ಪ್ರಧಾನ ಮಂತ್ರಿಯವರ ಕಛೇರಿ
ಹಿಮಾಚಲ ಪ್ರದೇಶದ ಚಂಬಾದಲ್ಲಿಎರಡು ಜಲವಿದ್ಯುತ್ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್‌ವೈ) -3ಕ್ಕೆ ಪ್ರಧಾನಮಂತ್ರಿ ಚಾಲನೆ
‘‘ ಮುಂದಿನ 25 ವರ್ಷಗಳು 130 ಕೋಟಿ ಭಾರತೀಯರಿಗೆ ಬಹಳ ನಿರ್ಣಾಯಕ ’’
‘‘ರಾಜ್ಯದಲ್ಲಿಅಭಿವೃದ್ಧಿಯ ವೇಗವನ್ನು ದುಪ್ಪಟ್ಟುಗೊಳಿಸಿದ ಡಬಲ್ ಎಂಜಿನ್ ಸರ್ಕಾರದ ಶಕ್ತಿಯನ್ನು ಹಿಮಾಚಲ ಇಂದು ಅರಿತುಕೊಂಡಿದೆ ’’
‘‘ ಗುಡ್ಡಗಾಡು ಪ್ರದೇಶಗಳಲ್ಲಿ, ದುರ್ಗಮ ಪ್ರದೇಶಗಳಲ್ಲಿ ಕ್ಷಿಪ್ರಗತಿಯ ಅಭಿವೃದ್ಧಿಯ ಮಹಾಯಾಗ ನಡೆಯುತ್ತಿದೆ ’’
‘‘ನಿಮ್ಮ (ಜನರ) ಆದೇಶವು ನನಗೆ ಸರ್ವೋಚ್ಚವಾಗಿದೆ. ನೀವು ನನ್ನ ಹೈ ಕಮಾಂಡ್ ’’
‘‘ ಸೇವಾ ಮನೋಭಾವವು ಬಲವಾಗಿರುವಾಗ ಮಾತ್ರ ಇಂತಹ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ ’’
‘‘ ಡಬಲ್ ಇಂಜಿನ್ ಸರ್ಕಾರ ಮಾತ್ರ ಆಧ್ಯಾತ್ಮಿಕತೆ ಮತ್ತು ಪ್ರವಾಸೋದ್ಯಮದ ಶಕ್ತಿಯನ್ನು ಗುರುತಿಸುತ್ತದೆ ’’
Posted On:
13 OCT 2022 2:48PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಿಮಾಚಲ ಪ್ರದೇಶದ ಚಂಬಾದಲ್ಲಿಎರಡು ಜಲವಿದ್ಯುತ್ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್ ವೈ)-3ಕ್ಕೆ ಚಾಲನೆ ನೀಡಿದರು.
ನಂತರ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಎರಡು ದಿನಗಳ ಹಿಂದೆ ತಾವು ಮಹಾಕಾಲ್ ನಗರಕ್ಕೆ ಭೇಟಿ ನೀಡಿದ್ದಾಗಿ ಮತ್ತು ಇಂದು ತಾವು ಮಣಿ ಮಹೇಶ್ವರ ಅವರ ಆಶ್ರಯಕ್ಕೆ ಬಂದಿರುವುದಾಗಿ ಹೇಳಿದರು. ಚಂಬಾದ ವಿವರಗಳನ್ನು ತಮ್ಮೊಂದಿಗೆ ಹಂಚಿಕೊಂಡ ಪ್ರದೇಶದ ಶಿಕ್ಷಕರಿಂದ ಬಂದ ಪತ್ರವನ್ನು ಪ್ರಧಾನಮಂತ್ರಿ ಅವರು ಸ್ಮರಿಸಿದರು. ಈ ಪತ್ರವನ್ನು ಪ್ರಧಾನಮಂತ್ರಿ ಅವರು ಮನ್ ಕಿ ಬಾತ್‌ನಲ್ಲಿ ಹಂಚಿಕೊಂಡಿದ್ದಾರೆ.
