ಪ್ರಧಾನ ಮಂತ್ರಿಯವರ ಕಛೇರಿ
ಕರ್ನಾಟಕದ ಹುಬ್ಬಳ್ಳಿಯಲ್ಲಿ 26ನೇ ರಾಷ್ಟ್ರೀಯ ಯುವಜನೋತ್ಸವವನ್ನು ಉದ್ಘಾಟಿಸಿದ ಪ್ರಧಾನಮಂತ್ರಿ
" ನಮ್ಮ ಯುವ ಶಕ್ತಿಯ ʼನಾನು ಸಾಧಿಸಬಲ್ಲೆʼ ಎಂಬ ಮನೋಭಾವವು ಎಲ್ಲರಿಗೂ ಸ್ಫೂರ್ತಿಯಾಗಿದೆ"
"ಅಮೃತ ಕಾಲದಲ್ಲಿ ದೇಶವನ್ನು ಮುನ್ನಡೆಸಲು ನಾವು ನಮ್ಮ ಕರ್ತವ್ಯಗಳಿಗೆ ಒತ್ತು ನೀಡಬೇಕು ಮತ್ತು ಅವುಗಳನ್ನು ಅರ್ಥಮಾಡಿಕೊಳ್ಳಬೇಕು"
“ಯುವ ಶಕ್ತಿಯು ಭಾರತ ಪ್ರಯಾಣದ ಪ್ರೇರಕ ಶಕ್ತಿಯಾಗಿದೆ. ರಾಷ್ಟ್ರ ನಿರ್ಮಾಣಕ್ಕೆ ಮುಂದಿನ 25 ವರ್ಷಗಳು ಮುಖ್ಯವಾಗಿವೆ”
“ಯುವಕರಾಗಿರುವುದೆಂದರೆ ನಮ್ಮ ಪ್ರಯತ್ನಗಳಲ್ಲಿ ಕ್ರಿಯಾಶೀಲವಾಗಿರುವುದು. ಯುವಕರಾಗಿರುವುದೆಂದರೆ ಸಮಗ್ರ ದೃಷ್ಟಿಕೋನ ಹೊಂದುವುದು. ಯುವಕರಾಗಿರುವುದೆಂದರೆ ಪ್ರಾಯೋಗಿಕವಾಗಿರುವುದು.”
“ಈ ಶತಮಾನ ಭಾರತದ ಶತಮಾನ ಎಂದು ಜಗತ್ತು ಹೇಳುತ್ತಿದೆ. ಇದು ನಿಮ್ಮ ಶತಮಾನ, ಭಾರತದ ಯುವಜನರ ಶತಮಾನ”
"ಯುವಜನರ ಆಕಾಂಕ್ಷೆಗಳನ್ನು ಈಡೇರಿಸಲು, ನಾವು ಮರುಶೋಧನೆಗಳನ್ನು ಮಾಡಬೇಕು ಮತ್ತು ಮುಂದುವರಿದ ರಾಷ್ಟ್ರಗಳಿಗಿಂತಲೂ ಮುಂದಕ್ಕೆ ಹೋಗುವುದು ಅತ್ಯಗತ್ಯ"
"ಸ್ವಾಮಿ ವಿವೇಕಾನಂದರ ಅವಳಿ ಸಂದೇಶಗಳಾದ - ಸಂಸ್ಥೆ ಮತ್ತು ಆವಿಷ್ಕಾರ ಪ್ರತಿಯೊಬ್ಬ ಯುವಜನರ ಜೀವನದ ಭಾಗವಾಗಿರಬೇಕು"
"ವಿಕಸಿತ ಭಾರತ, ಸಶಕ್ತ ಭಾರತ ಇಂದು ದೇಶದ ಗುರಿಯಾಗಿದೆ"
Posted On:
12 JAN 2023 6:56PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕರ್ನಾಟಕದ ಹುಬ್ಬಳ್ಳಿಯಲ್ಲಿ 26 ನೇ ರಾಷ್ಟ್ರೀಯ ಯುವಜನೋತ್ಸವವನ್ನು ಉದ್ಘಾಟಿಸಿದರು. ಸ್ವಾಮಿ ವಿವೇಕಾನಂದರ ಜನ್ಮದಿನದಂದು ಆಚರಿಸಲಾಗುವ ರಾಷ್ಟ್ರೀಯ ಯುವ ದಿನದಂದು ಅವರ ಆದರ್ಶಗಳು, ಬೋಧನೆಗಳು ಮತ್ತು ಕೊಡುಗೆಗಳನ್ನು ಗೌರವಿಸಲು ಮತ್ತು ಪಾಲಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಉತ್ಸವದ ವಿಷಯವು ‘ವಿಕಸಿತ ಯುವ – ವಿಕಸಿತ ಭಾರತʼ. ಇದು ದೇಶದ ಎಲ್ಲಾ ಭಾಗಗಳ ವೈವಿಧ್ಯಮಯ ಸಂಸ್ಕೃತಿಗಳನ್ನು ಒಂದೇ ವೇದಿಕೆಯಲ್ಲಿ ತರುತ್ತದೆ ಮತ್ತು ಏಕ್ ಭಾರತ್, ಶ್ರೇಷ್ಠ ಭಾರತ್ ಮನೋಭಾವದಲ್ಲಿ ಭಾಗವಹಿಸುವವರನ್ನು ಒಂದುಗೂಡಿಸುತ್ತದೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಕರ್ನಾಟಕದ ಹುಬ್ಬಳ್ಳಿ ಪ್ರದೇಶವು ತನ್ನ ಸಂಸ್ಕೃತಿ, ಸಂಪ್ರದಾಯ ಮತ್ತು ಜ್ಞಾನಕ್ಕೆ ಹೆಸರುವಾಸಿಯಾಗಿದೆ, ಇಲ್ಲಿನ ಅನೇಕ ಮಹಾನ್ ವ್ಯಕ್ತಿಗಳು ಜ್ಞಾನಪೀಠ ಪುರಸ್ಕಾಕ್ಕೆ ಪಾತ್ರರಾಗಿದ್ದಾರೆ. ಪಂಡಿತ್ ಕುಮಾರ ಗಂಧರ್ವ, ಪಂಡಿತ್ ಬಸವರಾಜ ರಾಜಗುರು, ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್, ಭಾರತ ರತ್ನ ಶ್ರೀ ಭೀಮಸೇನ ಜೋಶಿ ಮತ್ತು ಪಂಡಿತ್ ಗಂಗೂಬಾಯಿ ಹಾನಗಲ್ ಅವರಂತಹ ಹಲವಾರು ಶ್ರೇಷ್ಠ ಸಂಗೀತಗಾರರನ್ನು ಈ ಪ್ರದೇಶವು ಕೊಡುಗೆಯಾಗಿ ನೀಡಿದೆ ಮತ್ತು ಈ ಮಹಾನ್ ವ್ಯಕ್ತಿಗಳಿಗೆ ಗೌರವ ಸಲ್ಲಿಸಿದೆ ಎಂದು ಅವರು ತಿಳಿಸಿದರು.
2023 ರ ರಾಷ್ಟ್ರೀಯ ಯುವ ದಿನದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಒಂದೆಡೆ ನಮ್ಮಲ್ಲಿ ವಿಜೃಂಭಣೆಯ ರಾಷ್ಟ್ರೀಯ ಯುವಜನೋತ್ಸವ ನಡೆಯುತ್ತರಿದೆ ಮತ್ತು ಇನ್ನೊಂದೆಡೆ ಆಜಾದಿ ಕಾ ಅಮೃತ ಮಹೋತ್ಸವವಿದೆ ಎಂದು ಹೇಳಿದರು. “ಏಳಿ, ಎದ್ದೇಳಿ ಮತ್ತು ಗುರಿಯನ್ನು ತಲುಪುವವರೆಗೆ ನಿಲ್ಲಬೇಡಿ”ಎಂಬ ಸ್ವಾಮಿ ವಿವೇಕಾನಂದರ ಮಾತನ್ನು ಉಲ್ಲೇಖಿಸಿದ ಪ್ರಧಾನಿ, ಇದು ಭಾರತದ ಯುವಜನರ ಜೀವನ ಮಂತ್ರವಾಗಿದೆ ಮತ್ತು ಅಮೃತ ಕಾಲದಲ್ಲಿ ದೇಶವನ್ನು ಮುನ್ನಡೆಸಲು ನಾವು ನಮ್ಮ ಕರ್ತವ್ಯಗಳಿಗೆ ಒತ್ತು ನೀಡಬೇಕು ಮತ್ತು ಅವುಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು. ಈ ಪ್ರಯತ್ನದಲ್ಲಿ ಭಾರತದ ಯುವಜನರು ಸ್ವಾಮಿ ವಿವೇಕಾನಂದರಿಂದ ಪಡೆದಿರುವ ಸ್ಫೂರ್ತಿಯನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. "ಈ ವಿಶೇಷ ಸಂದರ್ಭದಲ್ಲಿ ನಾನು ಸ್ವಾಮಿ ವಿವೇಕಾನಂದರ ಪಾದಗಳಿಗೆ ತಲೆಬಾಗಿ ನಮಿಸುತ್ತೇನೆ" ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಧಾನಮಂತ್ರಿಯವರು ಇತ್ತೀಚೆಗೆ ನಿಧನರಾದ ಶ್ರೀ ಸಿದ್ಧೇಶ್ವರ ಸ್ವಾಮಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಸ್ವಾಮಿ ವಿವೇಕಾನಂದರಿಗೆ ಕರ್ನಾಟಕದೊಂದಿಗೆ ಇದ್ದ ಒಡನಾಟವನ್ನು ಶ್ರೀ ಮೋದಿ ಎತ್ತಿ ತೋರಿಸಿದರು. ವಿವೇಕಾನಂದರು ಕರ್ನಾಟಕಕ್ಕೆ ಹಲವು ಬಾರಿ ಭೇಟಿ ನೀಡಿದ್ದರು ಮತ್ತು ಅವರು ಚಿಕಾಗೋಗೆ ಭೇಟಿ ನೀಡುವಲ್ಲಿ ಪ್ರಮುಖವಾಗಿ ಬೆಂಬಲಿಸಿದವರಲ್ಲಿ ಮೈಸೂರು ಮಹಾರಾಜರು ಒಬ್ಬರು ಎಂದು ಅವರು ಹೇಳಿದರು. "ಸ್ವಾಮಿ ವಿವೇಕಾನಂದರ ಭಾರತ ಪರ್ಯಟನೆಯು ರಾಷ್ಟ್ರ ಪ್ರಜ್ಞೆಯ ಏಕತೆಗೆ ಸಾಕ್ಷಿಯಾಗಿದೆ ಮತ್ತು ಇದು ಏಕ್ ಭಾರತ್ ಶ್ರೇಷ್ಠ ಭಾರತ್ ಮನೋಭಾವಕ್ಕೆ ಶಾಶ್ವತ ಉದಾಹರಣೆಯಾಗಿದೆ" ಎಂದು ಅವರು ಹೇಳಿದರು.
"ನಾವು ಯುವಶಕ್ತಿಯನ್ನು ಹೊಂದಿರುವಾಗ ಭವಿಷ್ಯ ಮತ್ತು ರಾಷ್ಟ್ರದ ಅಭಿವೃದ್ಧಿ ಸುಲಭವಾಗುತ್ತದೆ" ಎಂಬ ಸ್ವಾಮಿ ವಿವೇಕಾನಂದರ ಮಾತನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ರಾಷ್ಟ್ರದ ಬಗೆಗಿನ ತಮ್ಮ ಕರ್ತವ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ ಮತ್ತು ಅತ್ಯಂತ ಕಿರಿಯ ವಯಸ್ಸಿನಲ್ಲಿ ಅಸಾಮಾನ್ಯ ಸಾಧನೆಗಳನ್ನು ಮಾಡಿದ ಹಲವಾರು ವ್ಯಕ್ತಿಗಳನ್ನು ಕರ್ನಾಟಕ ದೇಶಕ್ಕೆ ಕೊಡುಗೆಯಾಗಿ ನೀಡಿದೆ ಎಂದು ಅವರು ಹೇಳಿದರು. ಕಿತ್ತೂರಿನ ಮಹಾರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ಧೈರ್ಯ ಬ್ರಿಟಿಷ್ ಸಾಮ್ರಾಜ್ಯದ ಸ್ಥೈರ್ಯವನ್ನು ಉಡುಗಿಸಿದ ಉದಾಹರಣೆಗಳನ್ನು ಪ್ರಧಾನಿ ನೀಡಿದರು. 14 ನೇ ವಯಸ್ಸಿನಲ್ಲಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ನಾರಾಯಣ ಮಹಾದೇವ ಡೋಣಿಯವರನ್ನೂ ಅವರು ಉಲ್ಲೇಖಿಸಿದರು. ಸಿಯಾಚಿನ್‌ನಲ್ಲಿ ಮೈನಸ್ 55 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಬದುಕುಳಿದ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಅವರನ್ನೂ ಪ್ರಧಾನಿ ಉಲ್ಲೇಖಿಸಿದರು. ರಾಷ್ಟ್ರದ ಬಹುಮುಖ ಯುವ ಪ್ರತಿಭೆಗಳ ಕುರಿತು ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು ಭಾರತದ ಯುವಜನರು ಪ್ರತಿಯೊಂದು ಕ್ಷೇತ್ರದಲ್ಲೂ ದಾಪುಗಾಲಿಡುತ್ತಿದ್ದಾರೆ ಎಂದರು.
