ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ನಿರುದ್ಯೋಗ ಪ್ರಮಾಣದ ಸುದ್ದಿಯ ನಿರಾಕರಣೆ


ಖಾಸಗಿ ಸಂಸ್ಥೆಗಳು ನಡೆಸುವ ಸಮೀಕ್ಷೆಗಳು ಸಾಮಾನ್ಯವಾಗಿ ಅವೈಜ್ಞಾನಿಕವಾಗಿದ್ದು, ಅಂತಾರಾಷ್ಟ್ರೀಯ ಸ್ವೀಕೃತ ಮಾನದಂಡಗಳನ್ನು ಆಧರಿಸಿರುವುದಿಲ್ಲ

ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಬಿಡುಗಡೆ ಮಾಡಿರುವ "ಉದ್ಯೋಗ-ನಿರುದ್ಯೋಗ"ದ ಬಗ್ಗೆ ಅಧಿಕೃತ ಅಂಕಿಅಂಶಗಳು ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (PLFS) ಆಧಾರದ ಮೇಲಿದೆ.

ದೇಶದ ಔದ್ಯೋಗಿಕ ಮಾರುಕಟ್ಟೆಯು ಕೋವಿಡ್ -19 ಸಾಂಕ್ರಾಮಿಕದ ಆಘಾತದಿಂದ ಚೇತರಿಸಿಕೊಂಡಿರುವುದು ಮಾತ್ರವಲ್ಲದೆ, ಕೋವಿಡ್ ಪೂರ್ವ ಮಟ್ಟದಿಂದಲೂ ಹೆಚ್ಚಿದೆ ಎಂದು PLFS ಹೇಳುತ್ತದೆ.

Posted On: 04 JAN 2023 4:57PM by PIB Bengaluru

ದೇಶದಲ್ಲಿ ನಿರುದ್ಯೋಗ ಪ್ರಮಾಣದ ಅಗಾಧವಾಗಿದೆ ಎಂದು 2022ರ ಡಿಸೆಂಬರ್ ತಿಂಗಳಲ್ಲಿ ಮಾಧ್ಯಮದ ಕೆಲವು ವಿಭಾಗಗಳಲ್ಲಿ ಸುದ್ದಿ ಪ್ರಕಟವಾಗಿದ್ದು, ಖಾಸಗಿ ಕಂಪೆನಿ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಈ ವರದಿಯನ್ನು ನೀಡಲಾಗಿದೆ. ಅನೇಕ ಖಾಸಗಿ ಕಂಪನಿಗಳು ಅಥವಾ ಸಂಸ್ಥೆಗಳು ತಮ್ಮ ಸ್ವಂತ ವಿಧಾನಗಳ ಆಧಾರದ ಮೇಲೆ ಸಮೀಕ್ಷೆಗಳನ್ನು ನಡೆಸುತ್ತವೆ. ಅವುಗಳು ಸಾಮಾನ್ಯವಾಗಿ ವೈಜ್ಞಾನಿಕವಾಗಿರುವುದಿಲ್ಲ ಮತ್ತು ಅಂತಾರಾಷ್ಟ್ರೀಯವಾಗಿ ಸ್ವೀಕಾರಾರ್ಹ ಮಾನದಂಡಗಳನ್ನು ಆಧರಿಸಿರುವುದಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ಇದಲ್ಲದೆ, ಈ ಕಂಪನಿಗಳು ಅಥವಾ ಸಂಸ್ಥೆಗಳು ಬಳಸುವ ವಿಧಾನಗಳು ಸಾಮಾನ್ಯವಾಗಿ ನಿರುದ್ಯೋಗವನ್ನು ಅತಿಯಾಗಿ ತೋರಿಸುವ ವರದಿ ಮಾಡುವ ಕಡೆಗೆ ಪಕ್ಷಪಾತವನ್ನು ಹೊಂದಿರುತ್ತವೆ ಅಥವಾ ಉದ್ಯೋಗ/ನಿರುದ್ಯೋಗ ಕುರಿತ ಅಂಕಿಅಂಶವನ್ನು ಸಂಗ್ರಹಿಸಲು ತಮ್ಮದೇ ಆದ ಮಾದರಿ ವಿಧಾನ ಮತ್ತು ವ್ಯಾಖ್ಯಾನಗಳಿಂದಾಗಿ ಉದ್ಯೋಗ ಪ್ರಮಾಣವನ್ನು ಕಡಿಮೆ ವರದಿ ಮಾಡುತ್ತವೆ. ಅಂತಹ ಸಮೀಕ್ಷೆಗಳ ಫಲಿತಾಂಶಗಳನ್ನು ನಾವು ಎಚ್ಚರಿಕೆಯಿಂದ ಬಳಸಬೇಕು.

