ಪ್ರಧಾನ ಮಂತ್ರಿಯವರ ಕಛೇರಿ
ಬಾಲಿಯಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣದ ಕನ್ನಡ ಅನುವಾದ, ಅಧಿವೇಶನ 1: ಆಹಾರ ಮತ್ತು ಇಂಧನ ಭದ್ರತೆ
Posted On:
15 NOV 2022 10:25AM by PIB Bengaluru
ನಮಸ್ಕಾರ!
ಸವಾಲಿನ ಜಾಗತಿಕ ವಾತಾವರಣದಲ್ಲಿ ಜಿ-20ಗೆ ಪರಿಣಾಮಕಾರಿ ನಾಯಕತ್ವವನ್ನು ನೀಡಿದ್ದಕ್ಕಾಗಿ ನಾನು ಅಧ್ಯಕ್ಷ ಜೋಕೊ ವಿಡೋಡೋ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಹವಾಮಾನ ಬದಲಾವಣೆ, ಕೋವಿಡ್ ಸಾಂಕ್ರಾಮಿಕ ರೋಗ, ಉಕ್ರೇನ್ ನಲ್ಲಿನ ಬೆಳವಣಿಗೆಗಳು ಮತ್ತು ಅದಕ್ಕೆ ಸಂಬಂಧಿಸಿದ ಜಾಗತಿಕ ಸಮಸ್ಯೆಗಳೆಲ್ಲವೂ ಒಟ್ಟಾಗಿ ಜಗತ್ತಿನಲ್ಲಿ ವಿನಾಶವನ್ನು ಉಂಟುಮಾಡಿವೆ. ಜಾಗತಿಕ ಪೂರೈಕೆ ಸರಪಳಿಗಳು ಹಾಳಾಗಿವೆ. ಪ್ರಪಂಚದಾದ್ಯಂತ ಅಗತ್ಯ ವಸ್ತುಗಳು, ಅಗತ್ಯ ವಸ್ತುಗಳ ಬಿಕ್ಕಟ್ಟು ಇದೆ. ಪ್ರತಿಯೊಂದು ದೇಶದ ಬಡ ನಾಗರಿಕರಿಗೆ ಸವಾಲು ಹೆಚ್ಚು ತೀವ್ರವಾಗೊಂಡಿದೆ. ದೈನಂದಿನ ಜೀವನವು ಅವರಿಗೆ ಆಗಲೇ ಒಂದು ಹೋರಾಟವಾಗಿತ್ತು. ಈಗ ದ್ವಿಗುಣಗೊಂಡ ಸಮಸ್ಯೆಯನ್ನು ಎದುರಿಸುವ ಆರ್ಥಿಕ ಸಾಮರ್ಥ್ಯವನ್ನು ಅವರು ಹೊಂದಿಲ್ಲ. ದ್ವಿಗುಣ ಸಮಸ್ಯೆನ್ನು ನಿರ್ವಹಿಸಲು ಅವರಿಗೆ ಆರ್ಥಿಕ ಸಾಮರ್ಥ್ಯದ ಕೊರತೆ ಇದೆ. ವಿಶ್ವಸಂಸ್ಥೆಯಂತಹ ಬಹುಪಕ್ಷೀಯ ಸಂಸ್ಥೆಗಳು ಈ ವಿಷಯಗಳಲ್ಲಿ ವಿಫಲವಾಗಿವೆ ಎಂಬುದನ್ನು ಒಪ್ಪಿಕೊಳ್ಳಲು ನಾವು ಹಿಂಜರಿಯಬಾರದು. ಮತ್ತು ನಾವೆಲ್ಲರೂ ಅವುಗಳಲ್ಲಿ ಸೂಕ್ತ ಸುಧಾರಣೆಗಳನ್ನು ಕಂಡುಕೊಳ್ಳಲು ವಿಫಲರಾಗಿದ್ದೇವೆ. ಆದ್ದರಿಂದ, ಇಂದು ಜಗತ್ತು ಜಿ -20 ಯಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ, ನಮ್ಮ ಗುಂಪಿನ ಪ್ರಸ್ತುತತೆ ಹೆಚ್ಚು ಮಹತ್ವದ್ದಾಗಿದೆ.
ಘನತೆವೆತ್ತರೇ,
ಉಕ್ರೇನ್ ನಲ್ಲಿ ಕದನ ವಿರಾಮ ಮತ್ತು ರಾಜತಾಂತ್ರಿಕತೆಯ ಮಾರ್ಗಕ್ಕೆ ಮರಳಲು ನಾವು ಒಂದು ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ ಎಂದು ನಾನು ಪದೇ ಪದೇ ಹೇಳಿದ್ದೇನೆ. ಕಳೆದ ಶತಮಾನದಲ್ಲಿ, ಎರಡನೇ ಮಹಾಯುದ್ಧವು ಜಗತ್ತಿನಲ್ಲಿ ವಿನಾಶವನ್ನು ಉಂಟುಮಾಡಿತು. ಅದರ ನಂತರ, ಆ ಕಾಲದ ನಾಯಕರು ಶಾಂತಿಯ ಮಾರ್ಗವನ್ನು ತೆಗೆದುಕೊಳ್ಳಲು ಗಂಭೀರ ಪ್ರಯತ್ನ ಮಾಡಿದರು. ಈಗ ನಮ್ಮ ಸರದಿ. ಕೋವಿಡ್ ನಂತರದ ಅವಧಿಗೆ ಹೊಸ ವಿಶ್ವ ವ್ಯವಸ್ಥೆಯನ್ನು ರಚಿಸುವ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. ಜಗತ್ತಿನಲ್ಲಿ ಶಾಂತಿ, ಸೌಹಾರ್ದತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ದೃಢವಾದ ಮತ್ತು ಸಾಮೂಹಿಕ ಸಂಕಲ್ಪವನ್ನು ತೋರಿಸುವುದು ಇಂದಿನ ಅಗತ್ಯವಾಗಿದೆ. ಮುಂದಿನ ವರ್ಷ ಬುದ್ಧ ಮತ್ತು ಗಾಂಧಿಯವರ ಪವಿತ್ರ ಭೂಮಿಯಲ್ಲಿ ಜಿ-20 ಸಮಾವೇಶಗೊಂಡಾಗ, ವಿಶ್ವಕ್ಕೆ ಶಾಂತಿಯ ಬಲವಾದ ಸಂದೇಶವನ್ನು ನೀಡಲು ನಾವೆಲ್ಲರೂ ಒಪ್ಪುತ್ತೇವೆ ಎಂಬ ವಿಶ್ವಾಸ ನನಗಿದೆ.
ಘನತೆವೆತ್ತರೇ,
ಸಾಂಕ್ರಾಮಿಕ ರೋಗದ ಸಮಯದಲ್ಲಿ, ಭಾರತವು ತನ್ನ 1.3 ಶತಕೋಟಿ ನಾಗರಿಕರಿಗೆ ಆಹಾರ ಭದ್ರತೆಯನ್ನು ಖಾತ್ರಿಪಡಿಸಿತು. ಅದೇ ಸಮಯದಲ್ಲಿ, ಅಗತ್ಯವಿರುವ ಅನೇಕ ದೇಶಗಳಿಗೆ ಆಹಾರ ಧಾನ್ಯಗಳನ್ನು ಸಹ ಪೂರೈಸಲಾಯಿತು. ಆಹಾರ ಭದ್ರತೆಯ ದೃಷ್ಟಿಯಿಂದ ರಸಗೊಬ್ಬರಗಳ ಪ್ರಸ್ತುತ ಕೊರತೆಯು ಸಹ ಒಂದು ದೊಡ್ಡ ಬಿಕ್ಕಟ್ಟಾಗಿದೆ. ಇಂದಿನ ರಸಗೊಬ್ಬರದ ಕೊರತೆ ನಾಳಿನ ಆಹಾರ ಬಿಕ್ಕಟ್ಟಾಗಿದ್ದು, ಇದಕ್ಕೆ ಜಗತ್ತು ಪರಿಹಾರವನ್ನು ಹೊಂದಿರುವುದಿಲ್ಲ. ಗೊಬ್ಬರ ಮತ್ತು ಆಹಾರ ಧಾನ್ಯಗಳ ಪೂರೈಕೆ ಸರಪಳಿಯನ್ನು ಸ್ಥಿರವಾಗಿ ಮತ್ತು ಖಾತರಿಪಡಿಸಲು ನಾವು ಪರಸ್ಪರ ಒಪ್ಪಂದವನ್ನು ನಿರ್ಮಿಸಬೇಕು. ಭಾರತದಲ್ಲಿ, ಸುಸ್ಥಿರ ಆಹಾರ ಭದ್ರತೆಗಾಗಿ, ನಾವು ನೈಸರ್ಗಿಕ ಕೃಷಿಯನ್ನು ಉತ್ತೇಜಿಸುತ್ತಿದ್ದೇವೆ ಮತ್ತು ಸಿರಿಧಾನ್ಯಗಳಂತಹ ಪೌಷ್ಟಿಕ ಮತ್ತು ಸಾಂಪ್ರದಾಯಿಕ ಆಹಾರ ಧಾನ್ಯಗಳನ್ನು ಮರು-ಜನಪ್ರಿಯಗೊಳಿಸುತ್ತಿದ್ದೇವೆ. ಸಿರಿಧಾನ್ಯಗಳು ಜಾಗತಿಕ ಅಪೌಷ್ಟಿಕತೆ ಮತ್ತು ಹಸಿವನ್ನು ಸಹ ಪರಿಹರಿಸಬಲ್ಲವು. ನಾವೆಲ್ಲರೂ ಮುಂದಿನ ವರ್ಷ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನು ಬಹಳ ಉತ್ಸಾಹದಿಂದ ಆಚರಿಸಬೇಕು.
ಘನತೆವೆತ್ತರೇ,
ಇದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿರುವುದರಿಂದ ಜಾಗತಿಕ ಬೆಳವಣಿಗೆಗೆ ಭಾರತದ ಇಂಧನ-ಭದ್ರತೆಯೂ ಮುಖ್ಯವಾಗಿದೆ. ಇಂಧನ ಪೂರೈಕೆಯ ಮೇಲೆ ನಾವು ಯಾವುದೇ ನಿರ್ಬಂಧಗಳನ್ನು ಉತ್ತೇಜಿಸಬಾರದು ಮತ್ತು ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಬೇಕು. ಭಾರತವು ಶುದ್ಧ ಇಂಧನ ಮತ್ತು ಪರಿಸರಕ್ಕೆ ಬದ್ಧವಾಗಿದೆ. 2030 ರ ವೇಳೆಗೆ, ನಮ್ಮ ಅರ್ಧದಷ್ಟು ವಿದ್ಯುತ್ತನ್ನು ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸಲಾಗುವುದು. ಸಮಗ್ರ ಇಂಧನ ಪರಿವರ್ತನೆಗೆ ಕಾಲಮಿತಿ ಮತ್ತು ಕೈಗೆಟುಕುವ ಹಣಕಾಸು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ತಂತ್ರಜ್ಞಾನದ ಸುಸ್ಥಿರ ಪೂರೈಕೆ ಅತ್ಯಗತ್ಯವಾಗಿದೆ.
ಘನತೆವೆತ್ತರೇ,
ಭಾರತದ ಜಿ-20 ಅಧ್ಯಕ್ಷೀಯ ಅವಧಿಯಲ್ಲಿ, ಈ ಎಲ್ಲಾ ವಿಷಯಗಳ ಬಗ್ಗೆ ಜಾಗತಿಕ ಒಮ್ಮತಕ್ಕಾಗಿ ನಾವು ಕೆಲಸ ಮಾಡುತ್ತೇವೆ.
ಧನ್ಯವಾದಗಳು.
ಹಕ್ಕು ನಿರಾಕರಣೆ - ಇದು ಪ್ರಧಾನ ಮಂತ್ರಿ ಅವರ ಹೇಳಿಕೆಗಳ ಅಂದಾಜು ಭಾಷಾಂತರವಾಗಿದೆ. ಮೂಲ ಟಿಪ್ಪಣಿಗಳನ್ನು ಹಿಂದಿಯಲ್ಲಿ ನೀಡಲಾಗಿದೆ.
******
(Release ID: 1876063)
Visitor Counter : 214
Read this release in:
English
,
Urdu
,
Marathi
,
Hindi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam