ಹಣಕಾಸು ಸಚಿವಾಲಯ
azadi ka amrit mahotsav

2022ರ ಆರ್ಥಿಕ ವರ್ಷದಲ್ಲಿ ಸೇವಾ ವಲಯವು ವರ್ಷದಿಂದ ವರ್ಷಕ್ಕೆ ಶೇ.8.4ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ


2023ರ ಹಣಕಾಸು ವರ್ಷದಲ್ಲಿ ಸೇವಾ ವಲಯವು ಶೇ.9.1ರಷ್ಟು ಬೆಳವಣಿಗೆಯನ್ನು ಕಾಣಲಿದೆ

ಸೇವಾ ವಲಯದಲ್ಲಿ 7.1 ಬಿಲಿಯನ್ ಅಮೆರಿಕನ್ ಡಾಲರ್ ಎಫ್.ಡಿ.ಐ ಈಕ್ವಿಟಿ ಒಳಹರಿವು ಬರಲಿದೆ

ಈ ವಲಯಕ್ಕೆ ಬ್ಯಾಂಕ್ ಸಾಲವು 21.3%ರಷ್ಟು ಹೆಚ್ಚಿದೆ

ಐಟಿ-ಬಿಪಿಎಂ ಆದಾಯ ಶೇ.15.5ರಷ್ಟು ಏರಿಕೆಯನ್ನು ದಾಖಲಿಸಿದೆ

ಜಿಇಎಂ ಮೂಲಕ ವಾರ್ಷಿಕ ಸಂಗ್ರಹಣೆ 1 ಲಕ್ಷ ಕೋಟಿ ರೂ

2021ನೇ ಸಾಲಿನ ವೈದ್ಯಕೀಯ ಪ್ರವಾಸೋದ್ಯಮ ಸೂಚ್ಯಂಕದಲ್ಲಿ ವಿಶ್ವದ ಅಗ್ರ 46 ದೇಶಗಳ ಪೈಕಿ ಭಾರತಕ್ಕೆ 10ನೇ ಸ್ಥಾನ

ವಿಶ್ವದ ಸರಾಸರಿ ಶೇಖಡಾ 64ಕ್ಕೆ ಹೋಲಿಸಿದರೆ ಭಾರತದ ಫಿನ್ ಟೆಕ್ ಅಳವಡಿಕೆ ದರ ಶೇ. 87ರಷ್ಟಿದೆ

Posted On: 31 JAN 2023 1:17PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ 2022-23ರ ಆರ್ಥಿಕ ಸಮೀಕ್ಷೆಯು, ಹಿಂದಿನ ಹಣಕಾಸು ವರ್ಷದಲ್ಲಿ 7.8% ಕುಗ್ಗುವಿಕೆಗೆ ಹೋಲಿಸಿದರೆ ಸೇವಾ ವಲಯವು ವರ್ಷದಿಂದ ವರ್ಷಕ್ಕೆ (ವೈಒವೈ) 8.4% ರಷ್ಟು ಬೆಳೆಯುತ್ತಿದೆ ಎಂದು ಎತ್ತಿ ತೋರಿಸಿದೆ. ಈ ತ್ವರಿತ ಚೇತರಿಕೆಯು ಸಂಪರ್ಕ-ಕೇಂದ್ರಿತ ಸೇವೆಗಳ ಉಪ-ವಲಯದಲ್ಲಿನ ಬೆಳವಣಿಗೆಯಿಂದ ಪ್ರೇರಿಪಿಸಲ್ಪಟ್ಟಿದೆ. ಇದು ಅವಿರತ ಬೇಡಿಕೆ, ಚಲನಶೀಲತಾ ನಿರ್ಬಂಧದ ಸುಲಭತೆ ಮತ್ತು ಸಾರ್ವತ್ರಿಕ ಲಸಿಕಾ ವ್ಯಾಪ್ತಿಯಿಂದ ಪ್ರೇರಿತವಾದ ಶೇಖಡಾ 16ರ ಅನುಕ್ರಮ ಬೆಳವಣಿಗೆಯನ್ನು ದಾಖಲಿಸಿದೆ. "ಭಾರತದ ಸೇವಾ ವಲಯವು ಸ್ಪೂರ್ತಿ ಮತ್ತು ಶಕ್ತಿಯ ಮೂಲವಾಗಿದ್ದು ಹೆಚ್ಚಿನದನ್ನು ಪಡೆಯಲು ಸಜ್ಜಾಗಿದೆ. ರಫ್ತು ಸಾಮರ್ಥ್ಯದೊಂದಿಗೆ ಕಡಿಮೆಯಿಂದ ಹೆಚ್ಚಿನ ಮೌಲ್ಯವರ್ಧಿತ ಚಟುವಟಿಕೆಗಳವರೆಗೆ, ಈ ವಲಯವು ಉದ್ಯೋಗ ಮತ್ತು ವಿದೇಶಿ ವಿನಿಮಯವನ್ನು ಸೃಷ್ಟಿಸಲು ಮತ್ತು ಭಾರತದ ಬಾಹ್ಯ ಸ್ಥಿರತೆಗೆ ಕೊಡುಗೆ ನೀಡಲು ಸಾಕಷ್ಟು ಅವಕಾಶವನ್ನು ಹೊಂದಿದೆ "ಎಂದು ಈ ಸಮೀಕ್ಷೆಯಲ್ಲಿ ತಿಳಿಸಲಾಗಿದೆ.

