ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಹ್ಮದಾಬಾದ್‌ನ ಅಸರ್ವದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 1275 ಕೋಟಿ ರೂ.ಗಳ ವಿವಿಧ ಆರೋಗ್ಯ ಸೌಲಭ್ಯಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದ ಪ್ರಧಾನಿ 


"ಸರಕಾರದ ಹೃದಯ ಮತ್ತು ಉದ್ದೇಶದಲ್ಲಿ ಜನರ ಸಮಸ್ಯೆಗಳ ಬಗ್ಗೆ ಕಾಳಜಿ ಇಲ್ಲದಿದ್ದರೆ, ಸೂಕ್ತ ಆರೋಗ್ಯ ಮೂಲಸೌಕರ್ಯವನ್ನು ಸೃಷ್ಟಿಸಲು ಸಾಧ್ಯವಿಲ್ಲ”

"ಗುಜರಾತಿನಲ್ಲಿ, ಆಗಿರುವ ಕೆಲಸಗಳು ಮತ್ತು ಸಾಧನೆಗಳು ಎಷ್ಟಿವೆಯೆಂದರೆ, ಕೆಲವೊಮ್ಮೆ ಅವುಗಳನ್ನು ಎಣಿಸಲು ಸಹ ಕಷ್ಟವಾಗುತ್ತದೆ" 

"ಇಂದು ʻಸಬ್ ಕಾ ಸಾಥ್, ಸಬ್ ಕಾ ವಿಕಾಸ್ʼ, ʻಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಾಯಸ್ʼ ಸರಕಾರವು ಗುಜರಾತ್‌ಗಾಗಿ ದಣಿವರಿಯದೆ ಕೆಲಸ ಮಾಡುತ್ತಿದೆ"

"ಸರಕಾರವು ಸಂವೇದನಾಶೀಲವಾಗಿದ್ದರೆ, ದುರ್ಬಲ ವರ್ಗಗಳು ಮತ್ತು ಸಮಾಜದ ತಾಯಂದಿರು ಮತ್ತು ಸಹೋದರಿಯರು ಸೇರಿದಂತೆ ಇಡೀ ಸಮಾಜವು ಅತಿದೊಡ್ಡ ಪ್ರಯೋಜನವನ್ನು ಪಡೆಯುತ್ತದೆ"

Posted On: 11 OCT 2022 4:39PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಹಮದಾಬಾದ್‌ನ ಅಸರ್ವದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 1275 ಕೋಟಿ ರೂ. ಮೌಲ್ಯದ ವಿವಿಧ ಆರೋಗ್ಯ ಸೌಲಭ್ಯಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ನೆರವೇರಿಸಿದರು.

