ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಮನ್ ಕಿ ಬಾತ್ ಮೂಲಕ ಶಿಕ್ಷಣದ ಪರಿವರ್ತನೆ
ಶಿಕ್ಷಣದ ಪರಿವರ್ತನೆಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಯವರು ರಾಷ್ಟ್ರದ ಮುಂದಿರಿಸಿರುವ ಶ್ರೇಷ್ಠ ಗುರಿಗಳನ್ನು ಸಾಧಿಸಲು ʻಮನ್ ಕಿ ಬಾತ್ʼನಲ್ಲಿ ಅವರು ಶಿಕ್ಷಣ ಕುರಿತು ಪ್ರಸ್ತಾಪಿಸಿದ ವಿಚಾರಗಳು ಕೊಡುಗೆ ನೀಡಿವೆ
ʻಮನ್ ಕಿ ಬಾತ್ʼನಲ್ಲಿ ಒತ್ತಿ ಹೇಳಲಾದ ಪ್ರಧಾನ ಮಂತ್ರಿಯವರ ಚಿಂತನೆ ಮತ್ತು ಆಶಯಗಳಿಂದ ಪ್ರೇರಿತವಾದ ಹಲವಾರು ಉಪಕ್ರಮಗಳನ್ನು ಶಿಕ್ಷಣ ಸಚಿವಾಲಯವು ಕೈಗೊಂಡಿದೆ
Posted On:
30 APR 2023 6:12PM by PIB Bengaluru
ಪ್ರಧಾನ ಮಂತ್ರಿಯವರ ʻಮನ್ ಕಿ ಬಾತ್ʼ ಸಮಾಜದ ಎಲ್ಲಾ ವರ್ಗಗಳ ಮೇಲೆ ಪರಿಣಾಮ ಬೀರಿದ್ದು, ಪ್ರಧಾನಿಯವರು ರಾಷ್ಟ್ರದ ಮುಂದೆ ನಿಗದಿಪಡಿಸಿದ ಮಹಾನ್ ಗುರಿಗಳನ್ನು ಸಾಧಿಸುವಲ್ಲಿ ಕೊಡುಗೆ ನೀಡಲು ಜನರನ್ನು ಪ್ರೇರೇಪಿಸಿದೆ.
ಅಕ್ಟೋಬರ್ 3, 2014ರಂದು ಪ್ರಾರಂಭವಾದ `ಮನ್ ಕಿ ಬಾತ್’ ಭಾರತದ ಪ್ರಧಾನ ಮಂತ್ರಿಯವರ ಅತ್ಯಂತ ಜನಪ್ರಿಯ ಕಾರ್ಯಕ್ರಮವಾಗಿದ್ದು, ಕಳೆದ ಒಂಬತ್ತು ವರ್ಷಗಳಲ್ಲಿ 100 ಕಂತುಗಳನ್ನು ಪೂರ್ಣಗೊಳಿಸಿದೆ. ದೇಶವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ನೂರಾರು ವೈವಿಧ್ಯಮಯ ಸಮಸ್ಯೆಗಳನ್ನು ಇದರಲ್ಲಿ ಪ್ರಧಾನಿಯವರು ಪ್ರಸ್ತಾಪಿಸಿದ್ದಾರೆ. ಅವರು ಪ್ರಸ್ತಾಪಿಸಿದ ಈ ಎಲ್ಲಾ ವಿಷಯಗಳು ಆಳ ಮತ್ತು ಸಮಗ್ರ ಸಂಶೋಧನೆಗಳು ಹಾಗೂ ದೇಶದ ಉದ್ದಗಲಕ್ಕೂ ವಿವಿಧ ಮಧ್ಯಸ್ಥಗಾರರು ಮತ್ತು ವೃತ್ತಿಪರರು ಒದಗಿಸಿದ ಅಭಿಪ್ರಾಯಗಳನ್ನು ಆಧರಿಸಿವೆ. ʻಮನ್ ಕಿ ಬಾತ್ʼ ಮೂಲಕ ಪ್ರಧಾನಿಯವರು