ಬದಲಾಗುತ್ತಿರುವ ಕಾಲಮಾನದಲ್ಲಿ ರಾಷ್ಟ್ರೀಯ ಗುರಿಗಳ ಬದಲಾಗುತ್ತಿರುವ ಸ್ವರೂಪವನ್ನು ನೆನಪಿಸಿದ ಪ್ರಧಾನಮಂತ್ರಿಯವರು, 21 ನೇ ಶತಮಾನದ ಈ ಸಮಯವು ಬಹಳ ಮಹತ್ವದ್ದಾಗಿದೆ. ಏಕೆಂದರೆ ಇಂದು ಭಾರತವು ಯುವ ಜನಸಂಖ್ಯೆಯನ್ನು ಹೊಂದಿರುವ ಯುವ ದೇಶವಾಗಿದೆ ಎಂದು ಹೇಳಿದರು. ಯುವ ಶಕ್ತಿಯು ಭಾರತದ ಪಯಣದ ಪ್ರೇರಕ ಶಕ್ತಿಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಮುಂದಿನ 25 ವರ್ಷಗಳು ರಾಷ್ಟ್ರ ನಿರ್ಮಾಣಕ್ಕೆ ಮಹತ್ವದ್ದಾಗಿದೆ. ಯುವ ಶಕ್ತಿಯ ಕನಸುಗಳು ಮತ್ತು ಆಕಾಂಕ್ಷೆಗಳು ಭಾರತದ ದಿಕ್ಕು ಮತ್ತು ಗುರಿಯನ್ನು ನಿರ್ಧರಿಸುತ್ತವೆ ಮತ್ತು ಯುವ ಶಕ್ತಿಯ ಉತ್ಸಾಹವು ಭಾರತದ ಹಾದಿಯನ್ನು ನಿರ್ಧರಿಸುತ್ತದೆ. ಈ ಯುವ ಶಕ್ತಿಯನ್ನು ಬಳಸಿಕೊಳ್ಳಲು ನಾವು ನಮ್ಮ ಆಲೋಚನೆಗಳೊಂದಿಗೆ, ನಮ್ಮ ಪ್ರಯತ್ನಗಳೊಂದಿಗೆ ಯುವಕರಾಗಿರಬೇಕು! ಯುವಕರಾಗಿರುವುದೆಂದರೆ, ನಮ್ಮ ಪ್ರಯತ್ನಗಳಲ್ಲಿ ಕ್ರಿಯಾಶೀಲವಾಗಿರುವುದು. ಯುವಕರಾಗಿರುವುದು ಎಂದರೆ ಸಮಗ್ರ ದೃಷ್ಟಿಕೋನ ಹೊಂದುವುದು, ಯುವಕರಾಗಿರುವುದು ಎಂದರೆ ಪ್ರಾಯೋಗಿಕವಾಗಿರುವುದು! ಸವಾಲುಗಳ ಪರಿಹಾರಕ್ಕಾಗಿ ಜಗತ್ತು ನಮ್ಮತ್ತ ನೋಡುತ್ತಿದ್ದರೆ ಅದಕ್ಕೆ ನಮ್ಮ ‘ಅಮೃತ’ಪೀಳಿಗೆಯ ಸಮರ್ಪಣಾ ಮನೋಭಾವವೇ ಕಾರಣ ಎಂದು ಅವರು ಹೇಳಿದರು.
ಭಾರತವು ಇಂದು 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ಅದನ್ನು ಮೊದಲ 3 ಸ್ಥಾನದೊಳಗೆ ಕೊಂಡೊಯ್ಯುವುದು ನಮ್ಮ ಗುರಿಯಾಗಿದೆ ಎಂದು ಪ್ರಧಾನಿ ಹೇಳಿದರು. ಕೃಷಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಹೊರಹೊಮ್ಮುತ್ತಿರುವ ಅವಕಾಶಗಳ ಬಗ್ಗೆ ಅವರು ಪುನರುಚ್ಚರಿಸಿದರು ಮತ್ತು ಈ ಕ್ರಾಂತಿಯ ಶ್ರೇಯ ಯುವಜನರಿಗೆ ಸಲ್ಲಬೇಕು ಎಂದರು. ರಾಷ್ಟ್ರದ ಇತಿಹಾಸದಲ್ಲಿ ಪ್ರಸ್ತುತ ಸಂದರ್ಭದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಆರ್ಥಿಕತೆ, ಶಿಕ್ಷಣ, ಕ್ರೀಡೆ ಮತ್ತು ಸ್ಟಾರ್ಟ್‌ಅಪ್‌ಗಳ ಕ್ಷೇತ್ರಗಳಲ್ಲಿ ಬಲವಾದ ಅಡಿಪಾಯವನ್ನು ಹಾಕಲಾಗುತ್ತಿದೆ ಎಂದರು. ನಿಮ್ಮ ಟೇಕ್-ಆಫ್‌ಗೆ ರನ್‌ವೇ ಸಿದ್ಧವಾಗಿದೆ! ಇಂದು, ಭಾರತ ಮತ್ತು ಅದರ ಯುವಜನತೆಯ ಬಗ್ಗೆ ಜಾಗತಿಕವಾಗಿ ಹೆಚ್ಚಿನ ಆಶಾವಾದವಿದೆ. ಈ ಆಶಾವಾದವು ನಿಮ್ಮ ಬಗ್ಗೆ ಇದೆ. ಈ ಆಶಾವಾದವು ನಿಮ್ಮಿಂದಾಗಿ ಇದೆ ಮತ್ತು ಈ ಆಶಾವಾದವು ನಿಮಗಾಗಿ ಆಗಿದೆ! ಇಂದು ಈ ಶತಮಾನ ಭಾರತದ ಶತಮಾನ ಎಂದು ಜಾಗತಿಕವಾಗಿ ಹೇಳಲಾಗುತ್ತಿದೆ. ಇದು ನಿಮ್ಮ ಶತಮಾನ, ಭಾರತದ ಯುವಜನರ ಶತಮಾನ! ಆಶಾವಾದ ಮತ್ತು ಅವಕಾಶಗಳು ಒಟ್ಟಿಗೆ ಸೇರಿರುವ ಇದೊಂದು ಐತಿಹಾಸಿಕ ಸಮಯವಾಗಿದೆ ಎಂದು ಅವರು ಹೇಳಿದರು.
