ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

​​​​​​​ತಮಗೇ ಸ್ಪರ್ಧೆಯೊಡ್ಡುತ್ತಿರುವ ಮಹಾರಾಷ್ಟ್ರದ ರಿದಮಿಕ್ ಜಿಮ್ನಾಸ್ಟ್ ಸಂಯುಕ್ತಾ ಕಾಳೆ 

Posted On: 29 JAN 2023 2:42PM by PIB Bengaluru

ಪಂಚಕುಲದಲ್ಲಿ ನಡೆದ ಖೇಲೋ ಇಂಡಿಯಾ ಯೂತ್ ಗೇಮ್ಸ್ ನ ನಾಲ್ಕನೇ ಆವೃತ್ತಿಯ ರಿದಮಿಕ್ ಜಿಮ್ನಾಸ್ಟಿಕ್ಸ್ ವಿಭಾಗದಲ್ಲಿ ಮಹಾರಾಷ್ಟ್ರದ ಜಿಮ್ನಾಸ್ಟಿಕ್ ಪಟು ಸಂಯುಕ್ತಾ ಕಾಳೆ ಎಲ್ಲಾ ಐದು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಂಯುಕ್ತಾ ಮತ್ತೊಮ್ಮೆ ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ ಭಾಗವಹಿಸುತ್ತಿದ್ದು, ಗ್ವಾಲಿಯರ್‌ನ ಲಕ್ಷ್ಮಿ ಬಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫಿಸಿಕಲ್ ಎಜುಕೇಶನ್‌ನಲ್ಲಿ ಜಿಮ್ನಾಸ್ಟಿಕ್ ಸ್ಪರ್ಧೆಯ ಆತಿಥ್ಯದಲ್ಲಿ ನೆಲದಲ್ಲಿ ತಮ್ಮ ದಾಖಲೆಯನ್ನೇ ಮುರಿಯಲು ಹೋರಾಟಕ್ಕಿಳಿದಿದ್ದಾರೆ. ಪಂಚಕುಲದಲ್ಲಿ ಗಳಿಸಿದ ಪದಕ, ಮಾಡಿರುವ ಸಾಧನೆ ಒಂದು ಬಾರಿಯಲ್ಲ ಎಂದು ಸಾಬೀತುಪಡಿಸಲು ತಮ್ಮ ಮೇಲೆಯೇ ಹೋರಾಡಿ ದಾಖಲೆ ಮುರಿಯಬೇಕಾಗಿದೆ.

ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಸಂಯುಕ್ತಾ ಐದನೇ ವಯಸ್ಸಿನಲ್ಲಿ ಜಿಮ್ನಾಸ್ಟಿಕ್ಸ್ ಗೆ ಕಾಲಿಟ್ಟರು. ಪಂಚಕುಲದಲ್ಲಿ, ಸಂಯುಕ್ತಾ ಅವರು ವೈಯಕ್ತಿಕ ಸಾಧನೆಯ ಹೊರತಾಗಿ, ಹೂಪ್, ಬಾಲ್, ಕ್ಲಬ್ ಮತ್ತು ರಿಬ್ಬನ್‌ ಸ್ಪರ್ಧೆಗಳಲ್ಲಿ ನಾಲ್ಕು ಚಿನ್ನವನ್ನು ಗೆದ್ದಿದ್ದರು. ಸಂಯುಕ್ತಾ ಈ ಸ್ಪರ್ಧೆಯಲ್ಲಿ ಒಟ್ಟು ಐದು ಚಿನ್ನದೊಂದಿಗೆ ಎಲ್ಲಾ ಪಂದ್ಯಗಳನ್ನು ತಮ್ಮದಾಗಿಸಿಕೊಂಡರು. ಸಂಯುಕ್ತಾ ಅವರು ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ವೈಯಕ್ತಿಕ ಆಲ್‌ರೌಂಡ್ ಚಿನ್ನ ಮತ್ತು ಈ ತಿಂಗಳು ಬೆಂಗಳೂರಿನಲ್ಲಿ ನಡೆದ 25 ನೇ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನ ಮತ್ತು ಮೂರು ಬೆಳ್ಳಿ ಪದಕ ಗಳಿಸಿದ್ದಾರೆ.
ಮಧ್ಯಪ್ರದೇಶದ ಖೇಲೋ ಇಂಡಿಯಾ ಯೂತ್ ಗೇಮ್ಸ್ 2022ರಲ್ಲಿ ಭಾಗವಹಿಸುವ ಬಗ್ಗೆ ತಮ್ಮ ನಿರೀಕ್ಷೆಗಳು ಮತ್ತು ಸಿದ್ಧತೆಗಳ ಬಗ್ಗೆ ಮಾತನಾಡಿರುವ ಸಂಯುಕ್ತಾ, “ನನ್ನ ಸಿದ್ಧತೆಗಳು ತುಂಬಾ ಚೆನ್ನಾಗಿವೆ. ನಾವೆಲ್ಲರೂ, ಮಹಾರಾಷ್ಟ್ರದಿಂದ ಭಾಗವಹಿಸುತ್ತಿರುವ ಜಿಮ್ನಾಸ್ಟ್ ಗಳು ಶ್ರಮ ಹಾಕುತ್ತಿದ್ದೇವೆ. ನನ್ನ ಬಾಲ್ಯದ ತರಬೇತುದಾರರಾದ ಮಾನಸಿ ಸುರ್ವೆ ಮತ್ತು ಪೂಜಾ ಸುರ್ವೆ ಅವರ ಮೇಲ್ವಿಚಾರಣೆಯಲ್ಲಿ ನಾನು ಫೀನಿಕ್ಸ್ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದ್ದೇನೆ. ನಾನು ದಿನಕ್ಕೆ 6 ಗಂಟೆಗಳ ಕಾಲ ಅಭ್ಯಾಸ ಮಾಡುತ್ತೇನೆ. ನನ್ನ ಕುಟುಂಬ ಮತ್ತು ತರಬೇತುದಾರರು ನನ್ನ ಎಲ್ಲಾ ಕ್ರೀಡಾ ಅಗತ್ಯಗಳನ್ನು ನೋಡಿಕೊಳ್ಳುತ್ತಾರೆ. ಗ್ವಾಲಿಯರ್‌ನಲ್ಲಿನ ನನ್ನ ಪ್ರದರ್ಶನವು ನನಗೆ ಹೆಚ್ಚು ಅಂತಾರಾಷ್ಟ್ರೀಯ ಮಾನ್ಯತೆಯನ್ನು ನೀಡುತ್ತದೆ. ಈ ವರ್ಷ ನಾನು ನನ್ನದೇ ಅಕಾಡೆಮಿಯ ಕೀಮಯಾ ಕಾರ್ಲೆ ವಿರುದ್ಧ ಸ್ಪರ್ಧಿಸುತ್ತಿದ್ದೇನೆ. ಆದರೆ ನನ್ನ ಜೊತೆಯೇ ನಾನು ಸ್ಪರ್ಧಿಸುತ್ತಿರುವುದು ನನ್ನ ನಿಜವಾದ ಹೋರಾಟವಾಗಿದೆ ಎಂದರು.

