ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಹಣಕಾಸು ವರ್ಷ 2023-24 ಕ್ಕೆ ರೂ. 3397.32 ಕೋಟಿಗಳ ಬಜೆಟ್ ಹಂಚಿಕೆಯನ್ನು ಪಡೆದಿದೆ, ಇದು ಹಣಕಾಸು ವರ್ಷ 2022-23 ಕ್ಕಿಂತ 11% ರಷ್ಟು ಹೆಚ್ಚಳವಾಗಿದೆ
ಖೇಲೋ ಇಂಡಿಯಾದ ಬಜೆಟ್ ವೆಚ್ಚ ಪ್ರಸ್ತಾವನೆಯಲ್ಲಿ ಗಣನೀಯ ಹೆಚ್ಚಳ (ರೂ. 1000 ಕೋಟಿ)
ಪ್ರಧಾನಮಂತ್ರಿಯವರು ತಳಮಟ್ಟದ ಪ್ರತಿಭೆ ಗುರುತಿಸುವಿಕೆ, ಮೂಲಸೌಕರ್ಯ ನಿರ್ಮಾಣ, ಗಣ್ಯ ಕ್ರೀಡಾಪಟುಗಳಿಗೆ ಬೆಂಬಲ ಮತ್ತು ದೂರದ ಪ್ರದೇಶಗಳ ಮಹಿಳೆಯರು, ದಿವ್ಯಾಂಗರು ಮತ್ತು ಯುವಜನರಿಗೆ ಸಮಾನ ಅವಕಾಶಗಳನ್ನು ಒದಗಿಸುವ ಒಟ್ಟಾರೆ ಕ್ರೀಡಾ ಸಂಸ್ಕೃತಿಯ ವ್ಯವಸ್ಥೆಯನ್ನು ಸೃಷ್ಟಿಸಲು ಅಭೂತಪೂರ್ವ ಗಮನ ಕೇಂದ್ರೀಕರಿಸಿದ್ದಾರೆ: ಕೇಂದ್ರ ಕ್ರೀಡೆ ಮತ್ತು ಯುವ ವ್ಯವಹಾರಗಳ ಸಚಿವ ಶ್ರೀ ಅನುರಾಗ್ ಠಾಕೂರ್.
Posted On:
02 FEB 2023 2:49PM by PIB Bengaluru
ಪ್ರಧಾನಮಂತ್ರಿಯವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತ ಸರ್ಕಾರವು 360-ಡಿಗ್ರಿ ಬೆಂಬಲದ ಮೂಲಕ ದೇಶದ ಒಟ್ಟಾರೆ ಪರಿಸರ ವ್ಯವಸ್ಥೆಗೆ ಪೂರಕವಾಗಿ ಕ್ರೀಡೆ ಮತ್ತು ಯುವ ವ್ಯವಹಾರಗಳನ್ನು ಪ್ರಮುಖ ಹಂತಕ್ಕೆ ತಂದಿದೆ. ಹೀಗಾಗಿ, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಬಜೆಟ್ ಹಂಚಿಕೆಯು ಇತ್ತೀಚೆಗಿನ ವರ್ಷಗಳಲ್ಲಿ ಹಲವಾರು ಪಟ್ಟು ಹೆಚ್ಚಳವನ್ನು ಕಂಡಿದೆ, 2004-05ರ ಹಣಕಾಸು ವರ್ಷದಲ್ಲಿದ್ದ ಕೇವಲ ರೂ. 466 ಕೋಟಿಯಿಂದ ಹಣಕಾಸು ವರ್ಷ2023-24ಕ್ಕೆ ಅದು ರೂ.3397.32 ಕೋಟಿಯಷ್ಟಾಗಿದೆ.
ಹಣಕಾಸು ವರ್ಷ 2022-23ಕ್ಕೆ ಹೋಲಿಸಿದರೆ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯಕ್ಕೆ ಬಜೆಟ್ ಹಂಚಿಕೆಯನ್ನು 11% ರಷ್ಟು ಹೆಚ್ಚಿಸಲಾಗಿದೆ. 2010 ರಲ್ಲಿ ಭಾರತದಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟ ನಡೆದ ನಂತರದ ವರ್ಷಗಳಲ್ಲಿ ಸಚಿವಾಲಯಕ್ಕೆ ಇದು ಅತಿ ಹೆಚ್ಚು ಬಜೆಟ್ ಹಂಚಿಕೆಯಾಗಿದೆ. ಈ ಬಾರಿಯ ಬಜೆಟ್ ಹಂಚಿಕೆಯು 2011-12 ರ ಬಜೆಟ್ ಗಿಂತ ಮೂರು ಪಟ್ಟು ಹೆಚ್ಚು ಮತ್ತು 2014-15 ರ ಬಜೆಟ್‌ಗಿಂತ ಎರಡು ಪಟ್ಟು ಹೆಚ್ಚಾಗಿದೆ.
