ಪ್ರಧಾನ ಮಂತ್ರಿಯವರ ಕಛೇರಿ
ಕರ್ನಾಟಕದ ಕೊಡೇಕಲ್ ನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ
ಜಲ ಜೀವನ ಅಭಿಯಾನದ ಅಡಿಯಲ್ಲಿ ಯಾದಗಿರಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ
ನಾರಾಯಣಪುರ ಎಡದಂಡೆ ಕಾಲುವೆ - ವಿಸ್ತರಣೆ ನವೀಕರಣ ಮತ್ತು ಆಧುನೀಕರಣ ಯೋಜನೆಯ ಉದ್ಘಾಟನೆ
ರಾಷ್ಟ್ರೀಯ ಹೆದ್ದಾರಿ 150 ಸಿ ಯಲ್ಲಿ ಬಡದಲ್ ದಿಂದ ಮರಡಗಿ ಎಸ್ ಆಂದೋಲಾವರೆಗಿನ ಷಟ್ಪಥದ ಪ್ರವೇಶ ನಿಯಂತ್ರಿತ ಹಸಿರು ವಲಯ ಹೆದ್ದಾರಿಯ 65.5 ಕಿ.ಮೀ ವಿಭಾಗಕ್ಕೆ ಶಂಕುಸ್ಥಾಪನೆ
ಈ ಅಮೃತ ಕಾಲದಲ್ಲಿ ನಾವು ವಿಕಸಿತ ಭಾರತವನ್ನು ನಿರ್ಮಿಸಬೇಕಾಗಿದೆ
ಅಭಿವೃದ್ಧಿಯ ಮಾನದಂಡಗಳಲ್ಲಿ ದೇಶದ ಒಂದು ಜಿಲ್ಲೆ ಹಿಂದುಳಿದರೂ, ವಿಕಸಿತ ದೇಶವಾಗಲು ಸಾಧ್ಯವಿಲ್ಲ"
ಅದು ಶಿಕ್ಷಣವೇ ಇರಲಿ, ಆರೋಗ್ಯವೇ ಆಗಿರಲಿ ಅಥವಾ ಸಂಪರ್ಕವಾಗಿರಲಿ, ಅಭಿವೃದ್ಧಿ ಆಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದ ಅಗ್ರ 10 ಕಾರ್ಯ ನಿರ್ವಹಣೆದಾರರಲ್ಲಿ ಯಾದಗಿರಿ ಒಂದಾಗಿದೆ"
ಡಬಲ್ ಎಂಜಿನ್ ಸರ್ಕಾರವು ಮನ್ನಣೆ ಮತ್ತು ಕ್ರೋಡೀಕರಣದ ವಿಧಾನದೊಂದಿಗೆ ಕಾರ್ಯನಿರ್ವಹಿಸುತ್ತಿದೆ"
“ಯಾದಗಿರಿಯ ಸುಮಾರು 1.25 ಲಕ್ಷ ರೈತ ಕುಟುಂಬಗಳು ಪಿಎಂ ಕಿಸಾನ್ ನಿಧಿಯಿಂದ ಸುಮಾರು 250 ಕೋಟಿ ರೂ. ಪಡೆದಿದ್ದಾರೆ”
"ದೇಶದ ಕೃಷಿ ನೀತಿಯಲ್ಲಿ ಸಣ್ಣ ರೈತರು ಅತಿದೊಡ್ಡ ಆದ್ಯತೆಯಾಗಿದ್ದಾರೆ"
ಡಬಲ್ ಇಂಜಿನ್ ಸರ್ಕಾರ ಮೂಲಸೌಕರ್ಯ ಮತ್ತು ಸುಧಾರಣೆಗಳ ಮೇಲೆ ಗಮನ ಹರಿಸಿದ್ದು, ಕರ್ನಾಟಕವನ್ನು ಹೂಡಿಕೆದಾರರ ಆಯ್ಕೆಯನ್ನಾಗಿ ಪರಿವರ್ತಿಸುತ್ತಿದೆ"
Posted On:
19 JAN 2023 2:20PM by PIB Bengaluru
ಕರ್ನಾಟಕದ ಯಾದಗಿರಿ ಜಿಲ್ಲೆಯ ಕೊಡೇಕಲ್ ನಲ್ಲಿ ಪ್ರಧಾನಮಂತ್ರಿಯವರಿಂದು ನೀರಾವರಿ, ಕುಡಿಯುವ ನೀರು ಮತ್ತು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇದರಲ್ಲಿ ಜಲ ಜೀವನ ಅಭಿಯಾನದ ಅಡಿಯಲ್ಲಿ ಯಾದಗಿರಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಮತ್ತು ಸೂರತ್ -ಚೆನ್ನೈ ಎಕ್ಸ್ ಪ್ರೆಸ್ ಮಾರ್ಗ ರಾ.