ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿಯವರಿಂದ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ವಾರಾಣಸಿಯಲ್ಲಿ ವಿಶ್ವದ ಅತಿ ಉದ್ದದ ನದಿ ವಿಹಾರ - ಎಂವಿ ಗಂಗಾ ವಿಲಾಸ್‌ಗೆ ಚಾಲನೆ ಮತ್ತು ಟೆಂಟ್ ಸಿಟಿ ಉದ್ಘಾಟನೆ


1000 ಕೋಟಿ ರೂ.ಗೂ ಅಧಿಕ ಮೊತ್ತದ ಇತರ ಒಳನಾಡು ಜಲಮಾರ್ಗ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ. 
 
ಹಲ್ದಿಯಾದಲ್ಲಿ ಬಹು-ಮಾದರಿ ಟರ್ಮಿನಲ್ ಉದ್ಘಾಟನೆ
 
"ಪೂರ್ವ ಭಾರತದ ಅನೇಕ ಪ್ರವಾಸಿ ತಾಣಗಳು ಎಂವಿ ಗಂಗಾ ವಿಲಾಸ್ ನದಿ ವಿಹಾರ ಯೋಜನೆಯಿಂದ ಪ್ರಯೋಜನ ಪಡೆಯಲಿವೆ"
 
"ಜಲವಿಹಾರ ಯೋಜನೆಯು ಅಭಿವೃದ್ಧಿಯ ಹೊಸ ಮಾರ್ಗವನ್ನು ಸೃಷ್ಟಿಸುತ್ತದೆ"
 
"ಇಂದು ಭಾರತವು ನಿಮ್ಮ ಕಲ್ಪನೆಗೂ ಮೀರಿ ಎಲ್ಲವನ್ನೂ ಮತ್ತು ಬಹಳಷ್ಟನ್ನು ಹೊಂದಿದೆ"
 
"ಗಂಗಾ ಮಾತೆ ಕೇವಲ ನದಿಯಲ್ಲ ಮತ್ತು ಈ ಪವಿತ್ರ ನದಿಗೆ ಸೇವೆ ಸಲ್ಲಿಸಲು ನಾವು ನಮಾಮಿ ಗಂಗೆ ಮತ್ತು ಅರ್ಥ ಗಂಗಾ ಮೂಲಕ ಅವಳಿ ಮಾರ್ಗವನ್ನು ಅಳವಡಿಸಿಕೊಳ್ಳುತ್ತಿದ್ದೇವೆ"
 
"ಬೆಳೆಯುತ್ತಿರುವ ಜಾಗತಿಕ ಸ್ಥಾನಮಾನದೊಂದಿಗೆ,  ಭಾರತಕ್ಕೆ ಭೇಟಿ ನೀಡುವ ಮತ್ತು ಅದರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿಯೂ ಹೆಚ್ಚುತ್ತಿದೆ"
 
"21 ನೇ ಶತಮಾನದ ಈ ದಶಕವು ಭಾರತದಲ್ಲಿ ಮೂಲಸೌಕರ್ಯ ಪರಿವರ್ತನೆಯ ದಶಕವಾಗಿದೆ"
 
"ನದಿ ಜಲಮಾರ್ಗಗಳು ಭಾರತದ ಹೊಸ ಶಕ್ತಿಯಾಗಿವೆ"

Posted On: 13 JAN 2023 11:56AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಶ್ವದ ಅತಿ ಉದ್ದದ ನದಿ ವಿಹಾರ-ಎಂವಿ ಗಂಗಾ ವಿಲಾಸ್‌ಗೆ ಹಸಿರು ನಿಶಾನೆ ತೋರಿದರು ಮತ್ತು ಟೆಂಟ್ ಸಿಟಿಯನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ 1000 ಕೋಟಿ ರೂ.ಗೂ ಅಧಿಕ ಮೊತ್ತದ ಇತರ ಹಲವು ಒಳನಾಡು ಜಲಮಾರ್ಗ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ಅವರು ನೆರವೇರಿಸಿದರು. ನದಿ ವಿಹಾರ (ರಿವರ್ ಕ್ರೂಸ್) ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಧಾನ ಮಂತ್ರಿಯವರ ಪ್ರಯತ್ನಕ್ಕೆ ಅನುಗುಣವಾಗಿ, ಈ ಸೇವೆಯು ನದಿ ವಿಹಾರದ ಬೃಹತ್ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತದೆ ಮತ್ತು ಇದು ಭಾರತದಲ್ಲಿ ನದಿ ವಿಹಾರ ಪ್ರವಾಸೋದ್ಯಮದ ಹೊಸ ಯುಗಕ್ಕೆ ನಾಂದಿ ಹಾಡುತ್ತದೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಮಹಾದೇವನಿಗೆ ನಮಿಸಿದರು ಮತ್ತು ಲೋಹ್ರಿಯ ಶುಭ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯ ಕೋರಿದರು. ನಮ್ಮ ಹಬ್ಬಗಳಲ್ಲಿ ದಾನ, ನಂಬಿಕೆ ಮತ್ತು ತಪಸ್ಸು ಹಾಗೂ ಅವುಗಳಲ್ಲಿ ನದಿಗಳ ಪಾತ್ರವನ್ನು ಅವರು ಒತ್ತಿ ಹೇಳಿದರು. ಇದು ನದಿ ಜಲಮಾರ್ಗಗಳಿಗೆ ಸಂಬಂಧಿಸಿದ ಯೋಜನೆಗಳಲ್ಲಿ ಹೆಚ್ಚು ಮಹತ್ವದ್ದಾಗಿದೆ ಎಂದು ಅವರು ಹೇಳಿದರು. ಕಾಶಿಯಿಂದ ದಿಬ್ರುಗಢದವರೆಗಿನ ಅತಿ ಉದ್ದದ ನದಿ ವಿಹಾರಕ್ಕೆ ಇಂದು ಚಾಲನೆ ನೀಡಲಾಗಿದ್ದು, ಇದು ವಿಶ್ವ ಪ್ರವಾಸೋದ್ಯಮ ನಕ್ಷೆಯಲ್ಲಿ ಉತ್ತರ ಭಾರತದ ಪ್ರವಾಸಿ ತಾಣಗಳನ್ನು ಮುನ್ನೆಲೆಗೆ ತರಲಿದೆ ಎಂದು ಅವರು ತಿಳಿಸಿದರು. ವಾರಾಣಸಿ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ ಮತ್ತು ಅಸ್ಸಾಂನಲ್ಲಿ 1000 ಕೋಟಿ ರೂ. ಮೌಲ್ಯದ ಇತರ ಯೋಜನೆಗಳನ್ನು ಇಂದು ಸಮರ್ಪಿಸಲಾಗುತ್ತಿದ್ದು, ಪೂರ್ವ ಭಾರತದ ಪ್ರವಾಸೋದ್ಯಮ ಮತ್ತು ಉದ್ಯೋಗ ಅವಕಾಶಗಳಿಗೆ ಉತ್ತೇಜನ ನೀಡಲಿದೆ ಎಂದು ಪ್ರಧಾನಿ ಹೇಳಿದರು.