"ಉದ್ಯೋಗ-ನಿರುದ್ಯೋಗ" ದ ಬಗ್ಗೆ ಅಧಿಕೃತ ಅಂಕಿಅಂಶಗಳು ಆವರ್ತಕ ಕಾರ್ಮಿಕ ಬಲ ಸಮೀಕ್ಷೆ (PLFS) ಆಧಾರದ ಮೇಲೆ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಬಿಡುಗಡೆ ಮಾಡಿದೆ. ಇತ್ತೀಚಿನ ವಾರ್ಷಿಕ ಪಿಎಲ್ ಎಫ್ ಎಸ್ -PLFS ವರದಿಯು ಭಾರತ ಮಟ್ಟದಲ್ಲಿ ಜುಲೈ 2020 ರಿಂದ ಜೂನ್ 2021 ರವರೆಗಿನ ಅವಧಿಯ ಸಮೀಕ್ಷೆಯಾಗಿದೆ. ತ್ರೈಮಾಸಿಕ PLFS ವರದಿಯನ್ನು ನಗರ ಪ್ರದೇಶಗಳಿಗೆ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಬಿಡುಗಡೆ ಮಾಡಿದೆ. ತ್ರೈಮಾಸಿಕ ವರದಿಗಳು 2022ರ ಜುಲೈಯಿಂದ ಸೆಪ್ಟೆಂಬರ್ ವರೆಗೆ ಲಭ್ಯವಿರುತ್ತವೆ.

ಲಭ್ಯವಿರುವ PLFS ವರದಿಯ ಪ್ರಕಾರ, 2022ರ ಜುಲೈಯಿಂದ ಸೆಪ್ಟೆಂಬರ್ ವರೆಗೆ ಕೆಲಸಗಾರ ಜನಸಂಖ್ಯೆಯ ಅನುಪಾತವು ಅಂದರೆ 15 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವ್ಯಕ್ತಿಗೆ ಉದ್ಯೋಗವು ಶೇಕಡಾ 44.5ರ ಮಟ್ಟದಲ್ಲಿದೆ. ಇದು 2019 ರ ಅದೇ ತ್ರೈಮಾಸಿಕದಲ್ಲಿ ಶೇಕಡಾ 43.4ರಷ್ಟಾಗಿತ್ತು. 2022ರ ಜುಲೈ-ಸೆಪ್ಟೆಂಬರ್ ನಲ್ಲಿ ನಿರುದ್ಯೋಗ ಸಮಸ್ಯೆ ಶೇಕಡಾ 7.2ರಷ್ಟಿದ್ದರೆ, 2019ರ ಜುಲೈ-ಸೆಪ್ಟೆಂಬರ್ ನಲ್ಲಿ ಶೇಕಡಾ 8.3ರಷ್ಟಾಗಿತ್ತು. ಹೀಗಾಗಿ, ದೇಶದ ಉದ್ಯೋಗ ಮಾರುಕಟ್ಟೆಯು ಕೋವಿಡ್ -19 ಸಾಂಕ್ರಾಮಿಕದ ಆರ್ಥಿಕ ಹೊಡೆತದಿಂದ ಚೇತರಿಸಿಕೊಂಡಿರುವುದು ಮಾತ್ರವಲ್ಲದೆ ಕೋವಿಡ್ ಪೂರ್ವ ಮಟ್ಟಕ್ಕಿಂತ ಹೆಚ್ಚಿನ ಮಟ್ಟದಲ್ಲಿದೆ.

****



(Release ID: 1888699) Visitor Counter : 165