ಕೃಷಿ ಸಚಿವಾಲಯ
azadi ka amrit mahotsav

ಇತ್ತೀಚಿನ ಹವಾಮಾನ ಬಿಕ್ಕಟ್ಟು ಮತ್ತು ಕ್ಷಿಪ್ರ ತಾಂತ್ರಿಕ ಅಭಿವೃದ್ಧಿಯ ಫಲವಾಗಿ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಲ್ಲಿ(ಪಿ.ಎಂ.ಎಫ್.ಬಿ.ವೈ.) ರೈತರ ಪರವಾದ ಬದಲಾವಣೆಗಳನ್ನು ಮಾಡಲು ಕೇಂದ್ರ ಕೃಷಿ ಸಚಿವಾಲಯ ಮುಕ್ತವಾಗಿದೆ



ಹೊಸ ಸವಾಲುಗಳನ್ನು ಎದುರಿಸಲು 2016 ರ ನಂತರ ಯೋಜನೆಯಲ್ಲಿ ಹಲವಾರು ಪ್ರಮುಖ ಪರಿಷ್ಕರಣೆ ಕ್ರಮಗಳನ್ನು ಮಾಡಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಕಾರ್ಯದರ್ಶಿ ಅವರು ಹೇಳಿದರು

ಕ್ಷಿಪ್ರ ಆವಿಷ್ಕಾರಗಳ ಅಧುನಿಕ ಯುಗದಲ್ಲಿ, ಸರಿಯಾದ ಕೃಷಿಯೊಂದಿಗೆ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯ( ಪಿ.ಎಂ.ಎಫ್.ಬಿ.ವೈ.) ವ್ಯಾಪ್ತಿಯನ್ನು ಮತ್ತು ಕಾರ್ಯಾಚರಣೆಗಳನ್ನು ಹೆಚ್ಚಿಸುವಲ್ಲಿ ಡಿಜಿಟಲೀಕರಣ ಮತ್ತು ತಂತ್ರಜ್ಞಾನವು ಮಹತ್ವದ ಪಾತ್ರವನ್ನು ವಹಿಸುತ್ತಿದೆ: ಶ್ರೀ ಅಹುಜಾ

Posted On: 24 NOV 2022 11:10AM by PIB Bengaluru

ಇತ್ತೀಚಿನ ಹವಾಮಾನ ಬಿಕ್ಕಟ್ಟು ಮತ್ತು ಕ್ಷಿಪ್ರ ತಾಂತ್ರಿಕ ಅಭಿವೃದ್ಧಿಯ ಫಲವಾಗಿ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಲ್ಲಿ (ಪಿ.ಎಂ.ಎಫ್.ಬಿ.ವೈ.) ರೈತರ ಪರವಾದ ಬದಲಾವಣೆಗಳನ್ನು ಮಾಡಲು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಮುಕ್ತವಾಗಿದೆ.

“ಕೃಷಿಯು ಹವಾಮಾನ ವೈಪರೀತ್ಯಗಳಿಗೆ ನೇರವಾಗಿ ಒಡ್ಡಿಕೊಳ್ಳುವುದರಿಂದ, ದೇಶದ ದುರ್ಬಲ ರೈತ ಸಮುದಾಯವನ್ನು ಪ್ರಕೃತಿಯ ಬದಲಾವಣೆಗಳಿಂದ ರಕ್ಷಿಸುವುದು ಮುಖ್ಯವಾಗಿದೆ ಮತ್ತು ನಿರ್ಣಾಯಕವಾಗಿದೆ. ಪರಿಣಾಮವಾಗಿ, ಬೆಳೆ ವಿಮೆಯ ಬೇಡಿಕೆಯು ಹೆಚ್ಚಾಗುವ ಸಾಧ್ಯತೆಯಿದೆ ಮತ್ತು ಆದ್ದರಿಂದ, ಭಾರತದಲ್ಲಿನ ರೈತರಿಗೆ ಸಾಕಷ್ಟು ವಿಸ್ತಾರದ ವಿಮಾ ರಕ್ಷಣೆಯನ್ನು ಒದಗಿಸಲು ನಾವು ಬೆಳೆ ಮತ್ತು ಇತರ ರೀತಿಯ ಗ್ರಾಮೀಣ/ಕೃಷಿ ವಿಮಾ ಉತ್ಪನ್ನಗಳ ಮೇಲೆ ಹೆಚ್ಚು ಒತ್ತು ನೀಡಬೇಕಾಗಿದೆ“ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖಾ ಕಾರ್ಯದರ್ಶಿ ಶ್ರೀ ಮನೋಜ್ ಅಹುಜಾ ಅವರು ಹೇಳಿದರು.