ಆಸ್ಪತ್ರೆಗೆ ಆಗಮಿಸಿದ ಪ್ರಧಾನಮಂತ್ರಿಯವರು, ಮೊದಲು ಅಲ್ಲಿನ ಆರೋಗ್ಯ ಮೂಲಸೌಕರ್ಯ ಯೋಜನೆಗಳ ಸ್ಥಳಗಳ ಮೂಲಕ ನಡೆದು ಸಾಗಿದರು. ಆ ನಂತರ ಪ್ರಧಾನ ಮಂತ್ರಿಯವರು ವೇದಿಕೆಗೆ ಆಗಮಿಸಿದರು. ಅಲ್ಲಿ ಅವರನ್ನು ಸನ್ಮಾನಿಸಲಾಯಿತು. ಪ್ರಧಾನಮಂತ್ರಿಯವರು ಫಲಕವನ್ನು ಅನಾವರಣಗೊಳಿಸಿ, ಇವುಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು: (i) ಮಂಜುಶ್ರೀ ಮಿಲ್ ಕ್ಯಾಂಪಸ್‌ನಲ್ಲಿ ʻಮೂತ್ರಪಿಂಡ ರೋಗಗಳ ಸಂಶೋಧನಾ ಕೇಂದ್ರʼ(ಐಕೆಡಿಆರ್‌ಸಿ) (ii) ಅಸರ್ವದ ಸಾರ್ವಜನಿಕ ಆಸ್ಪತ್ರೆ ಕ್ಯಾಂಪಸ್‌ನಲ್ಲಿ ʻಗುಜರಾತ್ ಕ್ಯಾನ್ಸರ್ ಸಂಶೋಧನಾ ಸಂಸ್ಥೆʼಯ 1ಸಿ ಆಸ್ಪತ್ರೆ ಕಟ್ಟಡ, (iii) ʻಯು.ಎನ್. ಮೆಹ್ತಾ ಆಸ್ಪತ್ರೆʼಯಲ್ಲಿ ಹಾಸ್ಟೆಲ್ (iv) ʻಒಂದು ರಾಜ್ಯ-ಒಂದು ಡಯಾಲಿಸಿಸ್ʼನೊಂದಿಗೆ ಗುಜರಾತ್‌ ಡಯಾಲಿಸಿಸ್‌ ಕಾರ್ಯಕ್ರಮದ ವಿಸ್ತರಣೆ (v) ಗುಜರಾತ್ ರಾಜ್ಯಕ್ಕೆ ಕೀಮೋ ಕಾರ್ಯಕ್ರಮ ವಿಸ್ತರಣೆ. ಇದರ ನಂತರ ಪ್ರಧಾನಮಂತ್ರಿಯವರು ಇವುಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು: (i) ಗೋಧ್ರಾದಲ್ಲಿ ನೂತನ ವೈದ್ಯಕೀಯ ಕಾಲೇಜು (ii) ಸೋಲಾದಲ್ಲಿ ʻಜಿ.ಎಂ.ಇ.ಆರ್.ಎಸ್. ವೈದ್ಯಕೀಯ ಕಾಲೇಜಿʼನ ಹೊಸ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, (iii) ಅಸರ್ವದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಾಲಕಿಯರ ವೈದ್ಯಕೀಯ ಕಾಲೇಜು, (iv) ಅಸರ್ವದಲ್ಲಿ ರೆನ್ ಬಸೆರಾ ಸಾರ್ವಜನಿಕ ಆಸ್ಪತ್ರೆ, (v) ಭಿಲೋಡಾದಲ್ಲಿ 124 ಹಾಸಿಗೆಗಳ ಜಿಲ್ಲಾ ಆಸ್ಪತ್ರೆ,  (vi) ಅಂಜರ್‌ನಲ್ಲಿ 100 ಹಾಸಿಗೆಗಳ ಉಪ-ಜಿಲ್ಲಾ ಆಸ್ಪತ್ರೆ. 

ಪ್ರಧಾನಮಂತ್ರಿಯವರು ಮೊರ್ವಾ ಹದಾಫ್ನ ಸಮುದಾಯ ಆರೋಗ್ಯ ಕೇಂದ್ರ (ಸಿಹೆಚ್‌ಸಿ), ಜುನಾಗಢದ ಜಿ.ಎಂ.ಎಲ್.ಆರ್.ಎಸ್. ಮತ್ತು ವಾಘೈನ ಸಮುದಾಯ ಆರೋಗ್ಯ ಕೇಂದ್ರದಲ್ಲಿನ (ಸಿಹೆಚ್‌ಸಿ) ರೋಗಿಗಳೊಂದಿಗೆ ಸಂವಾದ ನಡೆಸಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಆರೋಗ್ಯಕ್ಕೆ ಸಂಬಂಧಿಸಿದಂತೆ ಗುಜರಾತ್‌ ಪಾಲಿಗೆ ಇದೊಂದು ಮಹತ್ವದ ದಿನವಾಗಿದೆ ಎಂದು ಹೇಳಿದರು. ಇದೇ ವೇಳೆ, ಈ ಯೋಜನೆಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಿದ್ದಕ್ಕಾಗಿ ಈ ಯೋಜನೆಗಳಿಗೆ ಸಂಬಂಧಿಸಿದ ಪ್ರತಿಯೊಬ್ಬರನ್ನೂ ಅವರು ಅಭಿನಂದಿಸಿದರು. ವಿಶ್ವದ ಅತ್ಯಂತ ಸುಧಾರಿತ ವೈದ್ಯಕೀಯ ತಂತ್ರಜ್ಞಾನ, ಸುಧಾರಿತ ಪ್ರಯೋಜನಗಳು ಮತ್ತು ವೈದ್ಯಕೀಯ ಮೂಲಸೌಕರ್ಯಗಳನ್ನು ಗುಜರಾತ್ನ ಜನತೆಗೆ ಲಭ್ಯವಾಗುವಂತೆ ಮಾಡಲಾಗುವುದು. ಆ ಮೂಲಕ ಸಮಾಜಕ್ಕೆ ಪ್ರಯೋಜನವಾಗಲಿದೆ ಎಂದು ಶ್ರೀ ಮೋದಿ ಹೇಳಿದರು. ಈ ವೈದ್ಯಕೀಯ ಸೌಲಭ್ಯಗಳ ಲಭ್ಯತೆಯೊಂದಿಗೆ, ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳಲ್ಲಿ ವೆಚ್ಚ ಭರಿಸಲು ಸಾಧ್ಯವಾಗದವರು ಇಲ್ಲಿನ ಸರಕಾರಿ ಆಸ್ಪತ್ರೆಗಳಿಗೇ ಹೋಗಬಹುದು. ಅಲ್ಲಿ ತುರ್ತಾಗಿ ಸೇವೆ ಸಲ್ಲಿಸಲು ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗುವುದು ಎಂದು ಪ್ರಧಾನಿ ಮಾಹಿತಿ ನೀಡಿದರು. ಸುಮಾರು ಮೂರೂವರೆ ವರ್ಷಗಳ ಹಿಂದೆ, 1200 ಹಾಸಿಗೆಗಳ ಸೌಲಭ್ಯದೊಂದಿಗೆ ತಾಯಿ ಮತ್ತು ಮಕ್ಕಳ ಆರೋಗ್ಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸುವ ಅವಕಾಶ ತಮಗೆ ಸಿಕ್ಕಿತ್ತು ಎಂದು ಪ್ರಧಾನಮಂತ್ರಿಯವರು ನೆನಪಿಸಿಕೊಂಡರು. 