ರಾಷ್ಟ್ರದ ಬಲವನ್ನು ಜೀವಂತವಾಗಿಡುವಲ್ಲಿ ಮಹಿಳಾ ಶಕ್ತಿಯ ಪಾತ್ರವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು ಮತ್ತು ಸಶಸ್ತ್ರ ಪಡೆಗಳು, ಬಾಹ್ಯಾಕಾಶ ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಕ್ರೀಡೆಗಳಲ್ಲಿ ಮಹಿಳೆಯರ ಸಾಧನೆಗಳ ನಿದರ್ಶನಗಳ ಬಗ್ಗೆ ಅವರು ವಿವರಿಸಿದರು.
ಭವಿಷ್ಯದ ಚಿಂತನೆ ಮತ್ತು 21 ನೇ ಶತಮಾನವನ್ನು ಭಾರತದ ಶತಮಾನವನ್ನಾಗಿ ಮಾಡುವ ವಿಧಾನದ ಪ್ರಾಮುಖ್ಯತೆಯನ್ನು ಶ್ರೀ ಮೋದಿ ಒತ್ತಿ ಹೇಳಿದರು. ಯುವಜನರ ಆಕಾಂಕ್ಷೆಗಳನ್ನು ಈಡೇರಿಸಲು, ನಾವು ಮರುಶೋಧನೆಗಳನ್ನು ಮಾಡಬೇಕು ಮತ್ತು ಮುಂದುವರಿದ ರಾಷ್ಟ್ರಗಳಿಗಿಂತಲೂ ಮುಂದೆ ಸಾಗುವುದು ಅತ್ಯಗತ್ಯವಾಗಿದೆ ಎಂದು ಅವರು ಹೇಳಿದರು. ಅತ್ಯಾಧುನಿಕ ವಲಯಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಅಸ್ತಿತ್ವದಲ್ಲಿಲ್ಲದ ಉದ್ಯೋಗಗಳು ಭವಿಷ್ಯದಲ್ಲಿ ನಮ್ಮ ಯುವಜನರಿಗೆ ಮುಖ್ಯವಾಹಿನಿಯ ವೃತ್ತಿಯಾಗುತ್ತವೆ, ಆದ್ದರಿಂದ ನಮ್ಮ ಯುವಕರು ಭವಿಷ್ಯದ ಕೌಶಲ್ಯಗಳಿಗೆ ಸಿದ್ಧರಾಗುವುದು ಮುಖ್ಯವಾಗಿದೆ ಎಂದು ಹೇಳಿದರು. ಹೊಸ ಶಿಕ್ಷಣ ನೀತಿಯ ಮೂಲಕ ಹೊರಹೊಮ್ಮುತ್ತಿರುವ ಪ್ರಾಯೋಗಿಕ ಮತ್ತು ಭವಿಷ್ಯದ ಶಿಕ್ಷಣ ವ್ಯವಸ್ಥೆಯನ್ನು ಪ್ರಧಾನಿ ಉಲ್ಲೇಖಿಸಿದರು.
