ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ಕಳೆದ 2 ವರ್ಷಗಳಲ್ಲಿ, ಪಿಎಂ ಸ್ವನಿಧಿ 45.32 ಲಕ್ಷ ಫಲಾನುಭವಿಗಳಿಗೆ ಎರಡು ಕಂತುಗಳಲ್ಲಿ 4,606.36 ಕೋಟಿ ರೂ. ಮೌಲ್ಯದ 40.07 ಲಕ್ಷಕ್ಕೂ ಹೆಚ್ಚು ಸಾಲ ವಿತರಿಸಿದೆ: ಹರ್ದೀಪ್ ಎಸ್. ಪುರಿ
ಪಿಎಂ ಸ್ವನಿಧಿಯು ಬೀದಿ ಬದಿ ವ್ಯಾಪಾರಿಗಳಿಗೆ ಡಿಜಿಟಲ್ ವಹಿವಾಟು ನಡೆಸಲು ಅನುಕೂಲ ಕಲ್ಪಿಸುವ ಮೂಲಕ ಹಣಪೂರಣಕ್ಕೆ ವೇದಿಕೆ ಒದಗಿಸುತ್ತದೆ: ಹರ್ದೀಪ್ ಎಸ್ ಪುರಿ
ಪಿಎಂ ಸ್ವನಿಧಿ ಯೋಜನೆಯು ಸ್ವಿಗ್ಗಿ ಮತ್ತು ಜೊಮ್ಯಾಟೊದಂತಹ ಆಹಾರ ವಿತರಣಾ ವೇದಿಕೆಗಳಲ್ಲಿ 9,326 ಬೀದಿ ಬದಿ ವ್ಯಾಪಾರಿಗಳನ್ನು ಹೊಸದಾಗಿ ಕೆಲಸಕ್ಕೆ ಸೇರ್ಪಡೆ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ
ರಾಷ್ಟ್ರೀಯ ಬೀದಿಬದಿ ಆಹಾರ ಉತ್ಸವ ಉದ್ಘಾಟಿಸಿದ ಕೇಂದ್ರ ಸಚಿವ ಹರ್ದೀಪ್ ಎಸ್. ಪುರಿ
Posted On:
13 JAN 2023 5:34PM by PIB Bengaluru
• ಭಾರತೀಯ ಬೀದಿ ಬದಿ ವ್ಯಾಪಾರಿಗಳ ರಾಷ್ಟ್ರೀಯ ಸಂಸ್ಥೆ -(ಎನ್ಎಎಸ್.ವಿ.ಐ) ರಾಷ್ಟ್ರೀಯ ಬೀದಿ ಬದಿ ಆಹಾರ ಉತ್ಸವದ 12ನೇ ಆವೃತ್ತಿಯನ್ನು ಆಯೋಜಿಸಿದೆ
• ದೇಶದ ಮೂಲೆ ಮೂಲೆಗಳಿಂದ ಪಾಕಪದ್ಧತಿಗಳನ್ನು ಪ್ರದರ್ಶಿಸಲು ಬೀದಿ ಬದಿ ಆಹಾರ ಮಾರಾಟಗಾರರಿಗೆ ಇದು ಒಂದು ವಿಶಿಷ್ಟ ವೇದಿಕೆಯಾಗಿದೆ
• “ಬೀದಿಬದಿ ವ್ಯಾಪಾರಿಗಳಿಗೆ ಉದ್ಯೋಗಾವಕಾಶವರ್ಧನೆ ಸಾಮರ್ಥ್ಯವನ್ನು ಈ ವೇದಿಕೆ ಹೊಂದಿದೆ ಎಂದು ನಾನು ನಂಬುತ್ತೇನೆ”. - ಶ್ರೀ ಹರ್ದೀಪ್ ಎಸ್ ಪುರಿ |