ಮೊದಲ ಮುಂಗಡ ಅಂದಾಜಿನ ಪ್ರಕಾರ, ಸೇವಾ ವಲಯದಲ್ಲಿ ಒಟ್ಟು ಮೌಲ್ಯವರ್ಧನೆ (ಜಿವಿಎ) 2023ರ ಹಣಕಾಸು ವರ್ಷದಲ್ಲಿ 9.1%ರಷ್ಟು ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ, ಇದು ಸಂಪರ್ಕ-ತೀವ್ರ ಸೇವಾ ವಲಯದಲ್ಲಿ 13.7% ಬೆಳವಣಿಗೆಯಿಂದ ಪ್ರೇರಿತವಾಗಿದೆ. ಚಿಲ್ಲರೆ ಹಣದುಬ್ಬರದ ಒಟ್ಟಾರೆ ಸರಾಗಗೊಳಿಸುವಿಕೆಯ ನಂತರ ಪಿಎಂಐ ಸೇವೆಗಳು ಏರಿಕೆ ಕಂಡಿವೆ ಮತ್ತು ಡಿಸೆಂಬರ್ 2022ರಲ್ಲಿ 58.5ಕ್ಕೆ ವಿಸ್ತರಿಸಿವೆ ಎಂದು ಸಮೀಕ್ಷೆ ಎತ್ತಿ ತೋರಿಸಿದೆ.

ಬ್ಯಾಂಕ್ ಸಾಲ:

ಆರ್ಥಿಕ ಸಮೀಕ್ಷೆಯಲ್ಲಿ ಸೇವಾ ವಲಯಕ್ಕೆ ಬ್ಯಾಂಕ್ ಸಾಲವು 2022ರ ನವೆಂಬರ್ ನಲ್ಲಿ ಶೇಖಡಾ 21.3ರಷ್ಟು ವರ್ಷದಿಂದ ವರ್ಷಕ್ಕೆ ಬೆಳವಣಿಗೆಯನ್ನು ಕಂಡಿದೆ. ಇದು ಲಸಿಕಾ ವ್ಯಾಪ್ತಿ ಮತ್ತು ಸೇವಾ ವಲಯದ ಚೇತರಿಕೆಯೊಂದಿಗೆ 46 ತಿಂಗಳಲ್ಲಿ ಎರಡನೇ ಅತಿ ಹೆಚ್ಚು ಬೆಳವಣಿಗೆಯನ್ನು ಕಂಡಿದೆ ಎಂದು ತಿಳಿಸಲಾಗಿದೆ. ಈ ವಲಯದಲ್ಲಿ, ಸಗಟು ಮತ್ತು ಚಿಲ್ಲರೆ ವ್ಯಾಪಾರಕ್ಕೆ ಸಾಲವು 2022ರ ನವೆಂಬರ್ ನಲ್ಲಿ ಕ್ರಮವಾಗಿ 10.2% ಮತ್ತು 21.9% ರಷ್ಟು ಹೆಚ್ಚಾಗಿದೆ, ಇದು ಆರ್ಥಿಕ ಚಟುವಟಿಕೆಯ ಬಲವನ್ನು ಪ್ರತಿಬಿಂಬಿಸುತ್ತದೆ. "ಹೆಚ್ಚಿನ ಬಾಂಡ್ ವಿತರಣೆಯಿಂದಾಗಿ ಬ್ಯಾಂಕೇತರ ಹಣಕಾಸು ಕಂಪನಿಗಳು ಬ್ಯಾಂಕ್ ಸಾಲಗಳಿಗೆ ಮಾರುಹೋದ ಪರಿಣಾಮವಾಗಿ ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ ಸಾಲವು 32.9%ರಷ್ಟು ಹೆಚ್ಚಾಗಿದೆ" ಎಂದು ಸಮೀಕ್ಷೆ ತಿಳಿಸಿದೆ.

