ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ತುರ್ಕಿಯೆ ಮತ್ತು ಸಿರಿಯಾದಲ್ಲಿ 'ಆಪರೇಷನ್ ದೋಸ್ತ್' ನಲ್ಲಿ ಭಾಗಿಯಾಗಿದ್ದ ಎನ್‌ಡಿಆರ್‌ಎಫ್   ಸಿಬ್ಬಂದಿಯೊಂದಿಗೆ ಪ್ರಧಾನಮಂತ್ರಿಯವರ ಸಂವಾದ

Posted On: 20 FEB 2023 9:33PM by PIB Bengaluru

ನಿಮ್ಮೆಲ್ಲರಿಗೂ ಅನೇಕ ಅಭಿನಂದನೆಗಳು!

ಮಾನವೀಯತೆಗಾಗಿ ಮಹತ್ತರವಾದ ಕೆಲಸ ಮಾಡಿ ಹಿಂದಿರುಗಿರುವಿರಿ. ‘ಆಪರೇಷನ್ ದೋಸ್ತ್’ಗೆ ಸಂಬಂಧಿಸಿದ ಇಡೀ ತಂಡ ಎನ್‌ಡಿಆರ್‌ಎಫ್, ಸೈನ್ಯ, ವಾಯುಪಡೆ ಅಥವಾ ಇತರ ಸೇವಾ ಪಡೆಗಳು ಅದ್ಭುತ ಕೆಲಸ ಮಾಡಿದೆ.  ನಮ್ಮ ಮಾತು ಬಾರದ ಸ್ನೇಹಿತರಾದ ಶ್ವಾನದಳದ ಸದಸ್ಯರು ಸಹ ಅದ್ಭುತ ಸಾಮರ್ಥ್ಯವನ್ನು ತೋರಿಸಿದ್ದಾರೆ. ನಿಮ್ಮೆಲ್ಲರ ಬಗ್ಗೆ ದೇಶವು ಬಹಳ ಹೆಮ್ಮೆಪಡುತ್ತದೆ.

ಸ್ನೇಹಿತರೇ,

ನಮ್ಮ ಸಂಸ್ಕೃತಿಯು ನಮಗೆ ‘ವಸುಧೈವ ಕುಟುಂಬಕಂ’ (ಜಗತ್ತೇ ಒಂದು ಕುಟುಂಬ) ಎನ್ನುವುದನ್ನು ಕಲಿಸಿದೆ ಮತ್ತು ಈ ಮಂತ್ರಗಳ ಶ್ಲೋಕಗಳು ಬಹಳ ಸ್ಪೂರ್ತಿದಾಯಕವಾಗಿವೆ.

ಅಯಂ ನಿಜಃ ಪರೋ ವೇತಿ ಗಣನಾ ಲಘು ಚೇತಸಾಮ್ । ಉದಾರಚರಿತಾನಾಂ ತು ವಸುಧೈವ ಕುಟುಂಬಕಮ್॥

ಅಂದರೆ ವಿಶಾಲ ಮನಸ್ಸಿನವರು ಭೇದಭಾವ  ಮಾಡುವುದಿಲ್ಲ. ಅವರಿಗೆ, ಬ್ರಹ್ಮಾಂಡವೇ ಒಂದು ದೊಡ್ಡ ಕುಟುಂಬವಾಗಿದೆ, ಆದ್ದರಿಂದ ಪ್ರತಿಯೊಬ್ಬರೂ ಒಂದೇ ಕುಟುಂಬಕ್ಕೆ ಸೇರಿದವರು ಮತ್ತು ಎಲ್ಲರೂ ತಮ್ಮ ಸ್ವಂತದವರು ಎಂದು ಪರಿಗಣಿಸಿ ಸಕಲ ಜೀವಿಗಳಿಗೆ ಸೇವೆ ಸಲ್ಲಿಸುತ್ತಾರೆ.