ಚಂಬಾ ಮತ್ತು ಇತರ ಕುಗ್ರಾಮಗಳಿಗೆ ರಸ್ತೆ ಸಂಪರ್ಕ ಮತ್ತು ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಅನೇಕ ಯೋಜನೆಗಳನ್ನು ಪ್ರಾರಂಭಿಸುವ ಅವಕಾಶ ತಮಗೆ ದೊರೆತಿರುವುದಕ್ಕೆ ಪ್ರಧಾನಮಂತ್ರಿ ಅವರು ಸಂತೋಷ ವ್ಯಕ್ತಪಡಿಸಿದರು. ಹಿಮಾಚಲ ಪ್ರದೇಶದಲ್ಲಿ ತಮ್ಮ ದಿನಗಳನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ಇಂದು ‘ಪರ್ವತದ ನೀರು ಮತ್ತು ಪರ್ವತದ ಯುವಕರು ಪರ್ವತಕ್ಕಾಗಿ ಕೆಲಸ ಮಾಡುವುದಿಲ್ಲ’ ಅಂದರೆ ಯೌವನ ಮತ್ತು ಬೆಟ್ಟಗಳ ನೀರನ್ನು ಬೆಟ್ಟಗಳಿಗೆ ಬಳಸುವುದಿಲ್ಲಎಂಬ ಗಾದೆಯು ಬದಲಾಗುತ್ತಿದೆ, ಎಂದು ಉಲ್ಲೇಖಿಸಿದರು. ಈಗ ‘‘ಬೆಟ್ಟದ ಯುವಕರು ಈ ಪ್ರದೇಶದ ಅಭಿವೃದ್ಧಿಯಲ್ಲಿ ಸಕ್ರಿಯ ಪಾತ್ರ ವಹಿಸಲಿದ್ದಾರೆ,’’ ಎಂದು ಅವರು ಹೇಳಿದರು.
‘‘ ಮುಂದಿನ 25 ವರ್ಷಗಳು 130 ಕೋಟಿ ಭಾರತೀಯರಿಗೆ ಬಹಳ ನಿರ್ಣಾಯಕವಾಗಿವೆ,’’ ಎಂದು ಪ್ರಧಾನಮಂತ್ರಿ ಹೇಳಿದರು. ‘‘ ಭಾರತದ ಆಜಾದಿ ಕಾ ಅಮೃತ್ ಕಾಲ್ ಪ್ರಾರಂಭವಾಗಿದೆ, ಈ ಸಮಯದಲ್ಲಿ ನಾವು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಗುರಿಯನ್ನು ಸಾಧಿಸಬೇಕಾಗಿದೆ. ಮುಂಬರುವ ಕೆಲವು ತಿಂಗಳುಗಳಲ್ಲಿ, ಹಿಮಾಚಲದ ಸ್ಥಾಪನೆಯ 75 ವರ್ಷಗಳು ಸಹ ಪೂರ್ಣಗೊಳ್ಳಲಿವೆ. ಅಂದರೆ, ಭಾರತವು ಸ್ವಾತಂತ್ರ ್ಯದ 100 ನೇ ವರ್ಷವನ್ನು ಆಚರಿಸಿದಾಗ, ಹಿಮಾಚಲವು ಅದರ ಸ್ಥಾಪನೆಯ 100 ನೇ ವರ್ಷವನ್ನು ಆಚರಿಸುತ್ತದೆ. ಆದ್ದರಿಂದಲೇ ಮುಂಬರುವ 25 ವರ್ಷಗಳ ಪ್ರತಿಯೊಂದು ದಿನವೂ ನಮಗೆ ಬಹಳ ಮುಖ್ಯವಾಗಿದೆ,’’ ಎಂದು ಪ್ರಧಾನಿ ವಿವರಿಸಿದರು.
ಹಿಮಾಚಲ ಪ್ರದೇಶವು ದೆಹಲಿಯಲ್ಲಿಅಷ್ಟೇನೂ ಪ್ರಭಾವ ಬೀರದ ದಿನಗಳನ್ನು ಮತ್ತು ಅದರ ಬೇಡಿಕೆಗಳು ಮತ್ತು ಮನವಿಗಳನ್ನು ನಿರ್ಲಕ್ಷಿಸಿದ ದಿನಗಳನ್ನು ಪ್ರಧಾನಮಂತ್ರಿ ಅವರು ಸ್ಮರಿಸಿದರು, ಇದರ ಪರಿಣಾಮವಾಗಿ ಚಂಬಾದಂತಹ ಪ್ರಮುಖ ನಂಬಿಕೆ ಮತ್ತು ನೈಸರ್ಗಿಕ ಸೌಂದರ್ಯದ ಸ್ಥಳಗಳು ಅಭಿವೃದ್ಧಿಯ ಓಟದಲ್ಲಿ ಹಿಂದುಳಿದಿವೆ. ಚಂಬಾದ ಸಾಮರ್ಥ್ಯಗಳ ಬಗ್ಗೆ ತಮಗೆ ಅರಿವಿರುವುದರಿಂದ ಅಭಿವೃದ್ಧಿ ಆಕಾಂಕ್ಷೆಯ ಜಿಲ್ಲೆಯಾಗಿ ಇದರ ಬಗ್ಗೆ ವಿಶೇಷ ಗಮನ ಹರಿಸಲಾಗಿದೆ ಎಂದು ಶ್ರೀ ನರೇಂದ್ರ ಮೋದಿ ಮಾಹಿತಿ ನೀಡಿದರು. ಕೇರಳದ ಮಕ್ಕಳು ಏಕ ಭಾರತ ಶ್ರೇಷ್ಠ ಭಾರತದ ಸ್ಫೂರ್ತಿಯಿಂದ ಹಿಮಾಚಲ ಪ್ರದೇಶಕ್ಕೆ ಬರುತ್ತಿರುವ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅಭಿವೃದ್ಧಿಯ ವೇಗವನ್ನು ದುಪ್ಪಟ್ಟುಗೊಳಿಸಿರುವ ಡಬಲ್ ಇಂಜಿನ್ ಸರ್ಕಾರದ ಶಕ್ತಿಯನ್ನು ಹಿಮಾಚಲ ಇಂದು ಅರಿತುಕೊಂಡಿದೆ ಎಂದು ಪ್ರಧಾನಿ ಅವರು ಹೇಳಿದರು. ಹಿಂದಿನ ಸರ್ಕಾರಗಳು ಕೆಲಸ ಮತ್ತು ಒತ್ತಡದ ಹೊರೆ ಕಡಿಮೆ ಇರುವ ಮತ್ತು ರಾಜಕೀಯ ಲಾಭಗಳು ಹೆಚ್ಚಿರುವ ಪ್ರದೇಶಗಳಿಗೆ ಮಾತ್ರ ಸೇವೆಗಳನ್ನು ಒದಗಿಸುತ್ತಿದ್ದವು ಎಂದು ಪ್ರಧಾನಮಂತ್ರಿ ತಿಳಿಸಿದರು. ಇದರ ಪರಿಣಾಮವಾಗಿ, ದೂರದ ಮತ್ತು ಬುಡಕಟ್ಟು ಪ್ರದೇಶಗಳ ಅಭಿವೃದ್ಧಿ ದರವು ಸಾಕಷ್ಟು ಕಡಿಮೆ ಇತ್ತು. ‘‘ ಅದು ರಸ್ತೆ, ವಿದ್ಯುತ್ ಅಥವಾ ನೀರಾಗಿರಲಿ, ಅಂತಹ ಪ್ರದೇಶಗಳ ಜನರು ಪ್ರಯೋಜನಗಳನ್ನು ಪಡೆದ ಕೊನೆಯವರು,’’ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು, ‘‘ಡಬಲ್ ಎಂಜಿನ್ ಸರ್ಕಾರದ ಕಾರ್ಯಶೈಲಿ ಉಳಿದವುಗಳಿಗಿಂತ ಭಿನ್ನವಾಗಿದೆ. ಜನರ ಜೀವನವನ್ನು ಹೇಗೆ ಸುಲಭಗೊಳಿಸುವುದು ಎಂಬುದು ನಮ್ಮ ಆದ್ಯತೆಯಾಗಿದೆ. ಅದಕ್ಕಾಗಿಯೇ ನಾವು ಬುಡಕಟ್ಟು ಪ್ರದೇಶಗಳು ಮತ್ತು ಗುಡ್ಡಗಾಡು ಪ್ರದೇಶಗಳಿಗೆ ಗರಿಷ್ಠ ಒತ್ತು ನೀಡುತ್ತಿದ್ದೇವೆ,’’ ಎಂದು ಅವರು ಹೇಳಿದರು. ದೂರದ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಜೀವನವನ್ನು ಬದಲಾಯಿಸುತ್ತಿರುವ ಅನಿಲ ಸಂಪರ್ಕಗಳು, ಕೊಳವೆ ನೀರು, ಆರೋಗ್ಯ ಸೇವೆಗಳು, ಆಯುಷ್ಮಾನ್ ಭಾರತ್ ಮತ್ತು ರಸ್ತೆ ಸಂಪರ್ಕದಂತಹ ಕ್ರಮಗಳನ್ನು ಅವರು ಪಟ್ಟಿ ಮಾಡಿದರು. ‘‘ ನಾವು ಹಳ್ಳಿಗಳಲ್ಲಿ ಸ್ವಾಸ್ಥ್ಯ ಕೇಂದ್ರಗಳನ್ನು ನಿರ್ಮಿಸುತ್ತಿದ್ದರೆ, ಅದೇ ಸಮಯದಲ್ಲಿ, ನಾವು ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸಹ ತೆರೆಯುತ್ತಿದ್ದೇವೆ,’’ ಎಂದು ಅವರು ಪ್ರತಿಪಾದಿಸಿದರು. ಪ್ರವಾಸೋದ್ಯಮವನ್ನು ರಕ್ಷಿಸುವ ಸಲುವಾಗಿ ಲಸಿಕೆಯಲ್ಲಿ ಹಿಮಾಚಲಕ್ಕೆ ಹೇಗೆ ಆದ್ಯತೆ ನೀಡಲಾಯಿತು ಎಂದು ಅವರು ಉಲ್ಲೇಖಿಸಿದರು. ದೇಶದಲ್ಲೇ ಅತ್ಯಂತ ವೇಗವಾಗಿ ಶೇಕಡಾವಾರು ಲಸಿಕೆಯನ್ನು ತಲುಪಿದ್ದಕ್ಕಾಗಿ ಶ್ರೀ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಮತ್ತು ಅವರ ತಂಡವನ್ನು ಶ್ಲಾಘಿಸಿದರು.
