ಪ್ರಧಾನ ಮಂತ್ರಿಯವರ ಕಛೇರಿ

'ತಂತ್ರಜ್ಞಾನವನ್ನು ಬಳಸಿಕೊಂಡು ಸುಗಮ ಜೀವನ' ಕುರಿತು ಬಜೆಟ್ ನಂತರದ ವೆಬಿನಾರ್ನಲ್ಲಿ ಪ್ರಧಾನಿ ಭಾಷಣ


"ಇಂದು ಸರಕಾರದ ನೀತಿಗಳು ಮತ್ತು ನಿರ್ಧಾರಗಳ ಸಕಾರಾತ್ಮಕ ಪರಿಣಾಮವು ಅದರ ಅಗತ್ಯ ಇರುವೆಡೆ ಹೆಚ್ಚಾಗಿ ಗೋಚರಿಸುತ್ತಿದೆ"

"ಇಂದು ಜನರು ಸರಕಾರವನ್ನು ಒಂದು ಅಡೆತಡೆಯಾಗಿ ನೋಡುತ್ತಿಲ್ಲ; ಬದಲಾಗಿ, ಜನರು ನಮ್ಮ ಸರಕಾರವನ್ನು ಹೊಸ ಅವಕಾಶಗಳಿಗೆ ವೇಗವರ್ಧಕವಾಗಿ ನೋಡುತ್ತಿದ್ದಾರೆ. ಖಂಡಿತವಾಗಿಯೂ, ತಂತ್ರಜ್ಞಾನವು ಇದರಲ್ಲಿ ದೊಡ್ಡ ಪಾತ್ರ ವಹಿಸಿದೆ" 

"ನಾಗರಿಕರು ತಮ್ಮ ಅಭಿಪ್ರಾಯಗಳನ್ನು ಸರಕಾರಕ್ಕೆ ಸುಲಭವಾಗಿ ತಿಳಿಸಲು ಮತ್ತು ಅವರ ಸಮಸ್ಯೆಗಳಿಗೆ ಪರಿಹಾರವನ್ನು ತಕ್ಷಣ ಪಡೆಯಲು ಸಾಧ್ಯವಾಗುತ್ತಿದೆ"

"ನಾವು ಭಾರತದಲ್ಲಿ ಆಧುನಿಕ ಡಿಜಿಟಲ್ ಮೂಲಸೌಕರ್ಯವನ್ನು ಸೃಷ್ಟಿಸುತ್ತಿದ್ದೇವೆ ಮತ್ತು ಡಿಜಿಟಲ್ ಕ್ರಾಂತಿಯ ಪ್ರಯೋಜನಗಳು ಸಮಾಜದ ಪ್ರತಿಯೊಂದು ವರ್ಗವನ್ನು ತಲುಪುವಂತೆ ಖಾತರಿಪಡಿಸುತ್ತಿದ್ದೇವೆ"

"ಕೃತಕ ಬುದ್ಧಿಮತ್ತೆ (ಎಐ) ಮೂಲಕ ಪರಿಹರಿಸಬಹುದಾದಂತಹ ಸಮಾಜದ 10 ಸಮಸ್ಯೆಗಳನ್ನು ನಾವು ಗುರುತಿಸಬಹುದೇ?"

" ಸರಕಾರ ಮತ್ತು ಜನರ ನಡುವಿನ ವಿಶ್ವಾಸದ ಕೊರತೆಯ ಪರಿಣಾಮವೇ ಗುಲಾಮಗಿರಿ ಮನಸ್ಥಿತಿ"

"ಸಮಾಜದೊಂದಿಗಿನ ವಿಶ್ವಾಸವನ್ನು ಬಲಪಡಿಸಲು ನಾವು ಜಾಗತಿಕ ಮಟ್ಟದ ಉತ್ತಮ ಕಾರ್ಯವಿಧಾನಗಳಿಂದ ಕಲಿಯಬೇಕಾಗಿದೆ"