“2016 ರಲ್ಲಿ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ(ಪಿ.ಎಂ.ಎಫ್.ಬಿ.ವೈ.) ಪ್ರಾರಂಭವಾದ ನಂತರ, ಈ ಯೋಜನೆಯಲ್ಲಿ ಬಿತ್ತನೆ ಪೂರ್ವದಿಂದ ಸುಗ್ಗಿಯ ನಂತರದ ಅವಧಿಯವರೆಗೆ ಎಲ್ಲಾ ಬೆಳೆಗಳು ಮತ್ತು ಬಳೆಗಳ ಅಪಾಯಗಳ ಸಮಗ್ರ ವ್ಯಾಪ್ತಿಯೊಳಗಡೆ ತರಲಾಯಿತು. ಮತ್ತು ಈ ಹಿಂದಿನ ಯೋಜನೆಗಳಾದ ರಾಷ್ಟ್ರೀಯ ಕೃಷಿ ವಿಮಾ ಯೋಜನೆ (ಎನ್.ಎ.ಐ.ಎಸ್.) ಮತ್ತು ಮಾರ್ಪಡಿಸಿದ ಎನ್.ಎ.ಐ.ಎಸ್ ಯೋಜನೆಗಳಲ್ಲಿ ಈ ವ್ಯಾಪ್ತಿ ಪರಿಧಿ ಸೇರಿಸಲಾಗಿಲ್ಲ” ಎಂದು ಶ್ರೀ ಅಹುಜಾ ಅವರು ಹೇಳಿದರು.

2018 ರಲ್ಲಿ ಮಾಡಿದ ಪರಿಷ್ಕರಣೆಯಲ್ಲಿ ಹಲವಾರು ಹೊಸ ಅಗತ್ಯ ಮೂಲಭೂತ ವೈಶಿಷ್ಟ್ಯಗಳನ್ನು ಹಿಂದಿನ ಯೋಜನೆಗೆ ಸೇರಿಸಲಾಯಿತು, ಉದಾಹರಣೆಗೆ ಯೋಜನೆಯನ್ನು ಇನ್ನಷ್ಟು ರೈತ ಸ್ನೇಹಿಯನ್ನಾಗಿ ಮಾಡುವ ನಿಟ್ಟಿನಲ್ಲಿ 72ಗಂಟೆಯ ನಂತರ ಸ್ಥಳೀಯ ವಿಪತ್ತುಗಳ ಸಂದರ್ಭದಲ್ಲಿ ಹಾನಿಯ ಅವಶೇಷಗಳು ಕಣ್ಮರೆಯಾಗುತ್ತವೆ ಅಥವಾ ಕಳೆದುಹೋಗುತ್ತವೆ ಎಂಬ ಕಾರಣಕ್ಕಾಗಿ, ರೈತರಿಗೆ ಬೆಳೆ ನಷ್ಟದ ಸೂಚನೆ ನೀಡುವ ಕಾಲಾವಕಾಶ ಅವಧಿಯನ್ನು 48 ಗಂಟೆಗಳಿಂದ 72 ಗಂಟೆಗಳವರೆಗೆ ಹೆಚ್ಚಿಸಲಾಯಿತು, ಅಂತೆಯೇ, 2020ರಲ್ಲಿ ಅದರ ಪುನರುವಿಮರ್ಶನ ನಂತರ, ರೈತರ ಸ್ವಯಂಪ್ರೇರಿತ ದಾಖಲಾತಿಯ ಅವಕಾಶವನ್ನು ಯೋಜನೆಯಲ್ಲಿ ಸೇರಿಸಲಾಯಿತು, ಮತ್ತು ವನ್ಯಜೀವಿ ದಾಳಿಗೆ ಹೆಚ್ಚುವರಿ ವ್ಯಾಪ್ತಿಯನ್ನು ಕೂಡಾ ಸೇರಿಸಲಾಯಿತು.

“ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ(ಪಿ.ಎಂ.ಎಫ್.ಬಿ.ವೈ.) ರೈತರ ಬೆಳೆ ವಿಮೆಯ ವ್ಯವಸ್ಥೆಯನ್ನು ಸುಗಮಗೊಳಿಸುತ್ತಿದೆ ಹಾಗೂ ಈ ಸುಧಾರಣೆಯ ದಾರಿಯಲ್ಲಿ ಇನ್ನೂ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ ಮತ್ತು ಪರಿಷ್ಕೃತ ಯೋಜನೆಯಲ್ಲಿ ಮಾಡಲಾದ ಪ್ರಮುಖ ಬದಲಾವಣೆಗಳು ಯೋಜನೆಯಡಿಯಲ್ಲಿ ಅಪಾಯಗಳ ವ್ಯಾಪ್ತಿಗೆ ರಾಜ್ಯಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತಿದೆ ಮತ್ತು ರೈತರ ಪಾಲಿನ ಬಹುಕಾಲದ ಬೇಡಿಕೆಯ ಮನ್ನಣೆಯಾಗಿ ಸ್ವಯಂಪ್ರೇರಿತ ಯೋಜನೆಯನ್ನಾಗಿ ಕೂಡಾ ಮಾಡಲಾಗಿದೆ” ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖಾ ಕಾರ್ಯದರ್ಶಿ ಶ್ರೀ ಮನೋಜ್ ಅಹುಜಾ ಅವರು ಹೇಳಿದರು.

“ಹಣಕಾಸಿನ ಅಡಚಣೆಗಳಿಂದಾಗಿ ಕೆಲವು ರಾಜ್ಯಗಳು ಪ್ರಾಥಮಿಕವಾಗಿ ತಮ್ಮ ಪ್ರೀಮಿಯಂ ಸಬ್ಸಿಡಿಯನ್ನು ಪಾವತಿಸಲು ಅಸಮರ್ಥವಾಗಿದ್ದು, ಹಾಗಾಗಿ ಈ ಯೋಜನೆಯಿಂದ ಹೊರಗುಳಿದಿವೆ ಮತ್ತು ಅವರ ಸಮಸ್ಯೆಗಳ ಪರಿಹಾರದ ನಂತರ, ಆಂಧ್ರಪ್ರದೇಶವು ಜುಲೈ 2022 ರಿಂದ ಯೋಜನೆಗೆ ಮರಳಿ ಸೇರಿಕೊಂಡಿದೆ. ನಂತರ ಮತ್ತು ಇತರ ರಾಜ್ಯಗಳು ತಮ್ಮ ರೈತರಿಗೆ ಸಮಗ್ರ ವ್ಯಾಪ್ತಿಯನ್ನು ಒದಗಿಸಲು ಯೋಜನೆಗೆ ಸೇರಲು ಮನಸ್ಸು ಮಾಡಿವೆ ಹಾಗೂ  ಪ್ರಕ್ರಿಯೆ ಪರಿಗಣಿಸುತ್ತಿವೆ ಎಂದು ನಿರೀಕ್ಷಿಸಲಾಗಿದೆ. ಹೆಚ್ಚಿನ ರಾಜ್ಯಗಳು ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ(ಪಿ.ಎಂ.ಎಫ್.ಬಿ.ವೈ.) ಬದಲಿಗೆ ಪರ್ಯಾಯ ಪರಿಹಾರ ಮಾದರಿಗಳನ್ನು ಆರಿಸಿಕೊಂಡಿವೆ ಎಂಬುದನ್ನು ಗಮನಿಸಬಹುದಾಗಿದೆ. ಆದರೆ, ಅವುಗಳೆಲ್ಲಾ ರೈತರಿಗೆ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ (ಪಿ.ಎಂ.ಎಫ್.ಬಿ.ವೈ.) ಯಂತಹ ಸಮಗ್ರ ಅಪಾಯದ ವ್ಯಾಪ್ತಿಯನ್ನು ಒದಗಿಸುವುದಿಲ್ಲ” ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖಾ ಕಾರ್ಯದರ್ಶಿ ಶ್ರೀ ಮನೋಜ್ ಅಹುಜಾ ಅವರು ಹೇಳಿದರು.

“ಇಂದಿನ ಕ್ಷಿಪ್ರ ಆವಿಷ್ಕಾರಗಳ ಯುಗದಲ್ಲಿ, ನಿಖರವಾದ ಹಾಗೂ ಸರಿಯಾದ ಕೃಷಿ ಮತ್ತು ಬೆಳೆಯೊಂದಿಗೆ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ(ಪಿ.ಎಂ.ಎಫ್.ಬಿ.ವೈ.) ವ್ಯಾಪ್ತಿಯನ್ನು ಮತ್ತು ಕಾರ್ಯಾಚರಣೆಗಳನ್ನು ಹೆಚ್ಚಿಸುವಲ್ಲಿ ಡಿಜಿಟಲೀಕರಣ ಮತ್ತು ತಂತ್ರಜ್ಞಾನವು ಮಹತ್ವದ ಪಾತ್ರವನ್ನು ವಹಿಸುತ್ತಿದೆ. ಕೃಷಿ-ತಂತ್ರಜ್ಞಾನ ಮತ್ತು ಗ್ರಾಮೀಣ ವಿಮೆಯ ಸಂಯೋಜನೆಯು ರೈತರ ಆರ್ಥಿಕ ಸೇರ್ಪಡೆಗಾಗಿ ವಿಶೇಷ ಸೂತ್ರವಾಗಬಹುದು, ಹಾಗೂ ರೈತರಲ್ಲಿ ಯೋಜನೆಯಲ್ಲಿ ನಂಬಿಕೆಯನ್ನು ಇನ್ನೂ ಸಕ್ರಿಯಗೊಳಿಸಬಹುದು. ರೈತರಪಾಲಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಇತ್ತೀಚೆಗೆ ಪರಿಚಯಿಸಲಾದ ಹವಾಮಾನ ಮಾಹಿತಿ ಮತ್ತು ನೆಟ್‌ವರ್ಕ್ ಡೇಟಾ ಸಿಸ್ಟಮ್ಸ್ (ವಿಂಡ್ಸ್), ತಂತ್ರಜ್ಞಾನದ ಆಧಾರದ ಮೇಲೆ ಇಳುವರಿ ಅಂದಾಜು ವ್ಯವಸ್ಥೆ (ಯೆಸ್ – ಟೆಕ್ ), ಅವಲೋಕನಗಳ ನೈಜ ಸಮಯದ ಸಂಗ್ರಹ ಮತ್ತು ಬೆಳೆಗಳ ಛಾಯಾಚಿತ್ರಗಳು (ಕ್ರೋಪಿಕ್) ಇವುಗಳು ಈ ಯೋಜನೆಯ ಅಡಿಯಲ್ಲಿ ತೆಗೆದುಕೊಳ್ಳಲಾದ ಕೆಲವು ಪ್ರಮುಖ ಕ್ರಮಗಳಾಗಿವೆ. ದಕ್ಷತೆ ಮತ್ತು ಪಾರದರ್ಶಕತೆ, ರೈತರ ಕುಂದುಕೊರತೆಗಳನ್ನು ಸಕಾಲಿಕವಾಗಿ (ನೈಜ) ಸಮಯದಲ್ಲಿ ಪರಿಹರಿಸಲು, ಛತ್ತೀಸ್‌ಗಢದಲ್ಲಿ ಪ್ರಾರಂಭವಾದ ಸಂಯೋಜಿತ ಸಹಾಯವಾಣಿ ವ್ಯವಸ್ಥೆಯು ಈಗ ಬೀಟಾ ಪರೀಕ್ಷಾ ಹಂತದಲ್ಲಿದೆ” ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖಾ ಕಾರ್ಯದರ್ಶಿ ಶ್ರೀ ಮನೋಜ್ ಅಹುಜಾ ಅವರು ಹೇಳಿದರು.

“ವಿಮಾ ಯೋಜನೆಯ ಪ್ರೀಮಿಯಂನಲ್ಲಿ ಕೇಂದ್ರ ಮತ್ತು ರಾಜ್ಯಗಳ ಕೊಡುಗೆಯ ಬಗ್ಗೆ ವಿವರವಾಗಿ ಮಾತನಾಡಿದ ಶ್ರೀ ಅಹುಜಾ ಅವರು, ಕಳೆದ 6 ವರ್ಷಗಳಲ್ಲಿ ಕೇವಲ ರೂ. 25,186 ಕೋಟಿಗಳನ್ನು ರೈತರು ಪಾವತಿಸಿದ್ದಾರೆ ಮತ್ತು ಅವರ ವಿಮಾ ಹಕ್ಕುಗಳ ಜೊತೆಗೆ ಈ ಯೋಜನೆಯಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉಳಿದ ಪ್ರೀಮಿಯಂನ ಹೆಚ್ಚಿನ ಮೊತ್ತವಾಗಿ ರೂ.1,25,662 ಕೋಟಿ ಹಣವನ್ನು ಭರಿಸಿವೆ. ಕಳೆದ 6 ವರ್ಷಗಳಲ್ಲಿ ಈ ಯೋಜನೆಯ ಸ್ವೀಕಾರಾರ್ಹತೆಯು ರೈತರಲ್ಲಿ ಹೆಚ್ಚಾಗಿದೆ ಎಂಬುದನ್ನು ಗಮನಿಸಬೇಕು, 2016 ರಲ್ಲಿ ಯೋಜನೆಯನ್ನು ಪ್ರಾರಂಭಿಸಿದಾಗಿನಿಂದ ಸಾಲ ಪಡೆಯದ ರೈತರು, ಅಂಚಿನಲ್ಲಿರುವ ರೈತರು ಮತ್ತು ಸಣ್ಣ ರೈತರ ಪಾಲು 282% ರಷ್ಟು ಹೆಚ್ಚಾಗಿದೆ” ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖಾ ಕಾರ್ಯದರ್ಶಿ ಹೇಳಿದರು.

“2022 ರಲ್ಲಿ, ಮಹಾರಾಷ್ಟ್ರ, ಹರಿಯಾಣ ಮತ್ತು ಪಂಜಾಬ್‌ನಿಂದ ಅಧಿಕ ಮಳೆಯ ಹಲವಾರು ವರದಿಗಳು ಬಂದಿದ್ದರೆ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್ ಮಳೆಯ ಕೊರತೆಯ ವರದಿ ಮಾಡಿ, ಅಂತಿಮವಾಗಿ ಭತ್ತ, ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳಂತಹ ಬೆಳೆಗಳನ್ನು ಹಾನಿಗೊಳಿಸಿದವು. ಗುಡುಗು, ಚಂಡಮಾರುತಗಳು, ಬರ, ಉಷ್ಣ(ಶಾಖ)ದ ಅಲೆಗಳು, ಮಿಂಚು, ಪ್ರವಾಹಗಳು ಮತ್ತು ಭೂಕುಸಿತಗಳು ಸಹ ಇತ್ತೀಚೆಗೆ ಹೆಚ್ಚಿವೆ, 2022 ರ ಮೊದಲ 9 ತಿಂಗಳುಗಳಲ್ಲಿ ಭಾರತದಲ್ಲಿ ಬಹುತೇಕ ಪ್ರತಿದಿನ ಇಂತಹ ಅನಿಶ್ಚಿತತೆಗಳ ನಿದರ್ಶನಗಳು ಸಂಭವಿಸುತ್ತಿವೆ ಎಂದು ಹಲವಾರು ವಿಜ್ಞಾನ ಮತ್ತು ಪರಿಸರ ದಿನಪತ್ರಿಕೆಗಳು ಮತ್ತು ಜರ್ನಲ್‌ ಗಳಲ್ಲಿ ಮಾಹಿತಿ ವರದಿಯಾಗಿವೆ” ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖಾ ಕಾರ್ಯದರ್ಶಿ ಶ್ರೀ ಮನೋಜ್ ಅಹುಜಾ ಅವರು ಹೇಳಿದರು.  

“ಮುಂದಿನ 10 ವರ್ಷಗಳ ಅವಧಿಯಲ್ಲಿ ಹವಾಮಾನದ ವಿಪರೀತ ವೈಪರೀತ್ಯವು 2 ನೇ ಅತಿ ದೊಡ್ಡ ಅಪಾಯವಾಗಲಿದೆ ಎಂದು ವರ್ಲ್ಡ್ ಎಕನಾಮಿಕ್ ಫೋರಂನ ಜಾಗತಿಕ ಅಪಾಯದ ವರದಿ 2022 ರಲ್ಲಿ ವಿವರಿಲಾಗಿದೆ ಮತ್ತು ಹವಾಮಾನ ಮಾದರಿಗಳಲ್ಲಿನ ಇಂತಹ ಹಠಾತ್ ಬದಲಾವಣೆಗಳು ನಮ್ಮ ದೇಶದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ.  ವಿಶ್ವದ 2ನೇ ಅತಿ ಹೆಚ್ಚು ಜನಸಂಖ್ಯೆಯ ದೇಶವಾದ ಭಾರತಕ್ಕೆ ಆಹಾರ ನೀಡುವ ಜವಾಬ್ದಾರಿ ಕೇವಲ ಕೃಷಿ ಸಮುದಾಯದ ಹೆಗಲ ಮೇಲಿದೆ. ಆದ್ದರಿಂದ ರೈತರಿಗೆ ಅವರ ಆರ್ಥಿಕ ಸ್ಥಿತಿಯನ್ನು ರಕ್ಷಿಸಲು ಮತ್ತು ಕೃಷಿಯನ್ನು ಮುಂದುವರಿಸಲು ಅವರಿಗೆ ಪ್ರೋತ್ಸಾಹಿಸಲು ಮತ್ತು ದೇಶಕ್ಕೆ ಮಾತ್ರವಲ್ಲದೆ ಜಗತ್ತಿಗೆ ಆಹಾರ ಭದ್ರತೆಯನ್ನು ಒದಗಿಸಲು ಅವರಿಗೆ ಸುರಕ್ಷತಾ ಜಾಲವನ್ನು ಒದಗಿಸುವ ಕಾಲವಿಂದು ಸನ್ನಿಹಿತವಾಗಿದೆ” ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖಾ ಕಾರ್ಯದರ್ಶಿ ಶ್ರೀ ಮನೋಜ್ ಅಹುಜಾ ಅವರು ಹೇಳಿದರು.