ಗ್ರಾಮೀಣ ರಸ್ತೆಗಳ ನಿರ್ಮಾಣದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು, 2014 ರವರೆಗೆ, ಸ್ವಾತಂತ್ರ್ಯಾನಂತರ 1800 ಕೋಟಿ ರೂ.ಗಳ ವೆಚ್ಚದಲ್ಲಿ7000 ಕಿ.ಮೀ ಉದ್ದದ ಗ್ರಾಮೀಣ ರಸ್ತೆಗಳನ್ನು ನಿರ್ಮಿಸಲಾಗಿದೆ. ಆದರೆ ಕಳೆದ 8 ವರ್ಷಗಳಲ್ಲಿ, ಕೇವಲ 5000 ಕೋಟಿ ರೂ.ಗಳ ಆರ್ಥಿಕ ವೆಚ್ಚದಲ್ಲಿ12000 ಕಿ.ಮೀ ಉದ್ದದ ರಸ್ತೆಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು. ಇಂದಿನಿಂದ ಆರಂಭಿಸಲಾದ ಯೋಜನೆಗಳು 3000 ಕಿ.ಮೀ ಗ್ರಾಮೀಣ ರಸ್ತೆಗಳನ್ನು ಸೃಷ್ಟಿಸಲಿವೆ ಎಂದು ಅವರು ಮಾಹಿತಿ ನೀಡಿದರು.
ಹಿಮಾಚಲ ಪ್ರದೇಶವು ಮನವಿಗಳೊಂದಿಗೆ ದೆಹಲಿಗೆ ಬರುತ್ತಿದ್ದ ದಿನಗಳು ಕಳೆದುಹೋದವು ಎಂದು ಪ್ರಧಾನಮಂತ್ರಿ ಹೇಳಿದರು. ಈಗ ಹಿಮಾಚಲವು ಹೊಸ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಅದರ ಪ್ರಗತಿ ಮತ್ತು ಅದರ ಹಕ್ಕುಗಳಿಗಾಗಿ ಬೇಡಿಕೆಗಳ ವಿವರಗಳೊಂದಿಗೆ ಬರುತ್ತದೆ. ‘‘ ನಿಮ್ಮ (ಜನರ) ಆದೇಶವು ನನಗೆ ಸರ್ವೋಚ್ಚವಾಗಿದೆ. ನೀವು ನನ್ನ ಹೈ ಕಮಾಂಡ್. ನಾನು ಇದನ್ನು ನನ್ನ ಸೌಭಾಗ್ಯವೆಂದು ಪರಿಗಣಿಸುತ್ತೇನೆ, ಅದಕ್ಕಾಗಿಯೇ ನಿಮ್ಮ ಸೇವೆ ವಿಭಿನ್ನ ಸಂತೋಷವನ್ನು ಹೊಂದಿದೆ ಮತ್ತು ನನಗೆ ಶಕ್ತಿಯನ್ನು ನೀಡುತ್ತದೆ,’’ ಎಂದು ನರೇಂದ್ರ ಮೋದಿ ಅವರು ಹೇಳಿದರು.
