ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದ 'ಸ್ವಚ್ಛ ಟಾಯ್‌ಕಾಥಾನ್' ಆರಂಭ, ಇದು 'ತ್ಯಾಜ್ಯ'ದಿಂದ ಆಟಿಕೆಗಳನ್ನು ತಯಾರಿಸುವ ವಿಶಿಷ್ಟ ಸ್ಪರ್ಧೆಯಾಗಿದೆ
Posted On:
25 SEP 2022 2:31PM by PIB Bengaluru
ಭಾರತವನ್ನು ಜಾಗತಿಕ ಆಟಿಕೆ ಕೇಂದ್ರವನ್ನಾಗಿ ಮಾಡುವ ಉದ್ದೇಶದಿಂದ ಸಾಂಪ್ರದಾಯಿಕ ಕರಕುಶಲ ವಸ್ತುಗಳು ಮತ್ತು ಕೈಯಿಂದ ಮಾಡಿದ ಆಟಿಕೆಗಳು ಸೇರಿದಂತೆ ಭಾರತೀಯ ಆಟಿಕೆ ಉದ್ಯಮವನ್ನು ಉತ್ತೇಜಿಸಲು ಆಟಿಕೆಗಳಿಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ (ಎನ್‌ಎಪಿಟಿ) 2020 ಅನ್ನು ಪರಿಚಯಿಸಲಾಯಿತು. ಕೇಂದ್ರ ಸರ್ಕಾರದ 14 ಸಚಿವಾಲಯಗಳ ಜೊತೆಗೆ ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (ಡಿಪಿಐಐಟಿ) ಪ್ರಸ್ತುತ ಎನ್‌ಎಪಿಟಿಯ ವಿವಿಧ ಅಂಶಗಳನ್ನು ಅನುಷ್ಠಾನಗೊಳಿಸುತ್ತಿದೆ.
ವಿಶ್ವದ ಎರಡನೇ ಅತಿ ದೊಡ್ಡ ಜನಸಂಖ್ಯೆಯ ದೇಶವಾಗಿರುವ ಭಾರತವು, ಒಟ್ಟು ಜನಸಂಖ್ಯೆಯ ಅರ್ಧದಷ್ಟು 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವ ಜನಸಂಖ್ಯೆಯನ್ನು ಹೊಂದಿದೆ. ಬಲವಾದ ಆರ್ಥಿಕ ಬೆಳವಣಿಗೆ, ಹೆಚ್ಚುತ್ತಿರುವ ವೆಚ್ಚಮಾಡಬಹುದಾದ ಆದಾಯ ಮತ್ತು ಕಿರಿಯರಿಗಾಗಿ ಮಾಡುತ್ತಿರುವ ಹಲವಾರು ಆವಿಷ್ಕಾರಗಳಿಂದಾಗಿ ಆಟಿಕೆಗಳ ಬೇಡಿಕೆಯೂ ಹೆಚ್ಚುತ್ತಿದೆ.
ನಿರಂತರವಾಗಿ ಬದಲಾಗುತ್ತಿರುವ ಬಳಕೆಯ ಮಾದರಿಗಳು ಮತ್ತು ಇ-ಕಾಮರ್ಸ್‌ನ ತ್ವರಿತ ಏರಿಕೆಯೊಂದಿಗೆ, ಕಳೆದ ದಶಕದಲ್ಲಿ ತಲಾವಾರು ತ್ಯಾಜ್ಯ ಉತ್ಪಾದನೆಯೂ ಸ್ಥಿರವಾಗಿ ಹೆಚ್ಚುತ್ತಿದೆ, ನಗರಗಳಲ್ಲಿ ತ್ಯಾಜ್ಯ ನಿರ್ವಹಣೆಯು ನಗರ ಸ್ಥಳೀಯ ಸಂಸ್ಥೆಗಳಿಗೆ ಸವಾಲಾಗಿದೆ. 2026 ರ ವೇಳೆಗೆ 'ಕಸ ಮುಕ್ತ' ನಗರಗಳ ದೃಷ್ಟಿಕೋನದೊಂದಿಗೆ ಎರಡನೇ ಹಂತದ ಸ್ವಚ್ಛ ಭಾರತ ಅಭಿಯಾನ (ಎಸ್‌ಬಿಎಂ 2.0) ಕ್ಕೆ 2021 ರ ಅಕ್ಟೋಬರ್ 1 ರಂದು ಗೌರವಾನ್ವಿತ ಪ್ರಧಾನ ಮಂತ್ರಿಯವರು ಚಾಲನೆ ನೀಡಿದರು.
