ರಾಷ್ಟ್ರಪತಿಗಳ ಕಾರ್ಯಾಲಯ
ಸ್ವಚ್ಛ ಸುಜಲ್ ಶಕ್ತಿ ಸಮ್ಮಾನ್ 2023ನ್ನು ಪ್ರಸ್ತುತಪಡಿಸಿದ ಭಾರತದ ರಾಷ್ಟ್ರಪತಿ
Posted On:
04 MAR 2023 1:25PM by PIB Bengaluru
ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಸ್ವಚ್ಛ ಸುಜಲ್ ಶಕ್ತಿ ಸಮ್ಮಾನ್ 2023ನ್ನು ಪ್ರಸ್ತುತಪಡಿಸಿದರು. ಅವರು ನವದೆಹಲಿಯಲ್ಲಿ ಇಂದು (ಮಾರ್ಚ್ 4, 2023) 'ಜಲ ಶಕ್ತಿ ಅಭಿಯಾನ್: ಕ್ಯಾಚ್ ದಿ ರೈನ್ -2023ಕ್ಕೆ' ಚಾಲನೆಯನ್ನು ಕೂಡಾ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿಗಳು, ಪ್ರತಿಯೊಬ್ಬ ನಾಗರಿಕಕ ಜೀವನದಲ್ಲಿ ನೀರು ಮತ್ತು ನೈರ್ಮಲ್ಯಕ್ಕೆ ವಿಶೇಷ ಸ್ಥಾನವಿದೆ. ಆದರೆ ಈ ಸಮಸ್ಯೆಗಳು ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ, ಏಕೆಂದರೆ ಸಾಮಾನ್ಯವಾಗಿ ತಮ್ಮ ಮನೆಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವುದು ಮಹಿಳೆಯರ ಜವಾಬ್ದಾರಿಯಾಗಿದೆ. ಹಳ್ಳಿಗಳಲ್ಲಿ, ಅವರು ಕುಡಿಯುವ ನೀರನ್ನು ಪಡೆಯಲು ಬಹಳ ದೂರ ಸಾಗಬೇಕಾಗುತ್ತದೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಅವರ ಸಾಕಷ್ಟು ಸಮಯ ಶ್ರಮಿಸುವುದು ಮಾತ್ರವಲ್ಲದೆ ಅವರ ಸುರಕ್ಷತೆ ಮತ್ತು ಆರೋಗ್ಯವನ್ನು ಕೂಡಾ ಅಪಾಯಕ್ಕೆ ಸಿಲುಕಿಸಬೇಕಾಗುತ್ತದೆ. ಸಾಮಾನ್ಯವಾಗಿ, ಶಾಲೆ / ಕಾಲೇಜುಗಳಿಗೆ ಹೋಗುವ ಹುಡುಗಿಯರು ತಮ್ಮ ಹಿರಿಯರೊಂದಿಗೆ ನೀರಿನ ವ್ಯವಸ್ಥೆಯಲ್ಲಿ ನಿರಂತರವಾಗಿ ದುಡಿಯುತ್ತಿದ್ದಾರೆ, ಇದು ಅವರ ಅಧ್ಯಯನದ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಭಾರತ ಸರ್ಕಾರ ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಇದು ಜಲ ಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ್ ಮಿಷನ್ ನಂತಹ ಉಪಕ್ರಮಗಳ ಮೂಲಕ ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಇಂದು 11.3 ಕೋಟಿಗೂ ಹೆಚ್ಚು ಕುಟುಂಬಗಳು ನಲ್ಲಿಯಿಂದ ಕುಡಿಯುವ ನೀರನ್ನು ಪಡೆಯುತ್ತಿವೆ ಎಂದು ತಿಳಿದು ಅವರು ಸಂತೋಷಪಟ್ಟರು. ಈ ಹಿಂದೆ ನೀರಿನ ವ್ಯವಸ್ಥೆ ಮಾಡಲು ಬಹಳ ಸಮಯ ಕಳೆಯುತ್ತಿದ್ದ ಮಹಿಳೆಯರು ಈಗ ಆ ಸಮಯವನ್ನು ಇತರ ಉತ್ಪಾದಕ ಕೆಲಸಗಳಿಗೆ ಬಳಸುತ್ತಿದ್ದಾರೆ ಎಂದು ಅವರು ಹೇಳಿದರು. ಕಲುಷಿತ ನೀರಿನಿಂದಾಗಿ ಅತಿಸಾರ ಮತ್ತು ಭೇದಿಯಂತಹ, ನೀರಿನಿಂದ ಹರಡುವ ರೋಗಗಳಿಗೆ ಬಲಿಯಾಗುತ್ತಿದ್ದ ಶಿಶುಗಳ ಆರೋಗ್ಯದಲ್ಲಿ ಶುದ್ಧ ನಲ್ಲಿ ನೀರು ಗಮನಾರ್ಹ ಸುಧಾರಣೆಯನ್ನು ತಂದಿದೆ.
