ಪ್ರಧಾನ ಮಂತ್ರಿಯವರ ಕಛೇರಿ

ವಿಶ್ವಸಂಸ್ಥೆಯ ಜಾಗತಿಕ ಜಿಯೋಸ್ಪೇಷಿಯಲ್ ಅಂತರರಾಷ್ಟ್ರೀಯ ಸಮಾವೇಶ ಉದ್ದೇಶಿಸಿ ಪ್ರಧಾನಿ ಭಾಷಣ


"ಬಿಕ್ಕಟ್ಟಿನ ಸಂದರ್ಭದಲ್ಲಿ ಪರಸ್ಪರ ನೆರವಾಗಲು ಅಂತರರಾಷ್ಟ್ರೀಯ ಸಮುದಾಯದಿಂದ ಸಾಂಸ್ಥಿಕ ವಿಧಾನದ ಅವಶ್ಯಕತೆಯಿದೆ"

"ಯಾರೂ ಹಿಂದೆ ಉಳಿಯದಂತೆ ಭಾರತ ಖಚಿತಪಡಿಸುತ್ತಿದೆ."

“ಭಾರತದಲ್ಲಿ, ತಂತ್ರಜ್ಞಾನವು ಪ್ರತ್ಯೇಕತೆಯ ಸಾಧನವಲ್ಲ,  ಅದು ಸೇರ್ಪಡೆಯ ಸಾಧನ"

"ಭಾರತವು ಉತ್ತಮ ನಾವೀನ್ಯ ಮನೋಭಾವವನ್ನು ಹೊಂದಿರುವ ಯುವ ರಾಷ್ಟ್ರವಾಗಿದೆ"

Posted On: 11 OCT 2022 11:27AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಶ್ವಸಂಸ್ಥೆಯ ಜಾಗತಿಕ ಅಂತರರಾಷ್ಟ್ರೀಯ ಜಿಯೋಸ್ಪೇಷಿಯಲ್ ಸಮಾವೇಶ (ವರ್ಲ್ಡ್ ಜಿಯೋಸ್ಪೇಷಿಯಲ್ ಇಂಟರ್‌ನ್ಯಾಶನಲ್ ಕಾಂಗ್ರೆಸ್) ವನ್ನು ಉದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಮಾತನಾಡಿದರು.

ಅಂತರರಾಷ್ಟ್ರೀಯ ಪ್ರತಿನಿಧಿಗಳನ್ನು ಸ್ವಾಗತಿಸಿದ ಪ್ರಧಾನಮಂತ್ರಿಯವರು, "ನಾವು ಒಟ್ಟಾಗಿ ನಮ್ಮ ಭವಿಷ್ಯವನ್ನು ಕಟ್ಟುತ್ತಿರುವ ಈ ಐತಿಹಾಸಿಕ ಸಂದರ್ಭದಲ್ಲಿ ನಿಮಗೆ ಆತಿಥ್ಯ ನೀಡಲು ಭಾರತದ ಜನರು ಸಂತೋಷಪಡುತ್ತಾರೆ" ಎಂದು ಹೇಳಿದರು. ಸಮಾವೇಶವು ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ, ನಗರವು ತನ್ನ ಸಂಸ್ಕೃತಿ ಮತ್ತು ಪಾಕಪದ್ಧತಿ, ಆತಿಥ್ಯ ಮತ್ತು ಹೈಟೆಕ್ ದೃಷ್ಟಿಕೋನಕ್ಕೆ ಹೆಸರುವಾಸಿಯಾಗಿದೆ ಎಂದು ಹೇಳಿದರು.

