ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ನವದೆಹಲಿಯ ಐ.ಜಿ. ಸ್ಟೇಡಿಯಂನಲ್ಲಿ 3 ದಿನಗಳ ಕಾಲ ನಡೆಯುವ ಅಖಿಲ ಭಾರತ ಟೇಕ್ವಾಂಡೋ ಚಾಂಪಿಯನ್ ಶಿಪ್ ಅನ್ನು ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ನಾಳೆ ಉದ್ಘಾಟಿಸಲಿದ್ದಾರೆ
ಕೊರಿಯಾ-ಭಾರತ ರಾಜತಾಂತ್ರಿಕ ಸಂಬಂಧದ 50 ವರ್ಷಗಳ ಸವಿನೆನಪಿಗಾಗಿ ಚಾಂಪಿಯನ್ ಶಿಪ್ ಅನ್ನು ಆಯೋಜಿಸಲಾಗಿದೆ
ಕೊರಿಯಾ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯದ ಪ್ರದರ್ಶನ ತಂಡದಿಂದ ವಿಶೇಷ ಪ್ರದರ್ಶನಗಳು, ಎರಡು ದೇಶಗಳ ನಡುವೆ ಟೇಕ್ವಾಂಡೋ ಪುನರುಜ್ಜೀವನಕ್ಕಾಗಿ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕುವ ಕಾರ್ಯಕ್ರಮ
Posted On:
23 FEB 2023 2:22PM by PIB Bengaluru
ಭಾರತದಲ್ಲಿರುವ ಕೊರಿಯನ್ ಸಾಂಸ್ಕೃತಿಕ ಕೇಂದ್ರವು ಕೊರಿಯಾ-ಭಾರತ ರಾಜತಾಂತ್ರಿಕ ಸಂಬಂಧಗಳ 50 ನೇ ವಾರ್ಷಿಕೋತ್ಸವದ ಆಚರಣೆಯ ನಿಮಿತ್ತವಾಗಿ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಮತ್ತು ಕೊರಿಯಾ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯಗಳು ಜಂಟಿಯಾಗಿ ಅಖಿಲ ಭಾರತ ಅಂತರ ಎಸ್.ಎ.ಐ. ಟೇಕ್ವಾಂಡೋ ಚಾಂಪಿಯನ ಶಿಪ್ ಅನ್ನು ಆಯೋಜನೆ ಮಾಡುತ್ತಿವೆ.
ಎರಡು ದೇಶಗಳ ನಡುವೆ ಕ್ರೀಡಾ ವಿನಿಮಯ ಕಾರ್ಯಕ್ರಮವಾಗಿ ಈ ಬಾರಿಯ ಅಖಿಲ ಭಾರತ ಟೇಕ್ವಾಂಡೋ ಚಾಂಪಿಯನ್ ಶಿಪ್ 2023 ರನ್ನು ಫೆಬ್ರವರಿ 24 (ಶುಕ್ರವಾರ) ರಿಂದ ಫೆಬ್ರವರಿ 26 (ಭಾನುವಾರ) ವರೆಗೆ, ಮೂರು ದಿನಗಳ ಕಾಲ ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದ ಕೆ.ಡಿ. ಜಾಧವ್ ಒಳಾಂಗಣ ಕುಸ್ತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕೊರಿಯಾ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಬಾಂಧವ್ಯದ 50 ನೇ ವರ್ಷದ ನೆನಪಿಗಾಗಿ ಮತ್ತು ಸಾಂಕ್ರಾಮಿಕ ರೋಗದಿಂದ ಕುಂಠಿತವಾಗಿ ನಿಶ್ಚಲವಾಗಿರುವ ಟೇಕ್ವಾಂಡೋವನ್ನು ಪುನಶ್ಚೇತನಗೊಳಿಸಲು ಮತ್ತು ಉಭಯ ದೇಶಗಳ ನಡುವಿನ ಪ್ರಮುಖ ಕ್ರೀಡಾಕೂಟವಾಗಿ ಭವಿಷ್ಯದ ಅಡಿಪಾಯವನ್ನು ಹಾಕಲು ಈ ಚಾಂಪಿಯನ್ ಶಿಪ್ ಅನ್ನು ಯೋಜಿಸಲಾಗುತ್ತಿದೆ.