ಕಳೆದ 8 ವರ್ಷಗಳಲ್ಲಿ ಆಗಿರುವ ಅಭಿವೃದ್ಧಿಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, ‘‘ ದೇಶಾದ್ಯಂತ ಗುಡ್ಡಗಾಡು ಪ್ರದೇಶಗಳಲ್ಲಿ, ದುರ್ಗಮ ಪ್ರದೇಶಗಳಲ್ಲಿ, ಬುಡಕಟ್ಟು ಪ್ರದೇಶಗಳಲ್ಲಿ ಕ್ಷಿಪ್ರ ಅಭಿವೃದ್ಧಿಯ ಮಹಾ ಯಜ್ಞ ನಡೆಯುತ್ತಿದೆ,’’ ಎಂದು ಹೇಳಿದರು. ಇದರ ಪ್ರಯೋಜನಗಳು ಹಿಮಾಚಲದ ಚಂಬಾಕ್ಕೆ ಮಾತ್ರ ಸೀಮಿತವಾಗಿಲ್ಲ, ಆದರೆ ಪಾಂಗಿ-ಭರ್ಮೌರ್, ಛೋಟಾ-ಬಡಾ ಭಂಗಲ್, ಗಿರಿಂಪಾರ್, ಕಿನ್ನೌರ್ ಮತ್ತು ಲಾಹೌಲ್-ಸ್ಪಿತಿಯಂತಹ ಪ್ರದೇಶಗಳು ಸಹ ಇದರ ಪ್ರಯೋಜನವನ್ನು ಪಡೆಯುತ್ತಿವೆ ಎಂದು ಶ್ರೀ ನರೇಂದ್ರ ಮೋದಿ ಮಾಹಿತಿ ನೀಡಿದರು. ಮಹತ್ವಾಕಾಂಕ್ಷೆಯ ಜಿಲ್ಲೆಗಳ ಅಭಿವೃದ್ಧಿ ಶ್ರೇಯಾಂಕದಲ್ಲಿ ಎರಡನೇ ಸ್ಥಾನ ಪಡೆದ ಚಂಬಾ ನಗರವನ್ನು ಅವರು ಅಭಿನಂದಿಸಿದರು.
ಬುಡಕಟ್ಟು ಸಮುದಾಯಗಳ ಅಭಿವೃದ್ಧಿಯ ಮೇಲೆ ಗಮನ ಕೇಂದ್ರೀಕರಿಸಿದ ಪ್ರಧಾನಮಂತ್ರಿ ಅವರು, ಸಿರ್ಮೌರ್‌ನ ಗಿರಿಪಾರ್ ಪ್ರದೇಶದ ಹ್ಯಾಟಿ ಸಮುದಾಯಕ್ಕೆ ಬುಡಕಟ್ಟು ಸ್ಥಾನಮಾನವನ್ನು ನೀಡುವಲ್ಲಿ ಸರ್ಕಾರ ಮತ್ತೊಂದು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಮಾಹಿತಿ ನೀಡಿದರು. ‘‘ ಬುಡಕಟ್ಟು ಜನರ ಅಭಿವೃದ್ಧಿಗೆ ನಮ್ಮ ಸರ್ಕಾರ ಎಷ್ಟು ಆದ್ಯತೆ ನೀಡುತ್ತಿದೆ ಎಂಬುದನ್ನು ಇದು ತೋರಿಸುತ್ತದೆ,’’ ಎಂದು ಅವರು ಹೇಳಿದರು. ಹಿಮಾಚಲ ಮತ್ತು ಕೇಂದ್ರದಲ್ಲಿನ ಹಿಂದಿನ ಸರ್ಕಾರಗಳು ದೂರದ ಮತ್ತು ಬುಡಕಟ್ಟು ಹಳ್ಳಿಗಳ ಬಗ್ಗೆ ಚುನಾವಣೆಯ ಸಮಯದಲ್ಲಿ ಮಾತ್ರ ಯೋಚಿಸಿದವು, ಆದರೆ ಇಂದಿನ ಡಬಲ್ ಎಂಜಿನ್ ಸರ್ಕಾರವು 24 ಗಂಟೆಯೂ ಜನರ ಸೇವೆ ಮಾಡಲು ಶ್ರಮಿಸುತ್ತಿದೆ ಎಂದು ಪ್ರಧಾನಮಂತ್ರಿ ವಿವರಿಸಿದರು. ಕೊರೋನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ಬಡ ಕುಟುಂಬಗಳಿಗೆ ಪರಿಹಾರ ಒದಗಿಸುವ ಸರ್ಕಾರದ ಪ್ರಯತ್ನಗಳನ್ನು ಸ್ಮರಿಸಿದ ನರೇಂದ್ರ ಮೋದಿ ಅವರು, ಉಚಿತ ಪಡಿತರ ಕಾರ್ಯಕ್ರಮದ ಬಗ್ಗೆ ಬೆಳಕು ಚೆಲ್ಲಿದರು. ‘‘ ಕಳೆದ ಒಂದೂವರೆ ವರ್ಷಗಳಿಂದ ಸರ್ಕಾರವು ದೇಶದ 80 ಕೋಟಿಗೂ ಹೆಚ್ಚು ಜನರಿಗೆ ಆಹಾರ ಧಾನ್ಯಗಳನ್ನು ಒದಗಿಸುತ್ತಿದೆ ಎಂದು ಜಗತ್ತು ಭಾರತದತ್ತ ಆಶ್ಚರ್ಯದಿಂದ ನೋಡುತ್ತಿದೆ,’’ ಎಂದು ಅವರು ಹೇಳಿದರು. ಶ್ರೀ ನರೇಂದ್ರ ಮೋದಿ ಅವರು ಭಾರತದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮದ ಯಶಸ್ಸನ್ನು ಬಿಂಬಿಸಿದರು ಮತ್ತು ಅದರ ಯಶಸ್ಸಿಗೆ ಆರೋಗ್ಯ ಇಲಾಖೆ ಮತ್ತು ಆಶಾ ಕಾರ್ಯಕರ್ತರ ಸಕ್ರಿಯ ಭಾಗವಹಿಸುವಿಕೆಯನ್ನು ಶ್ಲಾಘಿಸಿದರು. ಸೇವಾ ಮನೋಭಾವವು ಬಲವಾಗಿರುವಾಗ ಮಾತ್ರ ಇಂತಹ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ ಎಂದು ಅವರು ಹೇಳಿದರು.