ಪ್ರತಿಯೊಬ್ಬ ಭಾರತೀಯನ ಜೀವನದಲ್ಲಿ ಗಂಗಾ ನದಿಯ ಪ್ರಮುಖ ಪಾತ್ರವನ್ನು ಒತ್ತಿಹೇಳಿದ ಅವರು, ಸ್ವಾತಂತ್ರ್ಯದ ನಂತರದ ಅವಧಿಯಲ್ಲಿ ನದಿತೀರದ ಸುತ್ತಲಿನ ಪ್ರದೇಶವು ಅಭಿವೃದ್ಧಿಯಲ್ಲಿ ಹಿಂದುಳಿಯಿತು, ಇದರಿಂದಾಗಿ ಈ ಪ್ರದೇಶದಿಂದ ಜನಸಂಖ್ಯೆಯ ಬೃಹತ್ ವಲಸೆಗೆ ಕಾರಣವಾಯಿತು ಎಂದು ಪ್ರಧಾನಿ ವಿಷಾದಿಸಿದರು. ಈ ದುರದೃಷ್ಟಕರ ಪರಿಸ್ಥಿತಿಯನ್ನು ಪರಿಹರಿಸುವ ಅವಳಿ ವಿಧಾನದ ಬಗ್ಗೆ ಪ್ರಧಾನಮಂತ್ರಿ ವಿವರಿಸಿದರು. ಒಂದೆಡೆ, ನಮಾಮಿ ಗಂಗೆಯ ಮೂಲಕ ಗಂಗಾ ಶುದ್ಧೀಕರಣ ಅಭಿಯಾನವನ್ನು ಕೈಗೆತ್ತಿಕೊಳ್ಳಲಾಯಿತು ಮತ್ತು ಇನ್ನೊಂದೆಡೆ ‘ಅರ್ಥ ಗಂಗಾʼವನ್ನು ಕೈಗೆತ್ತಿಕೊಳ್ಳಲಾಯಿತು. ‘ಅರ್ಥ ಗಂಗಾʼ ಮೂಲಕ ಗಂಗಾ ನದಿಯು ಹಾದು ಹೋಗುವ ರಾಜ್ಯಗಳಲ್ಲಿ ಆರ್ಥಿಕ ಚೈತನ್ಯದ ವಾತಾವರಣವನ್ನು ಸೃಷ್ಟಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ನದಿವಿಹಾರದ ಚೊಚ್ಚಲ ಪ್ರಯಾಣದಲ್ಲಿ ಪ್ರಯಾಣಿಸುತ್ತಿರುವ ವಿದೇಶಿ ಪ್ರವಾಸಿಗರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, "ಇಂದು ಭಾರತವು ನಿಮ್ಮ ಕಲ್ಪನೆಗೂ ಮೀರಿ ಎಲ್ಲವನ್ನೂ ಹೊಂದಿದೆ ಮತ್ತು ಬಹಳಷ್ಟನ್ನು ಹೊಂದಿದೆ" ಎಂದು ಹೇಳಿದರು. ಭಾರತವು ಪ್ರದೇಶ ಅಥವಾ ಧರ್ಮ, ಪಂಥ ಅಥವಾ ದೇಶವನ್ನು ಲೆಕ್ಕಿಸದೆ ಪ್ರತಿಯೊಬ್ಬರನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುವುದರಿಂದ ಮತ್ತು ಪ್ರಪಂಚದ ಎಲ್ಲಾ ಭಾಗಗಳಿಂದ ಪ್ರವಾಸಿಗರನ್ನು ಬರಮಾಡಿಕೊಳ್ಳುವುದರಿಂದ ಭಾರತವನ್ನು ಹೃದಯಾಂತರಾಳದಿಂದ ಅನುಭವಿಸಬಹುದು ಎಂದು ಅವರು ಹೇಳಿದರು.

