ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದ ಮಧ್ಯಪ್ರದೇಶ ಜಾಗತಿಕ ಹೂಡಿಕೆದಾರರ ಶೃಂಗಸಭೆ 2023 ರಲ್ಲಿ ಪ್ರಧಾನಮಂತ್ರಿಯವರ ವೀಡಿಯೊ ಸಂದೇಶದ ಕನ್ನಡ ಭಾಷಾಂತರ

Posted On: 11 JAN 2023 11:54AM by PIB Bengaluru

ನಮಸ್ಕಾರ!

ಮಧ್ಯಪ್ರದೇಶ ಹೂಡಿಕೆದಾರರ ಶೃಂಗಸಭೆಗೆ ಎಲ್ಲಾ ಹೂಡಿಕೆದಾರರು ಮತ್ತು ಉದ್ಯಮಿಗಳಿಗೆ ಆತ್ಮೀಯ ಸ್ವಾಗತ! ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ಮಧ್ಯಪ್ರದೇಶದ ಪಾತ್ರ ಬಹಳ ನಿರ್ಣಾಯಕವಾಗಿದೆ. ಭಕ್ತಿ ಮತ್ತು ಆಧ್ಯಾತ್ಮಿಕತೆಯಿಂದ ಪ್ರವಾಸೋದ್ಯಮದವರೆಗೆ; ಕೃಷಿಯಿಂದ ಹಿಡಿದು ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯವರೆಗೆ, ಮಧ್ಯಪ್ರದೇಶ ಅನನ್ಯತೆ, ಭವ್ಯತೆ ಮತ್ತು ಜಾಗೃತಿಯ ಸ್ಥಾನ ಪಡೆದಿದೆ.

ಸ್ನೇಹಿತರೇ, 

'ಆಜಾದಿ ಕಾ ಅಮೃತಕಾಲ'ದ ಸುವರ್ಣಯುಗಾರಂಭವಾದ ಸಮಯದಲ್ಲಿ ಈ ಶೃಂಗಸಭೆಯನ್ನು ಮಧ್ಯಪ್ರದೇಶದಲ್ಲಿ ನಡೆಸಲಾಗುತ್ತಿದೆ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ನಾವೆಲ್ಲರೂ ಒಗ್ಗೂಡಿ ಶ್ರಮಿಸುತ್ತಿದ್ದೇವೆ. ನಾವು ಅಭಿವೃದ್ಧಿ ಹೊಂದಿದ ಭಾರತದ ಬಗ್ಗೆ ಮಾತನಾಡುವಾಗ, ಅದು ಕೇವಲ ನಮ್ಮ ಆಕಾಂಕ್ಷೆ ಮಾತ್ರವಲ್ಲ, ಪ್ರತಿಯೊಬ್ಬ ಭಾರತೀಯನ ಸಂಕಲ್ಪವೂ ಆಗಿದೆ. ಈ ಬಗ್ಗೆ ಭಾರತೀಯರಾದ ನಾವು ಮಾತ್ರವೇ ಅಲ್ಲ, ವಿಶ್ವದ ಪ್ರತಿಯೊಂದು ಸಂಸ್ಥೆ ಮತ್ತು ಪ್ರತಿಯೊಬ್ಬ ತಜ್ಞರಿಗೂ ಈ ಬಗ್ಗೆ ವಿಶ್ವಾಸವಿದೆ ಎಂಬುದು ನನಗೆ ಸಂತೋಷವಾಗಿದೆ.