ಗುಡ್ಡಗಾಡು ಮತ್ತು ಬುಡಕಟ್ಟು ಪ್ರದೇಶಗಳು ಉದ್ಯೋಗದ ವಿಷಯದಲ್ಲಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ನಾವು ಈ ಪ್ರದೇಶದ ಶಕ್ತಿಯನ್ನು ಇಲ್ಲಿನ ಜನರ ಶಕ್ತಿಯಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು. ‘‘ ಬುಡಕಟ್ಟು ಪ್ರದೇಶಗಳಲ್ಲಿ ನೀರು ಮತ್ತು ಅರಣ್ಯದ ಸಂಪತ್ತು ಅಮೂಲ್ಯವಾಗಿದೆ,’’ ಎಂದು ಅವರು ಹೇಳಿದರು. ಚಂಬಾ ಜಲ ವಿದ್ಯುಚ್ಛಕ್ತಿಯ ಉತ್ಪಾದನೆಯನ್ನು ಪ್ರಾರಂಭಿಸಿದ ದೇಶದ ಪ್ರದೇಶಕ್ಕೆ ಸೇರಿದೆ ಎಂದು ಪ್ರಧಾನಮಂತ್ರಿ ಅವರು ಗಮನಸೆಳೆದರು. ಇಂದು ಶಂಕುಸ್ಥಾಪನೆ ನೆರವೇರಿಸಿದ ಯೋಜನೆಗಳು ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಚಂಬಾ ಮತ್ತು ಹಿಮಾಚಲ ಪ್ರದೇಶಗಳ ಪಾಲನ್ನು ಹೆಚ್ಚಿಸಲಿವೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ‘‘ ಚಂಬಾ, ಹಿಮಾಚಲ ಇಲ್ಲಿ ಉತ್ಪಾದಿಸುವ ವಿದ್ಯುತ್‌ನಿಂದ ನೂರಾರು ಕೋಟಿ ಗಳಿಸುತ್ತದೆ ಮತ್ತು ಈ ಸ್ಥಳದ ಯುವಕರಿಗೆ ಉದ್ಯೋಗಾವಕಾಶಗಳು ಸಿಗುತ್ತವೆ,’’ ಎಂದು ಅವರು ಹೇಳಿದರು. ‘‘ ಕಳೆದ ವರ್ಷವೂ ಇಂತಹ 4 ದೊಡ್ಡ ಜಲವಿದ್ಯುತ್ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಕೆಲವು ದಿನಗಳ ಹಿಂದೆ ಬಿಲಾಸ್‌ಪುರದಲ್ಲಿ ಪ್ರಾರಂಭಿಸಲಾದ ಹೈಡ್ರೋ ಎಂಜಿನಿಯರಿಂಗ್ ಕಾಲೇಜು ಹಿಮಾಚಲ ಪ್ರದೇಶದ ಯುವಕರಿಗೂ ಪ್ರಯೋಜನಕಾರಿಯಾಗಿದೆ,’’ ಎಂದು ಅವರು ಹೇಳಿದರು.