ಹೆ. -150 ಸಿ ಯ 65.5 ಕಿ.ಮೀ ವಿಭಾಗಕ್ಕೆ (ಬಡದಲ್ ನಿಂದ ಮರಡಗಿ ಎಸ್ ಆಂದೋಲಾ) ಶಂಕುಸ್ಥಾಪನೆ ನೆರವೇರಿಸಿ, ನಾರಾಯಣಪುರ ಎಡದಂಡೆ ಕಾಲುವೆ - ವಿಸ್ತರಣೆ ನವೀಕರಣ ಮತ್ತು ಆಧುನೀಕರಣ ಯೋಜನೆ (ಎನ್ ಎಲ್ ಬಿಸಿ - ಇಆರ್ ಎಂ) ಉದ್ಘಾಟನೆಯೂ ಸೇರಿದೆ.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಕರ್ನಾಟಕದ ಜನತೆಯ ಪ್ರೀತಿ ಮತ್ತು ಬೆಂಬಲದ ಬಗ್ಗೆ ಪ್ರಸ್ತಾಪಿಸಿ, ಅದು ದೊಡ್ಡ ಶಕ್ತಿಯ ಮೂಲವಾಗಿ ಮಾರ್ಪಟ್ಟಿದೆ ಎಂದರು. ಯಾದಗಿರಿಯ ಶ್ರೀಮಂತ ಇತಿಹಾಸದ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ರಟ್ಟೀಹಳ್ಳಿಯ ಪ್ರಾಚೀನ ಕೋಟೆಯು ನಮ್ಮ ಪೂರ್ವಜರ ಸಾಮರ್ಥ್ಯಗಳ ಸಂಕೇತವಾಗಿದ್ದು, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತದೆ ಎಂದರು. ಮಹಾರಾಜ ವೆಂಕಟಪ್ಪ ನಾಯಕ ಅವರ ಪರಂಪರೆಯನ್ನು ಅವರು ಉಲ್ಲೇಖಿಸಿ, ಸ್ವರಾಜ್ಯ ಮತ್ತು ಉತ್ತಮ ಆಡಳಿತದ ಅವರ ಕಲ್ಪನೆ ದೇಶಾದ್ಯಂತ ಖ್ಯಾತವಾಗಿದೆ ಎಂದರು. "ಈ ಪರಂಪರೆಯ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡುತ್ತೇವೆ" ಎಂದು ಪ್ರಧಾನಮಂತ್ರಿ ಹೇಳಿದರು.
ಇಂದು ಲೋಕಾರ್ಪಣೆಯಾದ ಅಥವಾ ಶಂಕುಸ್ಥಾಪನೆ ನೆರವೇರಿದ ರಸ್ತೆಗಳು ಮತ್ತು ನೀರಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಈ ಯೋಜನೆಗಳು ಈ ಪ್ರದೇಶದ ಜನರಿಗೆ ಭಾರಿ ಪ್ರಯೋಜನಗಳನ್ನು ತರಲಿವೆ ಎಂದರು. ಸೂರತ್ - ಚೆನ್ನೈ ಕಾರಿಡಾರ್ ನ ಕರ್ನಾಟಕ ಭಾಗದ ಕಾಮಗಾರಿ ಇಂದು ಪ್ರಾರಂಭವಾಯಿತು, ಇದು ಯಾದಗಿರಿ, ರಾಯಚೂರು ಮತ್ತು ಕಲ್ಬುರ್ಗಿ ಸೇರಿದಂತೆ ಈ ಪ್ರದೇಶದಲ್ಲಿ ಸುಗಮ ಜೀವನವನ್ನು ಕಲ್ಪಿಸುತ್ತದೆ ಮತ್ತು ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆಗೆ ಸಹಾಯ ಮಾಡುತ್ತದೆ. ಉತ್ತರ ಕರ್ನಾಟಕದ ಅಭಿವೃದ್ಧಿ ಕಾರ್ಯಗಳಿಗಾಗಿ ರಾಜ್ಯ ಸರ್ಕಾರವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು.
ಮುಂಬರುವ 25 ವರ್ಷಗಳು ದೇಶಕ್ಕೆ ಮತ್ತು ಪ್ರತಿ ರಾಜ್ಯಕ್ಕೂ 'ಅಮೃತ ಕಾಲ'ವಾಗಿದೆ ಎಂದು ಪ್ರಧಾನಮಂತ್ರಿ ನೆನಪಿಸಿದರು. "ಈ ಅಮೃತ ಕಾಲದ ಸಮಯದಲ್ಲಿ ನಾವು ವಿಕಸಿತ ಭಾರತವನ್ನು ರೂಪಿಸಬೇಕಾಗಿದೆ. ಪ್ರತಿಯೊಬ್ಬ ವ್ಯಕ್ತಿ, ಕುಟುಂಬ ಮತ್ತು ರಾಜ್ಯವು ಈ ಅಭಿಯಾನದೊಂದಿಗೆ ಸಂಬಂಧ ಹೊಂದಿದಾಗ ಮಾತ್ರ ಇದು ಸಂಭವಿಸುತ್ತದೆ. ಕ್ಷೇತ್ರದಲ್ಲಿ ರೈತ ಮತ್ತು ಉದ್ಯಮಿಯ ಜೀವನ ಸುಧಾರಿಸಿದಾಗ ಭಾರತ ಅಭಿವೃದ್ಧಿಹೊಂದುತ್ತದೆ. ಉತ್ತಮ ಇಳುವರಿ ಇದ್ದಾಗ ಭಾರತ ಅಭಿವೃದ್ಧಿಯಾಗುತ್ತದೆ, ಮತ್ತು ಕಾರ್ಖಾನೆಯ ಉತ್ಪಾದನೆಯೂ ವಿಸ್ತರಣೆಯಾಗುತ್ತದೆ. ಇದಕ್ಕೆ ಹಿಂದಿನ ನಕಾರಾತ್ಮಕ ಅನುಭವಗಳು ಮತ್ತು ಕೆಟ್ಟ ನೀತಿಗಳಿಂದ ಪಾಠ ಕಲಿಯುವ ಅಗತ್ಯವಿದೆ" ಎಂದು ಅವರು ಹೇಳಿದರು. ಉತ್ತರ ಕರ್ನಾಟಕದ ಯಾದಗಿರಿಯ ಉದಾಹರಣೆಯನ್ನು ನೀಡಿದ ಪ್ರಧಾನಮಂತ್ರಿಯವರು, ಅಭಿವೃದ್ಧಿಯ ಪಥದಲ್ಲಿ ಈ ಪ್ರದೇಶವು ಹಿಂದುಳಿದಿದೆ ಎಂದು ವಿಷಾದಿಸಿದರು.
ಈ ಪ್ರದೇಶವು ಸಾಮರ್ಥ್ಯವನ್ನು ಹೊಂದಿದ್ದರೂ, ಹಿಂದಿನ ಸರ್ಕಾರಗಳು ಯಾದಗಿರಿ ಮತ್ತು ಅಂತಹ ಇತರ ಜಿಲ್ಲೆಗಳನ್ನು ಹಿಂದುಳಿದ ಜಿಲ್ಲೆ ಎಂದು ಘೋಷಿಸುವ ಮೂಲಕ ತಮ್ಮನ್ನು ಮುಕ್ತಗೊಳಿಸಿಕೊಂಡವು ಎಂದು ಪ್ರಧಾನಮಂತ್ರಿ ಹೇಳಿದರು. ಹಿಂದಿನ ಆಡಳಿತಾರೂಢ ಸರ್ಕಾರಗಳು ವೋಟ್ ಬ್ಯಾಂಕ್ ರಾಜಕೀಯದಲ್ಲಿ ತೊಡಗಿದ್ದ ಸಮಯವನ್ನು ಅವರು ಸ್ಮರಿಸಿ, ವಿದ್ಯುತ್, ರಸ್ತೆ ಮತ್ತು ನೀರಿನಂತಹ ಮೂಲಭೂತ ಸೌಕರ್ಯಗಳ ಬಗ್ಗೆ ಗಮನ ಹರಿಸಲಿಲ್ಲ ಎಂದರು. ಪ್ರಸ್ತುತ ಸರ್ಕಾರದ ಆದ್ಯತೆಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಅದರ ಗಮನ ಕೇವಲ ಅಭಿವೃದ್ಧಿಯ ಮೇಲಿದೆಯೇ ಹೊರತು ವೋಟ್ ಬ್ಯಾಂಕ್ ರಾಜಕೀಯದ ಮೇಲಲ್ಲ ಎಂದರು. "ಅಭಿವೃದ್ಧಿಯ ಮಾನದಂಡಗಳಲ್ಲಿ ದೇಶದ ಒಂದು ಜಿಲ್ಲೆ ಹಿಂದುಳಿದರೂ, ದೇಶವು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ" ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಸ್ತುತ ಸರ್ಕಾರವು ಅತ್ಯಂತ ಹಿಂದುಳಿದ ಪ್ರದೇಶಗಳಿಗೆ ಆದ್ಯತೆ ನೀಡಿದ್ದು, ಯಾದಗಿರಿ ಸೇರಿದಂತೆ ನೂರು ಅಭಿವೃದ್ಧಿ ಆಕಾಂಕ್ಷೆಯ ಗ್ರಾಮಗಳ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಅವರು ಉಲ್ಲೇಖಿಸಿದರು. ಯಾದಗಿರಿ ಜಿಲ್ಲೆಯಲ್ಲಿ ಶೇ.100ರಷ್ಟು ಮಕ್ಕಳಿಗೆ ಲಸಿಕೆ ಹಾಕಲಾಗಿದೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಗಣನೀಯವಾಗಿ ತಗ್ಗಿದೆ, ಜಿಲ್ಲೆಯ ಎಲ್ಲ ಗ್ರಾಮಗಳು ರಸ್ತೆಗಳ ಮೂಲಕ ಸಂಪರ್ಕ ಹೊಂದಿವೆ ಮತ್ತು ಡಿಜಿಟಲ್ ಸೇವೆಗಳನ್ನು ಒದಗಿಸಲು ಗ್ರಾಮ ಪಂಚಾಯಿತಿಗಳಲ್ಲಿ ಸಾಮಾನ್ಯ ಸೇವಾ ಕೇಂದ್ರಗಳ ಸೇವೆ ಲಭ್ಯವಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. "ಶಿಕ್ಷಣವೇ ಇರಲಿ, ಆರೋಗ್ಯವೇ ಆಗಿರಲಿ ಅಥವಾ ಸಂಪರ್ಕ ಯಾವುದೇ ಇರಲಿ, ಅಭಿವೃದ್ಧಿ ಆಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದ ಅಗ್ರ 10 ಕಾರ್ಯ ನಿರ್ವಹಣೆದಾರರಲ್ಲಿ ಯಾದಗಿರಿ ಕೂಡ ಒಂದಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಜನ ಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ಗಮನಾರ್ಹ ಸಾಧನೆಗಳನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು.
21 ನೇ ಶತಮಾನದ ಭಾರತದ ಅಭಿವೃದ್ಧಿಗೆ ಜಲ ಭದ್ರತೆಯ ಮಹತ್ವವನ್ನು ಪ್ರತಿಪಾದಿಸಿದ ಪ್ರಧಾನಮಂತ್ರಿ, ಇದು ಗಡಿ, ಕರಾವಳಿ ಮತ್ತು ಆಂತರಿಕ ಭದ್ರತೆಗೆ ಸಮನಾಗಿ ನಿಂತಿದೆ ಎಂದು ಹೇಳಿದರು. ಡಬಲ್ ಎಂಜಿನ್ ಸರ್ಕಾರ ಮನ್ನಣೆ ಮತ್ತು ಕ್ರೋಡೀಕರಣದ ವಿಧಾನದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, 2014ರಲ್ಲಿ ಬಾಕಿ ಉಳಿದಿದ್ದ 99 ನೀರಾವರಿ ಯೋಜನೆಗಳ ಪೈಕಿ ಈಗಾಗಲೇ 50 ಪೂರ್ಣಗೊಂಡಿದ್ದು, ಯೋಜನೆಗಳನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದರು. ಕರ್ನಾಟಕದಲ್ಲೂ ಇಂತಹ ಅನೇಕ ಯೋಜನೆಗಳು ನಡೆಯುತ್ತಿವೆ. ನಾರಾಯಣಪುರ ಎಡದಂಡೆ ಕಾಲುವೆ - ವಿಸ್ತರಣೆ ನವೀಕರಣ ಮತ್ತು ಆಧುನೀಕರಣ ಯೋಜನೆ (ಎನ್ಎಲ್ಬಿಸಿ- ಇಆರ್.ಎಂ) 10,000 ಕ್ಯೂಸೆಕ್ ನೀರು ಸಾಗಿಸುವ ಸಾಮರ್ಥ್ಯದ ಕಾಲುವೆಯಾಗಿದ್ದು, 4.5 ಲಕ್ಷ ಹೆಕ್ಟೇರ್ ಜಲಾನಯನ ಪ್ರದೇಶಕ್ಕೆ ನೀರಾವರಿ ಸೌಕರ್ಯ ಕಲ್ಪಿಸುತ್ತದೆ ಎಂದು ಅವರು ಮಾಹಿತಿ ನೀಡಿದರು. ಕಳೆದ 7-8 ವರ್ಷಗಳಲ್ಲಿ 70 ಲಕ್ಷ ಹೆಕ್ಟೇರ್ ಗಿಂತಲೂ ಹೆಚ್ಚು ಭೂಮಿಯನ್ನು ಸೂಕ್ಷ್ಮ ನೀರಾವರಿ ವ್ಯಾಪ್ತಿಗೆ ತಂದಿರುವ, ಸೂಕ್ಷ್ಮ ನೀರಾವರಿ ಮತ್ತು 