ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

​​​​​​​ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿ.ಎಂ.-ಜೆ.ಎ.ವೈ) ಯೋಜನೆಯಡಿ ನೋಂದಾಯಿತ ಆಸ್ಪತ್ರೆಗಳ ಕಾರ್ಯಕ್ಷಮತೆಯನ್ನು ಅಳೆದು ಸೂಕ್ತ ಸ್ಥಾನ ನೀಡಲು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್.ಹೆಚ್.ಎ) ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ


ರೋಗಿ-ಕೇಂದ್ರಿತ ಸೇವೆಗಳನ್ನು ಜನರಿಗೆ ತಲುಪಿಸುವತ್ತ ಗಮನ ಹರಿಸಲು ಆರೋಗ್ಯ ಆರೈಕೆ ಪೂರೈಕೆದಾರರನ್ನು ಉತ್ತೇಜಿಸುವುದು ಈ ಹೊಸ ವ್ಯವಸ್ಥೆಯ ಉದ್ದೇಶವಾಗಿದೆ

Posted On: 09 JAN 2023 1:37PM by PIB Bengaluru

ಆಸ್ಪತ್ರೆಗಳ ಕಾರ್ಯಕ್ಷಮತೆಯನ್ನು ಅಳೆಯುವ ಗಮನವನ್ನು ಒದಗಿಸಲಾದ ಸೇವೆಗಳ ಪ್ರಮಾಣದಿಂದ ಆರೋಗ್ಯ ಸೇವೆಗಳ ಮೌಲ್ಯಕ್ಕೆ ಬದಲಾಯಿಸುವ ಉದ್ದೇಶದಿಂದ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್.ಹೆಚ್.ಎ) ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ (ಎ.ಬಿ. ಪಿ.ಎಂ.-ಜೆ.ಎ.ವೈ.) ಅಡಿಯಲ್ಲಿ ಆಸ್ಪತ್ರೆಯ ಕಾರ್ಯಕ್ಷಮತೆಯನ್ನು ಅಳೆಯಲು ಮತ್ತು ಸೂಕ್ತ ಸ್ಥಾನ ನೀಡಲು ಹೊಸ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ.

ಸಾಂಪ್ರದಾಯಿಕವಾಗಿ ಪಾವತಿದಾರರ ದೃಷ್ಟಿಕೋನದಿಂದ, ಆರೋಗ್ಯ ಆರೈಕೆ ಮಾದರಿಯನ್ನು ವಿತರಿಸಲಾದ ಸೇವೆಗಳ ಪ್ರಮಾಣದ ಮೇಲೆ ಕೇಂದ್ರೀಕರಿಸಲಾಗಿದೆ. ಇದರಲ್ಲಿ ಒದಗಿಸಲಾದ ಸೇವೆಗಳ ಸಂಖ್ಯೆಯ ಆಧಾರದ ಮೇಲೆ ಕೇಸ್-ಆಧಾರಿತ ಬಂಡಲ್ಡ್ ಪಾವತಿಯನ್ನು ಮಾಡಲಾಗುತ್ತದೆ. ಹೊಸ ಉಪಕ್ರಮವು 'ಮೌಲ್ಯಾಧಾರಿತ ಆರೈಕೆ' ಪರಿಕಲ್ಪನೆಯನ್ನು ಪರಿಚಯಿಸುತ್ತದೆ. ಇದು ಪಾವತಿಯು ಫಲಿತಾಂಶ ಆಧಾರಿತವಾಗಿದ್ದು, ಪೂರೈಕೆದಾರರಿಗೆ ನೀಡಲಾದ ಚಿಕಿತ್ಸೆಯ ಗುಣಮಟ್ಟಕ್ಕೆ ಅನುಗುಣವಾಗಿ ಪ್ರತಿಫಲ ನೀಡಲಾಗುವುದು. ಹೊಸ ಮಾದರಿಯ ಅಡಿಯಲ್ಲಿ, ರೋಗಿಗಳಿಗೆ ಅವರ ಆರೋಗ್ಯವನ್ನು ಸುಧಾರಿಸಲು ನೆರವು ಒದಗಿಸಿದ್ದಕ್ಕಾಗಿ ಪೂರೈಕೆದಾರರಿಗೆ ಪ್ರತಿಫಲ ನೀಡಲಾಗುವುದು. ಇದು ದೀರ್ಘಾವಧಿಯಲ್ಲಿ ಜನರ ರೋಗದ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.

