ಪ್ರಧಾನ ಮಂತ್ರಿಯವರ ಕಛೇರಿ

ಆರೋಗ್ಯ ಮತ್ತು ವೈದ್ಯಕೀಯ ಸಂಶೋಧನೆ ಕುರಿತ ಬಜೆಟೋತ್ತರ ವೆಬಿನಾರ್ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ


"ನಾವು - ಒಂದು ಭೂಮಿ, ಒಂದು ಆರೋಗ್ಯ - ದೃಷ್ಟಿಕೋನವನ್ನು ವಿಶ್ವದ ಮುಂದಿಟ್ಟಿದ್ದೇವೆ. ಇದು ಎಲ್ಲಾ ಜೀವಿಗಳಿಗೆ - ಮಾನವರಿಗೆ, ಪ್ರಾಣಿ ಅಥವಾ ಸಸ್ಯಗಳ ಸಮಗ್ರ ಆರೋಗ್ಯ ರಕ್ಷಣೆಯನ್ನು ಒಳಗೊಂಡಿದೆ"

"ವೈದ್ಯಕೀಯ ಚಿಕಿತ್ಸೆ ಕೈಗೆಟುಕುವಂತೆ ಮಾಡುವುದು ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ"

"ಆಯುಷ್ಮಾನ್ ಭಾರತ್ ಮತ್ತು ಜನೌಷಧಿ ಯೋಜನೆಗಳು ಬಡ ಮತ್ತು ಮಧ್ಯಮ ವರ್ಗದ ರೋಗಿಗಳ 1 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಹಣ ಉಳಿಸಿವೆ"

"ಪ್ರಧಾನಮಂತ್ರಿ-ಆಯುಷ್ಮಾನ್ ಭಾರತ ಆರೋಗ್ಯ ಮೂಲಸೌಕರ್ಯ ಅಭಿಯಾನ ಹೊಸ ಆಸ್ಪತ್ರೆಗಳಿಗೆ ಕಾರಣವಾಗುತ್ತಿರುವುದು ಮಾತ್ರವಲ್ಲದೆ ಹೊಸ ಮತ್ತು ಸಂಪೂರ್ಣ ಆರೋಗ್ಯ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತಿದೆ"

"ಆರೋಗ್ಯ ರಕ್ಷಣೆಯಲ್ಲಿ ತಂತ್ರಜ್ಞಾನದ ಗಮನ ಉದ್ಯಮಿಗಳಿಗೆ ಉತ್ತಮ ಅವಕಾಶವಾಗಿದೆ ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆಯ ನಮ್ಮ ಪ್ರಯತ್ನಗಳಿಗೆ ಉತ್ತೇಜನ ನೀಡುತ್ತದೆ"

"ಇಂದು ಔಷಧ ವಲಯದ ಮಾರುಕಟ್ಟೆ ಗಾತ್ರವು 4 ಲಕ್ಷ ಕೋಟಿ ರೂ. ಆಗಿದ್ದು, ಖಾಸಗಿ ವಲಯ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವಿನ ಸರಿಯಾದ ಸಮನ್ವಯದಿಂದ ಇದು 10 ಲಕ್ಷ ಕೋಟಿ ರೂ. ಆಗಬಹುದು.

