ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಫಿಜಿ ಗಣರಾಜ್ಯದ ಪ್ರಧಾನಮಂತ್ರಿಯವರೊಂದಿಗೆ ಪ್ರಧಾನಮಂತ್ರಿಯವರ ಸಭೆ

Posted On: 22 MAY 2023 2:12PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರ ವೇದಿಕೆಯ (ಎಫ್ಐಪಿಐಸಿ) 3ನೇ ಶೃಂಗಸಭೆಯ ವೇಳೆ 2023ರ ಮೇ 22ರಂದು ಪೋರ್ಟ್ ಮೊರೆಸ್ಬಿಯಲ್ಲಿ ಫಿಜಿ ಗಣರಾಜ್ಯದ ಪ್ರಧಾನಮಂತ್ರಿ ಮಾನ್ಯ ಶ್ರೀ ಸಿತಿವೇನಿ ಲಿಗಮಮಡ ರಬುಕಾ ಅವರನ್ನು ಭೇಟಿ ಮಾಡಿದರು. ಇದು ಉಭಯ ನಾಯಕರ ನಡುವಿನ ಮೊದಲ ಭೇಟಿಯಾಗಿತ್ತು. 2014ರ ನವೆಂಬರ್ ನಲ್ಲಿ ತಾವು ಫಿಜಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಎಫ್.ಐ.ಪಿ.ಐ.ಸಿ.ಯನ್ನು ಆರಂಭಿಸಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಅಂದಿನಿಂದ ಪೆಸಿಫಿಕ್ ದ್ವೀಪ ರಾಷ್ಟ್ರಗಳೊಂದಿಗೆ (ಪಿಐಸಿ) ಭಾರತದ ಸಹಕಾರ ಗಾಢವಾಗುತ್ತಿರುವುದನ್ನು ಉಲ್ಲೇಖಿಸಿದರು.

ಉಭಯ ನಾಯಕರು ಉಭಯ ದೇಶಗಳ ನಡುವಿನ ನಿಕಟ ಮತ್ತು ಬಹುಮುಖಿ ಅಭಿವೃದ್ಧಿ ಪಾಲುದಾರಿಕೆಯನ್ನು ಪರಾಮರ್ಶಿಸಿದರು ಮತ್ತು ಸಾಮರ್ಥ್ಯ ವರ್ಧನೆ, ಆರೋಗ್ಯ ರಕ್ಷಣೆ, ಹವಾಮಾನ ಕ್ರಮ, ನವೀಕರಿಸಬಹುದಾದ ಇಂಧನ, ಕೃಷಿ, ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿನ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಇಬ್ಬರೂ ನಾಯಕರು ಪ್ರಾದೇಶಿಕ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಬಹುಪಕ್ಷೀಯ ವಲಯದಲ್ಲಿ ಸಹಕಾರವನ್ನು ಆಳಗೊಳಿಸಲು ಸಮ್ಮತಿಸಿದರು.

ಫಿಜಿಯ ಅಧ್ಯಕ್ಷ ಮಾನ್ಯ ಶ್ರೀ ರತು ವಿಲಿಯಾಮೆ ಮೈವಾಲಿಲಿ ಕಟೋನಿವೇರ್ ಅವರ ಪರವಾಗಿ, ಪ್ರಧಾನಮಂತ್ರಿ ರಬುಕಾ ಅವರು ಪ್ರಧಾನಮಂತ್ರಿ ಮೋದಿ ಅವರಿಗೆ ಫಿಜಿ ಗಣರಾಜ್ಯದ ಅತ್ಯುನ್ನತ ಗೌರವವಾದ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ಫಿಜಿ (ಸಿಎಫ್) ಪ್ರದಾನ ಮಾಡಿದರು. ಈ ಗೌರವಕ್ಕಾಗಿ ಫಿಜಿ ಸರ್ಕಾರ ಮತ್ತು ಜನರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಮಂತ್ರಿ ಮೋದಿ, ಇದನ್ನು ಭಾರತದ ಜನರಿಗೆ ಮತ್ತು ಎರಡೂ ದೇಶಗಳ ನಡುವಿನ ವಿಶೇಷ ಮತ್ತು ಶಾಶ್ವತ ಬಾಂಧವ್ಯದಲ್ಲಿ ಪ್ರಮುಖ ಪಾತ್ರ ವಹಿಸಿರುವ ಫಿಜಿ-ಭಾರತೀಯ ಸಮುದಾಯದ ಪೀಳಿಗೆಗೆ ಅರ್ಪಿಸಿದರು.

******


(Release ID: 1926467) Visitor Counter : 183