'ಪ್ರತಿ ಹನಿ ಹೆಚ್ಚು ಬೆಳೆ'ಯ ಮೇಲೆ ಅಭೂತಪೂರ್ವ ಗಮನ ಹರಿಸಿರುವ ಬಗ್ಗೆಯೂ ಶ್ರೀ ಮೋದಿ ಮಾತನಾಡಿದರು. ಇಂದಿನ ಯೋಜನೆಯು ಕರ್ನಾಟಕದ 5 ಲಕ್ಷ ಹೆಕ್ಟೇರ್ ಭೂಮಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಕೆಲಸ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಡಬಲ್ ಇಂಜಿನ್ ಸರ್ಕಾರದಲ್ಲಿ ಸಾಧಿಸಲಾದ ಕಾರ್ಯಗಳ ಉದಾಹರಣೆ ನೀಡಿದ ಪ್ರಧಾನಮಂತ್ರಿಯವರು, ಮೂರೂವರೆ ವರ್ಷಗಳ ಹಿಂದೆ ಜಲ ಜೀವನ ಅಭಿಯಾನ ಪ್ರಾರಂಭವಾದಾಗ, ಹದಿನೆಂಟು ಕೋಟಿ ಗ್ರಾಮೀಣ ಕುಟುಂಬಗಳ ಪೈಕಿ ಕೇವಲ ಮೂರು ಕೋಟಿ ಗ್ರಾಮೀಣ ಕುಟುಂಬಗಳು ಮಾತ್ರ ಕೊಳವೆ ನೀರಿನ ಸಂಪರ್ಕವನ್ನು ಹೊಂದಿದ್ದವು. "ಇಂದು ಆ ಸಂಖ್ಯೆ ಹನ್ನೊಂದು ಕೋಟಿ ಗ್ರಾಮೀಣ ಕುಟುಂಬಗಳಿಗೆ ಏರಿದೆ", "ಈ ಪೈಕಿ ಮೂವತ್ತೈದು ಲಕ್ಷ ಕುಟುಂಬಗಳು ಕರ್ನಾಟಕದಲ್ಲಿವೆ" ಎಂದು ಪ್ರಧಾನಮಂತ್ರಿ ಹೇಳಿದರು. ಯಾದಗಿರಿ ಮತ್ತು ರಾಯಚೂರಿನಲ್ಲಿ ಪ್ರತಿ ಮನೆಗೆ ನೀರಿನ ಪೂರೈಕೆ ವ್ಯಾಪ್ತಿಯು ಕರ್ನಾಟಕ ಮತ್ತು ದೇಶದ ಒಟ್ಟಾರೆ ಸರಾಸರಿಗಿಂತ ಹೆಚ್ಚಾಗಿದೆ ಎಂದು ಅವರು ಉಲ್ಲೇಖಿಸಿದರು.
ಇಂದು ಉದ್ಘಾಟಿಸಲಾದ ಯೋಜನೆಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಯಾದಗಿರಿಯ ಪ್ರತಿಯೊಂದು ಮನೆಗೂ ನಲ್ಲಿ ನೀರು ಒದಗಿಸುವ ಗುರಿಗೆ ಉತ್ತೇಜನ ದೊರೆಯಲಿದೆ ಎಂದು ಒತ್ತಿ ಹೇಳಿದರು. ಭಾರತದ ಜಲ ಜೀವನ ಅಭಿಯಾನದ ಪರಿಣಾಮದಿಂದಾಗಿ ಪ್ರತಿವರ್ಷ 1.25 ಲಕ್ಷಕ್ಕೂ ಹೆಚ್ಚು ಮಕ್ಕಳ ಜೀವಗಳನ್ನು ಉಳಿಸಲಾಗುತ್ತಿದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ ಎಂದು ಅವರು ಮಾಹಿತಿ ನೀಡಿದರು. ಹರ್ ಘರ್ ಜಲ್ ಅಭಿಯಾನದ ಪ್ರಯೋಜನಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರವು ರೈತರಿಗೆ ವಾರ್ಷಿಕ 6,000 ರೂ.ಗಳನ್ನು ನೀಡುತ್ತದೆ ಮತ್ತು ಕರ್ನಾಟಕ ಸರ್ಕಾರವು ಇನ್ನೂ 4,000 ರೂ.ಗಳನ್ನು ಇದಕ್ಕೆ ಸೇರಿಸಿದೆ, ಇದು ರೈತರಿಗೆ ಪ್ರಯೋಜನಗಳನ್ನು ದುಪ್ಪಟ್ಟುಗೊಳಿಸುತ್ತದೆ ಎಂದು ಒತ್ತಿ ಹೇಳಿದರು. "ಯಾದಗಿರಿಯ ಸುಮಾರು 1.25 ಲಕ್ಷ ರೈತ ಕುಟುಂಬಗಳು ಪಿಎಂ ಕಿಸಾನ್ ನಿಧಿಯಿಂದ ಸುಮಾರು 250 ಕೋಟಿ ರೂ.ಗಳನ್ನು ಪಡೆದಿವೆ" ಎಂದು ಪ್ರಧಾನಮಂತ್ರಿ ಹೇಳಿದರು.
