ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
"ನೀವು ಒಳ್ಳೆಯ ಭವಿಷ್ಯವನ್ನು ಹೊಂದಲು ಬಯಸಿದರೆ, ನೀವು ಭವಿಷ್ಯಕ್ಕೆ ಸಿದ್ಧರಾಗಿರಲು ಬಯಸಿದರೆ, ಮಹಿಳೆಯರು ಸಂವಾದದ ಕೇಂದ್ರವಾಗುವುದನ್ನು ಮತ್ತು ಮಹಿಳೆಯರು ನಿಮ್ಮ ನಿರ್ಧಾರಗಳ ಕೇಂದ್ರವಾಗುವುದನ್ನು ಖಚಿತಪಡಿಸಿಕೊಳ್ಳಿ" - ಆಗ್ರಾದಲ್ಲಿ ನಡೆದ ಜಿ-20 ಎಂಪವರ್ ಆರಂಭ ಸಭೆಯಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರ ಕರೆ
Posted On:
11 FEB 2023 5:51PM by PIB Bengaluru
1. ಶೃಂಗಸಭೆಯು ಮಾರ್ಗಸೂಚಿ, ನೀತಿಗಳನ್ನು ಅಭಿವೃದ್ಧಿಪಡಿಸಲು ಹಾಗು ಸಮಾನತೆ ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಉತ್ತೇಜಿಸಿ ಸಾಮಾನ್ಯ ಶಕ್ತಿಯನ್ನು ಸಜ್ಜುಗೊಳಿಸಲು ಅವಕಾಶವನ್ನು ಒದಗಿಸುತ್ತದೆ.
2. ಜಿ20 ಎಂಪವರ್ ಜಿ-20 ದೇಶಗಳಾದ್ಯಂತ ಮಹಿಳಾ ನಾಯಕತ್ವ ಮತ್ತು ಸಬಲೀಕರಣವನ್ನು ವೇಗಗೊಳಿಸಲು ಉದ್ಯಮಗಳು ಮತ್ತು ಸರ್ಕಾರಗಳ ನಡುವೆ ಅತ್ಯಂತ ಅಂತರ್ಗತ ಮತ್ತು ಕ್ರಿಯಾಶೀಲ ಒಕ್ಕೂಟವಾಗಲು ಪ್ರಯತ್ನಿಸುತ್ತದೆ.
3. ಭಾರತದ ಜಿ-20 ಅಧ್ಯಕ್ಷತೆಯ ಅಡಿಯಲ್ಲಿ ಮೂರು ಕೇಂದ್ರೀಕೃತ ಕ್ಷೇತ್ರಗಳೆಂದರೆ: “ಮಹಿಳಾ ಉದ್ಯಮಶೀಲತೆ: ಇಕ್ವಿಟಿ ಮತ್ತು ಆರ್ಥಿಕತೆಗೆ ಸಮಾನ ಗೆಲುವು”, “ತಳಮಟ್ಟದಲ್ಲಿ ಸೇರಿದಂತೆ ಎಲ್ಲ ಹಂತಗಳಲ್ಲಿ ಮಹಿಳಾ ನಾಯಕತ್ವವನ್ನು ಉತ್ತೇಜಿಸುವ ಪಾಲುದಾರಿಕೆ”ಮತ್ತು “ಮಹಿಳಾ ಸಬಲೀಕರಣ ಮತ್ತು ಸಮಾನ ಉದ್ಯೋಗಿಗಳ ಭಾಗವಹಿಸುವಿಕೆಗೆ ಶಿಕ್ಷಣವು ಕೀಲಿಕೈ" ಆಗಿವೆ.
|
ಆಗ್ರಾದ ತಾಜ್ ಕನ್ವೆನ್ಷನ್ ಹೋಟೆಲ್‌ನಲ್ಲಿ 11 ಮತ್ತು 12 ಫೆಬ್ರವರಿ 2023 ರಂದು ಜಿ-20 ಎಂಪವರ್ ಆರಂಭದ ಸಭೆಯನ್ನು ಆಯೋಜಿಸಲಾಗಿದೆ. ಈ ಶೃಂಗಸಭೆಯು ಮಾರ್ಗಸೂಚಿ, ನೀತಿಗಳನ್ನು ಅಭಿವೃದ್ಧಿಪಡಿಸಲು ಮತ್ತು ಸಮಾನತೆ ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಉತ್ತೇಜಿಸಲು ಸಾಮಾನ್ಯ ಶಕ್ತಿಯನ್ನು ಸಜ್ಜುಗೊಳಿಸಲು ಅವಕಾಶವನ್ನು ಒದಗಿಸುತ್ತದೆ.