ಈ ಹಂತವು ಒಟ್ಟಾರೆ ಆರೋಗ್ಯ ಲಾಭಗಳಲ್ಲಿ ಗಮನಾರ್ಹ ಹೆಚ್ಚಳದ ಭರವಸೆ ನೀಡುತ್ತದೆ ಮತ್ತು ರೋಗಿಗಳಿಂದ ಆರೋಗ್ಯ ಆರೈಕೆ ಪೂರೈಕೆದಾರರವರೆಗೆ, ಪಾವತಿದಾರರಿಂದ ಪೂರೈಕೆದಾರರವರೆಗೆ ಸಂಬಂಧಿಸಿದ ಎಲ್ಲ ಪಾಲುದಾರರಿಗೆ ಸಮಾನ ಗೆಲುವಿನ ನಿರೀಕ್ಷೆಯನ್ನು ನೀಡುತ್ತದೆ. ರೋಗಿಗಳು ತಾವು ಪಡೆಯುವ ಸೇವೆಗಳಿಂದ ಉತ್ತಮ ಆರೋಗ್ಯ ಫಲಿತಾಂಶಗಳು ಮತ್ತು ಹೆಚ್ಚಿನ ತೃಪ್ತಿಯನ್ನು ಪಡೆಯುತ್ತಾರೆ, ಹಾಗೆಯೇ ಪೂರೈಕೆದಾರರು ಉತ್ತಮ ಆರೈಕೆ ದಕ್ಷತೆಯನ್ನು ಪಡೆಯುತ್ತಾರೆ. ಅಂತೆಯೇ, ಈ ವ್ಯವಸ್ಥೆಯು ಪಾವತಿದಾರರು ಮಾಡಿದ ವೆಚ್ಚದಿಂದ ಉತ್ಪತ್ತಿಯಾಗುವ ಆರೋಗ್ಯ ಪ್ರಯೋಜನಗಳನ್ನು ಗರಿಷ್ಠಗೊಳಿಸಲು ಸಾಧ್ಯವಾಗುತ್ತದೆ.

ಈ ಉಪಕ್ರಮದ ಬಗ್ಗೆ ಮಾತನಾಡಿದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್.ಎಸ್.ಶರ್ಮಾ, "ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಫಲಾನುಭವಿಗಳು ನಗದುರಹಿತ ಆರೋಗ್ಯ ಸೌಲಭ್ಯಗಳು ಮತ್ತು ಪ್ರತಿ ನೋಂದಾಯಿತ ಆಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಆರೈಕೆ ಎರಡನ್ನೂ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ವಿವಿಧ ಕ್ರಮಗಳನ್ನು ಜಾರಿಗೆ ತಂದಿದೆ. ಈ ಕ್ರಮಗಳಲ್ಲಿ ಯೋಜನೆಯ ಅಡಿಯಲ್ಲಿ ಚಿಕಿತ್ಸೆಯ ವೆಚ್ಚವನ್ನು ಪ್ರಮಾಣೀಕರಿಸುವುದು  ಹಾಗು ಹೊಸ ಮತ್ತು ಸುಧಾರಿತ ಚಿಕಿತ್ಸಾ ಕಾರ್ಯವಿಧಾನಗಳನ್ನು ಸೇರಿಸುವುದು ಸೇರಿವೆ. ಹೆಚ್ಚುವರಿಯಾಗಿ, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ರೋಗಿಗಳಿಗೆ ಗುಣಮಟ್ಟದ ಆರೈಕೆಯನ್ನು ಒದಗಿಸುವ ಅತ್ಯುತ್ತಮ ಕಾರ್ಯನಿರ್ವಹಣೆಯ ಆಸ್ಪತ್ರೆಗಳನ್ನು ಉತ್ತೇಜಿಸಲು ಅವಕಾಶ ಕಲ್ಪಿಸಿದೆ." ಎಂದು ತಿಳಿಸಿದ್ದಾರೆ.

ಮೌಲ್ಯಾಧಾರಿತ ಆರೋಗ್ಯ ವ್ಯವಸ್ಥೆಯಲ್ಲಿ, ಪಾವತಿದಾರರು ಬಲವಾದ ವೆಚ್ಚ ನಿಯಂತ್ರಣ ಶಕ್ತಿಯನ್ನು ಚಲಾಯಿಸಬಹುದು. ಕಡಿಮೆ ಕ್ಲೇಮುಗಳನ್ನು ಹೊಂದಿರುವ ಆರೋಗ್ಯಕರ ಜನಸಂಖ್ಯೆಯು ಪಾವತಿದಾರರ ಪ್ರೀಮಿಯಂ ಪೂಲ್ ಗಳು ಮತ್ತು ಹೂಡಿಕೆಗಳ ಮೇಲೆ ಕಡಿಮೆ ವೆಚ್ಚವನ್ನು ಸೂಚಿಸುತ್ತದೆ. ಪೂರೈಕೆದಾರರು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಸಕಾರಾತ್ಮಕ ರೋಗಿಯ ಫಲಿತಾಂಶಗಳೊಂದಿಗೆ ಮತ್ತು ಕಡಿಮೆ ವೆಚ್ಚದೊಂದಿಗೆ ಹೊಂದಿಸಲು ಸಾಧ್ಯವಾಗುವುದರಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ. ಒಟ್ಟಾರೆಯಾಗಿ, ಮೌಲ್ಯಾಧಾರಿತ ಆರೈಕೆಯು ರೋಗಿ-ಕೇಂದ್ರಿತ ಸೇವೆಗಳನ್ನು ಒದಗಿಸುವಲ್ಲಿ ಹೆಚ್ಚು ಗಮನ ಹರಿಸಲು ಆರೋಗ್ಯ ಆರೈಕೆ ಪೂರೈಕೆದಾರರನ್ನು ಉತ್ತೇಜಿಸುವ ಮೂಲಕ ಭಾರತದಲ್ಲಿ ಆರೋಗ್ಯ ರಕ್ಷಣಾ ಭೂದೃಶ್ಯವನ್ನು ಗಮನಾರ್ಹವಾಗಿ ಸುಧಾರಿಸುವ ಭರವಸೆ ನೀಡುತ್ತದೆ.