ಸಂಯುಕ್ತಾ ಅಂತಾರಾಷ್ಟ್ರೀಯ ಜಿಮ್ನಾಸ್ಟಿಕ್ಸ್ ಫೆಡರೇಶನ್ (FIG) ನಿಂದ ಗುರುತಿಸಲ್ಪಟ್ಟಿದ್ದಾರೆ. FIG ನ ವಿಶ್ವದಾದ್ಯಂತದ ಅಗ್ರ ಜಿಮ್ನಾಸ್ಟ್ ಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಇದು ಅವರಿಗೆ ದೊಡ್ಡ ಸಾಧನೆಯಾಗಿದೆ. ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ಖೇಲೋ ಇಂಡಿಯಾ ಯೂತ್ ಗೇಮ್ಸ್, ನ್ಯಾಷನಲ್ ಗೇಮ್ಸ್ ಮತ್ತು ನ್ಯಾಷನಲ್ ಚಾಂಪಿಯನ್‌ಶಿಪ್ ಜೊತೆಗೆ ಸಂಯುಕ್ತಾ ಅನೇಕ ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಸಂಯುಕ್ತಾ ಅವರ ಕೋಚ್ ಮಾನಸಿ ಸುರ್ವೆ ಶಿಷ್ಯೆಯ ಸಾಧನೆ ಬಗ್ಗೆ ಕೊಂಡಾಡುತ್ತಾರೆ. ‘’ಸಂಯುಕ್ತಾ ಇದುವರೆಗೆ ತನ್ನ ವೃತ್ತಿಜೀವನದಲ್ಲಿ ಒಟ್ಟು 130 ಪದಕಗಳನ್ನು ಗೆದ್ದಿದ್ದಾರೆ, ಅದರಲ್ಲಿ 119 ಚಿನ್ನದ ಪದಕಗಳಾಗಿವೆ. 2019 ರಲ್ಲಿ, ಸಂಯುಕ್ತಾ ಥಾಯ್ಲೆಂಡ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕ್ಲಬ್ ಸಲಕರಣೆಗಳಲ್ಲಿ ಏಳನೇ ಅರ್ಹತೆ ಗಳಿಸಿ ಭಾರತ ಕೀರ್ತಿ ತಂದು ಇತಿಹಾಸ ನಿರ್ಮಿಸಿದ್ದರು. ಭಾರತ ಈ ಹಿಂದೆ ಟಾಪ್-8ರಲ್ಲಿ ಅರ್ಹತೆ ಗಳಿಸಲು ಸಾಧ್ಯವಾಗಿರಲಿಲ್ಲ. ಸಂಯುಕ್ತಾ ಫ್ರಾನ್ಸ್ ನಲ್ಲಿ ನಡೆದ ವಿಶ್ವ ಶಾಲಾ ಕ್ರೀಡಾಕೂಟದಲ್ಲಿ ಮತ್ತು 2022 ರಲ್ಲಿ ಥೈಲ್ಯಾಂಡ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ಆಡಿದ್ದಾರೆ. ಅಲ್ಲಿ ಆಕೆಗೆ ಮೂರು ಸಲಕರಣೆಗಳ ಬದಲಿಗೆ ಎರಡು ಉಪಕರಣಗಳನ್ನು ನೀಡಲಾಯಿತು. ಅದರಲ್ಲಿಯೂ ಅಗ್ರ ಸ್ಥಾನ ಪಡೆದಿದ್ದಾರೆ ಎಂದು ಹಾಡಿಹೊಗಳಿದರು.

ಪಂಚಕುಲದ ಜಿಮ್ನಾಸ್ಟಿಕ್ ಮೈದಾನದಲ್ಲಿ ತಮ್ಮ ಪ್ರದರ್ಶನದ ಮೂಲಕ ಹೊಸ ಅಲೆಗಳನ್ನು ಸೃಷ್ಟಿಸಿದ ಸಂಯುಕ್ತಾ ಮತ್ತೊಮ್ಮೆ ತಮ್ಮ ಪ್ರದರ್ಶನವನ್ನು ಪುನರಾವರ್ತಿಸಲು ಸಿದ್ಧರಾಗಿದ್ದಾರೆ. ಖೇಲೋ ಇಂಡಿಯಾ ಯೂತ್ ಗೇಮ್ಸ್ ನಲ್ಲಿ ಭಾಗವಹಿಸಿದ ನಂತರ ಅವರ ಜೀವನ ಹೇಗೆ ಬದಲಾಗಿದೆ ಎಂದು ಕೇಳಿದಾಗ,  “ಖೇಲೋ ಇಂಡಿಯಾದಲ್ಲಿ ಭಾಗವಹಿಸಿದ ನಂತರ ನನಗೆ ಸಾಕಷ್ಟು ಮಾನ್ಯತೆ ಸಿಕ್ಕಿತು. ಆಗ ಸ್ಪರ್ಧೆಯ ಸಮಯವಾದ್ದರಿಂದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ನನಗೆ ನನ್ನ ಜೀವನದಲ್ಲಿ ಕ್ರೀಡೆ ಮತ್ತು ಅಧ್ಯಯನವನ್ನು ಹೊರತುಪಡಿಸಿ ಬೇರೇನೂ ಇಲ್ಲ, ಆದ್ದರಿಂದ ನಾನು ಸಾರ್ವಕಾಲಿಕ ಈ ಬಗ್ಗೆ ಗಮನ ಹರಿಸುತ್ತೇನೆ. ಮತ್ತೊಮ್ಮೆ ಖೇಲೋ ಇಂಡಿಯಾಕ್ಕೆ ಸಿದ್ಧನಾಗಿದ್ದೇನೆ ಎನ್ನುತ್ತಾರೆ.