Posted On: 28 FEB 2023 11:08AM by PIB Bengaluru

ಬಜೆಟ್ ನಂತರದ ವೆಬಿನಾರ್ನಲ್ಲಿ 'ತಂತ್ರಜ್ಞಾನವನ್ನು ಬಳಸಿಕೊಂಡು ಸುಗಮ ಜೀವನ' ಎಂಬ ವಿಷಯದ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು. ʻಕೇಂದ್ರ ಬಜೆಟ್-2023ʼರಲ್ಲಿ ಘೋಷಿಸಲಾದ ಉಪಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಆಲೋಚನೆಗಳು ಮತ್ತು ಸಲಹೆಗಳನ್ನು ಪಡೆಯಲು ಸರಕಾರ ಆಯೋಜಿಸಿದ್ದ 12 ಬಜೆಟ್ ನಂತರದ ವೆಬಿನಾರ್‌ಗಳ ಸರಣಿಯಲ್ಲಿ ಇದು ಐದನೇಯದು.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, 21ನೇ ಶತಮಾನದ ಭಾರತವು ತಂತ್ರಜ್ಞಾನದ ಬಳಕೆಯ ಮೂಲಕ ತನ್ನ ನಾಗರಿಕರನ್ನು ನಿರಂತರವಾಗಿ ಸಶಕ್ತಗೊಳಿಸುತ್ತಿದೆ ಎಂದರು. ಕಳೆದ ಕೆಲವು ವರ್ಷಗಳಲ್ಲಿ ಮಂಡಿಸಲಾದ ಪ್ರತಿಯೊಂದು ಬಜೆಟ್ ಸಹ ತಂತ್ರಜ್ಞಾನದ ಸಹಾಯದಿಂದ ಜನರ ಜೀವನವನ್ನು ಸುಲಭಗೊಳಿಸುವತ್ತ ಗಮನ ಹರಿಸಿದೆ ನೀಡಿದೆ ಎಂದು ಅವರು ಒತ್ತಿಹೇಳಿದರು. ಈ ವರ್ಷದ ಬಜೆಟ್‌ನಲ್ಲಿ ತಂತ್ರಜ್ಞಾನ ಮತ್ತು ಮಾನವೀಯ ಸ್ಪರ್ಶಕ್ಕೆ ಆದ್ಯತೆ ನೀಡಲಾಗಿದೆ ಎಂದು ಪ್ರಧಾನಿ ವಿಶೇಷವಾಗಿ ಉಲ್ಲೇಖಿಸಿದರು. 

