ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಮನ್ ಕಿ ಬಾತ್-ಮನದ ಮಾತು- ರೇಡಿಯೊ ಕ್ರಾಂತಿಯು ಏಪ್ರಿಲ್ 2023ಕ್ಕೆ ಶತಕದ ಕಂತನ್ನು ದಾಟುತ್ತದೆ


ಪ್ರಧಾನ ಮಂತ್ರಿಗಳ ಮನ್ ಕಿ ಬಾತ್ ಕಾರ್ಯಕ್ರಮದ 100 ಆವೃತ್ತಿಗಳನ್ನು ಮಾರ್ಚ್ 15 ರಿಂದ ಪ್ರತಿದಿನ ಪ್ರಸಾರ ಮಾಡಲಿರುವ ಆಕಾಶವಾಣಿ

Posted On: 14 MAR 2023 7:36PM by PIB Bengaluru

ಆಕಾಶವಾಣಿ ರೇಡಿಯೊದಲ್ಲಿ ಪ್ರಸಾರವಾಗುವ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು ಪ್ರಧಾನ ಮಂತ್ರಿಯವರ ಮನ್ ಕಿ ಬಾತ್-ಮನದ ಮಾತು ಸರಣಿ ಕಾರ್ಯಕ್ರಮ. ಪ್ರಧಾನ ಮಂತ್ರಿಗಳ ಮನ್ ಕಿ ಬಾತ್ ತನ್ನ 100 ನೇ ಆವೃತ್ತಿಯನ್ನು ಏಪ್ರಿಲ್ 30 ರಂದು ಪೂರ್ಣಗೊಳಿಸುತ್ತದೆ. ಈ ಪ್ರತಿಷ್ಠಿತ ಜನಪ್ರಿಯ ಕಾರ್ಯಕ್ರಮ ಪ್ರಸಾರ ಆರಂಭವಾದದ್ದು 2014ನೇ ಇಸವಿಯ ಅಕ್ಟೋಬರ್ 3 ರ ವಿಜಯದಶಮಿಯ ಶುಭ ಸಂದರ್ಭದಲ್ಲಿ. ಇಲ್ಲಿಯವರೆಗೆ 98 ಆವೃತ್ತಿಗಳನ್ನು ಪೂರ್ಣಗೊಳಿಸಿದೆ.

ಶತಕದ ಸಂಚಿಕೆಯ ಪೂರ್ವದಲ್ಲಿ, ಈ ಕಾರ್ಯಕ್ರಮದಿಂದ ಭಾರತದ ಪರಿವರ್ತನೆಯ ಮೇಲೆ ಉಂಟುಮಾಡಿರುವ ಪರಿಣಾಮದ ಬಗ್ಗೆ ಗಮನ ಹರಿಸಲು ಆಕಾಶವಾಣಿಯು ನಾಳೆ ಅಂದರೆ ಮಾರ್ಚ್ 15ರಿಂದ ವಿಶೇಷ ಸರಣಿಯನ್ನು ಪ್ರಾರಂಭಿಸುತ್ತಿದೆ.

ಈ ವಿಶೇಷ ಸರಣಿಯಲ್ಲಿ ಇಲ್ಲಿಯವರೆಗಿನ ಮನ್ ಕಿ ಬಾತ್ ಸಂಚಿಕೆಗಳಲ್ಲಿ ಪ್ರಧಾನ ಮಂತ್ರಿಯವರು ವಿಶೇಷವಾಗಿ ಉಲ್ಲೇಖ ಮಾಡಿದ 100 ಗುರುತಿಸಲ್ಪಟ್ಟ ವಿಷಯಗಳನ್ನು ಪ್ರಸಾರ ಮಾಡಲಾಗುತ್ತದೆ. ಮನ್ ಕಿ ಬಾತ್‌ನ ಪ್ರತಿ ಸಂಚಿಕೆಯಿಂದ ಪ್ರಧಾನ ಮಂತ್ರಿಯವರ ಧ್ವನಿಯ ಸಣ್ಣ ತುಣುಕುಗಳನ್ನು ಆಕಾಶವಾಣಿಯ ಸಂಪರ್ಕಜಾಲದ ಎಲ್ಲಾ ಸುದ್ದಿಪ್ರಸಾರಗಳಲ್ಲಿ ಮತ್ತು ಇತರ ಕಾರ್ಯಕ್ರಮಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಇದು ನಾಳೆಯಿಂದ ಆರಂಭವಾಗಿ 100 ನೇ ಸಂಚಿಕೆ ಪ್ರಸಾರದ ಒಂದು ದಿನ ಮುಂಚಿತವಾಗಿ ಏಪ್ರಿಲ್ 29 ರಂದು ಮುಕ್ತಾಯಗೊಳ್ಳುತ್ತದೆ.