ವೇಗವಾಗಿ ಬದಲಾಗುತ್ತಿರುವ ಇಂದಿನ ಜಗತ್ತಿನಲ್ಲಿ ಪ್ರತಿಯೊಬ್ಬ ಯುವಜನರ ಜೀವನದ ಭಾಗವಾಗಬೇಕಾದ ಸ್ವಾಮಿ ವಿವೇಕಾನಂದರ ಎರಡು ಸಂದೇಶಗಳನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. “ಸಂಸ್ಥೆಗಳು ಮತ್ತು ಆವಿಷ್ಕಾರಗ ಆ ಎರಡು ಸಂದೇಶಗಳಾಗಿವೆ. ನಾವು ನಮ್ಮ ಕಲ್ಪನೆಯನ್ನು ವಿಸ್ತರಿಸಿದಾಗ ಮತ್ತು ತಂಡ ಮನೋಭಾವದಿಂದ ಕೆಲಸ ಮಾಡಿದಾಗ ಒಂದು ಸಂಸ್ಥೆ ರೂಪುಗೊಳ್ಳುತ್ತದೆ ಎಂದು ಪ್ರಧಾನಿ ವಿವರಿಸಿದರು ಮತ್ತು ಇಂದಿನ ಪ್ರತಿಯೊಬ್ಬ ಯುವಕರು ತಮ್ಮ ವೈಯಕ್ತಿಕ ಯಶಸ್ಸನ್ನು ತಂಡದ ಯಶಸ್ಸಿನ ರೂಪದಲ್ಲಿ ಹೆಚ್ಚಿಸುವಂತೆ ಕರೆ ನೀಡಿದರು. "ಈ ತಂಡ ಮನೋಭಾವವು ಅಭಿವೃದ್ಧಿ ಹೊಂದಿದ ಭಾರತವನ್ನು 'ಟೀಮ್ ಇಂಡಿಯಾ' ಆಗಿ ಮುನ್ನಡೆಸುತ್ತದೆ" ಎಂದು ಪ್ರಧಾನಮಂತ್ರಿ ಹೇಳಿದರು.
ಸ್ವಾಮಿ ವಿವೇಕಾನಂದರ ಆವಿಷ್ಕಾರದ ಕಲ್ಪನೆಯ ಮೇಲೆ ಬೆಳಕು ಚೆಲ್ಲಿದ ಪ್ರಧಾನಿಯವರು, ಪ್ರತಿಯೊಂದು ಕೆಲಸವೂ ಅಪಹಾಸ್ಯ, ಪ್ರತಿಭಟನೆ ಮತ್ತು ಸ್ವೀಕಾರ ಎಂಬ ಮೂರು ಹಂತಗಳನ್ನು ದಾಟಬೇಕಾಗುತ್ತದೆ ಎಂದರು. ಡಿಜಿಟಲ್ ಪಾವತಿಗಳು, ಸ್ವಚ್ಛ ಭಾರತ ಅಭಿಯಾನ, ಜನಧನ್ ಯೋಜನೆ ಮತ್ತು ದೇಶೀಯವಾಗಿ ತಯಾರಿಸಿದ ಕೋವಿಡ್ ಲಸಿಕೆಗಳ ಉದಾಹರಣೆಯನ್ನು ನೀಡಿದ ಪ್ರಧಾನಿಯವರು, ಇವುಗಳನ್ನು ಪರಿಚಯಿಸಿದಾಗ ಮೊದಲು ಅಪಹಾಸ್ಯ ಮಾಡಲಾಯಿತು ಎಂದರು. ಇಂದು ಭಾರತವು ಡಿಜಿಟಲ್ ಪಾವತಿಯಲ್ಲಿ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದೆ, ಜನ್ ಧನ್ ಖಾತೆಗಳು ನಮ್ಮ ಆರ್ಥಿಕತೆಯ ದೊಡ್ಡ ಶಕ್ತಿಯಾಗಿ ಮಾರ್ಪಟ್ಟಿವೆ ಮತ್ತು ಲಸಿಕೆ ಕ್ಷೇತ್ರದಲ್ಲಿ ಭಾರತದ ಸಾಧನೆಯನ್ನು ವಿಶ್ವದಾದ್ಯಂತ ಚರ್ಚಿಸಲಾಗುತ್ತಿದೆ ಎಂದು ಅವರು ಹೇಳಿದರು. ನೀವು ಯಾವುದೇ ಹೊಸ ಆಲೋಚನೆಯನ್ನು ಹೊಂದಿದ್ದರೆ, ನೀವು ಅಪಹಾಸ್ಯಕ್ಕೊಳಗಾಗಬಹುದು ಅಥವಾ ವಿರೋಧ ಎದುರಿಸಬೇಕಾಗಬಹುದು ಎಂಬುದನ್ನು ನೆನಪಿಡಿ. ಆದರೆ ನಿಮ್ಮ ಆಲೋಚನೆಯ ಬಗ್ಗೆ ನಿಮಗೆ ನಂಬಿಕೆ ಇದ್ದರೆ, ಅದಕ್ಕೆ ಬದ್ಧವಾಗಿರಿ. ಅದರಲ್ಲಿ ವಿಶ್ವಾವಿಡಿ ಎಂದು ಅವರು ಹೇಳಿದರು.
