ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav g20-india-2023

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನವಾದ ಶಾಂತಿಯುತ ಮತ್ತು ಸಮೃದ್ಧ ಈಶಾನ್ಯ ಭಾರತವನ್ನು ಸಾಕಾರಗೊಳಿಸಿರುವ ಭಾರತ ಸರ್ಕಾರ, ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಎಎಫ್ಎಸ್.ಪಿ.ಎ) ಅಡಿಯಲ್ಲಿ ನಾಗಾಲ್ಯಾಂಡ್, ಅಸ್ಸಾಂ ಮತ್ತು ಮಣಿಪುರದ ಬಾಧಿತ ಪ್ರದೇಶಗಳನ್ನು ತಗ್ಗಿಸಲು ಮತ್ತೊಮ್ಮೆ ನಿರ್ಧರಿಸಿದೆ


ಈಶಾನ್ಯ ಭಾರತದ ಭದ್ರತಾ ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆಗಳಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ : ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮೊದಲ ಬಾರಿಗೆ ಈಶಾನ್ಯದ ಭದ್ರತೆ, ಶಾಂತಿ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ, ಅದರ ಪರಿಣಾಮವಾಗಿ, ಈ ಪ್ರದೇಶವು ಇಂದು ಶಾಂತಿ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ವೇಗವಾಗಿ ಸಾಗುತ್ತಿದೆ

ಈಶಾನ್ಯದ ಜನರ ಜೀವನದಲ್ಲಿ ಈ ಸಕಾರಾತ್ಮಕ ಬದಲಾವಣೆಯನ್ನು ತಂದಿದ್ದಕ್ಕಾಗಿ ಮತ್ತು ಈ ಪ್ರದೇಶವನ್ನು ಭಾರತದ ಉಳಿದ ಭಾಗಗಳ ಹೃದಯಗಳೊಂದಿಗೆ ಸಂಪರ್ಕಿಸಿದ್ದಕ್ಕಾಗಿ ನಾನು ಪ್ರಧಾನಮಂತ್ರಿ ಮೋದಿ  ಅವರಿಗೆ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ, ಈ ಸ್ಮರಣೀಯ ಸಂದರ್ಭದಲ್ಲಿ ಈಶಾನ್ಯದ ಜನರಿಗೆ ಶುಭಾಶಯಗಳನ್ನು ಸಲ್ಲಿಸುತ್ತೇನೆ