Posted On: 06 MAR 2023 11:09AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಆರೋಗ್ಯ ಮತ್ತು ವೈದ್ಯಕೀಯ ಸಂಶೋಧನೆ' ವಿಷಯದ ಕುರಿತ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಭಾಷಣ ಮಾಡಿದರು. ಕೇಂದ್ರ ಬಜೆಟ್ 2023ರಲ್ಲಿ ಘೋಷಿಸಲಾದ ಉಪಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಆಲೋಚನೆಗಳು ಮತ್ತು ಸಲಹೆಗಳನ್ನು ಪಡೆಯಲು ಸರ್ಕಾರ ಆಯೋಜಿಸುತ್ತಿರುವದ 12 ಬಜೆಟ್ ನಂತರದ ವೆಬಿನಾರ್ ಗಳ ಸರಣಿಯಲ್ಲಿ ಇದು ಒಂಬತ್ತನೆಯದು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಆರೋಗ್ಯ ರಕ್ಷಣೆಯನ್ನು ಕೋವಿಡ್ ಸಾಂಕ್ರಾಮಿಕ  ಪೂರ್ವ ಮತ್ತು ನಂತರದ ವ್ಯವಸ್ಥೆಗಳ ದೃಷ್ಟಿಯಿಂದ ನೋಡಬೇಕು ಎಂದು ಹೇಳಿದರು. ಸಾಂಕ್ರಾಮಿಕ ರೋಗವು ಶ್ರೀಮಂತ ರಾಷ್ಟ್ರಗಳನ್ನು ಸಹ ಪರೀಕ್ಷೆಗೊಳಪಡಿಸಿತು ಎಂದು ಅವರು ಹೇಳಿದರು. ಸಾಂಕ್ರಾಮಿಕ ರೋಗವು ಆರೋಗ್ಯದ ಮೇಲೆ ಜಾಗತಿಕ ಗಮನವನ್ನು ಕೇಂದ್ರೀಕರಿಸುವಂತೆ ಮಾಡಿದ್ದರೆ, ಭಾರತವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಯೋಗ ಕ್ಷೇಮದ ಮೇಲೆ ಗಮನ ಕೇಂದ್ರೀಕರಿಸಿದೆ ಎಂದು ಅವರು ತಿಳಿಸಿದರು. ಅದಕ್ಕಾಗಿಯೇ ನಾವು -ಒಂದು ಭೂಮಿ ಒಂದು ಆರೋಗ್ಯ ಎಂಬ ದೃಷ್ಟಿಕೋನವನ್ನು ವಿಶ್ವದ ಮುಂದಿಟ್ಟಿದ್ದೇವೆ. ಇದು ಮಾನವರು, ಪ್ರಾಣಿಗಳು ಅಥವಾ ಸಸ್ಯಗಳು - ಎಲ್ಲ ಜೀವಿಗಳ ಸಮಗ್ರ ಆರೋಗ್ಯ ರಕ್ಷಣೆಯನ್ನು ಒಳಗೊಂಡಿದೆ ಎಂದರು.

ಸಾಂಕ್ರಾಮಿಕದ ಸಮಯದಲ್ಲಿ ಪೂರೈಕೆ ಸರಪಳಿಗೆ ಸಂಬಂಧಿಸಿದಂತೆ ಕಲಿತ ಪಾಠಗಳನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದರು ಮತ್ತು ಇದು ಬಹಳ ಕಾಳಜಿಯ ವಿಷಯವಾಗಿದೆ ಎಂದು ಹೇಳಿದರು. ಸಾಂಕ್ರಾಮಿಕ ರೋಗವು ಉತ್ತುಂಗದಲ್ಲಿದ್ದಾಗ ಔಷಧಗಳು, ಲಸಿಕೆಗಳು ಮತ್ತು ವೈದ್ಯಕೀಯ ಸಾಧನಗಳಂತಹ ಜೀವ ರಕ್ಷಕ ಸಾಧನಗಳನ್ನು ಶಸ್ತ್ರಾಸ್ತ್ರಗಳಂತೆ ಬಳಸಲಾಯಿತು ಎಂದರು. ಹಿಂದಿನ ವರ್ಷಗಳ ಆಯವ್ಯಯಗಳಲ್ಲಿ, ವಿದೇಶಗಳ ಮೇಲಿನ ಭಾರತದ ಅವಲಂಬನೆಯನ್ನು ತಗ್ಗಿಸಲು ಸರ್ಕಾರ ನಿರಂತರವಾಗಿ ಪ್ರಯತ್ನಿಸಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು ಮತ್ತು ಇದರಲ್ಲಿ ಎಲ್ಲ ಬಾಧ್ಯಸ್ಥರ ಪಾತ್ರವನ್ನು ಒತ್ತಿ ಹೇಳಿದರು.