ಜಲ ಸಂರಕ್ಷಣೆ ಮತ್ತು ನೀರಿನ ನಿರ್ವಹಣೆಯ ಅಗತ್ಯವನ್ನು ಒತ್ತಿ ಹೇಳಿದ ರಾಷ್ಟ್ರಪತಿಗಳು, ನಮ್ಮ ದೇಶದಲ್ಲಿ ಜಲಸಂಪನ್ಮೂಲಗಳು ಸೀಮಿತವಾಗಿವೆ ಮತ್ತು ಅದರ ಹಂಚಿಕೆಯೂ ಅಸಮವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ ಎಂದು ತಿಳಿಸಿದರು. ವಿಶ್ವದ ಜನಸಂಖ್ಯೆಯ ಸುಮಾರು 18 ಪ್ರತಿಶತದಷ್ಟು ಜನರು ಭಾರತದಲ್ಲಿ ವಾಸಿಸುತ್ತಿದ್ದಾರೆ, ಆದರೆ ವಿಶ್ವದ 4 ಪ್ರತಿಶತದಷ್ಟು ಜಲ ಸಂಪನ್ಮೂಲಗಳು ಮಾತ್ರ ಇಲ್ಲಿ ಲಭ್ಯವಿವೆ. ಇದಲ್ಲದೆ, ನಮ್ಮಲ್ಲಿ ನೀರಿನ ಹೆಚ್ಚಿನ ಭಾಗವನ್ನು ಮಳೆಯ ರೂಪದಲ್ಲಿ ಪಡೆಯಲಾಗುತ್ತದೆ, ಈ ಮಳೆಯ ನೀರು ನದಿಗಳು ಮತ್ತು ಸಮುದ್ರಗಳಿಗೆ ಹರಿಯುತ್ತದೆ. ಅಂತೆಯೇ ನೀರಿನ ಸಂರಕ್ಷಣೆ ಮತ್ತು ಅದರ ನಿರ್ವಹಣೆ ನಮಗೆ ಬಹಳ ಮುಖ್ಯವಾದ ವಿಷಯವಾಗಿದೆ. ನೀರಿನ ಸರಬರಾಜಿಗೆ ಇಂದು ನಾವು ಸಾಂಪ್ರದಾಯಿಕ ವಿಧಾನಗಳಿಗಿಂತ ಸಾಂಸ್ಥಿಕ ವಿಧಾನಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ. ಆದರೆ ಸುಸ್ಥಿರ ನೀರು ಸರಬರಾಜಿಗೆ ಆಧುನಿಕ ತಂತ್ರಗಳನ್ನು ಬಳಸುವುದರ ಜೊತೆಗೆ, ನೀರಿನ ನಿರ್ವಹಣೆ ಮತ್ತು ನೀರು ಕೊಯ್ಲಿನ ಸಾಂಪ್ರದಾಯಿಕ ವಿಧಾನಗಳನ್ನು ಪುನರುಜ್ಜೀವನಗೊಳಿಸುವುದು ಪ್ರಸ್ತುತ ಸಮಯದ ಅಗತ್ಯವಾಗಿದೆ. ನೀರಿನ ಸಂರಕ್ಷಣೆ ಮತ್ತು ಅದರ ನಿರ್ವಹಣೆಗಾಗಿ ಎಲ್ಲಾ ಪಾಲುದಾರರು ಒಟ್ಟಾಗಿ ಕೆಲಸ ಮಾಡಬೇಕು. ಈ ಪ್ರಯತ್ನವನ್ನು ನಾವು ನಮಗಾಗಿ ಮಾತ್ರವಲ್ಲದೆ ನಮ್ಮ ಮುಂಬರುವ ಪೀಳಿಗೆಯ ಆರೋಗ್ಯಕರ ಮತ್ತು ಸುರಕ್ಷಿತ ಭವಿಷ್ಯಕ್ಕಾಗಿಯೂ ಮಾಡಬೇಕಾಗಿದೆ.