ಯುವಜನರನ್ನು ಜೊತೆಯಾಗಿಸಿಕೊಂಡು ದೇಶದಲ್ಲಿ ಹಲವು ಹೊಸ ಪ್ರಯತ್ನಗಳು ಮತ್ತು ಪ್ರಯೋಗಗಳನ್ನು ನಡೆಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಸ್ಪರ್ಧಾತ್ಮಕ ಮತ್ತು ಸಹಕಾರಿ ಒಕ್ಕೂಟ ವ್ಯವಸ್ಥೆಯ ಸಾದೃಶ್ಯವನ್ನು ವಿವರಿಸಿದ ಪ್ರಧಾನಿ, ದೇಶದ ವಿವಿಧ ರಾಜ್ಯಗಳ ಯುವಜನರು ರಾಷ್ಟ್ರೀಯ ಯುವಜನೋತ್ಸವದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು. ಇಲ್ಲಿ ಭಾರತವೇ ಜಯಭೇರಿ ಬಾರಿಸುವುದರಿಂದ ಯಾರು ಗೆದ್ದರೂ ಪರವಾಗಿಲ್ಲ ಎಂದು ಹೇಳಿದ ಪ್ರಧಾನಿ, ಇಲ್ಲಿ ಯುವಜನರು ಪರಸ್ಪರ ಪೈಪೋಟಿ ಮಾತ್ರ ನಡೆಸದೆ ಪರಸ್ಪರ ಸಹಕರಿಸುತ್ತಾರೆ ಎಂದು ಹೇಳಿದರು. ಈ ಸ್ಪರ್ಧಾತ್ಮಕ ಮತ್ತು ಸಹಕಾರ ಮನೋಭಾವವನ್ನು ಮುಂದಿಟ್ಟ ಅವರು, ನಮ್ಮ ಯಶಸ್ಸನ್ನು ರಾಷ್ಟ್ರದ ಯಶಸ್ಸಿನಿಂದ ಅಳೆಯಲಾಗುತ್ತದೆ ಎಂಬ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.
“ವಿಕಸಿತ ಭಾರತ, ಸಶಕ್ತ ಭಾರತ! (ಅಭಿವೃದ್ಧಿ ಹೊಂದಿದ ಭಾರತ, ಬಲಿಷ್ಠ ಭಾರತ) ಎಂಬುದು ಇಂದು ದೇಶದ ಗುರಿಯಾಗಿದೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಈ ಕನಸು ನನಸಾಗುವವರೆಗೂ ನಾವು ವಿರಮಿಸಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು. ದೇಶದ ಪ್ರತಿಯೊಬ್ಬ ಯುವಜನರು ಈ ಕನಸನ್ನು ತಮ್ಮದಾಗಿಸಿಕೊಳ್ಳುತ್ತಾರೆ ಮತ್ತು ದೇಶದ ಜವಾಬ್ದಾರಿಯನ್ನು ಹೊರುತ್ತಾರೆ ಎಂಬ ನಂಬಿಕೆಯನ್ನು ಪ್ರಧಾನಿ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಶ್ರೀ ಅನುರಾಗ್ ಸಿಂಗ್ ಠಾಕೂರ್, ಶ್ರೀ ನಿಸಿತ್ ಪ್ರಮಾಣಿಕ್ ಮತ್ತು ಕರ್ನಾಟಕ ಸರ್ಕಾರದ ಸಚಿವರುಗಳು ಉಪಸ್ಥಿತರಿದ್ದರು.
ಹಿನ್ನೆಲೆ
ರಾಷ್ಟ್ರಮಟ್ಟದಲ್ಲಿ ನಮ್ಮ ಪ್ರತಿಭಾನ್ವಿತ ಯುವಕರಿಗೆ ಮಾನ್ಯತೆ ನೀಡಲು, ರಾಷ್ಟ್ರ ನಿರ್ಮಾಣದತ್ತ ಅವರನ್ನು ಪ್ರೇರೇಪಿಸಲು ಪ್ರತಿ ವರ್ಷ ರಾಷ್ಟ್ರೀಯ ಯುವಜನೋತ್ಸವವನ್ನು ನಡೆಸಲಾಗುತ್ತದೆ. ಇದು ದೇಶದ ಎಲ್ಲಾ ಭಾಗಗಳ ವೈವಿಧ್ಯಮಯ ಸಂಸ್ಕೃತಿಗಳನ್ನು ಒಂದೇ ವೇದಿಕೆಯ ಮೇಲೆ ತರುತ್ತದೆ ಮತ್ತು ಏಕ್ ಭಾರತ್, ಶ್ರೇಷ್ಠ ಭಾರತ್ ಮನೋಭಾವದಲ್ಲಿ ಭಾಗವಹಿಸುವವರನ್ನು ಒಂದುಗೂಡಿಸುತ್ತದೆ. ಕರ್ನಾಟಕದ ಹುಬ್ಬಳ್ಳಿ-ಧಾರವಾಡದಲ್ಲಿ ಜನವರಿ 12 ರಿಂದ 16 ರವರೆಗೆ ‘ವಿಕಸಿತ ಯುವ - ವಿಕಸಿತ ಭಾರತ’ ವಿಷಯದೊಂದಿಗೆ ಉತ್ಸವವನ್ನು ಆಯೋಜಿಸಲಾಗಿದೆ.