ನದಿ ವಿಹಾರದ ಅನುಭವದ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ, ಇದು ಪ್ರತಿಯೊಬ್ಬರಿಗೂ ವಿಶೇಷತೆಯನ್ನು ಹೊಂದಿದೆ ಎಂದು ತಿಳಿಸಿದರು. ಆಧ್ಯಾತ್ಮಿಕತೆಯನ್ನು ಬಯಸುವವರು ಕಾಶಿ, ಬೋಧಗಯಾ, ವಿಕ್ರಮಶಿಲಾ, ಪಾಟ್ನಾ ಸಾಹಿಬ್ ಮತ್ತು ಮಜುಲಿಯಂತಹ ಸ್ಥಳಗಳಿಗೆ ಭೇಟಿ ನೀಡಬಹುದು, ಬಹುರಾಷ್ಟ್ರೀಯ ಕ್ರೂಸ್ ಅನುಭವವನ್ನು ಬಯಸುವ ಪ್ರವಾಸಿಗರು ಢಾಕಾ ಮೂಲಕ ಬಾಂಗ್ಲಾದೇಶಕ್ಕೆ ಹೋಗಬಹುದು ಮತ್ತು ಭಾರತದ ನೈಸರ್ಗಿಕ ವೈವಿಧ್ಯತೆಯನ್ನು ವೀಕ್ಷಿಸಲು ಬಯಸುವವರು ಸುಂದರಬನ್ಸ್ ಮತ್ತು ಅಸ್ಸಾಂನ ಕಾಡುಗಳ ಮೂಲಕ ಹಾದುಹೋಗುವ ಅವಕಾಶವನ್ನು ಪಡೆಯುತ್ತಾರೆ ಎಂದು ಅವರು ಹೇಳಿದರು. ಕ್ರೂಸ್ 25 ವಿವಿಧ ನದಿ ತೊರೆಗಳ ಮೂಲಕ ಸಾಗಲಿದೆ ಎಂದ ಪ್ರಧಾನಮಂತ್ರಿಯವರು, ಭಾರತದ ನದಿ ವ್ಯವಸ್ಥೆಗಳನ್ನು ಅರ್ಥಮಾಡಿಕೊಳ್ಳಲು ತೀವ್ರ ಆಸಕ್ತಿ ಹೊಂದಿರುವವರಿಗೆ ಈ ಕ್ರೂಸ್ ಮಹತ್ವದ್ದಾಗಿದೆ ಎಂದು ಹೇಳಿದರು.

ಭಾರತದ ಅಸಂಖ್ಯಾತ ಪಾಕಶಾಸ್ತ್ರ ಮತ್ತು ಪಾಕಪದ್ಧತಿಗಳನ್ನು ಅನ್ವೇಷಿಸಲು ಬಯಸುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ ಎಂದು ಅವರು ಹೇಳಿದರು. ಈ ನದಿ ವಿಹಾರದಲ್ಲಿ ಭಾರತದ ಪರಂಪರೆ ಮತ್ತು ಅದರ ಆಧುನಿಕತೆಯ ಅಸಾಧಾರಣ ಸಮ್ಮಿಲನವನ್ನು ಕಾಣಬಹುದು ಎಂದರು. ದೇಶದ ಯುವಜನತೆಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕ್ರೂಸ್ ಪ್ರವಾಸೋದ್ಯಮದ ಹೊಸ ಯುಗದ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಕೇವಲ ವಿದೇಶಿ ಪ್ರವಾಸಿಗರು ಮಾತ್ರವಲ್ಲ, ಅಂತಹ ಅನುಭವಕ್ಕಾಗಿ ವಿವಿಧ ದೇಶಗಳಿಗೆ ಪ್ರಯಾಣಿಸುವ ಭಾರತೀಯರು ಈಗ ಉತ್ತರ ಭಾರತದ ಕಡೆಗೆ ಹೋಗಬಹುದು ಎಂದು ಹೇಳಿದರು. ಅಗ್ಗದ ಮತ್ತು ಐಷಾರಾಮಿ ಅನುಭವವನ್ನು ಗಮನದಲ್ಲಿಟ್ಟುಕೊಂಡು ನದಿ ವಿಹಾರ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ದೇಶದ ಇತರ ಒಳನಾಡಿನ ಜಲಮಾರ್ಗಗಳಲ್ಲಿ ಇದೇ ರೀತಿಯ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಭಾರತವು ಪ್ರವಾಸೋದ್ಯಮ ಕ್ಷೇತ್ರದ ದೃಢವಾದ ಹಂತಕ್ಕೆ ಪ್ರವೇಶಿಸುತ್ತಿದೆ ಎಂದು ಪ್ರಧಾನಿ ಹೇಳಿದರು, ಬೆಳೆಯುತ್ತಿರುವ ಜಾಗತಿಕ ಸ್ಥಾನಮಾನದೊಂದಿಗೆ ಭಾರತದ ಬಗ್ಗೆ ಕುತೂಹಲವೂ ಹೆಚ್ಚುತ್ತಿದೆ. ಅದಕ್ಕಾಗಿಯೇ ಕಳೆದ 8 ವರ್ಷಗಳಲ್ಲಿ ದೇಶದಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ವಿಸ್ತರಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ಹೇಳಿದರು. ಶ್ರದ್ಧಾ ಕೇಂದ್ರಗಳನ್ನು ಆದ್ಯತೆಯ ಮೇಲೆ ಅಭಿವೃದ್ಧಿಪಡಿಸಲಾಗಿದೆ ಮತ್ತು ಕಾಶಿ ಅಂತಹ ಪ್ರಯತ್ನಗಳಿಗೆ ನೇರ ಉದಾಹರಣೆಯಾಗಿದೆ ಎಂದರು. ಸುಧಾರಿತ ಸೌಲಭ್ಯಗಳು ಮತ್ತು ಕಾಶಿ ವಿಶ್ವನಾಥ ಧಾಮದ ಪುನರುಜ್ಜೀವನದೊಂದಿಗೆ, ಕಾಶಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇದು ಸ್ಥಳೀಯ ಆರ್ಥಿಕತೆಗೆ ಭಾರಿ ಉತ್ತೇಜನ ನೀಡಿದೆ. ಆಧುನಿಕತೆ, ಆಧ್ಯಾತ್ಮಿಕತೆ ಮತ್ತು ನಂಬಿಕೆಯಿಂದ ಕೂಡಿದ ಹೊಸ ಟೆಂಟ್ ಸಿಟಿ ಪ್ರವಾಸಿಗರಿಗೆ ಹೊಸ ಅನುಭವವನ್ನು ನೀಡುತ್ತದೆ ಎಂದು ಅವರು ಹೇಳಿದರು.

ಇಂದಿನ ಕಾರ್ಯಕ್ರಮವು 2014 ರ ನಂತರ ದೇಶದಲ್ಲಿ ಕೈಗೊಂಡ ನೀತಿಗಳು, ನಿರ್ಧಾರಗಳು ಮತ್ತು ನಿರ್ದೇಶನದ ಪ್ರತಿಬಿಂಬವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. 21ನೇ ಶತಮಾನದ ಈ ದಶಕವು ಭಾರತದಲ್ಲಿ ಮೂಲಸೌಕರ್ಯ ಪರಿವರ್ತನೆಯ ದಶಕವಾಗಿದೆ. ಕೆಲವು ವರ್ಷಗಳ ಹಿಂದೆ ಊಹಿಸಲೂ ಸಾಧ್ಯವಾಗದಂತಹ ಮೂಲಭೂತ ಸೌಕರ್ಯಗಳಿಗೆ ಭಾರತ ಇಂದು ಸಾಕ್ಷಿಯಾಗಿದೆ. ಸಾಮಾಜಿಕ ಮೂಲಸೌಕರ್ಯಗಳಾದ ಮನೆ, ಶೌಚಾಲಯ, ಆಸ್ಪತ್ರೆ, ವಿದ್ಯುತ್, ನೀರು, ಅಡುಗೆ ಅನಿಲ, ಶಿಕ್ಷಣ ಸಂಸ್ಥೆಗಳು, ಡಿಜಿಟಲ್ ಮೂಲಸೌಕರ್ಯದಿಂದ ರೈಲ್ವೆ, ಜಲಮಾರ್ಗ, ವಾಯುಮಾರ್ಗ ಮತ್ತು ರಸ್ತೆಗಳಂತಹ ಭೌತಿಕ ಸಂಪರ್ಕ ಮೂಲಸೌಕರ್ಯಗಳವರೆಗೆ ಇವೆಲ್ಲವೂ ಭಾರತದ ಕ್ಷಿಪ್ರ ಬೆಳವಣಿಗೆಯ ಪ್ರಬಲ ಸೂಚಕಗಳಾಗಿವೆ. ಎಲ್ಲಾ ಕ್ಷೇತ್ರಗಳಲ್ಲಿ ಭಾರತವು ಅತ್ಯುತ್ತಮವಾದುದನ್ನು ಮತ್ತು ಬೃಹತ್ತಾದುದನ್ನು ನೋಡುತ್ತಿದೆ ಎಂದು ಅವರು ತಿಳಿಸಿದರು.

ದೇಶದಲ್ಲಿ ಈ ಸಾರಿಗೆ ವಿಧಾನಕ್ಕೆ ಶ್ರೀಮಂತ ಇತಿಹಾಸವಿದ್ದರೂ 2014 ಕ್ಕೂ ಮೊದಲು ಭಾರತದಲ್ಲಿ ನದಿ ಜಲಮಾರ್ಗಗಳ ಕಡಿಮೆ ಬಳಕೆಯಿತ್ತು ಎಂದು ಪ್ರಧಾನಿ ಒತ್ತಿ ಹೇಳಿದರು. 2014 ರ ನಂತರ, ಭಾರತವು ಈ ಪ್ರಾಚೀನ ಶಕ್ತಿಯನ್ನು ಆಧುನಿಕ ಭಾರತ ನಿರ್ಮಾಣಕ್ಕೆ ಬಳಸಿಕೊಳ್ಳುತ್ತಿದೆ. ದೇಶದ ದೊಡ್ಡ ನದಿಗಳಲ್ಲಿ ಜಲಮಾರ್ಗಗಳನ್ನು ಅಭಿವೃದ್ಧಿಪಡಿಸಲು ಹೊಸ ಕಾನೂನು ಮತ್ತು ವಿವರವಾದ ಕ್ರಿಯಾ ಯೋಜನೆ ರೂಪಿಸಲಾಗಿದೆ. 2014 ರಲ್ಲಿ ದೇಶದಲ್ಲಿ ಕೇವಲ 5 ರಾಷ್ಟ್ರೀಯ ಜಲಮಾರ್ಗಗಳು ಇದ್ದವು, ಈಗ ದೇಶದಲ್ಲಿ 111 ರಾಷ್ಟ್ರೀಯ ಜಲಮಾರ್ಗಗಳಿವೆ ಮತ್ತು ಸುಮಾರು ಎರಡು ಡಜನ್ ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಎಂದು ಪ್ರಧಾನಿ ಹೇಳಿದರು. ಅದೇ ರೀತಿ, 8 ವರ್ಷಗಳ ಹಿಂದೆ ನದಿ ಜಲಮಾರ್ಗಗಳ ಮೂಲಕ ನಡೆಯುತ್ತಿದ್ದ 30 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಸರಕು ಸಾಗಣೆಯು ಈಗ 3 ಪಟ್ಟು ಹೆಚ್ಚಳವಾಗಿದೆ ಎಂದು ಅವರು ಹೇಳಿದರು.

