಮಕಾತಿ ಆಯೋಗ'ದ ಬಗ್ಗೆ ಪ್ರಸ್ತಾಪಿಸಿದರು. ಪ್ರತಿ ಇಲಾಖೆಯು ವಿಭಿನ್ನ ನಿಯಮಗಳನ್ನು ಹೊಂದಿದ್ದು ಅಭ್ಯರ್ಥಿಗಳು ವಿವಿಧ ಇಲಾಖೆಗಳಿಗಾಗಿ ವಿಭಿನ್ನ ಪರೀಕ್ಷೆಗಳಿಗೆ ಹಾಜರಾಗಬೇಕಾಗುತ್ತಿತ್ತು. ಹಿಂದಿನ ಪ್ರಕ್ರಿಯೆಯಿಂದಾಗಿ ಅನೇಕ ನೇಮಕಾತಿಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ಅವರು ಉಲ್ಲೇಖಿಸಿದರು. ಈ ಎಲ್ಲ ಪ್ರಕ್ರಿಯೆಗಳನ್ನು ಈಗ ಬಹಳ ಸುಲಭಗೊಳಿಸಲಾಗಿದೆ ಎಂದ ಅವರು, ಈ ಸಾಧನೆಗಾಗಿ ಅಸ್ಸಾಂ ಸರ್ಕಾರವನ್ನು ಅಭಿನಂದಿಸಿದರು.

"ಆಜಾದಿ ಕಾ ಅಮೃತ ಕಾಲದಲ್ಲಿ ನಮ್ಮ ದೇಶವನ್ನು ವಿಕಸಿತ ರಾಷ್ಟ್ರವನ್ನಾಗಿ ಮಾಡಲು ನಾವೆಲ್ಲರೂ ಪ್ರತಿಜ್ಞೆ ಮಾಡಿದ್ದೇವೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ಮುಂದಿನ 25 ವರ್ಷಗಳ ಅಮೃತ ಕಾಲವು ಸೇವಾ ಕಾಲವಾಗಿ ಮಹತ್ವದ್ದಾಗಿದೆ ಎಂದು ಒತ್ತಿ ಹೇಳಿದರು. ನೇಮಕಗೊಂಡವರ ನಡವಳಿಕೆ, ಚಿಂತನೆ, ಕಾರ್ಯ ವಿಧಾನ ಮತ್ತು ಸಾರ್ವಜನಿಕರ ಮೇಲೆ ಬೀರುವ ಪರಿಣಾಮದ ಮಹತ್ವವನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರು, ನೂತನವಾಗಿ ನೇಮಕಗೊಂಡವರು ಪ್ರತಿಯೊಬ್ಬ ಸಾಮಾನ್ಯ ನಾಗರಿಕರಿಗೂ ಅಸ್ಸಾಂ ಸರ್ಕಾರದ ಮುಖವಾಗಲಿದ್ದಾರೆ ಎಂದು ಒತ್ತಿ ಹೇಳಿದರು. ಸಮಾಜವು ಮಹತ್ವಾಕಾಂಕ್ಷೆಯಾಗುತ್ತಿದೆ ಮತ್ತು ಯಾವುದೇ ನಾಗರಿಕರು ಅಭಿವೃದ್ಧಿಗಾಗಿ ಕಾಯಲು ಬಯಸುವುದಿಲ್ಲ ಎಂದು ಅವರು ಉಲ್ಲೇಖಿಸಿದರು. "ಟ್ವೆಂಟಿ-20 ಕ್ರಿಕೆಟ್ ನ ಈ ಯುಗದಲ್ಲಿ, ದೇಶದ ಜನರು ತ್ವರಿತ ಫಲಿತಾಂಶಗಳನ್ನು ಬಯಸುತ್ತಾರೆ" ಎಂದ ಶ್ರೀ ಮೋದಿ ಅವರು ಸರ್ಕಾರಿ ವ್ಯವಸ್ಥೆಗಳು ಅದಕ್ಕೆ ಅನುಗುಣವಾಗಿ ತಮ್ಮನ್ನು ತಾವು ಪರಿವರ್ತಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ದೇಶದ ನಾಗರಿಕರ ಆಶೋತ್ತರಗಳನ್ನು ಈಡೇರಿಸುವಲ್ಲಿ ಸರ್ಕಾರಿ ನೌಕರರ ಜವಾಬ್ದಾರಿಗಳನ್ನು ಅವರು ಒತ್ತಿ ಹೇಳಿದರು. ನೇಮಕಗೊಂಡವರು ತಮ್ಮನ್ನು ಇಲ್ಲಿಯವರೆಗೆ ಕರೆತಂದ ಅದೇ ಸಮರ್ಪಣೆಯೊಂದಿಗೆ ಮುಂದುವರಿಯಬೇಕು ಎಂದು ಪ್ರಧಾನಮಂತ್ರಿ ಆಗ್ರಹಿಸಿದರು ಮತ್ತು ಹೊಸ ವಿಷಯಗಳನ್ನು ಕಲಿಯಲು ಮುಕ್ತವಾಗುವ ಮೂಲಕ ಸಮಾಜ ಮತ್ತು ವ್ಯವಸ್ಥೆಯನ್ನು ಸುಧಾರಿಸಲು ಕೊಡುಗೆ ನೀಡಬಹುದು ಎಂದು ಒತ್ತಿ ಹೇಳಿದರು.