ಹಿಂದಿನ ಸರಕಾರಗಳ ಆದ್ಯತೆಗಳಲ್ಲಿನ ವಿರೋಧಾಭಾಸಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಒಂದು ನಿರ್ದಿಷ್ಟ ವರ್ಗದ ಜನರು ಸರಕಾರದ ಹಸ್ತಕ್ಷೇಪಕ್ಕಾಗಿ ಸದಾ ಹೇಗೆ ಎದುರು ನೋಡುತ್ತಿದ್ದರು ಮತ್ತು ಸರಕಾರ ಜನರಿಗೆ ಒಳ್ಳೆಯದನ್ನು ಮಾಡುತ್ತದೆ ಎಂದು ಹೇಗೆ ನಿರೀಕ್ಷೆಗಳನ್ನು ಹೊಂದಿದ್ದರು ಎಂಬುದನ್ನು ಸ್ಮರಿಸಿದರು. ಆದಾಗ್ಯೂ, ಅವರು ಬಯಸಿದ ಸೌಲಭ್ಯಗಳ ಅನುಪಸ್ಥಿತಿಯಲ್ಲೇ ಆ ವರ್ಗದ ಜನರು ಅವರ ಇಡೀ ಜೀವನವನ್ನು ಕಳೆದರು ಎಂದು ಪ್ರಧಾನಿ ಹೇಳಿದರು. ಮುಂದೆ ಸಾಗಲು ಬಯಸಿದರೂ  ಸರಕಾರದ ಹಸ್ತಕ್ಷೇಪದಿಂದ ಸೃಷ್ಟಿಯಾದ ಒತ್ತಡ ಮತ್ತು ಅಡೆತಡೆಗಳಿಂದ ಹಿಂದಕ್ಕೆ ತಳ್ಳಲ್ಪಟ್ಟ ಮತ್ತೊಂದು ವರ್ಗದ ಜನರ ಬಗ್ಗೆಯೂ ಪ್ರಧಾನಿ ಒತ್ತಿ ಹೇಳಿದರು. ಪ್ರಸ್ತುತ ಸರಕಾರದ ಅವಧಿಯಲ್ಲಿ ಆಗಿರುವ ಬದಲಾವಣೆಗಳನ್ನು ಉಲ್ಲೇಖಿಸಿದ ಅವರು, ಅತ್ಯಂತ ಅವಶ್ಯಕವಾದ ಕಡೆಗಳಲ್ಲಿ ಸರಕಾರದ ನೀತಿಗಳು ಮತ್ತು ಅವುಗಳ ಸಕಾರಾತ್ಮಕ ಪರಿಣಾಮಗಳನ್ನು ಗಮನಿಸಬಹುದು. ಇವುಗಳಿಂದಾಗಿ ಜನರ ಜೀವನ  ಸರಳಗೊಂಡಿರುವುದರ ಜೊತೆಗೆ ಜೀವನ ಮಟ್ಟವೂ ಉತ್ತಮವಾಗಿದೆ ಎಂದರು. ಸರಕಾರದ ಹಸ್ತಕ್ಷೇಪವನ್ನು ಕಡಿಮೆ ಮಾಡಲಾಗಿದೆ ಮತ್ತು ನಾಗರಿಕರು ಸರಕಾರವನ್ನು ಈಗ ಅಡೆತಡೆ ಎಂದು ಪರಿಗಣಿಸುವುದಿಲ್ಲ. ಬದಲಾಗಿ, ನಾಗರಿಕರು ಸರಕಾರವನ್ನು ವೇಗವರ್ಧಕವಾಗಿ ನೋಡುತ್ತಿದ್ದಾರೆ, ಅಲ್ಲಿ ತಂತ್ರಜ್ಞಾನವು ದೊಡ್ಡ ಪಾತ್ರ ವಹಿಸುತ್ತದೆ ಎಂದು ಪ್ರಧಾನಿ ಹೇಳಿದರು.

ʻಒಂದು ದೇಶ-ಒಂದು ಪಡಿತರ ಚೀಟಿʼ ಮತ್ತು ʻಜೆಎಎಂʼ (ಜನ್‌ಧನ್-ಆಧಾರ್-ಮೊಬೈಲ್) ತ್ರಿವಳಿ ವ್ಯವಸ್ಥೆ, ʻಆರೋಗ್ಯ ಸೇತುʼ ಮತ್ತು ʻಕೋವಿನ್ʼ ಆ್ಯಪ್, ರೈಲ್ವೆ ಟಿಕೆಟ್‌ ಮುಂಗಡ ಕಾಯ್ದಿರಿಸುವಿಕೆ ಮತ್ತು ಸಾಮಾನ್ಯ ಸೇವಾ ಕೇಂದ್ರಗಳ ಉದಾಹರಣೆಗಳನ್ನು ನೀಡುವ ಮೂಲಕ ಇವುಗಳಲ್ಲಿ ತಂತ್ರಜ್ಞಾನದ ಪಾತ್ರವನ್ನು ಪ್ರಧಾನಿ ವಿವರಿಸಿದರು. ಈ ನಿರ್ಧಾರಗಳೊಂದಿಗೆ, ಸರಕಾರವು ನಾಗರಿಕರ ಜೀವನವನ್ನು ಸುಗಮಗೊಳಿಸಿದೆ ಎಂದು ಅವರು ಹೇಳಿದರು.

ಸರಕಾರದೊಂದಿಗೆ ಸಂವಹನ ಸುಲಭವಾಗಿದೆ ಎಂಬ ಭಾವನೆ ಈಗ ಜನರಲ್ಲಿ ಮೂಡಿದೆ ಮತ್ತು ಜನರು ತ್ವರಿತವಾಗಿ ತಮ್ಮ ಸಮಸ್ಯೆಗಳಿಗೆ ಪರಿಹಾರಗಳನ್ನು ಪಡೆಯುತ್ತಿದ್ದಾರೆ ಎಂಬ ವಿಷಯವನ್ನು ಪ್ರಧಾನಿ ಎತ್ತಿ ಹೇಳಿದರು. ಆದಾಯ ತೆರಿಗೆ ವ್ಯವಸ್ಥೆಗೆ ಸಂಬಂಧಿಸಿದ ಕುಂದುಕೊರತೆಗಳ ಪರಿಹಾರಕ್ಕೆ ರೂಪಿಸಲಾಗಿರುವ ʻಮುಖತಃ ಸಂಪರ್ಕರಹಿತʼ(ಫೇಸ್‌ಲೆಸ್‌) ವ್ಯವಸ್ಥೆಯನ್ನು ಅವರು ಉದಾಹರಿಸಿದರು. "ಈಗ ನಿಮ್ಮ ಕುಂದುಕೊರತೆಗಳು ಮತ್ತು ಪರಿಹಾರದ ನಡುವೆ ಕೇವಲ ತಂತ್ರಜ್ಞಾನ ಹೊರತಾಗಿ ಮೂರನೇ ವ್ಯಕ್ತಿ ಯಾರೂ ಇಲ್ಲ," ಎಂದು ಅವರು ಹೇಳಿದರು. ವಿವಿಧ ಇಲಾಖೆಗಳು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ತಂತ್ರಜ್ಞಾನವನ್ನು ಬಳಸಬೇಕು ಮತ್ತು ಜಾಗತಿಕ ಮಟ್ಟದ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಸಾಮೂಹಿಕವಾಗಿ ಯೋಚಿಸಬೇಕು ಪ್ರಧಾನಿ ಕರೆ ನೀಡಿದರು. "ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸರಕಾರದೊಂದಿಗಿನ ಮಾತುಕತೆಯನ್ನು ಮತ್ತಷ್ಟು ಸರಾಗಗೊಳಿಸಬಹುದಾದ ಕ್ಷೇತ್ರಗಳನ್ನು ನಾವು ಗುರುತಿಸಬಹುದು," ಎಂದು ಅವರು ಸಲಹೆ ನೀಡಿದರು.

ʻಮಿಷನ್ ಕರ್ಮಯೋಗಿʼ ಉಪಕ್ರಮವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಸರ್ಕಾರಿ ನೌಕರರನ್ನು ಹೆಚ್ಚು ನಾಗರಿಕ ಕೇಂದ್ರಿತರನ್ನಾಗಿಸುವ ದೃಷ್ಟಿಯಿಂದ ಅವರಿಗೆ ತರಬೇತಿ ನೀಡಲಾಗುತ್ತಿದೆ ಎಂದರು. ತರಬೇತಿ ಪ್ರಕ್ರಿಯೆಯನ್ನು ನವೀಕರಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು ಮತ್ತು ನಾಗರಿಕರ ಪ್ರತಿಕ್ರಿಯೆಯ ಆಧಾರದ ಮೇಲೆ ಮಾರ್ಪಾಡುಗಳನ್ನು ಮಾಡುವ ಮೂಲಕ ಗಮನಾರ್ಹ ಸುಧಾರಣೆಯನ್ನು ಕಾಣಬಹುದು ಎಂದರು. ತರಬೇತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಸಲಹೆ-ಸೂಚನೆಗಳನ್ನು ಸುಲಭವಾಗಿ ಸಲ್ಲಿಸಬಹುದಾದ ವ್ಯವಸ್ಥೆಯನ್ನು ರಚಿಸುವಂತೆ ಪ್ರಧಾನಿ ಸಲಹೆ ನೀಡಿದರು.