ಸೇವಾ ಉದ್ಯಮ:
ಮುಂದುವರಿದ ಆರ್ಥಿಕತೆಗಳಲ್ಲಿ ಹಣದುಬ್ಬರವು ವೇತನವನ್ನು ಹೆಚ್ಚಿಸುತ್ತದೆ ಮತ್ತು ಸ್ಥಳೀಯ ಪ್ರಾದೇಶಿಕ ಸೋರ್ಸಿಂಗ್ ಅನ್ನು ದುಬಾರಿಯಾಗಿಸುತ್ತದೆ, ಭಾರತ ಸೇರಿದಂತೆ ಕಡಿಮೆ ವೇತನ ದೇಶಗಳಿಗೆ ಹೊರಗುತ್ತಿಗೆಯ ಮಾರ್ಗಗಳನ್ನು ತೆರೆಯುತ್ತದೆ ಎಂದು ಸಮೀಕ್ಷೆ ಗಮನಿಸಿದೆ. "2021ರಲ್ಲಿ ಭಾರತವು ಸೇವೆಗಳ ವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಭಾರತವು ಮೊದಲ ಹತ್ತು ಸೇವಾ ರಫ್ತು ದೇಶಗಳಲ್ಲಿ ಒಂದಾಗಿದೆ" ಎಂದು ಸಮೀಕ್ಷೆ ತಿಳಿಸಿದೆ. 2022ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಸೇವಾ ರಫ್ತು 27.7% ಬೆಳವಣಿಗೆಯನ್ನು ದಾಖಲಿಸಿದೆ, ಕಳೆದ ವರ್ಷದ ಇದೇ ಅವಧಿಯಲ್ಲಿ ಶೇಖಡಾ 20.4ರಷ್ಟು ಬೆಳವಣಿಗೆಯನ್ನು ದಾಖಲಿಸಲಾಗಿತ್ತು. ಸೇವೆಗಳ ರಫ್ತುಗಳಲ್ಲಿ, ಸಾಫ್ಟ್ವೇರ್ ರಫ್ತುಗಳು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಮತ್ತು ಪ್ರಸ್ತುತ ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳ ನಡುವೆ ತುಲನಾತ್ಮಕವಾಗಿ ಸ್ಥಿತಿಸ್ಥಾಪಕವಾಗಿವೆ, ಡಿಜಿಟಲ್ ಬೆಂಬಲ, ಕ್ಲೌಡ್ ಸೇವೆಗಳು ಮತ್ತು ಮೂಲಸೌಕರ್ಯ ಆಧುನೀಕರಣಕ್ಕೆ ಹೆಚ್ಚಿನ ಬೇಡಿಕೆಯ ಹೊಸ ಸವಾಲುಗಳನ್ನು ಪೂರೈಸುತ್ತದೆ. 