 ಸ್ನೇಹಿತರೇ,

ಐಎಂಎಫ್ ಭಾರತವನ್ನು ಜಾಗತಿಕ ಆರ್ಥಿಕತೆಯಲ್ಲಿ ಉಜ್ವಲ ತಾಣವಾಗಿ ನೋಡುತ್ತದೆ. ಜಾಗತಿಕ ಸಮಸ್ಯೆಗಳನ್ನು ನಿಭಾಯಿಸಲು ಭಾರತವು ಇತರ ಅನೇಕ ದೇಶಗಳಿಗಿಂತ ಉತ್ತಮ ಸ್ಥಾನದಲ್ಲಿದೆ ಎಂದು ವಿಶ್ವ ಬ್ಯಾಂಕ್ ಹೇಳುತ್ತದೆ. ಭಾರತದ ಬಲಿಷ್ಠ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳು ಇದಕ್ಕೆ ಕಾರಣವಾಗಿದೆ. ಈ ವರ್ಷ ಜಿ -20 ಗುಂಪಿನಲ್ಲಿ ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಒಇಸಿಡಿ ಹೇಳಿದೆ. ಮುಂದಿನ 4-5 ವರ್ಷಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮುವತ್ತ ಮುಂದಡಿ ಇಡುತ್ತಿದೆ ಎಂದು ಮೋರ್ಗನ್ ಸ್ಟ್ಯಾನ್ಲಿ ಹೇಳಿದ್ದಾರೆ. ಇದು ಕೇವಲ ಭಾರತದ ದಶಕವಷ್ಟೇ ಅಲ್ಲ, ಇದು ಭಾರತದ ಶತಮಾನ ಎಂದು ಮೆಕ್ ಕಿನ್ಸೆಯ ಸಿಇಒ ಹೇಳಿದ್ದಾರೆ. ಜಾಗತಿಕ ಆರ್ಥಿಕತೆಯ ಮೇಲೆ ನಿಗಾ ಇಡುವ ಸಂಸ್ಥೆಗಳು ಮತ್ತು ವಿಶ್ವಾಸಾರ್ಹ ಧ್ವನಿಗಳು ಭಾರತದ ಮೇಲೆ ಅಭೂತಪೂರ್ವ ವಿಶ್ವಾಸವನ್ನು ಹೊಂದಿವೆ. ಇದೇ ಆಶಾವಾದವನ್ನು ಜಾಗತಿಕ ಹೂಡಿಕೆದಾರರು ಸಹ ಹಂಚಿಕೊಂಡಿದ್ದಾರೆ. ಇತ್ತೀಚೆಗೆ, ಪ್ರತಿಷ್ಠಿತ ಅಂತಾರಾಷ್ಟ್ರೀಯ ಬ್ಯಾಂಕ್ ಒಂದು ಸಮೀಕ್ಷೆಯನ್ನು ನಡೆಸಿತು. ಹೆಚ್ಚಿನ ಹೂಡಿಕೆದಾರರು ಭಾರತವನ್ನು ಇಷ್ಟಪಡುತ್ತಾರೆ ಎಂಬುದು ಇದರಿಂದ ವೇದ್ಯವಾಗಿದೆ. ಇಂದು, ಭಾರತವು ದಾಖಲೆಯ ಎಫ್.ಡಿ.ಐ ಪಡೆಯುತ್ತಿದೆ. ನಮ್ಮ ನಡುವೆ ನಿಮ್ಮೆಲ್ಲರ ಉಪಸ್ಥಿತಿಯು ಸಹ ಈ ಭಾವನೆಯನ್ನು ಪ್ರತಿಬಿಂಬಿಸುತ್ತದೆ. 