Posted On: 25 MAR 2023 2:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಪರಿಣಾಮಕಾರಿ ಕ್ರಮಗಳಿಂದಾಗಿ, ಈಶಾನ್ಯ ರಾಜ್ಯಗಳಲ್ಲಿನ ಭದ್ರತಾ ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದ್ದು, ಅಭಿವೃದ್ಧಿಯ ವೇಗ ಹೆಚ್ಚಾಗಿದೆ. 2014ಕ್ಕೆ ಹೋಲಿಸಿದರೆ, 2022ರಲ್ಲಿ ವಿಧ್ವಂಸಕ ಕೃತ್ಯಗಳಲ್ಲಿ ಶೇ. 76ರಷ್ಟು ಕಡಿಮೆಯಾಗಿದೆ. ಅಂತೆಯೇ, ಭದ್ರತಾ ಸಿಬ್ಬಂದಿ ಮತ್ತು ನಾಗರಿಕರ ಸಾವುಗಳ ಸಂಖ್ಯೆ ಈ ಅವಧಿಯಲ್ಲಿ ಕ್ರಮವಾಗಿ ಶೇ.90 ಮತ್ತು ಶೇ.97 ರಷ್ಟು ಇಳಿಕೆಯಾಗಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರದ ನಿರಂತರ ಪ್ರಯತ್ನಗಳಿಂದಾಗಿ, ಈಶಾನ್ಯ ಭಾರತದ ಭದ್ರತಾ ಪರಿಸ್ಥಿತಿಯಲ್ಲಿ ಅಭೂತಪೂರ್ವ ಸುಧಾರಣೆ ಕಂಡುಬಂದಿದ್ದು, ದಶಕಗಳ ನಂತರ, ಭಾರತ ಸರ್ಕಾರವು ಐತಿಹಾಸಿಕ ನಿರ್ಧಾರ ಕೈಗೊಂಡು ಏಪ್ರಿಲ್ 2022 ರಿಂದ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (ಎಎಫ್ಎಸ್.ಪಿ.ಎ) ಅಡಿಯಲ್ಲಿ ನಾಗಾಲ್ಯಾಂಡ್, ಅಸ್ಸಾಂ ಮತ್ತು ಮಣಿಪುರದಲ್ಲಿ ಬಾಧಿತವಾದ ಪ್ರದೇಶಗಳನ್ನು ಕಡಿಮೆ ಮಾಡಿದೆ. ಇಂದು ಮತ್ತೊಂದು ಪ್ರಮುಖ ನಿರ್ಧಾರವನ್ನು ಕೈಗೊಂಡಿದ್ದು, 2023ರ ಏಪ್ರಿಲ್ 01ರಿಂದ, ಈ ಮೂರು ರಾಜ್ಯಗಳಲ್ಲಿ ಎಎಫ್ಎಸ್.ಪಿ.ಎ ಅಡಿಯಲ್ಲಿ ಬಾಧಿತ ಪ್ರದೇಶಗಳನ್ನು ಮತ್ತಷ್ಟು ಕಡಿಮೆ ಮಾಡಲಾಗುತ್ತಿದೆ. ಈಶಾನ್ಯ ಭಾರತದ ಭದ್ರತಾ ಪರಿಸ್ಥಿತಿಯಲ್ಲಿ ಆಗಿರುವ ಗಮನಾರ್ಹ ಸುಧಾರಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮೊದಲ ಬಾರಿಗೆ ಈಶಾನ್ಯದ ಭದ್ರತೆ, ಶಾಂತಿ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಅದರ ಪರಿಣಾಮವಾಗಿ, ಈ ಪ್ರದೇಶವು ಇಂದು ಶಾಂತಿ ಮತ್ತು ಅಭಿವೃದ್ಧಿಯ ಪಥದಲ್ಲಿ ವೇಗವಾಗಿ ಸಾಗುತ್ತಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನವಾದ ಶಾಂತಿಯುತ ಮತ್ತು ಸಮೃದ್ಧ ಈಶಾನ್ಯವನ್ನು ಸಾಕಾರಗೊಳಿಸಲು, ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ನಾಯಕತ್ವದಲ್ಲಿ, ಕಳೆದ 4 ವರ್ಷಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ಹಲವಾರು ಶಾಂತಿ ಒಪ್ಪಂದಗಳನ್ನು ಜಾರಿಗೆ ತರಲಾಗಿದೆ. ಇದರ ಪರಿಣಾಮವಾಗಿ, ದೇಶದ ಸಂವಿಧಾನ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನೀತಿಗಳಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಿರುವ ಹೆಚ್ಚಿನ ವಿಧ್ವಂಸಕ ಗುಂಪುಗಳು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಈಶಾನ್ಯದ ಶಾಂತಿ ಮತ್ತು ಅಭಿವೃದ್ಧಿಯಲ್ಲಿ ಪಾಲುದಾರರಾಗಿದ್ದಾರೆ. 2014ರಿಂದ ಇಲ್ಲಿಯವರೆಗೆ ಸುಮಾರು 7000 ವಿಧ್ವಂಸಕರು ಶರಣಾಗಿದ್ದಾರೆ.

ಕಳೆದ 4 ವರ್ಷಗಳಲ್ಲಿ, ಪ್ರಧಾನಮಂತ್ರಿ ಮೋದಿಯವರ ಕನಸಾದ ಶಾಂತಿಯುತ, ಸಮೃದ್ಧ ಮತ್ತು ಅಭಿವೃದ್ಧಿ ಹೊಂದಿದ ಈಶಾನ್ಯವನ್ನು ಸಾಕಾರಗೊಳಿಸಲು, ಗೃಹ ಸಚಿವಾಲಯವು ಹಲವಾರು ಐತಿಹಾಸಿಕ ಒಪ್ಪಂದಗಳಿಗೆ ಸಹಿ ಹಾಕಿದೆ, ಇದು ದಶಕಗಳಷ್ಟು ಹಳೆಯ ಸಮಸ್ಯೆಗಳನ್ನು ಪರಿಹರಿಸಿದೆ.