ಡಬಲ್ ಇಂಜಿನ್ ಸರ್ಕಾರದ ಲಯವನ್ನು ಮತ್ತಷ್ಟು ವಿವರಿಸಿದ ಪ್ರಧಾನಮಂತ್ರಿಯವರು, ಕೇಂದ್ರವು ಹೊಸ ಶಿಕ್ಷಣ ನೀತಿಯನ್ನು ಪ್ರಾರಂಭಿಸುತ್ತಿದ್ದಂತೆ, ಕರ್ನಾಟಕ ಸರ್ಕಾರವು ವಿದ್ಯಾ ನಿಧಿ ಯೋಜನೆಗಳ ಮೂಲಕ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದೆ, ಏಕೆಂದರೆ ಕೇಂದ್ರವು ಪ್ರಗತಿಯ ಚಕ್ರವನ್ನು ಉರುಳಿಸುತ್ತಿದೆ, ಕರ್ನಾಟಕವು ಹೂಡಿಕೆದಾರರಿಗೆ ರಾಜ್ಯವನ್ನು ಆಕರ್ಷಕವಾಗಿಸುತ್ತಿದೆ ಎಂದರು. ಕರ್ನಾಟಕ ಸರ್ಕಾರವು ಮುದ್ರಾ ಯೋಜನೆಯಡಿ ನೇಕಾರರಿಗೆ ಹೆಚ್ಚಿನ ನೆರವು ನೀಡುವ ಮೂಲಕ ಕೇಂದ್ರದ ನೆರವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.
ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವೂ ಯಾವುದೇ ವ್ಯಕ್ತಿ, ವರ್ಗ ಅಥವಾ ಪ್ರದೇಶವು ವಂಚಿತವಾಗಿದ್ದರೆ, ಪ್ರಸ್ತುತ ಸರ್ಕಾರ ಅವರಿಗೆ ಗರಿಷ್ಠ ಆದ್ಯತೆ ನೀಡುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ನಮ್ಮ ದೇಶದ ಕೋಟ್ಯಂತರ ಸಣ್ಣ ರೈತರು ದಶಕಗಳಿಂದ ಪ್ರತಿಯೊಂದು ಸೌಕರ್ಯದಿಂದ ವಂಚಿತರಾಗಿದ್ದರು ಆದರೆ ಸರ್ಕಾರದ ನೀತಿಗಳಲ್ಲಿಯೂ ಯಾವುದೇ ಪ್ರಯತ್ನವನ್ನು ಮಾಡಲಾಗಲಿಲ್ಲ ಎಂದು ಅವರು ಉಲ್ಲೇಖಿಸಿದರು. ಇಂದು ಈ ಸಣ್ಣ ರೈತರು ದೇಶದ ಕೃಷಿ ನೀತಿಯ ಅತಿ ದೊಡ್ಡ ಆದ್ಯತೆಯಾಗಿದ್ದಾರೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಯಂತ್ರೋಪಕರಣಗಳಿಗಾಗಿ ರೈತರಿಗೆ ಸಹಾಯ ಮಾಡುವುದು, ಡ್ರೋನ್ ಗಳಂತಹ ಆಧುನಿಕ ತಂತ್ರಜ್ಞಾನದತ್ತ ಅವರನ್ನು ಕರೆದೊಯ್ಯುವುದು, ನ್ಯಾನೊ ಯೂರಿಯಾದಂತಹ ರಾಸಾಯನಿಕ ಗೊಬ್ಬರಗಳನ್ನು ಒದಗಿಸುವುದು, ನೈಸರ್ಗಿಕ ಕೃಷಿಗೆ ಪ್ರೋತ್ಸಾಹ, ಸಣ್ಣ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ನೀಡುವುದು ಮತ್ತು ಪಶುಸಂಗೋಪನೆ, ಮೀನುಗಾರಿಕೆ ಮತ್ತು ಜೇನು ಸಾಕಾಣಿಕೆಯನ್ನು ಬೆಂಬಲಿಸುತ್ತಿರುವ ಉದಾಹರಣೆಗಳನ್ನು ಪ್ರಧಾನಮಂತ್ರಿ ನೀಡಿದರು.
