ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಡಾ. ಮನ್ಸುಖ್ ಮಾಂಡವಿಯಾ ಅವರಿಂದ ಕೋವಿಡ್-19ರ ಪರಿಸ್ಥಿತಿ ಮತ್ತು ವಿಶ್ವದಾದ್ಯಂತ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಕಣ್ಗಾವಲು, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸನ್ನದ್ಧತೆಯ ಪರಿಶೀಲನೆ


"ಕೋವಿಡ್ ಇನ್ನೂ ಮುಗಿದಿಲ್ಲ. ನಾನು ಸಂಬಂಧಪಟ್ಟ ಎಲ್ಲರಿಗೂ ಜಾಗರೂಕರಾಗಿರಲು ಮತ್ತು ಕಣ್ಗಾವಲು ಬಲಪಡಿಸಲು ನಿರ್ದೇಶನ ನೀಡಿದ್ದೇನೆ. ಕೋವಿಡ್ ಲಸಿಕೆ ತೆಗೆದುಕೊಳ್ಳುವಂತೆ ನಾನು ಜನರನ್ನು ಪ್ರೇರೇಪಿಸುತ್ತೇನೆ:" ಡಾ. ಮಾಂಡವೀಯ

ಹೊಸ ರೂಪಾಂತರಗಳನ್ನು ಪತ್ತೆಹಚ್ಚಲು ಅನುಕೂಲವಾಗುವಂತೆ ಎಲ್ಲಾ ಕೋವಿಡ್ -19 ಸಕಾರಾತ್ಮಕ ಪ್ರಕರಣಗಳ ಮಾದರಿಗಳನ್ನು ಐ.ಎನ್.ಎಸ್.ಎ.ಸಿ.ಒ.ಜಿ. ಪ್ರಯೋಗಾಲಯಗಳಿಗೆ ಕಳುಹಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ

Posted On: 21 DEC 2022 3:05PM by PIB Bengaluru

ಇತ್ತೀಚೆಗೆ ಕೆಲವು ದೇಶಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರು ಇಂದು ಭಾರತದಲ್ಲಿ ಕೋವಿಡ್ -19ರ ಪರಿಸ್ಥಿತಿ ಮತ್ತು ಕೋವಿಡ್ -19ರ ಕಣ್ಗಾವಲು, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸಿದ್ಧತೆಯನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಡಾ.ಭಾರತಿ ಪ್ರವೀಣ್ ಪವಾರ್ ಅವರೊಂದಿಗೆ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಿತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ. ಕೆ. ಪಾಲ್, ಹಿರಿಯ ಅಧಿಕಾರಿಗಳು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರು ಈ ಉನ್ನತ ಮಟ್ಟದ ಸಭೆಯಲ್ಲಿ ಉಪಸ್ಥಿತರಿದ್ದರು.

ಜಾಗತಿಕ ಕೋವಿಡ್ 19 ಪರಿಸ್ಥಿತಿ ಮತ್ತು ದೇಶೀಯ ಸನ್ನಿವೇಶದ ಬಗ್ಗೆ ಕೇಂದ್ರ ಆರೋಗ್ಯ ಸಚಿವರಿಗೆ ವಿವರಿಸಲಾಯಿತು. ಚೀನಾ, ಜಪಾನ್, ದಕ್ಷಿಣ ಕೊರಿಯಾ, ಫ್ರಾನ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್ ನಂತಹ ವಿಶ್ವದ ಕೆಲವು ದೇಶಗಳಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳಿಂದ ಎದುರಾಗಿರುವ ಸವಾಲನ್ನು ಒತ್ತಿ ಹೇಳಿದ ಕೇಂದ್ರ ಆರೋಗ್ಯ ಸಚಿವರು, ಕೋವಿಡ್ -19ರ ಹೊಸ ಮತ್ತು ಉದಯೋನ್ಮುಖ ತಳಿಗಳ ವಿರುದ್ಧ, ವಿಶೇಷವಾಗಿ ಮುಂಬರುವ ಹಬ್ಬದ ದಿನಗಳನ್ನು ಗಮನದಲ್ಲಿಟ್ಟುಕೊಂಡು ಸಿದ್ಧರಾಗುವ ಮತ್ತು ಜಾಗರೂಕರಾಗಿರುವ ಪ್ರಾಮುಖ್ಯತೆಯನ್ನು ತಿಳಿಸಿದರು. ಕೋವಿಡ್ ಇನ್ನೂ ಮುಗಿದಿಲ್ಲ ಎಂದು ಪುನರುಚ್ಚರಿಸಿದ ಅವರು, ಸಂಪೂರ್ಣವಾಗಿ ಸನ್ನದ್ಧರಾಗುವಂತೆ ಮತ್ತು ಕಣ್ಗಾವಲು ಬಲಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜನರು ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸಬೇಕು ಮತ್ತು ಕೋವಿಡ್ ವಿರುದ್ಧ ಲಸಿಕೆ ಪಡೆಯಬೇಕು ಎಂದು ಅವರು ಮನವಿ ಮಾಡಿದರು.

ಇಂಡಿಯನ್ ಸಾರ್ಸ್-ಕೋವ್-2 ಜೀನೋಮಿಕ್ಸ್ ಕನ್ಸೋರ್ಟಿಯಂ (ಐ.ಎನ್.ಎಸ್.ಎ.ಸಿ.ಒ.ಜಿ.) ನೆಟ್ ವರ್ಕ್ ಮೂಲಕ ರೂಪಾಂತರಗಳನ್ನು ಪತ್ತೆಹಚ್ಚಲು ಸಕಾರಾತ್ಮಕ ಪ್ರಕರಣಗಳ ಮಾದರಿಗಳ ಸಂಪೂರ್ಣ ಜೀನೋಮ್ ಸೀಕ್ವೆನ್ಸಿಂಗ್ ಗಾಗಿ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸಲು ಡಾ.ಮನ್ಸುಖ್ ಮಾಂಡವಿಯಾ ನಿರ್ದೇಶನ ನೀಡಿದರು. ಇದು ಸೂಕ್ತ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ. ಎಲ್ಲಾ ಕೋವಿಡ್ -19 ಸಕಾರಾತ್ಮಕ ಪ್ರಕರಣಗಳ ಮಾದರಿಗಳನ್ನು, ಹೊಸ ರೂಪಾಂತರಗಳೇನಾದರೂ ಇವೆಯೇ ಎಂದು ಪತ್ತೆ ಮಾಡಲು, ಐ.ಎನ್.ಎಸ್.ಎ.ಸಿ.ಒ.ಜಿ. ಜೀನೋಮ್ ಸೀಕ್ವೆನ್ಸಿಂಗ್ ಲ್ಯಾಬೊರೇಟರೀಸ್ (ಐ.ಜಿ.ಎಸ್.ಎಲ್.) ಗೆ ಪ್ರತಿದಿನ ಕಳುಹಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ವಿನಂತಿಸಲಾಗಿದೆ. 

2022ರ ಡಿಸೆಂಬರ್ 19ಕ್ಕೆ ಕೊನೆಗೊಂಡ ವಾರದಲ್ಲಿ ಸರಾಸರಿ ದೈನಂದಿನ ಪ್ರಕರಣಗಳು 158 ಕ್ಕೆ ಇಳಿಯುವುದರೊಂದಿಗೆ ಭಾರತವು ಪ್ರಕರಣಗಳಲ್ಲಿ ಸ್ಥಿರವಾದ ಕುಸಿತವನ್ನು ಕಾಣುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವರಿಗೆ ಪ್ರಸ್ತುತಿಯಲ್ಲಿ ವಿವರಿಸಲಾಯಿತು. ಆದಾಗ್ಯೂ, ಕಳೆದ 6 ವಾರಗಳಿಂದ ಜಾಗತಿಕ ದೈನಂದಿನ ಸರಾಸರಿ ಪ್ರಕರಣಗಳಲ್ಲಿ ಸ್ಥಿರವಾದ ಏರಿಕೆ ವರದಿಯಾಗಿದೆ. 2022ರ ಡಿಸೆಂಬರ್ 19ಕ್ಕೆ ಕೊನೆಗೊಂಡ ವಾರದಲ್ಲಿ 5.9 ಲಕ್ಷ ದೈನಂದಿನ ಸರಾಸರಿ ಪ್ರಕರಣಗಳು ವರದಿಯಾಗಿವೆ. ಓಮಿಕ್ರಾನ್ ರೂಪಾಂತರದ ಹೊಸ ಮತ್ತು ಹೆಚ್ಚು ಹರಡುವ ಬಿಎಫ್.7 ತಳಿಯು ಚೀನಾದಲ್ಲಿ ಕೋವಿಡ್ ಸೋಂಕಿನ ವ್ಯಾಪಕ ಏರಿಕೆಗೆ ಕಾರಣವಾಗಿರುವುದು ಕಂಡುಬಂದಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ಈಗಾಗಲೇ ಜೂನ್ 2022ರಲ್ಲಿ "ಕೋವಿಡ್ -19 ರ ಪ್ರಕರಣದಲ್ಲಿ ಪರಿಷ್ಕೃತ ಕಣ್ಗಾವಲು ಕಾರ್ಯತಂತ್ರಕ್ಕಾಗಿ ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು" ಬಿಡುಗಡೆ ಮಾಡಿದೆ, ಇದು ಹೊಸ ಸಾರ್ಸ್-ಕೋವ್ -2 ರೂಪಾಂತರಗಳ ಸ್ಫೋಟಗಳನ್ನು ಪತ್ತೆಹಚ್ಚಲು ಮತ್ತು ನಿಯಂತ್ರಿಸಲು ಶಂಕಿತ ಮತ್ತು ದೃಢಪಡಿಸಿದ ಪ್ರಕರಣಗಳ ಆರಂಭಿಕ ಪತ್ತೆ, ಪ್ರತ್ಯೇಕತೆ, ಪರೀಕ್ಷೆ ಮತ್ತು ಸಮಯೋಚಿತ ನಿರ್ವಹಣೆಗೆ ಕರೆ ನೀಡುತ್ತದೆ. ಇದರ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಆರೋಗ್ಯ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್, ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ.ಅಜಯ್ ಕುಮಾರ್ ಸೂದ್, ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಆರ್.ಎಸ್.ಗೋಖಲೆ, ಆಯುಷ್ ಕಾರ್ಯದರ್ಶಿ ಶ್ರೀ ರಾಜೇಶ್ ಕೊಟೆಚಾ, ಆರೋಗ್ಯ ಸಂಶೋಧನಾ ಇಲಾಖೆಯ ಕಾರ್ಯದರ್ಶಿ ಡಾ.ರಾಜೀವ್ ಬಹ್ಲ್, ಡಿ.ಜಿ.ಎಚ್.ಎಸ್.ನ ಡಾ.ಅತುಲ್ ಗೋಯಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಲವ್ ಅಗರ್ವಾಲ್ ಮತ್ತು ಕೋವಿಡ್ ಕಾರ್ಯಕಾರಿ ಗುಂಪಿನ ಅಧ್ಯಕ್ಷ ಡಾ. ಎನ್. ಕೆ. ಅರೋರಾ,  ರಾಷ್ಟ್ರೀಯ ರೋಗನಿರೋಧಕ ಸಲಹಾ ಗುಂಪು (ಎನ್.ಟಿ.ಎ.ಜಿ.ಐ.) ಈ ಉನ್ನತ ಸಭೆಯಲ್ಲಿ ಹಾಜರಿದ್ದರು.


****



(Release ID: 1885558) Visitor Counter : 199