ಬಜೆಟ್‌ನಲ್ಲಿ ಕ್ರೀಡಾ ಇಲಾಖೆಗೆ ಕಳೆದ ವರ್ಷದ ಹಂಚಿಕೆಯಲ್ಲಿ ರೂ. 2254 ಕೋಟಿ ಇತ್ತು, ಅದು ಈ ವರ್ಷ ರೂ. 2462.59 ಕೋಟಿಯಾಗಿದೆ ಮತ್ತು ಯುವ ವ್ಯವಹಾರಗಳ ಇಲಾಖೆಗೆ ಕಳೆದ ವರ್ಷದ ಹಂಚಿಕೆಯಲ್ಲಿ ರೂ. 808.60 ಕೋಟಿ ಇತ್ತು, ಅದು ಈ ವರ್ಷ ರೂ. 934.73 ಕೋಟಿಯಾಗಿದೆ.
ಈ ವರ್ಷ ಬಜೆಟ್ ವೆಚ್ಚದಲ್ಲಿ ಗಣನೀಯ ಹೆಚ್ಚಳ ಹೊಂದಿರುವ ಸಚಿವಾಲಯದ ಪ್ರಮುಖ ಯೋಜನೆಗಳು/ಸಂಸ್ಥೆಗಳೆಂದರೆ ಖೇಲೋ ಇಂಡಿಯಾ (ರೂ. 1000 ಕೋಟಿ), ಭಾರತೀಯ ಕ್ರೀಡಾ ಪ್ರಾಧಿಕಾರ (ರೂ. 785.52 ಕೋಟಿ), ನೆಹರು ಯುವ ಕೇಂದ್ರ ಸಂಘಟನೆ (ರೂ. 401.49 ಕೋಟಿ), ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು (ರೂ. 325 ಕೋಟಿ) ಮತ್ತು ರಾಷ್ಟ್ರೀಯ ಸೇವಾ ಯೋಜನೆ (ರೂ. 325 ಕೋಟಿ) ಗಳಾಗಿವೆ.
ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಕೇಂದ್ರ ಬಜೆಟ್ 2023-24 ಅನ್ನು ಶ್ಲಾಘಿಸಿದರು ಮತ್ತು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. “ಅವರು ಕ್ರೀಡೆ ಮತ್ತು ಯುವ ವಲಯಕ್ಕೆ ಆದ್ಯತೆ ನೀಡುತ್ತಿದ್ದಾರೆ” ಎಂದು ಶ್ರೀ ಅನುರಾಗ್ ಠಾಕೂರ್ ಅವರು ಹೇಳಿದರು. “ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದಲ್ಲಿ ಅಸ್ತಿತ್ವದಲ್ಲಿರುವ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪುನರುಜ್ಜೀವಗೊಳಿಸುವ ಅಗತ್ಯವನ್ನು ಗುರುತಿಸಿ, ಮೊದಲಿನಿಂದಲೂ ತಳಮಟ್ಟದ ಬಗ್ಗೆ ಅಭೂತಪೂರ್ವ ಗಮನವನ್ನು ನೀಡಿದ್ದಾರೆ. ತಳಮಟ್ಟದ ಮೂಲ ಪ್ರತಿಭೆ ಗುರುತಿಸುವಿಕೆ, ಮೂಲಸೌಕರ್ಯ ನಿರ್ಮಾಣ, ಗಣ್ಯ ಕ್ರೀಡಾಪಟುಗಳಿಗೆ ಬೆಂಬಲ ಮತ್ತು ಒಟ್ಟಾರೆ ಕ್ರೀಡಾ ಸಂಸ್ಕೃತಿಯನ್ನು ರೂಪಿಸುವುದು ಮತ್ತು ರಚಿಸುವುದು, ಇದು ಮಹಿಳೆಯರಿಗೆ, ದಿವ್ಯಾಂಗರಿಗೆ ಮತ್ತು ದೂರದ ಪ್ರದೇಶಗಳ ಯುವಜನರಿಗೆ ಸಮಾನ ಅವಕಾಶಗಳನ್ನು ಒದಗಿಸುವುದು ಇತ್ಯಾದಿ ಸೌಲಭ್ಯ-ಸೌಕರ್ಯಗಳು ಇದರಲ್ಲಿ ಸೇರಿವೆ. ಇದರ ಫಲಿತಾಂಶವು ಖೇಲೋ ಇಂಡಿಯಾ ಯೋಜನೆ, ಫಿಟ್ ಇಂಡಿಯಾ ಮೂವ್‌ಮೆಂಟ್, ಟಾರ್ಗೆಟ್ ಒಲಿಂಪಿಕ್ ಪೋಡಿಯಂ, ಮಿಷನ್ ಒಲಿಂಪಿಕ್ ಸೆಲ್ ಮತ್ತು ಮುಂತಾದ ವಿಶಿಷ್ಟ ಯೋಜನೆಗಳು ಮತ್ತು ಕಾರ್ಯಕ್ರಮಗಳ ಪರಿಚಯವಾಗಿದೆ. ಈ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿವೆ ಮತ್ತು ದೇಶದಾದ್ಯಂತ ವ್ಯಾಪಕವಾಗಿ ಮೆಚ್ಚುಗೆ ಪಡೆದಿವೆ. ಪ್ರಧಾನಮಂತ್ರಿಯವರು ಕ್ರೀಡೆಗೆ ಹೊಸ ಚೈತನ್ಯವನ್ನು ತುಂಬುವುದರೊಂದಿಗೆ, 2014 ರಿಂದ ಭಾರತದ ಕ್ರೀಡಾ ಇತಿಹಾಸದಲ್ಲಿ ಹೆಚ್ಚಿನ ಸಂಖ್ಯೆಯ ಐತಿಹಾಸಿಕ ಪ್ರಥಮಗಳು ದಾಖಲಾಗಿವೆ.
ಮುಂಬರುವ ವರ್ಷದಲ್ಲಿ ಕೇಂದ್ರ ಯುವ ವ್ಯವಹಾರಗಳ ಇಲಾಖೆಯ ವಿಶೇಷ ಉಪಕ್ರಮಗಳಲ್ಲಿ ಯುವ ನಾಯಕತ್ವ ಪೋರ್ಟಲ್ ಅನ್ನು ನಿರ್ಮಿಸುವುದು ಕೂಡಾ ಒಂದಾಗಿದೆ. ಯುವಕರನ್ನು ತಲುಪಲು ಮತ್ತು ಯುವಕರ ನಾಯಕತ್ವದ ಕೌಶಲ್ಯಗಳನ್ನು ಸುಧಾರಿಸಲು ಮತ್ತು ಸಮಾಜದ ಬಗ್ಗೆ ಹೆಚ್ಚಿನ ಜವಾಬ್ದಾರಿಯನ್ನು ಮೂಡಿಸಲು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಈ ಜಾಲತಾಣ ಸಹಕಾರಿಯಾಗುತ್ತದೆ. ಸಮುದಾಯದ ಜೀವನದ ಗುಣಮಟ್ಟವನ್ನು ಸುಧಾರಿಸುವ ಮತ್ತು ಅವರ ಆದಾಯ-ಗಳಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವ ಯಾವುದೇ ಚಟುವಟಿಕೆಗಳಿಗೆ ದಾಖಲಾಗಲು ನೋಂದಾವಣೆಯಾಗಲು ಬಯಸುವ ಯುವಜನರಿಗಾಗಿ ಪೋರ್ಟಲ್ ಅನ್ನು ವಿನ್ಯಾಸಗೊಳಿಸಲಾಗಿದೆ. ಡಿಜಿಟಲ್ ಸಾಕ್ಷರತೆ ಮತ್ತು ಆರ್ಥಿಕ ಸಾಕ್ಷರತೆಯ ಮೇಲೆ ವಿಶೇಷ ಗಮನಹರಿಸುವ ಮೂಲಕ ದೇಶದ ಯುವಕರನ್ನು ವಿವಿಧ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು, ಸಣ್ಣ ಉದ್ಯಮಗಳು, ರೈತ-ಉತ್ಪಾದಕರ ಗುಂಪುಗಳು ಮತ್ತು ಸಹಕಾರ ಸಂಘಗಳೊಂದಿಗೆ ಸಂಪರ್ಕಿಸಲು ಇದು ಸಹಾಯ ಮಾಡುತ್ತದೆ. ಅಂತಹ ವ್ಯವಸ್ಥೆಯು ಯುವಕರಿಗೆ ಅನುಭವದ ಕಲಿಕೆಯನ್ನು ಒದಗಿಸುತ್ತದೆ, ಅವರ ನಾಯಕತ್ವ ಹಾಗೂ ಕೌಶಲ್ಯಗಳನ್ನು ಸುಧಾರಿಸುತ್ತದೆ ಮತ್ತು ಅದೇ ಸಮಯದಲ್ಲಿ, ಸ್ಥಳೀಯ ಸಮುದಾಯಗಳ ಉತ್ಪಾದಕತೆಯನ್ನು ಸುಧಾರಿಸುತ್ತದೆ. ಇದು ಭಾರತವನ್ನು ಸಮೃದ್ಧ ಮತ್ತು ಕಾಳಜಿಯುಳ್ಳ ರಾಷ್ಟ್ರವಾಗಿ ರೂಪಿಸುವ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ. ಯೋಜನೆಯು ಒಂದು ವರ್ಷದೊಳಗೆ ಪೂರ್ಣಗೊಳ್ಳುವ ಮತ್ತು ಈ ನೂತನ ಪೋರ್ಟಲ್ ಅನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.
ಸಚಿವಾಲಯದ ಬಜೆಟ್‌ನಲ್ಲಿನ ಸೂಚಿಸಿದ ರೂ. 935.68 ಕೋಟಿ (ಬಜೆಟ್‌ನ 27%) ಹೆಚ್ಚುವರಿ ಹಣಕಾಸಿನಲ್ಲಿ ಬಂಡವಾಳದ ಆಸ್ತಿ(ಸಂಪತ್ತು)ಗಳ ರಚನೆಯ ಅನುದಾನವು ಕೂಡಾ ಒಳಗೊಂಡಿದೆ.
******
(Release ID: 1895872)
Visitor Counter : 345