ʻಮೂತ್ರಪಿಂಡ ರೋಗಗಳ ಸಂಸ್ಥೆʼ ಹಾಗೂ ʻಯು.ಎನ್. ಮೆಹ್ತಾ ಹೃದ್ರೋಗ ಆಸ್ಪತ್ರೆʼಯ ಸಾಮರ್ಥ್ಯ ಮತ್ತು ಸೇವೆಗಳನ್ನು ಸಹ ವಿಸ್ತರಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು. ʻಗುಜರಾತ್ ಕ್ಯಾನ್ಸರ್ ಸಂಶೋಧನಾ ಸಂಸ್ಥೆʼಯ ಹೊಸ ಕಟ್ಟಡದಲ್ಲಿ ಉನ್ನತೀಕರಿಸಿದ ಅಸ್ಥಿಮಜ್ಜೆ ಕಸಿಯಂತಹ ಸೌಲಭ್ಯಗಳು ಸಹ ಪ್ರಾರಂಭವಾಗುತ್ತಿವೆ. ʻಸೈಬರ್-ನೈಫ್ʼನಂತಹ  ಅತ್ಯಾಧುನಿಕ ತಂತ್ರಜ್ಞಾನ ಲಭ್ಯವಿರುವ ದೇಶದ ಮೊದಲ ಸರಕಾರಿ ಆಸ್ಪತ್ರೆ ಇದಾಗಿದೆ ಎಂದು ಅವರು ಮಾಹಿತಿ ನೀಡಿದರು. ಗುಜರಾತ್, ವೇಗವಾಗಿ ಅಭಿವೃದ್ಧಿಯ ಹೊಸ ಎತ್ತರವನ್ನು ಏರುತ್ತಿದೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ಆಗ ರಾಜ್ಯದಲ್ಲಿ ಅಭಿವೃದ್ಧಿಯ ವೇಗವು ಗುಜರಾತ್ ನಂತೆಯೇ ಇರುತ್ತದೆ, ಇಲ್ಲಿ ಮಾಡಲಾದ ಕೆಲಸಗಳು ಮತ್ತು ಸಾಧನೆಗಳು ಎಷ್ಟಿವೆಯೆಂದರೆ, ಕೆಲವೊಮ್ಮೆ ಅವುಗಳನ್ನು ಎಣಿಸುವುದು ಸಹ ಕಷ್ಟವಾಗುತ್ತದೆ ಎಂದು ಅವರು ಗಮನಸೆಳೆದರು. 