ಸ್ನೇಹಿತರೇ,
ಟರ್ಕಿ (ತುರ್ಕಿಯೆ) ಅಥವಾ ಸಿರಿಯಾ ದೇಶವೇ ಆಗಿರಲಿ, ಇಡೀ ತಂಡವು ಈ ಭಾರತೀಯ ಮೌಲ್ಯಗಳನ್ನು ಒಂದು ರೀತಿಯಲ್ಲಿ ವ್ಯಕ್ತಪಡಿಸಿದೆ. ನಾವು ಇಡೀ ಜಗತ್ತನ್ನು ಒಂದೇ ಕುಟುಂಬವೆಂದು ಪರಿಗಣಿಸುತ್ತೇವೆ. ಕುಟುಂಬದ ಯಾವುದೇ ಸದಸ್ಯರ ಮೇಲೆ ಯಾವುದೇ ಬಿಕ್ಕಟ್ಟು ಉಂಟಾದರೆ, ಅವರಿಗೆ ತಕ್ಷಣದ ಸಹಾಯವನ್ನು ಒದಗಿಸುವುದು ಭಾರತದ ಧರ್ಮ ಮತ್ತು ಕರ್ತವ್ಯ. ಯಾವ ದೇಶವಾದರೂ ಲೆಕ್ಕಿಸದೆ, ಮಾನವೀಯತೆ ಮತ್ತು ಮಾನವ ಸಂವೇದನೆಯ ವಿಷಯವಾಗಿದ್ದರೆ, ಭಾರತವು ಮಾನವ ಹಿತಾಸಕ್ತಿಯನ್ನು ಪ್ರಮುಖವಾಗಿ ಪರಿಗಣಿಸುತ್ತದೆ.

ಸ್ನೇಹಿತರೇ,

ಪ್ರಾಕೃತಿಕ ವಿಕೋಪದ ಸಮಯದಲ್ಲಿ ಸಹಾಯವನ್ನು ಎಷ್ಟು ಬೇಗನೆ   ಮಾಡಲಾಗುತ್ತದೆ ಎನ್ನುವುದು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಅಪಘಾತದ ಸಮಯದಲ್ಲಿ 'ಗೋಲ್ಡನ್ ಅವರ್' ಎನ್ನುವ ಪದವನ್ನು ಬಳಸಲಾಗುತ್ತದೆ, ಹಾಗೆಯೇ ಪ್ರಕೃತಿ ವಿಕೋಪದ ಸಮಯದಲ್ಲಿ 'ಗೋಲ್ಡನ್ ಟೈಮ್' ಇರುತ್ತದೆ. ನೆರವಿನ ತಂಡ ಎಷ್ಟು ಬೇಗನೆ ತಲುಪಿತು. ತುರ್ಕಿಯೆನಲ್ಲಿ ಭೂಕಂಪದ ನಂತರ ನೀವು ಅಲ್ಲಿಗೆ ತಲುಪಿದ ವೇಗವು ಇಡೀ ಪ್ರಪಂಚದ ಗಮನವನ್ನು ಸೆಳೆದಿದೆ. ಇದು ನಿಮ್ಮ ಸನ್ನದ್ಧತೆ ಮತ್ತು ನಿಮ್ಮ ತರಬೇತಿಯ ದಕ್ಷತೆಯನ್ನು ತೋರಿಸುತ್ತದೆ. ನೀವು 10 ದಿನಗಳ ಕಾಲ ಪೂರ್ಣ ಶ್ರದ್ಧೆಯಿಂದ ಅಲ್ಲಿ ಕೆಲಸ ಮಾಡಿದ ರೀತಿ ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ. ತಾಯಿಯೊಬ್ಬಳು ನಿನ್ನ ಹಣೆಗೆ ಮುತ್ತಿಟ್ಟು ಆಶೀರ್ವದಿಸಿದ ಅಥವಾ ಅವಶೇಷಗಳಡಿಯಲ್ಲಿ ಹುದುಗಿರುವ ಮುಗ್ಧ ಜೀವವು ನಿಮ್ಮ ಪ್ರಯತ್ನದಿಂದ ಮತ್ತೆ ನಗುತ್ತಿರುವ ಆ ಚಿತ್ರಗಳನ್ನು ನಾವೆಲ್ಲರೂ ನೋಡಿದ್ದೇವೆ. ಅವಶೇಷಗಳ ನಡುವೆ, ಒಂದು ರೀತಿಯಲ್ಲಿ, ನೀವು ಸಹ ಅಲ್ಲಿ ಸಾವನ್ನು ಎದುರಿಸುತ್ತಿದ್ದೀರಿ. ಅಲ್ಲಿಂದ ಬರುವ ಪ್ರತಿಯೊಂದು ಚಿತ್ರದಿಂದ ಇಡೀ ದೇಶವೇ ಹೆಮ್ಮೆಯಿಂದ ತುಂಬಿತ್ತು ಎಂದು ನಾನು ಹೇಳುತ್ತೇನೆ. ವೃತ್ತಿಪರತೆಯ ಜೊತೆಗೆ ಭಾರತೀಯ ತಂಡದ ಮಾನವ ಸಂವೇದನೆಗಳ ಚೈತನ್ಯಕ್ಕೆ ಹೋಲಿಕೆಯಿಲ್ಲ. ಒಬ್ಬ ವ್ಯಕ್ತಿಯು ಆಘಾತಕ್ಕೆ ಒಳಗಾದಾಗ ಅಥವಾ ಎಲ್ಲವನ್ನೂ ಕಳೆದುಕೊಂಡ ನಂತರ ಯಾರಾದರೂ ಪ್ರಜ್ಞೆಯನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿರುವಾಗ ಅದು ಹೆಚ್ಚು ಮುಖ್ಯವಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಸೇನಾ ಆಸ್ಪತ್ರೆ ಮತ್ತು ಅದರ ಸಿಬ್ಬಂದಿಯವರು ಸಂವೇದನಾಶೀಲತೆಯಿಂದ ಕಾರ್ಯ ನಿರ್ವಹಿಸಿದ ರೀತಿ ಶ್ಲಾಘನೀಯ.

ಸ್ನೇಹಿತ,

ತುರ್ಕಿಯೆ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪವು ಕಳೆದ ಶತಮಾನದ ಅತಿದೊಡ್ಡ ಭೂಕಂಪವೆಂದು ಪರಿಗಣಿಸಲಾದ 2001 ರಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ ಭೂಕಂಪಕ್ಕಿಂತ ಹಲವು ಪಟ್ಟು ಹೆಚ್ಚು ವಿನಾಶಕಾರಿಯಾಗಿದೆ. ಗುಜರಾತಿನಲ್ಲಿ ಭೂಕಂಪ ಸಂಭವಿಸಿದಾಗ ನಾನು ಸ್ವಯಂಸೇವಕನಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ದೀರ್ಘಕಾಲ ತೊಡಗಿಸಿಕೊಂಡಿದ್ದೆ. ಅವಶೇಷಗಳನ್ನು ತೆಗೆಯುವುದು, ಅವಶೇಷಗಳಲ್ಲಿ ಜನರನ್ನು ಹುಡುಕುವುದು, ಆಹಾರ, ಔಷಧಿಗಳು ಮತ್ತು ಆಸ್ಪತ್ರೆಗಳ ಕೊರತೆ ಇತ್ಯಾದಿಗಳಿಂದ ಹಲವಾರು ಸಮಸ್ಯೆಗಳಿದ್ದವು. ಗುಜರಾತ್ ಭೂಕಂಪದ ಸಮಯದಲ್ಲಿ, ಭುಜ್‌ ನಲ್ಲಿರುವ ಇಡೀ ಆಸ್ಪತ್ರೆಯು ಸಂಪೂರ್ಣವಾಗಿ ನಾಶವಾಯಿತು. ಒಂದು ರೀತಿಯಲ್ಲಿ ಇಡೀ ವ್ಯವಸ್ಥೆಯೇ ಕುಸಿದು ಹೋಗಿತ್ತು. ನಾನು ಅದರ ಸ್ವಾನುಭವವನ್ನು ಹೊಂದಿದ್ದೇನೆ. ಅದೇ ರೀತಿ 1979ರಲ್ಲಿ ಮೊರ್ಬಿಯಲ್ಲಿ ಮಚ್ಚು ಅಣೆಕಟ್ಟು ಕುಸಿದಾಗ ಇಡೀ ಗ್ರಾಮವೇ ಮುಳುಗಡೆಯಾಗಿ ಇಡೀ ಮೊರ್ಬಿ ನಗರವೇ ನಾಶಗೊಂಡಿತ್ತು. ನೂರಾರು ಜನರು ಸತ್ತರು. ನಾನು ಸ್ವಯಂಸೇವಕನಾಗಿ ತಿಂಗಳುಗಟ್ಟಲೆ ಅಲ್ಲಿಯೇ ಇದ್ದು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡೆ. ನನ್ನ ಅನುಭವಗಳನ್ನು ನೆನಪಿಸಿಕೊಳ್ಳುತ್ತಾ, ನಿಮ್ಮ ಪ್ರಚಂಡ ಶ್ರಮ, ಉತ್ಸಾಹ ಮತ್ತು ನಿಮ್ಮ ಭಾವನೆಗಳನ್ನು ನಾನು ಊಹಿಸಬಲ್ಲೆ. ನೀವು ಅಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವಾಗ, ನಿಮ್ಮ ಅನುಭವವನ್ನು ನಾನು ಇಲ್ಲಿ ಊಹಿಸಬಲ್ಲೆ. ಹಾಗಾಗಿ, ನಾನು ಇಂದು ನಿಮಗೆ ಸೆಲ್ಯೂಟ್‌ ಮಾಡುತ್ತೇನೆ.