ಪೂರ್ವ ಭಾರತದ ಅಭಿವೃದ್ಧಿಯ ವಿಷಯದ ಬಗ್ಗೆ ಮಾತನಾಡಿದ ಪ್ರಧಾನಿ, ಇಂದಿನ ಕಾರ್ಯಕ್ರಮಗಳು ಪೂರ್ವ ಭಾರತವನ್ನು ಅಭಿವೃದ್ಧಿ ಹೊಂದಿದ ಭಾರತಕ್ಕೆ ಬೆಳವಣಿಗೆಯ ಎಂಜಿನ್ ಗಳಾಗಲು ಸಹಾಯ ಮಾಡುತ್ತವೆ ಎಂದು ಹೇಳಿದರು. ಇದು ಹಲ್ಡಿಯಾ ಬಹು ಮಾದರಿ ಟರ್ಮಿನಲ್ ಅನ್ನು ವಾರಣಾಸಿಯೊಂದಿಗೆ ಸಂಪರ್ಕಿಸುತ್ತದೆ ಮತ್ತು ಭಾರತ ಬಾಂಗ್ಲಾದೇಶ ಪ್ರೋಟೋಕಾಲ್ ಮಾರ್ಗ ಮತ್ತು ಈಶಾನ್ಯದೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ಇದು ಕೋಲ್ಕತ್ತಾ ಬಂದರು ಮತ್ತು ಬಾಂಗ್ಲಾದೇಶವನ್ನು ಕೂಡ ಸಂಪರ್ಕಿಸುತ್ತದೆ. ಇದು ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಿಂದ ಬಾಂಗ್ಲಾದೇಶಕ್ಕೆ ವ್ಯಾಪಾರವನ್ನು ಸುಗಮಗೊಳಿಸುತ್ತದೆ ಎಂದು ಅವರು ಹೇಳಿದರು.

ಸಿಬ್ಬಂದಿ ಮತ್ತು ನುರಿತ ಉದ್ಯೋಗಿಗಳ ತರಬೇತಿಯ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಿ, ಗುವಾಹಟಿಯಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲಾಗಿದೆ ಮತ್ತು ಹಡಗುಗಳ ದುರಸ್ತಿಗಾಗಿ ಗುವಾಹಟಿಯಲ್ಲಿ ಹೊಸ ಸೌಲಭ್ಯವನ್ನು ಸಹ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು. "ಅದು ವಿಹಾರದ ಹಡಗು ಆಗಿರಲಿ ಅಥವಾ ಸರಕು ಸಾಗಣೆಯ ಹಡಗು ಆಗಿರಲಿ, ಅವುಗಳು ಸಾರಿಗೆ ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದಲ್ಲದೆ, ಅವುಗಳ ಸೇವೆಗೆ ಸಂಬಂಧಿಸಿದ ಇಡೀ ಉದ್ಯಮವು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ" ಎಂದು ಪ್ರಧಾನಮಂತ್ರಿ ಹೇಳಿದರು.

ಅಧ್ಯಯನ ವರದಿಯೊಂದನ್ನು ಉಲ್ಲೇಖಿಸಿದ ಪ್ರಧಾನಿ, ಜಲಮಾರ್ಗಗಳು ಕೇವಲ ಪರಿಸರಕ್ಕೆ ಮಾತ್ರ ಪ್ರಯೋಜನಕಾರಿಯಲ್ಲ, ಹಣವನ್ನು ಸಹ ಉಳಿಸಲು ಸಹಾಯ ಮಾಡುತ್ತವೆ ಎಂದು ತಿಳಿಸಿದರು. ಜಲಮಾರ್ಗಗಳ ನಿರ್ವಹಣಾ ವೆಚ್ಚವು ರಸ್ತೆಮಾರ್ಗಗಳಿಗಿಂತ ಎರಡೂವರೆ ಪಟ್ಟು ಕಡಿಮೆಯಾಗಿದೆ ಮತ್ತು ರೈಲ್ವೆಗೆ ಹೋಲಿಸಿದರೆ ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯ ಬಗ್ಗೆ ಮಾತನಾಡಿದ ಪ್ರಧಾನಿಯವರು, ಭಾರತವು ಸಾವಿರಾರು ಕಿಲೋಮೀಟರ್‌ಗಳ ಜಲಮಾರ್ಗ ಜಾಲವನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು. ಭಾರತವು 125 ಕ್ಕೂ ಹೆಚ್ಚು ನದಿಗಳು ಮತ್ತು ನದಿ ತೊರೆಗಳನ್ನು ಹೊಂದಿದ್ದು, ಸರಕುಗಳನ್ನು ಸಾಗಿಸಲು ಮತ್ತು ಜನರನ್ನು ಸಾಗಿಸಲು ಇವುಗಳನ್ನು ಅಭಿವೃದ್ಧಿಪಡಿಸಬಹುದು ಮತ್ತು ಬಂದರು-ನೇತೃತ್ವದ ಅಭಿವೃದ್ಧಿಯನ್ನು ಮತ್ತಷ್ಟು ವಿಸ್ತರಿಸಲು ಉತ್ತೇಜನ ನೀಡಬಹುದು ಎಂದು ಅವರು ಹೇಳಿದರು. ಜಲಮಾರ್ಗಗಳ ಆಧುನಿಕ ಬಹು-ಮಾದರಿ ಜಾಲವನ್ನು ನಿರ್ಮಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು ಮತ್ತು ದೇಶದ ಈಶಾನ್ಯ ಪ್ರದೇಶದಲ್ಲಿ ನೀರಿನ ಸಂಪರ್ಕವನ್ನು ಬಲಪಡಿಸಿದ ಬಾಂಗ್ಲಾದೇಶ ಮತ್ತು ಇತರ ದೇಶಗಳೊಂದಿಗಿನ ಪಾಲುದಾರಿಕೆಯ ಬಗ್ಗೆ ತಿಳಿಸಿದರು.