ದೇಶದ ಸುಮಾರು ಎರಡು ಲಕ್ಷ ಗ್ರಾಮಗಳು ತಮ್ಮನ್ನು ಬಯಲು ಶೌಚ ಮುಕ್ತ ಗ್ರಾಮಗಳೆಂದು ಘೋಷಿಸಿಕೊಂಡಿರುವುದನ್ನು ಕಂಡು ರಾಷ್ಟ್ರಪತಿಗಳು ಸಂತಸ ವ್ಯಕ್ತಪಡಿಸಿದರು. ಇದರರ್ಥ ಈ ಗ್ರಾಮಗಳು ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳನ್ನು ಹೊಂದಿವೆ ಎಂದು ಅವರು ಹೇಳಿದರು. ಗೃಹ ತ್ಯಾಜ್ಯಗಳ ಸರಿಯಾದ ಮತ್ತು ಪರಿಸರ ಸ್ನೇಹಿ ನಿರ್ವಹಣೆಯ ಅಗತ್ಯವನ್ನು ಅವರು ಒತ್ತಿ ಹೇಳಿದರು. ಮನೆಗಳಿಂದ ಬರುವ ಘನ ತ್ಯಾಜ್ಯಗಳನ್ನು ಸಾರ್ವಜನಿಕ ಸ್ಥಳದಲ್ಲಿ ಎಸೆಯಲಾಗುತ್ತದೆ ಮತ್ತು ದ್ರವ ತ್ಯಾಜ್ಯಗಳು ಜಲಮೂಲಗಳಿಗೆ ಹೋಗುತ್ತವೆ ಎಂದು ಅವರು ಗಮನಸೆಳೆದರು. ಇದು ಪರಿಸರ ಮತ್ತು ಜೀವಿಗಳಿಗೆ ಹಾನಿಕಾರಕ ಎಂದು ಅವರು ಹೇಳಿದರು. ಹೆಚ್ಚಿನ ತ್ಯಾಜ್ಯ ವಸ್ತುಗಳನ್ನು ಮರುಬಳಕೆ ಮಾಡುವ ವ್ಯವಸ್ಥೆಯನ್ನು ನಾವು ಹೊಂದಿರಬೇಕು; ದ್ರವ ತ್ಯಾಜ್ಯಗಳು ಅಂತರ್ಜಲವನ್ನು ಕಲುಷಿತಗೊಳಿಸಬಾರದು; ಉಳಿದ ತ್ಯಾಜ್ಯಗಳಿಂದ ನಾವು ಗೊಬ್ಬರವನ್ನು ತಯಾರಿಸಬಹುದು ಎಂದು ಅವರು ಹೇಳಿದ್ದಾರೆ.
ನಮ್ಮ ಭಾರತವನ್ನು 'ಸ್ವಚ್ಛ ಭಾರತ'ವನ್ನಾಗಿ ಮಾಡುವುದು ಸರ್ಕಾರದ ಜವಾಬ್ದಾರಿ ಮಾತ್ರವಲ್ಲದೆ, ಇದು ಎಲ್ಲಾ ನಾಗರಿಕರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ರಾಷ್ಟ್ರಪತಿಯವರು ಹೇಳಿದರು. 'ನಾರಿ ಶಕ್ತಿ' ಇಲ್ಲದೆ 'ಜಲ ಶಕ್ತಿ' ಫಲಪ್ರದವಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಸಾಮಾಜಿಕ ಏಳಿಗೆಗೆ ಈ ಎರಡೂ ಶಕ್ತಿಗಳ ಒಗ್ಗಟ್ಟಿನ ಬಲದ ಅಗತ್ಯವಿದೆ. 'ಜಲ ಜೀವನ್ ಮಿಷನ್' ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ.
ಜಲ ಸಂರಕ್ಷಣೆ, ಗ್ರಾಮಗಳನ್ನು ಬಯಲು ಶೌಚಮುಕ್ತಗೊಳಿಸುವುದು, ತ್ಯಾಜ್ಯ ನಿರ್ವಹಣೆ, ಮಳೆನೀರು ಕೊಯ್ಲಿನ ಕ್ಷೇತ್ರಗಳಲ್ಲಿ ಪ್ರಶಸ್ತಿ ಪುರಸ್ಕೃತರು ಮಾಡುತ್ತಿರುವ ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದಾಗಿ ಭಾರತವು ನೀರಿನ ನಿರ್ವಹಣೆ ಮತ್ತು ಸ್ವಚ್ಛತೆಯಲ್ಲಿ ವಿಶ್ವ ಸಮುದಾಯಕ್ಕೆ ಮಾದರಿಯಾಗಲಿದೆ ಎಂದು ರಾಷ್ಟ್ರಪತಿಯವರು ಹೇಳಿದರು. ದೇಶಾದ್ಯಂತ ಸ್ವಚ್ಛತೆ ಮತ್ತು ಜಲ ಸಂರಕ್ಷಣೆಯ ಕ್ಷೇತ್ರದಲ್ಲಿ ಮಾಡಲಾಗುತ್ತಿರುವ ಕಾರ್ಯಗಳ ಬಗ್ಗೆ ಆಯಾ ಪ್ರದೇಶದ ಜನರಿಗೆ ಮಾಹಿತಿ ನೀಡುವಂತೆ ಮತ್ತು ಪರಿಸರ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸಾರ್ವಜನಿಕರನ್ನು ಸಾಮಾಜಿಕವಾಗಿ ಪ್ರೇರೇಪಿಸುವಂತೆ ಅವರು ಪ್ರಶಸ್ತಿ ವಿಜೇತರನ್ನು ಒತ್ತಾಯಿಸಿದರು.
ಅಧ್ಯಕ್ಷರ ಭಾಷಣವನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ -
*****
(Release ID: 1904201)
Visitor Counter : 224