ಹಣಕಾಸು ಸಚಿವಾಲಯ

ಕಡಿಮೆ ಕಾರ್ಬನ್ ಆರ್ಥಿಕತೆಯೆಡೆಗಿನ ಪರಿವರ್ತನೆಯನ್ನು ಸುಲಭಗೊಳಿಸಲಿರುವ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್; 2030 ರ ವೇಳೆಗೆ 5 ದಶಲಕ್ಷ ಮೆಟ್ರಿಕ್ ಟನ್ ವಾರ್ಷಿಕ ಉತ್ಪಾದನೆಯ ಗುರಿಯನ್ನು ಹೊಂದಿರುವ ಭಾರತ


ಇಂಧನ ಪರಿವರ್ತನೆ ಮತ್ತು ನೆಟ್ ಝಿರೊ ಉದ್ದೇಶಗಳ ಕಡೆಗೆ ಆದ್ಯತೆಯ ಬಂಡವಾಳ ಹೂಡಿಕೆಗೆ ಪ್ರಸ್ತಾವಿತ ರೂ. 35,000 ಕೋಟಿ ಹಂಚಿಕೆ

ಪರಿಸರ ಸುಸ್ಥಿತಿ ಮತ್ತು ಪ್ರತಿಕ್ರಿಯಾತ್ಮಕ ಕ್ರಿಯೆಗಳನ್ನು ಉತ್ತೇಜಿಸಲು ಹಸಿರು ಕ್ರೆಡಿಟ್ ಕಾರ್ಯಕ್ರಮವನ್ನು ಗುರುತಿಸಲಾಗಿದೆ

ಪರ್ಯಾಯ ರಸಗೊಬ್ಬರಗಳು ಮತ್ತು ರಾಸಾಯನಿಕ ಗೊಬ್ಬರಗಳ ಸಮತೋಲಿತ ಬಳಕೆಯನ್ನು ಉತ್ತೇಜಿಸಲಿರುವ ಪಿಎಂ-ಪ್ರಣಾಮ್

ಒಟ್ಟು ರೂ 10,000 ಕೋಟಿ ಹೂಡಿಕೆಯೊಂದಿಗೆ ಗೋಬರ್ಧನ್ ಯೋಜನೆಯಡಿಯಲ್ಲಿ 500 ಹೊಸ ‘ವೇಸ್ಟ್ ಟು ವೆಲ್ತ್’ ಸ್ಥಾವರಗಳನ್ನು ಸ್ಥಾಪಿಸಲು ಪ್ರಸ್ತಾಪ

ಜೌಗುಭೂಮಿ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವಲ್ಲಿ ಸ್ಥಳೀಯ ಸಮುದಾಯಗಳ ಮೌಲ್ಯಗಳನ್ನು ಉತ್ತೇಜಿಸಲಿರುವ ಅಮೃತ್ ಧರೋಹರ್ ಯೋಜನೆ

Posted On: 01 FEB 2023 1:04PM by PIB Bengaluru

“ಹಸಿರು ಕೈಗಾರಿಕೆ ಮತ್ತು ಆರ್ಥಿಕ ಪರಿವರ್ತನೆಗೆ ನಾಂದಿ ಹಾಡಲು 2070 ರ ವೇಳೆಗೆ 'ಪಂಚಾಮೃತ' ಮತ್ತು ನೆಟ್-ಝಿರೊ ಅಂದರೆ ಶೂನ್ಯ ಇಂಗಾಲದ ಹೊರಸೂಸುವಿಕೆ ಸಾಧಿಸುವತ್ತ ಭಾರತ ದೃಢವಾಗಿ ಮುಂದಡಿ ಇರಿಸಿದೆ" ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2023-24 ರ ಕೇಂದ್ರ ಬಜೆಟ್ ಅನ್ನು ಮಂಡಿಸುವಾಗ ಹೇಳಿದರು. ಪರಿಸರ ಪ್ರಜ್ಞೆಯುಳ್ಳ ಜೀವನಶೈಲಿಯ ಆಂದೋಲನವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ “ಲೈಫ್” ಅಥವಾ ಪರಿಸರಕ್ಕಾಗಿ ಜೀವನಶೈಲಿಯ ದೃಷ್ಟಿಕೋನದ ಬಗ್ಗೆ ಒತ್ತಿ ಹೇಳಿದ ಹಣಕಾಸು ಸಚಿವರು ಅಮೃತ ಕಾಲದಲ್ಲಿ ನಮಗೆ ಮಾರ್ಗದರ್ಶನ ನೀಡುವ ‘ಹಸಿರು ಅಭಿವೃದ್ಧಿ’ ಮೇಲೆ ಈ ಬಜೆಟ್ ನಮ್ಮ ಗಮನವನ್ನು ಕೇಂದ್ರೀಕರಿಸುತ್ತದೆ ಎಂದು ಹೇಳಿದರು.