20-25 ವರ್ಷಗಳ ಹಿಂದೆ ಗುಜರಾತಿನಲ್ಲಿ ಆರೋಗ್ಯ ವ್ಯವಸ್ಥೆಯ ದುಸ್ಥಿತಿಯ ಬಗ್ಗೆ ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. ಇದರ ಭಾಗವಾಗಿ ಆರೋಗ್ಯ ಕ್ಷೇತ್ರದಲ್ಲಿ ರಾಜ್ಯದ ಹಿಂದುಳಿದಿರುವಿಕೆ, ಅಸಮರ್ಪಕ ಶಿಕ್ಷಣ, ವಿದ್ಯುತ್ ಅಭಾವ, ದುರಾಡಳಿತ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳನ್ನು ಪಟ್ಟಿ ಮಾಡಿದರು. ಇದೆಲ್ಲಕ್ಕಿಂತಲೂ ಮಿಗಿಲಾಗಿ ರಾಜ್ಯವನ್ನು ಕಾಡುತ್ತಿದ್ದ ದೊಡ್ಡ ಅನಾರೋಗ್ಯವೆಂದರೆ, ಅದು ʻವೋಟ್ ಬ್ಯಾಂಕ್ ರಾಜಕೀಯʼ.   ಆದರೆ, ಇಂದು ಗುಜರಾತ್ ಆ ಎಲ್ಲ ರೋಗಗಳಿಂದ ಮುಕ್ತಿ ಹೊಂದಿ ಮುಂದೆ ಸಾಗುತ್ತಿದೆ ಎಂದು ಅವರು ಹೇಳಿದರು. ಇಂದು, ಹೈಟೆಕ್ ಆಸ್ಪತ್ರೆಗಳ ವಿಷಯಕ್ಕೆ ಬಂದಾಗ, ಗುಜರಾತ್ ಅಗ್ರಸ್ಥಾನದಲ್ಲಿದೆ. ಶಿಕ್ಷಣ ಸಂಸ್ಥೆಗಳ ವಿಷಯಕ್ಕೆ ಬಂದಾಗಲೂ ಗುಜರಾತ್ಗೆ ಇಂದು ಸರಿಸಾಟಿಯಲ್ಲ. ಗುಜರಾತ್ ಮುನ್ನಡೆಯುತ್ತಿದೆ ಮತ್ತು ಬೆಳವಣಿಗೆಯ ಹೊಸ ಪಥಗಳನ್ನು ಏರುತ್ತಿದೆ ಎಂದು ಅವರು ಹೇಳಿದರು. ಅಂತೆಯೇ, ಗುಜರಾತ್‌ನಲ್ಲಿ ನೀರು, ವಿದ್ಯುತ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ಅದ್ಭುತವಾಗಿ ಸುಧಾರಿಸಿದೆ ಎಂದರು. "ಇಂದು ʻಸಬ್ ಕಾ ಸಾಥ್, ಸಬ್ ಕಾ ವಿಕಾಸ್ʼ, ʻಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಾಯಸ್ʼ ಸರಕಾರವು ಗುಜರಾತ್‌ಗಾಗಿ ದಣಿವರಿಯದೆ ಕೆಲಸ ಮಾಡುತ್ತಿದೆ," ಎಂದು ಶ್ರೀ ಮೋದಿ ಹೇಳಿದರು. 

ಇಂದು ಅನಾವರಣಗೊಂಡ ಆರೋಗ್ಯ ಮೂಲಸೌಕರ್ಯ ಯೋಜನೆಗಳು ಗುಜರಾತ್‌ಗೆ ಹೊಸ ಅಸ್ಮಿತೆಯನ್ನು ನೀಡಿವೆ ಮತ್ತು ಈ ಯೋಜನೆಗಳು ಗುಜರಾತ್ ಜನತೆಯ ಸಾಮರ್ಥ್ಯದ ಸಂಕೇತಗಳಾಗಿವೆ ಎಂದು ಪ್ರಧಾನಿ ಬಣ್ಣಿಸಿದರು. ಉತ್ತಮ ಆರೋಗ್ಯ ಸೌಲಭ್ಯಗಳ ಜೊತೆಗೆ, ವಿಶ್ವದ ಅತ್ಯುನ್ನತ ವೈದ್ಯಕೀಯ ಸೌಲಭ್ಯಗಳು ಈಗ ನಮ್ಮದೇ ರಾಜ್ಯದಲ್ಲಿ ನಿರಂತರ ಬೆಳವಣಿಗೆಗೆ ಸಾಕ್ಷಿಯಾಗುತ್ತಿವೆ ಎಂಬ ಹೆಮ್ಮೆಯ ಭಾವನೆಯನ್ನು ಗುಜರಾತ್‌ನ ಜನರು ಅನುಭವಿಸುತ್ತಾರೆ ಎಂದು ಅವರು ಹೇಳಿದರು. ಇದು ಗುಜರಾತ್ ನ ವೈದ್ಯಕೀಯ ಪ್ರವಾಸೋದ್ಯಮ ಸಾಮರ್ಥ್ಯಕ್ಕೂ ಕೊಡುಗೆ ನೀಡುತ್ತದೆ ಎಂದು ತಿಳಿಸಿದರು. 