ತೋಟಗಾರಿಕೆ, ಪಶುಸಂಗೋಪನೆ ಮತ್ತು ಕರಕುಶಲ ಮತ್ತು ಕಲೆಗಳಲ್ಲಿ ಹಿಮಾಚಲ ಪ್ರದೇಶದ ಶಕ್ತಿಯ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿ ಅವರು, ಸ್ಥಳೀಯ ಉತ್ಪನ್ನಗಳಾದ ಹೂವುಗಳು, ಚಂಬಾಸ್ ಚುಖ್, ರಾಜ್ಮಾ ಮಾದ್ರಾ, ಚಂಬಾ ಚಪ್ಪಲ್, ಚಂಬಾ ಥಾಲ್ ಮತ್ತು ಪಂಗಿ ಕಿ ತಂಗಿಯಂತಹ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸಿದ್ದಕ್ಕಾಗಿ ಸ್ಥಳೀಯ ಸ್ವಸಹಾಯ ಗುಂಪುಗಳನ್ನು ಶ್ಲಾಘಿಸಿದರು. ಅವರು ಈ ಉತ್ಪನ್ನಗಳನ್ನು ದೇಶದ ಪರಂಪರೆ ಎಂದು ಕರೆದರು. ವೋಕಲ್ ಫಾರ್ ಲೋಕಲ್‌ನ ಉದಾಹರಣೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ಸ್ವಸಹಾಯ ಗುಂಪುಗಳಿಗೆ ಸಂಬಂಧಿಸಿದ ಮಹಿಳೆಯರನ್ನು ಶ್ಲಾಘಿಸಿದರು, ಏಕೆಂದರೆ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸುವ ಸರ್ಕಾರದ ಪ್ರಯತ್ನಗಳಿಗೆ ಅವರು ಪ್ರಚೋದನೆ ನೀಡಿದರು. ಈ ಉತ್ಪನ್ನಗಳನ್ನು ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿಯೂ ಉತ್ತೇಜಿಸಲಾಗುತ್ತಿದೆ ಮತ್ತು ಈ ವಸ್ತುಗಳನ್ನು ವಿದೇಶಿ ಗಣ್ಯರಿಗೆ ಪ್ರಸ್ತುತಪಡಿಸಲು ಅವರು ಪ್ರಯತ್ನಿಸುತ್ತಾರೆ, ಇದರಿಂದ ಹಿಮಾಚಲದ ಹೆಸರು ಇಡೀ ವಿಶ್ವದಲ್ಲಿಹೊರಹೋಗುತ್ತದೆ ಮತ್ತು ಹಿಮಾಚಲದಲ್ಲಿತಯಾರಿಸಿದ ಉತ್ಪನ್ನಗಳ ಬಗ್ಗೆ ಹೆಚ್ಚಿನ ಜನರು ತಿಳಿದುಕೊಳ್ಳುತ್ತಾರೆ ಎಂದು ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು.
‘‘ ಡಬಲ್ ಇಂಜಿನ್ ಸರ್ಕಾರವು ತನ್ನ ಸಂಸ್ಕೃತಿ, ಪರಂಪರೆ ಮತ್ತು ನಂಬಿಕೆಯನ್ನು ಗೌರವಿಸುವ ಸರ್ಕಾರವಾಗಿದೆ. ಚಂಬಾ ಸೇರಿದಂತೆ ಇಡೀ ಹಿಮಾಚಲ ಪ್ರದೇಶವು ನಂಬಿಕೆ ಮತ್ತು ಪರಂಪರೆಯ ಭೂಮಿಯಾಗಿದೆ. ಹಿಮಾಚಲ ಪ್ರದೇಶದ ಪರಂಪರೆ ಮತ್ತು ಪ್ರವಾಸೋದ್ಯಮದ ಬಗ್ಗೆ ಬೆಳಕು ಚೆಲ್ಲಿದೆ,’’ ಎಂದು ಹೇಳಿದ ಪ್ರಧಾನಮಂತ್ರಿ ಅವರು, ಕುಲ್ಲುವಿನಲ್ಲಿ ದಸರಾ ಉತ್ಸವಕ್ಕೆ ತಾವು ನೀಡಿದ ಭೇಟಿಯನ್ನು ಸ್ಮರಿಸಿದರು ಮತ್ತು ನಾವು ಒಂದು ಕಡೆ ಪರಂಪರೆ ಮತ್ತು ಇನ್ನೊಂದು ಕಡೆ ಪ್ರವಾಸೋದ್ಯಮವನ್ನು ಹೊಂದಿದ್ದೇವೆ ಎಂದು ಹೇಳಿದರು. ಡಾಲ್ ಹೌಸಿ ಮತ್ತು ಖಜ್ಜಿಯಾರ್‌ನಂತಹ ಪ್ರವಾಸಿ ಸ್ಥಳಗಳು ಆಧ್ಯಾತ್ಮಿಕತೆ ಮತ್ತು ಪ್ರವಾಸೋದ್ಯಮ ಸಂಪತ್ತಿನ ವಿಷಯದಲ್ಲಿಹಿಮಾಚಲಕ್ಕೆ ಪ್ರೇರಕ ಶಕ್ತಿಯಾಗಲಿದೆ. ‘‘ ಡಬಲ್ ಇಂಜಿನ್ ಸರ್ಕಾರ ಮಾತ್ರ ಈ ಶಕ್ತಿಯನ್ನು ಗುರುತಿಸುತ್ತದೆ. ಹಿಮಾಚಲವು ಮನಸ್ಸು ಮಾಡಿದೆ ಮತ್ತು ಹಳೆಯ ಸಂಪ್ರದಾಯವನ್ನು ಬದಲಾಯಿಸುತ್ತದೆ ಮತ್ತು ಹೊಸ ಸಂಪ್ರದಾಯವನ್ನು ಸೃಷ್ಟಿಸುತ್ತದೆ,’’ ಎಂದು ಅವರು ಹೇಳಿದರು.