ಉತ್ಸವವು ಯುವ ಶೃಂಗಸಭೆಗೆ ಸಾಕ್ಷಿಯಾಗಲಿದೆ, ಇದು ಜಿ20 ಮತ್ತು ವೈ20 ಕಾರ್ಯಕ್ರಮಗಳಿಂದ ಹೊರಹೊಮ್ಮುವ ಐದು ವಿಷಯಗಳ ಕುರಿತು ಸಮಗ್ರ ಚರ್ಚೆಗಳಿಗೆ ಸಾಕ್ಷಿಯಾಗಲಿದೆ. ಕೆಲಸದ ಭವಿಷ್ಯ, ಉದ್ಯಮ, ನಾವೀನ್ಯತೆ ಮತ್ತು 21 ನೇ ಶತಮಾನದ ಕೌಶಲ್ಯಗಳು; ಹವಾಮಾನ ಬದಲಾವಣೆ ಮತ್ತು ವಿಪತ್ತು ಅಪಾಯ ಕಡಿತ; ಶಾಂತಿ ನಿರ್ಮಾಣ ಮತ್ತು ಸಮನ್ವಯ; ಹಂಚಿಕೆಯ ಭವಿಷ್ಯ-ಆಡಳಿತ ಮತ್ತು ಪ್ರಜಾಪ್ರಭುತ್ವದಲ್ಲಿ ಯುವಜನರು ಮತ್ತು ಆರೋಗ್ಯ ಮತ್ತು ಯೋಗಕ್ಷೇಮ ಆ ಐದು ವಿಷಯಗಳಾಗಿವೆ. ಶೃಂಗಸಭೆಯು ಅರವತ್ತಕ್ಕೂ ಹೆಚ್ಚು ಪ್ರಖ್ಯಾತ ತಜ್ಞರ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. ಹಲವಾರು ಸ್ಪರ್ಧಾತ್ಮಕ ಮತ್ತು ಸ್ಪರ್ಧಾತ್ಮಕವಲ್ಲದ ಕಾರ್ಯಕ್ರಮಗಳು ಸಹ ನಡೆಯಲಿವೆ. ಸ್ಪರ್ಧಾತ್ಮಕ ಕಾರ್ಯಕ್ರಮಗಳು ಜಾನಪದ ನೃತ್ಯಗಳು ಮತ್ತು ಹಾಡುಗಳನ್ನು ಒಳಗೊಂಡಿರುತ್ತವೆ ಮತ್ತು ಸ್ಥಳೀಯ ಸಾಂಪ್ರದಾಯಿಕ ಸಂಸ್ಕೃತಿಗಳಿಗೆ ಪ್ರೋತ್ಸಾಹ ನೀಡುತ್ತವೆ. ಸ್ಪರ್ಧಾತ್ಮಕವಲ್ಲದ ಕಾರ್ಯಕ್ರಮಗಳು ಯೋಗಥಾನ್ ಅನ್ನು ಒಳಗೊಂಡಿರುತ್ತದೆ, ಇದು ಸುಮಾರು 10 ಲಕ್ಷ ಜನರನ್ನು ಯೋಗ ಮಾಡಲು ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ. ರಾಷ್ಟ್ರ ಮಟ್ಟದ ಪ್ರದರ್ಶಕರಿಂದ ಎಂಟು ದೇಶೀಯ ಕ್ರೀಡೆಗಳು ಮತ್ತು ಸಮರ ಕಲೆಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಇತರ ಆಕರ್ಷಣೆಗಳಲ್ಲಿ ಆಹಾರೋತ್ಸವ, ಯುವ ಕಲಾವಿದರ ಶಿಬಿರ, ಸಾಹಸ ಕ್ರೀಡಾ ಚಟುವಟಿಕೆಗಳು ಮತ್ತು ವಿಶೇಷ ನಿಮ್ಮ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಬಗ್ಗೆ ತಿಳಿಯಿರಿ ಶಿಬಿರಗಳು ಸೇರಿವೆ.
*****
(Release ID: 1890848)
Visitor Counter : 504
Read this release in:
Bengali
,
Tamil
,
English
,
Urdu
,
Marathi
,
Hindi
,
Assamese
,
Manipuri
,
Punjabi
,
Gujarati
,
Odia
,
Telugu
,
Malayalam