ಉತ್ತಮ ಆರೋಗ್ಯ ಮೂಲಸೌಕರ್ಯ ಒದಗಿಸಲು ಉದ್ದೇಶ ಮತ್ತು ನೀತಿಗಳು ಎರಡೂ ಹೊಂದಿಕೆಯಾಗುವ ಅಗತ್ಯವಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ಸರಕಾರದ ಉದ್ದೇಶ ಮತ್ತು ಹೃದಯದಲ್ಲಿ ಜನರ ಸಮಸ್ಯೆಗಳ ಬಗ್ಗೆ ಕಾಳಜಿ ತುಂಬಿರದಿದ್ದರೆ, ಸೂಕ್ತ ಆರೋಗ್ಯ ಮೂಲಸೌಕರ್ಯವನ್ನು ಸೃಷ್ಟಿಸಲು ಸಾಧ್ಯವಿಲ್ಲ," ಎಂದು ಅವರು ಹೇಳಿದರು. ಸಮಗ್ರ ವಿಧಾನದೊಂದಿಗೆ ಹೃತ್ಪೂರ್ವಕವಾಗಿ ಪ್ರಯತ್ನಗಳನ್ನು ಮಾಡಿದಾಗ, ಅವುಗಳ ಫಲಿತಾಂಶಗಳು ಸಹ ಅಷ್ಟೇ ಬಹುಮುಖಿಯಾಗಿರುತ್ತವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. "ಇದು ಗುಜರಾತ್‌ನ ಯಶಸ್ಸಿನ ಮಂತ್ರ" ಎಂದು ಅವರು ಬಣ್ಣಿಸಿದರು. 

ವೈದ್ಯಕೀಯ ವಿಜ್ಞಾನದ ದೃಷ್ಟಾಂತಗಳನ್ನು ಮುಂದುವರಿಸಿದ ಪ್ರಧಾನಿ ಅವರು, ತಾವು ಮುಖ್ಯಮಂತ್ರಿಯಾಗಿದ್ದಾಗ 'ಶಸ್ತ್ರಚಿಕಿತ್ಸೆ' ನಡೆಸಿದ್ದೇನೆ. ಅಂದರೆ, ಉದ್ದೇಶ ಮತ್ತು ಬಲದೊಂದಿಎಗ ಹಳೆಯ ಅಪ್ರಸ್ತುತ ವ್ಯವಸ್ಥೆಗಳನ್ನು ಕಿತ್ತೆಸೆದಿದ್ದೇನೆ ಎಂದು ಪ್ರಧಾನಿ ಹೇಳಿದರು. ರಾಜ್ಯದ ಅವ್ಯವಸ್ಥೆ ಸರಿಪಡಿಸಲು ನೀಡಲಾದ ಎರಡನೆಯ 'ಔಷಧ'ವೆಂದರೆ ಅದು ವ್ಯವಸ್ಥೆಯನ್ನು ಬಲಪಡಿಸಲು ಸದಾ ಹೊಸ ಆವಿಷ್ಕಾರ. ಮೂರನೆಯ 'ಆರೈಕೆ' ಅಂದರೆ ಅದು ಆರೋಗ್ಯ ವ್ಯವಸ್ಥೆಯ ಅಭಿವೃದ್ಧಿಗಾಗಿ ಸಂವೇದನಾಶೀಲತೆಯಿಂದ ಕೆಲಸ ಮಾಡಿದ್ದು. ಪ್ರಾಣಿಗಳ ಆರೈಕೆಗೂ ಗಮನ ಹರಿಸಿದ ಮೊದಲ ರಾಜ್ಯ ಗುಜರಾತ್ ಎಂದು ಅವರು ಮಾಹಿತಿ ನೀಡಿದರು. ರೋಗಗಳು ಮತ್ತು ಸಾಂಕ್ರಾಮಿಕಗಳ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ʻಒಂದು ಭೂಮಿ-ಒಂದು ಆರೋಗ್ಯʼ ಅಭಿಯಾನವನ್ನು ಬಲಪಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಸರಕಾರ ಎಚ್ಚರಿಕೆಯಿಂದ ವರ್ತಿಸಿದೆ ಎಂದರು. "ನಾವು ಜನರ ನಡುವೆ ಹೋಗಿ, ಅವರ ದುಃಸ್ಥಿತಿಯನ್ನು ಹಂಚಿಕೊಂಡೆವು," ಎಂದು ಅವರು ಹೇಳಿದರು. ಸಾರ್ವಜನಿಕ ಸಹಭಾಗಿತ್ವದೊಂದಿಗೆ ಜನರನ್ನು ಒಗ್ಗೂಡಿಸುವ ಮೂಲಕ ಮಾಡಿದ ಪ್ರಯತ್ನಗಳ ಬಗ್ಗೆ ವಿವರಿಸಿದ ಪ್ರಧಾನಮಂತ್ರಿಯವರು, “ವ್ಯವಸ್ಥೆಯು ಆರೋಗ್ಯವಂತವಾಗಿ ಬದಲಾಗಿದ್ದರಿಂದ, ಗುಜರಾತ್‌ನ ಆರೋಗ್ಯ ಕ್ಷೇತ್ರವೂ ಆರೋಗ್ಯಪೂರ್ಣವಾಯಿತು ಮತ್ತು ಗುಜರಾತ್ ಅನ್ನು ದೇಶದಲ್ಲಿ ಒಂದು ಉದಾಹರಣೆಯಾಗಿ ನೋಡಲಾಗುತ್ತಿದೆ,ʼʼ ಎಂದು ಹೇಳಿದರು. 

