ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ನಾಳೆ 108ನೇ ʻಭಾರತೀಯ ವಿಜ್ಞಾನ ಕಾಂಗ್ರೆಸ್ʼ ಉದ್ಘಾಟಿಸಲಿರುವ ಪ್ರಧಾನಿ


ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಮತ್ತು ಜಿತೇಂದ್ರ ಸಿಂಗ್ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿರುವರು.

ಸಮಾಜಕ್ಕೆ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಮಹತ್ವದ ಕೊಡುಗೆಗಳನ್ನು ಪ್ರದರ್ಶಿಸಲು "ಪ್ರೈಡ್ ಆಫ್ ಇಂಡಿಯಾ" ಎಂಬ ಬೃಹತ್‌ ಪ್ರದರ್ಶನವು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದೆ

Posted On: 02 JAN 2023 9:09AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 3ರಂದು 108ನೇ ʻಭಾರತೀಯ ವಿಜ್ಞಾನ ಕಾಂಗ್ರೆಸ್‌ʼ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಲಿದ್ದು, ಸಂಪೂರ್ಣ ಉದ್ಘಾಟನಾ ಸಮಾವೇಶಕ್ಕೆ ಸಾಕ್ಷಿಯಾಗಲಿದ್ದಾರೆ. ಉದ್ಘಾಟನಾ ಸಮಾರಂಭವು ಬೆಳಿಗ್ಗೆ 9.30ಕ್ಕೆ ಪ್ರಾರಂಭವಾಗಲಿದೆ. ರಾಷ್ಟ್ರಸಂತ ತುಕಡೋಜಿ ಮಹಾರಾಜ್ ನಾಗ್ಪುರ ವಿಶ್ವವಿದ್ಯಾಲಯ (ಆರ್‌.ಟಿ.ಎಂ.ಎನ್‌.ಯೂ) ತನ್ನ ಅಮರಾವತಿ ರಸ್ತೆ ಕ್ಯಾಂಪಸ್‌ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದೆ.

ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿರುವ ಪ್ರಮುಖ ಗಣ್ಯರಲ್ಲಿ ಮಹಾರಾಷ್ಟ್ರದ ರಾಜ್ಯಪಾಲರು ಮತ್ತು ಮಹಾರಾಷ್ಟ್ರ ಸಾರ್ವಜನಿಕ ವಿಶ್ವವಿದ್ಯಾಲಯಗಳ ಕುಲಪತಿ ಶ್ರೀ ಭಗತ್ ಸಿಂಗ್ ಕೋಶ್ಯಾರಿ, ಕೇಂದ್ರ ಸಚಿವ ಮತ್ತು ಆರ್.ಟಿ.ಎಂ.ಎನ್.ಯು ಶತಮಾನೋತ್ಸವ ಆಚರಣೆಯ ಸಲಹಾ ಸಮಿತಿಯ ಅಧ್ಯಕ್ಷರಾದ ಶ್ರೀ ನಿತಿನ್ ಗಡ್ಕರಿ, ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಖಾತೆ ಸಹಾಯಕ ಸಚಿವ (ಸ್ವತಂತ್ರ ನಿರ್ವಹಣೆ) ಡಾ. ಜಿತೇಂದ್ರ ಸಿಂಗ್, ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ ಮತ್ತು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್ ಅವರು ಸೇರಿದ್ದಾರೆ.  

ರಾಷ್ಟ್ರಸಂತ ತುಕಡೋಜಿ ಮಹಾರಾಜ್ ನಾಗ್ಪುರ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಸುಭಾಷ್ ಆರ್. ಚೌಧರಿ ಮತ್ತು ಕೋಲ್ಕತಾದ ʻಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್ʼ(ಐಎಸ್‌ಸಿಎ) ಮಹಾಧ್ಯಕ್ಷದ ಅಧ್ಯಕ್ಷರಾದ ಡಾ. (ಶ್ರೀಮತಿ) ವಿಜಯ್ ಲಕ್ಷ್ಮಿ ಸಕ್ಸೇನಾ ಅವರು ಪ್ರಮುಖವಾಗಿ ಉಪಸ್ಥಿತರಿರುವರು.

"ಮಹಿಳಾ ಸಬಲೀಕರಣದೊಂದಿಗೆ ಸುಸ್ಥಿರ ಅಭಿವೃದ್ಧಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ" ಎಂಬುದು ಈ ವರ್ಷದ ಕಾರ್ಯಕ್ರಮದ ಧ್ಯೇಯವಾಕ್ಯವಾಗಿದೆ. ಸಾರ್ವಜನಿಕ ಭಾಷಣಗಳು ಮತ್ತು ಪ್ರದರ್ಶನಗಳು ಜನಸಾಮಾನ್ಯರಿಗೆ ಮುಕ್ತವಾಗಿವೆ.