'ಗ್ಲೋಬಲ್ ವಿಲೇಜ್ ಗೆ ಜಿಯೋ; ಯಾರೂ ಹಿಂದೆ ಉಳಿಯಬಾರದು' ಎಂಬ ಸಮ್ಮೇಳನದ ಧ್ಯೇಯವು ಕಳೆದ ಕೆಲವು ವರ್ಷಗಳಿಂದ ಭಾರತವು ತೆಗೆದುಕೊಂಡಿರುವ ಕ್ರಮಗಳಲ್ಲಿ ಕಂಡುಬರುತ್ತದೆ ಎಂದು ಪ್ರಧಾನಿ ಹೇಳಿದರು. "ನಾವು ಅಂತ್ಯೋದಯದ ದೃಷ್ಟಿಯಲ್ಲಿ, ಅಂದರೆ ಕೊನೆಯ ಮೈಲಿಯಲ್ಲಿರುವ ಕೊನೆಯ ವ್ಯಕ್ತಿಯನ್ನು ನಿಗದಿತ ಅವಧಿಯಲ್ಲಿ ಸಬಲೀಕರಣಗೊಳಿಸುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು. ಬ್ಯಾಂಕಿಂಗ್ ನಿಂದ ಹೊರಗಿದ್ದ ಅಮೆರಿಕಾದ ಜನಸಂಖ್ಯೆಗೂ ಹೆಚ್ಚಿನ 450 ಮಿಲಿಯನ್ ಜನರನ್ನು ಬ್ಯಾಂಕಿಂಗ್ ಜಾಲಕ್ಕೆ ತರಲಾಯಿತು ಮತ್ತು ಫ್ರಾನ್ಸ್‌ನ ಎರಡು ಪಟ್ಟು ಜನಸಂಖ್ಯೆಯಷ್ಟಾದ 135 ಮಿಲಿಯನ್ ಜನರಿಗೆ ವಿಮೆ ಸೌಲಭ್ಯ ನೀಡಲಾಗಿದೆ ಎಂದು ಪ್ರಧಾನಿ ವಿವರಿಸಿದರು. 110 ಮಿಲಿಯನ್ ಕುಟುಂಬಗಳಿಗೆ ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ ಮತ್ತು 60 ಮಿಲಿಯನ್ ಕುಟುಂಬಗಳಿಗೆ ನಲ್ಲಿ ಮೂಲಕ ನೀರಿನ ಸಂಪರ್ಕಗಳನ್ನು ಒದಗಿಸಲಾಗಿದೆ ಎಂದ ಪ್ರಧಾನಿಯವರು, "ಭಾರತವು ಯಾರೂ ಹಿಂದೆ ಉಳಿಯದಂತೆ ನೋಡಿಕೊಳ್ಳುತ್ತಿದೆ" ಎಂದು ಒತ್ತಿ ಹೇಳಿದರು.

ತಂತ್ರಜ್ಞಾನ ಮತ್ತು ಪ್ರತಿಭೆ ಭಾರತದ ಅಭಿವೃದ್ಧಿ ಪಯಣದಲ್ಲಿ ಪ್ರಮುಖವಾದ ಎರಡು ಆಧಾರಸ್ತಂಭಗಳಾಗಿವೆ. ತಂತ್ರಜ್ಞಾನವು ಪರಿವರ್ತನೆಯನ್ನು ತರುತ್ತದೆ, 800 ಮಿಲಿಯನ್ ಜನರಿಗೆ ಕಲ್ಯಾಣ ಸೌಲಭ್ಯಗಳನ್ನು ಅಡೆಪಡೆಯಿಲ್ಲದೆ ತಲುಪಿಸಿದ ಜ್ಯಾಮ್ ಟ್ರಿನಿಟಿ ಮತ್ತು ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನಕ್ಕೆ ಶಕ್ತಿ ತುಂಬಿದ ತಂತ್ರಜ್ಞಾನ ಪ್ಲಾಟ್‌ಫಾರ್ಮ್ ಇದಕ್ಕೆ ಉದಾಹರಣೆಗಳು ಎಂದು ಪ್ರಧಾನಿ ಹೇಳಿದರು. “ಭಾರತದಲ್ಲಿ, ತಂತ್ರಜ್ಞಾನವು ಪ್ರತ್ಯೇಕಿಸುವ ಸಾಧನವಲ್ಲ, ಇದು ಸೇರ್ಪಡೆಯ ಸಾಧನ”ಎಂದು ಶ್ರೀ ಮೋದಿ ಹೇಳಿದರು.

ಸೇರ್ಪಡೆ ಮತ್ತು ಪ್ರಗತಿಗೆ ಚಾಲನೆ ನೀಡುವಲ್ಲಿ ಜಿಯೋಸ್ಪೇಷಿಯಲ್ ತಂತ್ರಜ್ಞಾನದ ಪಾತ್ರವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಸ್ವಾಮಿತ್ವ ಮತ್ತು ವಸತಿಯಂತಹ ಯೋಜನೆಗಳಲ್ಲಿ ಮತ್ತು ಆಸ್ತಿ ಮಾಲೀಕತ್ವ ಮತ್ತು ಮಹಿಳಾ ಸಬಲೀಕರಣದ ಫಲಿತಾಂಶಗಳಲ್ಲಿ ತಂತ್ರಜ್ಞಾನದ ಪಾತ್ರವು, ಬಡತನ ಮತ್ತು ಲಿಂಗ ಸಮಾನತೆಯಲ್ಲಿ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ ಸಾಧನೆಯ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ಪ್ರಧಾನಿ ಒತ್ತಿ ಹೇಳಿದರು. ಪ್ರಧಾನಮಂತ್ರಿ ಗತಿಶಕ್ತಿ ಮಾಸ್ಟರ್ ಪ್ಲಾನ್ ಅನ್ನು ಡಿಜಿಟಲ್ ಓಷನ್ ಪ್ಲಾಟ್‌ಫಾರ್ಮ್‌ನಂತೆ ಜಿಯೋ-ಸ್ಪೇಷಿಯಲ್ ತಂತ್ರಜ್ಞಾನದಿಂದ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಜಿಯೋ-ಸ್ಪೇಷಿಯಲ್ ತಂತ್ರಜ್ಞಾನದ ಪ್ರಯೋಜನಗಳನ್ನು ಹಂಚಿಕೊಳ್ಳುವಲ್ಲಿ ಭಾರತವು ಈಗಾಗಲೇ ಒಂದು ಮಾದರಿಯಾಗಿದೆ ಎಂದ ಅವರು, ಭಾರತದ ನೆರೆಹೊರೆಯಲ್ಲಿ ಸಂವಹನವನ್ನು ಸುಲಭಗೊಳಿಸಲು ದಕ್ಷಿಣ ಏಷ್ಯಾ ಉಪಗ್ರಹದ ಉದಾಹರಣೆಯನ್ನು ಉಲ್ಲೇಖಿಸಿದರು.

"ಭಾರತವು ಉತ್ತಮ ನಾವೀನ್ಯ ಮನೋಭಾವವನ್ನು ಹೊಂದಿರುವ ಯುವ ರಾಷ್ಟ್ರವಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು, ಭಾರತದ ಪಯಣದಲ್ಲಿ ಎರಡನೇ ಸ್ತಂಭವಾಗಿರುವ ಪ್ರತಿಭೆಯ ಪಾತ್ರವನ್ನು ಅವರು ಒತ್ತಿ ಹೇಳಿದರು. ಭಾರತವು ವಿಶ್ವದ ಅಗ್ರ ಸ್ಟಾರ್ಟ್‌ಅಪ್ ಹಬ್‌ಗಳಲ್ಲಿ ಒಂದಾಗಿದೆ, 2021 ರಿಂದ ಯುನಿಕಾರ್ನ್ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ದ್ವಿಗುಣಗೊಂಡಿರುವುದು, ಭಾರತದ ಯುವ ಪ್ರತಿಭೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಹೊಸತನದ ಶೋಧದ ಸ್ವಾತಂತ್ರ್ಯವು ಪ್ರಮುಖ ಸ್ವಾತಂತ್ರ್ಯಗಳಲ್ಲಿ ಒಂದಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇದನ್ನು ಜಿಯೋಸ್ಪೇಷಿಯಲ್ ವಲಯದಲ್ಲಿ ಖಾತ್ರಿಪಡಿಸಲಾಗಿದೆ. ಜಿಯೋಸ್ಪೇಷಿಯಲ್ ಡೇಟಾ ಸಂಗ್ರಹಣೆ, ಉತ್ಪಾದನೆ ಮತ್ತು ಡಿಜಿಟಲೀಕರಣವನ್ನು ಈಗ ಪಾರದರ್ಶಕಗೊಳಿಸಲಾಗಿದೆ ಎಂದು ಅವರು ಹೇಳಿದರು. ಇಂತಹ ಸುಧಾರಣೆಗಳು ಡ್ರೋನ್ ವಲಯಕ್ಕೆ ಉತ್ತೇಜನ ನೀಡುತ್ತಿವೆ ಮತ್ತು ಖಾಸಗಿ ಸಹಭಾಗಿತ್ವಕ್ಕಾಗಿ ಬಾಹ್ಯಾಕಾಶ ವಲಯವನ್ನು ಮುಕ್ತಗೊಳಿಸುವುದರ ಜೊತೆಗೆ ಭಾರತದಲ್ಲಿ 5ಜಿ ಆರಂಭವಾಗಿದೆ ಎಂದು ಪ್ರಧಾನಿ ಹೇಳಿದರು.