ಗುಜರಾತ್‌ನಿಂದ ಕಲಿತ ವಿಷಯಗಳನ್ನು ಕೇಂದ್ರ ಸರಕಾರದ ಮಟ್ಟದಲ್ಲೂ ಅನ್ವಯಿಸಿದ್ದಾಗಿ ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು. ಕಳೆದ 8 ವರ್ಷಗಳಲ್ಲಿ, ಕೇಂದ್ರ ಸರಕಾರವು ದೇಶದ ವಿವಿಧ ಭಾಗಗಳಲ್ಲಿ 22 ಹೊಸ ʻಏಮ್ಸ್ʼಗಳನ್ನು ಸ್ಥಾಪಿಸಿದೆ ಮತ್ತು ಗುಜರಾತ್ ಕೂಡ ಇದರ ಪ್ರಯೋಜನವನ್ನು ಪಡೆದುಕೊಂಡಿದೆ ಎಂದು ಅವರು ಮಾಹಿತಿ ನೀಡಿದರು. " ರಾಜ್‌ಕೋಟ್‌ನಲ್ಲಿ ಗುಜರಾತ್ನ ಮೊದಲ ʻಏಮ್ಸ್ʼ ತಲೆ ಎತ್ತಿದೆ,ʼʼ ಎಂದು ಶ್ರೀ ಮೋದಿ ತಿಳಿಸಿದರು. ಗುಜರಾತ್‌ನ ಆರೋಗ್ಯ ಕ್ಷೇತ್ರದಲ್ಲಿ ಮಾಡಿದ ಕಾರ್ಯಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, “ವೈದ್ಯಕೀಯ ಸಂಶೋಧನೆ, ಜೈವಿಕ ತಂತ್ರಜ್ಞಾನ ಸಂಶೋಧನೆ ಮತ್ತು ಔಷಧ ಸಂಶೋಧನೆಯಲ್ಲಿ ಅತ್ಯುತ್ತಮ ಸಾಧನೆ ಮೂಲಕ ಗುಜರಾತ್ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುವ ದಿನ ದೂರವಿಲ್ಲ,ʼʼ ಎಂದು ಹೇಳಿದರು. 

