ಕೃಷಿ ಸಚಿವಾಲಯ

ಗಯಾನಾ ಸಹಕಾರಿ ಗಣರಾಜ್ಯದ ಅಧ್ಯಕ್ಷ ಡಾ. ಮುಹಮ್ಮದ್ ಇರ್ಫಾನ್ ಅಲಿ ಅವರು ದೆಹಲಿಯಲ್ಲಿ ಮೊದಲ ಜಾಗತಿಕ ಸಿರಿಧಾನ್ಯಗಳ (ಶ್ರೀ ಅನ್ನ) ಸಮ್ಮೇಳನವನ್ನು ಆಯೋಜಿಸಿದ್ದಕ್ಕಾಗಿ ಭಾರತದ ಪ್ರಧಾನ ಮಂತ್ರಿಯವರನ್ನು ಶ್ಲಾಘಿಸಿದರು


ಗಯಾನಾದಿಂದ ವೀಡಿಯೊ ಸಂದೇಶದಲ್ಲಿ, ಡಾ.ಇರ್ಫಾನ್ ಅಲಿ ಅವರು, “ಈ ಸಮ್ಮೇಳನವು ಆಹಾರ ಅಭದ್ರತೆಯ ವಿಶ್ವದ ಅಗ್ರಗಣ್ಯ ಸವಾಲನ್ನು ಪರಿಹರಿಸುವಲ್ಲಿ ಬಹಳ ಮಹತ್ವದ ಪಾತ್ರ ವಹಿಸುತ್ತದೆ,” ಎಂದು ಹೇಳಿದರು

2023ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಿದ ವಿಶ್ವಸಂಸ್ಥೆಯ ಗೌರವಾರ್ಥ ಡಾ.ಇರ್ಫಾನ್ ಅಲಿ ತಮ್ಮ ದೇಶದಲ್ಲಿ 200 ಎಕರೆ ಭೂಮಿಯನ್ನು ಸಿರಿಧಾನ್ಯಗಳ ವಿಶೇಷ ಉತ್ಪಾದನೆಗಾಗಿ ನೀಡುವುದಾಗಿ ಘೋಷಿಸಿದ್ದಾರೆ

ಮತ್ತೊಂದು ವೀಡಿಯೊ ಭಾಷಣದಲ್ಲಿ ಇಥಿಯೋಪಿಯಾದ ಅಧ್ಯಕ್ಷರಾದ ಶ್ರೀಮತಿ ಸಾಹ್ಲೆ-ವರ್ಕ್ ಜೆವ್ಡೆ ಅವರು, “ಜಾಗತಿಕ ಸಿರಿಧಾನ್ಯಗಳ ಸಮ್ಮೇಳನವು ಸಿರಿಧಾನ್ಯಗಳ ಉತ್ತೇಜನ ಹಾಗೂ ಉತ್ಪಾದನೆಗಾಗಿ ವಿಶ್ವದ ಸರಕಾರಗಳು ಮತ್ತು ನೀತಿ ನಿರೂಪಕರನ್ನು ಹುರಿದುಂಬಿಸುತ್ತದೆ” ಎಂದು ಹೇಳಿದರು 
 
ಸಿರಿಧಾನ್ಯಗಳು ಇಥಿಯೋಪಿಯಾದಂತಹ ಉಪ-ಸಹಾರ ದೇಶದ ಆಹಾರ ಭದ್ರತಾ ಸವಾಲುಗಳನ್ನು ಮಾತ್ರವಲ್ಲದೆ ಇಡೀ ಆಫ್ರಿಕಾ ಖಂಡದ ಆಹಾರ ಭದ್ರತಾ ಸವಾಲುಗಳನ್ನು ಪರಿಹರಿಸುತ್ತವೆ ಎಂದು ಸಾಹ್ಲೆ-ವರ್ಕ್ ಜೆವ್ಡೆ ಹೇಳಿದರು

ಮೊದಲ ಜಾಗತಿಕ ಸಿರಿಧಾನ್ಯಗಳ (ಶ್ರೀ ಅನ್ನ) ಸಮ್ಮೇಳನದ ಆಲೋಚನೆಗಳು 2030ರ ʻಸುಸ್ಥಿರ ಅಭಿವೃದ್ಧಿ ಗುರಿʼಗಳನ್ನು ಸಾಧಿಸಲು ಸಹಾಯ ಮಾಡುತ್ತವೆ: ಶ್ರೀಮತಿ ಸಾಹ್ಲೆ-ವರ್ಕ್ ಜೆವ್ಡೆ