ಸ್ವಾತಂತ್ರ್ಯಾನಂತರ ಹಲವು ದಶಕಗಳ ಕಾಲ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಮಗ್ರ ದೀರ್ಘಕಾಲೀನ ದೂರದೃಷ್ಟಿ ಇಲ್ಲದಿದ್ದ ಬಗ್ಗೆ ಪ್ರಧಾನಮಂತ್ರಿ ಗಮನಸೆಳೆದರು. ಆರೋಗ್ಯದ ವಿಷಯವನ್ನು ಕೇವಲ ಆರೋಗ್ಯ ಸಚಿವಾಲಯಕ್ಕೆ ಸೀಮಿತಗೊಳಿಸುವ ಬದಲು ನಾವು ಈಗ ಇಡೀ ಸರ್ಕಾರದ ವಿಧಾನವನ್ನು ಒತ್ತಾಯಿಸುತ್ತಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು. "ವೈದ್ಯಕೀಯ ಚಿಕಿತ್ಸೆಯನ್ನು ಕೈಗೆಟುಕುವಂತೆ ಮಾಡುವುದು ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ಆಯುಷ್ಮಾನ್ ಭಾರತ್ ಅಡಿ ನೀಡುತ್ತಿರುವ, ಉಚಿತ ಚಿಕಿತ್ಸೆಯಿಂದಾಗಿ ಸುಮಾರು 80 ಸಾವಿರ ಕೋಟಿ ರೂ.ಗಳನ್ನು ಬಡ ರೋಗಿಗಳು ಉಳಿಸಿದ್ದಾರೆ ಎಂದು ತಿಳಿಸಿದರು. ನಾಳೆ ಅಂದರೆ ಮಾರ್ಚ್ 7 ರಂದು ಜನೌಷಧಿ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, 9000 ಜನೌಷಧಿ ಕೇಂದ್ರಗಳ ಮೂಲಕ ಕೈಗೆಟುಕುವ ದರದಲ್ಲಿ ಔಷಧಗಳು ದೇಶಾದ್ಯಂತ ಬಡವರು ಮತ್ತು ಮಧ್ಯಮ ವರ್ಗದವರಿಗೆ ಸುಮಾರು 20 ಸಾವಿರ ಕೋಟಿ ರೂಪಾಯಿಗಳನ್ನು ಉಳಿಸಿದೆ. ಇದರರ್ಥ ಈ ಎರಡು ಯೋಜನೆಗಳು ನಾಗರಿಕರ ಒಂದು ಲಕ್ಷ ಕೋಟಿ ರೂ.ಗೂ ಹೆಚ್ಚು ಹಣ ಉಳಿಸಿವೆ ಎಂದರು.

ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಲವಾದ ಆರೋಗ್ಯ ಮೂಲಸೌಕರ್ಯದ ಮಹತ್ವವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಸರ್ಕಾರದ ಪ್ರಮುಖ ಗಮನದ ಬಗ್ಗೆ ಪ್ರತಿಪಾದಿಸಿದ  ಪ್ರಧಾನಮಂತ್ರಿಯವರು, ದೇಶಾದ್ಯಂತ 1.5 ಲಕ್ಷಕ್ಕೂ ಹೆಚ್ಚು ಆರೋಗ್ಯ ಕೇಂದ್ರಗಳನ್ನು ಮನೆಗಳ ಸಮೀಪದಲ್ಲಿಯೇ ಅಭಿವೃದ್ಧಿಪಡಿಸಲಾಗುತ್ತಿದೆ, ಇದರಿಂದ ತಪಾಸಣಾ ಕೇಂದ್ರಗಳು ಮತ್ತು ಪ್ರಥಮ ಚಿಕಿತ್ಸೆ ಲಭ್ಯವಿದೆ ಎಂದರು. ಮಧುಮೇಹ, ಕ್ಯಾನ್ಸರ್ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳಂತಹ ಗಂಭೀರ ಕಾಯಿಲೆಗಳನ್ನು ಪರೀಕ್ಷಿಸುವ ಸೌಲಭ್ಯಗಳು ಸಹ ಈ ಕೇಂದ್ರಗಳಲ್ಲಿ ಲಭ್ಯವಿರುತ್ತವೆ ಎಂದು ಅವರು ಮಾಹಿತಿ ನೀಡಿದರು. ಪ್ರಧಾನ ಮಂತ್ರಿ-ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಅಭಿಯಾನದ ಅಡಿಯಲ್ಲಿ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಿಗೆ ನಿರ್ಣಾಯಕ ಆರೋಗ್ಯ ಮೂಲಸೌಕರ್ಯಗಳನ್ನು ಲಭ್ಯವಾಗುವಂತೆ ಮಾಡಲಾಗುತ್ತಿದೆ, ಇದು ಹೊಸ ಆಸ್ಪತ್ರೆಗಳಿಗೆ ಕಾರಣವಾಗುವುದಲ್ಲದೆ ಹೊಸ ಮತ್ತು ಸಂಪೂರ್ಣ ಆರೋಗ್ಯ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇದರ ಪರಿಣಾಮವಾಗಿ, ಆರೋಗ್ಯ ಕ್ಷೇತ್ರದ ಉದ್ಯಮಿಗಳು, ಹೂಡಿಕೆದಾರರು ಮತ್ತು ವೃತ್ತಿಪರರಿಗೆ ಅನೇಕ ಅವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಪ್ರಧಾನಮಂತ್ರಿ ಹೇಳಿದರು.

ಈ ವಲಯದಲ್ಲಿನ ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದಂತೆ, ಕಳೆದ ಕೆಲವು ವರ್ಷಗಳಲ್ಲಿ 260 ಕ್ಕೂ ಹೆಚ್ಚು ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗಿದೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. ಇದು 2014ಕ್ಕೆ ಹೋಲಿಸಿದರೆ ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳಲ್ಲಿನ ವೈದ್ಯಕೀಯ ಸೀಟುಗಳ ಸಂಖ್ಯೆ ದ್ವಿಗುಣಗೊಳಿಸಲಾಗಿದೆ. ಈ ವರ್ಷದ ಬಜೆಟ್ ನಲ್ಲಿ ನರ್ಸಿಂಗ್ ಕ್ಷೇತ್ರಕ್ಕೆ ಒತ್ತು ನೀಡಲಾಗಿದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ವೈದ್ಯಕೀಯ ಕಾಲೇಜುಗಳ ಸಮೀಪದಲ್ಲಿ 157 ನರ್ಸಿಂಗ್ ಕಾಲೇಜುಗಳನ್ನು ತೆರೆಯುವುದು ವೈದ್ಯಕೀಯ ಮಾನವ ಸಂಪನ್ಮೂಲದ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯಾಗಿದೆ. ಇದು ಕೇವಲ ದೇಶೀಯ ಅಗತ್ಯ ಮಾತ್ರವಲ್ಲ, ಜಾಗತಿಕ ಬೇಡಿಕೆಯನ್ನು ಪೂರೈಸಲೂ ಉಪಯುಕ್ತವಾಗಬಹುದು" ಎಂದು ಅವರು ಹೇಳಿದರು.