ತಂತ್ರಜ್ಞಾನವು ಪ್ರತಿಯೊಬ್ಬರಿಗೂ ಒದಗಿಸುತ್ತಿರುವ ಸಮಾನ ಅವಕಾಶಗಳನ್ನು ಎತ್ತಿ ತೋರಿದ ಪ್ರಧಾನಿ, ಸರಕಾರವು ತಂತ್ರಜ್ಞಾನದಲ್ಲಿ ಭಾರಿ ಹೂಡಿಕೆ ಮಾಡುತ್ತಿದೆ. ಆಧುನಿಕ ಡಿಜಿಟಲ್ ಮೂಲಸೌಕರ್ಯವನ್ನು ಸೃಷ್ಟಿಸುವುದರ ಜೊತೆಗೆ, ಡಿಜಿಟಲ್ ಮೂಲಸೌಕರ್ಯದ ಪ್ರಯೋಜನಗಳು ಎಲ್ಲರಿಗೂ ಸಮಾನವಾಗಿ ತಲುಪುವಂತೆ ಸರಕಾರ ಖಾತರಿಪಡಿಸುತ್ತಿದೆ ಎಂದರು. ಸರಕಾರಿ ಖರೀದಿ ವೇದಿಕೆಯಲ್ಲಿ ಸಣ್ಣ ಉದ್ಯಮಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸುತ್ತಿರುವ ʻಜಿಇಎಂʼ(GeM) ಪೋರ್ಟಲ್ ಅನ್ನು ಉದಾಹರಿಸುವ ಮೂಲಕ ಅವರು ಇದನ್ನು ವಿವರಿಸಿದರು. ಹಾಗೆಯೇ, ರೈತರಿಗೆ ವಿವಿಧ ಸ್ಥಳಗಳಲ್ಲಿ ಖರೀದಿದಾರರೊಂದಿಗೆ ಸಂಪರ್ಕ ಸಾಧಿಸಲು ʻಇ-ನ್ಯಾಮ್ʼ (e-NAM) ಅನುವು ಮಾಡಿಕೊಡುತ್ತಿದೆ ಎಂದರು.

ʻ5ಜಿʼ ಮತ್ತು ʻಕೃತಕ ಬುದ್ಧಿಮತ್ತೆʼ (ಎಐ) ಹಾಗೂ ಕೈಗಾರಿಕೆ, ಔಷಧ, ಶಿಕ್ಷಣ ಮತ್ತು ಕೃಷಿಯ ಮೇಲೆ ಅವುಗಳ ಪ್ರಭಾವವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಈ ನಿಟ್ಟಿನಲ್ಲಿ ಕೆಲವು ಗುರಿಗಳನ್ನು ನಿಗದಿಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು. ಸಾಮಾನ್ಯ ನಾಗರಿಕರ ಕಲ್ಯಾಣಕ್ಕಾಗಿ ಈ ತಂತ್ರಜ್ಞಾನಗಳನ್ನು ನಿಯೋಜಿಸಬಹುದಾದ ಮಾರ್ಗಗಳು ಮತ್ತು ಗಮನ ಕೇಂದ್ರೀಕರಿಸಬೇಕಾದ ಕ್ಷೇತ್ರಗಳ ಬಗ್ಗೆ ಅವರು ಕೇಳಿದರು. "ಕೃತಕ ಬುದ್ಧಿಮತ್ತೆ (ಎಐ) ಬಳಕೆಯಿಂದ ಪರಿಹರಿಸಬಹುದಾದಂತಹ ಸಮಾಜದ 10 ಸಮಸ್ಯೆಗಳನ್ನು ನಾವು ಗುರುತಿಸಬಹುದೇ?" ಎಂದು ಅವರು ಕೇಳಿದರು.