ಬೃಹತ್ ಜನಸಮೂಹವನ್ನು ಗುರುತಿಸಿದ ಪ್ರಧಾನಮಂತ್ರಿ ಅವರು, ಈ ಬೃಹತ್ ಸಭೆಯಲ್ಲಿ ಹಿಮಾಚಲ ಪ್ರದೇಶದ ಬೆಳವಣಿಗೆ ಮತ್ತು ಸಂಕಲ್ಪಗಳ ಶಕ್ತಿಯನ್ನು ತಾವು ಕಾಣುತ್ತಿರುವುದಾಗಿ ಹೇಳುವ ಮೂಲಕ ಮಾತು ಮುಗಿಸಿದರು. ಹಿಮಾಚಲ ಪ್ರದೇಶದ ಜನರ ಸಂಕಲ್ಪಗಳು ಮತ್ತು ಕನಸುಗಳಿಗೆ ತಮ್ಮ ನಿರಂತರ ಬೆಂಬಲದ ಭರವಸೆಯನ್ನು ಅವರು ಈ ವೇಳೆ ನೀಡಿದರು.
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಜೈ ರಾಮ್ ಠಾಕೂರ್, ಹಿಮಾಚಲ ಪ್ರದೇಶದ ರಾಜ್ಯಪಾಲರಾದ ಶ್ರೀ ರಾಜೇಂದ್ರ ವಿಶ್ವನಾಥ್ ಅರ್ಲೇಕರ್, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್, ಸಂಸದರಾದ ಶ್ರೀ ಕಿಶನ್ ಕಪೂರ್, ಶ್ರೀಮತಿ ಇಂದು ಗೋಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ರಾದ ಶ್ರೀ ಸುರೇಶ್ ಕಶ್ಯಪ್ ಮತ್ತಿತರರು ಉಪಸ್ಥಿತರಿದ್ದರು.
ಹಿನ್ನೆಲೆ
ಪ್ರಧಾನಮಂತ್ರಿ ಅವರು ಎರಡು ಜಲವಿದ್ಯುತ್ ಯೋಜನೆಗಳಾದ 48 ಮೆಗಾವ್ಯಾಟ್ ಚಂಜು-3 ಜಲವಿದ್ಯುತ್ ಯೋಜನೆ ಮತ್ತು 30 ಮೆಗಾವ್ಯಾಟ್ ಸಾಮರ್ಥ್ಯದ ದೇವಥಾಲ್ ಚಂಜು ಜಲವಿದ್ಯುತ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಎರಡೂ ಯೋಜನೆಗಳು ವಾರ್ಷಿಕವಾಗಿ 270 ದಶಲಕ್ಷ ಯೂನಿಟ್‌ಗಿಂತಲೂ ಹೆಚ್ಚು ವಿದ್ಯುತ್ತನ್ನು ಉತ್ಪಾದಿಸುತ್ತವೆ ಮತ್ತು ಈ ಯೋಜನೆಗಳಿಂದ ಹಿಮಾಚಲ ಪ್ರದೇಶವು ಸುಮಾರು 110 ಕೋಟಿ ರೂ.ಗಳ ವಾರ್ಷಿಕ ಆದಾಯವನ್ನು ಪಡೆಯುವ ನಿರೀಕ್ಷೆಯಿದೆ.
ಹಿಮಾಚಲ ಪ್ರದೇಶದ ಸುಮಾರು 3125 ಕಿಲೋಮೀಟರ್ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್ ವೈ) -3ಕ್ಕೆ ಪ್ರಧಾನಮಂತ್ರಿ ಅವರು ಚಾಲನೆ ನೀಡಿದರು. ರಾಜ್ಯದ 15 ಗಡಿ ಮತ್ತು ದೂರದ ಬ್ಲಾಕ್‌ಗಳಲ್ಲಿ440 ಕಿಲೋಮೀಟರ್ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರವು ಈ ಹಂತದಲ್ಲಿ420 ಕೋಟಿ ರೂ.ಗಳಿಗೂ ಹೆಚ್ಚು ಮೊತ್ತವನ್ನು ಮಂಜೂರು ಮಾಡಿದೆ.
******
(Release ID: 1867573)
Read this release in:
Bengali
,
English
,
Urdu
,
Hindi
,
Marathi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam