ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ʻಅಂತಾರಾಷ್ಟ್ರೀಯ ಸೌರ ಮೈತ್ರಿಕೂಟʼದ (ಐ.ಎಸ್.ಎ.) 5ನೇ ಸಮಾವೇಶವನ್ನು ಉದ್ಘಾಟಿಸಿದ ಶ್ರೀ ಆರ್.ಕೆ.ಸಿಂಗ್ 


ಸೌರ-ಸನ್ನದ್ಧ ನೀತಿಗಳನ್ನು ರೂಪಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ಹಾಗೂ ರಾಷ್ಟ್ರೀಯ ಇಂಧನ ಸರಪಳಿಯ ನಿಯಂತ್ರಕ ನೀತಿಗಳ ಅಭಿವೃದ್ಧಿಯಲ್ಲಿ ʻಅಂತಾರಾಷ್ಟ್ರೀಯ ಸೌರ ಮೈತ್ರಿಕೂಟʼದ ಸದಸ್ಯ ರಾಷ್ಟ್ರಗಳಿಗೆ ಸಹಾಯ ಮಾಡುವುದು ನಮ್ಮ ಧ್ಯೇಯವಾಗಿದೆ ಎಂದು ಶ್ರೀ ಸಿಂಗ್ ಹೇಳಿದರು 

20 ದೇಶಗಳ ಸಚಿವರು, 110 ಸದಸ್ಯ ಮತ್ತು ಸಹ ಸಹಿದಾರ ದೇಶಗಳು ಹಾಗೂ 18 ಸಂಭಾವ್ಯ ಸದಸ್ಯ ದೇಶಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು

ಚರ್ಚೆಗಳು ಮತ್ತು ಸಮಾಲೋಚನೆಗಳು ಸೌರಶಕ್ತಿಯ ನಿಯೋಜನೆಯನ್ನು ಉತ್ತೇಜಿಸಲು ಮೈತ್ರಿಕೂಟದ ಸದಸ್ಯ ದೇಶಗಳ ನಡುವೆ ಹೆಚ್ಚಿನ ಒಮ್ಮತಕ್ಕೆ ದಾರಿ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ 
 

Posted On: 18 OCT 2022 4:28PM by PIB Bengaluru

ʻಅಂತಾರಾಷ್ಟ್ರೀಯ ಸೌರ ಮೈತ್ರಿಕೂಟʼದ ಐದನೇ ಸಮಾವೇಶವನ್ನು ಭಾರತದ ವಿದ್ಯುತ್‌, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ರಾಜ್ ಕುಮಾರ್ ಸಿಂಗ್ ಅವರು ಉದ್ಘಾಟಿಸಿದರು. ಸಮಾವೇಶದ ಅಧ್ಯಕ್ಷತೆಯನ್ನು ಶ್ರೀ ಆರ್‌.ಕೆ. ಸಿಂಗ್‌ ವಹಿಸಿದ್ದರು. ಭಾರತ ಗಣರಾಜ್ಯವು ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟ ಸಮಾವೇಶದ ಅಧ್ಯಕ್ಷರ ಹುದ್ದೆಯನ್ನು ಹೊಂದಿದ್ದು, ಫ್ರಾನ್ಸ್ ಸರಕಾರವು ಸಹ-ಅಧ್ಯಕ್ಷ ಸ್ಥಾನವನ್ನು ಹೊಂದಿದೆ. 20 ದೇಶಗಳ ಸಚಿವರು, 110 ಸದಸ್ಯ ರಾಷ್ಟ್ರಗಳು ಮತ್ತು ಸಹ ಸಹಿದಾರ ದೇಶಗಳು ಹಾಗೂ 18 ಸಂಭಾವ್ಯ ಸದಸ್ಯ ದೇಶಗಳ ಪ್ರತಿನಿಧಿಗಳು 5ನೇ ʻಐ.ಎಸ್.ಎ. ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು. 

 ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶ್ರೀ ರಾಜ್ ಕುಮಾರ್ ಸಿಂಗ್ ಅವರು, “ಪಳೆಯುಳಿಕೆ ಇಂಧನಗಳ ಮೇಲಿನ ಜಾಗತಿಕ ಅವಲಂಬನೆಯು ಕೇವಲ ಪರಿಸರಕ್ಕೆ ಮಾತ್ರವಲ್ಲ, ಆರ್ಥಿಕತೆಗೂ ಅನಾರೋಗ್ಯಕರ ಎಂಬುದನ್ನು ಕಳೆದ ಎರಡು ವರ್ಷಗಳ ಅವಧಿಯು ನಮಗೆ ಅನೇಕ ಬಾರಿ ನೆನಪಿಸಿದೆ. ಶುಭಸುದ್ದಿ ಏನೆಂದರೆ, ಈ ಸವಾಲುಗಳನ್ನು ಎದುರಿಸಲು ನಮಗೆ ಅಗತ್ಯವಿರುವ ಸಾಧನಗಳನ್ನು ನಾವು ಈಗಾಗಲೇ ಹೊಂದಿದ್ದೇವೆ, ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ಧಿಯು ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚು ಪರಿಣಾಮಕಾರಿ ಸಂಪನ್ಮೂಲಗಳ ಲಭ್ಯತೆಗೆ ಅನುವು ಮಾಡಿಕೊಡಲಿದೆ. ಇವುಗಳನ್ನು ನಾವು ಎಷ್ಟು ತ್ವರಿತವಾಗಿ ನಿಯೋಜಿಸಬಹುದು ಎಂದು ನಿರ್ಧರಿಸುವುದು ಈಗ ನಮಗೆ ಬಿಟ್ಟದ್ದು. ಶಕ್ತಿಸಂಪನ್ಮೂಲದ ಸ್ಥಿತ್ಯಂತರದ ಈ ಅನ್ವೇಷಣೆಯಲ್ಲಿ, ಇಂಧನ ಮತ್ತು ಇಂಧನ ಭದ್ರತೆಯನ್ನು ಹೊಂದಿಲ್ಲದ ವಿಶ್ವದ ಭಾಗಗಳಲ್ಲಿ ಅಭಿವೃದ್ಧಿಯನ್ನು ಸಕ್ರಿಯಗೊಳಿಸುವ ಜವಾಬ್ದಾರಿಯನ್ನೂ ನಾವು ಹೊಂದಿದ್ದೇವೆ,ʼʼ ಎಂದು ಹೇಳಿದರು.

ಸೌರ-ಸನ್ನದ್ಧ ನೀತಿಗಳನ್ನು ರೂಪಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ಹಾಗೂ ರಾಷ್ಟ್ರೀಯ ಇಂಧನ ಸರಪಳಿಯ ನಿಯಂತ್ರಕ ನೀತಿಗಳ ಅಭಿವೃದ್ಧಿಯಲ್ಲಿ ʻಅಂತಾರಾಷ್ಟ್ರೀಯ ಸೌರ ಮೈತ್ರಿಕೂಟʼದ ಸದಸ್ಯ ರಾಷ್ಟ್ರಗಳಿಗೆ ಸಹಾಯ ಮಾಡುವುದು ನಮ್ಮ ಧ್ಯೇಯವಾಗಿದೆ. ಜೊತೆಗೆ ʻಐ.ಎಸ್.ಎ.ʼನ ಸೌರೀಕರಣ ಕಾರ್ಯಸೂಚಿಯನ್ನು ಸಾಧಿಸಲು ಕಡಿಮೆ ವೆಚ್ಚದ ಹಣಕಾಸು ಸೌಲಭ್ಯಗಳ ಲಾಭವನ್ನು ಪಡೆಯಲು ಸಾರ್ವಜನಿಕ ಮತ್ತು ಖಾಸಗಿ ವಲಯದ ಸಂಸ್ಥೆಗಳೊಂದಿಗೆ ತೊಡಗಿಸಿಕೊಳ್ಳಲು ʻಐ.ಎಸ್.ಎ.ʼ ಸದಸ್ಯ ರಾಷ್ಟ್ರಗಳಿಗೆ ಸಹಾಯ ಮಾಡುವುದು ಸಹ ನಮ್ಮ ಉದ್ದೇಶವಾಗಿದೆ ಶ್ರೀ ಸಿಂಗ್ ವಿವರಿಸಿದರು.

“ಐ.ಎಸ್.ಎ. ಅನ್ನು ಆಂತರಿಕ ತಾಂತ್ರಿಕ ಪರಿಣತಿಯನ್ನು ಹೊಂದಿರುವ ಅಂತರರಾಷ್ಟ್ರೀಯ ಸಂಪನ್ಮೂಲ ಕೇಂದ್ರವಾಗಿ ರಚಿಸಲಾಗಿದೆ. ಸದಸ್ಯ ರಾಷ್ಟ್ರಗಳು ಇದನ್ನು ಸುಲಭವಾಗಿ ಬಳಸಿಕೊಳ್ಳಬಹುದಾಗಿದೆ ಮತ್ತು ದೊಡ್ಡ ಮಟ್ಟದಲ್ಲಿ ಯೋಜನೆಯ ಅನುಷ್ಠಾನಕ್ಕೆ ಮಾರ್ಗದರ್ಶನ ನೀಡುವ ಸಾಮರ್ಥ್ಯವನ್ನು ಸಹ ಇದು ಹೊಂದಿದೆ. ʻಐ.ಎಸ್.ಎ.ʼ ರಚನೆಯಾದಾಗಿನಿಂದ ಸುದೀರ್ಘ ಹಾದಿಯನ್ನು ಸಾಗಿ ಬಂದಿದೆ. ಇದಕ್ಕಾಗಿ ಮೈತ್ರಿಕೂಟದ ಪ್ರತಿಯೊಂದು ಸದಸ್ಯ ದೇಶ ನೀಡಿದ ಮಾರ್ಗದರ್ಶನ ಮತ್ತು ಬೆಂಬಲಕ್ಕೆ ಧನ್ಯವಾದಗಳು.  ನಾವು ದೊಡ್ಡ ವೇಗದಲ್ಲಿ ಮುಂದುವರಿಯುತ್ತಿದ್ದೇವೆ ಎಂದು ಹೇಳಿದರು. 

ʻಐ.ಎಸ್‌.ಎ.ʼ ಸಮಾವೇಶವು ಮೈತ್ರಿಕೂಟದ ಅತ್ಯುನ್ನತ ನಿರ್ಣಯ ವೇದಿಕೆಯಾಗಿದ್ದು, ಇದರಲ್ಲಿ ಪ್ರತಿಯೊಬ್ಬ ಸದಸ್ಯ ರಾಷ್ಟ್ರಕ್ಕೂ ಪ್ರಾತಿನಿಧ್ಯ ಒದಗಿಸಲಾಗುತ್ತದೆ. ಈ ವೇದಿಕೆಯು ʻಐ.ಎಸ್‌.ಎʼನ ರಚನಾ ಒಪ್ಪಂದದ ಅನುಷ್ಠಾನಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಅದರ ಉದ್ದೇಶವನ್ನು ಸಾಧಿಸಲು ಕೈಗೊಳ್ಳಬಹುದಾದ ಸಂಘಟಿತ ಕ್ರಮಗಳನ್ನು ನಿರ್ಧರಿಸುತ್ತದೆ. ಐ.ಎಸ್.ಎ.ಯ ವಾರ್ಷಿಕವಾಗಿ ಸಚಿವರ ಮಟ್ಟದಲ್ಲಿ ಸಭೆ ಸೇರುತ್ತದೆ.

 

ಇದು ಸೌರಶಕ್ತಿಯ ನಿಯೋಜನೆ, ಕಾರ್ಯಕ್ಷಮತೆ, ವಿಶ್ವಾಸಾರ್ಹತೆ, ವೆಚ್ಚ ಮತ್ತು ಹಣಕಾಸಿನ ಪ್ರಮಾಣಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳು ಮತ್ತು ಇತರ ಚಟುವಟಿಕೆಗಳ ಒಟ್ಟಾರೆ ಪರಿಣಾಮವನ್ನು ಮೌಲ್ಯಮಾಪನ ಮಾಡುತ್ತದೆ. ʻಐ.ಎಸ್.ಎ.ʼದ ಐದನೇ ಸಮಾವೇಶವು ಇಂಧನ ಲಭ್ಯತೆ, ಇಂಧನ ಭದ್ರತೆ ಮತ್ತು ಇಂಧನ ಪರಿವರ್ತನೆ ಎಂಬ ಮೂರು ನಿರ್ಣಾಯಕ ವಿಷಯಗಳ ಬಗ್ಗೆ ʻಐ.ಎಸ್.ಎʼನ ಯ ಪ್ರಮುಖ ಉಪಕ್ರಮಗಳ ಬಗ್ಗೆ ಚರ್ಚಿಸಲಿದೆ. 
 
ʻಐ.ಎಸ್.ಎʼನ ಐದನೇ ಸಮಾಔಶದಲ್ಲಿ 110 ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳ ನಡುವಿನ ಚರ್ಚೆಗಳು ಮತ್ತು ಸಮಾಲೋಚನೆಗಳು ಸೌರಶಕ್ತಿಯ ನಿಯೋಜನೆಯನ್ನು ಉತ್ತೇಜಿಸಲು ಮೈತ್ರಿಕೂಟದಲ್ಲಿ ಹೆಚ್ಚಿನ ಒಮ್ಮತಕ್ಕೆ ದಾರಿ ಮಾಡಲಿವೆ ಎಂದು ನಿರೀಕ್ಷಿಸಲಾಗಿದೆ. ಐದನೇ ಸಮಾವೇಶದ ನೇಪಥ್ಯದಲ್ಲಿ, ʻಅಂತರರಾಷ್ಟ್ರೀಯ ಸೌರ ಮೈತ್ರಿಕೂಟʼ, ʻಏಷ್ಯನ್ ಡೆವಲಪ್‌ಮೆಂಟ್‌ ಬ್ಯಾಂಕ್ʼ ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಸಹಯೋಗದೊಂದಿಗೆ, ಭಾರತ ಸರಕಾರವು 2022ರ ಅಕ್ಟೋಬರ್ 19ರಂದು ನವದೆಹಲಿಯ ಚಾಣಕ್ಯಪುರಿಯ ಹೋಟೆಲ್ ಅಶೋಕ್‌ನಲ್ಲಿ ಸ್ವಚ್ಛ ಇಂಧನ ಪರಿವರ್ತನೆಗಾಗಿ ಹೊಸ ತಂತ್ರಜ್ಞಾನಗಳ ಬಗ್ಗೆ ಉನ್ನತ ಮಟ್ಟದ ಸಮ್ಮೇಳನವನ್ನನು ಆಯೋಜಿಸಿದೆ. 

ಈ ಸಮ್ಮೇಳನವು ಸರ್ವಸದಸ್ಯರ ಮತ್ತು ವಿಷಯಾಧಾರಿತ ತಾಂತ್ರಿಕ ಅಧಿವೇಶನಗಳನ್ನು ಒಳಗೊಂಡಿರಲಿದೆ. ಸರ್ವಸದಸ್ಯರ ಅಧಿವೇಶನದಲ್ಲಿ ಸೌರಶಕ್ತಿ ತಂತ್ರಜ್ಞಾನಗಳು, ಹೂಡಿಕೆಗಳು ಮತ್ತು ಮಾರುಕಟ್ಟೆಗಳ ಸುತ್ತಲಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಗಮನ ಹರಿಸಲಾಗುವುದು. ವಿಷಯಾಧಾರಿತ ಚರ್ಚೆಗಳು ಈ ವಿಷಯಗಳ ಆಳವಾದ ತಿಳುವಳಿಕೆಗೆ ಸಹಾಯ ಮಾಡಲಿವೆ. ಚಿಂತಕರ ಚಾವಡಿ, ಶೈಕ್ಷಣಿಕ, ಉದ್ಯಮ, ಹಣಕಾಸು ವಲಯ ಸೇರಿದಂತೆ ವಿವಿಧ ಹಿನ್ನೆಗಳಿಂದ ಬಂದ ಭಾಷಣಕಾರರು ಮತ್ತು ನೀತಿ ನಿರೂಪಕರು ಇದರಲ್ಲಿ ಭಾಗವಹಿಸಲಿದ್ದು ತಮ್ಮ ಒಳನೋಟಗಳು ಹಾಗೂ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ. 
 
