ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಇಂಡೋನೇಷ್ಯಾದ ಬಾಲಿಯಲ್ಲಿ ಭಾರತೀಯ ಸಮುದಾಯ ಮತ್ತು ʻಫ್ರೆಂಡ್ಸ್‌ ಆಫ್‌ ಇಂಡಿಯಾʼ ಜೊತೆ ಪ್ರಧಾನಮಂತ್ರಿಯವರ ಸಂವಾದ 

Posted On: 15 NOV 2022 4:28PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ನವೆಂಬರ್ 15ರಂದು ಇಂಡೋನೇಷ್ಯಾದ ಬಾಲಿಯಲ್ಲಿ 800ಕ್ಕೂ ಹೆಚ್ಚು ಭಾರತೀಯ ವಲಸಿಗರು ಮತ್ತು `ಫ್ರೆಂಡ್ಸ್ ಆಫ್ ಇಂಡಿಯಾ’ ಸದಸ್ಯರನ್ನುದ್ದೇಶಿಸಿ ಮಾತನಾಡಿದರು. ಜೊತೆಗೆ ಅವರೊಂದಿಗೆ ಸಂವಾದ ನಡೆಸಿದರು. ಇಂಡೋನೇಷ್ಯಾದ ಮೂಲೆಮೂಲೆಗಳಿಂದ ಭಾರಿ ಸಂಖ್ಯೆಯ ಮತ್ತು ವೈವಿಧ್ಯಮಯ ಜನಸಮೂಹವು ಕಾರ್ಯಕ್ರಮದಲ್ಲಿ ಭಾಗಿಯಾಯಿತು. 
 
ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ ಭಾರತ ಮತ್ತು ಇಂಡೋನೇಷ್ಯಾ ನಡುವಿನ ನಿಕಟ ಸಾಂಸ್ಕೃತಿಕ ಮತ್ತು ನಾಗರೀಕ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲಿದರು. ಉಭಯ ದೇಶಗಳ ನಡುವಿನ ನಿರಂತರ ಸಾಂಸ್ಕೃತಿಕ ಮತ್ತು ವಾಣಿಜ್ಯ ಸಂಪರ್ಕವನ್ನು ಒತ್ತಿ ಹೇಳಲು "ಬಾಲಿ ಜಾತ್ರಾ" ಎಂಬ ಹಳೆಯ ಸಂಪ್ರದಾಯವನ್ನು ಅವರು ಉಲ್ಲೇಖಿಸಿದರು. ವಿವಿಧ ಕ್ಷೇತ್ರಗಳಲ್ಲಿ ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸಾಮ್ಯತೆಗಳನ್ನು ಅವರು ವಿಶೇಷವಾಗಿ ಪ್ರಸ್ತಾಪಿಸಿದರು. 
 
ಕಠಿಣ ಪರಿಶ್ರಮ ಮತ್ತು ತಮ್ಮ ದತ್ತು ತಾಯ್ನಾಡಿಗಾಗಿ ಸಮರ್ಪಣೆಯ ಮೂಲಕ ವಿದೇಶಗಳಲ್ಲಿ ಭಾರತದ ಘನತೆಯನ್ನು ಹೆಚ್ಚಿಸಿದ್ದಕ್ಕಾಗಿ ಸಮುದಾಯದ ಸದಸ್ಯರನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಭಾರತ-ಇಂಡೋನೇಷ್ಯಾ ಬಾಂಧವ್ಯದ ಧನಾತ್ಮಕ ಹಾದಿ ಮತ್ತು ಅದರ ಬಲವರ್ಧನೆಯಲ್ಲಿ ಭಾರತೀಯ ಸಮುದಾಯದ ಸದಸ್ಯರು ವಹಿಸಿದ ನಿರ್ಣಾಯಕ ಪಾತ್ರದ ಬಗ್ಗೆಯೂ ಅವರು ಮಾತನಾಡಿದರು. 
 
ಡಿಜಿಟಲ್ ತಂತ್ರಜ್ಞಾನ, ಹಣಕಾಸು, ಆರೋಗ್ಯ, ದೂರಸಂಪರ್ಕ ಮತ್ತು ಬಾಹ್ಯಾಕಾಶದಂತಹ ವಿವಿಧ ಕ್ಷೇತ್ರಗಳಲ್ಲಿ ಭಾರತದ ಬೆಳವಣಿಗೆಯ ಯಶೋಗಾಥೆ, ದೇಶದ ಸಾಧನೆಗಳು ಮತ್ತು ಪ್ರಚಂಡ ದಾಪುಗಾಲುಗಳನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಅಭಿವೃದ್ಧಿಗಾಗಿ ಭಾರತದ ಮಾರ್ಗಸೂಚಿಯು ವಿಶ್ವದ ರಾಜಕೀಯ ಮತ್ತು ಆರ್ಥಿಕ ಆಕಾಂಕ್ಷೆಗಳನ್ನು ಒಳಗೊಂಡಿದೆ. ಸ್ವಾವಲಂಬಿ ಭಾರತದ ದೃಷ್ಟಿಕೋನವು ಜಾಗತಿಕ ಒಳಿತಿನ ಮನೋಭಾವವನ್ನು ಸಾಕಾರಗೊಳಿಸುತ್ತದೆ ಎಂದು ಅವರು ಹೇಳಿದರು. 

2023ರ ಜನವರಿ 8ರಿಂದ 10ರವರೆಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯಲಿರುವ ಮುಂದಿನ ʻಪ್ರವಾಸಿ ಭಾರತೀಯ ದಿವಸ್ ಸಮಾವೇಶʼ ಮತ್ತು ನಂತರ ಗುಜರಾತ್‌ನಲ್ಲಿ ನಡೆಯಲಿರುವ ಗಾಳಿಪಟ ಉತ್ಸವದಲ್ಲಿ ಭಾಗವಹಿಸುವಂತೆ ಪ್ರಧಾನಮಂತ್ರಿಯವರು ಸಮುದಾಯದ ಸದಸ್ಯರು ಮತ್ತು ʻಫ್ರೆಂಡ್ಸ್‌ ಆಫ್‌ ಇಂಡಿಯಾʼ ಸದಸ್ಯರನ್ನು ಆಹ್ವಾನಿಸಿದರು. 


(Release ID: 1876282) Visitor Counter : 150