ಪ್ರಧಾನ ಮಂತ್ರಿಯವರ ಕಛೇರಿ

ಆಸ್ಟ್ರೇಲಿಯದ ಪ್ರಧಾನಿಯವರೊಂದಿಗೆ ಪ್ರಧಾನ ಮಂತ್ರಿಯವರ ಸಭೆ

Posted On: 24 MAY 2023 10:03AM by PIB Bengaluru

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 24 ಮೇ 2023 ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಅಡ್ಮಿರಾಲ್ಟಿ ಹೌಸ್‌ನಲ್ಲಿ ಆಸ್ಟ್ರೇಲಿಯಾದ ಗೌರವಾನ್ವಿತ ಪ್ರಧಾನಿ ಶ್ರೀ ಆಂಥೋನಿ ಅಲ್ಬನೀಸ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.

ಅಡ್ಮಿರಾಲ್ಟಿ ಹೌಸ್‌ಗೆ ಆಗಮಿಸಿದ ಪ್ರಧಾನಮಂತ್ರಿ ಅವರಿಗೆ ವಿಧ್ಯುಕ್ತ ಸ್ವಾಗತ ಮತ್ತು ಗಾರ್ಡ್ ಆಫ್ ಆನರ್ ನೀಡಲಾಯಿತು.

ಇಬ್ಬರೂ ನಾಯಕರು ಮಾರ್ಚ್ 2023 ರಲ್ಲಿ ನವದೆಹಲಿಯಲ್ಲಿ ನಡೆದ ತಮ್ಮ ಫಲಪ್ರದ ಮೊದಲನೇ ವಾರ್ಷಿಕ ನಾಯಕರ ಶೃಂಗಸಭೆಯನ್ನು ಸ್ಮರಿಸಿದರು ಮತ್ತು ಬಹುಮುಖಿ ಭಾರತ-ಆಸ್ಟ್ರೇಲಿಯಾ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ವಿಸ್ತರಿಸುವ ಮತ್ತು ಗಟ್ಟಿಗೊಳಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

 ರಕ್ಷಣೆ ಮತ್ತು ಭದ್ರತೆ, ವ್ಯಾಪಾರ ಮತ್ತು ಹೂಡಿಕೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ, ಹಸಿರು ಜಲಜನಕ, ಪ್ರಮುಖ ಖನಿಜಗಳು, ಶಿಕ್ಷಣ, ವಲಸೆ ಮತ್ತು ಚಲನಶೀಲತೆ ಮತ್ತು ಜನರೊಂದಿಗೆ ಜನರ ಸಂಬಂಧಗಳ ಸಹಕಾರದ ಮೇಲೆ ಚರ್ಚೆಗಳು ಕೇಂದ್ರೀಕೃತವಾಗಿದ್ದವು.

ಇಬ್ಬರೂ ನಾಯಕರು ಭಾರತ-ಆಸ್ಟ್ರೇಲಿಯಾ ವಲಸೆ ಮತ್ತು ಚಲನಶೀಲ ಪಾಲುದಾರಿಕೆ ವ್ಯವಸ್ಥೆ (ಎಂಎಂಪಿಎ) ಗೆ ಸಹಿ ಹಾಕುವುದನ್ನು ಸ್ವಾಗತಿಸಿದರು, ಇದು MATES (ಪ್ರತಿಭಾನ್ವಿತ ಆರಂಭಿಕ ವೃತ್ತಿಪರರಿಗೆ ಚಲನಶೀಲತೆ ವ್ಯವಸ್ಥೆ ಯೋಜನೆ) ಎಂಬ ಹೊಸ ಕೌಶಲ ಮಾರ್ಗದ ಮೂಲಕ ವಿದ್ಯಾರ್ಥಿಗಳು, ವೃತ್ತಿಪರರು, ಸಂಶೋಧಕರು, ಶಿಕ್ಷಣ ತಜ್ಞರು ಮತ್ತು ಇತರರ ಚಲನಶೀಲತೆಯನ್ನು ಇನ್ನಷ್ಟು ಸುಗಮಗೊಳಿಸುತ್ತದೆ. ಇದನ್ನು ವಿಶೇಷವಾಗಿ ಭಾರತಕ್ಕಾಗಿ ರಚಿಸಲಾಗಿದೆ.

ಭಾರತ-ಆಸ್ಟ್ರೇಲಿಯಾ ಜಲಜನಕ ಕಾರ್ಯಪಡೆ ನಿಯಮಾವಳಿಗಳನ್ನು ಅಂತಿಮಗೊಳಿಸುವುದನ್ನು ಅವರು ಸ್ವಾಗತಿಸಿದರು, ಇದು ಶುದ್ಧ ಹೈಡ್ರೋಜನ್ ತಯಾರಿಕೆ ಮತ್ತು ನಿಯೋಜನೆ, ಹೈಡ್ರೋಜನ್ ಎಲೆಕ್ಟ್ರೋಲೈಸರ್‌ಗಳು, ಇಂಧನ ಕೋಶಗಳು ಮತ್ತು ಬೆಂಬಲಿತ ಮೂಲಸೌಕರ್ಯ ಮತ್ತು ಮಾನದಂಡಗಳು ಮತ್ತು ನಿಯಮಗಳು ವೇಗಗೊಳಿಸುವ ಅವಕಾಶಗಳ ಕುರಿತು ಸಲಹೆ ನೀಡುತ್ತದೆ. ಬ್ರಿಸ್ಬೇನ್‌ನಲ್ಲಿ ಭಾರತದ ದೂತಾವಾಸವನ್ನು ಸ್ಥಾಪಿಸಲು ಆಸ್ಟ್ರೇಲಿಯಾ ನೀಡಿದ ಬೆಂಬಲಕ್ಕಾಗಿ ಪ್ರಧಾನಿ ಮೋದಿ ಧನ್ಯವಾದ ಹೇಳಿದರು.

ನಿಯಮಾಧಾರಿತ ಅಂತರರಾಷ್ಟ್ರೀಯ ಕ್ರಮದ ಆಧಾರದಲ್ಲಿ ಶಾಂತಿಯುತ, ಸಮೃದ್ಧ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶವನ್ನು ಖಚಿತಪಡಿಸಿಕೊಳ್ಳಲು ಉಭಯ ನಾಯಕರು ತಮ್ಮ ಸಂಕಲ್ಪವನ್ನು ಪುನರುಚ್ಚರಿಸಿದರು. ಅವರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಯ ಬಗ್ಗೆಯೂ ಚರ್ಚಿಸಿದರು.

ಪ್ರಧಾನ ಮಂತ್ರಿ ಅಲ್ಬನೀಸ್ ಭಾರತದ ಜಿ-20 ಅಧ್ಯಕ್ಷತೆ ಮತ್ತು ಉಪಕ್ರಮಗಳಿಗೆ ಆಸ್ಟ್ರೇಲಿಯಾದ ಬಲವಾದ ಬೆಂಬಲವನ್ನು ವ್ಯಕ್ತಪಡಿಸಿದರು. 2023ರ ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಜಿ-20 ಶೃಂಗಸಭೆಗೆ ಪ್ರಧಾನ ಮಂತ್ರಿ ಅಲ್ಬನೀಸ್ ಅವರನ್ನು ಬರಮಾಡಿಕೊಳ್ಳಲು ಪ್ರಧಾನಿ ಎದುರು ನೋಡುತ್ತಿದ್ದಾರೆ.

******



(Release ID: 1927063) Visitor Counter : 118