ಭಾರತದಲ್ಲಿ ಜಲಮಾರ್ಗಗಳನ್ನು ಅಭಿವೃದ್ಧಿಪಡಿಸುವ ನಿರಂತರ ಅಭಿವೃದ್ಧಿ ಪ್ರಕ್ರಿಯೆಯ ಕುರಿತು ಪ್ರಧಾನಮಂತ್ರಿಯವರು ತಿಳಿಸಿದರು. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಬಲವಾದ ಸಂಪರ್ಕವು ಅತ್ಯಗತ್ಯ ಎಂದು ಅವರು ಹೇಳಿದರು. ಭಾರತದ ನದಿಗಳು ನೀರಿನ ಶಕ್ತಿ ಮತ್ತು ದೇಶದ ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ಹೊಸ ಎತ್ತರವನ್ನು ನೀಡುತ್ತವೆ ಎಂಬ ನಂಬಿಕೆಯನ್ನು ಪ್ರಧಾನಿ ವ್ಯಕ್ತಪಡಿಸಿದರು ಮತ್ತು ಎಲ್ಲಾ ಕ್ರೂಸ್ ಪ್ರಯಾಣಿಕರಿಗೆ ಆಹ್ಲಾದಕರ ಪ್ರಯಾಣಕ್ಕಾಗಿ ಹಾರೈಸಿದರು.

ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್, ಅಸ್ಸಾಂ ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಶ್ರೀ ಸರ್ಬಾನಂದ ಸೋನೋವಾಲ್ ಮತ್ತಿತರರು ಉಪಸ್ಥಿತರಿದ್ದರು.

ಹಿನ್ನೆಲೆ

ಎಂವಿ ಗಂಗಾ ವಿಲಾಸ್

ಎಂವಿ ಗಂಗಾ ವಿಲಾಸ್ ನದಿ ವಿಹಾರವು ಉತ್ತರ ಪ್ರದೇಶದ ವಾರಾಣಸಿಯಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ ಮತ್ತು ಬಾಂಗ್ಲಾದೇಶದ ಮೂಲಕ ಅಸ್ಸಾಂನ ದಿಬ್ರುಗಢವನ್ನು ತಲುಪಲು 51 ದಿನಗಳಲ್ಲಿ 3,200 ಕಿಮೀ ಸಂಚರಿಸುತ್ತದೆ. ಭಾರತ ಮತ್ತು ಬಾಂಗ್ಲಾದೇಶದ 27 ನದಿ ವ್ಯವಸ್ಥೆಗಳ ಮೂಲಕ ಇದು ಸಾಗುತ್ತದೆ. ಎಂವಿ ಗಂಗಾ ವಿಲಾಸ್ ಮೂರು ಡೆಕ್‌ಗಳನ್ನು ಹೊಂದಿದೆ, 36 ಪ್ರವಾಸಿಗರ ಸಾಮರ್ಥ್ಯದೊಂದಿಗೆ 18 ಸೂಟ್‌ಗಳನ್ನು ಹೊಂದಿದೆ, ಎಲ್ಲಾ ಐಷಾರಾಮಿ ಸೌಕರ್ಯಗಳನ್ನು ಹೊಂದಿದೆ. ಮೊದಲ ಪ್ರಯಾಣದಲ್ಲಿ ಸ್ವಿಟ್ಜರ್ಲೆಂಡ್‌ನ 32 ಪ್ರವಾಸಿಗರು ಸಂಪೂರ್ಣ ಉದ್ದಕ್ಕೂ ಪ್ರಯಾಣಿಸುತ್ತಿದ್ದಾರೆ.

ಎಂವಿ ಗಂಗಾ ವಿಲಾಸ್ ನದಿ ವಿಹಾರವನ್ನು ಪ್ರಪಂಚಕ್ಕೆ ದೇಶದ ಅತ್ಯುತ್ತಮವಾದದ್ದನ್ನು ಪ್ರದರ್ಶಿಸಲು ವಿನ್ಯಾಸಗೊಳಿಸಲಾಗಿದೆ. ವಿಶ್ವ ಪರಂಪರೆಯ ತಾಣಗಳು, ರಾಷ್ಟ್ರೀಯ ಉದ್ಯಾನವನಗಳು, ನದಿ ಘಟ್ಟಗಳು ಮತ್ತು ಬಿಹಾರದ ಪಾಟ್ನಾ, ಜಾರ್ಖಂಡ್‌ನ ಸಾಹಿಬ್‌ಗಂಜ್, ಪಶ್ಚಿಮ ಬಂಗಾಳದ ಕೋಲ್ಕತ್ತಾ, ಬಾಂಗ್ಲಾದೇಶದ ಢಾಕಾ ಮತ್ತು ಅಸ್ಸಾಂನ ಗುವಾಹಟಿಯಂತಹ ಪ್ರಮುಖ ನಗರಗಳು ಸೇರಿದಂತೆ 50 ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮೂಲಕ 51 ದಿನಗಳ ವಿಹಾರವನ್ನು ಯೋಜಿಸಲಾಗಿದೆ. ಈ ಪ್ರಯಾಣವು ಪ್ರವಾಸಿಗರಿಗೆ ಸಮುದ್ರಯಾನದ ಅನುಭವವನ್ನು ಕೈಗೊಳ್ಳಲು ಮತ್ತು ಭಾರತ ಮತ್ತು ಬಾಂಗ್ಲಾದೇಶದ ಕಲೆ, ಸಂಸ್ಕೃತಿ, ಇತಿಹಾಸ ಮತ್ತು ಆಧ್ಯಾತ್ಮಿಕತೆಯಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ನೀಡುತ್ತದೆ.

ನದಿ ವಿಹಾರ ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಧಾನ ಮಂತ್ರಿಯವರ ಪ್ರಯತ್ನಕ್ಕೆ ಅನುಗುಣವಾಗಿ, ಈ ಸೇವೆಯ ಪ್ರಾರಂಭದೊಂದಿಗೆ ನದಿ ವಿಹಾರಗಳ ದೊಡ್ಡ ಬಳಕೆಯಾಗದ ಅವಕಾಶಗಳನ್ನು ಹೊರತರುತ್ತದೆ ಮತ್ತು ಇದು ಭಾರತಕ್ಕೆ ನದಿ ವಿಹಾರ ಪ್ರವಾಸೋದ್ಯಮದ ಹೊಸ ಯುಗಕ್ಕೆ ನಾಂದಿ ಹಾಡುತ್ತದೆ.

ವಾರಾಣಸಿಯಲ್ಲಿ ಟೆಂಟ್ ಸಿಟಿ

ಈ ಪ್ರದೇಶದಲ್ಲಿ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಬಳಸಿಕೊಳ್ಳಲು ಗಂಗಾ ನದಿಯ ದಡದಲ್ಲಿ ಟೆಂಟ್ ಸಿಟಿಯನ್ನು ನಿರ್ಮಿಸಲಾಗಿದೆ. ನಗರದ ಘಾಟ್‌ಗಳ ಎದುರು ಈ ಯೋಜನೆಯನ್ನು ಅಭಿವೃದ್ಧಿಪಡಿಸಲಾಗಿದೆ, ಇದು ವಸತಿ ಸೌಕರ್ಯಗಳನ್ನು ಒದಗಿಸುತ್ತದೆ ಮತ್ತು ವಾರಾಣಸಿಯಲ್ಲಿ ಹೆಚ್ಚಿತ್ತಿರುವ ಪ್ರವಾಸಿಗರಿಗೆ ಸೌಲಭ್ಯಗಳನ್ನು ನೀಡುತ್ತದೆ. ವಿಶೇಷವಾಗಿ ಕಾಶಿ ವಿಶ್ವನಾಥ ಧಾಮದ ಉದ್ಘಾಟನೆಯಾದ ನಂತರ. ಇದನ್ನು ವಾರಾಣಸಿ ಅಭಿವೃದ್ಧಿ ಪ್ರಾಧಿಕಾರವು ಪಿಪಿಪಿ ಮೋಡ್‌ನಲ್ಲಿ ಅಭಿವೃದ್ಧಿಪಡಿಸಿದೆ. ಪ್ರವಾಸಿಗರು ಸುತ್ತಮುತ್ತಲಿನ ವಿವಿಧ ಘಾಟ್‌ಗಳಿಂದ ದೋಣಿಗಳ ಮೂಲಕ ಟೆಂಟ್ ಸಿಟಿಯನ್ನು ತಲುಪುತ್ತಾರೆ. ಟೆಂಟ್ ಸಿಟಿಯು ಪ್ರತಿ ವರ್ಷ ಅಕ್ಟೋಬರ್‌ನಿಂದ ಜೂನ್‌ವರೆಗೆ ಕಾರ್ಯನಿರ್ವಹಿಸಲಿದ್ದು, ಮಳೆಗಾಲದಲ್ಲಿ ನದಿಯ ನೀರಿನ ಮಟ್ಟ ಏರಿಕೆಯಾಗುವುದರಿಂದ ಮೂರು ತಿಂಗಳ ಕಾಲ ಟೆಂಟ್ ಸಿಟಿಯನ್ನು ಸ್ಥಗಿತಗೊಳಿಸಲಾಗುತ್ತದೆ.

ಒಳನಾಡು ಜಲಮಾರ್ಗ ಯೋಜನೆಗಳು

ಪಶ್ಚಿಮ ಬಂಗಾಳದಲ್ಲಿ ಹಲ್ದಿಯಾ ಬಹು ಮಾದರಿ ಟರ್ಮಿನಲ್ ಅನ್ನು ಪ್ರಧಾನಿ ಉದ್ಘಾಟಿಸಿದರು. ಜಲ ಮಾರ್ಗ ವಿಕಾಸ್ ಯೋಜನೆಯ ಅಡಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ, ಹಲ್ದಿಯಾ ಬಹು ಮಾದರಿ ಟರ್ಮಿನಲ್ ವರ್ಷಕ್ಕೆ ಸುಮಾರು 3 ಮಿಲಿಯನ್ ಮೆಟ್ರಿಕ್ ಟನ್‌ ಗಳಷ್ಟು ಸರಕು ನಿರ್ವಹಣೆ ಸಾಮರ್ಥ್ಯವನ್ನು ಹೊಂದಿದೆ ಮತ್ತು ಬರ್ತ್‌ಗಳನ್ನು ಸುಮಾರು 3000 ಡೆಡ್‌ವೈಟ್ ಟನ್ ವರೆಗಿನ ಹಡಗುಗಳನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ.

