ನೌಕಾ ಸಚಿವಾಲಯ

ವಿಶ್ವದ ಅತಿ ಉದ್ದದ ನದಿ ವಿಹಾರ ನೌಕಾಯಾನ 'ಎಂ.ವಿ. ಗಂಗಾ ವಿಲಾಸ್' ಫೆಬ್ರವರಿ 28 ರಂದು ದಿಬ್ರುಗಢದಲ್ಲಿ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸಲಿದೆ


ದಿಬ್ರುಗಢ್‌ನಲ್ಲಿ ನಡೆಯುವ ಸ್ವಾಗತ ಸಮಾರಂಭದಲ್ಲಿ ಶ್ರೀ ಸರ್ಬಾನಂದ ಸೋನೊವಾಲ್ ಅವರು ಭಾಗವಹಿಸಲಿದ್ದಾರೆ

ಜನವರಿ 13 ರಂದು ವಾರಣಾಸಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೌಕಾಯಾನಕ್ಕೆ ಚಾಲನೆ ನೀಡಿದ್ದರು

ಭಾರತ ಮತ್ತು ಬಾಂಗ್ಲಾದೇಶಗಳ 27 ನದಿಗಳ ಮೂಲಕ ಸುದೀರ್ಘ 50 ದಿನಗಳ ಕಾಲ ಸಾಗುವ ವಿಶ್ವದ ಅತಿ ಉದ್ದದ ಏಕೈಕ ನದಿ ವಿಹಾರ ನೌಕಾಯಾನ ಇದಾಗಿದೆ  

ಭಾರತೀಯ ಉಪ-ಖಂಡದಲ್ಲಿ ಪ್ರವಾಸೋದ್ಯಮಕ್ಕಾಗಿ ಹೊಸ ದಿಗಂತವನ್ನು ಮತ್ತು ಎತ್ತರದ ಅವಕಾಶಗಳನ್ನು 'ಎಂ.ವಿ. ಗಂಗಾ ವಿಲಾಸ್ʼ ನದಿ ವಿಹಾರ ನೌಕಾಯಾನ ತೆರೆದಿದೆ; ಮುಂದಿನ ಎರಡು ವರ್ಷಗಳವರೆಗೆ ಪ್ರಯಾಣಕ್ಕಾಗಿ ಈಗಾಗಲೇ ಮುಂಗಡ ಕಾಯ್ದಿರಿಸಲಾಗಿದೆ