ಫೆಬ್ರವರಿ 24, 2023 ರಂದು ಬೆಳಿಗ್ಗೆ 10:30 ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್, ಭಾರತದಲ್ಲಿನ ಕೊರಿಯಾದ ರಾಯಭಾರಿ ಶ್ರೀ ಚಾಂಗ್ ಜೇ ಬೊಕ್, ಕೊರಿಯನ್ ಸರ್ಕಾರದ ಉಪಮಂತ್ರಿ ಮತ್ತು ಕೊರಿಯಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಾರ್ವಜನಿಕ ರಾಜತಾಂತ್ರಿಕ ರಾಯಭಾರಿ ಶ್ರೀಮತಿ ಲೀ ಸಾಂಗ್ ಹ್ವಾ ಮತ್ತು ಕೊರಿಯಾ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯದ ಕುಲಪತಿ ಶ್ರೀ ಅಹ್ನ್ ಯೋಂಗ್ ಕ್ಯು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉಭಯ ದೇಶಗಳ ನಡುವಿನ ಕ್ರೀಡಾ ವಿನಿಮಯ ಕ್ಷೇತ್ರದ ಕುರಿತು ತಿಳುವಳಿಕಾ ಒಡಂಬಡಿಕೆಗಳಿಗೆ ಸಹಿ ಮಾಡುವುದು, ವಿಶೇಷ ಪ್ರದರ್ಶನಗಳು, ಕೊರಿಯನ್ ನೃತ್ಯ (ಸಾಂಪ್ರದಾಯಿಕ, ಆಧುನಿಕ, ಪ್ರಾಯೋಗಿಕ), ಟೇಕ್ವಾಂಡೋ ಪ್ರದರ್ಶನ ಮತ್ತು ಕೊರಿಯಾ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯದ ಪ್ರದರ್ಶನ ತಂಡಗಳಿಂದ ಕೆ-ಪಾಪ್ ಕವರ್ ನೃತ್ಯ ಮುಂತಾದ ವಿಶೇಷ ಕಾರ್ಯಕ್ರಮಗಳನ್ನು ಸಮಾರಂಭವು ಒಳಗೊಂಡಿರುತ್ತದೆ.
ಮೂರು ದಿನಗಳ ಟೇಕ್ವಾಂಡೋ ಚಾಂಪಿಯನ್ ಶಿಪ್ ಕಾರ್ಯಕ್ರಮವನ್ನು ಕ್ಯೋರುಗಿ ಎಂದು ಕರೆಯಲ್ಪಡುವ ಪೂಮ್ಸೇ ಮತ್ತು ಸ್ಪಾರಿಂಗ್ ಎಂಬ ಎರಡು ವಿಭಾಗಗಳ ಸ್ಪರ್ಧೆಯಾಗಿ ಆಯೋಜಿಸಲಾಗಿದೆ. ಸ್ಪ್ಯಾರಿಂಗ್, ಕ್ಯೋರುಗಿ ವಿಭಾಗವನ್ನು ವಿಶ್ವ ಟೇಕ್ವಾಂಡೋ ಫೆಡರೇಶನ್ನಿನ ಸ್ಪರ್ಧಾ ನಿಯಮಗಳ ಪ್ರಕಾರ ಆಟಗಾರರ ವಯಸ್ಸು ಮತ್ತು ತೂಕದಲ್ಲಿ ವಿಂಗಡಿಸಲಾಗಿದೆ ಮತ್ತು ಪೂಮ್ಸೇ ವಿಭಾಗವನ್ನು ಪುರುಷರು ಮತ್ತು ಮಹಿಳೆಯರ ವಿಭಾಗಗಳಾಗಿ ಮಾತ್ರ ವಿಂಗಡಿಸಲಾಗುತ್ತದೆ. ಭಾರತೀಯ ಕ್ರೀಡಾ ಪ್ರಾಧಿಕಾರದ 79 ಪ್ರಾದೇಶಿಕ ಕೇಂದ್ರಗಳು ಮತ್ತು ಪ್ರಾದೇಶಿಕ ತರಬೇತಿ ಕೇಂದ್ರಗಳಲ್ಲಿ ನೋಂದಾಯಿಸಲಾದ ಗಣ್ಯ ಹಾಗೂ ಪ್ರಮುಖ ಟೇಕ್ವಾಂಡೋ ಆಟಗಾರರು ಮಾತ್ರ ಸ್ಪಾರಿಂಗ್ ವಿಭಾಗದಲ್ಲಿ ಭಾಗವಹಿಸುತ್ತಾರೆ ಮತ್ತು ಪೂಮ್ಸೇ ವಿಭಾಗವು ಸಾರ್ವಜನಿಕರಿಗೆ ಮುಕ್ತವಾಗಿದೆ. ಕುಕ್ಕಿವಾನ್-ಪ್ರಮಾಣೀಕೃತ ಟೇಕ್ವಾಂಡೋ ಡಾನ್ ಪ್ರಮಾಣಪತ್ರವನ್ನು ಹೊಂದಿರುವ ಯಾರಾದರೂ ಕೂಡಾ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರತಿ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವ 10 ಕ್ಯೋರುಗಿ ಮತ್ತು 2 ಪೂಮ್ಸೇ ವಿಜೇತರು ಕೊರಿಯಾ ಸರ್ಕಾರದ ಬೆಂಬಲದೊಂದಿಗೆ ಕೊರಿಯಾ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವ ಅವಕಾಶ ಹೊಂದಿರುತ್ತಾರೆ ಮತ್ತು ಬಹುಮಾನವಾಗಿ ಅತ್ಯುತ್ತಮ ಪ್ರಾಧ್ಯಾಪಕರಿಂದ ಸುಮಾರು 3 ವಾರಗಳ ಕಾಲ ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮವನ್ನು ಪಡೆಯುತ್ತಾರೆ.
ಫೆಬ್ರವರಿ 24 ರಂದು ನಡೆಯುವ ಅಖಿಲ ಭಾರತ ಟೇಕ್ವಾಂಡೋ ಟೂರ್ನಮೆಂಟ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ನಂತರ, ಕೊರಿಯಾ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯ ಮತ್ತು ದೆಹಲಿ ವಿಶ್ವವಿದ್ಯಾಲಯದ ಮಿರಾಂಡಾ ಹೌಸ್ ನಡುವೆ ಮತ್ತೊಂದು ತಿಳುವಳಿಕಾ ಒಡಂಬಡಿಕೆಗಳಿಗೆ ಸಹಿಹಾಕುವ ಸಮಾರಂಭವಿರುತ್ತದೆ ಮತ್ತು ಕೊರಿಯಾ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯದ ವಿಶೇಷ ಪ್ರದರ್ಶನಗಳು ಮಿರಾಂಡಾ ಹೌಸ್ ಸಭಾಂಗಣದಲ್ಲಿ ನಡೆಯಲಿವೆ. ಭಾರತದ ಶಿಕ್ಷಣ ಸಚಿವಾಲಯದ ಕಳೆದ ವರ್ಷ 2017 ರಿಂದ 2021 ರವರೆಗಿನ ಐದು ವರ್ಷಗಳ ಮೌಲ್ಯಮಾಪನದ ಆಧಾರದ ಮೇಲೆ ಒಟ್ಟು 91 ಕಾಲೇಜುಗಳನ್ನು ಹೊಂದಿರುವ ದೆಹಲಿ ವಿಶ್ವವಿದ್ಯಾನಿಲಯವನ್ನು ಭಾರತದಲ್ಲಿ ಅತ್ಯುತ್ತಮ ಮತ್ತು ದೊಡ್ಡ ವಿಶ್ವವಿದ್ಯಾನಿಲಯವೆಂದು ಕೊರಿಯಾ ಸರ್ಕಾರವು ಗುರುತಿಸಿದೆ ಮತ್ತು ಮಿರಾಂಡಾ ಹೌಸ್ ಅನ್ನು ಭಾರತದ ಅತ್ಯುತ್ತಮ ಮತ್ತು ಪ್ರಾತಿನಿಧಿಕ ಕಾಲೇಜಾಗಿ ಕೊರಿಯಾ ಸರ್ಕಾರವು ಆಯ್ಕೆ ಮಾಡಿದೆ. ಎರಡು ದೇಶಗಳ ಉನ್ನತ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ ಪ್ರತಿನಿಧಿಗಳ ನಡುವಿನ ತಿಳುವಳಿಕಾ ಒಡಂಬಡಿಕೆಗಳನ್ನು ಆಧರಿಸಿದ ಮೊದಲ ಯೋಜನೆಯಾಗಿ, ಕೊರಿಯಾ ರಾಷ್ಟ್ರೀಯ ಕ್ರೀಡಾ ವಿಶ್ವವಿದ್ಯಾಲಯದಿಂದ ಕಳುಹಿಸಲಾದ ಪ್ರಾಧ್ಯಾಪಕರು ಈ ವರ್ಷದ ಮೊದಲಾರ್ಧದಿಂದ ಮಿರಾಂಡಾ ಹೌಸ್ನಲ್ಲಿ ನಡೆಯುವ ಟೇಕ್ವಾಂಡೋ ವೃತ್ತಿಪರ ಪಠ್ಯ(ಪಾಠ) ಮತ್ತು ಅಭ್ಯಾಸ ತರಗತಿಗಳನ್ನು ನಡೆಸಲಿದ್ದಾರೆ.
“ಈ ಟೇಕ್ವಾಂಡೋ ಚಾಂಪಿಯನ್ ಶಿಪ್ ಕಾರ್ಯಕ್ರಮವು ಮತ್ತು ಉಭಯ ದೇಶಗಳನ್ನು ಪ್ರತಿನಿಧಿಸುವ ವಿಶ್ವವಿದ್ಯಾಲಯಗಳ ನಡುವೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕುವುದು ಕೊರಿಯಾ ಮತ್ತು ಭಾರತದ ನಡುವಿನ ಕ್ರೀಡಾ ವಿನಿಮಯದಲ್ಲಿ ಮಹತ್ವದ ಮೈಲಿಗಲ್ಲು ಆಗಲಿದೆ “ ಎಂದು ಭಾರತದಲ್ಲಿರುವ ಕೊರಿಯನ್ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕ ಶ್ರೀ ಹ್ವಾಂಗ್ ಇಲ್ ಯೋಂಗ್ ಅವರು ಹೇಳಿದ್ದಾರೆ. ಟೇಕ್ವಾಂಡೋ ಶಿಕ್ಷಣವನ್ನು ಪ್ರಾರಂಭಿಸಲು ಭಾರತೀಯರ ಪಾಲಿಗೆ ಮಹತ್ವದ ಕೇಂದ್ರವಾಗಿರುವ ಮಿರಾಂಡಾ ಹೌಸ್ ಅನ್ನು ಆಯ್ಕೆ ಮಾಡುವುದರೊಂದಿಗೆ, ಮುಂಬರುವ ದಿನಗಳಲ್ಲಿ, ಟೇಕ್ವಾಂಡೋ ವಿಷಯವು ಕ್ರಮೇಣ ಭಾರತದ ಶೈಕ್ಷಣಿಕ ವಲಯದಾದ್ಯಂತ ನಿಯಮಿತ ಪಠ್ಯವಿಷಯವಾಗಿ ಮತ್ತು ಶೈಕ್ಷಣಿಕ ಕೋರ್ಸ್ ಆಗಿ ಪಸರಿಸಲಿದೆ ಎಂದು ಭಾವಿಸಲಾಗಿದೆ.
***
(Release ID: 1901920)
Visitor Counter : 125