ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಯುವಕರು ಭಾರತದ ಅಭಿವೃದ್ಧಿಯ ಚಾಲಕಶಕ್ತಿಯಾಗಿದ್ದರೆ, ಭಾರತವು ವಿಶ್ವದ ಅಭಿವೃದ್ಧಿಯ ಚಾಲಕಶಕ್ತಿಯಾಗಿದೆ - ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್
ಹಿಸಾರ್ ನಲ್ಲಿ ಸಮುದಾಯ ರೇಡಿಯೋ ಕೇಂದ್ರ 90.0 'ಭವ್ಯವಾಣಿ'ಯನ್ನು ಉದ್ಘಾಟಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್
Posted On:
04 DEC 2022 4:41PM by PIB Bengaluru
ಭಾರತವು ವಿಶ್ವದ ಅಭಿವೃದ್ಧಿಗೆ ಚಾಲಕಶಕ್ತಿಯಾಗಿದ್ದು, ಯುವಜನತೆ ಕ್ರಿಯಾಶೀಲ ಮತ್ತು ನಾವೀನ್ಯದೊಂದಿಗೆ, ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಸುದೃಢ ಜಾಲ ರೂಪಿಸಿ, ಕೌಶಲ್ಯ, ಕೌಶಲ್ಯವರ್ಧನೆ ಮತ್ತು ಮರು-ಕೌಶಲ್ಯವನ್ನು ಪಡೆದು ದೇಶದ ಅಭಿವೃದ್ಧಿಯ ಚಾಲಕ ಶಕ್ತಿಯಾಗಬೇಕು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಕರೆ ನೀಡಿದ್ದಾರೆ. ಶಿಕ್ಷಣವು ದೇಶ ಮತ್ತು ಜನರ ಅಭಿವೃದ್ಧಿಯ ಬೆನ್ನೆಲುಬಾಗಿದ್ದು, ಪ್ರತಿಭಾವಂತ ಯುವಜನರು ರಾಷ್ಟ್ರೀಯ ಆಸ್ತಿಯಾಗಿರುವುದರಿಂದ ಅವರು ಕುಟುಂಬ, ದೇಶ ಮತ್ತು ದೇಶವಾಸಿಗಳಿಗೆ ಸಮಾನವಾಗಿ ಸೇವೆ ಸಲ್ಲಿಸುವುದಕ್ಕಾಗಿ ಹೊಸ ಶಿಕ್ಷಣ ನೀತಿ (ಎನ್ಇಪಿ)ಯೊಂದಿಗೆ ಬಹುಶಿಸ್ತೀಯ ವಿಧಾನದ ಮೂಲಕ ಸಮಗ್ರ ಕಲಿಕೆಯ ಅನುಭವಕ್ಕೆ ಒತ್ತು ನೀಡಬೇಕೆಂದರು.
ಭಾರತವು ವಿಶ್ವದ ತೃತೀಯ ನವೋದ್ಯಮ ರಾಷ್ಟ್ರವಾಗಿದೆ ಎಂದು ಅವರು ಹೇಳಿದರು.
ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರಿಂದು ಹಿಸಾರ್ ನ ಓಂ ಸ್ಟರ್ಲಿಂಗ್ ಗ್ಲೋಬಲ್ ಯೂನಿವರ್ಸಿಟಿಯಲ್ಲಿ ಮುಖ್ಯ ಅತಿಥಿಯಾಗಿ ಘಟಿಕೋತ್ಸವ ಭಾಷಣ ಮಾಡಿದರು. ಕ್ರೀಡಾ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಲು ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಕರೆ ನೀಡಿದ ಅವರು, 'ಫಿಟ್ ನೆಸ್ ಕಾ ಡೋಸ್, ಆಧಾ ಗಂಟಾ ರೋಜ್' (ಸುದೃಢತೆಯ ಡೋಸು, ಪ್ರತಿ ನಿತ್ಯ ಅರ್ಧ ತಾಸು) ಎಂಬುದಕ್ಕೆ ಒತ್ತು ನೀಡುವ ಫಿಟ್ ಇಂಡಿಯಾ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯುವಜನತೆ ಸುದೃಢ ಮತ್ತು ಆರೋಗ್ಯಕರವಾಗಿರಬೇಕು ಎಂದು ಪ್ರತಿಪಾದಿಸಿದರು. ಜಿ-20ರ ಭಾರತದ ಅಧ್ಯಕ್ಷತೆಯಲ್ಲಿ ಯುವ ಸಮಾವೇಶವೂ ಕಾರ್ಯಕ್ರಮಗಳ ಭಾಗವಾಗಿರುತ್ತದೆ ಎಂದು ಹೇಳಿದರು.
ತಮ್ಮ ತಮ್ಮ ಕ್ಷೇತ್ರದಲ್ಲಿ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಹೆಸರು ತಂದು ಕೊಡುತ್ತಿರುವ ಹರಿಯಾಣದ ರೈತರು, ಕ್ರೀಡಾಪಟುಗಳು, ಬಾಲಕಿಯರನ್ನು ಅವರು ಶ್ಲಾಘಿಸಿದರು.
ವಿಶ್ವವಿದ್ಯಾಲಯದ ಪ್ರಪ್ರಥಮ ಘಟಿಕೋತ್ಸವದಲ್ಲಿಂದು ಪದವಿ ಪಡೆದ ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯವನ್ನು ಅವರು ಅಭಿನಂದಿಸಿದರು. ದೇಶದಲ್ಲಿ 750 'ಯುವ ಸಂವಾದ'ವನ್ನು ಆಯೋಜಿಸಲಾಗುತ್ತಿದೆ ಎಂದು ಶ್ರೀ ಅನುರಾಗ್ ಸಿಂಗ್ ಠಾಕೂರ್ ಹೇಳಿದರು.
ಘಟಿಕೋತ್ಸವ ಸಮಾರಂಭದಲ್ಲಿ 815 ವಿದ್ಯಾರ್ಥಿಗಳಿಗೆ ಪದವಿ, ಡಿಪ್ಲೊಮಾ ನೀಡಲಾಯಿತು. 15 ಪದವಿ ಕೋರ್ಸ್ ಗಳ 184 ವಿದ್ಯಾರ್ಥಿಗಳು ಮತ್ತು 59 ಸ್ನಾತಕೋತ್ತರ ಕೋರ್ಸ್ ಗಳ 426 ವಿದ್ಯಾರ್ಥಿಗಳು ಅನುಕ್ರಮವಾಗಿ ಪದವಿಗಳನ್ನು ಪಡೆದರು. ಇದರ ಜೊತೆಗೆ, 14 ಡಿಪ್ಲೊಮಾ ಕೋರ್ಸ್ ಗಳ 178 ವಿದ್ಯಾರ್ಥಿಗಳು ಡಿಪ್ಲೊಮಾ ಪಡೆದರು. ವಿವಿಧ ವಿಭಾಗಗಳ 3 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಲಾಯಿತು ಮತ್ತು ಅಧ್ಯಯನದಲ್ಲಿ ಅತ್ಯುತ್ತಮ ಸಾಧನೆಗಾಗಿ 8 ವಿದ್ಯಾರ್ಥಿಗಳಿಗೆ ಮೆರಿಟ್ ಪ್ರಮಾಣಪತ್ರಗಳನ್ನು ನೀಡಲಾಯಿತು.
ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಹಿಸಾರ್ ನ ಓಂ ಸ್ಟರ್ಲಿಂಗ್ ಗ್ಲೋಬಲ್ ಯೂನಿವರ್ಸಿಟಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸ್ಥಾಪಿಸಲಾಗಿರುವ ಸಮುದಾಯ ರೇಡಿಯೋ ಕೇಂದ್ರ 90.0 'ಭವ್ಯವಾಣಿ'ಯನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ಮಾನ್ಯ ಕೇಂದ್ರ ಸಚಿವರು ಮಾಡಿದ ಭಾಷಣವನ್ನು ಕೇಂದ್ರ ಪ್ರಸಾರ ಮಾಡಿತು. ಹಿಸಾರ್ ನ ಲೋಕಸಭಾ ಸಂಸದ ಶ್ರೀ ಬ್ರಿಜೇಂದ್ರ ಸಿಂಗ್ ಮತ್ತು ಹರಿಯಾಣದ ನಗರ ಸ್ಥಳೀಯ ಸಂಸ್ಥೆಗಳ ಸಚಿವ ಡಾ. ಕಮಲ್ ಗುಪ್ತಾ ಮತ್ತು ಇತರ ಗಣ್ಯರು ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.
ಕೇಂದ್ರ ಸಚಿವರು ದೂರದರ್ಶನ ಕೇಂದ್ರ ಮತ್ತು ಹಿಸಾರ್ ನ ಆಕಾಶವಾಣಿ ಕೇಂದ್ರಗಳಿಗೆ ಭೇಟಿ ನೀಡಿ ಅವುಗಳ ಕಾರ್ಯನಿರ್ವಹಣೆಯನ್ನು ಪರಾಮರ್ಶಿಸಿದರು.
****
(Release ID: 1880848)
Visitor Counter : 170