ಜಿ20 ಎಂಪವರ್ ಜಿ-20 ದೇಶಗಳಾದ್ಯಂತ ಮಹಿಳಾ ನಾಯಕತ್ವ ಮತ್ತು ಸಬಲೀಕರಣವನ್ನು ವೇಗಗೊಳಿಸಲು ಉದ್ಯಮಗಳು ಮತ್ತು ಸರ್ಕಾರಗಳ ನಡುವೆ ಅತ್ಯಂತ ಅಂತರ್ಗತ ಮತ್ತು ಕ್ರಿಯಾಶೀಲ ಒಕ್ಕೂಟವಾಗಲು ಪ್ರಯತ್ನಿಸುತ್ತದೆ. ಭಾರತದ ಜಿ-20 ಅಧ್ಯಕ್ಷತೆಯ ಅಡಿಯಲ್ಲಿ ಮೂರು ಕೇಂದ್ರೀಕೃತ ಕ್ಷೇತ್ರಗಳೆಂದರೆ: “ಮಹಿಳಾ ಉದ್ಯಮಶೀಲತೆ: ಇಕ್ವಿಟಿ ಮತ್ತು ಆರ್ಥಿಕತೆಗೆ ಸಮಾನ ಗೆಲುವು”, “ತಳಮಟ್ಟದಲ್ಲಿ ಸೇರಿದಂತೆ ಎಲ್ಲ ಹಂತಗಳಲ್ಲಿ ಮಹಿಳಾ ನಾಯಕತ್ವವನ್ನು ಉತ್ತೇಜಿಸುವ ಪಾಲುದಾರಿಕೆ”ಮತ್ತು “ಮಹಿಳಾ ಸಬಲೀಕರಣ ಮತ್ತು ಸಮಾನ ಉದ್ಯೋಗಿಗಳ ಭಾಗವಹಿಸುವಿಕೆಗೆ ಶಿಕ್ಷಣವು ಕೀಲಿಕೈ" ಆಗಿವೆ.
ಜಿ-20 ಎಂಪವರ್ ಆರಂಭದ ಸಭೆಯು ರೋಮಾಂಚಕ ನಗರ ಆಗ್ರಾಕ್ಕೆ ಜಿ-20 ಪ್ರತಿನಿಧಿಗಳಿಗೆ ನೀಡಿದ ಭವ್ಯವಾದ ಸ್ವಾಗತದೊಂದಿಗೆ ಪ್ರಾರಂಭವಾಯಿತು. ಇಡೀ ನಗರದ ಜನರು ತಮ್ಮ ಕೈಯಲ್ಲಿ ಧ್ವಜಗಳನ್ನು ಹಿಡಿದು ನಿಂತಿದ್ದರು ಮತ್ತು ವಿಮಾನ ನಿಲ್ದಾಣದಿಂದ ಸಭೆ ನಡೆಯುವ ಸ್ಥಳ ಮಾರ್ಗದುದ್ದಕ್ಕೂ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮಿಸಿದರು.
ಸಭೆಯ ಮೊದಲ ದಿನವು ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಹೆಚ್ಚಿಸಲು ಯೋಗದ ಪ್ರಯೋಜನಗಳನ್ನು ಹರಡುವ ಗುರಿಯೊಂದಿಗೆ ಆಯುಷ್ ಸಚಿವಾಲಯವು ಆಯೋಜಿಸಿದ ಯೋಗ ಅಧಿವೇಶನದೊಂದಿಗೆ ಪ್ರಾರಂಭವಾಯಿತು.
ಉಪಾಹಾರದ ನಂತರ, ಮಹಿಳಾ ನಾಯಕರು ಅಸಾಂಪ್ರದಾಯಿಕ ಪಾತ್ರಗಳಲ್ಲಿ ತಾವು ಎದುರಿಸಿದ ಸವಾಲುಗಳನ್ನು ಜಯಿಸಿದ ಸ್ಫೂರ್ತಿದಾಯಕ ಕಥೆಗಳನ್ನು ವಿವರಿಸಿದರು. ಪ್ರತಿನಿಧಿಗಳನ್ನು ಉದ್ದೇಶಿಸಿ ರಾಜಸ್ಥಾನದ ಭಾರತದ ಮೊದಲ ಎಂಬಿಎ ಪದವೀಧರ ಸರಪಂಚ್ ಶ್ರೀಮತಿ ಛವಿ ರಾಜಾವತ್ ಮಾತನಾಡಿದರು. ನಂತರ ಆಹಾರ ಉದ್ಯಮಿ ಶ್ರೀಮತಿ ಚಿಕಿತಾ ಗುಲಾಟಿ ಮಾತನಾಡಿದರು. ಈ ಅಧಿವೇಶನದಲ್ಲಿ ಭಾರತದ ಕೆಲವು ಅತ್ಯಂತ ಉದ್ಯಮಶೀಲ ಮಹಿಳಾ ನಾಯಕರ ಅನುಭವದ ಹಂಚಿಕೆಯು ಅವರ ಸ್ಥೈರ್ಯವನ್ನು ವಿವರಿಸಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಇಂದೇವರ್ ಪಾಂಡೆ ಅವರು ಸ್ವಾಗತ ಭಾಷಣ ಮಾಡಿದರು.