ವೈದ್ಯಕೀಯ ಸೇವೆಗಳನ್ನು ನಿರಂತರವಾಗಿ ಕೈಗೆಟುಕುವಂತೆ ಮಾಡುವಲ್ಲಿ ತಂತ್ರಜ್ಞಾನದ ಪಾತ್ರವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು ಮತ್ತು ಈ ವಲಯದಲ್ಲಿ ತಂತ್ರಜ್ಞಾನದ ಅನುಷ್ಠಾನದ ಬಗ್ಗೆ ಸರ್ಕಾರ ಗಮನ ಹರಿಸಿರುವುದನ್ನು ವಿವರಿಸಿದರು. "ಡಿಜಿಟಲ್ ಹೆಲ್ತ್ ಐಡಿ ಸೌಲಭ್ಯದ ಮೂಲಕ ನಾಗರಿಕರಿಗೆ ಸಮಯೋಚಿತ ಆರೋಗ್ಯ ಸೇವೆ ನೀಡಲು ನಾವು ಬಯಸುತ್ತೇವೆ. ಇ-ಸಂಜೀವಿನಿಯಂತಹ ಯೋಜನೆಗಳ ಮೂಲಕ 10 ಕೋಟಿ ಜನರು ಈಗಾಗಲೇ ಟೆಲಿ ಸಮಾಲೋಚನೆಯಿಂದ ಪ್ರಯೋಜನ ಪಡೆದಿದ್ದಾರೆ" ಎಂದು ಅವರು ಹೇಳಿದರು. 5 ಜಿ ನವೋದ್ಯಮಗಳಿಗೆ ಈ ವಲಯದಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿದೆ. ಡ್ರೋನ್ ಗಳು ಔಷಧ ವಿತರಣೆ ಮತ್ತು ಪರೀಕ್ಷಾ ಸೇವೆಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತಿವೆ. "ಇದು ಉದ್ಯಮಿಗಳಿಗೆ ಉತ್ತಮ ಅವಕಾಶವಾಗಿದೆ ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆ ಕುರಿತ ನಮ್ಮ ಪ್ರಯತ್ನಗಳಿಗೆ ಉತ್ತೇಜನ ನೀಡುತ್ತದೆ" ಎಂದು ಅವರು ಹೇಳಿದರು, ಯಾವುದೇ ತಂತ್ರಜ್ಞಾನದ ಆಮದನ್ನು ಸಾಧ್ಯವಾದಷ್ಟೂ ತಡೆಯುವಂತೆ ಉದ್ಯಮಿಗಳನ್ನು ಪ್ರೇರೇಪಿಸಿದರು. ಈ ನಿಟ್ಟಿನಲ್ಲಿ ಅಗತ್ಯವಿರುವ ಸಾಂಸ್ಥಿಕ ಸ್ಪಂದನೆಯನ್ನು ಪ್ರಧಾನಮಂತ್ರಿಯವರು ಪಟ್ಟಿ ಮಾಡಿದರು. ವೈದ್ಯಕೀಯ ಸಾಧನ ಕ್ಷೇತ್ರದಲ್ಲಿನ ಹೊಸ ಯೋಜನೆಗಳ ಬಗ್ಗೆ ಅವರು ಮಾಹಿತಿ ನೀಡಿದರು. ಬೃಹತ್ ಔಷಧ ಪಾರ್ಕ್ ಗಳು, ವೈದ್ಯಕೀಯ ಸಾಧನ ಪಾರ್ಕ್ ಗಳು, ಪಿಎಲ್ ಐ ಯೋಜನೆಗಳಿಗೆ 30 ಸಾವಿರ ಕೋಟಿ ರೂ.ಗೂ ಹೆಚ್ಚು ಒತ್ತು ನೀಡಿರುವುದನ್ನು ಪ್ರಸ್ತಾಪಿಸಿದ ಅವರು, ಕಳೆದ ಕೆಲವು ವರ್ಷಗಳಲ್ಲಿ ವೈದ್ಯಕೀಯ ಸಾಧನಗಳಲ್ಲಿ ಶೇ.12-14ರಷ್ಟು ಬೆಳವಣಿಗೆ ಕಂಡುಬಂದಿದೆ ಎಂದರು. ಮುಂಬರುವ ವರ್ಷಗಳಲ್ಲಿ ಈ ಮಾರುಕಟ್ಟೆ 4 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಲಿದೆ ಎಂದು ಅವರು ಮಾಹಿತಿ ನೀಡಿದರು. ಭವಿಷ್ಯದ ವೈದ್ಯಕೀಯ ತಂತ್ರಜ್ಞಾನ ಮತ್ತು ಉನ್ನತ ಮಟ್ಟದ ಉತ್ಪಾದನೆ ಮತ್ತು ಸಂಶೋಧನೆಗಾಗಿ ಭಾರತವು ನುರಿತ ಮಾನವಶಕ್ತಿಯ ಕೆಲಸವನ್ನು ಪ್ರಾರಂಭಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಐಐಟಿಯಂತಹ ಸಂಸ್ಥೆಗಳಲ್ಲಿ ಬಯೋಮೆಡಿಕಲ್ ಎಂಜಿನಿಯರಿಂಗ್ ನಂತಹ ಕೋರ್ಸ್ ಗಳನ್ನು ನಡೆಸಲಾಗುವುದು ಎಂದು ಅವರು ಹೇಳಿದರು.  ಉದ್ಯಮ-ಶೈಕ್ಷಣಿಕ ಮತ್ತು ಸರ್ಕಾರದ ಸಹಯೋಗದಲ್ಲಿ ಮಾರ್ಗಗಳನ್ನು ಕಂಡುಹಿಡಿಯುವಂತೆ ಅವರು ಪಾಲ್ಗೊಂಡವರಿಗೆ ತಿಳಿಸಿದರು. 

