ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಉತ್ತರ ಪ್ರದೇಶ ಮತ್ತು ಛತ್ತೀಸ್ ಗಢ ರಾಜ್ಯಗಳಿಗಾಗಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಕೇಂದ್ರ ಕ್ಷಯರೋಗ ವಿಭಾಗದ ನಡುವಿನ ಐತಿಹಾಸಿಕ ತಿಳುವಳಿಕಾ ಒಡಂಬಡಿಕೆಯನ್ನು ಶ್ಲಾಘಿಸಿದ ಡಾ. ಮನ್ಸುಖ್ ಮಾಂಡವೀಯ ಮತ್ತು ಶ್ರೀ ಹರ್ದೀಪ್ ಸಿಂಗ್ ಪುರಿಯವರು


ಈ ತಿಳುವಳಿಕಾ ಒಡಂಬಡಿಕೆಯು 2025ರ ವೇಳೆಗೆ ಭಾರತದಲ್ಲಿ ಕ್ಷಯರೋಗವನ್ನು ಕೊನೆಗಾಣಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯನ್ನು ಬಲಪಡಿಸಲಿದೆ ಎಂದು ಹೇಳಿದ ಡಾ. ಮಾಂಡವೀಯರವರು

ಈ ಮೈಲಿಗಲ್ಲಿನ ತಿಳುವಳಿಕಾ ಒಡಂಬಡಿಕೆಯು ಭಾರತದಲ್ಲಿ ಸದೃಢ ಆರೋಗ್ಯ ವ್ಯವಸ್ಥೆಯನ್ನು ಹೆಚ್ಚಿಸುವ ಪ್ರಧಾನ ಮಂತ್ರಿಯವರ ದೃಷ್ಟಿಕೋನದೊಂದಿಗೆ ಹೊಂದಿಕೊಳ್ಳುವ ಭಾರತೀಯ ಇಂಧನ ವಲಯದ ಸಂಕಲ್ಪದ ದೃಢೀಕರಣವಾಗಿದೆ ಎಂದು ಹೇಳಿದ ಶ್ರೀ ಹರ್ದೀಪ್ ಸಿಂಗ್ ಪುರಿಯವರು

ಇಂಡಿಯನ್ ಆಯಿಲ್ ಉತ್ತರ ಪ್ರದೇಶದ ಎಲ್ಲಾ 75 ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣ ಶೋಧನಾ ಅಭಿಯಾನದಲ್ಲಿ ರಾಜ್ಯದ ಪ್ರಯತ್ನಗಳಿಗೆ ಪೂರಕವಾಗಿದೆ, ಇದು ಮೂರು ವರ್ಷಗಳವರೆಗೆ ವರ್ಷಕ್ಕೆ ಒಮ್ಮೆ ತನ್ನ ಜನಸಂಖ್ಯೆಯ ಸುಮಾರು ಶೇಕಡಾ 10ರಷ್ಟು ಜನಸಂಖ್ಯೆಯನ್ನು ಪರೀಕ್ಷಿಸಲಿದೆ

ಇಂಡಿಯನ್ ಆಯಿಲ್ ಉತ್ತರ ಪ್ರದೇಶದ ಎಲ್ಲಾ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಛತ್ತೀಸ್ ಗಢದ ದೂರದ ಬುಡಕಟ್ಟು ಪ್ರದೇಶಗಳಲ್ಲಿ ಕಡಿಮೆ ವೆಚ್ಚದ ಅತ್ಯಾಧುನಿಕ ರೋಗನಿರ್ಣಯ ತಂತ್ರಜ್ಞಾನವನ್ನು ಪರಿಚಯಿಸಲಿದೆ

2022ರಲ್ಲಿ ಭಾರತದಲ್ಲಿ ಕ್ಷಯರೋಗ ಪ್ರಕರಣಗಳಲ್ಲಿ ಶೇಕಡಾ 18ರಷ್ಟು ಕಡಿತ

Posted On: 28 DEC 2022 3:08PM by PIB Bengaluru

ಕ್ಷಯರೋಗದ ಪಿಡುಗನ್ನು ಎದುರಿಸಲು ಭಾರತದ ಬದ್ಧತೆಯನ್ನು ಒತ್ತಿಹೇಳುವ ಐತಿಹಾಸಿಕ ಮೈಲಿಗಲ್ಲೊಂದರಲ್ಲಿ, ಇಂಡಿಯನ್ ಆಯಿಲ್ (ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್) ತನ್ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯ (ಸಿ.ಎಸ್.ಆರ್.) ಭಾಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಬರುವ ಕೇಂದ್ರೀಯ ಕ್ಷಯರೋಗ ವಿಭಾಗ (ಸಿ.ಟಿ.ಡಿ.) ಮತ್ತು ಉತ್ತರ ಪ್ರದೇಶ ಮತ್ತು ಛತ್ತೀಸ್ ಗಢ ರಾಜ್ಯಗಳೊಂದಿಗೆ ತೀವ್ರತರವಾದ ಕ್ಷಯರೋಗ ನಿರ್ಮೂಲನಾ ಯೋಜನೆಯನ್ನು ಕೈಗೊಳ್ಳುವ ತಿಳುವಳಿಕಾ ಒಡಂಬಡಿಕೆಗೆ (ಎಂ.ಓ.ಯು.) ಸಹಿ ಹಾಕಿದೆ. ಈ ತಿಳುವಳಿಕಾ ಒಡಂಬಡಿಕೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯಾ ಮತ್ತು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿಯವರ ಉಪಸ್ಥಿತಿಯಲ್ಲಿ ಅಂಕಿತ ಹಾಕಲಾಯಿತು.

ಭಾರತದ ದೊಡ್ಡ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ಕ್ಷಯರೋಗ ಪ್ರಕರಣಗಳು ಅತ್ಯಧಿಕವಾಗಿ ವರದಿಯಾಗಿವೆ.

ಕ್ಷಯರೋಗದ ಎಲ್ಲಾ ಅಂಶಗಳನ್ನು ಅದರ ವಿವಿಧ ಹಂತಗಳಲ್ಲಿ ಪರಿಹರಿಸುವ ಬಹು-ಆಯಾಮದ ವಿಧಾನದೊಂದಿಗೆ, ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ, ಈ ಮಹತ್ವಾಕಾಂಕ್ಷೆಯ ಕ್ಷಯರೋಗ-ವಿರೋಧಿ ಅಭಿಯಾನವು ಮನೆ ಬಾಗಿಲಿಗೆ ಹೆಚ್ಚಿನ-ಸಂವೇದನಾಶೀಲ ರೋಗನಿರ್ಣಯ ಪರೀಕ್ಷೆಗಳನ್ನು ಬಳಸಿಕೊಂಡು ಕ್ಷಯರೋಗವನ್ನು ಮುಂಚಿತವಾಗಿ ಗುರುತಿಸುವುದು ಮತ್ತು ತ್ವರಿತ ರೋಗನಿರ್ಣಯವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಈ ಅಭಿಯಾನವು ಉತ್ತರ ಪ್ರದೇಶ ಮತ್ತು ಛತ್ತೀಸ್ ಗಢದ ಜನರಿಗೆ ಉಚಿತವಾಗಿ ಉನ್ನತ ಗುಣಮಟ್ಟದ ಕ್ಷಯರೋಗ ಚಿಕಿತ್ಸೆ, ಆರೈಕೆ ಮತ್ತು ಬೆಂಬಲ ಸೇವೆಗಳಿಗೆ ಸುಸ್ಥಿರ ಮತ್ತು ಸಮಾನ ಪ್ರವೇಶವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಇಂಡಿಯನ್ ಆಯಿಲ್ ರಾಜ್ಯದ ಜನಸಂಖ್ಯೆಯ ಸುಮಾರು ಶೆಕಡಾ 10ರಷ್ಟನ್ನು ಮೂರು ವರ್ಷಗಳವರೆಗೆ ವರ್ಷಕ್ಕೆ ಒಮ್ಮೆ ಪರೀಕ್ಷಿಸಿ ಉತ್ತರ ಪ್ರದೇಶದ ಎಲ್ಲಾ 75 ಜಿಲ್ಲೆಗಳಲ್ಲಿ ಸುಮಾರು 64 ಕೋಟಿ ರೂ.ಗಳನ್ನು ಹೂಡಿಕೆ ಮಾಡುವ ಮೂಲಕ ಸಕ್ರಿಯ ಪ್ರಕರಣ ಶೋಧನಾ ಅಭಿಯಾನದಲ್ಲಿ (ಎ.ಸಿ.ಎಫ್.) ರಾಜ್ಯ ಪ್ರಯತ್ನಗಳಿಗೆ ಪೂರಕವಾದ ಮೊದಲ ಸಂಸ್ಥೆಯಾಗಿ ಹೊರಹೊಮ್ಮಿದೆ. ಇಂಡಿಯನ್ ಆಯಿಲ್ ಉತ್ತರ ಪ್ರದೇಶದಲ್ಲಿ ಅತ್ಯಾಧುನಿಕ ಡಯಾಗ್ನೋಸ್ಟಿಕ್ ತಂತ್ರಜ್ಞಾನವನ್ನು ಹೊಂದಿರುವ 18 ಮೊಬೈಲ್ ಮೆಡಿಕಲ್ ವ್ಯಾನ್ ಗಳನ್ನು ಪರಿಚಯಿಸಲಿದೆ. ಇದು ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ತಲುಪಲು ಕಷ್ಟಕರವಾದ ಸಮುದಾಯಗಳಲ್ಲಿ ಕ್ಷಯರೋಗದ ರೋಗನಿರ್ಣಯಕ್ಕೆ ಸಹಾಯ ಮಾಡುತ್ತದೆ. ಇದು ಸುಧಾರಿತ ಆರಂಭಿಕ ಪ್ರಕರಣ ಪತ್ತೆಗೆ ಕಾರಣವಾಗಿ ಆ ಮೂಲಕ ಆರಂಭಿಕ ಚಿಕಿತ್ಸೆಯನ್ನು ಖಚಿತಪಡಿಸುತ್ತದೆ. ಇಂಡಿಯನ್ ಆಯಿಲ್ ಕಡಿಮೆ ವೆಚ್ಚದ, ನವೀನ ಆಣ್ವಿಕ ರೋಗನಿರ್ಣಯ ಯಂತ್ರವನ್ನು ಒದಗಿಸುತ್ತದೆ. ಇದು ಉತ್ತರ ಪ್ರದೇಶದ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಛತ್ತೀಸ್ ಗಢದ ದೂರದ ಬುಡಕಟ್ಟು ಪ್ರದೇಶಗಳಲ್ಲಿ ಕ್ಷಯರೋಗ ರೋಗನಿರ್ಣಯ ಸೇವೆಗಳ ಪ್ರವೇಶ, ಲಭ್ಯತೆ ಮತ್ತು ಬಳಕೆಯನ್ನು ಸುಧಾರಿಸುತ್ತದೆ. ಉತ್ತರ ಪ್ರದೇಶದಲ್ಲಿ ಪರಿಚಯಿಸಲಾಗುತ್ತಿರುವ 18 ಸಂಚಾರಿ ವೈದ್ಯಕೀಯ ವ್ಯಾನ್ ಗಳಲ್ಲಿ ಟ್ರೂನಾಟ್ ಯಂತ್ರಗಳನ್ನು ಒದಗಿಸುವುದರ ಜೊತೆಗೆ, ಇಂಡಿಯನ್ ಆಯಿಲ್ ಈ ಯಂತ್ರಗಳಲ್ಲಿ ಸುಮಾರು 100 ಯಂತ್ರಗಳನ್ನು ಉತ್ತರ ಪ್ರದೇಶದ ಎಲ್ಲಾ ಎಂಟು ಮಹತ್ವಾಕಾಂಕ್ಷೆಯ ಜಿಲ್ಲೆಗಳಾದ ಬಹರೈಚ್, ಬಲರಾಂಪುರ, ಚಂದೌಲಿ, ಚಿತ್ರಕೂಟ, ಫತೇಪುರ್, ಶ್ರಾವಸ್ತಿ, ಸಿದ್ಧಾರ್ಥನಗರ ಮತ್ತು ಸೋನ್ಭದ್ರ ಮತ್ತು ಛತ್ತೀಸ್ ಗಢ ರಾಜ್ಯದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ (ಸಿ.ಹೆಚ್.ಸಿ.) ಒದಗಿಸುತ್ತದೆ. ಇದಲ್ಲದೆ, ಕಂಪನಿಯು ಉತ್ತರ ಪ್ರದೇಶದಲ್ಲಿ ಎಲ್ಲಾ 18 ರಾಜ್ಯ ಪ್ರಧಾನ ಕಚೇರಿಗಳು ಮತ್ತು 8 ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನು ಒಳಗೊಂಡ ಕೈಯಲ್ಲಿ ಹಿಡಿಯಲಾಗುವ, ಹ್ಯಾಂಡ್ಹೆಲ್ಡ್ ಎಕ್ಸ್ ರೇ ಘಟಕಗಳನ್ನು ಒದಗಿಸುತ್ತದೆ. ಛತ್ತೀಸ್ ಗಢದ 5 ವಿಭಾಗಗಳಲ್ಲಿ ಎಕ್ಸ್ ರೇ ಘಟಕಗಳನ್ನು ಒದಗಿಸಲಾಗುವುದು.

ಈ ತಿಳುವಳಿಕಾ ಒಡಂಬಡಿಕೆಗಳು ಕ್ಷಯರೋಗದ ಪಿಡುಗನ್ನು ತೊಡೆದುಹಾಕುವಲ್ಲಿ ಅಪಾರ ಪ್ರಾಮುಖ್ಯತೆಯನ್ನು ಹೊಂದಿವೆ ಎಂದು ಹೇಳುವ ಮೂಲಕ ಡಾ. ಮಾಂಡವೀಯ ಅವರು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಶ್ಲಾಘಿಸಿದರು. "ಸಮಗ್ರ ಆಡಳಿತ ವಿಧಾನದ ಭಾಗವಾಗಿ, ಎರಡೂ ಸಚಿವಾಲಯಗಳು ಈ ತಿಳಿವಳಿಕಾ ಒಪ್ಪಂದದ ಮೂಲಕ ಸಹಕರಿಸಿವೆ. ಈ ಒಪ್ಪಂದವು 2025ರ ವೇಳೆಗೆ ಭಾರತದಲ್ಲಿ ಕ್ಷಯರೋಗವನ್ನು ಕೊನೆಗಾಣಿಸುವ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯನ್ನು ಬಲಪಡಿಸಲಿದೆ, ಇದು ಸುಸ್ಥಿರ ಅಭಿವೃದ್ಧಿ ಗುರಿಗಿಂತ (ಎಸ್.ಡಿ.ಜಿ.) ಐದು ವರ್ಷ ಮುಂದಿದೆ ". ತಿಳಿವಳಿಕಾ ಒಪ್ಪಂದದ ಭಾಗವಾಗಿ ಒದಗಿಸಲಾದ ರೋಗನಿರ್ಣಯ ಬೆಂಬಲವು ಸಮಯೋಚಿತ ಚಿಕಿತ್ಸೆಗೆ ಅನುವು ಮಾಡಿಕೊಡುವ ಕ್ಷಯ ರೋಗಿಗಳನ್ನು ಗುರುತಿಸುವ ಪ್ರಯತ್ನಗಳನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.

2025ರ ವೇಳೆಗೆ ಕ್ಷಯರೋಗವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಭಾರತ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಕೇಂದ್ರ ಸಚಿವರು, ನಿ-ಕ್ಷಯ 2.0 ಉಪಕ್ರಮದ ಅಡಿಯಲ್ಲಿನ ಸಾಧನೆಗಳನ್ನು ಒತ್ತಿಹೇಳಿದರು. ಇದನ್ನು ಇತ್ತೀಚೆಗೆ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ಪ್ರಾರಂಭಿಸಿದ್ದಾರೆ. "ಯೋಜನೆ ಪ್ರಾರಂಭವಾದ 15 ದಿನಗಳಲ್ಲಿ, ಭಾರತದಲ್ಲಿ ಗುರುತಿಸಲಾದ ಮತ್ತು ಸಮ್ಮತಿಸಿದ ಎಲ್ಲಾ 12 ಲಕ್ಷ ಕ್ಷಯ ರೋಗಿಗಳನ್ನು ನಿ-ಕ್ಷಯ ಮಿತ್ರರು ಹೊಂದಿದ್ದಾರೆ, ಅವರು ಕ್ಷಯ ರೋಗಿಗಳಿಗೆ ಪೌಷ್ಠಿಕಾಂಶದ ಕಿಟ್ ಗಳು ಮತ್ತು ಇತರ ಬೆಂಬಲವನ್ನು ಒದಗಿಸುತ್ತಾರೆ" ಎಂದು ಅವರು ಹೇಳಿದರು.

ಈ ಉಪಕ್ರಮವನ್ನು ತೆಗೆದುಕೊಳ್ಳುವುದು ಮಾತ್ರವಲ್ಲದೆ ಅದನ್ನು ಕಾರ್ಯಗತಗೊಳಿಸುವ ಹಂತಕ್ಕೆ ತಂದಿದ್ದಕ್ಕಾಗಿ ಇಂಡಿಯನ್ ಆಯಿಲ್ ಗೆ ಧನ್ಯವಾದ ಅರ್ಪಿಸಿದ ಶ್ರೀ ಹರ್ದೀಪ್ ಸಿಂಗ್ ಪುರಿಯವರು, "ಈ ಮೈಲಿಗಲ್ಲಿನ ತಿಳಿವಳಿಕಾ ಒಪ್ಪಂದವು ಭಾರತದಲ್ಲಿ ದೃಢವಾದ ಆರೋಗ್ಯ ವ್ಯವಸ್ಥೆಯನ್ನು ಹೆಚ್ಚಿಸುವ ಗೌರವಾನ್ವಿತ ಪ್ರಧಾನಮಂತ್ರಿಯವರ ದೃಷ್ಟಿಕೋನದೊಂದಿಗೆ ಹೊಂದಿಕೊಳ್ಳುವ ಭಾರತೀಯ ಇಂಧನ ವಲಯದ ಸಂಕಲ್ಪದ ದೃಢೀಕರಣವಾಗಿದೆ" ಎಂದು ಹೇಳಿದರು. ಪೆಟ್ರೋಲಿಯಂ ಸಚಿವಾಲಯದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕಾ ಉಪಕ್ರಮಗಳಿಗೆ ಆರೋಗ್ಯ ವಲಯವು ಯಾವಾಗಲೂ ಆದ್ಯತೆಯನ್ನು ಹೊಂದಿದೆ ಎಂದು ಅವರು ಒತ್ತಿ ಹೇಳಿದರು.

ಶ್ರೀ ರಾಜೇಶ್ ಭೂಷಣ್, ಕಾರ್ಯದರ್ಶಿ, ಎಂ.ಓ.ಹೆಚ್.ಎಫ್.ಡಬ್ಲ್ಯೂ.; ಶ್ರೀ ಪಂಕಜ್ ಜೈನ್, ಕಾರ್ಯದರ್ಶಿ, ಎಂ.ಓ.ಪಿ. ಮತ್ತು ಎನ್. ಜಿ.; ಶ್ರೀಮತಿ ರೋಲಿ ಸಿಂಗ್, ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ಡೈರೆಕ್ಟರ್ (ಎನ್.ಹೆಚ್.ಎಂ), ಎಂ.ಓ.ಹೆಚ್.ಎಫ್.ಡಬ್ಲ್ಯೂ.; ಶ್ರೀ ವಿಶಾಲ್ ಚೌಹಾಣ್, ಜಂಟಿ ಕಾರ್ಯದರ್ಶಿ, ಎಂ.ಓ.ಹೆಚ್.ಎಫ್.ಡಬ್ಲ್ಯೂ.; ಶ್ರೀಮತಿ ಸುಜಾತಾ ಶರ್ಮಾ, ಜಂಟಿ ಕಾರ್ಯದರ್ಶಿ, ಎಂ.ಓ.ಪಿ. ಮತ್ತು ಎನ್.ಜಿ; ಡಾ. ರಾಜೇಂದ್ರ ಪಿ ಜೋಶಿ, ಡಿ.ಡಿ.ಜಿ. (ಟಿ.ಬಿ.), ಸೆಂಟ್ರಲ್ ಟಿ.ಬಿ. ವಿಭಾಗ, ಎಂ.ಓ.ಹೆಚ್.ಎಫ್.ಡಬ್ಲ್ಯೂ.; - ಡಾ.ಶೈಲೇಂದ್ರ ಭಟ್ನಾಗರ್, ರಾಜ್ಯ ಕ್ಷಯರೋಗ ಅಧಿಕಾರಿ, ಉತ್ತರ ಪ್ರದೇಶ, ಛತ್ತೀಸ್ ಗಢದ ರಾಜ್ಯ ಕ್ಷಯರೋಗ ಅಧಿಕಾರಿ ಡಾ. ಧರ್ಮೇಂದ್ರ ಮತ್ತು ಎಂ.ಓ.ಹೆಚ್.ಎಫ್.ಡಬ್ಲ್ಯೂ. ಮತ್ತು ಎಂ.ಓ.ಪಿ. ಮತ್ತು ಎನ್.ಜಿ.ಯ ಇತರ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.

**********
ಎಂ.ವಿ.
ಹೆಚ್.ಎಫ್.ಡಬ್ಲ್ಯೂ./ಎಮ್.ಓ.ಯು. ಎಮ್.ಓ.ಯು.ಮತ್ತು ಐ.ಓ.ಸಿ.ಎಲ್. 2022ರ 28ನೇ ಡಿಸೆಂಬರ್

(ಪ್ರಕಟಣೆ ಐ.ಡಿ.: 1887050) ವಿಸಿಟರ್ ಕೌಂಟರ್ : 255



(Release ID: 1887094) Visitor Counter : 98