ಅಂತರರಾಷ್ಟ್ರೀಯ ಸೌರ ಮೈತ್ರಿಕೂಟದ ಕುರಿತು
ʻಅಂತರರಾಷ್ಟ್ರೀಯ ಸೌರ ಮೈತ್ರಿಕೂಟವು 110 ಸದಸ್ಯ ಮತ್ತು ಸಹಸಹಿದಾರ ದೇಶಗಳನ್ನು ಹೊಂದಿರುವ ಒಂದು ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ. ಇದು ವಿಶ್ವದಾದ್ಯಂತ ಇಂಧನ ಲಭ್ಯತೆ ಮತ್ತು ಭದ್ರತೆಯನ್ನು ಸುಧಾರಿಸಲು ಮತ್ತು ಕಾರ್ಬನ್-ತಟಸ್ಥ ಭವಿಷ್ಯಕ್ಕೆ ಪರಿವರ್ತನೆಯಾಗುವ ಸುಸ್ಥಿರ ಮಾರ್ಗವಾಗಿ ಸೌರಶಕ್ತಿಯನ್ನು ಉತ್ತೇಜಿಸಲು ಸರಕಾರಗಳೊಂದಿಗೆ ಕೆಲಸ ಮಾಡುತ್ತದೆ. 2030ರ ವೇಳೆಗೆ ಸೌರಶಕ್ತಿಯಲ್ಲಿ 1 ಟ್ರಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಗಳನ್ನು ತೊಡಗಿಸುವುದು ಮಾಡುವುದು ಹಾಗೂ ತಂತ್ರಜ್ಞಾನ ಮತ್ತು ಅದರ ಹಣಕಾಸು ವೆಚ್ಚವನ್ನು ಕಡಿಮೆ ಮಾಡುವುದು ಇದರ ಧ್ಯೇಯವಾಗಿದೆ. ಇದು ಕೃಷಿ, ಆರೋಗ್ಯ, ಸಾರಿಗೆ ಮತ್ತು ವಿದ್ಯುತ್ ಉತ್ಪಾದನಾ ವಲಯಗಳಲ್ಲಿ ಸೌರ ಶಕ್ತಿಯ ಬಳಕೆಯನ್ನು ಉತ್ತೇಜಿಸುತ್ತದೆ. ʻಐ.ಎಸ್.ಎ.ʼನ ಸದಸ್ಯ ರಾಷ್ಟ್ರಗಳು ನೀತಿಗಳು ಮತ್ತು ನಿಬಂಧನೆಗಳನ್ನು ಜಾರಿಗೊಳಿಸುವ ಮೂಲಕ, ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ಮೂಲಕ, ಸಾಮಾನ್ಯ ಮಾನದಂಡಗಳನ್ನು ಒಪ್ಪಿಕೊಳ್ಳುವ ಮೂಲಕ ಮತ್ತು ಹೂಡಿಕೆಗಳನ್ನು ಕ್ರೋಡೀಕರಿಸುವ ಮೂಲಕ ಬದಲಾವಣೆಗೆ ಚಾಲನೆ ನೀಡುತ್ತಿವೆ. ಈ ಕೆಲಸದ ಮೂಲಕ, ಐ.ಎಸ್.ಎ. ಸೌರ ಯೋಜನೆಗಳಿಗಾಗಿ ಹೊಸ ವ್ಯಾಪಾರ ಮಾದರಿಗಳನ್ನು ಗುರುತಿಸಿ ವಿನ್ಯಾಸಗೊಳಿಸಿದೆ ಮತ್ತು ಪರೀಕ್ಷಿಸಿದೆ. ಸೌರವಿಶ್ಲೇಷಣೆ ಮತ್ತು ಸಲಹೆಗಳನ್ನು ಸುಗಮಗೊಳಸುವ ಮೂಲಕ ತಮ್ಮ ಇಂಧನ ಕುರಿತ ಕಾನೂನು ಮತ್ತು ನೀತಿಗಳನ್ನು ಸೌರಸ್ನೇಹಿಯಾಗಿಸಲು ಸರಕಾರಗಳನ್ನು ಬೆಂಬಲಿಸುತ್ತಿದೆ. ವಿವಿಧ ದೇಶಗಳಿಂದ ಸೌರ ತಂತ್ರಜ್ಞಾನಕ್ಕೆ ಬೇಡಿಕೆ ಹೆಚ್ಚುವಂತೆ ಮಾಡಿದೆ; ಜೊತೆಗೆ ವೆಚ್ಚಗಳನ್ನು ಕಡಿಮೆ ಮಾಡಿದೆ. ಅಪಾಯಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ಈ ವಲಯವನ್ನು ಖಾಸಗಿ ಹೂಡಿಕೆಗೆ ಹೆಚ್ಚು ಆಕರ್ಷಕವಾಗಿಸುವ ಮೂಲಕ ಹಣಕಾಸಿನ ಲಭ್ಯತೆಯನ್ನು ಸುಧಾರಿಸಿದೆ. ಸೌರ ಎಂಜಿನಿಯರ್‌ಗಳು ಮತ್ತು ಇಂಧನ ನೀತಿ ನಿರೂಪಕರಿಗೆ ಸೌರ ತರಬೇತಿ, ದತ್ತಾಂಶ ಮತ್ತು ಒಳನೋಟಗಳಿಗೆ ಹೆಚ್ಚಿನ ಲಭ್ಯತೆಯನ್ನೂ ಒದಗಿಸಿದೆ.  2017ರ ಡಿಸೆಂಬರ್ 6ರಂದು 15 ದೇಶಗಳು ʻಐ.ಎಸ್.ಎ. ರಚನಾ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಮತ್ತು ಅನುಮೋದಿಸುವುದರೊಂದಿಗೆ, ʻಐ.ಎಸ್.ಎ.ʼ ಆರಂಭಗೊಂಡಿತು. ಭಾರತದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮೊದಲ ಅಂತಾರಾಷ್ಟ್ರೀಯ ಅಂತರ-ಸರಕಾರಿ ಸಂಸ್ಥೆ ಇದಾಗಿದೆ. ಸೌರಶಕ್ತಿಯ ಮೂಲಕ, ವಿಶೇಷವಾಗಿ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳು (ಎಲ್‌.ಡಿ.ಸಿʼ) ಮತ್ತು ಅಭಿವೃದ್ಧಿ ಹೊಂದುತ್ತಿರುವ ಸಣ್ಣ ದ್ವೀಪ ರಾಷ್ಟ್ರಗಳಲ್ಲಿ (ಎಸ್.ಐ.ಡಿ.ಎಸ್‌) ಕಡಿಮೆ ವೆಚ್ಚದ ಮತ್ತು ಪರಿವರ್ತನಾತ್ಮಕ ಪರಿಹಾರಗಳನ್ನು ನಿಯೋಜಿಸಲು ʻಐ.ಎಸ್.ಎ.ʼ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳು (ಎಂಡಿಬಿಗಳು), ಅಭಿವೃದ್ಧಿ ಹಣಕಾಸು ಸಂಸ್ಥೆಗಳು (ಡಿಎಫ್ಐಗಳು), ಖಾಸಗಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳು, ನಾಗರಿಕ ಸಮಾಜ ಮತ್ತು ಇತರ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ. 

***


(Release ID: 1868993) Visitor Counter : 241