ಪ್ರಧಾನ ಮಂತ್ರಿಯವರ ಕಛೇರಿ

​​​​​​​ಆರ್ಸೆಲರ್ ಮಿತ್ತಲ್ ನಿಪ್ಪೊನ್ ನ ಹಜಿರಾ ಉಕ್ಕು ಸ್ಥಾವರದ ವಿಸ್ತರಣೆ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ


​​​​​​​“ಗುಜರಾತ್ ಮತ್ತು ದೇಶದ ಯುವ ಸಮೂಹಕ್ಕೆ 60 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಹೂಡಿಕೆಯಿಂದ ಅನೇಕ ಉದ್ಯೋಗ ಸೃಷ್ಟಿಯಾಗಲಿದೆ”

“ಒಂದು ಬಲಿಷ್ಠ ಉಕ್ಕು ವಲಯ ದೇಶದ ಮೂಲ ಸೌಕರ್ಯ ವಲಯದ ಪುಷ್ಟಿಗೆ ನಾಂದಿ”

“ಭಾರತದ ಉಕ್ಕು ವಲಯದ ಆರ್ಸೆಲ್ ಮಿತ್ತಲ್ ನಿಪ್ಪೊನ್ ಯೋಜನೆ ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಒಂದು ಮೈಲಿಗಲ್ಲು ಎಂಬುದು ಸಾಬೀತಾಗಿದೆ”

“ದೇಶ ಇಂದು ಕಚ್ಚಾ ಉಕ್ಕಿನ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸುವ ಗುರಿ ಹೊಂದಿದೆ”

Posted On: 28 OCT 2022 4:24PM by PIB Bengaluru

ಭಾರತೀಯ ಅರ್ಸೆಲ್ ಮಿತ್ತಲ್ ನಿಪ್ಪೊನ್ ನ ಹಜಿರಾದ [ಎಎಂ/ಎನ್ಎಸ್ ಇಂಡಿಯಾ] ಉಕ್ಕು ಸ್ಥಾವರ ವಿಸ್ತರಣೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಸಂದೇಶ ನೀಡಿದರು.

ಈ ಘಟಕದಿಂದ ಹೂಡಿಕೆಯಷ್ಟೇ ದೊರೆಯುತ್ತಿಲ್ಲ, ಬದಲಿಗೆ ಹೊಸ ಸಾಧ್ಯತೆಗಳ ಬಾಗಿಲುಗಳು ಸಹ ತೆರೆದುಕೊಳ್ಳಲಿವೆ. “ಗುಜರಾತ್ ಮತ್ತು ದೇಶದ ಯುವ ಸಮೂಹಕ್ಕೆ 60 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಹೂಡಿಕೆಯಿಂದ ಅನೇಕ ಉದ್ಯೋಗ ಸೃಷ್ಟಿಯಾಗಲಿದೆ. ಈ ವಿಸ್ತರಣೆಯಿಂದ ಹಜಿರಾದ ಉಕ್ಕು ಘಟಕದಲ್ಲಿ ಕಚ್ಚಾ ಉಕ್ಕು ಉತ್ಪಾದನೆ 9 ದಶಲಕ್ಷ ಟನ್ ಗಳಿಂದ 15 ದಶಲಕ್ಷ ಟನ್ ಗಳಿಗೆ ಏರಿಕೆಯಾಗಲಿದೆ” ಎಂದು ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು.

2047 ರ ವೇಳೆಗೆ ಅಭಿವೃದ್ದಿ ಹೊಂದಿದ ಭಾರತವನ್ನು ನಿರ್ಮಿಸುವ ಗುರಿ ಸಾಧನೆಗಾಗಿ ಉಕ್ಕು ಕೈಗಾರಿಕೆ ಬೆಳವಣಿಗೆಯಾಗುತ್ತಿದೆ. ಒಂದು ಬಲಿಷ್ಠ ಉಕ್ಕು ವಲಯ ದೇಶದ ಮೂಲಕ ಸೌಕರ್ಯ ವಲಯದ ಪುಷ್ಟಿಗೆ ನಾಂದಿಯಾಗಲಿದೆ. ಇದೇ ರೀತಿಯಲ್ಲಿ ಉಕ್ಕು ವಲಯ ರಸ್ತೆ, ರೈಲ್ವೆ, ವಿಮಾನ ನಿಲ್ದಾಣ, ನಿರ್ಮಾಣ, ಸ್ವಯಂ ಚಾಲಿತ ವಲಯ, ಬಂಡವಾಳ ಸರಕುಗಳು ಮತ್ತು ತಾಂತ್ರಿಕ ಉತ್ಪನ್ನಗಳ ಉತ್ಪಾದನೆಯಲ್ಲಿ ನಿರ್ಣಾಯಕ ಕೊಡುಗೆ ನೀಡುತ್ತಿದೆ ಎಂದರು.