108ನೇ ʻಭಾರತೀಯ ವಿಜ್ಞಾನ ಕಾಂಗ್ರೆಸ್ʼನ ತಾಂತ್ರಿಕ ಗೋಷ್ಠಿಗಳನ್ನು 14 ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರ ಭಾಗವಾಗಿ ವಿಶ್ವವಿದ್ಯಾಲಯದ ʻಮಹಾತ್ಮ ಜೋತಿಬಾ ಫುಲೆ ಶೈಕ್ಷಣಿಕ ಕ್ಯಾಂಪಸ್ʼನ ವಿವಿಧ ಸ್ಥಳಗಳಲ್ಲಿ ಸಮಾನಾಂತರವಾಗಿ ಗೋಷ್ಠಿಗಳನ್ನು ನಡೆಸಲಾಗುವುದು.

ಈ 14 ವಿಭಾಗಗಳನ್ನು ಹೊರತುಪಡಿಸಿ, ʻಮಹಿಳಾ ವಿಜ್ಞಾನ ಕಾಂಗ್ರೆಸ್ʼ, ʻರೈತರ ವಿಜ್ಞಾನ ಕಾಂಗ್ರೆಸ್ʼ, ʻಮಕ್ಕಳ ವಿಜ್ಞಾನ ಕಾಂಗ್ರೆಸ್ʼ, ʻಬುಡಕಟ್ಟು ಸಮಾವೇಶʼ, ʻವಿಜ್ಞಾನ ಮತ್ತು ಸಮಾಜʼದ ಬಗ್ಗೆ ಒಂದು ವಿಭಾಗ ಹಾಗೂ ʻವಿಜ್ಞಾನ ಸಂವಹನಕಾರರ ಕಾಂಗ್ರೆಸ್ʼ ಇರಲಿದೆ.

ನೊಬೆಲ್ ಪ್ರಶಸ್ತಿ ಪುರಸ್ಕೃತರು, ಪ್ರಮುಖ ಭಾರತೀಯ ಮತ್ತು ವಿದೇಶಿ ಸಂಶೋಧಕರು; ಬಾಹ್ಯಾಕಾಶ, ರಕ್ಷಣೆ, ಮಾಹಿತಿ ತಂತ್ರಜ್ಞಾನ ಮತ್ತು ವೈದ್ಯಕೀಯ ಸಂಶೋಧನೆ ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರು ಮತ್ತು ತಂತ್ರಜ್ಞರು ಈ ಸರ್ವಸದಸ್ಯ ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ. ʻಕೃಷಿ ಮತ್ತು ಅರಣ್ಯ ವಿಜ್ಞಾನʼ, ʻಪ್ರಾಣಿ, ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನʼ, ʻಮಾನವಶಾಸ್ತ್ರೀಯ ಮತ್ತು ನಡವಳಿಕೆಯ ವಿಜ್ಞಾನʼ, ʻರಾಸಾಯನಿಕ ವಿಜ್ಞಾನʼ, ʻಭೂ ವ್ಯವಸ್ಥೆ ವಿಜ್ಞಾನʼ, ʻಎಂಜಿನಿಯರಿಂಗ್ ವಿಜ್ಞಾನʼ, ʻಪರಿಸರ ವಿಜ್ಞಾನʼ, ʻಮಾಹಿತಿ ಮತ್ತು ಸಂವಹನ ವಿಜ್ಞಾನ ಹಾಗೂ ತಂತ್ರಜ್ಞಾನʼ, ʻಮೂಲದ್ರವ್ಯ ವಿಜ್ಞಾನʼ, ʻಗಣಿತ ವಿಜ್ಞಾನʼ, ʻವೈದ್ಯಕೀಯ ವಿಜ್ಞಾನʼ, ʻಹೊಸ ಜೀವಶಾಸ್ತ್ರʼ, ʻಭೌತಿಕ ವಿಜ್ಞಾನʼ ಮತ್ತು ʻಸಸ್ಯ ವಿಜ್ಞಾನʼದಲ್ಲಿ ಕ್ರಾಂತಿಕಾರಿ ಹಾಗೂ ಅನ್ವಯಿಕ ಸಂಶೋಧನೆಯನ್ನು ತಾಂತ್ರಿಕ ಗೋಷ್ಠಿಗಳಲ್ಲಿ ಪ್ರದರ್ಶಿಸಲಾಗುವುದು. 

"ಪ್ರೈಡ್ ಆಫ್ ಇಂಡಿಯಾ" ಎಂಬ ಬೃಹತ್‌ ಪ್ರದರ್ಶನವು ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದೆ. ಈ ಪ್ರದರ್ಶನದಲ್ಲಿ ಪ್ರಮುಖ ಬೆಳವಣಿಗೆಗಳು, ಪ್ರಮುಖ ಸಾಧನೆಗಳು ಮತ್ತು ಸಮಾಜಕ್ಕೆ ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಮುಖ ಕೊಡುಗೆಗಳನ್ನು ಅನಾವರಣಗೊಳಿಸಲಾಗುವುದು. ಈ ಪ್ರದರ್ಶನವು ವೈಜ್ಞಾನಿಕ ಪ್ರಪಂಚದ ಸಂಪೂರ್ಣ ಚಿತ್ರಣವನ್ನು ಒಳಗೊಂಡಿರುವ ನೂರಾರು ಹೊಸ ಆಲೋಚನೆಗಳು, ಆವಿಷ್ಕಾರಗಳು ಮತ್ತು ಉತ್ಪನ್ನಗಳನ್ನು ಒಟ್ಟುಗೂಡಿಸುತ್ತದೆ. ದೇಶಾದ್ಯಂತದ ಸರಕಾರ, ಕಾರ್ಪೊರೇಟ್ ಸಂಸ್ಥೆಗಳು, ಸಾರ್ವಜನಿಕ ವಲಯದ ಉದ್ಯಮಗಳು(ಪಿ.ಎಸ್‌.ಯು), ಶೈಕ್ಷಣಿಕ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ (ಆರ್‌&ಡಿ) ಸಂಸ್ಥೆಗಳು, ಅನ್ವೇಷಕರು ಮತ್ತು ಉದ್ಯಮಿಗಳ ಸಾಮರ್ಥ್ಯ ಹಾಗೂ ಸಾಧನೆಗಳ ಪ್ರದರ್ಶನವನ್ನು ʻಪ್ರೈಡ್ ಆಫ್ ಇಂಡಿಯಾʼ ಒಳಗೊಂಡಿರಲಿದೆ. 

ಈ ಕಾರ್ಯಕ್ರಮದ ಪೂರ್ವಭಾವಿಯಾಗಿ, ʻಭಾರತೀಯ ವಿಜ್ಞಾನ ಕಾಂಗ್ರೆಸ್ʼನ ಸಂಪ್ರದಾಯದಂತೆ ʻವಿಜ್ಞಾನ್ ಜ್ಯೋತಿʼ ಕಾರ್ಯಕ್ರಮವು ಇಂದು ನಡೆಯಿತು. 400ಕ್ಕೂ ಹೆಚ್ಚು ಶಾಲಾ ಕಾಲೇಜು ವಿದ್ಯಾರ್ಥಿಗಳು ʻಝೀರೋ ಮೈಲ್ ಸ್ಟೋನ್ʼನಲ್ಲಿ ಸೇರಿದ್ದರು. ವಿಶೇಷ ಟೋಪಿಗಳು ಮತ್ತು ಟಿ-ಶರ್ಟ್‌ಗಳನ್ನು ಧರಿಸಿ, ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಮೆರವಣಿಗೆ ಮೂಲಕ ತೆರಳಿದರು. ತಮ್ಮ ಜೀವನದಲ್ಲಿ ವೈಜ್ಞಾನಿಕ ಚಿಂತನೆಯನ್ನು ಅಳವಡಿಸಿಕೊಳ್ಳುವ ಪ್ರತಿಜ್ಞೆಯನ್ನು ಅವರು ಕೈಗೊಂಡರು. ʻಐಎಸ್‌ಸಿಎʼ ಪ್ರಧಾನ ಅಧ್ಯಕ್ಷರಾದ ಡಾ. (ಶ್ರೀಮತಿ) ವಿಜಯ್ ಲಕ್ಷ್ಮಿ ಸಕ್ಸೇನಾ ಅವರು “ವಿಜ್ಞಾನವನ್ನು ವಿದ್ಯಾರ್ಥಿಗಳು ಕೇವಲ ಒಂದು ವಿಷಯವಾಗಿ ಅಧ್ಯಯನ ಮಾಡಬಾರದು, ತಾವು ಮಾಡುವ ಯಾವುದೇ ಕೆಲಸದಲ್ಲಿ ಅದನ್ನು ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳಬೇಕು,ʼʼ ಎಂದು ಒತ್ತಾಯಿಸಿದರು.

ಜ್ಞಾನದ ಜ್ಯೋತಿಯಾದ - ʻವಿಜ್ಞಾನ್ ಜ್ಯೋತಿʼಯನ್ನು ಒಲಿಂಪಿಕ್ ಜ್ಯೋತಿಯ ಮಾದರಿಯಲ್ಲಿ ರೂಪಿಸಲಾಗಿದೆ. ಇದು ಸಮಾಜದಲ್ಲಿ, ವಿಶೇಷವಾಗಿ ಯುವಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಸಮರ್ಪಿತವಾದ ಆಂದೋಲನವಾಗಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಈ ಜ್ಯೋತಿಯನ್ನು ಸ್ಥಾಪಿಸಲಾಗಿದ್ದು, 108ನೇ ʻಭಾರತೀಯ ವಿಜ್ಞಾನ ಕಾಂಗ್ರೆಸ್ʼ ಸಮಾಪ್ತಿಯವರೆಗೂ ಅದು ಉರಿಯುತ್ತಲೇ ಇರುತ್ತದೆ.

*****



(Release ID: 1888040) Visitor Counter : 207