ಭಾರತದ ಔಷಧ ಕ್ಷೇತ್ರದ ಮೇಲೆ ವಿಶ್ವದಲ್ಲಿ ಹೆಚ್ಚುತ್ತಿರುವ ವಿಶ್ವಾಸದ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಇದರ ಲಾಭ ಪಡೆದುಕೊಳ್ಳುವ ಮತ್ತು ಈ ವಿಶ್ವಾಸವನ್ನು ರಕ್ಷಿಸುವ ನಿಟ್ಟಿನಲ್ಲಿ ಶ್ರಮಿಸುವ ಅಗತ್ಯವನ್ನು ಒತ್ತಿ ಹೇಳಿದರು. ಉತ್ಕೃಷ್ಟತೆಯ ಕೇಂದ್ರಗಳ ಮೂಲಕ ಔಷಧ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ನಾವೀನ್ಯತೆಯನ್ನು ಹೆಚ್ಚಿಸಲು ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುತ್ತಿದೆ, ಇದು ಆರ್ಥಿಕತೆಯನ್ನು ಬಲಪಡಿಸುತ್ತದೆ ಮತ್ತು ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಮಾಹಿತಿ ನೀಡಿದರು.  "ಭಾರತದಲ್ಲಿ ಔಷಧ ಕ್ಷೇತ್ರದ ಮಾರುಕಟ್ಟೆ ಗಾತ್ರ ಇಂದು 4 ಲಕ್ಷ ಕೋಟಿಗಳಷ್ಟಿದೆ", ಎಂದು ಪ್ರಧಾನಮಂತ್ರಿ ಹೇಳಿದರು. ಮಾರುಕಟ್ಟೆ ಗಾತ್ರ 10 ಲಕ್ಷ ಕೋಟಿ ರೂ.ಗಳನ್ನು ಮೀರಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಖಾಸಗಿ ವಲಯ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವೆ ಸಮನ್ವಯವನ್ನು ಸಾಧಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಔಷಧ ವಲಯಗಳು ಹೂಡಿಕೆಗೆ ಪ್ರಮುಖ ಕ್ಷೇತ್ರಗಳನ್ನು ಗುರುತಿಸಬೇಕು ಎಂದು ಪ್ರಧಾನಮಂತ್ರಿ ಸಲಹೆ ನೀಡಿದರು. ಈ ವಲಯದಲ್ಲಿ ಹೆಚ್ಚಿನ ಸಂಶೋಧನೆಗಾಗಿ ಸರ್ಕಾರ ಕೈಗೊಂಡಿರುವ ಹಲವಾರು ಕ್ರಮಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಸಂಶೋಧನಾ ವಲಯಕ್ಕಾಗಿ ಐಸಿಎಂಆರ್ ನಿಂದ ಹಲವು ಹೊಸ ಪ್ರಯೋಗಾಲಯಗಳನ್ನು ತೆರೆಯಲಾಗಿದೆ ಎಂದರು.