ಈ ವಿಸ್ತರಣೆ ಜೊತೆಗೆ ಇದೀಗ ಒಟ್ಟಾರೆ ಹೊಸ ತಂತ್ರಜ್ಞಾನ ಭಾರತಕ್ಕೆ ಬರುತ್ತಿದ್ದು,  ಇದರಿಂದ ಎಲೆಕ್ಟ್ರಿಕ್ ವಾಹನಗಳು, ವಾಹನೋದ್ಯಮ ಮತ್ತು ಇತರೆ ಉತ್ಪಾದನಾ ಕ್ಷೇತ್ರಕ್ಕೆ ಬಹುದೊಡ್ಡ ಪ್ರಮಾಣದಲ್ಲಿ ನೆರವಾಗಲಿದೆ. “ಭಾರತದ ಉಕ್ಕು ವಲಯದ ಆರ್ಸೆಲ್ ಮಿತ್ತಲ್ ನಿಪ್ಪೊನ್ ಯೋಜನೆ ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಒಂದು ಮೈಲಿಗಲ್ಲು ಎಂಬುದು ಸಾಬೀತಾಗಿದೆ. ಅಭಿವೃದ್ಧಿ ಹೊಂದಿದ ಭಾರತ ಮತ್ತು ಉಕ್ಕು ವಲಯದಲ್ಲಿ ಭಾರತ ಸ್ವಾವಲಂಬಿಯಾಗಲು ನಡೆಸುತ್ತಿರುವ ಪ್ರಯತ್ನಕ್ಕೆ ಹೊಸ ಶಕ್ತಿ ನೀಡಿದಂತಾಗಿದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಭಾರತದಿಂದ ಜಗತ್ತು ಏನನ್ನು ನಿರೀಕ್ಷಿಸುತ್ತಿದೆ ಎಂಬುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಭಾರತ ಜಾಗತಿಕವಾಗಿ ಅತಿ ದೊಡ್ಡ ಉತ್ಪಾದನಾ ತಾಣವಾಗುವತ್ತ ಮುನ್ನಡೆಯುತ್ತಿದೆ ಮತ್ತು ಸಕ್ರಿಯವಾಗಿ ಈ ವಲಯದಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಿರುವ ನೀತಿ ಪರಿಸರ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಸರ್ಕಾರ ನಿರತವಾಗಿದೆ. “ಕಳೆದ 8 ವರ್ಷಗಳಲ್ಲಿ ಪ್ರತಿಯೊಬ್ಬರ ಪ್ರಯತ್ನದಿಂದಾಗಿ ಭಾರತೀಯ ಉಕ್ಕು ಕೈಗಾರಿಕೆ ಜಗತ್ತಿನ ಎರಡನೇ ಅತಿ ದೊಡ್ಡ ಉಕ್ಕು ಉತ್ಪಾದನೆ ಮಾಡುವ ಕೈಗಾರಿಕಾ ಕ್ಷೇತ್ರವಾಗಿ ಹೊರ ಹೊಮ್ಮಿದೆ” ಎಂದು ಹೇಳಿದರು.

ಭಾರತದ ಉಕ್ಕು ಕೈಗಾರಿಕೆಯನ್ನು ಮತ್ತಷ್ಟು ಉತ್ತೇಜಿಸುವ ಕ್ರಮಗಳನ್ನು ಪ್ರಧಾನಮಂತ್ರಿ ಅವರು ಪಟ್ಟಿ ಮಾಡಿದರು. ಪಿಎಲ್ಐ ಯೋಜನೆ, ಬೆಳವಣಿಗೆಯ ಹೊಸ ಮಾರ್ಗವನ್ನು ಸೃಷ್ಟಿಸಿದೆ ಎಂದು ಹೇಳಿದರು. ಐಎನ್ಎಸ್ ವಿಕ್ರಾಂತ್ ಅನ್ನು ಉದಾಹರಣೆಯಾಗಿ ನೀಡಿದ ಅವರು, ದೇಶ ಉನ್ನತ ದರ್ಜೆಯ ಉಕ್ಕು ಉತ್ಪಾದನೆಯಲ್ಲಿ ಪರಿಣಿತಿ ಪಡೆದುಕೊಂಡಿದ್ದು, ಬಳಕೆಯ ನಿರ್ಣಾಯಕ ಕಾರ್ಯತಂತ್ರವನ್ನು ಹೆಚ್ಚಿಸಿಕೊಳ್ಳುತ್ತಿದೆ. ಯುದ್ಧ ವಿಮಾನಗಳನ್ನು ಹೊತ್ತೊಯ್ಯಲು ಡಿ.ಆರ್.ಡಿ.ಒ ವಿಜ್ಞಾನಿಗಳು ವಿಶೇಷ ಉಕ್ಕು ಬಳಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಭಾರತೀಯ ಕಂಪೆನಿಗಳು ಸಹಸ್ರಾರು ಮೆಟ್ರಿಕ್ ಟನ್ ಗಳಷ್ಟು ಉಕ್ಕು ಉತ್ಪಾದಿಸುತ್ತಿವೆ ಮತ್ತು ಐ.ಎನ್.ಎಸ್ ವಿಕ್ರಾಂತ್ ಸಂಪೂರ್ಣವಾಗಿ ದೇಶೀಯ ಸಾಮರ್ಥ್ಯ ಮತ್ತು ತಂತ್ರಜ್ಞಾನವನ್ನು ಒಳಗೊಂಡಿದೆ. ಇಂತಹ ಸಾಮರ್ಥ್ಯ ಉತ್ತೇಜಿಸಲು ದೇಶ ಇಂದು ಕಚ್ಚಾ ಉಕ್ಕಿನ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸುವ ಗುರಿ ಹೊಂದಿದೆ. ಪ್ರಸ್ತುತ ನಾವು 154 ಎಂ.ಟಿ. ಕಚ್ಚಾ ಉಕ್ಕು ಉತ್ಪಾದಿಸುತ್ತಿದ್ದೇವೆ. ಮುಂದಿನ 9-10 ವರ್ಷಗಳಲ್ಲಿ 300 ಎಂ.ಟಿ. ಸಾಮರ್ಥ್ಯವನ್ನು ತಲುಪಬೇಕೆಂಬ ಗುರಿ ಹೊಂದಿದ್ದೇವೆ ಎಂದು ಹೇಳಿದರು.  

ಅಭಿವೃದ್ಧಿಯ ದೃಷ್ಟಿಕೋನವನ್ನು ಕೈಗೆತ್ತಿಕೊಂಡಾಗ ಎಲ್ಲೆಡೆ ಎದುರಾಗುವ ಸವಾಲುಗಳ ಕುರಿತು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು, ಉಕ್ಕು ಕೈಗಾರಿಕೆಯಲ್ಲಿ ಇಂಗಾಲ ಹೊರಸೂಸುವುದನ್ನು ಉದಾಹರಣೆಯಾಗಿ ನೀಡಿದರು. ಒಂದು ಕಡೆ ಭಾರತ ಕಚ್ಚಾ ಉಕ್ಕು ಉತ್ಪಾದನೆಯನ್ನು ವಿಸ್ತರಣೆ ಮಾಡುತ್ತಿದೆ ಮತ್ತು ಮತ್ತೊಂದೆಡೆ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಉತ್ತೇಜಿಸುತ್ತಿದೆ. “ಭಾರತ ಇಂದು ಇಂತಹ ಉತ್ಪಾದನಾ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಒತ್ತು ನೀಡುತ್ತಿದೆ. ಅದು ಇಂಗಾಲ ಹೊರ ಸೂಸುವಿಕೆಯನ್ನು ಕಡಿಮೆ ಮಾಡುತ್ತದೆ, ಇಂಗಾಲವನ್ನು ಸಂಗ್ರಹಿಸುತ್ತದೆ ಮತ್ತು ಮರು ಬಳಕೆ ಮಾಡುತ್ತದೆ” ಎಂದು ಹೇಳಿದರು. ದೇಶದಲ್ಲಿ ಹಣಕಾಸು ಹರಿವು  ಹೆಚ್ಚಿಸಲು ಉತ್ತೇಜನ ನೀಡಲಾಗುತ್ತಿದೆ ಮತ್ತು ಸರ್ಕಾರ ಹಾಗೂ ಖಾಸಗಿ ವಲಯ ಈ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದೆ. “ಭಾರತದ ಎ.ಎಂ.ಎನ್.ಎಸ್ ಸಮೂಹದ ಹಜಿರಾ ಯೋಜನೆ ಹಸಿರು ತಂತ್ರಜ್ಞಾನ ಬಳಕೆಗೆ ಒತ್ತು ನೀಡುತ್ತಿರುವುದು ತಮಗೆ ಸಂತೋಷ ತಂದಿದೆ” ಎಂದು ಪ್ರಧಾನಮಂತ್ರಿ ಅವರು ಹೇಳಿದರು.

“ನಮ್ಮ ಗುರಿಗಳನ್ನು ತಲುಪಲು ಪ್ರತಿಯೊಬ್ಬರು ಪ್ರಯತ್ನಶೀಲರಾಗಲು ತೊಡಗಿಕೊಂಡರೆ ಅದನ್ನು ಸಾಕಾರಗೊಳಿಸುವುದು ಕಷ್ಟವಾಗಲಾರದು”. ಉಕ್ಕು ಕೈಗಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸರ್ಕಾರದ ಬದ್ಧತೆಯ ಬಗ್ಗೆ ಒತ್ತಿ ಹೇಳಿದ ಅವರು, “ಈ ಯೋಜನೆ ಇಡೀ ಪ್ರದೇಶದ ಉಕ್ಕು ಕ್ಷೇತ್ರದ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ ಎಂಬುದು ತಮಗೆ ಖಾತ್ರಿಯಾಗಿದೆ” ಎಂದು ಹೇಳಿ ಪ್ರಧಾನಮಂತ್ರಿ ಅವರು ತಮ್ಮ ಭಾಷಣವನ್ನು ಪೂರ್ಣಗೊಳಿಸಿದರು.

****



(Release ID: 1871717) Visitor Counter : 120