ಸರಕಾರವು ಸಂವೇದನಾಶೀಲವಾಗಿದ್ದರೆ, ದುರ್ಬಲ ವರ್ಗಗಳು ಮತ್ತು ತಾಯಂದಿರು ಹಾಗೂ ಸಹೋದರಿಯರು ಸೇರಿದಂತೆ ಇಡೀ ಸಮಾಜವು ಅತಿದೊಡ್ಡ ಪ್ರಯೋಜನವನ್ನು ಪಡೆಯುತ್ತದೆ ಎಂದು ಪ್ರಧಾನಿ ಹೇಳಿದರು. ಶಿಶುಮರಣ ಪ್ರಮಾಣ ಮತ್ತು ತಾಯಂದಿರ ಮರಣ ಪ್ರಮಾಣವು ರಾಜ್ಯಕ್ಕೆ ತೀವ್ರ ಕಳವಳಕಾರಿಯಾಗಿದ್ದ ಸಮಯವನ್ನು ಮತ್ತು ಹಿಂದಿನ ಸರಕಾರಗಳು ಇಂತಹ ದುರದೃಷ್ಟಕರ ಘಟನೆಗಳಿಗೆ ವಿಧಿಯನ್ನು ದೂಷಿಸಿದ್ದನ್ನು ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. ನಮ್ಮ ಸರಕಾರವು ನಮ್ಮ ತಾಯಂದಿರು ಮತ್ತು ಮಕ್ಕಳ ಹಿತದೃಷ್ಟಿಯ ನಿಲುವನ್ನು ಹೊಂದಿದೆ ಎಂದು ತಿಳಿಸಿದರು. "ಕಳೆದ ಇಪ್ಪತ್ತು ವರ್ಷಗಳಲ್ಲಿ ನಾವು ಅಗತ್ಯವಾದ ನೀತಿಗಳನ್ನು ರೂಪಿಸಿದ್ದೇವೆ ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತಂದಿದ್ದೇವೆ, ಇದು ಮರಣ ಪ್ರಮಾಣಗಳಲ್ಲಿ ತೀವ್ರ ಇಳಿಕೆಗೆ ಕಾರಣವಾಗಿದೆ," ಎಂದು ಶ್ರೀ ಮೋದಿ ಮಾಹಿತಿ ನೀಡಿದರು. 'ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನ್' ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿಯವರು, ಜನಿಸುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆ ಈಗ ನವಜಾತ ಗಂಡು ಮಕ್ಕಳ ಸಂಖ್ಯೆಯನ್ನು ಮೀರಿಸಿದೆ ಎಂದು ಹೇಳಿದರು. 'ಚಿರಂಜೀವಿ' ಮತ್ತು 'ಖಿಲ್ಖಿಲಾಹತ್' ನಂತಹ ಗುಜರಾತ್ ಸರಕಾರದ ನೀತಿಗಳು ಇಂತಹ ಯಶಸ್ಸಿಗೆ ಕಾರಣ ಎಂದು ಪ್ರಧಾನಿ ಹೇಳಿದರು. ಗುಜರಾತ್‌ನ ಯಶಸ್ಸು ಮತ್ತು ಪ್ರಯತ್ನಗಳು 'ಇಂದ್ರಧನುಷ್' ಮತ್ತು 'ಮಾತೃವಂದನಾ'ದಂತಹ ಕೇಂದ್ರ ಸರಕಾರದ ಯೋಜನೆಗಳಿಗೆ ದಾರಿದೀಪವಾಗಿವೆ ಎಂದು ಶ್ರೀ ಮೋದಿ ಹೇಳಿದರು. 

ಭಾಷಣದ ಸಮಾರೋಪದಲ್ಲಿ ಪ್ರಧಾನಮಂತ್ರಿಯವರು ಬಡವರು ಮತ್ತು ನಿರ್ಗತಿಕರ ಚಿಕಿತ್ಸೆಗಾಗಿ ಜಾರಿಗೊಳಿಸಲಾದ ʻಆಯುಷ್ಮಾನ್ ಭಾರತ್ʼನಂತಹ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದರು. ʻಡಬಲ್ ಎಂಜಿನ್‌ʼ ಸರಕಾರದ ಶಕ್ತಿಯ ಬಗ್ಗೆ ವಿವರಿಸಿದ ಪ್ರಧಾನಮಂತ್ರಿಯವರು, ʻಆಯುಷ್ಮಾನ್ ಭಾರತ್ʼ ಮತ್ತು ʻಮುಖ್ಯಮಂತ್ರಿ ಅಮೃತಮ್‌ ಯೋಜನೆʼಗಳ ಸಂಯೋಜನೆಯು ಗುಜರಾತ್ ರಾಜ್ಯದ ಬಡವರ ಆರೋಗ್ಯ ಅಗತ್ಯಗಳನ್ನು ಪೂರೈಸುತ್ತಿದೆ ಎಂದು ಹೇಳಿದರು. "ಆರೋಗ್ಯ ಮತ್ತು ಶಿಕ್ಷಣವು ಕೇವಲ ವರ್ತಮಾನದ ದಿಕ್ಕನ್ನು ಮಾತ್ರ ನಿರ್ಧರಿಸುವುದಿಲ್ಲ, ಈ ಎರಡು ವಲಯಗಳು ಭವಿಷ್ಯದ ದಿಕ್ಕನ್ನು ಸಹ ನಿರ್ಧರಿಸುತ್ತವೆ," ಎಂದರು.  2019ರಲ್ಲಿ 1200 ಹಾಸಿಗೆಗಳ ಸೌಲಭ್ಯವನ್ನು ಹೊಂದಿದ್ದ ಸಾರ್ವಜನಿಕ ಆಸ್ಪತ್ರೆಯ ಉದಾಹರಣೆಯನ್ನು ನೀಡಿದ ಪ್ರಧಾನಮಂತ್ರಿಯವರು, ಅದೇ ಆಸ್ಪತ್ರೆಯು ರಾಜ್ಯದಲ್ಲೇ ಅತಿದೊಡ್ಡ ಆರೋಗ್ಯ ಕೇಂದ್ರವಾಗಿ ಹೊರಹೊಮ್ಮಿತು. ಒಂದು ವರ್ಷದ ಬಳಿಕ ವಿಶ್ವವನ್ನು ಕಾಡಿದ ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಜನರಿಗೆ ಸೇವೆ ಸಲ್ಲಿಸಿತು ಎಂದು ಹೇಳಿದರು. "ಆ ಏಕೈಕ ಆರೋಗ್ಯ ಮೂಲಸೌಕರ್ಯವು ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಾವಿರಾರು ರೋಗಿಗಳ ಜೀವಗಳನ್ನು ಉಳಿಸಿದೆ," ಎಂದು ಅವರು ಸ್ಮರಿಸಿದರು. ಪ್ರಸ್ತುತ ಪರಿಸ್ಥಿತಿಗಳನ್ನು ಸುಧಾರಿಸುವ ಮತ್ತು ಭವಿಷ್ಯಕ್ಕಾಗಿ ಕೆಲಸ ಮಾಡುವ ಅಗತ್ಯವನ್ನು ಒತ್ತಿಹೇಳುವ ಮೂಲಕ ಪ್ರಧಾನಮಂತ್ರಿಯವರು ಮಾತು ಮುಗಿಸಿದರು. "ನೀವು ಮತ್ತು ನಿಮ್ಮ ಕುಟುಂಬಗಳು ರೋಗಮುಕ್ತರಾಗಿರಬೇಕು ಎಂದು ನಾನು ಬಯಸುತ್ತೇನೆ," ಎಂದು ಶ್ರೀ ಮೋದಿ ಹಾರೈಸಿದರು. 

ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್; ಸಂಸದರಾದ ಶ್ರೀ ಸಿ.ಆರ್.ಪಾಟೀಲ್, ಶ್ರೀ ನರಹರಿ ಅಮೀನ್, ಶ್ರೀ ಕಿರೀಟ್‌ಭಾಯಿ ಸೋಲಂಕಿ ಮತ್ತು ಶ್ರೀ ಹಸ್ಮುಖ್ ಭಾಯಿ ಪಟೇಲ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಹಿನ್ನೆಲೆ 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಹದಾಬಾದ್‌ನ ಅಸರ್ವದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 1275 ಕೋಟಿ ರೂ.ಗಳ ವಿವಿಧ ಆರೋಗ್ಯ ಸೌಲಭ್ಯಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆಯನ್ನು ನೆರವೇರಿಸಿದರು. ಬಡ ರೋಗಿಗಳ ಕುಟುಂಬಗಳಿಗೆ ವಸತಿ ಕಲ್ಪಿಸಲು ಆಶ್ರಯ ಮನೆಗಳಿಗೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದರು. ʻಯು.ಎನ್. ಮೆಹ್ತಾ ಹೃದ್ರೋಗ ಮತ್ತು ಸಂಶೋಧನಾ ಕೇಂದ್ರʼದಲ್ಲಿ ಹೃದಯ ಚಿಕಿತ್ಸೆಗಾಗಿ ಹೊಸ ಮತ್ತು ಸುಧಾರಿತ ಸೌಲಭ್ಯಗಳು ಹಾಗೂ ಹೊಸ ಹಾಸ್ಟೆಲ್ ಕಟ್ಟಡ; ʻಮೂತ್ರಪಿಂಡ ರೋಗಗಳು ಮತ್ತು ಸಂಶೋಧನಾ ಕೇಂದ್ರʼದ ಹೊಸ ಆಸ್ಪತ್ರೆ ಕಟ್ಟಡ ಹಾಗೂ ʻಗುಜರಾತ್ ಕ್ಯಾನ್ಸರ್ ಮತ್ತು ಸಂಶೋಧನಾ ಸಂಸ್ಥೆʼಯ ಹೊಸ ಕಟ್ಟಡವನ್ನು ಪ್ರಧಾನಮಂತ್ರಿಯವರು ಲೋಕಾರ್ಪಣೆ ಮಾಡಿದರು. 

 

******


(Release ID: 1866956) Visitor Counter : 171