•    ಆಗಸ್ಟ್ 2019ರಲ್ಲಿ, ತ್ರಿಪುರಾದಲ್ಲಿ ಎನ್ಎಲ್ಎಫ್.ಟಿ (ಎಸ್.ಡಿ)ಯೊಂದಿಗೆ ವಿಧ್ವಂಸಕರನ್ನು ಮುಖ್ಯವಾಹಿನಿಗೆ ತರುವ ಒಪ್ಪಂದಕ್ಕೆ ಸಹಿ ಹಾಕಲಾಯಿತು.
•    2020ರ ಜನವರಿಯಲ್ಲಿ ಬೋಡೋ ಒಪ್ಪಂದವು ಅಸ್ಸಾಂನ 5 ದಶಕಗಳಷ್ಟು ಹಳೆಯದಾದ ಬೋಡೋ ಸಮಸ್ಯೆಯನ್ನು ಪರಿಹರಿಸಿದೆ.
•    ದಶಕಗಳಷ್ಟು ಹಳೆಯದಾದ ಬ್ರೂ-ರಿಯಾಂಗ್ ನಿರಾಶ್ರಿತರ ಬಿಕ್ಕಟ್ಟನ್ನು ಪರಿಹರಿಸಲು 2020 ರ ಜನವರಿಯಲ್ಲಿ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಯಿತು, ಇದರ ಅಡಿಯಲ್ಲಿ ತ್ರಿಪುರಾದಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡ 37,000 ಜನರಿಗೆ ಪುನರ್ವಸತಿ ಕಲ್ಪಿಸಲಾಗುತ್ತಿದೆ.
•    ಸೆಪ್ಟೆಂಬರ್ 2021 ರ ಕರ್ಬಿ-ಆಂಗ್ಲಾಂಗ್ ಒಪ್ಪಂದವು ಅಸ್ಸಾಂನ ಕರ್ಬಿ ಪ್ರದೇಶದಲ್ಲಿ ದೀರ್ಘಕಾಲದ ವಿವಾದವನ್ನು ಪರಿಹರಿಸಿದೆ.
•    2022ರ ಸೆಪ್ಟೆಂಬರ್ ನಲ್ಲಿ ಅಸ್ಸಾಂನ ಬುಡಕಟ್ಟು ಗುಂಪಿನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಡೀ ಈಶಾನ್ಯ ಪ್ರದೇಶವನ್ನು ವಿಧ್ವಂಸಕ ಮುಕ್ತವಾಗಿಸಲು ದೃಢನಿಶ್ಚಯವನ್ನು ಹೊಂದಿದ್ದಾರೆ, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳು ಮತ್ತು ಇತರ ಬಾಧ್ಯಸ್ಥರೊಂದಿಗೆ ನಿರಂತರ ಮಾತುಕತೆ ನಡೆಸುತ್ತಿದೆ. ಮೋದಿ ಸರ್ಕಾರ, ಭದ್ರತಾ ಪರಿಸ್ಥಿತಿಯಲ್ಲಿನ ಸುಧಾರಣೆ ಹಿನ್ನೆಲೆಯಲ್ಲಿ, ಎಎಫ್ಎಸ್.ಪಿ.ಎ ಅಡಿಯಲ್ಲಿ ಬಾಧಿತ ಪ್ರದೇಶ ಅಧಿಸೂಚನೆಯನ್ನು 2015ರಲ್ಲಿ ತ್ರಿಪುರಾದಿಂದ ಮತ್ತು 2018 ರಲ್ಲಿ ಮೇಘಾಲಯದಿಂದ ಸಂಪೂರ್ಣವಾಗಿ ಹಿಂತೆಗೆದುಕೊಂಡಿದೆ.

ಪ್ರಕ್ಷುಬ್ಧ ಪ್ರದೇಶಗಳ ಅಧಿಸೂಚನೆಯು ಇಡೀ ಅಸ್ಸಾಂನಲ್ಲಿ 1990 ರಿಂದ ಜಾರಿಯಲ್ಲಿತ್ತು. ಮೋದಿ ಸರ್ಕಾರದ ಅವಿರತ ಪ್ರಯತ್ನಗಳಿಂದಾಗಿ ಭದ್ರತಾ ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆಯ ಪರಿಣಾಮವಾಗಿ, ಎಎಫ್ಎಸ್.ಪಿ.ಎ ಅಡಿಯಲ್ಲಿ ಬಾಧಿತ ಪ್ರದೇಶಗಳನ್ನು 9 ಜಿಲ್ಲೆಗಳು ಮತ್ತು ಮತ್ತೊಂದು ಜಿಲ್ಲೆಯ ಒಂದು ಉಪವಿಭಾಗವನ್ನು ಹೊರತುಪಡಿಸಿ ಇಡೀ ಅಸ್ಸಾಂ ರಾಜ್ಯದಿಂದ 01.04.22 ರಿಂದ ತೆಗೆದುಹಾಕಲಾಗಿದೆ ಮತ್ತು 01.04.2023 ರಿಂದ ಅದನ್ನು ಕೇವಲ 8 ಜಿಲ್ಲೆಗಳಿಗೆ ಇಳಿಸಲಾಗಿದೆ.