ವಿವಿಧ ಶೈಕ್ಷಣಿಕ ಅಂಶಗಳು ಸೇರಿದಂತೆ ಹಲವಾರು ಕಳವಳಗಳನ್ನು ಮುಂದಿಟ್ಟಿದ್ದಾರೆ. ವಾಸ್ತವಾಂಶಗಳು ಮತ್ತು ಅಂಕಿಅಂಶಗಳೊಂದಿಗೆ ದೇಶದ ಮುಂದೆ ಇವುಗಳನ್ನು ಪ್ರಸ್ತಾಪಿಸುವ ಮೂಲಕ ಪ್ರತಿ ಬಾರಿಯೂ ಸಾರ್ವಜನಿಕರಿಂದ ಅದ್ಭುತ ಪ್ರತಿಕ್ರಿಯೆಯನ್ನು ಪಡೆದಿದ್ದಾರೆ. ಇದು ಸಮಾಜದ ಎಲ್ಲಾ ವರ್ಗಗಳ ಮೇಲೆ ಪರಿಣಾಮ ಬೀರುವುದರ ಜೊತೆಗೆ ಪ್ರಧಾನಿಯವರು ರಾಷ್ಟ್ರದ ಮುಂದೆ ನಿಗದಿಪಡಿಸಿದ ಮಹಾನ್ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಕೊಡುಗೆ ನೀಡಲು ಜನರನ್ನು ಹುರಿದುಂಬಿಸಿದೆ. ಏಪ್ರಿಲ್ 30, 2023 ರಂದು ʻಮನ್ ಕಿ ಬಾತ್ʼ 100ನೇ ಕಂತು ಪ್ರಸಾರವಾಯಿತು. ಈ ಹಂತದಲ್ಲಿ, ಭಾರತ ಸರಕಾರದ ಶಿಕ್ಷಣ ಸಚಿವಾಲಯ (ಎಂಒಇ) ಮತ್ತು ಅದರ ವಿವಿಧ ಸ್ವಾಯತ್ತ ಸಂಸ್ಥೆಗಳು ಕೈಗೊಂಡಿರುವ ಹಲವು ಉಪಕ್ರಮಗಳ ಪಕ್ಷಿನೋಟದ ಮೂಲಕ ಭಾರತೀಯ ಶಿಕ್ಷಣ ವ್ಯವಸ್ಥೆಯ ಮೇಲೆ ʻಮನ್ ಕಿ ಬಾತ್ʼ ಬೀರಿರುವ ಪರಿಣಾಮವನ್ನು ತಿಳಿಯಬಹುದಾಗಿದೆ.
ʻಕಲಾ ಉತ್ಸವʼದ ಮೂಲಕ ಯುವ ಕಲಾ ಪ್ರತಿಭೆಗಳನ್ನು ಗುರುತಿಸುವುದು, ʻಏಕ್ ಭಾರತ್, ಶ್ರೇಷ್ಠ ಭಾರತ್ʼ ಕಾರ್ಯಕ್ರಮಗಳು, ʻರಾಷ್ಟ್ರೀಯ ಯೋಗ ಒಲಿಂಪಿಯಾಡ್ʼ, ಸಾಂಪ್ರದಾಯಿಕ ಭಾರತೀಯ ಆಟಿಕೆಗಳು ಮತ್ತು ಆಟಗಳನ್ನು ಉತ್ತೇಜಿಸಲು ಶಾಲೆಗಳಲ್ಲಿ ಆಟಿಕೆ ಆಧಾರಿತ ಬೋಧನಾ ಪದ್ಧತಿಗೆ ಪ್ರೋತ್ಸಾಹ, ಪರೀಕ್ಷಾ ಪೇ ಚರ್ಚಾ, ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರಕ್ಕಾಗಿ ʻನಿಪುಣ್ ಭಾರತ್ʼ, ಶಾಲೆಗಳಿಗೆ ʻರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯʼ, ಡಿಜಿಟಲ್ ಶಿಕ್ಷಣಕ್ಕಾಗಿ ʻಎನ್‌ಡಿಇಎಆರ್ʼ, ʻಮನೋದರ್ಪನ್ʼ ಮತ್ತು