ಸರಕಾರದಲ್ಲಿ ತಂತ್ರಜ್ಞಾನದ ಬಳಕೆಯ ಉದಾಹರಣೆಗಳನ್ನು ನೀಡಿದ ಪ್ರಧಾನಮಂತ್ರಿಯವರು, ʻಡಿಜಿಲಾಕರ್ʼ ಸೇವೆಗಳ ಬಗ್ಗೆ ಉಲ್ಲೇಖಿಸಿದರು. ʻಡಿಜಿಲಾಕರ್‌ʼ ಮೂಲಕ ಕಂಪನಿಗಳು ಮತ್ತು ಸಂಸ್ಥೆಗಳು ತಮ್ಮ ದಾಖಲೆಗಳನ್ನು ಸಂಗ್ರಹಿಸಬಹುದು ಹಾಗೂ ಅವುಗಳನ್ನು ಸರಕಾರಿ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬಹುದು ಎಂದರು. ಹೆಚ್ಚಿನ ಜನರು ಇದರ ಪ್ರಯೋಜನ ಪಡೆಯುವಂತಾಗಲು ಈ ಸೇವೆಗಳನ್ನು ವಿಸ್ತರಿಸುವ ಮಾರ್ಗಗಳನ್ನು ಕಂಡುಹಿಡಿಯುವಂತೆ ಅವರು ಸಲಹೆ ನೀಡಿದರು.

ಕಳೆದ ಕೆಲವು ವರ್ಷಗಳಲ್ಲಿ, ʻಎಂಎಸ್ಎಂಇʼಗಳನ್ನು (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು) ಬೆಂಬಲಿಸಲು ಹಲವಾರು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಜೊತೆಗೆ ʻಎಂಎಸ್ಎಂಇʼಗಳು ಎದುರಿಸುತ್ತಿರುವ ಅಡೆತಡೆಗಳ ಬಗ್ಗೆ ಚಿಂತನ-ಮಂಥನ ನಡೆಸುವ ಮತ್ತು ಅವುಗಳನ್ನು ಗುರುತಿಸುವ ಅಗತ್ಯವನ್ನು ಒತ್ತಿ ಹೇಳಿದರು. ವ್ಯವಹಾರದ ದೃಷ್ಟಿಯಿಂದ ಸಮಯವೆಂದರೆ ಹಣ ಎಂಬುದನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಸಣ್ಣ ಉದ್ಯಮಗಳಿಗೆ ಅನುಸರಣೆ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಸಮಯವನ್ನು ಕಡಿಮೆ ಮಾಡುವ ಸರಕಾರದ ಪ್ರಯತ್ನಗಳ ಬಗ್ಗೆ ಗಮನಸೆಳೆದರು. ಈ ಹಿಂದೆ ಇದ್ದ ನಲವತ್ತು ಸಾವಿರಕ್ಕೂ ಅಧಿಕ ನಿಯಮ-ನಿಬಂಧನೆಗಳ ಅನುಸರಣೆಯನ್ನು ಸರಕಾರ ರದ್ದುಗೊಳಿಸಿದೆ. ಇನ್ನಷ್ಟು ಅನಗತ್ಯ ಅನುಸರಣೆಗಳ ಪಟ್ಟಿಯನ್ನು ಮಾಡಲು ಇದು ಸೂಕ್ತ ಸಮಯವಾಗಿದೆ ಎಂದು ಅವರು ಸಲಹೆ ನೀಡಿದರು.