ಸ್ನೇಹಿತರೇ,

ಭಾರತದ ಬಗ್ಗೆ ಈ ಆಶಾವಾದವು ಬಲಿಷ್ಠ ಪ್ರಜಾಪ್ರಭುತ್ವ, ಯುವ ಜನಸಂಖ್ಯೆ ಮತ್ತು ರಾಜಕೀಯ ಸ್ಥಿರತೆಯಿಂದ ಪ್ರೇರಿತವಾಗಿದೆ. ಹೀಗಾಗಿಯೇ, ಭಾರತವು ಸುಗಮ ಜೀವನ ಮತ್ತು ಸುಗಮ ವ್ಯಾಪಾರವನ್ನು ಉತ್ತೇಜಿಸಲು ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಶತಮಾನದಲ್ಲಿ ಒಮ್ಮೆ ಎದುರಾಗುವ ಬಿಕ್ಕಟ್ಟಿನ ಸಂದರ್ಭದಲ್ಲೂ ನಾವು ಸುಧಾರಣೆಗಳ ಹಾದಿಯಲ್ಲಿ ಸಾಗಿದೆವು. ಭಾರತವು 2014 ರಿಂದ 'ಸುಧಾರಣೆ, ಪರಿವರ್ತನೆ ಮತ್ತು ಕಾರ್ಯನಿರ್ವಹಣೆ' ಮಾರ್ಗದಲ್ಲಿದೆ. 'ಆತ್ಮನಿರ್ಭರ ಭಾರತ ಅಭಿಯಾನ'ವು ಅದಕ್ಕೆ ಹೆಚ್ಚಿನ ವೇಗವನ್ನು ನೀಡಿದೆ. ಇದರ ಪರಿಣಾಮವಾಗಿ, ಭಾರತವು ಹೂಡಿಕೆಗೆ ಆಕರ್ಷಕ ತಾಣವಾಗಿ ಮಾರ್ಪಟ್ಟಿದೆ.

ಸ್ನೇಹಿತರೇ, 

ಸ್ಥಿರ ಸರ್ಕಾರ, ನಿರ್ಣಾಯಕ ಸರ್ಕಾರ, ಸರಿಯಾದ ಉದ್ದೇಶಗಳೊಂದಿಗೆ ನಡೆಯುವ ಸರ್ಕಾರ, ಅಭೂತಪೂರ್ವ ವೇಗದಲ್ಲಿ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ. ದೇಶದ ಪ್ರತಿಯೊಂದು ಪ್ರಮುಖ ನಿರ್ಧಾರವನ್ನು ಸಾಧ್ಯವಾದಷ್ಟು ವೇಗವಾಗಿ ತೆಗೆದುಕೊಳ್ಳಲಾಗುತ್ತದೆ. ಕಳೆದ 8 ವರ್ಷಗಳಲ್ಲಿ, ನಾವು ಸುಧಾರಣೆಗಳ ವೇಗ ಮತ್ತು ಪ್ರಮಾಣವನ್ನು ಹೇಗೆ ನಿರಂತರವಾಗಿ ಹೆಚ್ಚಿಸಿದ್ದೇವೆ ಎಂಬುದನ್ನು ಸಹ ನೀವು ನೋಡಿದ್ದೀರಿ. ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಮರುಬಂಡವಾಳೀಕರಣ ಮತ್ತು ಆಡಳಿತಕ್ಕೆ ಸಂಬಂಧಿಸಿದ ಅನೇಕ ಸುಧಾರಣೆಗಳೊಂದಿಗೆ ನಾವು ಹೂಡಿಕೆಯ ಹಾದಿಯಲ್ಲಿನ ಹಲವಾರು ಅಡೆತಡೆಗಳನ್ನು ತೊಡೆದುಹಾಕಲು, ಐಬಿಸಿಯಂತಹ ಆಧುನಿಕ ಪರಿಹಾರ ಚೌಕಟ್ಟು, ಒಂದು ರಾಷ್ಟ್ರ ಒಂದು ತೆರಿಗೆಯಂತಹ ವ್ಯವಸ್ಥೆಯನ್ನು ಜಿ.ಎಸ್.ಟಿ. ರೂಪದಲ್ಲಿ ರಚಿಸಿದ್ದೇವೆ, ಸಾಂಸ್ಥಿಕ ತೆರಿಗೆಯನ್ನು ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸಿ, ಸಾರ್ವಭೌಮ ಸಂಪತ್ತು ನಿಧಿಗಳು ಮತ್ತು ಪಿಂಚಣಿ ನಿಧಿಗಳಿಗೆ ತೆರಿಗೆಗಳಿಂದ ವಿನಾಯಿತಿ ನೀಡಿದ್ದೇವೆ.  ವಿವಿಧ ವಲಯಗಳಲ್ಲಿ ಸ್ವಯಂಚಾಲಿತ ಮಾರ್ಗದ ಮೂಲಕ ಶೇ.100ರಷ್ಟು ಎಫ್.ಡಿ.ಐಗೆ ಅವಕಾಶ ನೀಡಲಾಗಿದ್ದು,  ಸಣ್ಣ ಆರ್ಥಿಕ ಅಪರಾಧಗಳನ್ನು ಅಪರಾಧೀಕರಣ ಮುಕ್ತಗೊಳಿಸಲಾಗಿದೆ. ಇಂದಿನ ನವ ಭಾರತವು ತನ್ನ ಖಾಸಗಿ ವಲಯದ ಶಕ್ತಿಯ ಮೇಲೆ ಸಮಾನವಾಗಿ ಅವಲಂಬಿತವಾಗಿ ಮುಂದುವರಿಯುತ್ತಿದೆ. ನಾವು ಖಾಸಗಿ ವಲಯಕ್ಕಾಗಿ ರಕ್ಷಣೆ, ಗಣಿಗಾರಿಕೆ ಮತ್ತು ಬಾಹ್ಯಾಕಾಶದಂತಹ ಅನೇಕ ವ್ಯೂಹಾತ್ಮಕ ವಲಯಗಳನ್ನು ಮುಕ್ತಗೊಳಿಸಿದ್ದೇವೆ. ಇದಲ್ಲದೆ, ಡಜನ್ನು ಗಟ್ಟಲೆ ಕಾರ್ಮಿಕ ಕಾನೂನುಗಳನ್ನು 4 ಸಂಹಿತೆಗಳಲ್ಲಿ ವಿಲೀನಗೊಳಿಸಿದ್ದು, ಇದು ಸಹ ಒಂದು ಪ್ರಮುಖ ಹೆಜ್ಜೆಯಾಗಿದೆ! 

ಸ್ನೇಹಿತರೇ,

ಅನುಸರಣೆಯ ಹೊರೆಯನ್ನು ತಗ್ಗಿಸಲು, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಅಭೂತಪೂರ್ವ ಪ್ರಯತ್ನಗಳು ನಡೆಯುತ್ತಿವೆ. ಕಳೆದ ಕೆಲವು ವರ್ಷಗಳಲ್ಲಿ ಸುಮಾರು 40,000 ಅನುಸರಣೆಗಳನ್ನು ತೆಗೆದುಹಾಕಲಾಗಿದೆ. ಇತ್ತೀಚೆಗೆ, ನಾವು ರಾಷ್ಟ್ರೀಯ ಏಕಗವಾಕ್ಷಿ ವ್ಯವಸ್ಥೆಯನ್ನು ಪ್ರಾರಂಭಿಸಿದ್ದೇವೆ, ಇದನ್ನು ಮಧ್ಯಪ್ರದೇಶ ಕೂಡ ಅಳವಡಿಸಿಕೊಂಡಿದೆ. ಈ ವ್ಯವಸ್ಥೆಯಡಿ ಈವರೆಗೆ ಸುಮಾರು 50,000 ಅನುಮೋದನೆಗಳನ್ನು ನೀಡಲಾಗಿದೆ. 

ಸ್ನೇಹಿತರೇ,

ಭಾರತದ ಆಧುನಿಕ ಮೂಲಸೌಕರ್ಯ, ಬಹು ಮಾದರಿ ಮೂಲಸೌಕರ್ಯಗಳು ಸಹ ಹೂಡಿಕೆಯ ಸಾಧ್ಯತೆಗಳಿಗೆ ಒತ್ತು ನೀಡುತ್ತಿವೆ. ಕಳೆದ 8 ವರ್ಷಗಳಲ್ಲಿ, ನಾವು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ವೇಗವನ್ನು ದುಪ್ಪಟ್ಟುಗೊಳಿಸಿದ್ದೇವೆ. ಈ ಅವಧಿಯಲ್ಲಿ ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ವಿಮಾನ ನಿಲ್ದಾಣಗಳ ಸಂಖ್ಯೆ ಸಹ ದುಪ್ಪಟ್ಟಾಗಿದೆ. ಭಾರತದ ಬಂದರುಗಳ ನಿರ್ವಹಣಾ ಸಾಮರ್ಥ್ಯ ಮತ್ತು ಬಂದರುಗಳಿಗೆ ಹಡಗುಗಳು ಬಂದು ಹೋಗುವ ಸಮಯದಲ್ಲಿ ಅಭೂತಪೂರ್ವ ಸುಧಾರಣೆ ಕಂಡುಬಂದಿದೆ. ಸಮರ್ಪಿತ ಸರಕು ಕಾರಿಡಾರ್ ಗಳು, ಕೈಗಾರಿಕಾ ಕಾರಿಡಾರ್ ಗಳು, ಎಕ್ಸ್ ಪ್ರೆಸ್ ಮಾರ್ಗಗಳು ಮತ್ತು ಸಾಗಣೆ  ಪಾರ್ಕ್ ಗಳು ನವ ಭಾರತದ ಗುರುತಾಗುತ್ತಿವೆ. ಭಾರತದಲ್ಲಿ ಮೊದಲ ಬಾರಿಗೆ, ಪಿಎಂ ಗತಿಶಕ್ತಿ ರಾಷ್ಟ್ರೀಯ ಮಹಾನ್ ಯೋಜನೆ (ಮಾಸ್ಟರ್ ಪ್ಲ್ಯಾನ್) ರೂಪದಲ್ಲಿ ಮೂಲಸೌಕರ್ಯ ನಿರ್ಮಾಣಕ್ಕಾಗಿ ರಾಷ್ಟ್ರೀಯ ವೇದಿಕೆಯನ್ನು ರಚಿಸಲಾಗಿದೆ. ಈ ವೇದಿಕೆಯಲ್ಲಿ, ದೇಶದ ಸಂಸ್ಥೆಗಳು, ಸರ್ಕಾರಗಳು, ಮತ್ತು ಹೂಡಿಕೆದಾರರಿಗೆ ಸಂಬಂಧಿಸಿದ ನವೀಕರಿಸಿದ ದತ್ತಾಂಶವಿದೆ. ವಿಶ್ವದ ಅತ್ಯಂತ ಸ್ಪರ್ಧಾತ್ಮಕ ಸಾಗಣೆ ಮಾರುಕಟ್ಟೆಯಾಗಿ ತನ್ನ ಅಸ್ಮಿತೆಯ ಛಾಪು ಮೂಡಿಸಲು ಭಾರತ ಬದ್ಧವಾಗಿದೆ. ಈ ಉದ್ದೇಶದೊಂದಿಗೆ, ನಾವು ನಮ್ಮ ರಾಷ್ಟ್ರೀಯ ಸಾಗಣೆ ನೀತಿಯನ್ನು ಜಾರಿಗೆ ತಂದಿದ್ದೇವೆ.

ಸ್ನೇಹಿತರೇ, 

ಸ್ಮಾರ್ಟ್ ಫೋನ್ ಡೇಟಾ ಬಳಕೆಯ ವಿಷಯದಲ್ಲಿ ಭಾರತವು ಪ್ರಥಮ ಸ್ಥಾನದಲ್ಲಿದೆ. ಗ್ಲೋಬಲ್ ಫಿನ್ಟೆಕ್ ಮತ್ತು ಐಟಿ-ಬಿಪಿಎನ್ ಹೊರಗುತ್ತಿಗೆಯ ವಿತರಣೆಯಲ್ಲೂ ಭಾರತ ಮೊದಲ ಸ್ಥಾನದಲ್ಲಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ವಾಯುಯಾನ ಮಾರುಕಟ್ಟೆ ಮತ್ತು ಮೂರನೇ ಅತಿದೊಡ್ಡ ವಾಹನ ಮಾರುಕಟ್ಟೆಯಾಗಿದೆ. ಇಂದು ಪ್ರತಿಯೊಬ್ಬರೂ ಭಾರತದ ಅತ್ಯುತ್ತಮ ಡಿಜಿಟಲ್ ಮೂಲಸೌಕರ್ಯದ ಬಗ್ಗೆ ಆಶಾವಾದಿಗಳಾಗಿದ್ದಾರೆ. ಜಾಗತಿಕ ಬೆಳವಣಿಗೆಯ ಮುಂದಿನ ಹಂತಕ್ಕೆ ಇದು ಎಷ್ಟು ಮುಖ್ಯ ಎಂದು ನಿಮಗೆ ಚೆನ್ನಾಗಿ ತಿಳಿದಿದೆ. ಒಂದು ಕಡೆ, ಭಾರತವು ಪ್ರತಿ ಹಳ್ಳಿಗೂ ಆಪ್ಟಿಕಲ್ ಫೈಬರ್ ಜಾಲವನ್ನು ಒದಗಿಸುತ್ತಿದ್ದರೆ, ಮತ್ತೊಂದೆಡೆ, ಅದು 5 ಜಿ ನೆಟ್ವರ್ಕ್ ಅನ್ನು ವೇಗವಾಗಿ ವಿಸ್ತರಿಸುತ್ತಿದೆ. ಅದು 5ಜಿ ಆಗಿರಲಿ ಅಥವಾ ಇಂಟರ್ನೆಟ್ ಆಫ್ ಥಿಂಗ್ಸ್ ಆಗಿರಲಿ ಅಥವಾ ಗ್ರಾಹಕರು ಮತ್ತು ಕೈಗಾರಿಕೆಗಳಿಗೆ ಎಐ ಆಗಿರಲಿ, ಸೃಷ್ಟಿಯಾಗುತ್ತಿರುವ ಪ್ರತಿಯೊಂದು ಹೊಸ ಅವಕಾಶವು ಭಾರತದಲ್ಲಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುತ್ತಿದೆ.

ಸ್ನೇಹಿತರೇ, 

ಈ ಎಲ್ಲಾ ಪ್ರಯತ್ನಗಳಿಂದಾಗಿ ಇಂದು 'ಮೇಕ್ ಇನ್ ಇಂಡಿಯಾ'ಕ್ಕೆ ಹೊಸ ಉತ್ತೇಜನ ದೊರೆಯುತ್ತಿದೆ. ಉತ್ಪಾದನಾ ಜಗತ್ತಿನಲ್ಲಿ ಭಾರತವು ವೇಗವಾಗಿ ವಿಸ್ತರಿಸುತ್ತಿದೆ. ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ ಯೋಜನೆ ಅಡಿಯಲ್ಲಿ, 2.5 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಪ್ರೋತ್ಸಾಹಕಗಳನ್ನು ಘೋಷಿಸಲಾಗಿದೆ. ಈ ಯೋಜನೆಯು ವಿಶ್ವದಾದ್ಯಂತದ ತಯಾರಕರಲ್ಲಿ ಜನಪ್ರಿಯವಾಗುತ್ತಿದೆ. ಈ ಯೋಜನೆಯಡಿ, ಇಲ್ಲಿಯವರೆಗೆ ವಿವಿಧ ವಲಯಗಳಲ್ಲಿ ಸುಮಾರು 4 ಲಕ್ಷ ಕೋಟಿ ರೂ.ಗಳ ಮೌಲ್ಯದ ಉತ್ಪನ್ನಗಳನ್ನು ಉತ್ಪಾದಿಸಲಾಗಿದೆ. ಈ ಯೋಜನೆಯಡಿ ಮಧ್ಯಪ್ರದೇಶದಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗಿದೆ. ಈ ಯೋಜನೆಯು ಮಧ್ಯಪ್ರದೇಶವನ್ನು ಪ್ರಮುಖ ಔಷಧ ತಾಣ ಮತ್ತು ಬೃಹತ್ ಜವಳಿ ಕೇಂದ್ರವನ್ನಾಗಿ ಮಾಡುವಲ್ಲಿಯೂ ಪ್ರಮುಖವಾಗಿದೆ. ಮಧ್ಯಪ್ರದೇಶಕ್ಕೆ ಬರುವ ಹೂಡಿಕೆದಾರರು ಪಿಎಲ್ಐ ಯೋಜನೆಯ ಗರಿಷ್ಠ ಲಾಭವನ್ನು ಪಡೆಯಬೇಕೆಂದು ನಾನು ಆಗ್ರಹಿಸುತ್ತೇನೆ. 

ಸ್ನೇಹಿತರೇ,

ನೀವೆಲ್ಲರೂ ಹಸಿರು ಇಂಧನಕ್ಕೆ ಸಂಬಂಧಿಸಿದ ಭಾರತದ ಆಕಾಂಕ್ಷೆಗಳೊಂದಿಗೆ ಸೇರಬೇಕು. ಕೆಲವು ದಿನಗಳ ಹಿಂದೆ, ನಾವು ಹಸಿರು ಜಲಜನಕ ಅಭಿಯಾನವನ್ನು ಅನುಮೋದಿಸಿದ್ದೇವೆ. ಇದು ಸುಮಾರು 8 ಲಕ್ಷ ಕೋಟಿ ರೂ.ಗಳ ಹೂಡಿಕೆಯ ಸಾಧ್ಯತೆಗಳನ್ನು ನೀಡುತ್ತಿದೆ. ಇದು ಭಾರತದ ಬೇಡಿಕೆ ಮಾತ್ರವಲ್ಲ, ಜಾಗತಿಕ ಬೇಡಿಕೆಯನ್ನು ಪೂರೈಸಲು ಒಂದು ಅವಕಾಶವಾಗಿದೆ. ಈ ಅಭಿಯಾನದ ಅಡಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಪ್ರೋತ್ಸಾಹ ಧನವನ್ನು ಒದಗಿಸಲಾಗಿದೆ. ಈ ಮಹತ್ವಾಕಾಂಕ್ಷೆಯ ಧ್ಯೇಯದಲ್ಲಿ ನಿಮ್ಮ ಪಾತ್ರವನ್ನು ನೀವು ಅನ್ವೇಷಿಸಬೇಕು.

ಸ್ನೇಹಿತರೇ,

ಅದು ಆರೋಗ್ಯವಾಗಿರಲಿ, ಕೃಷಿಯೇ ಆಗಿರಲಿ, ಪೌಷ್ಟಿಕತೆ, ಕೌಶಲ್ಯ ಅಥವಾ ನಾವೀನ್ಯತೆಯಾಗಿರಲಿ, ಭಾರತದ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಸಾಧ್ಯತೆಗಳು ನಿಮಗಾಗಿ ಕಾಯುತ್ತಿವೆ. ಭಾರತದೊಂದಿಗೆ ಹೊಸ ಜಾಗತಿಕ ಪೂರೈಕೆ ಸರಪಳಿಯನ್ನು ನಿರ್ಮಿಸುವ ಸಮಯ ಇದಾಗಿದೆ. ಆದ್ದರಿಂದ, ಮತ್ತೊಮ್ಮೆ ನಾನು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತೇನೆ. ಈ ಶೃಂಗಸಭೆಗೆ ನಾನು ನನ್ನ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ. ಮಧ್ಯಪ್ರದೇಶದ ಶಕ್ತಿ ಮತ್ತು ಮಧ್ಯಪ್ರದೇಶದ ಸಂಕಲ್ಪಗಳು ನಿಮ್ಮ ಪ್ರಗತಿಯಲ್ಲಿ ನಿಮ್ಮನ್ನು ಎರಡು ಹೆಜ್ಜೆ ಮುಂದೆ ಕರೆದೊಯ್ಯುತ್ತವೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ. ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು!

ಘೋಷಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

******



(Release ID: 1890397) Visitor Counter : 161