ʻಸಹಯೋಗ್ʼ ಮುಂತಾದ ಹಲವಾರು ಉಪಕ್ರಮಗಳನ್ನು ಶಿಕ್ಷಣ ಸಚಿವಾಲಯ ಕೈಗೊಂಡಿದೆ. ʻಪಿಎಂ ಇ-ವಿದ್ಯಾʼ, ʻಸ್ವಯಂಪ್ರಭಾʼ ಚಾನೆಲ್ ಮತ್ತು ಇನ್ನೂ ಅನೇಕವು ಸಹ ಈ ಪಟ್ಟಿಗೆ ಸೇರಿವೆ. ಪ್ರಧಾನಿಯವರು ಶೈಕ್ಷಣಿಕ ಕ್ಷೇತ್ರದ ಗಮನಕ್ಕೆ ತಂದ ಅನೇಕ ವಿಚಾರಗಳಿಂದ ʻರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿʼಯ(ಎನ್‌ಸಿಇಆರ್‌ಟಿ) ಶಿಕ್ಷಣ ತಜ್ಞರು ಮತ್ತು ಪ್ರಾಧ್ಯಾಪಕರು ಸಹ ಪ್ರೇರಿತರಾಗಿದ್ದಾರೆ. ಅವುಗಳಿಗೆ ಸ್ಪಷ್ಟವಾದ ರೂಪವನ್ನು ನೀಡಲು ಸಚಿವಾಲಯವು ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದೆ.
ʻಮನ್ ಕಿ ಬಾತ್ʼನ 66ನೇ ಸಂಚಿಕೆಯಲ್ಲಿ, ಪ್ರಧಾನ ಮಂತ್ರಿಯವರು ಸಾಂಪ್ರದಾಯಿಕ ಆಟಗಳು ಮತ್ತು ಆಟಿಕೆಗಳನ್ನು ಉತ್ತೇಜಿಸಲು ಕರೆ ನೀಡಿದರು. ಆಟಿಕೆ ಉದ್ಯಮದ ಗುಣಮಟ್ಟದ ಬಗ್ಗೆ ಕಳವಳ ಸೂಚಿಸಿದ್ದಲ್ಲದೆ, ಅಸಂಘಟಿತ ಮೂಲಗಳಿಂದ ಮಾರುಕಟ್ಟೆಗೆ ಬರುವ ಅಗ್ಗದ ಆಟಿಕೆಗಳಿಂದ (ಪ್ಲಾಸ್ಟಿಕ್‌ನಿಂದ ತಯಾರಿಸಿದ) ಉಂಟಾಗುವ ಮಕ್ಕಳ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ಆತಂಕ ವ್ಯಕ್ತಪಡಿಸಿದರು. ಈ ಹಿಂದೆ 2020ರ ಜೂನ್ ಮತ್ತು ಜುಲೈ ಸಂಚಿಕೆಗಳಲ್ಲೂ ಅವರು ʻವೋಕಲ್ ಫಾರ್ ಲೋಕಲ್ʼ ಬಗ್ಗೆ ಹಾಗೂ ರಾಷ್ಟ್ರೀಯ ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲೇ ಸಾಂಪ್ರದಾಯಿಕ ಆಟಗಳಲ್ಲಿ ತೊಡಗಿಸಿಕೊಳ್ಳುವ ಮಾರ್ಗಗಳ ಬಗ್ಗೆ ಮಾತನಾಡಿದ್ದರು. ʻರಾಷ್ಟ್ರೀಯ ಶಿಕ್ಷಣ ನೀತಿ-2020ʼ ಕೂಡ ಸಂತೋಷದ ಕಲಿಕೆಗೆ ಒತ್ತು ನೀಡಿದೆ. ಇವುಗಳನ್ನು ಶಿಕ್ಷಣ ಸಚಿವಾಲಯವು ಬಹಳ ಗಂಭೀರವಾಗಿ ಪರಿಗಣಿಸಿದೆ ಮತ್ತು ಎರಡು ವರ್ಷಗಳಲ್ಲಿ, ಆಟಿಕೆ ಆಧಾರಿತ ಬೋಧನಾಶಾಸ್ತ್ರದ ಮೂಲಕ ಭಾರತೀಯ ಆಟಿಕೆಗಳನ್ನು ಉತ್ತೇಜಿಸುವ ಸಂದೇಶವು ಪ್ರತಿ ಮನೆಗೂ ತಲುಪಿದೆ. ಶಾಲಾ ವ್ಯವಸ್ಥೆಯಲ್ಲಿ ಸಾಂಪ್ರದಾಯಿಕ ಆಟಿಕೆಗಳಿಗೆ ಸ್ಥಳಾವಕಾಶ, ʻಆರಂಭಿಕ ಹಂತಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ನಿಯಮʼ ಮತ್ತು ʻಶಾಲಾ ಶಿಕ್ಷಣಕ್ಕಾಗಿ ಕರಡು ರಾಷ್ಟ್ರೀಯ ಪಠ್ಯಕ್ರಮ ನೀತಿʼ, ʻಆರಂಭಿಕ ಹಂತದ ಕಲಿಕೆ-ಬೋಧನಾ ಸಾಮಗ್ರಿಗಳುʼ, ಶಾಲಾ ಶಿಕ್ಷಣದ ಎಲ್ಲಾ ಹಂತಗಳು ಮತ್ತು ವಿಷಯಗಳಿಗೆ ಆಟಿಕೆ ಆಧಾರಿತ ಬೋಧನಾ ಕೈಪಿಡಿ, ಅಂತರರಾಷ್ಟ್ರೀಯ ವೆಬಿನಾರ್, ರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಚಾರ ಸಂಕಿರಣಗಳು ಮತ್ತು ವೆಬಿನಾರ್, ಆಟಿಕೆ ಹ್ಯಾಕಥಾನ್, ಶಾಲಾ ಶಿಕ್ಷಣಕ್ಕಾಗಿ ʻರಾಷ್ಟ್ರೀಯ ಆಟಿಕೆ ಮೇಳʼ, 2020ರಿಂದ 200 ಹುಡುಗರು ಮತ್ತು ಹುಡುಗಿಯರು ಭಾಗವಹಿಸಿದ್ದ ʻಕಲಾ ಉತ್ಸವʼದಲ್ಲಿ ಸ್ಥಳೀಯ ಆಟಿಕೆಗಳು ಮತ್ತು ಆಟಗಳ ಪ್ರತ್ಯೇಕ ವಿಭಾಗ ಸೇರ್ಪಡೆ, ಆರಂಭಿಕ ಮತ್ತು ಮಾಧ್ಯಮಿಕ ಹಂತಗಳಿಗಾಗಿ ʻನಿಷ್ಠಾʼ(NISHTHA)ದಲ್ಲಿ ಆಟಿಕೆ ಆಧರಿತ ಭೋದನಾಶಾಸ್ತ್ರ ತರಬೇತಿ ಮಾಡ್ಯೂಲ್‌ಗಳ ಸೇರ್ಪಡೆ (21 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಆಟಿಕೆ ಆಧಾರಿತ ಬೋಧನಾಶಾಸ್ತ್ರದ ಮಾಡ್ಯೂಲ್ ಅನ್ನು ಅನುಸರಿಸುತ್ತಿದ್ದಾರೆ) ಮುಂತಾದವು ಶಾಲಾ ಶಿಕ್ಷಣದಲ್ಲಿ ʻಎನ್‌ಸಿಇಆರ್‌ಟಿʼ ಮತ್ತು ಇತರ ಸಂಸ್ಥೆಗಳು ಕೈಗೊಂಡ ಕೆಲವು ಮಹತ್ವದ ಉಪಕ್ರಮಗಳಾಗಿವೆ. ಶಾಲಾ ಚಟುವಟಿಕೆಗಳಿಗಾಗಿ ಸಾಂಪ್ರದಾಯಿಕ ಭಾರತೀಯ ಆಟಗಳು ಮತ್ತು ಆಟಿಕೆಗಳನ್ನು ತರಗತಿಯಲ್ಲಿ ಸೇರಿಸುವ ಆಲೋಚನೆಯನ್ನೂ ಅನುಷ್ಠಾನಗೊಳಿಸಲಾಗಿದೆ.