"ಸರಕಾರ ಮತ್ತು ಜನರ ನಡುವಿನ ವಿಶ್ವಾಸದ ಕೊರತೆಯ ಪರಿಣಾಮವಾಗಿ ಗುಲಾಮಗಿರಿಯ ಮನಸ್ಥಿತಿಯ ಸೃಷ್ಟಿಯಾಗಿದೆ" ಎಂದು ಹೇಳಿದ ಪ್ರಧಾನಿ, ಸಣ್ಣ ಅಪರಾಧಗಳನ್ನು ಅಪರಾಧಮುಕ್ತಗೊಳಿಸುವ ಮೂಲಕ ಮತ್ತು ʻಎಂಎಸ್ಎಂಇʼಗಳಿಗೆ ಸಾಲ ಖಾತರಿ ನೀಡುವ ಮೂಲಕ ಸರಕಾರ ನಾಗರಿಕರ ವಿಶ್ವಾಸವನ್ನು ಮರಳಿ ಗಳಿಸಿದೆ ಎಂದು ಗಮನಸೆಳೆದರು. ಸರಕಾರ ಮತ್ತು ನಾಗರಿಕರ ನಡುವೆ ವಿಶ್ವಾಸವನ್ನು ಬೆಳೆಸುವ ನಿಟ್ಟಿನಲ್ಲಿ ಇತರ ದೇಶಗಳಲ್ಲಿ ಕೈಗೊಂಡ ಕ್ರಮಗಳು ಹಾಗೂ ಉತ್ತಮ ಕಾರ್ಯವಿಧಾನಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ತಂತ್ರಜ್ಞಾನದ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ʻಸಿದ್ಧ ಉತ್ಪನ್ನʼವನ್ನು (ಫಿನಿಶ್ಡ್‌ ಪ್ರಾಡಕ್ಟ್‌) ಸೃಷ್ಟಿಸಲು ತಂತ್ರಜ್ಞಾನವು ನೆರವಾಗುತ್ತದೆ, ಆ ಮೂಲಕ ಜಾಗತಿಕ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಅಂತರ್ಜಾಲ ಮತ್ತು ಡಿಜಿಟಲ್ ತಂತ್ರಜ್ಞಾನಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸಬಾರದು ಎಂದು ಅವರು ಸಲಹೆ ನೀಡಿದರು. ಬಜೆಟ್ ಅಥವಾ ಸರಕಾರದ ಯಾವುದೇ ನೀತಿಯ ಯಶಸ್ಸು, ಅದನ್ನು ಎಷ್ಟು ಚೆನ್ನಾಗಿ ಸಿದ್ಧಪಡಿಸಲಾಗಿದೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಅಲ್ಲದೆ, ಈ ವಿಚಾರದಲ್ಲಿ ಜನರ ಸಹಕಾರದ ಮಹತ್ವವನ್ನೂ ಅವರು ಸಾರಿದರು. ಭಾರತದ ಪ್ರತಿಭಾವಂತ ಯುವಕರು, ನುರಿತ ಮಾನವಶಕ್ತಿ ಹಾಗೂ ಗ್ರಾಮೀಣ ಭಾಗದ ಜನರಲ್ಲೂ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವ ಇಚ್ಛೆಯ ಬಗ್ಗೆ ಅವರು ಉಲ್ಲೇಖಿಸಿದರು. ಇದರ ಲಾಭವನ್ನು ಪಡೆಯಲು ಮಾರ್ಗೋಪಾಯ ಕಂಡು ಹಿಡಿಯುವಂತೆ ಸಲಹೆ ನೀಡಿದರು. "ಬಜೆಟ್‌ನಿಂದ ಹೆಚ್ಚು ಲಾಭ ಪಡೆಯುವುದು ಹೇಗೆ ಎಂಬುದನ್ನು ನೀವು ಚರ್ಚಿಸಬೇಕು," ಎಂದು ಹೇಳುವ ಮೂಲಕ ಪ್ರಧಾನಿ ಮಾತು ಮುಗಿಸಿದರು.

 

***

 



(Release ID: 1903096) Visitor Counter : 86