ಭಾರತದ ಮೂಲಸೌಕರ್ಯಗಳನ್ನು ಅತ್ಯಂತ ವೇಗವಾಗಿ ಆಧುನೀಕರಿಸಲು ಲಕ್ಷಾಂತರ ಕೋಟಿ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಹೊಸ ಹೆದ್ದಾರಿಗಳು ಮತ್ತು ಎಕ್ಸ್ ಪ್ರೆಸ್ ಮಾರ್ಗಗಳು, ರೈಲ್ವೆ ಮಾರ್ಗಗಳು, ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ಜಲಮಾರ್ಗಗಳ ಉದಾಹರಣೆಗಳನ್ನು ನೀಡಿದರು. ಪ್ರತಿಯೊಂದು ಹೊಸ ಮೂಲಸೌಕರ್ಯ ಯೋಜನೆಯೊಂದಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಅವಕಾಶಗಳು ಪ್ರತಿ ಕ್ಷೇತ್ರದಲ್ಲೂ ಉತ್ತೇಜನ ಪಡೆಯುತ್ತಿವೆ ಎಂದು ಅವರು ಉಲ್ಲೇಖಿಸಿದರು. ವಿಮಾನ ನಿಲ್ದಾಣದ ಅಭಿವೃದ್ಧಿಗೆ ಎಂಜಿನಿಯರ್ ಗಳು, ತಂತ್ರಜ್ಞರು, ಅಕೌಂಟೆಂಟ್ ಗಳು, ಕಾರ್ಮಿಕರು ಮತ್ತು ವಿವಿಧ ರೀತಿಯ ಉಪಕರಣಗಳು, ಉಕ್ಕು ಮತ್ತು ಸಿಮೆಂಟ್ ನ ಅಗತ್ಯದ ಉದಾಹರಣೆಯನ್ನು ಅವರು ನೀಡಿದರು. ರೈಲ್ವೆ ಮಾರ್ಗಗಳ ವಿಸ್ತರಣೆ ಮತ್ತು ಅವುಗಳ ವಿದ್ಯುದ್ದೀಕರಣದಿಂದ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು. 2014ರಿಂದೀಚೆಗೆ ಸರ್ಕಾರವು ಶೌಚಾಲಯ, ಅಡುಗೆ ಅನಿಲ ಸಂಪರ್ಕ, ನೀರು ಸರಬರಾಜು ಮತ್ತು ವಿದ್ಯುತ್ ನಂತಹ ಸೌಲಭ್ಯಗಳೊಂದಿಗೆ ಸುಮಾರು 4 ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸಿ ಬಡವರಿಗೆ ಹಸ್ತಾಂತರಿಸಿದೆ ಎಂದರು. ಈ ಮನೆಗಳನ್ನು ನಿರ್ಮಿಸಲು ಮತ್ತು ಈ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸಲು ಶ್ರಮಿಸಿದ ಉತ್ಪಾದನಾ ವಲಯ, ಸಾಗಣೆ ನುರಿತ ಕಾರ್ಮಿಕರು ಮತ್ತು ಕಾರ್ಮಿಕರ ಕೊಡುಗೆಗಳನ್ನು ಅವರು ಶ್ಲಾಘಿಸಿದರು. ಉದ್ಯೋಗ ಸೃಷ್ಟಿಯಲ್ಲಿ ಆಯುಷ್ಮಾನ್ ಭಾರತ್ ಯೋಜನೆ ವಹಿಸಿದ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ದೇಶದಲ್ಲಿ ಅನೇಕ ಹೊಸ ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳನ್ನು ಸ್ಥಾಪಿಸಲಾಗಿದೆ ಎಂದರು. ಕೆಲವು ವಾರಗಳ ಹಿಂದೆ ಏಮ್ಸ್ ಗುವಾಹಟಿ ಮತ್ತು 3 ವೈದ್ಯಕೀಯ ಕಾಲೇಜುಗಳನ್ನು ಸಮರ್ಪಿಸುವ ಸುಯೋಗವನ್ನು ಶ್ರೀ ಮೋದಿ ಸ್ಮರಿಸಿದರು. ಕಳೆದ ಕೆಲವು ವರ್ಷಗಳಲ್ಲಿ ಅಸ್ಸಾಂನಲ್ಲಿ ದಂತ ವೈದ್ಯಕೀಯ ಕಾಲೇಜುಗಳು ಸಹ ವಿಸ್ತರಿಸಿವೆ ಎಂದು ಅವರು ಹೇಳಿದರು.  ಈ ಕಾರಣದಿಂದಾಗಿ, ವೈದ್ಯಕೀಯ ವೃತ್ತಿಗೆ ಸಂಬಂಧಿಸಿದ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು.