ಗುವಾಹಟಿಯ ನಂತರ ಇಡೀ ಈಶಾನ್ಯಪ್ರದೇಶದ ಪೂರೈಕೆಗಳಿಗೆ ದಿಬ್ರುಗಢ್ ಎರಡನೇ ವ್ಯಾಪಾರ ಕೇಂದ್ರವಾಗಿದೆ

Posted On: 25 FEB 2023 3:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 13 ರಂದು ವಾರಣಾಸಿಯಿಂದ ಹಸಿರು ನಿಶಾನೆ ತೋರಿ ಚಾಲನೆ ಮಾಡಿದ್ದ, ವಿಶ್ವದ ಅತಿ ಉದ್ದದ ನದಿ ವಿಹಾರ ನೌಕಾಯಾನ 'ಎಂ.ವಿ. ಗಂಗಾ ವಿಲಾಸ್' ಫೆಬ್ರವರಿ 28 ರಂದು ದಿಬ್ರುಗಢದಲ್ಲಿ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸಲಿದೆ. ಅದೇ ದಿನ ದಿಬ್ರುಗಢ್‌ನಲ್ಲಿ ಭಾರತ ಸರ್ಕಾರದ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಆಶ್ರಯದಲ್ಲಿ ಭಾರತದ ಒಳನಾಡು ಜಲಮಾರ್ಗಗಳ ಪ್ರಾಧಿಕಾರ (ಐ.ಡಬ್ಲ್ಯೂ.ಎ.ಐ) ಭವ್ಯವಾದ ಸ್ವಾಗತ ಸಮಾರಂಭವನ್ನು ಆಯೋಜಿಸಿದೆ. ಈ ಸಮಾರಂಭದಲ್ಲಿ ಕೇಂದ್ರ ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವ ಶ್ರೀ ಸರ್ಬಾನಂದ ಸೋನೊವಾಲ್ , ಇತರ ಕೇಂದ್ರ ಸಚಿವರು, ರಾಜ್ಯ ಸಚಿವರು, ರಾಜತಾಂತ್ರಿಕರು ಮತ್ತು ಐ.ಡಬ್ಲ್ಯೂ.ಎ.ಐ ಹಾಗೂ ಕೇಂದ್ರ ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ  ಇಲಾಖೆಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಭಾರತದಲ್ಲಿ ತಯಾರಾದ ‘ಎಂ.ವಿ. ಗಂಗಾ ವಿಲಾಸ್’ ವಿಹಾರ ನೌಕೆಯು ವಾರಣಾಸಿಯಿಂದ ಜನವರಿ 13, 2023 ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿದ ನಂತರ ತನ್ನ ಪ್ರಯಾಣವನ್ನು ಪ್ರಾರಂಭಿಸಿತು. ಈ ವಿಹಾರ ನೌಕೆಯು ಪಾಟ್ನಾ ಸಾಹಿಬ್, ಬೋಧಗಯಾ, ವಿಕ್ರಮಶಿಲಾ, ಢಾಕಾ, ಸುಂದರಬನ್ಸ್ ಮತ್ತು ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಮೂಲಕ 50 ದಿನಗಳಲ್ಲಿ 3,200 ಕಿಮೀ ದೂರವನ್ನು ಪಯಣಿಸಿ ದಿಬ್ರುಗಢವನ್ನು ಫೆಬ್ರವರಿ 28 ರಂದು ತಲುಪಲಿದೆ. ವಿಶಿಷ್ಟ ವಿನ್ಯಾಸ ಮತ್ತು ಭವಿಷ್ಯದ ಅವಕಾಶಗಳ ದೂರದೃಷ್ಟಿಯೊಂದಿಗೆ ನಿರ್ಮಿಸಲಾದ ಈ ವಿಹಾರ ನೌಕೆಯು ಮೂರು ಅಂತಸ್ತು(ಡೆಕ್‌)ಗಳನ್ನು ಹೊಂದಿದೆ ಮತ್ತು 36 ಪ್ರವಾಸಿಗರ ವಾಸ್ತವ್ಯದ ಸಾಮರ್ಥ್ಯವಿರುವ 18 ಸುಸಜ್ಜಿತ ವಿಶೇಷ ಕೊಠಡಿ(ಸೂಟ್‌)ಗಳನ್ನು ಹೊಂದಿದೆ. ಮುಂದಿನ ಎರಡು ವರ್ಷಗಳವರೆಗೆ ಇದರಲ್ಲಿ ಪ್ರಯಾಣಿಸಲು ಈಗಾಗಲೇ ಮುಂಗಡ ಕಾಯ್ದಿರಿಸಲಾಗಿದೆ.

“ಈ "ಎಂವಿ ಗಂಗಾ ವಿಲಾಸ್" ವಿಹಾರ ನೌಕೆಯು ಭಾರತ ಮತ್ತು ಬಾಂಗ್ಲಾದೇಶವನ್ನು ವಿಶ್ವದ ನದಿ ವಿಹಾರ ನಕ್ಷೆಯಲ್ಲಿ ವಿಶೇಷ ಸ್ಥಾನದಲ್ಲಿರಿಸಿದೆ, ಇದರಿಂದಾಗಿ ಭಾರತೀಯ ಉಪಖಂಡದಲ್ಲಿ ಪ್ರವಾಸೋದ್ಯಮ ಮತ್ತು ಸರಕು ಸಾಗಣೆಗೆ ಹೊಸ ದಿಗಂತವನ್ನು ಮತ್ತು ಎತ್ತರದ ಅವಕಾಶಗಳು ತೆರೆಯಲಿದೆ. ಆಧ್ಯಾತ್ಮಿಕತೆಯನ್ನು ಬಯಸುವ ಪ್ರವಾಸಿಗರು ಕಾಶಿ, ಬೋಧಗಯಾ, ವಿಕ್ರಮಶಿಲಾ, ಪಾಟ್ನಾ ಸಾಹಿಬ್‌ನಂತಹ ಸ್ಥಳಗಳಿಗೆ ಭೇಟಿ ನೀಡಲು ಅವಕಾಶವನ್ನು ಹೊಂದಿದ್ದಾರೆ ಮತ್ತು ನೈಸರ್ಗಿಕ ವೈವಿಧ್ಯತೆಯನ್ನು ವೀಕ್ಷಿಸಲು ಉತ್ಸುಕರಾಗಿರುವ ಪ್ರವಾಸಿಗಳಿಗಾಗಿ  ಸುಂದರಬನ್ಸ್ ಮತ್ತು ಕಾಜಿರಂಗದಂತಹ ವನ ಪ್ರದೇಶಗಳನ್ನು ಪ್ರಯಾಣ ಆವರಿಸುತ್ತದೆ. ಈ ಮಾರ್ಗವು ಭಾರತ ಮತ್ತು ಬಾಂಗ್ಲಾದೇಶದ ಒಳನಾಡಿನ ಜಲಮಾರ್ಗಗಳ ಮೂಲಕ ಸರಕು ಸಾಗಣೆಗೆ ಹೊಸ ಅಧ್ಯಾಯವನ್ನು ತೆರೆಯುತ್ತದೆ. ಈಗ ಈ ಪ್ರಯಾಣದ ಮೂಲಕ, ಜಲಯಾನದ ವಿಶೇಷ ಅನುಭವದಲ್ಲಿ ಪ್ರವಾಸಿಗರು ತಲ್ಲೀನವಾಗುವ ಅವಕಾಶ ಹೊಂದಿದ್ದಾರೆ ಮತ್ತು ಈ ಸಂಪೂರ್ಣ ಮಾರ್ಗದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ಕಲೆ, ಸಂಸ್ಕೃತಿ, ಇತಿಹಾಸ ಮತ್ತು ಆಧ್ಯಾತ್ಮಿಕತೆಯನ್ನು ಅನ್ವೇಷಿಸುವ ವಿಶೆಷ ಅವಕಾಶ ಕೂಡಾ ಲಭ್ಯವಿದೆ“ ಎಂದು ಕೇಂದ್ರ ಸಚಿವ ಶ್ರೀ ಸರ್ಬಾನಂದ ಸೋನೊವಾಲ್ ಅವರು ಹೇಳಿದರು.

ರಾಷ್ಟ್ರೀಯ ಜಲಮಾರ್ಗ (ಎನ್.ಡಬ್ಲ್ಯೂ.) ಮೂಲಕ ಸರಕು ಸಾಗಣೆಗೆ ದೊಡ್ಡ ಸಾಮರ್ಥ್ಯವನ್ನು ಈಶಾನ್ಯ ಪ್ರದೇಶವು ಹೊಂದಿದೆ. ಈ ರಾಷ್ಟ್ರೀಯ ಜಲಮಾರ್ಗಗಳು ಅಸ್ಸಾಂ, ನಾಗಾಲ್ಯಾಂಡ್, ತ್ರಿಪುರಾ, ಮಣಿಪುರ, ಮಿಜೋರಾಂ ಮತ್ತು ಅರುಣಾಚಲ ಪ್ರದೇಶದಂತಹ ಈಶಾನ್ಯ ರಾಜ್ಯಗಳಿಗೆ ಒಳನಾಡಿನ ಸಂಪರ್ಕವನ್ನು ಒದಗಿಸುತ್ತವೆ ಮತ್ತು ಈ ರಾಜ್ಯಗಳನ್ನು ಭಾರತದ ಮುಖ್ಯ ಭೂಭಾಗ ಮತ್ತು ಕೋಲ್ಕತ್ತಾ ಹಾಗೂ ಹಲ್ದಿಯಾದ ಸಮುದ್ರ ಬಂದರುಗಳೊಂದಿಗೆ ಭಾರತ-ಬಾಂಗ್ಲಾದೇಶ ಶಿಷ್ಟಾಚಾರ(ಪ್ರೋಟೋಕಾಲ್) ಮಾರ್ಗದ ಮೂಲಕ ಸಂಪರ್ಕ ಏರ್ಪಡಿಸುತ್ತದೆ. ಒಳನಾಡು ಜಲ ಸಾರಿಗೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ ಹಲವಾರು ಯೋಜನೆಗಳಾದ ಫೇರ್‌ವೇ, ಟರ್ಮಿನಲ್‌ಗಳು ಮತ್ತು ನ್ಯಾವಿಗೇಷನ್ ಏಡ್ಸ್ ಅನ್ನು ಈಶಾನ್ಯ ಪ್ರದೇಶದಲ್ಲಿ ಈಗಾಗಲೇ ಐ.ಡಬ್ಲ್ಯೂ.ಎ.ಐ. ಪೂರ್ಣಗೊಳಿಸಿದೆ ಮತ್ತು ಉಳಿದ ಕೆಲವು ಕಾರ್ಯಗಳು ಪ್ರಗತಿಯಲ್ಲಿವೆ. 2017 ರಲ್ಲಿ ನಡೆಸಲಾದ ಐ.ಡಬ್ಲ್ಯೂ.ಎ.ಐ.  ಆಂತರಿಕ ಅಧ್ಯಯನದ ಪ್ರಕಾರ, 49 ಎಂ.ಎಂ.ಟಿ.ಪಿ.ಎ.ಯಷ್ಟು ಸರಕುಗಳು ಈಶಾನ್ಯ ಪ್ರದೇಶದ ಒಳಗೆ ಮತ್ತು ಹೊರಗೆ ಸಾಗಾಟವಾಗುತ್ತವೆ ಮತ್ತು ಈಶಾನ್ಯ ರಾಜ್ಯಗಳ ಪ್ರದೇಶದೊಳಗೆ  30 ಎಂ.ಎಂ.ಟಿ.ಪಿ.ಎ.  ಸರಕು ಸಾಗಾಟವಾಗುತ್ತಿದೆ.

****

 



(Release ID: 1902427) Visitor Counter : 107