ಸ್ನೇಹಿತರೇ,

ತನಗೆ ತಾನೇ ಸಹಾಯ ಮಾಡಿಕೊಳ್ಳುವವನು ಸ್ವಾವಲಂಬಿಯಾಗಿರುತ್ತಾನೆ, ಆದರೆ ಇತರರಿಗೆ ಸಹಾಯ ಮಾಡಲು ಸಾಧ್ಯವಾದಾಗ, ಅವನು ನಿಸ್ವಾರ್ಥನಾಗಿರುತ್ತಾನೆ. ಇದು ವ್ಯಕ್ತಿಗಳಿಗೆ ಮಾತ್ರವಲ್ಲ ರಾಷ್ಟ್ರಗಳಿಗೂ ಅನ್ವಯಿಸುತ್ತದೆ. ಕಳೆದ ಕೆಲವು ವರ್ಷಗಳಿಂದ, ಭಾರತವು ಸ್ವಾವಲಂಬನೆಯ ಜೊತೆಗೆ ನಿಸ್ವಾರ್ಥತೆಯ ಗುರುತನ್ನು ಬಲಪಡಿಸಿದೆ. ತ್ರಿವರ್ಣ ಧ್ವಜದೊಂದಿಗೆ ಭಾರತೀಯ ತಂಡಗಳು ಎಲ್ಲಿಗೆ ತಲುಪಿದರೂ, ಜನರಿಗೆ ಸಹಾಯ ಮತ್ತು ಪರಿಸ್ಥಿತಿಯಲ್ಲಿ ಸುಧಾರಣೆಯ ಭರವಸೆ ನೀಡಲಾಗುತ್ತದೆ.  ನೀವು ಸಿರಿಯಾದ ಉದಾಹರಣೆಯನ್ನು ಉಲ್ಲೇಖಿಸಿದಂತೆ, ಪೆಟ್ಟಿಗೆಯ ಮೇಲಿರುವ ಭಾರತೀಯ ತ್ರಿವರ್ಣ ಧ್ವಜವು ತಲೆಕೆಳಗಾಗಿ ಬಿದ್ದಾಗ ಅಲ್ಲಿನ ನಾಗರಿಕರೊಬ್ಬರು ಅದನ್ನು ಸರಿಪಡಿಸಿದರು ಮತ್ತು ಅವರು ಗೌರವದಿಂದ ಭಾರತಕ್ಕೆ ಧನ್ಯವಾದಗಳನ್ನು ಅರ್ಪಿಸಿದರು ಎಂದು ಹೆಮ್ಮೆಯಿಂದ ಹೇಳಿಕೊಂಡರು. ನಾವು ಸ್ವಲ್ಪ ಸಮಯದ ಹಿಂದೆ ಉಕ್ರೇನ್‌ನಲ್ಲಿ ತ್ರಿವರ್ಣದ ಅದೇ ಪಾತ್ರವನ್ನು ನೋಡಿದ್ದೇವೆ. ಭಾರತದ ತ್ರಿವರ್ಣ ಧ್ವಜವು ಭಾರತೀಯ ನಾಗರಿಕರಿಗೆ ಮತ್ತು ಅಲ್ಲಿಂದ ಸ್ಥಳಾಂತರಿಸಲ್ಪಟ್ಟ ಅನೇಕ ದೇಶಗಳ ಜನರಿಗೆ ರಕ್ಷಾ ಕವಚವಾಯಿತು. ‘ಆಪರೇಷನ್ ಗಂಗಾ’ ಎಲ್ಲರಿಗೂ ಆಶಾಕಿರಣವಾಗುವ ಮೂಲಕ ಉತ್ತಮ ಮಾದರಿಯಾಯಿತು. ‘ಆಪರೇಷನ್ ದೇವಿ ಶಕ್ತಿ’ ಅಡಿಯಲ್ಲಿ ಅತ್ಯಂತ ಪ್ರತಿಕೂಲ ಸಂದರ್ಭಗಳಲ್ಲಿ ನಾವು ನಮ್ಮ ಪ್ರೀತಿಪಾತ್ರರನ್ನು ಅಫ್ಘಾನಿಸ್ತಾನದಿಂದ ಸುರಕ್ಷಿತವಾಗಿ ಮರಳಿ ಕರೆತಂದಿದ್ದೇವೆ. ಕೊರೊನಾ ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ ನಾವು ಅದೇ ಬದ್ಧತೆಯನ್ನು ತೋರಿದ್ದೇವೆ. ಆ ಅನಿಶ್ಚಿತೆಯ ವಾತಾವರಣದಲ್ಲಿ ವಿದೇಶದಿಂದ ಪ್ರತಿಯೊಬ್ಬ ನಾಗರಿಕರನ್ನು ಮರಳಿ ಕರೆತರಲು ಭಾರತವು ಕ್ರಮವನ್ನು ಕೈಗೊಂಡಿತ್ತು. ನಾವು ಇತರ ದೇಶಗಳ ಅನೇಕ ಜನರಿಗೆ ಸಹಾಯ ಮಾಡಿದ್ದೇವೆ. ಭಾರತವು ವಿಶ್ವದ ನೂರಾರು ಅಗತ್ಯವಿರುವ ದೇಶಗಳಿಗೆ ಅಗತ್ಯ ಔಷಧಗಳು ಮತ್ತು ಲಸಿಕೆಗಳನ್ನು ಒದಗಿಸಿದೆ. ಇದರ ಪರಿಣಾಮವಾಗಿ ಇಂದು ವಿಶ್ವದಲ್ಲಿ ಭಾರತದ ಬಗ್ಗೆ ಅಭಿಮಾನವಿದೆ.