Posted On: 18 MAR 2023 12:21PM by PIB Bengaluru

ಗಯಾನಾ ಸಹಕಾರಿ ಗಣರಾಜ್ಯದ ಅಧ್ಯಕ್ಷ ಡಾ. ಮುಹಮ್ಮದ್ ಇರ್ಫಾನ್ ಅಲಿ ಅವರು ನವದೆಹಲಿಯ ʻಪಿಯುಎಸ್ಎʼನಲ್ಲಿ ಮೊದಲ ʻಜಾಗತಿಕ ಸಿರಿಧಾನ್ಯಗಳ (ಶ್ರೀ ಅನ್ನ) ಸಮ್ಮೇಳನʼ ಆಯೋಜಿಸಿದ್ದಕ್ಕಾಗಿ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದರು ಮತ್ತು ಈ ಸಮ್ಮೇಳನವು ವಿಶ್ವದ ಆಹಾರ ಅಭದ್ರತೆಯ ಪ್ರಮುಖ ಸವಾಲನ್ನು ಎದುರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಗಯಾನಾದಿಂದ ವೀಡಿಯೊ ಸಂದೇಶದಲ್ಲಿ ಮಾತನಾಡಿದ ಡಾ.ಇರ್ಫಾನ್ ಅಲಿ ಅವರು 2023ನೇ ವರ್ಷವನ್ನು ʻಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷʼ(ಐವೈಒಎಂ) ಎಂದು ವಿಶ್ವಸಂಸ್ಥೆಯು ಘೋಷಿಸಿರುವುದರ ಗೌರವಾರ್ಥ ಸಿರಿಧಾನ್ಯಗಳ ವಿಶೇಷ ಉತ್ಪಾದನೆಗಾಗಿ ತಮ್ಮ ದೇಶದಲ್ಲಿ 200 ಎಕರೆ ಭೂಮಿಯನ್ನು ನೀಡುವುದಾಗಿ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತವು ಈ ಅದ್ಭುತ ಆಹಾರದ ಕೃಷಿ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ತಂತ್ರಜ್ಞಾನ ಮತ್ತು ತಾಂತ್ರಿಕ ಬೆಂಬಲವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.

ಡಾ.ಇರ್ಫಾನ್ ಅಲಿ ಅವರು ಸಿರಿಧಾನ್ಯಗಳು ಕೈಗೆಟುಕುವ ಮತ್ತು ಪೌಷ್ಟಿಕ ಆಯ್ಕೆ ಮಾತ್ರವಲ್ಲ, ಈ ಗುಂಪಿನ ಬೆಳೆಗಳು ಹವಾಮಾನ ಬದಲಾವಣೆಯ ಏರಿಳಿತಗಳಿಗೆ ಸ್ಥಿತಿಸ್ಥಾಪಕತ್ವವನ್ನು ಹೊಂದಿವೆ. ಕೆರಿಬಿಯನ್ ಸಮುದಾಯದಲ್ಲಿ ಸಿರಿಧಾನ್ಯಗಳನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ 17 ಕೆರಿಬಿಯನ್ ದೇಶಗಳಲ್ಲಿ ಸಿರಿಧಾನ್ಯಗಳ ಉತ್ಪಾದನೆ ಮತ್ತು ಉತ್ತೇಜನಕ್ಕೆ ಎಲ್ಲ ನೆರವು ನೀಡುವುದಾಗಿ ಅವರು ಭರವಸೆ ನೀಡಿದರು.

ಡಾ.ಇರ್ಫಾನ್ ಅಲಿ ಅವರು ಮುಂದುವರಿಸಿ, ಸಿರಿಧಾನ್ಯಗಳ ಉತ್ಪಾದನೆ ಮತ್ತು ರಫ್ತಿನಲ್ಲಿ ಭಾರತವು ಜಾಗತಿಕ ನಾಯಕನಾಗಿದ್ದು, ಜಾಗತಿಕ ಉತ್ಪಾದನೆ ಮತ್ತು ಸಿರಿಧಾನ್ಯಗಳ ಜನಪ್ರಿಯಗೊಳಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದರು.

ಮತ್ತೊಂದು ವೀಡಿಯೊ ಭಾಷಣದಲ್ಲಿ ಇಥಿಯೋಪಿಯಾದ ಅಧ್ಯಕ್ಷರಾದ ಶ್ರೀಮತಿ ಸಹ್ಲೆ-ವರ್ಕ್ ಜೆವ್ಡೆ ಅವರು ಸಿರಿಧಾನ್ಯಗಳ ಕುರಿತ ಈ ಜಾಗತಿಕ ಸಮ್ಮೇಳನಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು.  ಇದು ಸಿರಿಧಾನ್ಯಗಳ ಉತ್ತೇಜನ ಮತ್ತು ಉತ್ಪಾದನೆಗಾಗಿ ವಿಶ್ವದ ಸರಕಾರಗಳು ಮತ್ತು ನೀತಿ ನಿರೂಪಕರನ್ನು ಹುರಿದುಂಬಿಸುತ್ತದೆ ಎಂದು ಹೇಳಿದರು.

ಇಥಿಯೋಪಿಯಾದಂತಹ ಉಪ-ಸಹಾರಾ ದೇಶದ ಆಹಾರ ಭದ್ರತಾ ಸವಾಲುಗಳನ್ನು ಮಾತ್ರವಲ್ಲದೆ ಇಡೀ ಆಫ್ರಿಕಾ ಖಂಡ ಮತ್ತು ವಿಶ್ವದ ಆಹಾರ ಭದ್ರತಾ ಸವಾಲುಗಳನ್ನು ಸಹ ಸಿರಿಧಾನ್ಯಗಳು ಪರಿಹರಿಸುತ್ತವೆ ಎಂದು ಶ್ರೀಮತಿ ಸಾಹ್ಲೆ-ವರ್ಕ್ ಜೆವ್ಡೆ ಹೇಳಿದರು. ಈ ಸಮ್ಮೇಳನದ ವಿಚಾರಗಳು 2030ರ ʻಸುಸ್ಥಿರ ಅಭಿವೃದ್ಧಿ ಗುರಿʼಗಳನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

****



(Release ID: 1908404) Visitor Counter : 75