ದೇಶದ 42 ವಿವಿಧ್ ಭಾರತಿ ಕೇಂದ್ರಗಳು, 25 ಎಫ್‌ಎಂ ರೇನ್‌ಬೋ ಚಾನೆಲ್‌ಗಳು, 4 ಎಫ್‌ಎಂ ಗೋಲ್ಡ್ ಚಾನೆಲ್‌ಗಳು ಮತ್ತು 159 ಪ್ರೈಮರಿ ಚಾನೆಲ್‌ಗಳು ಸೇರಿದಂತೆ ವಿವಿಧ ಆಕಾಶವಾಣಿ ಕೇಂದ್ರಗಳು ವಿಶೇಷ ಸರಣಿಯನ್ನು ಪ್ರಸಾರ ಮಾಡುತ್ತವೆ. ಮನದ ಮಾತು ಭಾಷಣದ ಸಣ್ಣ ತುಣುಕುಗಳು ಎಲ್ಲಾ ಪ್ರದೇಶಗಳಾದ್ಯಂತ ಎಲ್ಲಾ ಪ್ರಮುಖ ಸುದ್ದಿ ಪ್ರಸಾರದ ವೇಳೆ ಬಿತ್ತರವಾಗುತ್ತದೆ. ನಾಗರಿಕರು 'ನ್ಯೂಸ್ ಆನ್ ಎಐಆರ್' ಆ್ಯಪ್ ಮತ್ತು ಆಲ್ ಇಂಡಿಯಾ ರೇಡಿಯೊದ ಯೂಟ್ಯೂಬ್ ಚಾನೆಲ್‌ಗಳಲ್ಲಿ ಕಾರ್ಯಕ್ರಮವನ್ನು ಆಲಿಸಬಹುದು.

ಮನ್ ಕಿ ಬಾತ್ ಬಗ್ಗೆ: ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಮನ್ ಕಿ ಬಾತ್ ಅಂದರೆ ಮನದ ಮಾತು ಎಂಬ ರೇಡಿಯೊ ಕಾರ್ಯಕ್ರಮದ ಮೂಲಕ ದೇಶದ ನಾಗರಿಕರೊಂದಿಗೆ ವಿಶಿಷ್ಟವಾಗಿ ಮತ್ತು ನೇರವಾಗಿ ಸಂವಹನ ನಡೆಸುತ್ತಿದ್ದು, ಇಲ್ಲಿಯವರೆಗೆ 98 ಸಂಚಿಕೆಗಳನ್ನು ಪೂರ್ಣಗೊಳಿಸಿದೆ. ಇದು ಸ್ವಚ್ಛ ಭಾರತ, ಬೇಟಿ ಬಚಾವೋ ಬೇಟಿ ಪಡಾವೋ, ನೀರಿನ ಸಂರಕ್ಷಣೆ, ಸ್ಥಳೀಯತೆಗೆ ಆದ್ಯತೆ ಮುಂತಾದ ಸಾಮಾಜಿಕ ಬದಲಾವಣೆಗಳ ಮೂಲ, ಮಾಧ್ಯಮ ಮತ್ತು ಉತ್ತಮ ಬದಲಾವಣೆಗಳಿಗೆ ಧ್ವನಿ ನೀಡುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮವು ಖಾದಿ, ಭಾರತೀಯ ಆಟಿಕೆ ಉದ್ಯಮ, ಆರೋಗ್ಯ ಕ್ಷೇತ್ರದಲ್ಲಿ ಸ್ಟಾರ್ಟ್‌ಅಪ್‌ಗಳಂತಹ ಉದ್ಯಮ, ಆಯುಷ್, ಬಾಹ್ಯಾಕಾಶ ಮುಂತಾದ ಕ್ಷೇತ್ರಗಳ ಮೇಲೆ ಮಹತ್ತರವಾದ ಪರಿಣಾಮವನ್ನು ಬೀರಿದೆ. ಇದರ ನವೀನ ಮತ್ತು ವಿಶಿಷ್ಟವಾದ ಸಂವಾದಾತ್ಮಕ ಪ್ರಸ್ತುತಿ ಶೈಲಿಯೊಂದಿಗೆ ಕಾರ್ಯಕ್ರಮವು ಸಂವಹನದ ವಿಶಿಷ್ಟ ಮಾದರಿಯಾಗಿ ತನಗಾಗಿ ಒಂದು ಸುಂದರ ಮನೆಯನ್ನು ರೂಪಿಸಿಕೊಂಡಿದೆ.

*****


ಸೌರಭ್ ಸಿಂಗ್

 



(Release ID: 1906974) Visitor Counter : 105