ದೇಶದಲ್ಲಿ ಲಕ್ಷಾಂತರ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲು ಸಹಾಯ ಮಾಡಿದ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ "ಹತ್ತು ವರ್ಷಗಳ ಹಿಂದೆ ಯಾರೂ ಊಹಿಸದ ಇಂತಹ ಅನೇಕ ಕ್ಷೇತ್ರಗಳಲ್ಲಿ ಇಂದು ಯುವಕರು ಮುಂದೆ ಸಾಗುತ್ತಿದ್ದಾರೆ" ಎಂದು ಹೇಳಿದರು. ಕೃಷಿ, ಸಾಮಾಜಿಕ ಕಾರ್ಯಕ್ರಮಗಳು, ಸಮೀಕ್ಷೆ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಡ್ರೋನ್ ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಅವರು ಉಲ್ಲೇಖಿಸಿದರು ಮತ್ತು ಇದು ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ ಎಂದು ಹೇಳಿದರು.  ಭಾರತದಲ್ಲಿ ಕೋಟಿಗಟ್ಟಲೆ ಮೊಬೈಲ್ ಫೋನ್ ಗಳನ್ನು ತಯಾರಿಸುವ ಮೂಲಕ ಭಾರತದ ಪ್ರಗತಿಗೆ ಕೊಡುಗೆ ನೀಡುತ್ತಿರುವ ಆತ್ಮನಿರ್ಭರ ಭಾರತ್ ಅಭಿಯಾನದ ಬಗ್ಗೆಯೂ ಪ್ರಧಾನಮಂತ್ರಿ ಪ್ರಸ್ತಾಪಿಸಿದರು.  ಬ್ರಾಡ್ ಬ್ಯಾಂಡ್ ಸಂಪರ್ಕವು ಪ್ರತಿ ಹಳ್ಳಿಗೂ ತಲುಪುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಇದು ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಮತ್ತು ಸ್ವಉದ್ಯೋಗಕ್ಕೆ ಉತ್ತೇಜನ ನೀಡಿದೆ ಎಂದರು. ಕೇವಲ ಒಂದು ಯೋಜನೆ ಅಥವಾ ಒಂದು ನಿರ್ಧಾರವು ಜನರ ಜೀವನದ ಮೇಲೆ ಪರಿಣಾಮ ಬೀರಬಹುದು ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ಪ್ರಸ್ತುತ ಸರ್ಕಾರದ ನೀತಿಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು, ಈಶಾನ್ಯದಿಂದ ಹೆಚ್ಚಿನ ಸಂಖ್ಯೆಯ ಯುವಕರು ಅಭಿವೃದ್ಧಿಯ ಮುಖ್ಯವಾಹಿನಿಗೆ ಬರುತ್ತಿದ್ದಾರೆ ಎಂದು ಒತ್ತಿ ಹೇಳಿದರು. ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ನೀಡುವ ಮೂಲಕ ಯುವಕರ ಕನಸುಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. ನಾವು ನವ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ", ಎಂದು ಪ್ರಧಾನಮಂತ್ರಿ ಮಾತು ಮುಗಿಸಿದರು.

 


***



(Release ID: 1927429) Visitor Counter : 91