ಮಣಿಪುರದಲ್ಲಿ ಎಎಫ್ಎಸ್.ಪಿ.ಎ ಅಡಿಯಲ್ಲಿ ಬಾಧಿತ ಪ್ರದೇಶ ಘೋಷಣೆ (ಇಂಫಾಲ್ ಪುರಸಭೆ ಪ್ರದೇಶವನ್ನು ಹೊರತುಪಡಿಸಿ) 2004 ರಿಂದ ಜಾರಿಯಲ್ಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದ್ದು, 01.04.2022 ರಿಂದ 6 ಜಿಲ್ಲೆಗಳ 15 ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶಗಳನ್ನು ಪ್ರಕ್ಷುಬ್ಧ ಪ್ರದೇಶ ಅಧಿಸೂಚನೆಯಿಂದ ಕೈಬಿಡಲಾಗಿದೆ ಮತ್ತು ಈಗ 01.04.2023 ರಿಂದ ಎಎಫ್ಎಸ್.ಪಿ.ಎ ಅಡಿಯಲ್ಲಿ ಬಾಧಿತ ಪ್ರದೇಶ ಅಧಿಸೂಚನೆಯನ್ನು ಇತರ 4 ಪೊಲೀಸ್ ಠಾಣೆಗಳಿಂದ ಹಿಂಪಡೆಯಲಾಗುತ್ತಿದೆ. ಹೀಗಾಗಿ, ಮಣಿಪುರದ 7 ಜಿಲ್ಲೆಗಳ 19 ಪೊಲೀಸ್ ಠಾಣೆಗಳನ್ನು ಎಎಫ್ಎಸ್.ಪಿ.ಎ ಅಡಿಯಲ್ಲಿ ಬಾಧಿತ ಪ್ರದೇಶ ಅಧಿಸೂಚನೆಯಿಂದ ತೆಗೆದುಹಾಕಲಾಗಿದೆ.

ಬಾಧಿತ ಪ್ರದೇಶಗಳ ಅಧಿಸೂಚನೆಯು 1995 ರಿಂದ ಇಡೀ ನಾಗಾಲ್ಯಾಂಡ್ ಗೆ ಅನ್ವಯವಾಗುತ್ತದೆ. ಎಎಫ್ಎಸ್.ಪಿಎಯನ್ನು ಹಂತಹಂತವಾಗಿ ತೆಗೆದುಹಾಕಲು ಈ ಸಂದರ್ಭದಲ್ಲಿ ರಚಿಸಲಾದ ಸಮಿತಿಯ ಶಿಫಾರಸಿನ ನಂತರ, 01.04.2022 ರಿಂದ ಜಾರಿಗೆ ಬರುವಂತೆ 7 ಜಿಲ್ಲೆಗಳ 15 ಪೊಲೀಸ್ ಠಾಣೆಗಳಿಂದ ಬಾಧಿತ ಪ್ರದೇಶ ಅಧಿಸೂಚನೆಯನ್ನು ಹಿಂಪಡೆಯಲಾಗಿದೆ. 01.04.2023 ರಿಂದ ಜಾರಿಗೆ ಬರುವಂತೆ ಇತರ 3 ಪೊಲೀಸ್ ಠಾಣೆಗಳಿಂದ ಇದನ್ನು ಹಿಂತೆಗೆದುಕೊಳ್ಳಲಾಗುತ್ತಿದೆ, ಆದ್ದರಿಂದ, ನಾಗಾಲ್ಯಾಂಡ್ ನ 8 ಜಿಲ್ಲೆಗಳ ಒಟ್ಟು 18 ಪೊಲೀಸ್ ಠಾಣೆಗಳನ್ನು ಎಎಫ್ಎಸ್.ಪಿಎ ಅಡಿಯಲ್ಲಿ ಬಾಧಿತ ಪ್ರದೇಶ ಅಧಿಸೂಚನೆಯಿಂದ ತೆಗೆದುಹಾಕಲಾಗುತ್ತಿದೆ.

ಈಶಾನ್ಯದ ಜನರ ಜೀವನದಲ್ಲಿ ಈ ಸಕಾರಾತ್ಮಕ ಬದಲಾವಣೆಯನ್ನು ತಂದಿದ್ದಕ್ಕಾಗಿ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದು, ಈ ಪ್ರದೇಶವನ್ನು ಭಾರತದ ಉಳಿದ ಭಾಗಗಳ ಹೃದಯಗಳೊಂದಿಗೆ ಸಂಪರ್ಕಿಸಿದ್ದಕ್ಕಾಗಿ ನಾನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ, ಈ ಸ್ಮರಣೀಯ ಸಂದರ್ಭದಲ್ಲಿ ಈಶಾನ್ಯದ ಜನತೆಗೆ ಶುಭಾಶಯಗಳನ್ನೂ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

***(Release ID: 1910781) Visitor Counter : 117