ಸೇವೆಗಳಲ್ಲಿ ವಿದೇಶಿ ನೇರ ಹೂಡಿಕೆ (ಎಫ್.ಡಿ.ಐ.):
ವಿಶ್ವಸಂಸ್ಥೆಯ ವಿಶ್ವ ಹೂಡಿಕೆ ವರದಿ 2022ರ ಪ್ರಕಾರ, 2021ರಲ್ಲಿ ಅಗ್ರ 20 ಆತಿಥೇಯ ದೇಶಗಳಲ್ಲಿ ಭಾರತವು ಏಳನೇ ಅತಿದೊಡ್ಡ ಎಫ್.ಡಿ.ಐ. ಸ್ವೀಕರಿಸುವ ದೇಶವಾಗಿದೆ. 2022ರ ಹಣಕಾಸು ವರ್ಷದಲ್ಲಿ ಸೇವಾ ವಲಯದಲ್ಲಿ 7.1 ಬಿಲಿಯನ್ ಅಮೆರಿಕನ್ ಡಾಲರ್ ಎಫ್ ಡಿಐ ಈಕ್ವಿಟಿ ಒಳಹರಿವು ಸೇರಿದಂತೆ ಭಾರತವು 84.8 ಬಿಲಿಯನ್ ಯುಎಸ್ ಡಾಲರ್ ಎಫ್ ಡಿಐ ಒಳಹರಿವನ್ನು ಪಡೆದಿದೆ. "ಹೂಡಿಕೆಗೆ ಅನುಕೂಲವಾಗುವಂತೆ, ರಾಷ್ಟ್ರೀಯ ಏಕ ಗವಾಕ್ಷಿ ವ್ಯವಸ್ಥೆಯನ್ನು ಪ್ರಾರಂಭಿಸಿ, ಹೂಡಿಕೆದಾರರು, ಉದ್ಯಮಿಗಳು ಮತ್ತು ವ್ಯವಹಾರಗಳಿಗೆ ಅಗತ್ಯವಿರುವ ಅನುಮೋದನೆಗಳು ಮತ್ತು ಅನುಮತಿಗಳಿಗೆ ಏಕ-ನಿಲುಗಡೆ ಪರಿಹಾರದಂತಹ ವಿವಿಧ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ" ಎಂದು ಸಮೀಕ್ಷೆ ತಿಳಿಸಿದೆ.

ಉಪ-ವಲಯವಾರು ಕಾರ್ಯಕ್ಷಮತೆ:
ಐಟಿ-ಬಿಪಿಎಂ ಉದ್ಯಮ:

ಐಟಿ-ಬಿಪಿಎಂ ಆದಾಯವು 2021ರ ಹಣಕಾಸು ವರ್ಷದಲ್ಲಿನ 2.1% ಬೆಳವಣಿಗೆಗೆ ಹೋಲಿಸಿದರೆ 2022ರ ಹಣಕಾಸು ವರ್ಷದಲ್ಲಿ 15.5% ಬೆಳವಣಿಗೆಯನ್ನು ದಾಖಲಿಸಿದೆ, ಎಲ್ಲಾ ಉಪ-ವಲಯಗಳು ಎರಡಂಕಿ ಆದಾಯ ಬೆಳವಣಿಗೆಯನ್ನು ತೋರಿಸುತ್ತವೆ ಎಂದು ಸಮೀಕ್ಷೆ ತಿಳಿಸಿದೆ. ಐಟಿ-ಬಿಪಿಎಂ ವಲಯದಲ್ಲಿ, ಐಟಿ ಸೇವೆಗಳು ಬಹುಪಾಲನ್ನು ಹೊಂದಿವೆ (51% ಕ್ಕಿಂತ ಹೆಚ್ಚು). ತಂತ್ರಜ್ಞಾನದ ಮೇಲೆ ಉದ್ಯಮಗಳ ಹೆಚ್ಚಿದ ಅವಲಂಬನೆ, ವೆಚ್ಚ ತಗ್ಗಿಸುವ ವ್ಯವಹಾರಗಳು ಮತ್ತು ಪ್ರಮುಖ ಕಾರ್ಯಾಚರಣೆಗಳ ಬಳಕೆಯಿಂದಾಗಿ ರಫ್ತು (ಹಾರ್ಡ್ ವೇರ್ ಸೇರಿದಂತೆ) 2021ರ ಹಣಕಾಸು ವರ್ಷದಲ್ಲಿ 1.9% ಬೆಳವಣಿಗೆಗೆ ಹೋಲಿಸಿದರೆ 2022ರ ಹಣಕಾಸು ವರ್ಷದಲ್ಲಿ 17.2% ಬೆಳವಣಿಗೆಯನ್ನು ಕಂಡಿದೆ. ಉದ್ಯಮವು 2022ರ ಹಣಕಾಸು ವರ್ಷದಲ್ಲಿ ನೇರ ಉದ್ಯೋಗಿಗಳ ಸಂಗ್ರಹದಲ್ಲಿ ಸುಮಾರು 10% ಅಂದಾಜು ಬೆಳವಣಿಗೆಯನ್ನು ದಾಖಲಿಸಿದೆ. "ಭಾರತದ ಬೃಹತ್ ಡಿಜಿಟಲ್ ಮೂಲಸೌಕರ್ಯವು ತಂತ್ರಜ್ಞಾನ ಅಳವಡಿಕೆಯನ್ನು ಪ್ರೇರೇಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ, ಸಾರ್ವಜನಿಕ ಡಿಜಿಟಲ್ ಪ್ಲಾಟ್ಫಾರ್ಮ್ ಗಳು ಭಾರತದ ಡಿಜಿಟಲ್ ಅನುಕೂಲದ ಅಡಿಪಾಯವಾಗಿವೆ" ಎಂದು ಸಮೀಕ್ಷೆ ತಿಳಿಸಿದೆ.