ಇಂದು ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (ಪಿ.ಎಂ.ಸ್ವನಿಧಿ)ಯ ಬಗ್ಗೆ ಮಾತನಾಡಿದ ವಸತಿ ಮತ್ತು ನಗರ ವ್ಯವಹಾರಗಳು ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಶ್ರೀ ಹರ್ದೀಪ್ ಎಸ್. ಪುರಿ, ಈ ಯೋಜನೆಗೆ ದೇಶಾದ್ಯಂತದ ಬೀದಿ ಬದಿ ವ್ಯಾಪಾರಿಗಳಿಂದ ಅಗಾಧವಾದ ಸಕಾರಾತ್ಮಕ ಸ್ಪಂದನೆ ದೊರೆತಿದ್ದು, ಇದು ಭಾರತ ಸರ್ಕಾರದ ಅತ್ಯಂತ ವೇಗವಾಗಿ ವೃದ್ಧಿಸುತ್ತಿರುವ ಸೂಕ್ಷ್ಮ-ಸಾಲ ಯೋಜನೆಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಕಳೆದ ಎರಡು ವರ್ಷಗಳಲ್ಲಿ, ಪ್ರಧಾನಮಂತ್ರಿ ಸ್ವನಿಧಿ ಎರಡು ಕಂತುಗಳಲ್ಲಿ 45.32 ಲಕ್ಷ ಫಲಾನುಭವಿಗಳಿಗೆ 4,606.36 ಕೋಟಿ ರೂ.ಗಳ ಮೌಲ್ಯದ 40.07 ಲಕ್ಷಕ್ಕೂ ಹೆಚ್ಚು ಸಾಲಗಳನ್ನು ವಿತರಿಸಿದೆ ಎಂದರು.
"ಡಿಜಿಟಲ್ ಇಂಡಿಯಾ ದೃಷ್ಟಿಕೋನಕ್ಕೆ ಅನುಗುಣವಾಗಿ, ಪಿಎಂ ಸ್ವನಿಧಿ ಡಿಜಿಟಲ್ ವಹಿವಾಟುಗಳನ್ನು ನಡೆಸಲು ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸುವ ಮೂಲಕ ಹಣಪೂರಣಕ್ಕೆ ವೇದಿಕೆಯನ್ನು ಒದಗಿಸಿದೆ. ಇಲ್ಲಿಯವರೆಗೆ, ಬೀದಿ ಬದಿ ವ್ಯಾಪಾರಿಗಳು 45,000 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ 37.70 ಕೋಟಿ ಡಿಜಿಟಲ್ ವಹಿವಾಟುಗಳನ್ನು ದಾಖಲಿಸಿದ್ದಾರೆ ಎಂದು ಹೇಳಲು ನನಗೆ ಹರ್ಷವಾಗುತ್ತದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಡಿಜಿಟಲ್ ವಹಿವಾಟುಗಳ ಬಳಕೆಯನ್ನು ಉತ್ತೇಜಿಸಲು ಫಲಾನುಭವಿಗಳಿಗೆ 23.02 ಕೋಟಿ ರೂ.ಗಳನ್ನು ಕ್ಯಾಶ್ ಬ್ಯಾಕ್ ರೂಪದಲ್ಲಿ ಬಿಡುಗಡೆ ಮಾಡಲಾಗಿದೆ", ಎಂದು ಶ್ರೀ ಹರ್ ದೀಪ್ ಎಸ್. ಪುರಿ ಹೇಳಿದರು.
ಪಿಎಂ ಸ್ವನಿಧಿ ಯೋಜನೆಯು ಬೀದಿ ಬದಿ ವ್ಯಾಪಾರಿಗಳಿಗೆ ಸಾಲಗಳನ್ನು ಸುಲಭವಾಗಿ ಪಡೆಯಲು ಶಿಫಾರಸು ಪತ್ರ (ಎಲ್ಒಆರ್) ನೀಡುವ ಮೂಲಕ ಔದ್ಯೋಗಿಕ ಮಾನ್ಯತೆಯನ್ನು ಒದಗಿಸಲು ನೆರವಾಗಿದೆ ಎಂದು ಸಚಿವರು ಹೇಳಿದರು. ಜೊತೆಗೆ, ಬೀದಿ ಬದಿ ವ್ಯಾಪಾರಿಗಳಿಗೆ ತಮ್ಮ ಕೆಲಸದಲ್ಲಿ ಪರಿಚಯ ಮತ್ತು ಘನತೆಯ ಪ್ರಜ್ಞೆಯನ್ನು ಒದಗಿಸಲು ಪರಿಚಯ್ ಮಂಡಳಿಯನ್ನು ಮಾಡಲಾಗಿದೆ. ಈ ಮಂಡಳಿಗಳು ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡುವುದನ್ನು ಸುಲಭಗೊಳಿಸುವುದನ್ನು ಉತ್ತೇಜಿಸುವ ಸಾಧನವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಅನಗತ್ಯ ಕಿರುಕುಳದಿಂದ ಅವರನ್ನು ರಕ್ಷಿಸುತ್ತವೆ ಎಂದರು.
ಭಾರತೀಯ ಬೀದಿ ಬದಿ ವ್ಯಾಪಾರಿಗಳ ರಾಷ್ಟ್ರೀಯ ಸಂಸ್ಥೆ (ಎನ್.ಎ.ಎಸ್.ವಿ.ಐ) ಆಯೋಜಿಸಿರುವ ರಾಷ್ಟ್ರೀಯ ಬೀದಿ ಬದಿ ಆಹಾರ ಉತ್ಸವದ 12 ನೇ ಆವೃತ್ತಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದೇಶದ ಮೂಲೆ ಮೂಲೆಗಳ ಪಾಕಪದ್ಧತಿಗಳನ್ನು ಪ್ರದರ್ಶಿಸಲು ಬೀದಿ ಆಹಾರ ಮಾರಾಟಗಾರರಿಗೆ ಇದು ಒಂದು ವಿಶಿಷ್ಟ ವೇದಿಕೆಯಾಗಿದೆ.
“ಇದು ಕಳೆದ ಕೆಲವು ವರ್ಷಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ವಿವಿಧ ಯಶೋಗಾಥೆಗಳ ಬಗ್ಗೆ ಗಮನ ಸೆಳೆಯುವ ಒಂದು ಹೊಸ ಕಲ್ಪನೆಯೂ ಆಗಿದೆ, ಜನರು ಸ್ಥಳೀಯ ಭಕ್ಷ್ಯಗಳನ್ನು ಸವಿಯುತ್ತಾರೆ", ಎಂದು ಸಚಿವರು ಹೇಳಿದರು. "ಈ ವೇದಿಕೆಯು ಬೀದಿ ಬದಿ ವ್ಯಾಪಾರಿಗಳಿಗೆ ಉದ್ಯೋಗಾವಕಾಶ ವರ್ಧನೆ ಸಾಮರ್ಥ್ಯವನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ. ಇಂದು, ದೇಶದಲ್ಲಿ ನವೋದ್ಯಮಗಳು ಮತ್ತು ಉದ್ಯಮಶೀಲತೆಯ ಅಲೆಯನ್ನು ನಾವು ನೋಡುತ್ತಿರುವುದರಿಂದ, ಸ್ವ-ಉದ್ಯೋಗದ ಅರ್ಹತೆಯನ್ನು ಗುರುತಿಸಲಾಗುತ್ತಿದೆ. ಸೂಕ್ಷ್ಮ ಆರ್ಥಿಕತೆಯಲ್ಲಿ ಮಾರಾಟಗಾರರ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲಾಗುತ್ತಿದೆ ಮತ್ತು ಪ್ರಶಂಸಿಸಲಾಗುತ್ತಿದೆ" ಎಂದು ಹೇಳಿದರು.
ಆಹಾರ ವಿತರಣಾ ವೇದಿಕೆ (ಜೊಮ್ಯಾಟೋ, ಸ್ವಿಗ್ಗಿ ಇತ್ಯಾದಿ) ಗಳೊಂದಿಗಿನ ಒಪ್ಪಂದದ ಬಗ್ಗೆ ಮಾತನಾಡಿದ ಸಚಿವರು, ಸ್ವಿಗ್ಗಿ ಮತ್ತು ಜೊಮ್ಯಾಟೋದಂತಹ ಆಹಾರ ವಿತರಣಾ ವೇದಿಕೆಗಳಲ್ಲಿ 9,326 ಬೀದಿ ಬದಿ ವ್ಯಾಪಾರಿಗಳು ಹೊಸದಾಗಿ ಕೆಲಸಕ್ಕೆ ಸೇರ್ಪಡೆ ಮಾಡಲು ಪಿಎಂ ಸ್ವನಿಧಿ ಅನುವು ಮಾಡಿಕೊಟ್ಟಿದೆ ಎಂದು ಒತ್ತಿ ಹೇಳಿದರು. 2023 ರ ಜನವರಿ 9 ರವರೆಗೆ, ಈ ವೇದಿಕೆಗಳಲ್ಲಿ ಒಟ್ಟು 21.93 ಕೋಟಿ ರೂ.ಗಳ ಮಾರಾಟವಾಗಿದೆ. ಅಂತಹ ಪಾಲುದಾರಿಕೆಗಳ ಮೂಲಕ, ಮಾರಾಟಗಾರರು ಮತ್ತು ಗ್ರಾಹಕರು ಇಬ್ಬರಿಗೂ ವಿಶಾಲವಾದ ಮಾರುಕಟ್ಟೆಯನ್ನು ಪ್ರವೇಶಿಸುವಂತೆ ಮಾಡಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಕಲ್ಯಾಣ ಪರವಾದ ಆಡಳಿತ ಕ್ರಮಗಳನ್ನು ವಿವರಿಸಿದ ಅವರು, ಮೋದಿ ಸರ್ಕಾರದಲ್ಲಿ, ಜನರ ಕಲ್ಯಾಣವು ಸದಾ ಎಲ್ಲಾ ನೀತಿಗಳನ್ನು ರೂಪಿಸುವ ಅಡಿಪಾಯವಾಗಿದೆ ಎಂದು ಹೇಳಿದರು. ಪ್ರಧಾನಮಂತ್ರಿ ಸ್ವನಿಧಿಯಂತಹ ನಾಗರಿಕ-ಕೇಂದ್ರಿತ ಯೋಜನೆಗಳು ಈ ಗಮನವನ್ನು ಕೇಂದ್ರೀಕರಿಸುತ್ತವೆ. "ಪ್ರತಿಯೊಬ್ಬರಿಗೂ ಘನತೆಯನ್ನು ವಿಸ್ತರಿಸಬೇಕು ಮತ್ತು ಪ್ರತಿಯೊಬ್ಬ ವ್ಯಕ್ತಿಯ ಸೇವೆ ಮತ್ತು ಕೊಡುಗೆಯನ್ನು ನ್ಯಾಯಯುತವಾಗಿ ಗುರುತಿಸಬೇಕು ಎಂಬುದು ನಮ್ಮ ಮಂತ್ರವಾಗಿದೆ. ನಮ್ಮ ಸಮಾಜದ ದುರ್ಬಲ ಮತ್ತು ವಂಚಿತ ವರ್ಗಗಳು, ವಿಶೇಷವಾಗಿ ನಗರಗಳು ಮತ್ತು ಪಟ್ಟಣಗಳಲ್ಲಿ, ಸರ್ಕಾರದ ನೇತೃತ್ವದ ವಿವಿಧ ಮಧ್ಯಸ್ಥಿಕೆಗಳಿಂದ ಅಪಾರ ಪ್ರಯೋಜನ ಪಡೆದಿವೆ", ಎಂದೂ ಅವರು ಹೇಳಿದರು.
*****
(Release ID: 1891073)
Visitor Counter : 146