ಸಂಸ್ಕೃತಿ ಸಚಿವಾಲಯ
ಪ್ರಧಾನಮಂತ್ರಿಯವರು ನವದೆಹಲಿಯ ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿಗೆ ಭೇಟಿ ನೀಡಿ 'ಜನ ಶಕ್ತಿ: ಒಂದು ಸಾಮೂಹಿಕ ಶಕ್ತಿ' ವಸ್ತು ಪ್ರದರ್ಶನವನ್ನು ವೀಕ್ಷಿಸಿದರು
Posted On:
14 MAY 2023 2:14PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿಗೆ ಭೇಟಿ ನೀಡಿ 'ಜನ ಶಕ್ತಿ: ಒಂದು ಸಾಮೂಹಿಕ ಶಕ್ತಿ' ವಸ್ತುಪ್ರದರ್ಶನ ವೀಕ್ಷಿಸಿದರು. ಪ್ರಧಾನ ಮಂತ್ರಿಯವರ ಜನಪ್ರಿಯ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನ 100 ನೇ ಸಂಚಿಕೆಯ ಅಂಗವಾಗಿ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ. ಪ್ರದರ್ಶನವು ಭಾರತದ ಕಲಾತ್ಮಕ ವೈವಿಧ್ಯತೆಯನ್ನು ಆಚರಿಸುತ್ತಿದ್ದು, ಮನ್ ಕಿ ಬಾತ್ ನಲ್ಲಿ ಪ್ರಸ್ತಾಪಿಸಲಾದ ವಿಷಯಗಳಿಂದ ಪ್ರೇರಿತವಾಗಿದೆ.
ಪ್ರದರ್ಶನದಲ್ಲಿ ಪ್ರಧಾನಮಂತ್ರಿಯವರನ್ನು ವಿಶೇಷ ದರ್ಶನಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಕಲಾವಿದರಿಗೆ ತಮ್ಮ ಕಲಾಕೃತಿಗಳನ್ನು ವಿವರಿಸಲು ಮತ್ತು ಅವರ ಕಲಾಕೃತಿಗಳಿಗೆ ಸ್ಫೂರ್ತಿ ನೀಡಿದ ಮನ್ ಕಿ ಬಾತ್ ನ ವಿಷಯಗಳನ್ನು ವಿವರಿಸಲು ಅವಕಾಶವೂ ದೊರೆಯಿತು. ಜೈಪುರದ ಐತಿಹಾಸಿಕ ಗುಮ್ಮಟದಲ್ಲಿ ನಡೆದ ಜನಶಕ್ತಿ ವಸ್ತುಪ್ರದರ್ಶನದ ಅತ್ಯಾಕರ್ಷಕ ಪ್ರದರ್ಶನವನ್ನು ಪ್ರಧಾನಮಂತ್ರಿಯವರು ವೀಕ್ಷಿಸಿದರು. ಕಲಾಕೃತಿಗಳನ್ನು ವೀಕ್ಷಿಸಿದ ನಂತರ, ಪ್ರಧಾನಮಂತ್ರಿಯವರು ಜನಶಕ್ತಿ ವಸ್ತುಪ್ರದರ್ಶನ ಕ್ಯಾಟಲಾಗ್ ಗೆ ಸಹಿ ಹಾಕಿದರು ಮತ್ತು "ಮನ್ ಮಂದಿರ್ ಕಿ ಯಾತ್ರಾ ಸುಖದ್ ಹೋ." ಎಂಬ ಸಂದೇಶವನ್ನು ಬರೆದರು. ಕ್ಯಾಟಲಾಗ್ ನಲ್ಲಿ 13 ಕಲಾವಿದರು ಮೊದಲೇ ಸಹಿ ಮಾಡಿದ್ದರು.
ಹದಿಮೂರು ಪ್ರಸಿದ್ಧ ಆಧುನಿಕ ಮತ್ತು ಸಮಕಾಲೀನ ಕಲಾವಿದರು ತಮ್ಮನ್ನು ತಾವು ಅಭಿವ್ಯಕ್ತಪಡಿಸಲು ಮತ್ತು ಹನ್ನೆರಡು ವಿಷಯಗಳ ಮೇಲೆ ಪ್ರಧಾನ ಮಂತ್ರಿಯವರ ಸಂದೇಶದ ಕಲಾತ್ಮಕ ನಿರೂಪಣೆಯನ್ನು ಪ್ರಸ್ತುತಪಡಿಸಲು ವಿವಿಧ ಮಾಧ್ಯಮಗಳನ್ನು ಬಳಸಿದರು. ಪ್ರತಿಯೊಂದು ವಿಷಯವೂ ಜಲ ಸಂರಕ್ಷಣೆ, ನಾರಿ ಶಕ್ತಿ, ಕೋವಿಡ್ ಜಾಗೃತಿ, ಸ್ವಚ್ಛ ಭಾರತ, ಪರಿಸರ ಮತ್ತು ಹವಾಮಾನ ಬದಲಾವಣೆ, ಭಾರತೀಯ ಕೃಷಿ, ಯೋಗ ಮತ್ತು ಆಯುರ್ವೇದ, ಭಾರತೀಯ ವಿಜ್ಞಾನ ಮತ್ತು ಬಾಹ್ಯಾಕಾಶ, ಕ್ರೀಡೆ ಮತ್ತು ಸುದೃಢತೆ, ಇಂಡಿಯಾ @ 75 ಮತ್ತು ಅಮೃತ ಕಾಲ, ಈಶಾನ್ಯ ಭಾರತ ಮತ್ತು ಭಾರತ ಮತ್ತು ವಿಶ್ವವನ್ನು ಆಚರಿಸುವುದು ಮುಂತಾದ ವಿಷಯಗಳಿಗೆ ಸಂಬಂಧಿಸಿತ್ತು.
ಪ್ರದರ್ಶನದಲ್ಲಿ ಶ್ರೀಮತಿ ಮಾಧವಿ ಪರೇಖ್, ಶ್ರೀ ಮನು ಪರೇಖ್, ಶ್ರೀ ಅತುಲ್ ದೋಡಿಯಾ, ಶ್ರೀ ರಿಯಾಸ್ ಕೋಮು, ಶ್ರೀ ಜಿ.ಆರ್.ಈರಣ್ಣ, ಶ್ರೀ ಆಶಿಮ್ ಪುರ್ಕಾಯಸ್ಥ, ಶ್ರೀ ಜಿತೇನ್ ತುಕ್ರಾಲ್ ಮತ್ತು ಶ್ರೀ ಸುಮಿರ್ ಟಗ್ರಾ, ಶ್ರೀ ಪರೇಶ್ ಮೈಥಿ, ಶ್ರೀ ಪ್ರತುಲ್ ದಾಸ್, ಶ್ರೀ ಜಗನ್ನಾಥ್ ಪಾಂಡಾ, ಶ್ರೀ ಮಂಜುನಾಥ ಕಾಮತ್ ಮತ್ತು ಶ್ರೀಮತಿ ವಿಭಾ ಗಲ್ಹೋತ್ರಾ ಅವರ ಕಲಾಕೃತಿಗಳನ್ನು ಪ್ರದರ್ಶಿಸಲಾಗಿತ್ತು.
ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್; ಕಿರಣ್ ನಾಡರ್ ಕಲಾ ವಸ್ತುಸಂಗ್ರಹಾಲಯದ ಸ್ಥಾಪಕರಾದ ಶ್ರೀಮತಿ ಕಿರಣ್ ನಾಡರ್ ಮತ್ತು ವಸ್ತುಪ್ರದರ್ಶನದ ಕ್ಯುರೇಟರ್ ಡಾ.ಅಲ್ಕಾ ಪಾಂಡೆ ಅವರು ಸಂಸ್ಕೃತಿ ಸಚಿವಾಲಯ ಮತ್ತು ನವದೆಹಲಿಯ ರಾಷ್ಟ್ರೀಯ ಆಧುನಿಕ ಕಲಾ ಗ್ಯಾಲರಿಯ ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*******
(Release ID: 1924150)
Visitor Counter : 151