ʻಮನ್ ಕಿ ಬಾತ್ʼನ ಹಲವು ಕಂತುಗಳಲ್ಲಿ ಪ್ರಧಾನಮಂತ್ರಿಯವರು ಪ್ರಾಚೀನ ಕಾಲದಿಂದಲೂ ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ ಆರೋಗ್ಯಕ್ಕಾಗಿ ಯೋಗಾಭ್ಯಾಸ ಮಾಡುವ ಸಂಪ್ರದಾಯವನ್ನು ವಿವರಿಸಿದರು ಮತ್ತು 2015ರಲ್ಲಿ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಜೂನ್ 21ನ್ನು ʻಅಂತಾರಾಷ್ಟ್ರೀಯ ಯೋಗ ದಿನʼವನ್ನಾಗಿ ಘೋಷಿಸಿದರು. ಶಿಕ್ಷಣ ಸಚಿವಾಲಯವು ವಿವಿಧ ವಯೋಮಾನದ ಶಾಲೆಗಳಿಗೆ ʻರಾಷ್ಟ್ರೀಯ ಯೋಗ ಒಲಿಂಪಿಯಾಡ್ʼ ಅನ್ನು ಪ್ರಸ್ತಾಪಿಸಿದೆ. 2016 ರಿಂದ ಈ 3 ದಿನಗಳ ರಾಷ್ಟ್ರೀಯ ಕಾರ್ಯಕ್ರಮವನ್ನು ʻಎನ್‌ಸಿಇಆರ್‌ಟಿʼ ಆಯೋಜಿಸುತ್ತಿದೆ. ಮೂರು ವರ್ಷಗಳಿಂದ, ʻಕೋವಿಡ್-19ʼ ಕಾರಣದಿಂದಾಗಿ ಈ ಕಾರ್ಯಕ್ರಮ ನಡೆಸಲು ಸಾಧ್ಯವಾಗಲಿಲ್ಲ. ಅದರ ಬದಲಾಗಿ ಆನ್‌ಲೈನ್ ರಸಪ್ರಶ್ನೆಯನ್ನು ಆಯೋಜಿಸಲಾಗಿತ್ತು. 10-18 ವರ್ಷ ವಯಸ್ಸಿನ (6-12ನೇ ತರಗತಿ) ನೂರಾರು ವಿದ್ಯಾರ್ಥಿಗಳು ಶಾಲೆ ಸ್ಪರ್ಧೆಗಳಿಂದ ಪ್ರಾರಂಭಿಸಿ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟವನ್ನು ತಲುಪಿದರು. ಇಲ್ಲಿಯವರೆಗೆ, ಹದಿನಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಹೀಗೆ ಹೆಚ್ಚಿನ ಸಂಖ್ಯೆಯ ಶಾಲೆಗಳು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಭಾಗವಹಿಸಿದರು. ʻಮನ್ ಕಿ ಬಾತ್ʼ ಜನರ ಮೇಲೆ ಬೀರುವ ಪರಿಣಾಮ ಇದಾಗಿದೆ.