ಕೋವಿಡ್-19 ಸಾಂಕ್ರಾಮಿಕವು ಎಲ್ಲರನ್ನೂ ಒಟ್ಟಾಗಿ ನಡೆಯಬೇಕಾದ ಬಗೆಗಿನ ಎಚ್ಚರಿಕೆಯ ಗಂಟೆಯಾಗಬೇಕಿತ್ತು ಎಂದು ಪ್ರಧಾನಿ ಹೇಳಿದರು. ಬಿಕ್ಕಟ್ಟಿನ ಸಂದರ್ಭದಲ್ಲಿ ಪರಸ್ಪರ ಸಹಾಯ ಮಾಡಲು ಅಂತರರಾಷ್ಟ್ರೀಯ ಸಮುದಾಯದ ಸಾಂಸ್ಥಿಕ ವಿಧಾನದ ಅವಶ್ಯಕತೆಯಿದೆ ಎಂದು ಅವರು ಒತ್ತಿ ಹೇಳಿದರು. "ವಿಶ್ವಸಂಸ್ಥೆಯಂತಹ ಜಾಗತಿಕ ಸಂಸ್ಥೆಗಳು ಪ್ರತಿಯೊಂದು ಪ್ರದೇಶದಲ್ಲಿ ಸಂಪನ್ಮೂಲಗಳು ಕೊನೆಯ ಮೈಲಿಗೆ ತಲುಪಲು ದಾರಿ ಮಾಡಿಕೊಡಬಹುದು" ಎಂದರು. ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವಲ್ಲಿ ನೆರವು ನೀಡುವುದು ಮತ್ತು ತಂತ್ರಜ್ಞಾನ ವರ್ಗಾವಣೆ ಕೂಡ ನಿರ್ಣಾಯಕವಾಗಿದೆ, ನಮ್ಮ ಗ್ರಹವನ್ನು ಉಳಿಸಲು ಉತ್ತಮ ಅಭ್ಯಾಸಗಳನ್ನು ಪರಸ್ಪರ ಹಂಚಿಕೊಳ್ಳಬಹುದು ಎಂದು ಪ್ರಧಾನಿ ಸಲಹೆ ನೀಡಿದರು.

ಜಿಯೋ-ಸ್ಪೇಶಿಯಲ್ ತಂತ್ರಜ್ಞಾನದ ಅನಂತ ಸಾಧ್ಯತೆಗಳನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇವುಗಳಲ್ಲಿ ಸುಸ್ಥಿರ ನಗರಾಭಿವೃದ್ಧಿ, ವಿಪತ್ತುಗಳನ್ನು ನಿರ್ವಹಿಸುವುದು ಮತ್ತು ತಗ್ಗಿಸುವುದು, ಹವಾಮಾನ ಬದಲಾವಣೆಯ ಪರಿಣಾಮವನ್ನು ಪತ್ತೆಹಚ್ಚುವುದು, ಅರಣ್ಯ ನಿರ್ವಹಣೆ, ನೀರು ನಿರ್ವಹಣೆ, ಮರುಭೂಮಿ ಸೃಷ್ಟಿಯನ್ನು ತಡೆಯುವುದು ಮತ್ತು ಆಹಾರ ಭದ್ರತೆ ಸೇರಿವೆ. ಇಂತಹ ಮಹತ್ವದ ಕ್ಷೇತ್ರಗಳ ಬೆಳವಣಿಗೆಗಳನ್ನು ಚರ್ಚಿಸಲು ಈ ಸಮಾವೇಶ ವೇದಿಕೆಯಾಗಲಿ ಎಂದು ಪ್ರಧಾನಿ ಹಾರೈಸಿದರು.

"ಜಾಗತಿಕ ಜಿಯೋ-ಸ್ಪೇಶಿಯಲ್ ಉದ್ಯಮದ ಭಾಗೀದಾರರು ಒಗ್ಗೂಡುವುದರೊಂದಿಗೆ, ನೀತಿ ನಿರೂಪಕರು ಮತ್ತು ಶೈಕ್ಷಣಿಕ ಜಗತ್ತು ಪರಸ್ಪರ ಸಂವಹನ ನಡೆಸುವುದರೊಂದಿಗೆ, ಈ ಸಮ್ಮೇಳನವು ಜಾಗತಿಕ ಗ್ರಾಮದ ಹೊಸ ಭವಿಷ್ಯಕ್ಕೆ ಸಹಾಯ ಮಾಡುತ್ತದೆ ಎಂದು ನನಗೆ ವಿಶ್ವಾಸವಿದೆ" ಎಂದು ಪ್ರಧಾನಿಯವರು ಆಶಿಸಿದರು.

***********



(Release ID: 1866798) Visitor Counter : 146