ಮೌಲ್ಯಾಧಾರಿತ ಆರೈಕೆಯ ಅಡಿಯಲ್ಲಿ, ಆಯುಷ್ಮಾನ್ ಭಾರತ್ - ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ನೋಂದಾಯಿತ ಆಸ್ಪತ್ರೆಗಳ ಕಾರ್ಯಕ್ಷಮತೆಯನ್ನು ಐದು ಕಾರ್ಯಕ್ಷಮತೆಯ ಸೂಚಕಗಳ ಆಧಾರದ ಮೇಲೆ ಅಳೆಯಲಾಗುತ್ತದೆ. ಅವುಗಳೆಂದರೆ, 1. ಫಲಾನುಭವಿಗಳ ತೃಪ್ತಿ; 2. ಆಸ್ಪತ್ರೆ ಮರುಸೇರ್ಪಡೆಯ ದರ; 3. ತಮ್ಮ ಜೇಬಿನಿಂದ ಖರ್ಚಾಗುವ ವೆಚ್ಚದ ವ್ಯಾಪ್ತಿ; 4. ದೃಢಪಡಿಸಿದ ಕುಂದುಕೊರತೆಗಳು ಮತ್ತು 5. ರೋಗಿಯ ಆರೋಗ್ಯ-ಸಂಬಂಧಿತ ಜೀವನ ಗುಣಮಟ್ಟದಲ್ಲಿ ಸುಧಾರಣೆ.

ಮೇಲಿನ ಸೂಚಕಗಳ ಆಧಾರದ ಮೇಲೆ ಆಸ್ಪತ್ರೆಗಳ ಕಾರ್ಯಕ್ಷಮತೆಯನ್ನು ಸಾರ್ವಜನಿಕ ಡ್ಯಾಶ್ ಬೋರ್ಡ್ ನಲ್ಲಿ ಲಭ್ಯವಾಗುವಂತೆ ಮಾಡಲಾಗುವುದು. ಇದು ಫಲಾನುಭವಿಗಳಿಗೆ ಮಾಹಿತಿಯುಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಈ ರೀತಿಯಾಗಿ, ಆಸ್ಪತ್ರೆಯ ಕಾರ್ಯಕ್ಷಮತೆಯು ಆಸ್ಪತ್ರೆಯ ಆರ್ಥಿಕ ಪ್ರೋತ್ಸಾಹವನ್ನು ನಿರ್ಧರಿಸುವುದಲ್ಲದೆ, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಗುಣಮಟ್ಟದ ಚಿಕಿತ್ಸೆಯ ಬೇಡಿಕೆಯನ್ನು ಸೃಷ್ಟಿಸುತ್ತದೆ.

ಒಟ್ಟಾರೆಯಾಗಿ ಕಾರ್ಯಕ್ಷಮತೆಯ ಮೌಲ್ಯಮಾಪನ ಮತ್ತು ಮೌಲ್ಯಾಧಾರಿತ ಪ್ರೋತ್ಸಾಹಕಗಳ ಈ ಮಧ್ಯಸ್ಥಿಕೆಗಳು, ಆರೋಗ್ಯ ತಂತ್ರಜ್ಞಾನ ಮೌಲ್ಯಮಾಪನದ ಬಳಕೆ ಮತ್ತು ಆರೈಕೆಯ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಲು ಡಿಜಿಟಲ್ ಸಾಧನಗಳ ಬಳಕೆ ಆಯುಷ್ಮಾನ್ ಭಾರತ್ - ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಮತ್ತು ಭಾರತೀಯ ಆರೋಗ್ಯ ವ್ಯವಸ್ಥೆಯನ್ನು ಪರಿಮಾಣ ಆಧಾರಿತ ಆರೋಗ್ಯ ರಕ್ಷಣಾ ವಿತರಣಾ ವ್ಯವಸ್ಥೆಯಿಂದ ಮೌಲ್ಯಾಧಾರಿತ ಆರೋಗ್ಯ ರಕ್ಷಣಾ ವಿತರಣಾ ವ್ಯವಸ್ಥೆಗೆ ಪರಿವರ್ತಿಸುತ್ತದೆ.

****

 



(Release ID: 1889820) Visitor Counter : 177