ಈ ಪ್ರದೇಶವನ್ನು ದ್ವಿದಳ ಧಾನ್ಯದ ಕಣಜವನ್ನಾಗಿ ಮಾಡಿದ್ದಕ್ಕಾಗಿ ಮತ್ತು ಈ ವಲಯದಲ್ಲಿ ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಲು ದೇಶಕ್ಕೆ ನೆರವಾಗಿದ್ದಕ್ಕಾಗಿ ಸ್ಥಳೀಯ ರೈತರನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಕಳೆದ 8 ವರ್ಷಗಳಲ್ಲಿ ಎಂಎಸ್.ಪಿ. ಅಡಿಯಲ್ಲಿ 80 ಪಟ್ಟು ಹೆಚ್ಚು ಬೇಳೆಕಾಳುಗಳನ್ನು ಖರೀದಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. 2014ಕ್ಕೆ ಮೊದಲು ಕೆಲವೇ ನೂರು ಕೋಟಿ ರೂ. ಪಡೆದಿದ್ದ ದ್ವಿದಳ ಧಾನ್ಯ ಬೆಳೆಯುವ ರೈತರು ಕಳೆದ 8 ವರ್ಷಗಳಲ್ಲಿ 60 ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣ ಪಡೆದಿದ್ದಾರೆ ಎಂದರು.
ವಿಶ್ವಸಂಸ್ಥೆಯು 2023ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಿದೆ ಎಂದು ತಿಳಿಸಿದ ಪ್ರಧಾನಮಂತ್ರಿಯವರು, ಕರ್ನಾಟಕದಲ್ಲಿ ಜೋಳ ಮತ್ತು ರಾಗಿಯಂತಹ ಸಿರಿ ಧಾನ್ಯಗಳನ್ನು ಹೇರಳವಾಗಿ ಬೆಳೆಯಲಾಗುತ್ತಿದೆ ಎಂದರು. ಈ ಪೌಷ್ಟಿಕ ಸಿರಿ ಧಾನ್ಯದ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಅದನ್ನು ವಿಶ್ವಾದ್ಯಂತ ಉತ್ತೇಜಿಸಲು ಡಬಲ್ ಎಂಜಿನ್ ಸರ್ಕಾರ ಬದ್ಧವಾಗಿದೆ ಎಂದು ಅವರು ಒತ್ತಿ ಹೇಳಿದರು. ಈ ಉಪಕ್ರಮವನ್ನು ಮುನ್ನಡೆಸುವಲ್ಲಿ ಕರ್ನಾಟಕದ ರೈತರು ಪ್ರಮುಖ ಪಾತ್ರ ವಹಿಸುತ್ತಾರೆ ಎಂಬ ವಿಶ್ವಾಸವನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಸಂಪರ್ಕದ ವಿಷಯಕ್ಕೆ ಬಂದಾಗ ಡಬಲ್ ಎಂಜಿನ್ ಸರ್ಕಾರದ ಪ್ರಯೋಜನಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಇದು ಕೃಷಿ, ಕೈಗಾರಿಕೆ ಮತ್ತು ಪ್ರವಾಸೋದ್ಯಮ ವಲಯಕ್ಕೆ ಸಮಾನವಾಗಿ ಮುಖ್ಯವಾಗಿದೆ ಮತ್ತು ಸೂರತ್-ಚೆನ್ನೈ ಆರ್ಥಿಕ ಕಾರಿಡಾರ್ ಪೂರ್ಣಗೊಂಡ ನಂತರ ಉತ್ತರ ಕರ್ನಾಟಕದ ಹೆಚ್ಚಿನ ಭಾಗಗಳಿಗೆ ಆಗುವ ಪ್ರಯೋಜನಗಳನ್ನು ಪ್ರತಿಪಾದಿಸಿದರು. ಆಗ ದೇಶವಾಸಿಗಳಿಗೆ ಉತ್ತರ ಕರ್ನಾಟಕದ ಪ್ರವಾಸಿ ತಾಣಗಳು ಮತ್ತು ಯಾತ್ರಾ ಸ್ಥಳಗಳನ್ನು ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ, ಇದರಿಂದಾಗಿ ಯುವಕರಿಗೆ ಸಾವಿರಾರು ಹೊಸ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂದು ಪ್ರಧಾನಮಂತ್ರಿ ತಿಳಿಸಿದರು. "ಮೂಲಸೌಕರ್ಯ ಮತ್ತು ಸುಧಾರಣೆಗಳ ಮೇಲಿನ ಡಬಲ್ ಇಂಜಿನ್ ಸರ್ಕಾರದ ಗಮನ ಕರ್ನಾಟಕವನ್ನು ಹೂಡಿಕೆದಾರರ ಆಯ್ಕೆಯನ್ನಾಗಿ ಮಾಡುತ್ತಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದಲ್ಲಿ ಹೂಡಿಕೆ ಮಾಡಲು ವಿಶ್ವದಾದ್ಯಂತದ ಇರುವ ಉತ್ಸಾಹದಿಂದಾಗಿ ಭವಿಷ್ಯದಲ್ಲಿ ಇಂತಹ ಹೂಡಿಕೆಗಳು ಮತ್ತಷ್ಟು ಹೆಚ್ಚಾಗಲಿವೆ ಎಂದು ಹೇಳಿದರು.
ಕರ್ನಾಟಕದ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಕೇಂದ್ರದ ಸಹಾಯಕ ಸಚಿವ ಶ್ರೀ ಭಗವಂತ ಖೂಬಾ ಮತ್ತು ಕರ್ನಾಟಕ ಸರ್ಕಾರದ ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಎಲ್ಲ ಮನೆಗಳಿಗೆ ವೈಯಕ್ತಿಕ ನಲ್ಲಿ/ಕೊಳಾಯಿ ಸಂಪರ್ಕಗಳ ಮೂಲಕ ಸುರಕ್ಷಿತ ಮತ್ತು ಸಮರ್ಪಕ ಕುಡಿಯುವ ನೀರನ್ನು ಒದಗಿಸುವ ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ಸಾಕಾರಗೊಳಿಸುವ ಮತ್ತೊಂದು ಹೆಜ್ಜೆಯಾಗಿ, ಜಲ ಜೀವನ ಅಭಿಯಾನದ ಅಡಿಯಲ್ಲಿ ಯಾದಗಿರಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಯಾದಗಿರಿ ಜಿಲ್ಲೆಯ ಕೊಡೇಕಲ್ ನಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಯೋಜನೆಯಡಿ 117 ಎಂಎಲ್.ಡಿ ನೀರು ಸಂಸ್ಕರಣಾ ಘಟಕವನ್ನು ನಿರ್ಮಿಸಲಾಗುವುದು. 2050 ಕೋಟಿ ರೂ.ಗೂ ಹೆಚ್ಚು ವೆಚ್ಚದ ಈ ಯೋಜನೆಯು ಯಾದಗಿರಿ ಜಿಲ್ಲೆಯ 700 ಕ್ಕೂ ಹೆಚ್ಚು ಗ್ರಾಮೀಣ ಜನವಸತಿಗಳು ಮತ್ತು ಮೂರು ಪಟ್ಟಣಗಳ ಸುಮಾರು 2.3 ಲಕ್ಷ ಮನೆಗಳಿಗೆ ಕುಡಿಯುವ ನೀರನ್ನು ಒದಗಿಸುತ್ತದೆ.
ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ನಾರಾಯಣಪುರ ಎಡದಂಡೆ ಕಾಲುವೆ – ವಿಸ್ತರಣಾ ನವೀಕರಣ ಮತ್ತು ಆಧುನೀಕರಣ ಯೋಜನೆ (ಎನ್ ಎಲ್ ಬಿಸಿ – ಇಆರ್ ಎಂ) ಉದ್ಘಾಟಿಸಿದರು. 10,000 ಕ್ಯುಸೆಕ್ ನೀರು ಸಾಗಿಸುವ ಸಾಮರ್ಥ್ಯ ಹೊಂದಿರುವ ಕಾಲುವೆಯ ಈ ಯೋಜನೆಯು 4.5 ಲಕ್ಷ ಹೆಕ್ಟೇರ್ ಜಲಾನಯನ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುತ್ತದೆ. ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳ 560 ಗ್ರಾಮಗಳ 3 ಲಕ್ಷಕ್ಕೂ ಹೆಚ್ಚು ರೈತರಿಗೆ ಇದರಿಂದ ಪ್ರಯೋಜನವಾಗಲಿದೆ. ಯೋಜನೆಯ ಒಟ್ಟು ವೆಚ್ಚ ಸುಮಾರು 47೦೦ ಕೋಟಿ ರೂ. ಆಗಿದೆ.
ರಾಷ್ಟ್ರೀಯ ಹೆದ್ದಾರಿ 150ಸಿಯ 65.5 ಕಿ.ಮೀ ವಿಭಾಗಕ್ಕೂ ಅವರು ಶಂಕುಸ್ಥಾಪನೆ ನೆರವೇರಿಸಿದರು. ಈ 6 ಪಥದ ಹಸಿರು ವಲಯ ರಸ್ತೆ ಯೋಜನೆಯು ಸೂರತ್ - ಚೆನ್ನೈ ಎಕ್ಸ್ ಪ್ರೆಸ್ ಮಾರ್ಗದ ಭಾಗವಾಗಿದೆ. ಇದನ್ನು ಸುಮಾರು 2೦೦೦ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.
*****
(Release ID: 1892278)
Visitor Counter : 255
Read this release in:
Bengali
,
English
,
Urdu
,
Marathi
,
Hindi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam