ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

5 ನೇ ಖೇಲೋ ಇಂಡಿಯಾ ಯುವ ಕ್ರೀಡಾಕೂಟ ಮಧ್ಯಪ್ರದೇಶದಲ್ಲಿ ನಡೆಯಲಿದೆ ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಸಮ್ಮುಖದಲ್ಲಿ ಘೋಷಿಸಿದ ಶ್ರೀ ಅನುರಾಗ್ ಸಿಂಗ್ ಠಾಕೂರ್ 


ಮುಂದಿನ ವರ್ಷ ಜನವರಿ 31 ರಿಂದ ಫೆಬ್ರವರಿ 11 ರವರೆಗೆ ಮಧ್ಯಪ್ರದೇಶದ 8 ನಗರಗಳಲ್ಲಿ ನಡೆಯಲಿರುವ ಕ್ರೀಡಾಕೂಟ

ಖೇಲೋ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ ಜಲಕ್ರೀಡೆಗಳನ್ನು ಪರಿಚಯಿಸಲಾಗುತ್ತಿದೆ

Posted On: 20 OCT 2022 5:03PM by PIB Bengaluru

ಖೇಲೋ ಇಂಡಿಯಾ ಯುವ ಕ್ರೀಡಾಕೂಟದ ಮುಂದಿನ ಆವೃತ್ತಿ ಮಧ್ಯಪ್ರದೇಶದಲ್ಲಿ ನಡೆಯಲಿದೆ. ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಇಂದು ರಾಷ್ಟ್ರ ರಾಜಧಾನಿಯಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರ ಸಮ್ಮುಖದಲ್ಲಿ ಈ ಕುರಿತು ಘೋಷಣೆ ಮಾಡಿದರು. ಈ ಕ್ರೀಡಾ ಸ್ಪರ್ಧೆಯು 2023 ರ ಜನವರಿ 31 ರಂದು ಪ್ರಾರಂಭವಾಗಿ 2023 ರ ಫೆಬ್ರವರಿ 11 ರಂದು ಮುಕ್ತಾಯಗೊಳ್ಳಲಿದೆ.

ಗುರುವಾರ ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವರಾದ ಶ್ರೀ ನಿಸಿತ್ ಪ್ರಾಮಾಣಿಕ್; ಮಧ್ಯಪ್ರದೇಶ ಸರ್ಕಾರದ ಕ್ರೀಡಾ ಮತ್ತು ಯುವಜನ ಕಲ್ಯಾಣ ಸಚಿವರಾದ ಶ್ರೀಮತಿ ಯಶೋಧರಾ ರಾಜೇ ಸಿಂಧಿಯಾ; ಕ್ರೀಡಾ ಕಾರ್ಯದರ್ಶಿ ಶ್ರೀಮತಿ ಸುಜಾತಾ ಚತುರ್ವೇದಿ; ಭಾರತೀಯ ಕ್ರೀಡಾ ಪ್ರಾಧಿಕಾರದ ಮಹಾ ನಿರ್ದೇಶಕರಾದ ಶ್ರೀ ಸಂದೀಪ್ ಪ್ರಧಾನ್ ಹಾಗೂ ಕೇಂದ್ರ ಕ್ರೀಡಾ ಸಚಿವಾಲಯ ಮತ್ತು ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಮಧ್ಯಪ್ರದೇಶ ರಾಜ್ಯ ಸರ್ಕಾರದ ಇತರ ಗಣ್ಯರೂ ಉಪಸ್ಥಿತರಿದ್ದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ‘‘ಖೇಲೋ ಇಂಡಿಯಾ ಯುವ ಕ್ರೀಡಾಕೂಟದ ಆತಿಥ್ಯ ವಹಿಸಲು ಮಧ್ಯಪ್ರದೇಶಕ್ಕೆ ಅವಕಾಶ ನೀಡಿದ್ದಕ್ಕಾಗಿ ಪ್ರಧಾನಮಂತ್ರಿಯವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ನಾವು ಇದನ್ನು ಅತ್ಯಂತ ವಿಶೇಷ ಖೇಲೋ ಇಂಡಿಯಾ ಕ್ರೀಡಾಕೂಟವನ್ನಾಗಿ ಮಾಡುತ್ತೇವೆ ಮತ್ತು 'ಅತಿಥಿ ದೇವೋ ಭವ' ಎಂಬ ನಮ್ಮ ತತ್ವವನ್ನು ಗಮನದಲ್ಲಿಟ್ಟುಕೊಂಡು ಅದನ್ನು ಆಯೋಜಿಸುತ್ತೇವೆ ಎಂಬ ಭರವಸೆ ನೀಡಿದರು’’.

"ಮಧ್ಯಪ್ರದೇಶದಲ್ಲಿ ನಾವು ಶೂಟಿಂಗ್ ಮತ್ತು ಜಲ ಕ್ರೀಡೆ ಅಕಾಡೆಮಿಗಳಂತಹ ವಿಶ್ವದರ್ಜೆಯ ಕ್ರೀಡಾಂಗಣಗಳನ್ನು ಹೊಂದಿದ್ದೇವೆ. ಇನ್ನೂ ಅನೇಕ ಸೌಲಭ್ಯಗಳು ತಲೆ ಎತ್ತುತ್ತಿವೆ. ಮೂಲಸೌಕರ್ಯದಲ್ಲಿ ಹೆಚ್ಚುತ್ತಿರುವ ಅಭಿವೃದ್ಧಿ ಜೊತೆಗೆ ಖೇಲೋ ಇಂಡಿಯಾ ಯುವ ಕ್ರೀಡಾಕೂಟದ ಆತಿಥ್ಯ ವಹಿಸುವ ಸುಯೋಗ ದೊರಕಿದ್ದು, ಮಧ್ಯಪ್ರದೇಶದಲ್ಲಿ ಕ್ರೀಡಾ ಕ್ರಾಂತಿ ಆಗುತ್ತದೆ ಎಂಬ ಖಾತ್ರಿ ತಮಗಿದೆ" ಎಂದೂ ಮಧ್ಯಪ್ರದೇಶದ ಮುಖ್ಯಮಂತ್ರಿಯವರು ಹೇಳಿದರು.

ಶ್ರೀ ಅನುರಾಗ್ ಸಿಂಗ್ ಠಾಕೂರ್ ಮಾತನಾಡಿ, ಮತ್ತೊಮ್ಮೆ ದೇಶೀಯ ಕ್ರೀಡೆಗಳು ಮುಂಬರುವ ಕೆಐವೈಜಿ ಭಾಗವಾಗಲಿವೆ ಎಂದು ತಿಳಿಸಿ, "ಒಲಿಂಪಿಕ್ ಕ್ರೀಡೆಗಳು ಮತ್ತು ದೇಶೀಯ ಕ್ರೀಡೆಗಳನ್ನು ಒಂದೇ ರೀತಿಯಲ್ಲಿ ಬೆಂಬಲಿಸುವುದು ಪ್ರಧಾನಮಂತ್ರಿಯವರ ದೃಷ್ಟಿಕೋನವಾಗಿದೆ. ಮಲ್ಲಕಂಬ ಕ್ರೀಡೆಯನ್ನು ತಮ್ಮ ರಾಜ್ಯ ಕ್ರೀಡೆಯನ್ನಾಗಿ ಮಾಡಿಕೊಂಡಿರುವ ಮಧ್ಯಪ್ರದೇಶಕ್ಕೆ  ಧನ್ಯವಾದ ಅರ್ಪಿಸುವುದಾಗಿ ಹೇಳಿದರು.

"ಕ್ರೀಡೆಯು ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ನಮ್ಮ ಕ್ರೀಡಾ ಪರಿಸರ ವ್ಯವಸ್ಥೆಯನ್ನು ರೂಪಿಸುವಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಿರುವ ಮಧ್ಯಪ್ರದೇಶದಂತಹ ರಾಜ್ಯಗಳು ಮುಂದೆ ಬರುತ್ತಿವೆ ಎಂಬುದು ತನಗೆ ಸಂತೋಷ ತಂದಿದೆ. ಎಲ್ಲಾ ರಾಜ್ಯಗಳು ಇದರಿಂದ ಕಲಿಯಬೇಕು ಮತ್ತು ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಕ್ರೀಡೆಗಳನ್ನು ಅಭಿವೃದ್ಧಿಪಡಿಸಲು ನಾವು ಒಟ್ಟಾಗಿ ಕೊಡುಗೆ ನೀಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬೇಕು" ಎಂದು ಕೇಂದ್ರ ಸಚಿವರು ತಿಳಿಸಿದರು.  ತಳಮಟ್ಟದಲ್ಲಿ ಕ್ರೀಡೆಗಳನ್ನು ಉತ್ತೇಜಿಸುವಲ್ಲಿ  ಮಹಾಕುಂಭ ಕ್ರೀಡಾಕೂಟ ಮತ್ತು (ಮಧ್ಯಪ್ರದೇಶ) ಮುಖ್ಯಮಂತ್ರಿಗಳ ಕಪ್ ನಂತಹ ಕ್ರೀಡಾ ಸ್ಪರ್ಧೆಗಳ ಪಾತ್ರವನ್ನು ಅವರು ಶ್ಲಾಘಿಸಿದರು.  ಖೇಲೋ ಇಂಡಿಯಾ ಯುವ ಕ್ರೀಡಾಕೂಟ ದೇಶದಲ್ಲಿ ಕ್ರೀಡೆಗಳು ಮತ್ತು ಕ್ರೀಡಾಪಟುಗಳನ್ನು ಉತ್ತೇಜಿಸುತ್ತಿದೆ ಎಂದು ಶ್ರೀ ಅನುರಾಗ್ ಸಿಂಗ್ ಠಾಕೂರ್ ಪುನರುಚ್ಚರಿಸಿದರು. ಈ ಕಾರಣಕ್ಕಾಗಿಯೇ ಹರಿಯಾಣದಲ್ಲಿ ನಡೆದ ಕಳೆದ ಖೇಲೋ ಇಂಡಿಯಾ ಯುವ ಕ್ರೀಡಾಕೂಟದಲ್ಲಿ 12 ರಾಷ್ಟ್ರೀಯ ದಾಖಲೆಗಳನ್ನು ಮುರಿಯಲಾಯಿತು ಎಂದು ಅವರು ಹೇಳಿದರು.