ಖೇಲೋ ಇಂಡಿಯಾ ಯೂತ್ ಗೇಮ್ಸ್ 2022 ಮಧ್ಯಪ್ರದೇಶದ ಆವೃತ್ತಿಯಲ್ಲಿ ಮಹಾರಾಷ್ಟ್ರವು ಭಾಗವಹಿಸಲಿದ್ದು, 450 ಕ್ಕೂ ಹೆಚ್ಚು ಕ್ರೀಡಾಪಟುಗಳು ಎಲ್ಲಾ ವಿಭಾಗಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಕೆಲವು ಪ್ರಮುಖ ಹೆಸರುಗಳೆಂದರೆ ವೇದಾಂತ್ ಮಾಧವನ್ (ಈಜು), ಶಾರದಾ ಚೋಪಡೆ (ಜೂಡೋ), ಆಕಾಂಕ್ಷಾ ವ್ಯಾವರೆ (ವೇಟ್‌ಲಿಫ್ಟಿಂಗ್; 40 ಕೆ.ಜಿ. ವಿಭಾಗ), ಭೂಮಿಕಾ ಮೋಹಿತೆ ಮತ್ತು ನಿಕಿತಾ ಕಮಾಲ್ಕರ್ (ವೇಟ್‌ಲಿಫ್ಟಿಂಗ್; 55 ಕೆ.ಜಿ. ವಿಭಾಗ), ಬಿಶಾಲ್ ಚಾಂಗ್ಮಾಯಿ (ಕೆಜಿಬಿ ಸುರೇಶ 8), ವಿಭಾಗ), ಉಸ್ಮಾನ್ ಅನಸಾರಿ (ಬಾಕ್ಸಿಂಗ್ 55 ಕೆ.ಜಿ ವಿಭಾಗ) ಮತ್ತು ದೇವಿಕಾ ಘೋರ್ಪಡೆ (ಬಾಕ್ಸಿಂಗ್ 52 ಕೆ.ಜಿ ವಿಭಾಗ).

ಮೊದಲ ಬಾರಿಗೆ ಮಧ್ಯಪ್ರದೇಶವು ಆಯೋಜಿಸುತ್ತಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್ 2022 ರಲ್ಲಿ ದೇಶಾದ್ಯಂತ 5,000 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಮಾನ್ಯ ಮುಖ್ಯಮಂತ್ರಿ ಶ್ರೀ. ಶಿವರಾಜ್ ಸಿಂಗ್ ಚೌಹಾಣ್ ಅವರು ಭೋಪಾಲ್‌ನಲ್ಲಿ ನಾಳೆ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ. ಖೇಲೋ ಇಂಡಿಯಾ ಯೂತ್ ಗೇಮ್ಸ್ 2022 ಮಧ್ಯಪ್ರದೇಶದ ಈ ಆವೃತ್ತಿಯನ್ನು ರಾಜ್ಯದ ಎಂಟು ನಗರಗಳಲ್ಲಿ ಆಯೋಜಿಸಲಾಗುತ್ತದೆ. ಭೋಪಾಲ್, ಇಂದೋರ್, ಗ್ವಾಲಿಯರ್, ಜಬಲ್ಪುರ್, ಉಜ್ಜಯಿನಿ, ಬಾಲಾಘಾಟ್, ಮಾಂಡ್ಲಾ, ಖಾರ್ಗೋನ್ (ಮಹೇಶ್ವರ) ಹಾಗೂ ಟ್ರ್ಯಾಕ್ ಸೈಕ್ಲಿಂಗ್ ಸ್ಪರ್ಧೆ ದೆಹಲಿಯಲ್ಲಿ ನಡೆಯಲಿದೆ. ಈ ಆವೃತ್ತಿಯು 27 ಕ್ರೀಡೆಗಳಲ್ಲಿ ಸ್ಪರ್ಧೆಗಳನ್ನು ಹೊಂದಿರುತ್ತದೆ ಮತ್ತು ಖೇಲೋ ಇಂಡಿಯಾ ಯೂತ್ ಗೇಮ್ಸ್ ರೋಸ್ಟರ್‌ಗೆ ಈ ಬಾರಿ ಜಲಕ್ರೀಡೆಯೂ ಸೇರ್ಪಡೆಯಾಗುತ್ತದೆ.

*****



(Release ID: 1894553) Visitor Counter : 114