ಒಂದೆಡೆ ಆಟಿಕೆಗಳಿಗೆ ಹೆಚ್ಚುತ್ತಿರುವ ಬೇಡಿಕೆ ಮತ್ತು ಇನ್ನೊಂದೆಡೆ ಘನತ್ಯಾಜ್ಯದ ಪರಿಣಾಮಗಳ ಸಂದರ್ಭದಲ್ಲಿ ಸ್ವಚ್ಛ ಟಾಯ್‌ಕಥಾನ್ ಎಂಬುದು ಎನ್‌ಎಪಿಟಿ ಮತ್ತು ಎಸ್‌ಬಿಎಂ 2.0 ನಡುವಿನ ಸಮನ್ವಯವಾಗಿದ್ದು, ಆಟಿಕೆಗಳ ಸೃಷ್ಟಿ ಅಥವಾ ತಯಾರಿಕೆಯಲ್ಲಿ ತ್ಯಾಜ್ಯದ ಬಳಕೆಗೆ ಪರಿಹಾರಗಳನ್ನು ಹುಡುಕಲು ಪ್ರಯತ್ನಿಸುತ್ತದೆ. ಒಣ ತ್ಯಾಜ್ಯವನ್ನು ಬಳಸಿಕೊಂಡು ಆಟಿಕೆ ವಿನ್ಯಾಸಗಳಲ್ಲಿ ಹೊಸತನವನ್ನು ಹೊರತರಲು ಈ ಸ್ಪರ್ಧೆಯು ವ್ಯಕ್ತಿಗಳು ಮತ್ತು ಗುಂಪುಗಳಿಗೆ ಮುಕ್ತವಾಗಿರುತ್ತದೆ. ಇದು ದೊಡ್ಡ ಪ್ರಮಾಣದಲ್ಲಿ ಪುನರಾವರ್ತಿಸಬಹುದಾದ ಸಮರ್ಥ ವಿನ್ಯಾಸಗಳು, ಕನಿಷ್ಠ ಸುರಕ್ಷತಾ ಮಾನದಂಡಗಳನ್ನು ಅನುಸರಿಸುವ ಆಟಿಕೆಗಳು ಮತ್ತು ಆಟಿಕೆಗಳ ಸೌಂದರ್ಯದ ಮೇಲೆ ಕೇಂದ್ರೀಕರಿಸುತ್ತದೆ. ಸೆಂಟರ್ ಫಾರ್ ಕ್ರಿಯೇಟಿವ್ ಲರ್ನಿಂಗ್, ಐಐಟಿ ಗಾಂಧಿನಗರ ಈ ಉಪಕ್ರಮಕ್ಕೆ ಜ್ಞಾನ ಪಾಲುದಾರ ಸಂಸ್ಥೆಯಾಗಿದೆ.
ಈ ಸ್ಪರ್ಧೆಯನ್ನು 'ಸ್ವಚ್ಛ ಅಮೃತ ಮಹೋತ್ಸವ' ಅಡಿಯಲ್ಲಿ ಪ್ರಾರಂಭಿಸಲಾಗುತ್ತಿದೆ, ಸೇವಾದಿನವಾದ 17ನೇ ಸೆಪ್ಟೆಂಬರ್ 2022 ರಿಂದ ಸ್ವಚ್ಛತಾ ದಿನವಾದ 2ನೇ ಅಕ್ಟೋಬರ್ 2022 ರವರೆಗೆ ಹದಿನೈದು ದಿನಗಳು ಸ್ವಚ್ಛತಾ ಕಾರ್ಯವನ್ನು ಉತ್ತೇಜಿಸುವ ಚಟುವಟಿಕೆಗಳು ನಡೆಯುತ್ತವೆ.
ಸ್ಪರ್ಧೆಯನ್ನು MyGov ನ ಇನ್ನೋವೇಟ್ ಇಂಡಿಯಾ ಪೋರ್ಟಲ್‌ನಲ್ಲಿ ಆಯೋಜಿಸಲಾಗುತ್ತದೆ.
26ನೇ ಸೆಪ್ಟೆಂಬರ್ 2022 ರಂದು ಬೆಳಿಗ್ಗೆ 10:30 ಗಂಟೆಗೆ ವರ್ಚುವಲ್ ಕಾರ್ಯಕ್ರಮದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಕಾರ್ಯದರ್ಶಿಯವರು ಇದಕ್ಕೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದ ನೇರಪ್ರಸಾರವನ್ನು http://bit.ly/3r1OaIE ನಲ್ಲಿ ವೀಕ್ಷಿಸಬಹುದು.
*******
(Release ID: 1862163)
Visitor Counter : 202