ಪ್ರಧಾನ ಮಂತ್ರಿಯವರ ಕಛೇರಿ

ಗೋವಾದಲ್ಲಿ ನಡೆದ 9ನೇ ವಿಶ್ವ ಆಯುರ್ವೇದ ಕಾಂಗ್ರೆಸ್ ನ ಸಮಾರೋಪ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣದ ಇಂಗ್ಲಿಷ್ ಭಾಷಾಂತರ

Posted On: 11 DEC 2022 7:30PM by PIB Bengaluru

ಗೋವಾದ ರಾಜ್ಯಪಾಲರಾದ ಶ್ರೀ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರೇ, ಜನಪ್ರಿಯ ಯುವ ಮುಖ್ಯಮಂತ್ರಿ ವೈದ್ಯ ಪ್ರಮೋದ್ ಸಾವಂತ್ ಅವರೇ, ಕೇಂದ್ರ ಸಚಿವರಾದ ಸರ್ಬಾನಂದ ಸೋನೊವಾಲ್ ಅವರೇ, ಶ್ರೀಪಾದ್ ನಾಯಕ್ ಅವರೇ, ಡಾ. ಮಹೇಂದ್ರಭಾಯಿ ಮುಂಜಾಪರ ಅವರೇ, ಶ್ರೀ ಶೇಖರ್ ಅವರೇ, ವಿಶ್ವದಾದ್ಯಂತದ ವಿಶ್ವ ಆಯುರ್ವೇದ ಕಾಂಗ್ರೆಸ್ ನಲ್ಲಿ ಭಾಗವಹಿಸುವ ಆಯುಷ್ ಕ್ಷೇತ್ರದ ಎಲ್ಲಾ ವಿದ್ವಾಂಸರು ಮತ್ತು ತಜ್ಞರೆ, ಇತರ ಗಣ್ಯರೆ, ಮಹಿಳೆಯರು ಮತ್ತು ಮಹನೀಯರೆ!

ಸುಂದರವಾದ ಗೋವಾದಲ್ಲಿ ವಿಶ್ವ ಆಯುರ್ವೇದ ಕಾಂಗ್ರೆಸ್ ಗಾಗಿ ಭಾರತ ಮತ್ತು ವಿದೇಶಗಳಿಂದ ಬಂದು ಸೇರಿದ ಎಲ್ಲಾ ಸ್ನೇಹಿತರನ್ನು ನಾನು ಸ್ವಾಗತಿಸುತ್ತೇನೆ. ವಿಶ್ವ ಆಯುರ್ವೇದ ಕಾಂಗ್ರೆಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದ್ದಕ್ಕಾಗಿ ನಾನು ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಭಾರತವು ತನ್ನ ಸ್ವಾತಂತ್ರ್ಯದ 'ಅಮೃತ ಕಾಲ' (ಸುವರ್ಣಯುಗ) ಕ್ಕೆ ಅಡಿಯಿಡಲು ಪ್ರಾರಂಭಿಸಿದ ಸುವರ್ಣ ಸಮಯದಲ್ಲಿ ಈ ಘಟನೆ ನಡೆಯುತ್ತಿದೆ. ನಮ್ಮ ಜ್ಞಾನ, ವಿಜ್ಞಾನ ಮತ್ತು ಸಾಂಸ್ಕೃತಿಕ ಅನುಭವದ ಮೂಲಕ ವಿಶ್ವ ಕಲ್ಯಾಣದ ಸಂಕಲ್ಪವು ನಮ್ಮ 'ಅಮೃತ ಕಾಲ'ದ ಒಂದು ಮಹತ್ತರ ಗುರಿಯಾಗಿದ್ದು, ಆಯುರ್ವೇದವು ಇದಕ್ಕೆ ಬಲವಾದ ಮತ್ತು ಪರಿಣಾಮಕಾರಿ ಮಾಧ್ಯಮವಾಗಿದೆ. ಭಾರತವು ಈ ವರ್ಷ ಜಿ -20 ಶೃಂಗ ಸಭೆಯ ಆತಿಥ್ಯ ಮತ್ತು ಅಧ್ಯಕ್ಷತೆಯನ್ನು ವಹಿಸುತ್ತಿದೆ.  "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಎಂಬುದು ಜಿ-20 ಶೃಂಗಸಭೆಯ ಧ್ಯೇಯವಾಕ್ಯವಾಗಿದೆ. ವಿಶ್ವ ಆಯುರ್ವೇದ ಕಾಂಗ್ರೆಸ್ ನಲ್ಲಿ ನೀವೆಲ್ಲರೂ ಇಡೀ ವಿಶ್ವದ ಆರೋಗ್ಯದ ಜೊತೆಯಲ್ಲಿ ಈ ವಿಷಯಗಳನ್ನೂ ಚರ್ಚಿಸಿದ್ದೀರಿ. ವಿಶ್ವದ 30 ಕ್ಕೂ ಹೆಚ್ಚು ದೇಶಗಳು ಆಯುರ್ವೇದವನ್ನು ಸಾಂಪ್ರದಾಯಿಕ ವೈದ್ಯ ಪದ್ಧತಿಯಾಗಿ ಗುರುತಿಸಿರುವುದು ನನಗೆ ಬಹಳ ಸಂತೋಷ ತಂದ ವಿಷಯವಾಗಿದೆ. ಆಯುರ್ವೇದದ ಮನ್ನಣೆಗಾಗಿ ನಾವು ಸಂಘಟಿತರಾಗಿ ಅದನ್ನು ಹೆಚ್ಚು ಹೆಚ್ಚು ದೇಶಗಳಿಗೆ ತಲುಪಿಸಬೇಕಾಗಿದೆ.