ಇ-ಕಾಮರ್ಸ್:
ವರ್ಲ್ಡ್ ಪೇ ಎಫ್ಐಎಸ್ ನ ಗ್ಲೋಬಲ್ ಪೇಮೆಂಟ್ಸ್ ರಿಪೋರ್ಟ್ ಪ್ರಕಾರ, ಭಾರತದ ಇ-ಕಾಮರ್ಸ್ ಮಾರುಕಟ್ಟೆಯು 2025ರ ವೇಳೆಗೆ ಪ್ರಭಾವಶಾಲಿ ಲಾಭವನ್ನು ದಾಖಲಿಸುತ್ತದೆ ಮತ್ತು ವಾರ್ಷಿಕವಾಗಿ 18% ರಷ್ಟು ಬೆಳೆಯುತ್ತದೆ ಎಂದು ಅಂದಾಜಿಸಲಾಗಿದೆ. ಸರ್ಕಾರಿ ಇ-ಮಾರ್ಕೆಟ್ ಪ್ಲೇಸ್ (ಜಿಇಎಂ) 2022ರ ಹಣಕಾಸು ವರ್ಷದಲ್ಲಿ 1 ಲಕ್ಷ ಕೋಟಿ ರೂ.ಗಳ ವಾರ್ಷಿಕ ಸಂಗ್ರಹವನ್ನು ಸಾಧಿಸಿದೆ. ಇದು ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ 160% ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ. ಡಿಜಿಟಲ್ ಇಂಡಿಯಾ ಕಾರ್ಯಕ್ರಮ, ಯುಪಿಐ, ಒನ್ ಡಿಸ್ಟ್ರಿಕ್ಟ್ - ಒನ್ ಪ್ರಾಡಕ್ಟ್ (ಒಡಿಒಪಿ) ಉಪಕ್ರಮ, ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್ ಡಿಸಿ) ಇತ್ಯಾದಿ ಸೇರಿದಂತೆ ಇ-ಕಾಮರ್ಸ್ ಪ್ರಚಾರಕ್ಕಾಗಿ ಸರ್ಕಾರ ಕೈಗೊಂಡ ಉಪಕ್ರಮಗಳು ಇತ್ತೀಚಿನ ವರ್ಷಗಳಲ್ಲಿ ಇ-ಕಾಮರ್ಸ್ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡುವ ಅಂಶಗಳಾಗಿವೆ.