ಗಾಜಿಪುರ ಜಿಲ್ಲೆಯ ಸೈದ್‌ಪುರ, ಚೋಚಕ್‌ಪುರ್, ಜಮಾನಿಯಾ ಮತ್ತು ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಕಾನ್ಸ್‌ಪುರದಲ್ಲಿ ನಾಲ್ಕು ತೇಲುವ ಸಮುದಾಯ ಜೆಟ್ಟಿಗಳನ್ನು ಪ್ರಧಾನಿ ಉದ್ಘಾಟಿಸಿದರು. ಅಲ್ಲದೆ, ಪಾಟ್ನಾ ಜಿಲ್ಲೆಯ ದಿಘಾ, ನಕ್ತ ದಿಯಾರಾ, ಬರ್ಹ್, ಪಾನಾಪುರ ಮತ್ತು ಬಿಹಾರದ ಸಮಸ್ತಿಪುರ ಜಿಲ್ಲೆಯ ಹಸನ್‌ಪುರದಲ್ಲಿ ಐದು ಸಮುದಾಯ ಜೆಟ್ಟಿಗಳಿಗೆ ಪ್ರಧಾನಿ ಶಂಕುಸ್ಥಾಪನೆ ಮಾಡಿದರು. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಾದ್ಯಂತ ಗಂಗಾ ನದಿಯ ಉದ್ದಕ್ಕೂ 60 ಕ್ಕೂ ಹೆಚ್ಚು ಸಮುದಾಯ ಜೆಟ್ಟಿಗಳನ್ನು ನಿರ್ಮಿಸಲಾಗುತ್ತಿದೆ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ಮತ್ತು ಈ ಪ್ರದೇಶದ ಸ್ಥಳೀಯ ಸಮುದಾಯಗಳ ಜೀವನೋಪಾಯವನ್ನು ಸುಧಾರಿಸಲು. ಸಣ್ಣ ರೈತರು, ಮೀನುಗಾರಿಕೆ ಘಟಕಗಳು, ಅಸಂಘಟಿತ ಕೃಷಿ-ಉತ್ಪಾದನಾ ಘಟಕಗಳು, ತೋಟಗಾರಿಕಾ ಉದ್ಯಮಿಗಳು, ಹೂಗಾರರು ಮತ್ತು ಕುಶಲಕರ್ಮಿಗಳಿಗೆ ಗಂಗಾ ನದಿಯ ಒಳನಾಡಿನಲ್ಲಿ ಮತ್ತು ಸುತ್ತಮುತ್ತಲಿನ ಆರ್ಥಿಕ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸುವ ಸರಳ ಲಾಜಿಸ್ಟಿಕ್ಸ್ ಪರಿಹಾರಗಳನ್ನು ಒದಗಿಸುವ ಮೂಲಕ ಜನರ ಜೀವನೋಪಾಯವನ್ನು ಸುಧಾರಿಸುವಲ್ಲಿ ಸಮುದಾಯ ಜೆಟ್ಟಿಗಳು ಪ್ರಮುಖ ಪಾತ್ರವಹಿಸುತ್ತವೆ.

ಪ್ರಧಾನಮಂತ್ರಿಯವರು ಗುವಾಹಟಿಯಲ್ಲಿ ಈಶಾನ್ಯಕ್ಕಾಗಿ ಕಡಲ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಿದರು. ಇದು ಈಶಾನ್ಯ ಪ್ರದೇಶದಲ್ಲಿ ಪ್ರತಿಭೆಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಮತ್ತು ಬೆಳೆಯುತ್ತಿರುವ ಸರಕು ಸಾಗಣೆ ಉದ್ಯಮದಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ.

ಇವುಗಳ ಜೊತೆಗೆ, ಗುವಾಹಟಿಯ ಪಾಂಡು ಟರ್ಮಿನಲ್‌ನಲ್ಲಿ ಹಡಗು ದುರಸ್ತಿ ಸೌಲಭ್ಯ ಮತ್ತು ಎಲಿವೇಟೆಡ್ ರಸ್ತೆಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ಮಾಡಿದರು. ಪಾಂಡು ಟರ್ಮಿನಲ್‌ನಲ್ಲಿರುವ ಹಡಗು ದುರಸ್ತಿ ಸೌಲಭ್ಯವು ಸಾಕಷ್ಟು ಸಮಯವನ್ನು ಉಳಿಸುತ್ತದೆ, ಏಕೆಂದರೆ ಹಡಗನ್ನು ಕೋಲ್ಕತ್ತಾ ದುರಸ್ತಿ ಸೌಲಭ್ಯಕ್ಕೆ ಸಾಗಿಸಲು ಮತ್ತು ಹಿಂತಿರುಗಲು ಒಂದು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಮೇಲಾಗಿ, ಹಡಗಿನ ಸಾಗಾಣಿಕೆ ವೆಚ್ಚವೂ ಉಳಿತಾಯವಾಗುವುದರಿಂದ ಹಣದ ವಿಷಯದಲ್ಲೂ ಭಾರೀ ಉಳಿತಾಯವಾಗುತ್ತದೆ. ಪಾಂಡು ಟರ್ಮಿನಲ್ ಅನ್ನು ಎನ್‌ ಹೆಚ್ 27 ಕ್ಕೆ ಸಂಪರ್ಕಿಸುವ ಪ್ರತ್ಯೇಕ ರಸ್ತೆಯು 24 ಗಂಟೆಗಳ ಸಂಪರ್ಕವನ್ನು ಒದಗಿಸುತ್ತದೆ. 

*****


 (Release ID: 1890958) Visitor Counter : 184