ಹಸಿರು ಹೈಡ್ರೋಜೆನ್ ಮಿಷನ್

ಇತ್ತೀಚೆಗೆ ಘೋಷಿಸಲಾದ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅನ್ನು ಉಲ್ಲೇಖಿಸಿದ ವಿತ್ತ ಸಚಿವರು, ಆರ್ಥಿಕತೆಯನ್ನು ಕಡಿಮೆ ಇಂಗಾಲದ ತೀವ್ರತೆಗೆ ಪರಿವರ್ತಿಸಲು ಮತ್ತು ಪಳೆಯುಳಿಕೆ ಇಂಧನದ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲಿದೆ ಎಂದು ವಿವರಿಸಿದರು. "ಇದು ಉದಯೋನ್ಮುಖ ವಲಯದಲ್ಲಿ ದೇಶ, ತಂತ್ರಜ್ಞಾನ ಮತ್ತು ಮಾರುಕಟ್ಟೆ ನಾಯಕತ್ವವನ್ನು ಪಡೆದುಕೊಳ್ಳುವಂತೆ ಮಾಡುತ್ತದೆ", ಎಂದು ಕೂಡ ಅವರು ಹೇಳಿದರು.

2030 ರ ವೇಳೆಗೆ ವಾರ್ಷಿಕ ಉತ್ಪನ್ನವನ್ನು ಭಾರತ 5 ದಶಲಕ್ಷ ಮೆಟ್ರಿಕ್ ಟನ್ ಗೆ ತಲುಪುವ ಗುರಿಯನ್ನು ಹೊಂದಿದೆ ಎಂದು  ಶ್ರೀಮತಿ ಸೀತಾರಾಮನ್ ಘೋಷಿಸಿದರು

https://static.pib.gov.in/WriteReadData/userfiles/image/image001GYM9.jpg

ಇಂಧನ ಪರಿವರ್ತನೆ ಮತ್ತು ಶೇಖರಣಾ ಯೋಜನೆಗಳು

ಇಂಧನ ಪರಿವರ್ತನೆ ಮತ್ತು ನೆಟ್ ಝಿರೊ ಉದ್ದೇಶಗಳು ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಿಂದ ಇಂಧನ ಭದ್ರತೆಗೆ ಆದ್ಯತೆಯ ಬಂಡವಾಳ ಹೂಡಿಕೆಗಾಗಿ ರೂ 35,000 ಕೋಟಿ ಹಂಚಿಕೆ ಕುರಿತು ವಿತ್ತ ಸಚಿವರು ಪ್ರಸ್ತಾಪಿಸಿದರು.