ಸ್ನೇಹಿತರೇ,

ʼಆಪರೇಷನ್ ದೋಸ್ತ್’ ಮಾನವೀಯತೆಗೆ ಭಾರತದ ಸಮರ್ಪಣೆ ಮತ್ತು ಸಂಕಷ್ಟದಲ್ಲಿರುವ ದೇಶಗಳಿಗೆ ತಕ್ಷಣವೇ ಸಹಾಯ ಮಾಡುವ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ಜಗತ್ತಿನಲ್ಲಿ ಎಲ್ಲಿ ವಿಪತ್ತು ಸಂಭವಿಸಿದರೂ ಭಾರತವು ಮೊದಲು ಸಹಾಯಹಸ್ತ ನೀಡಲು ಸಿದ್ಧವಾಗಿದೆ. ನೇಪಾಳದ ಭೂಕಂಪ, ಮಾಲ್ಡೀವ್ಸ್ ಅಥವಾ ಶ್ರೀಲಂಕಾ ಬಿಕ್ಕಟ್ಟು ಆಗಿರಲಿ ಸಹಾಯ ಮಾಡಲು ಮೊದಲು ಮುಂದೆ ಬಂದದ್ದು ಭಾರತ. ಈಗ, ನಮ್ಮ ದೇಶವಲ್ಲದೇ, ಇತರ ದೇಶಗಳ ನಂಬಿಕೆಯು ಭಾರತೀಯ ಪಡೆಗಳು ಹಾಗೂ ಎನ್‌ ಡಿ ಆರ್‌ ಎಫ್ ಮೇಲೆ ಹೆಚ್ಚುತ್ತಿದೆ. ಹಲವು ವರ್ಷಗಳಿಂದ ಎನ್‌ ಡಿ ಆರ್‌ ಎಫ್ ದೇಶದ ಜನರಲ್ಲಿ ಉತ್ತಮ ಹೆಸರನ್ನು ಗಳಿಸಿರುವುದಕ್ಕೆ ನನಗೆ ಸಂತೋಷವಾಗಿದೆ. ಚಂಡಮಾರುತವಾಗಲಿ, ಬಿಕ್ಕಟ್ಟು ಎದುರಾಗುವ ಸಂಭವವಿದ್ದರೂ ದೇಶದ ಜನತೆ ನಿಮ್ಮನ್ನು ಕಂಡ ಕೂಡಲೇ ನಿಮ್ಮ ಮೇಲೆ ನಂಬಿಕೆ ಇಡುತ್ತಾರೆ. ನೀವು ಹೇಳುವಂತೆ ನಡೆದುಕೊಳ್ಳಲು ಪ್ರಾರಂಭಿಸುತ್ತಾರೆ . ನೀವು ಮತ್ತು ಎನ್‌ಡಿಆರ್‌ಎಫ್ ಸಮವಸ್ತ್ರದಲ್ಲಿರುವ ನಿಮ್ಮ ಸಹೋದ್ಯೋಗಿಗಳು ಯಾವುದೇ ವಿಪತ್ತು ಪೀಡಿತ ಪ್ರದೇಶವನ್ನು ಅದು ಚಂಡಮಾರುತ, ಪ್ರವಾಹ ಅಥವಾ ಭೂಕಂಪವಾಗಿದ್ದರೂ ತಲುಪಿದಾಗ ಅಲ್ಲಿನ ಜನರಲ್ಲಿ ಭರವಸೆ ಮತ್ತು ನಂಬಿಕೆಯ ಭಾವನೆ ಬರುತ್ತದೆ.  ಇದೇ ಒಂದು ದೊಡ್ಡ ಸಾಧನೆಯಾಗಿದೆ. ಶಕ್ತಿಯ ಕೌಶಲ್ಯಗಳಿಗೆ ಸೂಕ್ಷ್ಮತೆ ಮತ್ತು ಮಾನವ ಮುಖವನ್ನು ಸೇರಿಸಿದಾಗ ಆ ಶಕ್ತಿಯ ಬಲವು ಬಹುಪಟ್ಟು ಹೆಚ್ಚಾಗುತ್ತದೆ. ಈ ಗಮನಾರ್ಹ ಸಾಧನೆಗಾಗಿ ನಾನು ವಿಶೇಷವಾಗಿ ಎನ್‌ ಡಿ ಆರ್‌ ಎಫ್ ಅನ್ನು ಪ್ರಶಂಸಿಸುತ್ತೇನೆ.