ರೈತರ ದಾಖಲಾತಿಗಳ ವಿಷಯದಲ್ಲಿ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ(ಪಿ.ಎಂ.ಎಫ್.ಬಿ.ವೈ.) ಪ್ರಸ್ತುತ ಪ್ರತಿ ವರ್ಷಂಪ್ರತಿ ಸರಾಸರಿ 5.5 ಕೋಟಿ ಅರ್ಜಿಗಳನ್ನು ಸ್ವೀಕರಿಸುವ ಮೂಲಕ ವಿಶ್ವದ ಅತಿದೊಡ್ಡ ಬೆಳೆ ವಿಮಾ ಯೋಜನೆಯಾಗಿದೆ ಮತ್ತು ಸ್ವೀಕರಿಸಿದ ಪ್ರೀಮಿಯಂ ವಿಷಯದಲ್ಲಿ ವಿಶ್ವದ ಮೂರನೇ ಅತಿದೊಡ್ಡ ವಿಮಾ ಯೋಜನೆಯಾಗಿದೆ. ಈ ಯೋಜನೆಯು ರೈತರ ಮೇಲೆ ಕನಿಷ್ಠ ಆರ್ಥಿಕ ಹೊರೆಯ ಭರವಸೆ ನೀಡುತ್ತದೆ, ರೈತರು ಹಿಂಗಾರು (ರಬಿ) ಬೇಸಾಯ ಮತ್ತು ಮುಂಗಾರು (ಖರೀಫ್) ಬೇಸಾಯ ಋತುವಿನಲ್ಲಿ ಕ್ರಮವಾಗಿ ಒಟ್ಟು ಪ್ರೀಮಿಯಂನ 1.5% ಮತ್ತು 2% ಅನ್ನು ಮಾತ್ರ ಪಾವತಿಸುತ್ತಾರೆ, ಉಳಿದ ಹೆಚ್ಚಿನ ಪ್ರೀಮಿಯಂ ಅನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭರಿಸುತ್ತವೆ. ಇದರ ಅನುಷ್ಠಾನದ ಕಳೆದ 6 ವರ್ಷಗಳಲ್ಲಿ,  31ನೇ ಅಕ್ಟೋಬರ್ 2022 ರಂತೆ ಲಭ್ಯ ಮಾಹಿತಿ ಪ್ರಕಾರ, ರೈತರು ರೂ 25,186/- ಕೋಟಿಗಳ ಒಟ್ಟು ಪ್ರೀಮಿಯಂ ಪಾವತಿಸಿದ್ದಾರೆ ಮತ್ತು ರೂ. 1,25,662/- ಕೋಟಿಗಳ ಮೊತ್ತದ ಕ್ಲೈಮ್‌ ಮೊತ್ತಗಳನ್ನು ಸ್ವೀಕರಿಸಿದ್ದಾರೆ* 2016 ರಲ್ಲಿ ಯೋಜನೆ ಪ್ರಾರಂಭವಾದಾಗಿನಿಂದ ಸಾಲ ಪಡೆಯದ, ಕಷ್ಟದ ಅಂಚಿನಲ್ಲಿರುವ ಮತ್ತು ಸಣ್ಣ ರೈತರ ಪಾಲು 282% ರಷ್ಟು ಹೆಚ್ಚಾಗಿದೆ ಎಂಬ ಅಂಶದಿಂದ ರೈತರಲ್ಲಿ ಯೋಜನೆಯ ವಿಶ್ವಾಸರ್ಹತೆ ಮತ್ತು ಸ್ವೀಕಾರಾರ್ಹತೆಯ ಹೆಚ್ಚಳವನ್ನು ಕಂಡುಹಿಡಿಯಬಹುದು.     

ಹವಾಮಾನ ವೈಪರೀತ್ಯಗಳಿಂದ ಹಾನಿಗೊಳಗಾದ 2017, 2018 ಮತ್ತು 2019 ರ ಅತಿ ಪ್ರಯಾಸಕರ ಋತುಗಳ ಸಂದರ್ಭದಲ್ಲಿ, ಈ ಯೋಜನೆಯು ರೈತರ ಜೀವನೋಪಾಯವನ್ನು ಭದ್ರಪಡಿಸುವಲ್ಲಿ ನಿರ್ಣಾಯಕ ಅಂಶವಾಗಿ ಸಾಬೀತಾಯಿತು, ಇದರಲ್ಲಿ ಗಮನಾರ್ಹ ವಿಷಯವೇನೆಂದರೆ, ಹಲವಾರು ರಾಜ್ಯಗಳಲ್ಲಿ ಕ್ಲೈಮ್‌ ಗಳು ಪಾವತಿಸಿದ ಅನುಪಾತವು ಸಂಗ್ರಹಿಸಿದ ಒಟ್ಟು ಪ್ರೀಮಿಯಂನ ವಿರುದ್ಧ ಸರಾಸರಿ 100% ಕ್ಕಿಂತ ಹೆಚ್ಚುಪಾಲಾಗಿದೆ. ಉದಾಹರಣೆಗೆ, ಛತ್ತೀಸ್‌ಗಢ (2017), ಒಡಿಶಾ (2017), ತಮಿಳುನಾಡು (2018), ಜಾರ್ಖಂಡ್ (2019) ರಾಜ್ಯಗಳು ಒಟ್ಟು ಪ್ರೀಮಿಯಂ ವಿರುದ್ಧ 384%, 222%, 163% ಮತ್ತು 159% ರಷ್ಟು ಕ್ಲೈಮ್‌ಗಳ ಅನುಪಾತವನ್ನು ಪಡೆದಿವೆ.  

******
 


(Release ID: 1878700) Visitor Counter : 172