ಪ್ರವಾಸೋದ್ಯಮ ಮತ್ತು ಹೋಟೆಲ್ ಉದ್ಯಮ:
ಪ್ರಯಾಣದ ನಿರ್ಬಂಧಗಳು ಮತ್ತು ಆರೋಗ್ಯ ಕಾಳಜಿಗಳು ಕಡಿಮೆಯಾಗುತ್ತಿರುವುದರಿಂದ, ಪ್ರವಾಸೋದ್ಯಮವು ಸಂಪರ್ಕ-ತೀವ್ರ ಚಟುವಟಿಕೆಯಲ್ಲಿ ಬಲವಾದ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ಸಮೀಕ್ಷೆ ಗಮನಿಸಿದೆ. 2021-22ರ ಅಂತ್ಯದ ವೇಳೆಗೆ ಭಾರತವು ಎಲ್ಲಾ ನಿಯಮಿತ ಅಂತರರಾಷ್ಟ್ರೀಯ ವಿಮಾನಗಳನ್ನು ಪೂರ್ಣ ಸಾಮರ್ಥ್ಯದಲ್ಲಿ ಪುನರಾರಂಭಿಸಿದ್ದರಿಂದ 2022ರ ಏಪ್ರಿಲ್ ಮತ್ತು ನವೆಂಬರ್ ನಡುವೆ ದೇಶದಲ್ಲಿ ಸಂಪೂರ್ಣ ವಿಮಾನ ಚಲನೆ ವರ್ಷದಿಂದ ವರ್ಷಕ್ಕೆ 52.9% ಹೆಚ್ಚಾಗಿದೆ. ಸಾಂಕ್ರಾಮಿಕ ರೋಗದ ಕ್ಷೀಣಿಕೆಯಿಂದಾಗಿ, ಭಾರತದ ಪ್ರವಾಸೋದ್ಯಮ ಕ್ಷೇತ್ರವೂ ಪುನರುಜ್ಜೀವನದ ಲಕ್ಷಣಗಳನ್ನು ತೋರಿಸುತ್ತಿದೆ. ಮೆಡಿಕಲ್ ಟೂರಿಸಂ ಅಸೋಸಿಯೇಷನ್ ಬಿಡುಗಡೆ ಮಾಡಿದ ವೈದ್ಯಕೀಯ ಪ್ರವಾಸೋದ್ಯಮ ಸೂಚ್ಯಂಕದಲ್ಲಿ ವಿಶ್ವದ ಅಗ್ರ 46 ದೇಶಗಳಲ್ಲಿ ಭಾರತವು 10ನೇ ಸ್ಥಾನದಲ್ಲಿದೆ. "ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಭೇಟಿ ನೀಡಲು ಬಯಸುವ ಪ್ರವಾಸಿಗರಿಗೆ ಆಯುಷ್ ವೀಸಾ, ಸುಸ್ಥಿರ ಪ್ರವಾಸೋದ್ಯಮ ಮತ್ತು ಜವಾಬ್ದಾರಿಯುತ ಪ್ರಯಾಣಿಕರ ಅಭಿಯಾನಕ್ಕಾಗಿ ರಾಷ್ಟ್ರೀಯ ಕಾರ್ಯತಂತ್ರದ ಪ್ರಾರಂಭ, ಸ್ವದೇಶ ದರ್ಶನ 2.0 ಯೋಜನೆಯನ್ನು ಪರಿಚಯಿಸುವುದು ಮತ್ತು ಭಾರತದಲ್ಲಿ ಗುಣಪಡಿಸುವಿಕೆಯಂತಹ ಇತ್ತೀಚಿನ ಉಪಕ್ರಮಗಳು ಜಾಗತಿಕ ವೈದ್ಯಕೀಯ ಪ್ರವಾಸೋದ್ಯಮ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲನ್ನು ಪಡೆಯಲು ಸಹಾಯ ಮಾಡುತ್ತದೆ" ಎಂದು ಸಮೀಕ್ಷೆ ಹೇಳಿದೆ. 