ಸ್ನೇಹಿತರೇ,

ನಿಮ್ಮ ಸಿದ್ಧತೆಗಳ ಬಗ್ಗೆ ದೇಶಕ್ಕೆ ವಿಶ್ವಾಸವಿದೆ. ಆದರೆ ನಾವು ಮಾಡುವುದು ಇನ್ನೂ ಇದೆ. ಆಪತ್ಕಾಲದಲ್ಲಿ ನಾವು ನಮ್ಮ ಪರಿಹಾರ ಮತ್ತು ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕು. ನಾವು ವಿಶ್ವದ ಅತ್ಯುತ್ತಮ ಪರಿಹಾರ ಮತ್ತು ರಕ್ಷಣಾ ತಂಡವಾಗಿ ನಮ್ಮ ಗುರುತನ್ನು ಬಲಪಡಿಸಬೇಕಾಗಿದೆ. ಆದ್ದರಿಂದ, ಇತರ ದೇಶಗಳ ರಕ್ಷಣಾ ಮತ್ತು ಪರಿಹಾರ ತಂಡಗಳು ಅಲ್ಲಿಗೆ ಬಂದಾಗ ಕೆಲಸದ ಸಂಸ್ಕೃತಿ, ಕಾರ್ಯನಿರ್ವಹಣೆಯ ಶೈಲಿ ಮತ್ತು ಉಪಕರಣಗಳ ಬಳಕೆಯ ಬಗ್ಗೆ ನಾನು ನಿರಂತರವಾಗಿ ನಿಮ್ಮನ್ನು ಕೇಳುತ್ತಿದ್ದೆ, ಏಕೆಂದರೆ ತರಬೇತಿಯ ಸಮಯದಲ್ಲಿ ನಮ್ಮ ಸಿದ್ಧತೆಯನ್ನು ಹೆಚ್ಚಿಸುತ್ತದೆ. ನಾವು ಜವಾಬ್ದಾರಿಯುತವಾಗಿ ಮತ್ತು ಮಾನವೀಯತೆಗಾಗಿ ಕೆಲಸ ಮಾಡಿದ್ದೇವೆ, ಆದರೆ ಅಂತಹ ಬೃಹತ್ ದುರಂತದಿಂದ ನಾವು ಬಹಳಷ್ಟು ಕಲಿತಿದ್ದೇವೆ. ಇಂತಹ ದೊಡ್ಡ ದುರಂತದ ನಡುವೆಯೂ ಕೆಲಸ ಮಾಡುವಾಗ ನಾವು ಹತ್ತು ಹಲವು ಹೊಸ ವಿಷಯಗಳನ್ನು ಗಮನಿಸುತ್ತೇವೆ. ನಾವು ಅದನ್ನು ಹೆಚ್ಚು ಉತ್ತಮ ರೀತಿಯಲ್ಲಿ ಮಾಡಬಹುದಿತ್ತು ಅಥವಾ ಇತರರು ಅಳವಡಿಸಿಕೊಳ್ಳುವ ಅದೇ ಅಭ್ಯಾಸವನ್ನು ನಾವು ಅನುಸರಿಸಬೇಕು ಎಂದು ಅಲ್ಲಿ ನಾವು ಅರ್ಥಮಾಡಿಕೊಳ್ಳುತ್ತೇವೆ. ಮತ್ತು ಇದು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಾವು ತುರ್ಕಿಯ ಜನರಿಗಾಗಿ 10 ದಿನಗಳ ಕಾಲ ನಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದೇವೆ. ಆದರೆ ಅಲ್ಲಿ ನಮ್ಮ ಅನುಭವಗಳ ಸರಿಯಾದ ದಾಖಲಾತಿ ಮಾಡಬೇಕು,ಇದರಿಂದಾಗಿ ಆ ದುರಂತದಿಂದ ನಾವೇನು ಕಲಿಯಬಹುದು? ಇಂತಹ ಸವಾಲುಗಳ ಹಿನ್ನೆಲೆಯಲ್ಲಿ ನಮ್ಮ ಸಾಮರ್ಥ್ಯವನ್ನು ಸುಧಾರಿಸಿಕೊಳ್ಳುವುದು ಹೇಗೆ? ಈಗ, ಮೊದಲ ಬಾರಿಗೆ, ನಮ್ಮ ಹೆಣ್ಣುಮಕ್ಕಳು ಅಲ್ಲಿಗೆ ಹೋದರು. ನಮ್ಮ ಹೆಣ್ಣುಮಕ್ಕಳ ಉಪಸ್ಥಿತಿಯೂ ಅಲ್ಲಿನ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಿದೆ. ಅವರು ತಮ್ಮ ದೂರುಗಳು ಮತ್ತು ನೋವನ್ನು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಯಿತು. ಇಂತಹ ಕಷ್ಟದ ಕೆಲಸಕ್ಕಾಗಿ ನಮ್ಮ ಹೆಣ್ಣುಮಕ್ಕಳನ್ನು  ಕಳಿಸುವ ಬಗ್ಗೆ ಮೊದಲು ಯೋಚಿಸಿರಲಿಲ್ಲ. ಆದರೆ ಈ ಬಾರಿ ನಮ್ಮ ಹೆಣ್ಣುಮಕ್ಕಳನ್ನೂ ಕಳುಹಿಸಲು  ನಿರ್ಧಾರಿಸಲಾಯಿತು.   ನಮ್ಮ ಹೆಣ್ಣುಮಕ್ಕಳು ಕಡಿಮೆ ಸಂಖ್ಯೆಯಲ್ಲಿದ್ದರೂ, ಈ  ಕಾರ್ಯಾಚರಣೆಯು ಅಲ್ಲಿ ಸಂಬಂಧವನ್ನು ಸ್ಥಾಪಿಸಲು ಬಹಳ ಸಹಾಯ ಮಾಡಿತು. ನಾವು ನಮ್ಮನ್ನು ಉತ್ತಮವಾಗಿ ಸಿದ್ಧಪಡಿಸಿಕೊಂಡರೆ, ನಾವು ಜಗತ್ತಿಗೆ ಉತ್ತಮವಾಗಿ ಸೇವೆ ಸಲ್ಲಿಸಬಹುದು ಎಂದು ನಾನು ನಂಬುತ್ತೇನೆ.

ಸ್ನೇಹಿತರೇ, ನೀವು ಬಹಳಷ್ಟು ಮಾಡಿದ್ದೀರಿ ಮತ್ತು ಬಹಳಷ್ಟು ಕಲಿತಿದ್ದೀರಿ ಎಂದು ನಾನು ನಂಬುತ್ತೇನೆ. ನೀವು ಮಾಡಿರುವುದು ದೇಶದ ಗೌರವವನ್ನು ಹೆಚ್ಚಿಸಿದೆ. ನೀವು ಕಲಿತದ್ದನ್ನು ನಾವು ದಾಖಲಿಸಿದರೆ, ಭವಿಷ್ಯಕ್ಕಾಗಿ ನಾವು ಹೊಸ ನಂಬಿಕೆಯನ್ನು ಸೃಷ್ಟಿಸುತ್ತೇವೆ. ಮತ್ತು ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಹಂಚಿಕೊಳ್ಳಲು ಒಂದು ಕಥೆ ಮತ್ತು ಅನುಭವವಿದೆ ಎಂದು ನನಗೆ ಖಾತ್ರಿಯಿದೆ. ನಾನು ಯಾವಾಗಲೂ ನಿಮ್ಮ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದೆ ಏಕೆಂದರೆ ಅಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ನಾನು ನಿಮ್ಮ ಬಗ್ಗೆ ಕಾಳಜಿ ವಹಿಸುತ್ತೇನೆ ಮತ್ತು ಅಂತಹ ವಿಪತ್ತು ಪೀಡಿತ ಪ್ರದೇಶಗಳಲ್ಲಿ ಯಾವುದೇ ವ್ಯವಸ್ಥೆಗಳಿಲ್ಲ. ಆದರೆ ನೀವು ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸಿ ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ. ನೀವು ಸಹ ಬಹಳಷ್ಟು ಕಲಿತಿದ್ದೀರಿ ಅದು ಮುಂದಿನ ದಿನಗಳಲ್ಲಿ ಉಪಯುಕ್ತವಾಗಲಿದೆ. ನನ್ನ ಹೃದಯದಾಳದಿಂದ ನಾನು ಮತ್ತೊಮ್ಮೆ ನಿಮ್ಮನ್ನು ಅಭಿನಂದಿಸುತ್ತೇನೆ. ನೀವು ಇಂದೇ ಹಿಂತಿರುಗಿದ್ದೀರಿ ಎಂದು ನನಗೆ ತಿಳಿದಿದೆ ಮತ್ತು ನೀವು ಕೂಡ ದಣಿದಿರಬೇಕು. ಆದರೆ ಕಳೆದ 10 ದಿನಗಳಿಂದ ನಿಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ನಿಮ್ಮ ಬಗ್ಗೆ ವಿಚಾರಿಸುತ್ತಿದ್ದೆ. ನಾನು ನಿಮ್ಮೊಂದಿಗೆ ಮಾನಸಿಕವಾಗಿ ಸಂಪರ್ಕ ಹೊಂದಿದ್ದೆ, ಉತ್ತಮ ಕೆಲಸಕ್ಕಾಗಿ ನಿಮ್ಮನ್ನು ಅಭಿನಂದಿಸಲು ನಾನು ನಿಮ್ಮನ್ನು ಇಲ್ಲಿಗೆ ಆಹ್ವಾನಿಸಲು ಬಯಸಿದೆ. ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ಸೆಲ್ಯೂಟ್‌ ಮಾಡುತ್ತೇನೆ.  ಧನ್ಯವಾದಗಳು !

ಸೂಚನೆ : ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

****


(Release ID: 1901387) Visitor Counter : 170