ಪ್ರಧಾನ ಮಂತ್ರಿಗಳು ತಮ್ಮ ಜನರ, ವಿಶೇಷವಾಗಿ ಮಕ್ಕಳ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಸದಾ ಕಾಳಜಿ ವಹಿಸುತ್ತಾರೆ. ಅವರು ʻಮನ್ ಕಿ ಬಾತ್ʼ ಮೂಲಕ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಒತ್ತಡ, ಪರೀಕ್ಷೆಯ ಒತ್ತಡ, ಸಮಾನಮನಸ್ಕ ಮತ್ತು ಪೋಷಕರ ಒತ್ತಡದ ಬಗ್ಗೆ ಹಲವಾರು ಸಮಸ್ಯೆಗಳನ್ನು ಎತ್ತಿದ್ದಾರೆ. ಇದು ಅತ್ಯಂತ ಪರಿಣಾಮಕಾರಿ ಕಾರ್ಯಕ್ರಮಗಳಾದ ʻಪರೀಕ್ಷಾ ಪೇ ಚರ್ಚಾʼ ಮತ್ತು ʻಮನೋದರ್ಪಣ್ʼನ ಸೇರಿದಂತೆ ಹಲವಾರು ಉಪಕ್ರಮಗಳನ್ನು ಸಚಿವಾಲಯ ಕೈಗೊಳ್ಳಲು ಕಾರಣವಾಗಿದೆ. ʻಪರೀಕ್ಷಾ ಪೇ ಚರ್ಚಾʼ ವಾರ್ಷಿಕ ಕಾರ್ಯಕ್ರಮವಾಗಿದ್ದು, ಅಲ್ಲಿ ಪ್ರಧಾನಿಯವರು ಪರೀಕ್ಷಾ ಒತ್ತಡವನ್ನು ನಿವಾರಿಸಲು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾರೆ. ʻಕೋವಿಡ್-19ʼ ಮತ್ತು ಆ ಬಳಿಕ ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕಾಗಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಕುಟುಂಬಗಳಿಗೆ ಮಾನಸಿಕ ಬೆಂಬಲವನ್ನು ಒದಗಿಸಲು ಜುಲೈ 2020ರಿಂದ ʻಮನೋದರ್ಪಣ್ʼ ಅಡಿಯಲ್ಲಿ ಹಲವಾರು ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳ ಯೋಗಕ್ಷೇಮದ ಬಗ್ಗೆ ಅದರಲ್ಲೂ ಹೆಚ್ಚುತ್ತಿರುವ ಮಾನಸಿಕ ಆರೋಗ್ಯದ ಕಳವಳಗಳನ್ನು ಪರಿಹರಿಸಲು ಮತ್ತು ಒಟ್ಟಾರೆಯಾಗಿ ಶಾಲಾ ವ್ಯವಸ್ಥೆಯಲ್ಲಿ ಮಾನಸಿಕ ಆರೋಗ್ಯವನ್ನು ಉತ್ತೇಜಿಸಲು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗಾಗಿ 24×7 ಸಹಾಯವಾಣಿ ಸ್ಥಾಪಿಸಲಾಗಿದೆ. ʻಮನೋದರ್ಪಣ್ʼನ ವೆಬ್ ಪುಟವು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ಸಲಹೆ ಮತ್ತು ಮಾರ್ಗಸೂಚಿಗಳು, ಸಮಾಲೋಚಕರ ಡೈರೆಕ್ಟರಿ (ಶಾಲೆ ಮತ್ತು ಕಾಲೇಜು / ವಿಶ್ವವಿದ್ಯಾಲಯ ಮಟ್ಟದಲ್ಲಿ ಸುಮಾರು 350 ಸಲಹೆಗಾರರು) ಹಾಗೂ ಇತರ ಬೆಂಬಲ ಸಾಮಗ್ರಿಗಳನ್ನು ಒಳಗೊಂಡಿದೆ. ಇದರ ಅಡಿಯಲ್ಲಿ ನಿಯಮಿತವಾಗಿ ಸಾಪ್ತಾಹಿಕ ಆನ್‌ಲೈನ್ ಸಂವಾದಾತ್ಮಕ ಅಧಿವೇಶನಗಳನ್ನು ಆಯೋಜಿಸಲಾಗುತ್ತದೆ. ಜೊತೆಗೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮಾನಸಿಕ ಆರೋಗ್ಯದ ಸ್ಥಿತಿ ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಂಡುಹಿಡಿಯಲು ಮಾನಸಿಕ ಆರೋಗ್ಯ ಸಮೀಕ್ಷೆಯನ್ನು ನಡೆಸಲಾಗಿದೆ.