21 ನೇ ಶತಮಾನದಲ್ಲಿ, ಜಾಗತಿಕ ಬೆಳವಣಿಗೆಯು ದಕ್ಷಿಣದ ದೇಶಗಳಿಂದ ಬರಲಿದೆ, ಗ್ಲೋಬಲ್ ಸೌತ್ ನ ನಾಯಕತ್ವವನ್ನು ಪ್ರದರ್ಶಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂದು ಅವರು ಹೇಳಿದರು. ಮಹಿಳಾ ನಾಯಕತ್ವ ಮತ್ತು ನಾವೀನ್ಯವನ್ನು ಪ್ರದರ್ಶಿಸುವ ಮೂಲಕ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ 27 ರಾಜ್ಯಗಳಲ್ಲಿ ಕೈಗೊಂಡಿರುವ ಸ್ತ್ರೀ ಪರ ಬಜೆಟ್‌ನಂತಹ ಹಲವಾರು ಮಹಿಳಾ-ಕೇಂದ್ರಿತ ಉಪಕ್ರಮಗಳು ಹಾಗು ಮಹಿಳೆಯರು ಮತ್ತು ಪುರುಷರನ್ನು ಡಿಜಿಟಲ್ ಹಣಕಾಸು ಸೇರ್ಪಡೆಯೊಳಗೆ ತರುವ ಶತಮಾನದ ಶ್ರೇಷ್ಠ ಆವಿಷ್ಕಾರಗಳಲ್ಲಿ ಒಂದಾದ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಯ ಬಗ್ಗೆ ಶ್ರೀ ಪಾಂಡೆ ವಿವರಿಸಿದರು,
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಆಗ್ರಾದಲ್ಲಿ ಜಿ 20 ಸಬಲೀಕರಣ ಪ್ರಾರಂಭ ಸಭೆಯನ್ನು ಉದ್ದೇಶಿಸಿ ಮಾತನಾಡಿದರು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಅವರು ತಮ್ಮ ಮುಖ್ಯ ಭಾಷಣದಲ್ಲಿ "ನೀವು ಒಳ್ಳೆಯ ಭವಿಷ್ಯವನ್ನು ಹೊಂದಲು ಬಯಸಿದರೆ, ನೀವು ಭವಿಷ್ಯಕ್ಕೆ ಸಿದ್ಧರಾಗಿರಲು ಬಯಸಿದರೆ, ಮಹಿಳೆಯರು ಸಂವಾದದ ಕೇಂದ್ರವಾಗುವುದನ್ನು ಮತ್ತು ಮಹಿಳೆಯರು ನಿಮ್ಮ ನಿರ್ಧಾರಗಳ ಕೇಂದ್ರವಾಗುವುದನ್ನು ಖಚಿತಪಡಿಸಿಕೊಳ್ಳಿ" ಎಂದು ಕರೆ ನೀಡಿದರು.