ತಮ್ಮ ಶುಭ ಹಾರೈಕೆಗಳನ್ನು ವ್ಯಕ್ತಪಡಿಸಿದ ಶ್ರೀ ನಿಸಿತ್ ಪ್ರಾಮಾಣಿಕ್, "ಮಧ್ಯಪ್ರದೇಶ ಸರ್ಕಾರವು ವರ್ಷಗಳಿಂದ ಕ್ರೀಡಾಪಟುಗಳನ್ನು ಬೆಂಬಲಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದೆ. ಕ್ರೀಡಾಪಟುಗಳು ತಮ್ಮ ಔನ್ನತ್ಯ ತಲುಪಲು ಸಹಾಯ ಮಾಡುವ ಪ್ರಧಾನಮಂತ್ರಿಯವರ ದೃಷ್ಟಿಕೋನವು ಹೇಗೆ ರೂಪುಗೊಳ್ಳುತ್ತಿದೆ ಎಂಬುದನ್ನು ಪ್ರತಿಯೊಂದು ರಾಜ್ಯವೂ ಉದಾಹರಣೆಯಾಗಿ ತೆಗೆದುಕೊಳ್ಳಬೇಕು. 'ಮಹಾಕಾಲ'ನ ಪುಣ್ಯ ಭೂಮಿಯಲ್ಲಿ ಮುಂಬರುವ ಖೇಲೋ ಇಂಡಿಯಾ ಯುವಕ್ರೀಡಾಕೂಟ ಅತ್ಯಂತ ವಿಶೇಷವಾಗಿರಲಿದೆ ಎಂದು ವಿಶ್ವಾಸ ತಮಗಿದೆ" ಎಂದು ತಿಳಿಸಿದರು.

ಶ್ರೀಮತಿ ಯಶೋಧರಾ ರಾಜೆ ಅವರು ಮಾತನಾಡಿ, ಭಾರತದಲ್ಲಿ ಕ್ರೀಡೆಗಳಿಗೆ ಸಕಾರಾತ್ಮಕ ವಾತಾವರಣವನ್ನು ಸೃಷ್ಟಿಸುವ ಕಾರ್ಯವನ್ನು ಸರ್ಕಾರ ಮಾಡಿದೆ. ಭಾರತೀಯ ಆಟಗಾರರು ವಿಶ್ವದಾದ್ಯಂತ ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ವಿಶೇಷವಾಗಿ ನಮ್ಮ ಹೆಣ್ಣುಮಕ್ಕಳು ಪದಕಗಳನ್ನು ಗೆಲ್ಲುವ ಮೂಲಕ ಕ್ರೀಡೆಯಲ್ಲಿ ಭಾರತದ ಹೆಮ್ಮೆಯನ್ನು ನಿರಂತರವಾಗಿ ಹೆಚ್ಚಿಸುತ್ತಿದ್ದಾರೆ ಎಂದು ಹೇಳಿದರು.

ಖೇಲೋ ಇಂಡಿಯಾ ಯುವ ಕ್ರೀಡಾಕೂಟದ ಮುಂಬರುವ ಆವೃತ್ತಿಯು ಒಟ್ಟು 27 ವಿಭಾಗಗಳನ್ನು ಒಳಗೊಂಡಿದೆ; ಆಟಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜಲಕ್ರೀಡೆಗಳನ್ನು ಸೇರಿಸಲಾಗುತ್ತಿದೆ. ಕ್ಯಾನೋ ಸ್ಲಾಲೋಮ್, ಕಿಯಾಕಿಂಗ್, ಕ್ಯಾನೋಯಿಂಗ್ ಮತ್ತು ರೋಯಿಂಗ್ ನಂತಹ ಹೊಸ ವಿಭಾಗಗಳು ಸಾಮಾನ್ಯ ಕ್ರೀಡೆಗಳು ಮತ್ತು ದೇಶೀಯ ಆಟಗಳ ಜೊತೆಗೆ ನೋಡಲು ಸಿಗುತ್ತವೆ. ಮಧ್ಯಪ್ರದೇಶದ ಭೋಪಾಲ್, ಇಂದೋರ್, ಉಜ್ಜಯಿನಿ, ಗ್ವಾಲಿಯರ್, ಜಬಲ್ಪುರ, ಮಾಂಡ್ಲಾ, ಖರ್ಗೋನ್ (ಮಹೇಶ್ವರ್) ಮತ್ತು ಬಾಲಾಘಾಟ್ ಸೇರಿ ಎಂಟು ನಗರಗಳಲ್ಲಿ ಈ ಕ್ರೀಡಾಕೂಟ ನಡೆಯಲಿದೆ.

***



(Release ID: 1869979) Visitor Counter : 114