ಪ್ರಧಾನ ಮಂತ್ರಿಯವರ ಕಛೇರಿ

ಮಹಾರಾಷ್ಟ್ರ ಉದ್ಯೋಗ ಮೇಳವನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರ ವೀಡಿಯೊ ಸಂದೇಶದ ಇಂಗ್ಲಿಷ್ ಭಾಷಾಂತರ 

Posted On: 03 NOV 2022 1:24PM by PIB Bengaluru

ನಮಸ್ಕಾರ! 
 
(ಸ್ಥಳೀಯ ಭಾಷೆಯಲ್ಲಿ ಆರಂಭಿಕ ನುಡಿಗಳು) 
 
ಸರಕಾರಿ ಇಲಾಖೆಗಳಲ್ಲಿ ವಿವಿಧ ಹುದ್ದೆಗಳಿಗೆ ದೇಶದ ಯುವಕರಿಗೆ ಸಾಮೂಹಿಕವಾಗಿ ನೇಮಕಾತಿ ಪತ್ರಗಳನ್ನು ಒದಗಿಸುವ ಅಭಿಯಾನಕ್ಕೆ ಇಂದು ಮಹಾರಾಷ್ಟ್ರ ಸಹ ಸೇರ್ಪಡೆಯಾಗುತ್ತಿದೆ. ಧನ್ತೇರಸ್ ದಿನದಂದು, ಕೇಂದ್ರ ಸರಕಾರವು 10 ಲಕ್ಷ ಉದ್ಯೋಗಗಳನ್ನು ಒದಗಿಸುವ ಅಭಿಯಾನವನ್ನು ಪ್ರಾರಂಭಿಸಿತ್ತು. ಮುಂಬರುವ ದಿನಗಳಲ್ಲಿ ವಿವಿಧ ರಾಜ್ಯ ಸರಕಾರಗಳು ಸಹ ಇದೇ ರೀತಿಯ ಉದ್ಯೋಗ ಮೇಳಗಳನ್ನು ಆಯೋಜಿಸುತ್ತವೆ ಎಂದು ನಾನು ಆಗಲೇ ಹೇಳಿದ್ದೆ. ಇದಕ್ಕೆ ಅನುಗುಣವಾಗಿ, ಇಂದು, ಮಹಾರಾಷ್ಟ್ರದ ನೂರಾರು ಯುವಕರಿಗೆ ನೇಮಕಾತಿ ಪತ್ರಗಳನ್ನು ನೀಡಲಾಗುತ್ತಿದೆ. ಇಂದು ನೇಮಕಾತಿ ಆದೇಶ ಪತ್ರಗಳನ್ನು ಪಡೆಯುತ್ತಿರುವ ಯುವಕ-ಯುವತಿಯರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ! 
 
ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ಭಾಯಿ ದೇವೇಂದ್ರ ಫಡ್ನವೀಸ್ ಅವರನ್ನೂ ನಾನು ಅಭಿನಂದಿಸುತ್ತೇನೆ. 'ಉದ್ಯೋಗ ಮೇಳ' ಕಾರ್ಯಕ್ರಮವನ್ನು ಅತ್ಯಂತ ಕಡಿಮೆ ಸಮಯದಲ್ಲಿ ಆಯೋಜಿಸಲಾಗಿದೆ. ಯುವಕರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರಕಾರವು ಬಲವಾದ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಮುಂಬರುವ ದಿನಗಳಲ್ಲಿ ಇಂತಹ ಉದ್ಯೋಗ ಮೇಳಗಳನ್ನು ಮಹಾರಾಷ್ಟ್ರದಲ್ಲಿ ಮತ್ತಷ್ಟು ವಿಸ್ತರಿಸಲಾಗುವುದು ಎಂಬ ವಿಷಯ ಕೇಳಿ ನನಗೆ ಸಂತೋಷವಾಗಿದೆ. ಮಹಾರಾಷ್ಟ್ರದ ಗೃಹ ಇಲಾಖೆಯಲ್ಲಿ ಸಾವಿರಾರು ಪೊಲೀಸ್ ಪೇದೆಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲೂ ನೇಮಕಾತಿ ಅಭಿಯಾನವನ್ನು ನಡೆಸಲಾಗುವುದು ಎಂದು ನನಗೆ ತಿಳಿಸಲಾಗಿದೆ.

 ಸ್ನೇಹಿತರೇ, 

ದೇಶವು 'ಆಜಾದಿ ಕಾ ಅಮೃತ ಮಹೋತ್ಸವ'ವನ್ನು ಆಚರಿಸುತ್ತಿದೆ. ದೇಶವು ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸುವತ್ತ ಕೆಲಸ ಮಾಡುತ್ತಿದೆ. ಈ ಗುರಿಯನ್ನು ಸಾಧಿಸುವಲ್ಲಿ ನಮ್ಮ ಯುವಕರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಉದ್ಯೋಗಗಳ ಸ್ವರೂಪವು ವೇಗವಾಗಿ ಬದಲಾಗುತ್ತಿರುವುದರಿಂದ, ಸರಕಾರವು ಬದಲಾಗುತ್ತಿರುವ ಸನ್ನಿವೇಶಗಳಿಗೆ ಹೊಂದಿಕೊಳ್ಳುತ್ತಾ, ವಿವಿಧ ರೀತಿಯ ಉದ್ಯೋಗಗಳಿಗೆ ನಿರಂತರವಾಗಿ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಸ್ವಯಂ ಉದ್ಯೋಗಕ್ಕಾಗಿ ಖಾತರಿ ರಹಿತ  ಸಾಲ ನೀಡುವ ಗುರಿಯನ್ನು ಹೊಂದಿರುವ ʻಮುದ್ರಾʼ ಯೋಜನೆಯಡಿ, ಸರಕಾರವು ಯುವಕರಿಗೆ 20 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ನೆರವು ನೀಡಿದೆ. ಮಹಾರಾಷ್ಟ್ರದ ಯುವಕರು ಈ ಯೋಜನೆಯ ಗರಿಷ್ಠ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ. ನವೋದ್ಯಮಗಳು ಮತ್ತು ಸಣ್ಣ ಗಾತ್ರದ ಕೈಗಾರಿಕೆಗಳು - ʻಎಂಎಸ್ಎಂಇʼಗಳಿಗೆ ಸರಕಾರವು ಸಾಧ್ಯವಿರುವ ಎಲ್ಲಾ ಆರ್ಥಿಕ ಸಹಾಯವನ್ನು ಒದಗಿಸುತ್ತಿದೆ, ಇದರಿಂದ ಯುವಕರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸೂಕ್ತ ಅವಕಾಶವನ್ನು ಪಡೆಯುತ್ತಾರೆ. 
 
 ಸ್ನೇಹಿತರೇ,
ಸರಕಾರದ ಪ್ರಯತ್ನಗಳ ಬಗ್ಗೆ ಅತ್ಯಂತ ಮುಖ್ಯವಾದ ವಿಷಯವನ್ನು ಹೇಳುವುದಾದರೆ, ಉದ್ಯೋಗ ಮತ್ತು ಸ್ವ-ಉದ್ಯೋಗದ ಈ ಅವಕಾಶಗಳು ಈಗ ದಲಿತರು-ಹಿಂದುಳಿದ ವರ್ಗಗಳು, ಬುಡಕಟ್ಟು, ಸಾಮಾನ್ಯ ವರ್ಗ ಮತ್ತು ಮಹಿಳೆಯರಿಗೆ ಸಮಾನವಾಗಿ ಲಭ್ಯವಿವೆ. ಗ್ರಾಮೀಣ ಪ್ರದೇಶಗಳಲ್ಲಿ ಸ್ವಸಹಾಯ ಗುಂಪುಗಳನ್ನು ಸರಕಾರವು ಸಾಕಷ್ಟು ಉತ್ತೇಜಿಸುತ್ತಿದೆ. ಕಳೆದ 8 ವರ್ಷಗಳಲ್ಲಿ 8 ಕೋಟಿ ಮಹಿಳೆಯರು ಸ್ವಸಹಾಯ ಗುಂಪುಗಳಿಗೆ ಸೇರ್ಪಡೆಯಾಗಿದ್ದಾರೆ. ಈ ಸ್ವಸಹಾಯ ಗುಂಪುಗಳಿಗೆ 5 ಲಕ್ಷ ಕೋಟಿ ರೂ.ಗಳ ಆರ್ಥಿಕ ನೆರವು ನೀಡಲಾಗಿದೆ. ಈಗ ಈ ಗುಂಪುಗಳ ಭಾಗವಾಗಿರುವ ಮಹಿಳೆಯರು ತಮ್ಮ ಸ್ವಂತ ಉತ್ಪನ್ನಗಳನ್ನು ತಯಾರಿಸುವುದು ಮಾತ್ರವಲ್ಲದೆ ಇತರ ಮಹಿಳೆಯರಿಗೆ ಉದ್ಯೋಗವನ್ನು ಸಹ ನೀಡುತ್ತಿದ್ದಾರೆ. 
 
ಸ್ನೇಹಿತರೇ, 
ಇಂದು, ದೇಶಾದ್ಯಂತ ಮೂಲಸೌಕರ್ಯ, ಮಾಹಿತಿ ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಸರಕಾರವು ಮಾಡುತ್ತಿರುವ ದಾಖಲೆಯ ಹೂಡಿಕೆಗಳು ನಿರಂತರವಾಗಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ. ನಾವು ಮಹಾರಾಷ್ಟ್ರದ ಬಗ್ಗೆ ಮಾತ್ರ ಮಾತನಾಡುವುದಾದರೆ,  2 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ಸುಮಾರು 225 ಯೋಜನೆಗಳಿಗೆ ಕೇಂದ್ರ ಸರಕಾರವು ಅನುಮೋದನೆ ನೀಡಿದೆ. ಈ ಯೋಜನೆಗಳ ಕೆಲಸ ನಡೆಯುತ್ತಿದೆ ಅಥವಾ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ನೀವೇ ಊಹಿಸಿ! ಮಹಾರಾಷ್ಟ್ರದಲ್ಲಿ, ರೈಲ್ವೆಗಾಗಿ 75 ಸಾವಿರ ಕೋಟಿ ರೂ.ಗಳ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಮತ್ತು ಆಧುನಿಕ ರಸ್ತೆಗಳಿಗೆ 50 ಸಾವಿರ ಕೋಟಿ ರೂ.ಗಳನ್ನು ಅನುಮೋದಿಸಲಾಗಿದೆ. ಸರಕಾರವು ಮೂಲಸೌಕರ್ಯಕ್ಕಾಗಿ ಇಷ್ಟು ದೊಡ್ಡ ಮೊತ್ತದ ಬಜೆಟ್ ಅನ್ನು ಖರ್ಚು ಮಾಡಿದಾಗ, ಲಕ್ಷಾಂತರ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. 
 
 ಸ್ನೇಹಿತರೇ, 
ಭವಿಷ್ಯದಲ್ಲಿ, ಮಹಾರಾಷ್ಟ್ರದ ಯುವಕರಿಗೆ ಅಸಂಖ್ಯಾತ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಲೇ ಇರುತ್ತವೆ ಎಂಬ ಖಾತರಿ ನನಗಿದೆ. ಮತ್ತೊಮ್ಮೆ, ಇಂದು ತಮ್ಮ ನೇಮಕಾತಿ ಪತ್ರಗಳನ್ನು ಪಡೆದ ಎಲ್ಲಾ ಯುವಕ ಮತ್ತು ಯುವತಿಯರಿಗೆ ನಾನು ನನ್ನ ಶುಭ ಹಾರೈಕೆಗಳನ್ನು ತಿಳಿಸಲು ಬಯಸುತ್ತೇನೆ. ತುಂಬಾ ಧನ್ಯವಾದಗಳು! 
 
 ಗಮನಿಸಿ: ಇದು ಪ್ರಧಾನಮಂತ್ರಿಯವರ ಭಾಷಣದ ಭಾವಾನುವಾದ. ಮೂಲ ಭಾಷಣ ಹಿಂದಿಯಲ್ಲಿತ್ತು.

*****



(Release ID: 1874093) Visitor Counter : 120