ಭಾರತದ ಜಿ-20 ಅಧ್ಯಕ್ಷತೆಯು ಇತಿಹಾಸದಲ್ಲಿ ಒಂದು ಅತ್ಯಮೂಲ್ಯ ಸಂದರ್ಭವಾಗಿದೆ ಎಂದು ಅವರು ಹೇಳಿದರು. ಎಲ್ಲರ ಯೋಗಕ್ಷೇಮಕ್ಕಾಗಿ ಪ್ರಾಯೋಗಿಕ ಜಾಗತಿಕ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಭಾರತವು ಪ್ರಮುಖ ಪಾತ್ರವನ್ನು ವಹಿಸಲು ಉತ್ಸುಕವಾಗಿದೆ ಮತ್ತು ಹಾಗೆ ಮಾಡುವಲ್ಲಿ 'ವಸುಧೈವ ಕುಟುಂಬಕಂ' ('ಜಗತ್ತು ಒಂದು ಕುಟುಂಬ') ನಿಜವಾದ ಮನೋಭಾವವನ್ನು ಪ್ರಕಟಿಸುತ್ತದೆ ಎಂದು ಅವರು ಹೇಳಿದರು. ಸಚಿವರು ವಿಶೇಷವಾಗಿ ಭಾರತದ ಸ್ವಸಹಾಯ ಗುಂಪುಗಳ ಬೆಳವಣಿಗೆ ಕಥೆಯನ್ನು ಒತ್ತಿಹೇಳಿದರು, ತಳಮಟ್ಟದಲ್ಲಿ ಮಹಿಳಾ ನಾಯಕತ್ವದ ಪ್ರಾಮುಖ್ಯ ಮತ್ತು ಪ್ರತಿ ಮಹಿಳೆಗೆ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಲಭ್ಯತೆಯನ್ನು ಖಾತ್ರಿಪಡಿಸುವ ಪ್ರಯತ್ನಗಳನ್ನು ಅವರು ಎತ್ತಿ ತೋರಿಸಿದರು. ಅದಲ್ಲದೆ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಲಿಂಗ ಸೇರ್ಪಡೆ ನಿಧಿ, ಪ್ರತಿ ಮನೆಗೆ ಶೌಚಾಲಯಗಳ ನಿರ್ಮಾಣ ಮತ್ತು ಮುಟ್ಟಿನ ನೈರ್ಮಲ್ಯ ಶಿಷ್ಟಾಚಾರ ಪರಿಚಯದ ಮೂಲಕ ಭಾರತದಲ್ಲಿ ಲಿಂಗ ಸಮಾನತೆಗಾಗಿ ನೀಡುತ್ತಿರುವ ಒತ್ತು ಕುರಿತು ಅವರು ಉಲ್ಲೇಖಿಸಿದರು.
ಜಿ-20 ಶೆರ್ಪಾ ಶ್ರೀ ಅಮಿತಾಬ್ ಕಾಂತ್ ಅವರು ಜಿ20 ಎಂಪವರ್ ಆರಂಭದ ಸಭೆಯಲ್ಲಿ ವಿಶೇಷ ಭಾಷಣ ಮಾಡಿದರು.
ಜಿ-20 ಶೆರ್ಪಾ ಶ್ರೀ ಅಮಿತಾಭ್ ಕಾಂತ್ ತಮ್ಮ ವಿಶೇಷ ಭಾಷಣದಲ್ಲಿ, ಆರ್ಥಿಕ ಹಿಂಜರಿತ, ಹವಾಮಾನ ಬದಲಾವಣೆ ಮತ್ತು ಹವಾಮಾನ ಹಣಕಾಸಿನ ಅಗತ್ಯ ಮತ್ತಿತರ ಹಲವಾರು ಸವಾಲುಗಳನ್ನು ಜಗತ್ತು ಎದುರಿಸುತ್ತಿರುವ ಸಂದರ್ಭದಲ್ಲಿ ಭಾರತವು ಜಿ-20 ಅಧ್ಯಕ್ಷ ಸ್ಥಾನವನ್ನು ಹೊಂದಿರುವ ಬಗ್ಗೆ ಮಾತನಾಡಿದರು. ಭಾರತದ ಜಿ-20 ಅಧ್ಯಕ್ಷತೆಯು ಅಂತರ್ಗತ, ನಿರ್ಣಾಯಕ, ಫಲಿತಾಂಶ-ಆಧಾರಿತ ಮತ್ತು ಕಾರ್ಯ-ಆಧಾರಿತವಾಗಿರುತ್ತದೆ ಎಂಬ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ಅವರು ಪ್ರಮುಖವಾಗಿ ವಿವರಿಸಿದರು. ಭಾರತವು ತನ್ನ ಬೆಳವಣಿಗೆಯ ದರವನ್ನು ಇನ್ನಷ್ಟು ಹೆಚ್ಚಿಸಲು, ಮಹಿಳೆಯರ ತಲಾ ಆದಾಯವನ್ನು ಹೆಚ್ಚಿಸುವುದು ಮತ್ತು ಅವರನ್ನು ನಾಯಕತ್ವದ ಸ್ಥಾನಗಳಲ್ಲಿ ಇರಿಸುವುದು ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು. ಜನ್ ಧನ್ ಯೋಜನೆ, ಪ್ರಧಾನ ಮಂತ್ರಿ ಮುದ್ರಾ ಯೋಜನೆ ಮತ್ತು ಸ್ವಸಹಾಯ ಗುಂಪುಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಇತ್ತೀಚಿನ ಬಜೆಟ್ ನಿಬಂಧನೆಗಳ ಮೂಲಕ ಮಹಿಳಾ ಸಬಲೀಕರಣಕ್ಕಾಗಿ ಭಾರತವು ಕೈಗೊಂಡ ವಿವಿಧ ಉಪಕ್ರಮಗಳನ್ನು ಶ್ರೀ ಕಾಂತ್ ಒತ್ತಿ ಹೇಳಿದರು. ಜಿ-20 ಎಂಪವರ್ ಉಪಕ್ರಮದ ಶಿಫಾರಸುಗಳು ನಾಯಕರ ಮಾತುಕತೆಯಲ್ಲಿ ಸ್ಥಾನವನ್ನು ಕಂಡುಕೊಳ್ಳುತ್ತರೆ ಮತ್ತು ಭಾರತದ ಮಹತ್ವಾಕಾಂಕ್ಷೆಯ ಫಲಿತಾಂಶಗಳೊಂದಿಗೆ ಪ್ರತಿಧ್ವನಿಸುತ್ತವೆ ಎಂದು ಅವರು ಹೇಳಿದರು.
ಜಿ 20 ಎಂಪವರ್‌ನ ಅಧ್ಯಕ್ಷೆ ಡಾ. ಸಂಗೀತಾ ರೆಡ್ಡಿ ಉದ್ಯಮಶೀಲತೆ, ನಾಯಕತ್ವ ಮತ್ತು ಶಿಕ್ಷಣದ ಮೂಲಕ ಮಹಿಳಾ ಪ್ರಗತಿ ಕಾರ್ಯಸೂಚಿಯನ್ನು ಸಂಯೋಜಿಸುವ ಕಲ್ಪನೆಯ ಬಗ್ಗೆ ಮಾತನಾಡಿದರು. ಡಿಜಿಟಲ್ ಸೇರ್ಪಡೆಯನ್ನು ಬಳಸಿಕೊಂಡು, ಜಿ20 ಎಂಪವರ್ ಇದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ ಮತ್ತು ಡಿಜಿಟಲ್ ಕೌಶಲ್ಯ ಮತ್ತು ಹರಿವಿನ ಮೂಲಕ ಮಹಿಳಾ ನಾಯಕತ್ವವನ್ನು ಹೆಚ್ಚಿಸುತ್ತದೆ ಎಂದರು. ಜಾಗತಿಕ ಮಹಿಳಾ ಸಬಲೀಕರಣದ ಕಾರ್ಯಸೂಚಿಯನ್ನು ಚಾಲನೆ ಮಾಡುವ ಭಾರತ-ನೇತೃತ್ವದ ಎರಡು ವೇದಿಕೆಗಳ ಬಗ್ಗೆ ಅವರು ಪ್ರಸ್ತಾಪಿಸಿದರು. ಮೊದಲನೆಯದಾಗಿ, ಭಾರತ ಸರ್ಕಾರ, ನಾಸ್ಕಾಂ ಫೌಂಡೇಶನ್ ಮತ್ತು ಇತರರು ಅಭಿವೃದ್ಧಿಪಡಿಸಿದ ಡಿಜಿಟಲ್ ಸಾಕ್ಷರತೆ ವೇದಿಕೆ. ಇದರಲ್ಲಿ ಭವಿಷ್ಯದ ಕೌಶಲ್ಯಕ್ಕಾಗಿ ಭಾರತ ಮತ್ತು ಪ್ರಪಂಚದಲ್ಲಿ ಬಳಸಲು ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಲಾಗಿದೆ. ಎರಡನೆಯದಾಗಿ, ನೀತಿ ಆಯೋಗದ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿರುವ ಮಹಿಳೆಯರಿಗಾಗಿ ಮಾರ್ಗದರ್ಶನ ವೇದಿಕೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.
'ಬಿಲಿಯನೇರ್‌ನ ಹೊಸ ವ್ಯಾಖ್ಯಾನವು ಶತಕೋಟಿ ಗಳಿಸುವವನಲ್ಲ, ಬದಲಿಗೆ ಶತಕೋಟಿ ಜೀವಗಳನ್ನು ತಲುಪುವ ವ್ಯಕ್ತಿ' ಎಂದು ಹೇಳಿದ ಡಾ. ರೆಡ್ಡಿ ಮಾತು ಮುಗಿಸಿದರು.
*****
(Release ID: 1898593)
Visitor Counter : 281