ಸ್ನೇಹಿತರೇ,
ಇಂದು, ಆಯುಷ್ ಗೆ ಸಂಬಂಧಿಸಿದ ಮೂರು ಶಿಕ್ಷಣ ಸಂಸ್ಥೆಗಳನ್ನು ಸಮರ್ಪಿಸುವ ಸದವಕಾಶವೂ ನನಗೆ ಲಭಿಸಿದೆ. ಗೋವಾದ ಅಖಿಲ ಭಾರತ ಆಯುರ್ವೇದ ಸಂಸ್ಥೆ, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಯುನಾನಿ ಮೆಡಿಸಿನ್ - ಗಾಜಿಯಾಬಾದ್ ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೋಮಿಯೋಪಥಿ - ದೆಹಲಿ ಆಯುಷ್ ಆರೋಗ್ಯ ರಕ್ಷಣಾ ವ್ಯವಸ್ಥೆಗೆ ಹೊಸ ಉತ್ತೇಜನವನ್ನು ನೀಡಲಿವೆ ಎಂದು ನಾನು ನಂಬುತ್ತೇನೆ.

ಸ್ನೇಹಿತರೇ,
ಆಯುರ್ವೇದವು ಒಂದು ವಿಜ್ಞಾನವಾಗಿದ್ದು, ಅದರ ತತ್ವಶಾಸ್ತ್ರ ಮತ್ತು ಧ್ಯೇಯವಾಕ್ಯ 'ಸರ್ವೇ ಭವಂತು ಸುಖೀನಃ, ಸರ್ವೇ ಸಂತು ನಿರಾಮಯ್' ಅಂದರೆ- 'ಎಲ್ಲರೂ ಸಂತೋಷದಿಂದಿರಿ, ಎಲ್ಲರೂ ಅನಾರೋಗ್ಯದಿಂದ ಮುಕ್ತರಾಗಿ, ಆರೋಗ್ಯದಿಂದಿರಿ' ಎಂಬುದಾಗಿದೆ. ಇದರರ್ಥ, ರೋಗ ಸಂಭವಿಸಿದಾಗ ಚಿಕಿತ್ಸೆ ನೀಡುವುದಕ್ಕಿಂತ, ನಮ್ಮ ಜೀವನವನ್ನು ರೋಗಮುಕ್ತವಾಗಿಸಿ ಜೀವಿಸಬೇಕು. ಇದರ ಸಾಮಾನ್ಯ ಪರಿಕಲ್ಪನೆಯೆಂದರೆ, ಯಾವುದೇ ಸ್ಪಷ್ಟ ರೋಗವಿಲ್ಲದಿದ್ದರೆ ನಾವು ಆರೋಗ್ಯವಂತರಾಗಿರುತ್ತೇವೆ. ಆದರೆ ಆಯುರ್ವೇದದ ಪ್ರಕಾರ ಆರೋಗ್ಯಕರ ಎಂಬುದಕ್ಕೆ ವ್ಯಾಖ್ಯಾನವು ಹೆಚ್ಚು ವಿಶಾಲವಾಗಿದೆ. ಆಯುರ್ವೇದವು ,'ಸಮಮ್  ದೋಷ  ಸಮಾಗ್ನಿಸ್ಚ,  ಸಮ  ಧಾತು  ಮಲ  ಕ್ರಿಯಾಃ| ಪ್ರಸನ್ನ  ಆತ್ಮೇಂದ್ರಿಯ  ಮನಃ,  ಸ್ವಸ್ಥ  ಇತಿ  ಅಭಿಧೀಯತೇ'
ಅಂದರೆ 'ಯಾರ ದೇಹವು ಸಮತೋಲಿತವಾಗಿದೆಯೋ, ಎಲ್ಲಾ ಚಟುವಟಿಕೆಗಳು ಸಮತೋಲನದಲ್ಲಿದ್ದು, ಮನಸ್ಸು ಸಂತೋಷವಾಗಿರುತ್ತದೆಯೋ, ಆತ ಆರೋಗ್ಯವಾಗಿದ್ದಾನೆ' ಎಂದು ಹೇಳುತ್ತದೆ. ಅಂತೆಯೇ ಆಯುರ್ವೇದವು ಚಿಕಿತ್ಸೆಯನ್ನು ಮೀರಿ ಯೋಗಕ್ಷೇಮದ ಬಗ್ಗೆ ಮಾತನಾಡುತ್ತದೆ ಮತ್ತು ಸ್ವಾಸ್ಥ್ಯವನ್ನು ಉತ್ತೇಜಿಸುತ್ತದೆ. ವಿಶ್ವವು ಈಗ ಎಲ್ಲಾ ಬದಲಾವಣೆಗಳು ಮತ್ತು ಪ್ರವೃತ್ತಿಗಳಿಂದ ಹೊರಬಂದು, ಈ ಪ್ರಾಚೀನ ಜೀವನ ತತ್ವಶಾಸ್ತ್ರಕ್ಕೆ ಮರಳುತ್ತಿದೆ. ಭಾರತವು ಬಹಳ ಹಿಂದೆಯೇ ಈ ಬಗ್ಗೆ ಕೆಲಸ ಪ್ರಾರಂಭಿಸಿದ್ದಕ್ಕಾಗಿ ನನಗೆ ತುಂಬಾ ಸಂತೋಷವಾಗುತ್ತಿದೆ. ನಾನು ಗುಜರಾತಿನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ, ಆಯುರ್ವೇದವನ್ನು ಉತ್ತೇಜಿಸಲು ನಾವು ಅನೇಕ ಪ್ರಯತ್ನಗಳನ್ನು ಪ್ರಾರಂಭಿಸಿದ್ದೇವೆ. ನಾವು ಆಯುರ್ವೇದಕ್ಕೆ ಸಂಬಂಧಿಸಿದ ಸಂಸ್ಥೆಗಳನ್ನು ಪ್ರಾರಂಭಿಸಿ, ಗುಜರಾತ್ ಆಯುರ್ವೇದ ವಿಶ್ವವಿದ್ಯಾಲಯವನ್ನು ಆಧುನೀಕರಿಸಿದ್ದೇವೆ. ಇದರ ಪರಿಣಾಮವೆಂದರೆ ಇಂದು ಜಾಮ್ನಗರದಲ್ಲಿ ಡಬ್ಲ್ಯುಎಚ್ಒ ಸಾಂಪ್ರದಾಯಿಕ ಔಷಧದ ವಿಶ್ವದ ಮೊದಲ ಮತ್ತು ಏಕೈಕ ಜಾಗತಿಕ ಕೇಂದ್ರವನ್ನು ತೆರೆದಿದೆ. ನಮ್ಮ ಸರ್ಕಾರದಲ್ಲಿ ಆಯುಷ್ ನ ಪ್ರತ್ಯೇಕ ಸಚಿವಾಲಯವನ್ನು ಸಹ ಸ್ಥಾಪಿಸಿದ್ದೇವೆ, ಇದು ಆಯುರ್ವೇದದ ಬಗ್ಗೆ ಉತ್ಸಾಹ ಮತ್ತು ನಂಬಿಕೆಯನ್ನು ಹೆಚ್ಚಿಸಲು ಕಾರಣವಾಗಿದೆ. ಇಂದು ಏಮ್ಸ್ (ಎಐಐಎಂಎಸ್) ಮಾದರಿಯಲ್ಲಿ 'ಅಖಿಲ ಭಾರತ ಆಯುರ್ವೇದ ಸಂಸ್ಥೆಗಳನ್ನು' ಸಹ ತೆರೆಯಲಾಗುತ್ತಿದೆ. ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆಯನ್ನು ಈ ವರ್ಷ ಯಶಸ್ವಿಯಾಗಿ ಆಯೋಜಿಸಲಾಗಿದ್ದು ಡಬ್ಲ್ಯುಎಚ್ಒ ಕೂಡ ಭಾರತದ ಪ್ರಯತ್ನಗಳನ್ನು ಶ್ಲಾಘಿಸಿದೆ. ಇಡೀ ಜಗತ್ತು ಈಗ 'ಅಂತರರಾಷ್ಟ್ರೀಯ ಯೋಗ ದಿನವನ್ನು' ಆರೋಗ್ಯ ಮತ್ತು ಯೋಗಕ್ಷೇಮದ ಜಾಗತಿಕ ಹಬ್ಬವಾಗಿ ಆಚರಿಸುತ್ತಿದೆ. ಇದರರ್ಥ, ಈ ಹಿಂದೆ ನಿರ್ಲಕ್ಷಿಸಲ್ಪಟ್ಟಿದ್ದ ಯೋಗ ಮತ್ತು ಆಯುರ್ವೇದವು ಇಂದು ಇಡೀ ಮನುಕುಲಕ್ಕೆ ಹೊಸ ಭರವಸೆಯಾಗಿದೆ.

ಸ್ನೇಹಿತರೇ,
ಆಯುರ್ವೇದಕ್ಕೆ ಸಂಬಂಧಿಸಿದ ಇನ್ನೊಂದು ಅಂಶವಿದೆ, ಅದನ್ನು ನಾನು ಖಂಡಿತವಾಗಿಯೂ ವಿಶ್ವ ಆಯುರ್ವೇದ ಕಾಂಗ್ರೆಸ್ ನಲ್ಲಿ ಉಲ್ಲೇಖಿಸಲು ಬಯಸುತ್ತೇನೆ. ಮುಂಬರುವ ಶತಮಾನಗಳಲ್ಲಿ ಆಯುರ್ವೇದದ ಉಜ್ವಲ ಭವಿಷ್ಯಕ್ಕಾಗಿ ಇದು ಅತ್ಯಂತ ಅಗತ್ಯವಾಗಿದೆ.


ಸ್ನೇಹಿತರೇ,
ಪುರಾವೆಗಳನ್ನು ಆಧುನಿಕ ವಿಜ್ಞಾನದಲ್ಲಿ ಆಧಾರವೆಂದು ಪರಿಗಣಿಸಲಾಗುವುದರಿಂದ ಆಯುರ್ವೇದದ ಬಗ್ಗೆ ಜಾಗತಿಕ ಒಮ್ಮತ ಮತ್ತು ಸ್ವೀಕಾರಕ್ಕೆ ಸ್ವಲ್ಪ ಸಮಯ ಹಿಡಿಯಿತು. ಆಯುರ್ವೇದಕ್ಕೆ ಸಂಬಂಧಿಸಿದಂತೆ ನಾವು ಫಲಿತಾಂಶಗಳು ಮತ್ತು ಪರಿಣಾಮಗಳನ್ನು ಈ ಹಿಂದೆಯೂ ಹೊಂದಿದ್ದೆವು, ಆದರೆ ಪುರಾವೆಗಳ ವಿಷಯದಲ್ಲಿ ಹಿಂದುಳಿದಿದ್ದೇವೆ. ಆದ್ದರಿಂದ, ಇಂದು ನಮಗೆ 'ದತ್ತಾಂಶ-ಆಧಾರಿತ ಪುರಾವೆ'ಯ ದಾಖಲೀಕರಣದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ನಾವು ದೀರ್ಘಕಾಲದವರೆಗೆ ನಿರಂತರವಾಗಿ ಕೆಲಸ ಮಾಡಬೇಕಾಗಿದೆ. ನಾವು ನಮ್ಮ ವೈದ್ಯಕೀಯ ದತ್ತಾಂಶ, ಸಂಶೋಧನೆ ಮತ್ತು ನಿಯತಕಾಲಿಕಗಳನ್ನು ಒಟ್ಟೀಕರಿಸಬೇಕು. ಆಧುನಿಕ ವೈಜ್ಞಾನಿಕ ನಿಯತಾಂಕಗಳಲ್ಲಿ ಪ್ರತಿಯೊಂದು ಸಮರ್ಥನೆಯನ್ನು ಪರಿಶೀಲಿಸಬೇಕು. ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದಲೂ ಈ ದಿಶೆಯಲ್ಲಿ ದೊಡ್ಡ ಪ್ರಮಾಣದ ಪ್ರಯತ್ನಗಳು ನಡೆದಿವೆ. ಸಾಕ್ಷ್ಯಾಧಾರಿತ ಸಂಶೋಧನಾ ದತ್ತಾಂಶಕ್ಕಾಗಿ ನಾವು ಆಯುಷ್ ಸಂಶೋಧನಾ ಪೋರ್ಟಲ್ ಅನ್ನು ಸಹ ರಚಿಸಿದ್ದೇವೆ. ಇದು ಸುಮಾರು 40,000 ಸಂಶೋಧನಾ ಅಧ್ಯಯನಗಳ ದತ್ತಾಂಶವನ್ನು ಹೊಂದಿದೆ. ಕರೋನಾ ಅವಧಿಯಲ್ಲಿಯೂ ಆಯುಷ್ ಗೆ ಸಂಬಂಧಿಸಿದ ಸುಮಾರು 150 ನಿರ್ದಿಷ್ಟ ಸಂಶೋಧನಾ ಅಧ್ಯಯನಗಳನ್ನು ನಡೆಸಲಾಯಿತು. ಆ ಅನುಭವವನ್ನು ಪರಿಗಣಿಸಿ, ನಾವು ಈಗ 'ರಾಷ್ಟ್ರೀಯ ಆಯುಷ್ ಸಂಶೋಧನಾ ಒಕ್ಕೂಟ'ವನ್ನು ರಚಿಸುವ ದಿಕ್ಕಿನಲ್ಲಿ ಮುಂದುವರಿಯುತ್ತಿದ್ದೇವೆ. ಯೋಗ ಮತ್ತು ಆಯುರ್ವೇದಕ್ಕೆ ಸಂಬಂಧಿಸಿದ ಪ್ರಮುಖ ಸಂಶೋಧನೆಗಳನ್ನು ಏಮ್ಸ್ (ಎಐಐಎಂಎಸ್) ನ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೆಡಿಸಿನ್ ನಂತಹ ಸಂಸ್ಥೆಗಳಲ್ಲಿ ಮಾಡಲಾಗುತ್ತಿದೆ. ಇಲ್ಲಿನ ಆಯುರ್ವೇದ ಮತ್ತು ಯೋಗಕ್ಕೆ ಸಂಬಂಧಿಸಿದ ಸಂಶೋಧನಾ ಪ್ರಬಂಧಗಳು ಪ್ರತಿಷ್ಠಿತ ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟವಾಗುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ. ಇತ್ತೀಚೆಗೆ, ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಮತ್ತು ನ್ಯೂರಾಲಜಿ ಜರ್ನಲ್ ನಂತಹ ಗೌರವಾನ್ವಿತ ನಿಯತಕಾಲಿಕಗಳಲ್ಲಿ ಅನೇಕ ಸಂಶೋಧನಾ ಪ್ರಬಂಧಗಳು ಪ್ರಕಟಗೊಂಡಿವೆ. ವಿಶ್ವ ಆಯುರ್ವೇದ ಕಾಂಗ್ರೆಸ್ ನಲ್ಲಿ ಪಾಲ್ಗೊಳ್ಳುವವರನ್ನು ಭಾರತದೊಂದಿಗೆ ಸಹಕರಿಸಿ, ಆಯುರ್ವೇದವು ಜಾಗತಿಕ ಸ್ಥಾನಮಾನವನ್ನು ಪಡೆದುಕೊಳ್ಳಲು ಕೊಡುಗೆ ನೀಡಬೇಕು ಎಂದು ನಾನು ಬಯಸುತ್ತೇನೆ.

ಸಹೋದರ ಸಹೋದರಿಯರೇ,
ಆಯುರ್ವೇದಕ್ಕೆ ಅತಿ ವಿರಳವಾಗಿ ಚರ್ಚಿಸಲಾಗುವ ಮತ್ತೊಂದು ಗುಣಲಕ್ಷಣವಿದೆ. ಆಯುರ್ವೇದವು ಕೇವಲ ಚಿಕಿತ್ಸೆಗಾಗಿ ಮಾತ್ರ ಎಂದು ಕೆಲವರು ಭಾವಿಸುತ್ತಾರೆ, ಆದರೆ ಅದರ ಸದ್ಗುಣವೆಂದರೆ ಆಯುರ್ವೇದವು ಜೀವನವನ್ನು ಹೇಗೆ ಬದುಕಬೇಕೆಂಬುದನ್ನು ನಮಗೆ ಕಲಿಸುತ್ತದೆ. ಆಧುನಿಕ ಪರಿಭಾಷೆಯನ್ನು ಬಳಸಿಕೊಂಡು ನಾನು ಇದನ್ನು ನಿಮಗೆ ವಿವರಿಸಲು ಒಂದು ಉದಾಹರಣೆಯನ್ನು ನೀಡುತ್ತೇನೆ. ನೀವು ವಿಶ್ವದ ಅತ್ಯುತ್ತಮ ಕಂಪನಿಯಿಂದ ಅತ್ಯುತ್ತಮ ಕಾರನ್ನು ಖರೀದಿಸುತ್ತೀರಿ. ಆ ಕಾರಿನೊಂದಿಗೆ ಕೈಪಿಡಿ ಪುಸ್ತಕವನ್ನೂ ನಿಮಗೆ ನೀಡುತ್ತಾರೆ. ಯಾವ ಇಂಧನವನ್ನು ಬಳಸಬೇಕು, ಯಾವಾಗ ಮತ್ತು ಹೇಗೆ ಅದನ್ನು ಸರ್ವಿಸ್ ಮಾಡಬೇಕು ಮತ್ತು ಅದನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಡೀಸೆಲ್ ಎಂಜಿನ್ ಕಾರಿನಲ್ಲಿ ಪೆಟ್ರೋಲ್ ಹಾಕಿದರೆ, ತೊಂದರೆ ಖಚಿತವಾಗಿಯೂ ಕಟ್ಟಿಟ್ಟ ಬುತ್ತಿ. ಅಂತೆಯೇ, ನೀವು ಗಣಕಯಂತ್ರವನ್ನು ಉಪಯೋಗಿಸುತ್ತಿದ್ದರೆ, ಅದರ ಎಲ್ಲಾ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಸರಿಯಾಗಿ ಕಾರ್ಯನಿರ್ವಹಿಸಬೇಕು. ನಾವು ನಮ್ಮ ಯಂತ್ರಗಳನ್ನು ನೋಡಿಕೊಳ್ಳುವಂತೆ, ನಮ್ಮ ದೇಹಕ್ಕೆ ನಾವು ಯಾವ ರೀತಿಯ ಆಹಾರವನ್ನು ಸೇವಿಸಬೇಕು, ನಾವು ಯಾವ ರೀತಿಯ ದಿನಚರಿಯನ್ನು ಪಾಲಿಸಬೇಕು ಮತ್ತು ಯಾವುದನ್ನು ತ್ಯಜಿಸಬೇಕು ಎಂಬುದರ ಬಗ್ಗೆ ಗಮನ ನೀಡುವುದಿಲ್ಲ. ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ನಂತೆಯೇ, ದೇಹ ಮತ್ತು ಮನಸ್ಸು ಎರಡನ್ನೂ ಒಟ್ಟಿಗೆ ಆರೋಗ್ಯಕರವಾಗಿಸಬೇಕು. ಅವು ಸಾಮರಸ್ಯದಿಂದ ಇರಬೇಕು ಎಂಬುದನ್ನು ಆಯುರ್ವೇದವು ನಮಗೆ ಕಲಿಸುತ್ತದೆ. ಉದಾಹರಣೆಗೆ, ಇಂದು ಸರಿಯಾದ, ಆರಾಮದಾಯಕ ನಿದ್ರೆಯೇ ವೈದ್ಯಕೀಯ ವಿಜ್ಞಾನಕ್ಕೆ ಒಂದು ದೊಡ್ಡ ಸವಾಲಾಗಿದೆ. ಆದರೆ ಮಹರ್ಷಿ ಚರಕರಂತಹ ಆಚಾರ್ಯರು ಶತಮಾನಗಳ ಹಿಂದೆಯೇ ಈ ಬಗ್ಗೆ ವಿವರವಾಗಿ ಬರೆದಿದ್ದಾರೆ ಎಂಬುದು ನಿಮಗೆ ತಿಳಿದಿದೆಯೇ? ಇದು ಆಯುರ್ವೇದದ ಸದ್ಗುಣ.

ಸ್ನೇಹಿತರೇ,
ನಮ್ಮಲ್ಲಿ ಒಂದು ಮಾತಿದೆ: 'ಸ್ವಾಸ್ಥ್ಯಮ್ ಪರಮಾರ್ಥ ಸಾಧನಂ' ಅಂದರೆ, ಆರೋಗ್ಯವು ನಮ್ಮ ಉದ್ದೇಶ ಮತ್ತು ಪ್ರಗತಿಯ ಸರ್ವತ್ರ ಸಾಧನವಾಗಿದೆ. ಈ ಮಂತ್ರವು ನಮ್ಮ ವೈಯಕ್ತಿಕ ಜೀವನಕ್ಕೆ ಎಷ್ಟು ಅರ್ಥಪೂರ್ಣವಾಗಿದೆಯೋ, ದೇಶದ ಆರ್ಥಿಕತೆಯ ದೃಷ್ಟಿಕೋನದಿಂದಲೂ ಇದು ಅಷ್ಟೇ ಪ್ರಸ್ತುತವಾಗಿದೆ. ಇಂದು, ಆಯುಷ್ ಕ್ಷೇತ್ರದಲ್ಲಿ ಅಪರಿಮಿತ ಹೊಸ ಸಾಧ್ಯತೆಗಳಿವೆ. ಆಯುರ್ವೇದ ಗಿಡಮೂಲಿಕೆಗಳ ಕೃಷಿ, ಆಯುಷ್ ಔಷಧಿಗಳ ಉತ್ಪಾದನೆ ಮತ್ತು ಪೂರೈಕೆ ಅಥವಾ ಡಿಜಿಟಲ್ ಸೇವೆಗಳಾಗಿರಬಹುದು, ಹೀಗಾಗಿ ಈ ನಿಟ್ಟಿನಲ್ಲಿ ಆಯುಷ್ ನವೋದ್ಯಮಗಳಿಗೆ ದೊಡ್ಡ ಅವಕಾಶವಿದೆ.

ಸಹೋದರ ಸಹೋದರಿಯರೇ,
ಆಯುಷ್ ಉದ್ಯಮದ ಅತಿದೊಡ್ಡ ಶಕ್ತಿಯೆಂದರೆ ಪ್ರತಿಯೊಬ್ಬರಿಗೂ ವಿವಿಧ ರೀತಿಯ ಅವಕಾಶಗಳು ಲಭ್ಯವಿರುವಿಕೆ. ಉದಾಹರಣೆಗೆ, ಸುಮಾರು 40,000 ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್ಎಂಇಗಳು), ಸಣ್ಣ ಪ್ರಮಾಣದ ಕೈಗಾರಿಕೆಗಳು, ಅನೇಕ ವಿಭಿನ್ನ ಉತ್ಪನ್ನಗಳನ್ನು ನೀಡುತ್ತಿವೆ. ಅವು ಭಾರತದಲ್ಲಿ ಆಯುಷ್ ಕ್ಷೇತ್ರದಲ್ಲಿ ಹಲವಾರು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಇದು ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡುತ್ತಿದೆ. ಎಂಟು ವರ್ಷಗಳ ಹಿಂದೆ ದೇಶದಲ್ಲಿ ಆಯುಷ್ ಕೇವಲ ರೂ. 20,000 ಕೋಟಿ ಉದ್ಯಮವಾಗಿತ್ತು. ಆದರೆ ಇಂದು ಆಯುಷ್ ಉದ್ಯಮವು ಸುಮಾರು ರೂ 1.5 ಲಕ್ಷ ಕೋಟಿ ಉದ್ಯಮವಾಗಿದೆ. ಇದರರ್ಥ 7-8 ವರ್ಷಗಳಲ್ಲಿ ಆಯುಷ್ ಉದ್ಯಮವು ಸುಮಾರು 7 ಪಟ್ಟು ಬೆಳವಣಿಗೆಯನ್ನು ಕಂಡಿದೆ. ಇದರಿಂದ ಆಯುಷ್ ಸ್ವತಃ ಒಂದು ದೊಡ್ಡ ಉದ್ಯಮವಾಗಿ, ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುತ್ತಿದೆ ಎಂದು ನೀವು ಊಹಿಸಬಹುದು. ಇದು ಮುಂದಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಮತ್ತಷ್ಟು ವಿಸ್ತರಿಸುವ ನಿರೀಕ್ಷೆ ಇದೆ. ಜಾಗತಿಕ ಗಿಡಮೂಲಿಕೆ ಔಷಧಿ ಮತ್ತು ಸಂಬಾರ ಪದಾರ್ಥಗಳ ಮಾರುಕಟ್ಟೆ ಸುಮಾರು 120 ಬಿಲಿಯನ್ ಡಾಲರ್ ಅಂದರೆ ಸುಮಾರು 10 ಲಕ್ಷ ಕೋಟಿ ರೂಪಾಯಿಗಳಷ್ಟಿದೆ. ಸಾಂಪ್ರದಾಯಿಕ ಔಷಧದ ಈ ಕ್ಷೇತ್ರವು ನಿರಂತರವಾಗಿ ವಿಸ್ತರಿಸುತ್ತಿದೆ ಮತ್ತು ನಾವು ಪ್ರತಿಯೊಂದು ಸಾಧ್ಯತೆಯ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕಾಗಿದೆ. ಕೃಷಿಯ ಸಂಪೂರ್ಣ ಹೊಸ ಆಯಾಮವು ಗ್ರಾಮೀಣ ಆರ್ಥಿಕತೆಯ ಉದ್ದಾರಕ್ಕಾಗಿ, ನಮ್ಮ ರೈತರಿಗಾಗಿ ತೆರೆದುಕೊಳ್ಳುತ್ತಿದೆ. ನಮ್ಮ ರೈತರು ಅದರ ಉತ್ತಮ ಪ್ರಯೋಜನಗಳನ್ನು ಪಡೆಯಬೇಕು. ಈ ನಿಟ್ಟಿನಲ್ಲಿ ಈ ಕ್ಷೇತ್ರದಲ್ಲಿ ಯುವಕರಿಗೆ ಲಕ್ಷಾಂತರ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ.

ಸ್ನೇಹಿತರೇ,
ಆಯುರ್ವೇದದ ಈ ಜನಪ್ರಿಯತೆಯ ಮತ್ತೊಂದು ಪ್ರಮುಖ ಅಂಶವೆಂದರೆ ಆಯುರ್ವೇದ ಮತ್ತು ಯೋಗ ಪ್ರವಾಸೋದ್ಯಮ. ಪ್ರವಾಸೋದ್ಯಮದ ಕೇಂದ್ರವಾಗಿರುವ ಗೋವಾದಂತಹ ರಾಜ್ಯದಲ್ಲಿ, ಆಯುರ್ವೇದ ಮತ್ತು ಪ್ರಕೃತಿಚಿಕಿತ್ಸೆಯನ್ನು ಉತ್ತೇಜಿಸುವ ಮೂಲಕ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಆಯಾಮವನ್ನು ನೀಡಬಹುದು. ಈ ನಿಟ್ಟಿನಲ್ಲಿ ಗೋವಾದ ಅಖಿಲ ಭಾರತ ಆಯುರ್ವೇದ ಸಂಸ್ಥೆಯು ಒಂದು ಪ್ರಮುಖ ಮೈಲುಗಲ್ಲಾಗಲಿದೆ.

ಸ್ನೇಹಿತರೇ,
ಇಂದು, ಭಾರತವು 'ಒಂದು ಭೂಮಿ, ಒಂದು ಆರೋಗ್ಯ' ಎಂಬ ಭವಿಷ್ಯದ ದೃಷ್ಟಿಕೋನವನ್ನು ವಿಶ್ವದ ಮುಂದಿಟ್ಟಿದೆ. 'ಒಂದು ಭೂಮಿ, ಒಂದು ಆರೋಗ್ಯ' ಎಂದರೆ ಆರೋಗ್ಯದ ಸಾರ್ವತ್ರಿಕ ದೃಷ್ಟಿಕೋನವಾಗಿದೆ. ಅದು ಸಮುದ್ರ ಪ್ರಾಣಿಗಳಾಗಲಿ, ಕಾಡುಪ್ರಾಣಿಗಳಾಗಲಿ, ಮನುಷ್ಯರಾಗಲಿ ಅಥವಾ ಸಸ್ಯಗಳಾಗಲಿ, ಎಲ್ಲರ ಆರೋಗ್ಯವು ಪರಸ್ಪರ ಸಂಬಂಧ ಹೊಂದಿದೆ. ಈ ಎಲ್ಲವನ್ನೂ ಪ್ರತ್ಯೇಕವಾಗಿ ನೋಡುವ ಬದಲು ಸಮಗ್ರವಾಗಿ ನೋಡಬೇಕು. ಆಯುರ್ವೇದದ ಈ ಸಮಗ್ರ ದೃಷ್ಟಿಕೋನವು ಭಾರತದ ಸಂಪ್ರದಾಯ ಮತ್ತು ಜೀವನಶೈಲಿಯ ಭಾಗವಾಗಿದೆ. ಗೋವಾದಲ್ಲಿ ನಡೆಯುತ್ತಿರುವ ಈ ವಿಶ್ವ ಆಯುರ್ವೇದ ಸಮ್ಮೇಳನದಲ್ಲಿ ಇಂತಹ ಎಲ್ಲ ಅಂಶಗಳನ್ನು ವಿವರವಾಗಿ ಚರ್ಚಿಸಬೇಕೆಂದು ನಾನು ಬಯಸುತ್ತೇನೆ.  ಆಯುರ್ವೇದ ಮತ್ತು ಆಯುಷ್ ಅನ್ನು ನಾವು ಹೇಗೆ ಸಮಗ್ರವಾಗಿ ಮುಂದಕ್ಕೆ ಕೊಂಡೊಯ್ಯಬಹುದು ಎಂಬುದರ ಬಗ್ಗೆ ಮಾರ್ಗಸೂಚಿಯನ್ನು ಸಿದ್ಧಪಡಿಸಬೇಕು. ಈ ದಿಶೆಯಲ್ಲಿ ನಿಮ್ಮ ಪ್ರಯತ್ನಗಳು ಖಂಡಿತವಾಗಿಯೂ ಪರಿಣಾಮಕಾರಿಯಾಗಿರುತ್ತವೆ ಎಂದು ನನಗೆ ಖಾತ್ರಿಯಿದೆ. ಈ ನಂಬಿಕೆಯೊಂದಿಗೆ, ನಿಮ್ಮೆಲ್ಲರಿಗೂ ಧನ್ಯವಾದಗಳು! ಮತ್ತು ಆಯುಷ್ ಮತ್ತು ಆಯುರ್ವೇದಕ್ಕೆ ಅನೇಕ ಶುಭ ಹಾರೈಕೆಗಳು. ಈ ದಿಶೆಯಲ್ಲಿ ನಿಮ್ಮ ಪ್ರಯತ್ನಗಳು ಖಂಡಿತವಾಗಿಯೂ ಪರಿಣಾಮಕಾರಿಯಾಗಿರುತ್ತವೆ ಎಂದು ನನಗೆ ಖಾತ್ರಿಯಿದೆ. ಈ ನಂಬಿಕೆಯೊಂದಿಗೆ, ನಿಮ್ಮೆಲ್ಲರಿಗೂ ಧನ್ಯವಾದಗಳು! ಮತ್ತು ಆಯುಷ್ ಮತ್ತು ಆಯುರ್ವೇದಕ್ಕೆ ಅನೇಕ ಶುಭ ಹಾರೈಕೆಗಳು.

ಹಕ್ಕು ನಿರಾಕರಣಾ ಹೇಳಿಕೆ:  ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಗಿದೆ.

*****



(Release ID: 1882772) Visitor Counter : 121