4,000 ಮೆಗಾ ವ್ಯಾಟ್ ಸಾಮರ್ಥ್ಯದ ಬ್ಯಾಟರಿ ಇಂಧನ ಶೇಖರಣಾ ವ್ಯವಸ್ಥೆಗಳನ್ನು ಸಂಭಾವ್ಯ ಗ್ಯಾಪ್ ಫಂಡಿಂಗ್‌ನೊಂದಿಗೆ ಬೆಂಬಲಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದ್ದಾರೆ. "ಪಂಪ್ಡ್ ಶೇಖರಣಾ ಯೋಜನೆಗಳಿಗೆ ವಿಸ್ತೃತವಾದ ಚೌಕಟ್ಟನ್ನು ಸಹ ರೂಪಿಸಲಾಗುವುದು" ಎಂದು ಅವರು ಆರ್ಥಿಕತೆಯನ್ನು ಸಮರ್ಥನೀಯ ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಕ್ರಮಗಳನ್ನು ಘೋಷಿಸುವ ಸಂದರ್ಭದಲ್ಲಿ ಹೇಳಿದರು.

ನವೀಕರಿಸಬಹುದಾದ ಇಂಧನ ವಿಸರ್ಜನೆ

ರೂ. 8,300 ಕೋಟಿ ಕೇಂದ್ರದ ಬೆಂಬಲ ಸೇರಿದಂತೆ ರೂ. 20,700 ಕೋಟಿ ಹೂಡಿಕೆಯೊಂದಿಗೆ ಲಡಾಖ್‌ನಿಂದ 13 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಸ್ಥಳಾಂತರಿಸುವಿಕೆ ಮತ್ತು ಗ್ರಿಡ್ ಏಕೀಕರಣಕ್ಕಾಗಿ ಅಂತರ-ರಾಜ್ಯ ಪ್ರಸರಣ ವ್ಯವಸ್ಥೆಯನ್ನು ಪ್ರಸ್ತಾಪಿಸಲಾಗಿದೆ.

ಗ್ರೀನ್ ಕ್ರೆಡಿಟ್ ಕಾರ್ಯಕ್ರಮ

ಕಂಪನಿಗಳು, ವೈಯಕ್ತಿಕವಾಗಿ ಮತ್ತು ಸ್ಥಳೀಯ ಸಂಸ್ಥೆಗಳಿಂದ ಪರಿಸರ ಸಮರ್ಥನೀಯ ಮತ್ತು ಸ್ಪಂದನಾತ್ಮಕ ಕ್ರಮಗಳನ್ನು ಉತ್ತೇಜಿಸುವ ಮೂಲಕ ವರ್ತನೆಯಲ್ಲಿ ಬದಲಾವಣೆಯನ್ನು ಉತ್ತೇಜಿಸಲು ಪರಿಸರ (ರಕ್ಷಣೆ) ಕಾಯಿದೆಯಡಿಯಲ್ಲಿ ಹಸಿರು ಕ್ರೆಡಿಟ್ ಕಾರ್ಯಕ್ರಮವನ್ನು ಪರಿಗಣಿಸಲಾಗುವುದು ಎಂದು ಹಣಕಾಸು ಸಚಿವರು ಪ್ರಸ್ತಾಪಿಸಿದರು. "ಇದು ಅಂತಹ ಚಟುವಟಿಕೆಗಳಿಗೆ ಹೆಚ್ಚುವರಿ ಸಂಪನ್ಮೂಲಗಳನ್ನು ಸಜ್ಜುಗೊಳಿಸಲು ಸಹಾಯ ಮಾಡುತ್ತದೆ" ಎಂದು ಅವರು ತಿಳಿಸಿದರು.

ಪಿ ಎಂ ಪ್ರಣಾಮ್

ಪರ್ಯಾಯ ರಸಗೊಬ್ಬರಗಳು ಮತ್ತು ರಾಸಾಯನಿಕ ಗೊಬ್ಬರಗಳ ಸಮತೋಲಿತ ಬಳಕೆಯನ್ನು ಉತ್ತೇಜಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರೋತ್ಸಾಹಿಸಲು " ಭೂಮಿಯ ಪುನಶ್ಚೇತನ, ಜಾಗೃತಿ, ಪೋಷಣೆ ಮತ್ತು ಸುಧಾರಣೆಗಾಗಿ ಪ್ರಧಾನಮಂತ್ರಿ ಕಾರ್ಯಕ್ರಮ" ವನ್ನು ಪ್ರಾರಂಭಿಸಲಾಗುವುದು.

ಗೋಬರ್ಧನ್ ಯೋಜನೆ

 ಸುತ್ತುವರಿದ ಆರ್ಥಿಕತೆಯನ್ನು ಉತ್ತೇಜಿಸಲು ಗೋಬರ್ಧನ್ (ಗಾಲ್ವನೈಸಿಂಗ್ ಆರ್ಗಾನಿಕ್ ಬಯೊ ಅಗ್ರೊ ರಿಸೋರ್ಸ್ ಧನ್) ಯೋಜನೆಯಡಿಯಲ್ಲಿ 500 ಹೊಸ ‘ವೇಸ್ಟ್ ಟು ವೆಲ್ತ್’ ಸ್ಥಾವರಗಳ ಸ್ಥಾಪನೆಗೆ ಪ್ರಸ್ತಾಪಿಸಲಾಗಿದೆ. ಇವುಗಳಲ್ಲಿ 200 ಸಂಕುಚಿತ ಜೈವಿಕ ಅನಿಲ (CBG) ಸ್ಥಾವರಗಳು ಸೇರಿವೆ, ಇದರಲ್ಲಿ ಒಟ್ಟು ರೂ. 10,000 ಕೋಟಿ ಹೂಡಿಕೆಯಲ್ಲಿ ನಗರ ಪ್ರದೇಶಗಳಲ್ಲಿ 75 ಸ್ಥಾವರಗಳು ಮತ್ತು 300 ಸಮುದಾಯ ಅಥವಾ ಕ್ಲಸ್ಟರ್ ಆಧಾರಿತ ಘಟಕಗಳು ಸೇರಿವೆ.

ಮಿಶ್ರಿತ ಸಂಕುಚಿತ ನೈಸರ್ಗಿಕ ಅನಿಲದ ಮೇಲಿನ ತೆರಿಗೆಗಳ ಪುನರಾವರ್ತನೆಯನ್ನು ತಪ್ಪಿಸಲು, ಅದರಲ್ಲಿರುವ GST-ಪಾವತಿಸಿದ CBG ಮೇಲಿನ ಅಬಕಾರಿ ಸುಂಕದ ವಿನಾಯಿತಿಯನ್ನು ಸಹ ಪ್ರಸ್ತಾಪಿಸಲಾಗಿದೆ.

ನೈಸರ್ಗಿಕ ಮತ್ತು ಜೈವಿಕ ಅನಿಲವನ್ನು ಮಾರಾಟ ಮಾಡುವ ಎಲ್ಲಾ ಸಂಸ್ಥೆಗಳಿಗೆ ಸೂಕ್ತ ಸಮಯದಲ್ಲಿ ಶೇಕಡಾ 5 ರಷ್ಟು CBG ಆದೇಶವನ್ನು ಪರಿಚಯಿಸುವ ಪ್ರಸ್ತಾಪವನ್ನು ಕೂಡಾ ವಿತ್ತ ಸಚಿವರು ಘೋಷಿಸಿದರು. "ಜೈವಿಕ-ದ್ರವ್ಯ ಸಂಗ್ರಹಣೆ ಮತ್ತು ಜೈವಿಕ ಗೊಬ್ಬರ ವಿತರಣೆಗಾಗಿ, ಸೂಕ್ತ ಹಣಕಾಸಿನ ಬೆಂಬಲವನ್ನು ಒದಗಿಸಲಾಗುವುದು" ಎಂದು ಅವರು ಹೇಳಿದರು.

ಭಾರತೀಯ ನೈಸರ್ಗಿಕ ಕೃಷಿ ಜೈವಿಕ-ಮೂಲಗಳ ಸಂಪನ್ಮೂಲ ಕೇಂದ್ರ

  “ಮುಂದಿನ 3 ವರ್ಷಗಳಲ್ಲಿ, ನಾವು 1 ಕೋಟಿ ರೈತರು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳಲು ಅನುಕೂಲ ಮಾಡಿಕೊಡುತ್ತೇವೆ.” 10,000 ಜೈವಿಕ ಮೂಲದ ಸಂಪನ್ಮೂಲ ಕೇಂದ್ರಗಳನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಪ್ರಕಟಿಸಿದ ಹಣಕಾಸು ಸಚಿವರು, ಆ ಮೂಲಕ ರಾಷ್ಟ್ರೀಯ ಮಟ್ಟದ ಸೂಕ್ಷ್ಮ ರಸಗೊಬ್ಬರ ವಿತರಣೆ ಮತ್ತು ಕೀಟನಾಶಕ ಉತ್ಪಾದನಾ ಜಾಲವನ್ನು ಸೃಷ್ಟಿಸಲಾಗುವುದು ಎಂದರು.

ಎಂ ಐ ಎಸ್ ಹೆಚ್ ಟಿ ಐ (ಮಿಶ್ಟಿ)

ಅರಣ್ಯೀಕರಣದಲ್ಲಿ ಭಾರತ ಯಶಸ್ಸು ಸಾಧಿಸಿದ ಹಿನ್ನೆಲೆಯಲ್ಲಿ  ದಡದಲ್ಲಿರುವ ವಾಸಸ್ಥಾನಗಳು ಮತ್ತು ಸ್ಪಷ್ಟವಾದ ಆದಾಯಕ್ಕಾಗಿ   ಕರಾವಳಿಯುದ್ದಕ್ಕೂ ಮತ್ತು ಉಪ್ಪಿನ ಸಮತಟ್ಟಾದ ಭೂಮಿಯಲ್ಲಿ, ಸಾಧ್ಯವಿರುವ ಯಾವುದೇ ಪ್ರದೇಶದಲ್ಲಿ ತೋಟ ನಿರ್ಮಾಣಕ್ಕಾಗಿ MGNREGS, CAMPA ನಿಧಿ ಮತ್ತು ಇತರ ಮೂಲಗಳ ಸಂಘಟಿತ ನಿಧಿ ಮೂಲಕ ಮ್ಯಾಂಗ್ರೋವ್ ಉಪಕ್ರಮಗಳನ್ನು  ಕೈಗೊಳ್ಳಲಾಗುವುದು ಎಂದು ವಿತ್ತ ಸಚಿವರು ಘೋಷಿಸಿದರು.  

 ಅಮೃತ ಧರೋಹರ್

ಜೌಗು ಭೂಮಿ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವಲ್ಲಿ ಸ್ಥಳೀಯ ಸಮುದಾಯಗಳ ಪ್ರಾಮುಖ್ಯವನ್ನು ಎತ್ತಿ ತೋರಿದ, ವಿತ್ತ ಸಚಿವರು ಅವರ ವಿಶಿಷ್ಟ ಸಂರಕ್ಷಣಾ ಮೌಲ್ಯಗಳನ್ನು ಉತ್ತೇಜಿಸುವ ಅಮೃತ್ ಧರೋಹರ್ ಯೋಜನೆಯನ್ನು ಸಹ ಘೋಷಿಸಿದರು. ಮುಂದಿನ ಮೂರು ವರ್ಷಗಳಲ್ಲಿ ಜೌಗು ಭೂಮಿ ಸೂಕ್ತ ಬಳಕೆಯನ್ನು ಉತ್ತೇಜಿಸಲು ಮತ್ತು ಜೈವಿಕ ವೈವಿಧ್ಯ, ಕಾರ್ಬನ್ ಸ್ಟಾಕ್, ಪರಿಸರ-ಪ್ರವಾಸೋದ್ಯಮ ಅವಕಾಶಗಳು ಮತ್ತು ಸ್ಥಳೀಯ ಸಮುದಾಯಗಳಿಗೆ ಆದಾಯವನ್ನು ಹೆಚ್ಚಿಸಲು ಈ ಯೋಜನೆಯನ್ನು ಜಾರಿಗೆ ತರಲಾಗುವುದು.

*****(Release ID: 1895604) Visitor Counter : 232