ರೋಗ ತಡೆಗಟ್ಟುವ ಆರೋಗ್ಯ ರಕ್ಷಣೆಯ ಮೇಲೆ ಸರ್ಕಾರದ ಪ್ರಯತ್ನಗಳ ಪರಿಣಾಮವನ್ನು ಶ್ರೀ ಮೋದಿ ಉಲ್ಲೇಖಿಸಿದರು. ನೈರ್ಮಲ್ಯಕ್ಕಾಗಿ ಸ್ವಚ್ಛ ಭಾರತ ಅಭಿಯಾನ, ಹೊಗೆ ಸಂಬಂಧಿತ ರೋಗಗಳ ತಡೆಗೆ ಉಜ್ವಲ ಯೋಜನೆ, ನೀರಿನಿಂದ ಹರಡುವ ರೋಗಗಳನ್ನು ನಿಭಾಯಿಸಲು ಜಲ ಜೀವನ ಅಭಿಯಾನ ಹಾಗು ರಕ್ತಹೀನತೆ ಮತ್ತು ಅಪೌಷ್ಟಿಕತೆಯನ್ನು ಪರಿಹರಿಸಲು ರಾಷ್ಟ್ರೀಯ ಪೌಷ್ಟಿಕ ಅಭಿಯಾನವೇ ಮೊದಲಾದ ಯೋಜನೆಗಳನ್ನು ಅವರು ಪಟ್ಟಿ ಮಾಡಿದರು. ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷದಲ್ಲಿ ಸಿರಿಧಾನ್ಯಗಳ ಪಾತ್ರವನ್ನು ಅವರು ಉಲ್ಲೇಖಿಸಿದರು. ಅಂತೆಯೇ, ಪ್ರಧಾನಮಂತ್ರಿ ಮಾತೃವಂದನಾ ಯೋಜನೆ, ಇಂದ್ರಧನುಷ್ ಅಭಿಯಾನ, ಯೋಗ, ಫಿಟ್ ಇಂಡಿಯಾ ಚಳವಳಿ ಮತ್ತು ಆಯುರ್ವೇದವು ಜನರನ್ನು ರೋಗಗಳಿಂದ ರಕ್ಷಿಸುತ್ತಿವೆ. ಭಾರತದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಆಶ್ರಯದಲ್ಲಿ ಸಾಂಪ್ರದಾಯಿಕ ಔಷಧಕ್ಕಾಗಿ ಜಾಗತಿಕ ಕೇಂದ್ರವನ್ನು ಸ್ಥಾಪಿಸುವುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಆಯುರ್ವೇದದಲ್ಲಿ ಪುರಾವೆ ಆಧಾರಿತ ಸಂಶೋಧನೆಗಾಗಿ  ಮತ್ತೊಮ್ಮೆ ವಿನಂತಿಸಿದರು.

ಆಧುನಿಕ ವೈದ್ಯಕೀಯ ಮೂಲಸೌಕರ್ಯದಿಂದ ವೈದ್ಯಕೀಯ ಮಾನವ ಸಂಪನ್ಮೂಲದವರೆಗೆ ಸರ್ಕಾರ ಕೈಗೊಂಡ ಪ್ರಯತ್ನಗಳನ್ನು ಒತ್ತಿ ಹೇಳಿದ ಶ್ರೀ ಮೋದಿ, ಹೊಸ ಸಾಮರ್ಥ್ಯಗಳು ಕೇವಲ ತನ್ನ ನಾಗರಿಕರಿಗೆ ಆರೋಗ್ಯ ಸೌಲಭ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ ಆದರೆ ಭಾರತವನ್ನು ವಿಶ್ವದ ಅತ್ಯಂತ ಆಕರ್ಷಕ ವೈದ್ಯಕೀಯ ಪ್ರವಾಸೋದ್ಯಮ ತಾಣವನ್ನಾಗಿ ಮಾಡುವ ಗುರಿಯನ್ನೂ ಹೊಂದಿವೆ ಎಂದರು. ವೈದ್ಯಕೀಯ ಪ್ರವಾಸೋದ್ಯಮವು ಭಾರತದಲ್ಲಿ ಬಹಳ ದೊಡ್ಡ ವಲಯವಾಗಿದೆ ಮತ್ತು ದೇಶದಲ್ಲಿ ಉದ್ಯೋಗ ಸೃಷ್ಟಿಗೆ ದೊಡ್ಡ ಮಾಧ್ಯಮವಾಗಿದೆ ಎಂದು ಅವರು ಹೇಳಿದರು.

‌ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ ಪ್ರಧಾನಮಂತ್ರಿಯವರು, ಸಬ್ ಕಾ ಪ್ರಯಾಸ್ (ಎಲ್ಲರ ಪ್ರಯತ್ನಗಳು) ಮೂಲಕ ಮಾತ್ರ ಭಾರತದಲ್ಲಿ ಅಭಿವೃದ್ಧಿ ಹೊಂದಿದ ಆರೋಗ್ಯ ಮತ್ತು ಕ್ಷೇಮಕರ ಪರಿಸರ ವ್ಯವಸ್ಥೆಯನ್ನು ರೂಪಿಸಬಹುದು ಎಂದು ಒತ್ತಿ ಹೇಳಿದರು ಮತ್ತು ಎಲ್ಲ ಬಾಧ್ಯಸ್ಥರು ತಮ್ಮ ಅಮೂಲ್ಯವಾದ ಸಲಹೆಗಳನ್ನು ನೀಡುವಂತೆ ವಿನಂತಿಸಿದರು. "ನಿರ್ದಿಷ್ಟ ಮಾರ್ಗಸೂಚಿಯೊಂದಿಗೆ ನಿರ್ಧರಿತ ಗುರಿಗಳಿಗೆ ಕಾಲಮಿತಿಯೊಳಗೆ ಬಜೆಟ್ ಪ್ರಸ್ತಾವನೆಗಳನ್ನು ಜಾರಿಗೆ ತರಲು ನಮಗೆ ಸಾಧ್ಯವಾಗುತ್ತದೆ. ಮುಂದಿನ ಬಜೆಟ್ ಗೆ ಮುಂಚಿತವಾಗಿ ಎಲ್ಲ ಬಾಧ್ಯಸ್ಥರನ್ನು ಒಟ್ಟಿಗೆ ಕರೆದೊಯ್ಯುವಾಗ ವಾಸ್ತವನಲೆಗಟ್ಟಿನಲ್ಲಿ ಎಲ್ಲ ಕನಸುಗಳನ್ನು ಸಾಕಾರಗೊಳಿಸಲು ನಿಮ್ಮ ಅನುಭವದ ಅಗತ್ಯವಿದೆ "ಎಂದು ಅವರು ಭಾಗವಹಿಸಿದ್ದವರಿಗೆ ಹೇಳಿದರು.

***



(Release ID: 1904771) Visitor Counter : 263