ಜವಳಿ ಸಚಿವಾಲಯ
azadi ka amrit mahotsav

​​​​​​​ಜೆಪಿಎಂ ಕಾಯ್ದೆ, 1987ರ ಅಡಿಯಲ್ಲಿ 2022-23ರ ಸೆಣಬಿನ ವರ್ಷಕ್ಕೆ ಸೆಣಬಿನ ಪ್ಯಾಕೇಜಿಂಗ್ ಸಾಮಗ್ರಿಗಳಿಗೆ ಮೀಸಲಾತಿ ಮಾನದಂಡಗಳು


2022-23ರ ಸೆಣಬಿನ ವರ್ಷಕ್ಕೆ ಆಹಾರ ಧಾನ್ಯಗಳು ಮತ್ತು ಸಕ್ಕರೆ ಪ್ಯಾಕೇಜಿಂಗ್ ನಲ್ಲಿ ಸೆಣಬಿನ ಕಡ್ಡಾಯ ಬಳಕೆಗಾಗಿ ಮೀಸಲಾತಿ ಮಾನದಂಡಗಳಿಗೆ ಸಿಸಿಇಎ ಅನುಮೋದನೆ

ಸರ್ಕಾರದ ನಿರ್ಧಾರವು ಪಶ್ಚಿಮ ಬಂಗಾಳದ ಸೆಣಬಿನ ಕಾರ್ಮಿಕರು, ರೈತರು, ಗಿರಣಿಗಳಿಗೆ ದೊಡ್ಡ ಉತ್ತೇಜನ ನೀಡಲಿದೆ

40 ಲಕ್ಷ ಕೃಷಿ ಕುಟುಂಬಗಳು, ಸೆಣಬಿನ ಗಿರಣಿಗಳು ಮತ್ತು ಪೂರಕ ಘಟಕಗಳಲ್ಲಿ 3.7 ಲಕ್ಷ ಕಾರ್ಮಿಕರಿಗೆ ಸಹಾಯ ಮಾಡಲು ನಿರ್ಧಾರ

ಸರ್ಕಾರವು ಪ್ಯಾಕಿಂಗ್ ಗಾಗಿ ವರ್ಷಕ್ಕೆ 9,000 ಕೋಟಿ ರೂ.ಗಳ ಸೆಣಬನ್ನು ಖರೀದಿಸುವುದರಿಂದ ಸೆಣಬಿನ ರೈತರು ಮತ್ತು ಕಾರ್ಮಿಕರ ಉತ್ಪನ್ನಗಳಿಗೆ ಖಾತರಿ ಮಾರುಕಟ್ಟೆ ದೊರೆಯಲಿದೆ

ಆತ್ಮನಿರ್ಭರ ಭಾರತ ಉಪಕ್ರಮಕ್ಕೆ ಅನುಗುಣವಾಗಿ ದೇಶೀಯ ಸೆಣಬಿನ ಉತ್ಪಾದನೆಯನ್ನು ಬೆಂಬಲಿಸಲು ಸರ್ಕಾರದ ನಿರ್ಧಾರ

Posted On: 22 FEB 2023 4:54PM by PIB Bengaluru

2022-23ರ ಸೆಣಬಿನ ವರ್ಷದಲ್ಲಿ ಅಕ್ಕಿ, ಗೋಧಿ ಮತ್ತು ಸಕ್ಕರೆಯ ಪ್ಯಾಕೇಜಿಂಗ್ ನಲ್ಲಿ ಸೆಣಬಿನ ಕಡ್ಡಾಯ ಬಳಕೆಗಾಗಿ ಮೀಸಲಾತಿ ಮಾನದಂಡಗಳನ್ನು ಭಾರತ ಸರ್ಕಾರ ಅನುಮೋದಿಸಿದೆ. ಕಡ್ಡಾಯ ಮಾನದಂಡಗಳು ಆಹಾರ ಧಾನ್ಯಗಳ ಪ್ಯಾಕೇಜಿಂಗ್ ಗೆ ಸಂಪೂರ್ಣ ಮೀಸಲಾತಿ ಮತ್ತು ಸೆಣಬಿನ ಚೀಲಗಳ ಸಕ್ಕರೆ ಪ್ಯಾಕೇಜಿಂಗ್ ಗೆ 20% ಮೀಸಲಾತಿಯನ್ನು ಒದಗಿಸುತ್ತವೆ. ಇದು ಪಶ್ಚಿಮ ಬಂಗಾಳಕ್ಕೆ ಬೃಹತ್ ಉತ್ತೇಜನ ನೀಡಲಿದೆ.

ಸೆಣಬಿನ ಉದ್ಯಮವು ಭಾರತದ ರಾಷ್ಟ್ರೀಯ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ, ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಸುಮಾರು 75 ಸೆಣಬಿನ ಗಿರಣಿಗಳು ಕಾರ್ಯನಿರ್ವಹಿಸುತ್ತವೆ ಮತ್ತು ಲಕ್ಷಾಂತರ ಕಾರ್ಮಿಕರಿಗೆ ಜೀವನೋಪಾಯವನ್ನು ಒದಗಿಸುತ್ತವೆ. ಇದು ಸೆಣಬಿನ ವಲಯದಲ್ಲಿ 40 ಲಕ್ಷ ಕೃಷಿ ಕುಟುಂಬಗಳನ್ನು ಬೆಂಬಲಿಸುತ್ತದೆ. ಈ ನಿರ್ಧಾರವು ಬಿಹಾರ, ಒಡಿಶಾ, ಅಸ್ಸಾಂ, ತ್ರಿಪುರ, ಮೇಘಾಲಯ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಸೆಣಬಿನ ವಲಯಕ್ಕೂ ಸಹಾಯ ಮಾಡಲಿದೆ.
ಜೆಪಿಎಂ ಕಾಯ್ದೆಯಡಿ ಮೀಸಲಾತಿ ಮಾನದಂಡಗಳು 3.70 ಲಕ್ಷ ಕಾರ್ಮಿಕರಿಗೆ ನೇರ ಉದ್ಯೋಗವನ್ನು ಒದಗಿಸುತ್ತವೆ. ಈ ಕಾಯ್ದೆಯು ಸೆಣಬಿನ ವಲಯದಲ್ಲಿ ಸುಮಾರು 40 ಲಕ್ಷ ಕೃಷಿ ಕುಟುಂಬಗಳ ಹಿತಾಸಕ್ತಿಯನ್ನು ರಕ್ಷಿಸುತ್ತದೆ.  ಜೆಪಿಎಂ ಕಾಯ್ದೆ, 1987 ಸೆಣಬಿನ ರೈತರು, ಕಾರ್ಮಿಕರು ಮತ್ತು ಸೆಣಬಿನ ಸರಕುಗಳ ಉತ್ಪಾದನೆಯಲ್ಲಿ ತೊಡಗಿರುವ ವ್ಯಕ್ತಿಗಳ ಹಿತಾಸಕ್ತಿಯನ್ನು ರಕ್ಷಿಸುತ್ತದೆ. ಸೆಣಬಿನ ಉದ್ಯಮದ ಒಟ್ಟು ಉತ್ಪಾದನೆಯಲ್ಲಿ ಶೇಕಡಾ 75ರಷ್ಟು ಸೆಣಬಿನ ಚೀಲಗಳಾಗಿವೆ. ಅದರಲ್ಲಿ ಶೇಕಡಾ 85ರಷ್ಟನ್ನು ಭಾರತೀಯ ಆಹಾರ ನಿಗಮ (ಎಫ್ ಸಿಐ) ಮತ್ತು ರಾಜ್ಯ ಖರೀದಿ ಏಜೆನ್ಸಿಗಳಿಗೆ (ಎಸ್ ಪಿಎ) ಸರಬರಾಜು ಮಾಡಲಾಗುತ್ತದೆ ಮತ್ತು ಉಳಿದವುಗಳನ್ನು ನೇರವಾಗಿ ರಫ್ತು ಅಥವಾ ಮಾರಾಟ ಮಾಡಲಾಗುತ್ತದೆ.

ಆಹಾರ ಧಾನ್ಯಗಳನ್ನು ಪ್ಯಾಕ್ ಮಾಡಲು ಸರ್ಕಾರವು ಪ್ರತಿವರ್ಷ ಸರಿಸುಮಾರು 9,000 ಕೋಟಿ ರೂ.ಗಳ ಸೆಣಬಿನ ಚೀಲಗಳನ್ನು ಖರೀದಿಸುತ್ತದೆ. ಇದು ಸೆಣಬಿನ ರೈತರು ಮತ್ತು ಕಾರ್ಮಿಕರ ಉತ್ಪನ್ನಗಳಿಗೆ ಖಾತರಿ ಮಾರುಕಟ್ಟೆಯನ್ನು ಒದಗಿಸುತ್ತದೆ.

ಸೆಣಬಿನ ಚೀಲಗಳ ಸರಾಸರಿ ಉತ್ಪಾದನೆ ಸುಮಾರು 30 ಲಕ್ಷ ಬೇಲ್ ಗಳು (9 ಲಕ್ಷ ಮೆಟ್ರಿಕ್ ಟನ್). ಸೆಣಬಿನ ರೈತರು, ಕಾರ್ಮಿಕರು ಮತ್ತು ಸೆಣಬಿನ ಉದ್ಯಮದಲ್ಲಿ ತೊಡಗಿರುವ ವ್ಯಕ್ತಿಗಳ ಹಿತಾಸಕ್ತಿಯನ್ನು ರಕ್ಷಿಸುವ ಸಲುವಾಗಿ ಸೆಣಬಿನ ಚೀಲಗಳ ಉತ್ಪಾದನೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಮೀಸಲಾತಿ ಮಾನದಂಡಗಳು ಭಾರತದಲ್ಲಿ ಕಚ್ಚಾ ಸೆಣಬು ಮತ್ತು ಸೆಣಬಿನ ಪ್ಯಾಕೇಜಿಂಗ್ ವಸ್ತುಗಳ ದೇಶೀಯ ಉತ್ಪಾದನೆಯ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಲಿದ್ದು, ಆ ಮೂಲಕ ಭಾರತವನ್ನು ಆತ್ಮನಿರ್ಭರ ಭಾರತಕ್ಕೆ ಅನುಗುಣವಾಗಿ ಸ್ವಾವಲಂಬಿಯನ್ನಾಗಿ ಮಾಡುತ್ತದೆ. ಸೆಣಬು ನೈಸರ್ಗಿಕವಾಗಿದ್ದು, ಜೈವಿಕ ವಿಘಟನೀಯ, ನವೀಕರಿಸಬಹುದಾದ ಮತ್ತು ಮರುಬಳಕೆ ಮಾಡಬಹುದಾದ ಫೈಬರ್ ಆಗಿರುವುದರಿಂದ ಇದು ಪರಿಸರವನ್ನು ರಕ್ಷಿಸಲು ಸಹಾಯ ಮಾಡುತ್ತದೆ, ಆದ್ದರಿಂದ ಇದು ಎಲ್ಲಾ ಸುಸ್ಥಿರತಾ ನಿಯತಾಂಕಗಳನ್ನು ಪೂರೈಸುತ್ತದೆ.

***


(Release ID: 1901716) Visitor Counter : 154