ರಿಯಲ್ ಎಸ್ಟೇಟ್:
ಗೃಹ ಸಾಲಗಳ ಮೇಲಿನ ಬಡ್ಡಿದರಗಳು ಮತ್ತು ಆಸ್ತಿ ಬೆಲೆಗಳ ಹೆಚ್ಚಳದಂತಹ ಪ್ರಸ್ತುತ ಅಡೆತಡೆಗಳ ಹೊರತಾಗಿಯೂ, ಈ ವಲಯವು ಪ್ರಸಕ್ತ ವರ್ಷದಲ್ಲಿ ಸ್ಥಿತಿಸ್ಥಾಪಕ ಬೆಳವಣಿಗೆಯನ್ನು ಕಂಡಿದೆ. ವಸತಿ ಮಾರಾಟ ಮತ್ತು 2023ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಹೊಸ ಮನೆಗಳ ನಿರ್ಮಾಣವು 2020ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದ ಸಾಂಕ್ರಾಮಿಕ ಪೂರ್ವ ಮಟ್ಟವನ್ನು ಮೀರಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. "ಉಕ್ಕು ಉತ್ಪನ್ನಗಳು, ಕಬ್ಬಿಣದ ಅದಿರು ಮತ್ತು ಉಕ್ಕಿನ ಮಧ್ಯವರ್ತಿಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡುವಂತಹ ಇತ್ತೀಚಿನ ಸರ್ಕಾರದ ಕ್ರಮಗಳು ನಿರ್ಮಾಣ ವೆಚ್ಚವನ್ನು ಕುಗ್ಗಿಸಿ ವಸತಿ ಬೆಲೆಗಳ ಏರಿಕೆಯನ್ನು ಪರಿಶೀಲಿಸಲು ಸಹಾಯ ಮಾಡುತ್ತದೆ" ಎಂದು ಸಮೀಕ್ಷೆ ಉಲ್ಲೇಖಿಸಿದೆ. ಜೆ.ಎಲ್.ಎಲ್ ನ 2022ರ ಜಾಗತಿಕ ರಿಯಲ್ ಎಸ್ಟೇಟ್ ಪಾರದರ್ಶಕತೆ ಸೂಚ್ಯಂಕದ ಪ್ರಕಾರ, ಭಾರತದ ರಿಯಲ್ ಎಸ್ಟೇಟ್ ಮಾರುಕಟ್ಟೆಯ ಪಾರದರ್ಶಕತೆಯು ಜಾಗತಿಕವಾಗಿ ಮೊದಲ ಹತ್ತು ಸುಧಾರಿತ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಮಾದರಿ ಹಿಡುವಳಿ ಕಾಯ್ದೆ ಮತ್ತು ಧರಣಿ ಮತ್ತು ಮಹಾ ರೇರಾ ವೇದಿಕೆಗಳ ಮೂಲಕ ಭೂ ನೋಂದಣಿಗಳು ಮತ್ತು ಮಾರುಕಟ್ಟೆ ದತ್ತಾಂಶದ ಡಿಜಿಟಲೀಕರಣದಂತಹ ನಿಯಂತ್ರಕ ಉಪಕ್ರಮಗಳು ಮಾರುಕಟ್ಟೆಯನ್ನು ವಿಸ್ತರಿಸಲು ಮತ್ತು ಈ ವಲಯಕ್ಕೆ ಹೆಚ್ಚಿನ ಔಪಚಾರಿಕತೆಯನ್ನು ತರಲು ಸಹಾಯ ಮಾಡಿದೆ ಎಂದು ಸಮೀಕ್ಷೆ ಹೇಳಿದೆ.

ಡಿಜಿಟಲ್ ಹಣಕಾಸು ಸೇವೆಗಳು:
ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ನವೀನ ಪರಿಹಾರಗಳಿಂದ ಸಕ್ರಿಯಗೊಳಿಸಲಾದ ಡಿಜಿಟಲ್ ಹಣಕಾಸು ಸೇವೆಗಳು ಆರ್ಥಿಕ ಸೇರ್ಪಡೆಯನ್ನು ವೇಗಗೊಳಿಸುತ್ತಿವೆ, ಪ್ರವೇಶವನ್ನು ಪ್ರಜಾಸತ್ತಾತ್ಮಕಗೊಳಿಸುತ್ತಿವೆ ಮತ್ತು ಉತ್ಪನ್ನಗಳ ವೈಯಕ್ತೀಕರಣವನ್ನು ಉತ್ತೇಜಿಸುತ್ತಿವೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ. ಇತ್ತೀಚಿನ ಗ್ಲೋಬಲ್ ಫಿನ್ ಟೆಕ್ ಅಳವಡಿಕೆ ಸೂಚ್ಯಂಕದ ಪ್ರಕಾರ ಭಾರತವು 87% ಫಿನ್ ಟೆಕ್ ಅಳವಡಿಕೆ ದರದೊಂದಿಗೆ ಮುನ್ನಡೆ ಸಾಧಿಸಿದೆ. ಇದು ವಿಶ್ವದ ಸರಾಸರಿ ಶೇಖಡಾ 64ಕ್ಕಿಂತ ಗಣನೀಯವಾಗಿ ಹೆಚ್ಚಾಗಿದೆ. ನಿಯೋಬ್ಯಾಂಕ್ ಗಳು ಲಭ್ಯತೆಯನ್ನು ಸರಾಗಗೊಳಿಸಿ ಎಂಎಸ್ ಎಂಇಗಳು ಮತ್ತು ಕಡಿಮೆ ಬ್ಯಾಂಕಿಂಗ್ ಸೌಲಭ್ಯದ ಗ್ರಾಹಕರು ಮತ್ತು ಪ್ರದೇಶಗಳಿಗೆ ಹಣಕಾಸು ಸೇವೆಗಳಿಗೆ ಅವಕಾಶವನ್ನು ಒದಗಿಸಿವೆ ಎಂದು ಸಮೀಕ್ಷೆ ಹೇಳಿದೆ. ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯ (ಸಿಬಿಡಿಸಿ) ಪರಿಚಯವು ಡಿಜಿಟಲ್ ಹಣಕಾಸು ಸೇವೆಗಳನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಡಿಜಿಟಲ್ ಹಣಕಾಸು ಸೇವೆಗಳಿಗೆ ಮತ್ತಷ್ಟು ಉತ್ತೇಜನ ನೀಡುವಲ್ಲಿ ದಾಖಲೆಗಳ ಡಿಜಿಟಲೀಕರಣವು ಪ್ರಮುಖ ಪಾತ್ರ ವಹಿಸಿದೆ ಎಂದು ಸಮೀಕ್ಷೆ ತಿಳಿಸಿದೆ.

ಹೊರನೋಟ ದೃಷ್ಟಿಕೋನ:
ಕಳೆದ 2 ಹಣಕಾಸು ವರ್ಷಗಳಲ್ಲಿ ಹೆಚ್ಚು ಅಸ್ಥಿರ ಮತ್ತು ದುರ್ಬಲವಾಗಿದ್ದ ಭಾರತದ ಸೇವಾ ವಲಯದ ಬೆಳವಣಿಗೆಯು 2023ರ ಹಣಕಾಸು ವರ್ಷದಲ್ಲಿ ಸ್ಥಿತಿಸ್ಥಾಪಕತ್ವವನ್ನು ತೋರಿಸಿದೆ ಎಂದು ಸಮೀಕ್ಷೆ ತಿಳಿಸುತ್ತದೆ. ಪ್ರವಾಸೋದ್ಯಮ, ಹೋಟೆಲ್, ರಿಯಲ್ ಎಸ್ಟೇಟ್, ಐಟಿ-ಬಿಪಿಎಂ, ಇ-ಕಾಮರ್ಸ್ ಮುಂತಾದ ವಿವಿಧ ಉಪ ಕ್ಷೇತ್ರಗಳ ಸುಧಾರಿತ ಕಾರ್ಯಕ್ಷಮತೆಯೊಂದಿಗೆ ಭವಿಷ್ಯವು ಪ್ರಕಾಶಮಾನವಾಗಿ ಕಾಣುತ್ತಿದೆ. "ಆದಾಗ್ಯೂ, ನಕಾರಾತ್ಮಕ ಅಪಾಯವು ಬಾಹ್ಯ ಮತ್ತು ಬಹಿರ್ಜಾತ ಅಂಶಗಳು ಮತ್ತು ಮುಂದುವರಿದ ಆರ್ಥಿಕತೆಗಳಲ್ಲಿನ ಕ್ಷೀಣಿತ ಆರ್ಥಿಕ ದೃಷ್ಟಿಕೋನವು ವ್ಯಾಪಾರ ಮತ್ತು ಇತರ ಸಂಪರ್ಕಗಳ ಮೂಲಕ ಸೇವಾ ಕ್ಷೇತ್ರದ ಬೆಳವಣಿಗೆಯ ನಿರೀಕ್ಷೆಗಳ ಮೇಲೆ ಪರಿಣಾಮ ಬೀರುತ್ತದೆ" ಎಂದು ಸಮೀಕ್ಷೆಯು ಉಲ್ಲೇಖಿಸಿದೆ.

*****


(Release ID: 1895056) Visitor Counter : 411