ʻಎನ್‌ಸಿಇಆರ್‌ಟಿʼ, ʻಸಿಬಿಎಸ್ಇʼ, ʻಯುಜಿಸಿʼ, ʻಇಗ್ನೊʼ ಮತ್ತು ʻಎನ್ಐಒಎಸ್ʼ ಮುಂತಾದ ಹಲವಾರು ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳ ಮೂಲಕ ಭಾರತ ಸರಕಾರವು ಕೋವಿಡ್-19 ಅವಧಿಯಲ್ಲಿ ಹಲವಾರು ರಾಷ್ಟ್ರವ್ಯಾಪಿ ಡಿಜಿಟಲ್ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಿದೆ. ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ʻನಿಷ್ಠ’(NISHTHA), `ಇ-ಪಾಠಶಾಲೆ’, `ಎನ್‌ಆರ್‌ಒಇಆರ್ʼ, ʻನಿಪುಣ್ ಭಾರತ್ ಅಭಿಯಾನ್ʼ, ʻಪಿಎಂ ಇ-ವಿದ್ಯಾʼ, ʻಸ್ವಯಂ ಪ್ರಭಾʼ, ʻದೀಕ್ಷಾʼ ಮುಂತಾದ ಕಾರ್ಯಕ್ರಮಗಳ ಮೂಲಕ ಕೋಟ್ಯಂತರ ಮಕ್ಕಳ ನಿರಂತರ ಶಿಕ್ಷಣವನ್ನು ಬೆಂಬಲಿಸಲು ನೆರವಾಗಿದೆ. ಅವರಿಗೆ ಗುಣಮಟ್ಟದ ಮತ್ತು ಸಾರ್ವತ್ರಿಕ ಶಿಕ್ಷಣವನ್ನು ಒದಗಿಸಲು ಸಹಾಯಕವಾಗಿದೆ. ಹೆಚ್ಚುತ್ತಿರುವ ದೈನಂದಿನ ವೆಬ್‌ಸೈಟ್ ಭೇಟಿಗಳ (ಹಿಟ್ಸ್) ವಿಶ್ಲೇಷಣೆಯು ಕಾರ್ಯಕ್ರಮಗಳ ಜನಪ್ರಿಯತೆ ಮತ್ತು ಅವುಗಳ ವ್ಯಾಪ್ತಿಯನ್ನು ಸೂಚಿಸುತ್ತದೆ. ಈ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬಹಳ ಬೆಂಬಲ ನೀಡಿವೆ. ಅವುಗಳ ಪರಿಣಾಮಕಾರಿತ್ವದ ಬಗ್ಗೆ ʻಎನ್‌ಸಿಇಆರ್‌ಟಿʼ ಅದರ ಹಲವಾರು ಅಧ್ಯಯನಗಳನ್ನು ನಡೆಸಿದೆ. ಮೈಸೂರಿನ ʻಆರ್‌ಐಇʼ ನಡೆಸಿದ ಅಧ್ಯಯನದಲ್ಲಿ ಭವಿಷ್ಯದ ಶಿಕ್ಷಕರಾಗುವ ವಿದ್ಯಾರ್ಥಿ-ಶಿಕ್ಷಕರನ್ನು ಸಹ ಸೇರಿಸಲಾಗಿದೆ. ಏಕೆಂದರೆ, ಡಿಜಿಟಲ್ ಸಂಪನ್ಮೂಲಗಳನ್ನು ಬಳಸಿಕೊಳ್ಳುವಲ್ಲಿ ಅವರ ಅಭಿಪ್ರಾಯಗಳು ಮಹತ್ವದ ಪಾತ್ರವಹಿಸುತ್ತವೆ. ʻಪಿಎಂ-ಮನ್ ಕಿ ಬಾತ್ʼ ಬಗ್ಗೆ 77% ವಿದ್ಯಾರ್ಥಿ-ಶಿಕ್ಷಕರಿಗೆ ತಿಳಿದಿದೆ ಮತ್ತು ಈ ಕಾರ್ಯಕ್ರಮವು ಬೋಧನೆ, ತರಬೇತಿ ಹಾಗೂ ಪಠ್ಯಗಳ ವಿಷಯಗಳಲ್ಲಿ ಉಪಯುಕ್ತವಾಗಿದೆ ಎಂದು ಅಧ್ಯಯನವು ಹೇಳುತ್ತದೆ. ಅಧ್ಯಯನದ ಪ್ರಕಾರ ವಿದ್ಯಾರ್ಥಿ-ಶಿಕ್ಷಕರ ಅರಿವಿನ ಶೇಕಡಾವಾರು ಪ್ರಮಾಣವು ಹೀಗಿದೆ: ʻಇ-ಪಾಠಶಾಲೆ- 81%, ದೀಕ್ಷಾ -78%, ʻಸ್ವಯಂʼ -78%, ʻನಿಷ್ಠಾʼ- 52%, ʻಎನ್ಆರ್‌ಒಇಆರ್ʼ - 38% ಮತ್ತು ʻಸ್ವಯಂ ಪ್ರಭಾʼ- 36%. ʻಹೊಸ ಶಿಕ್ಷಣ ನೀತಿ-2020ʼರ ನಂತರ ʻನಿಪುಣ್ ಭಾರತ್ ಮಿಷನ್ʼ ಪರಿಣಾಮಕಾರಿ ಬೋಧನಾ ವಿಧಾನವೆಂದು ಸಾಬೀತಾಗಿದ್ದು, ಶಿಕ್ಷಣ ಸಚಿವಾಲಯದ ಮಾರ್ಗದರ್ಶನದಲ್ಲಿ ʻಎನ್‌ಸಿಇಆರ್‌ಟಿʼ ವಿವಿಧ ಉಪಕ್ರಮಗಳನ್ನು ಕೈಗೊಂಡಿದೆ.
ಶಿಕ್ಷಣ ಸಚಿವಾಲಯ ಮತ್ತು ʻಎನ್‌ಸಿಇಆರ್‌ಟಿʼ ಕೈಗೊಂಡ ಕೆಲವು ಉಪಕ್ರಮಗಳನ್ನು ಬೋಧಕವರ್ಗದ ಸದಸ್ಯರು ಅಧ್ಯಯನ ಮಾಡಿದ್ದಾರೆ. ʻಎನ್‌ಸಿಇಆರ್‌ಟಿʼಯ ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ಒಂದಾದ ʻಇಂಡಿಯನ್ ಎಜುಕೇಷನಲ್ ರಿವ್ಯೂʼ(ಐಇಆರ್) ವಿಶೇಷ ಸಂಚಿಕೆ ಏಪ್ರಿಲ್ 2023 ರಂದು ಪ್ರಕಟವಾಗಿದ್ದು, ಇದರಲ್ಲಿ ʻಮನ್ ಕಿ ಬಾತ್ʼನ ಪರಿಣಾಮಗಳ ಬಗ್ಗೆ ಒತ್ತಿ ಹೇಳಲಾಗಿದೆ. ʻಮನ್ ಕಿ ಬಾತ್ʼ ಪರಿಣಾಮಗಳ ಕುರಿತ ಹತ್ತು ಸಂಶೋಧನಾ ಪ್ರಬಂಧಗಳನ್ನು ಈ ಸಂಚಿಕೆಯು ಒಳಗೊಂಡಿದೆ. ಇವುಗಳಲ್ಲಿ ಇಂಗ್ಲಿಷ್‌ನ ಮೂರು; ಮರಾಠಿ, ಗುಜರಾತಿ ಮತ್ತು ಕನ್ನಡದ ತಲಾ ಎರಡು ಹಾಗೂ ಒಡಿಯಾದ ಒಂದು ಸಂಶೋಧನಾ ಪ್ರಬಂಧ ಸೇರಿವೆ.
*****
(Release ID: 1921418)
Visitor Counter : 115