ವಾರ್ತಾ ಮತ್ತು ಪ್ರಸಾರ ಸಚಿವಾಲಯ

ನೇರ ಲಾಭ ವರ್ಗಾವಣೆ ಸರ್ಕಾರದ ದೊಡ್ಡ ಸಾಧನೆಯಾಗಿದ್ದು, ಮಧ್ಯವರ್ತಿಗಳ ಸಂಕೋಲೆಯಿಂದ ಜನರನ್ನು ಮುಕ್ತಗೊಳಿಸಿದೆ: ಮಾಜಿ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು


ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಸ್ಲಿಂ ಮಹಿಳೆಯರ ವಿಮೋಚಕ ಎಂದು ನೆನಪಿಸಿಕೊಳ್ಳಲಾಗುವುದು: ಕೇರಳ ರಾಜ್ಯಪಾಲ ಶ್ರೀ ಆರಿಫ್ ಮೊಹಮ್ಮದ್ ಖಾನ್

ಪ್ರಧಾನ ಮಂತ್ರಿಯವರ ಆಯ್ದ ಭಾಷಣಗಳ ಸಂಗ್ರಹ ‘ಸಬ್ಕಾ ಸಾಥ್ ಸಬ್ಕಾ ವಿಕಾಸ್ ಸಬ್ಕಾ ವಿಶ್ವಾಸ್’ ಪುಸ್ತಕವನ್ನು ಬಿಡುಗಡೆ ಮಾಡಿದ ಶ್ರೀ ಎಂ. ವೆಂಕಯ್ಯ ನಾಯ್ಡು 

ಪುಸ್ತಕವು ಶ್ರೀ ನರೇಂದ್ರ ಮೋದಿಯವರ ವಿಚಾರಗಳ ವಿಶ್ವಕೋಶವಾಗಿದೆ, ಸಂಕೀರ್ಣ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅವರ ಆಳವಾದ ತಿಳುವಳಿಕೆಯನ್ನು ಮನದಟ್ಟು ಮಾಡುತ್ತದೆ: ಶ್ರೀ ಅನುರಾಗ್ ಠಾಕೂರ್

Posted On: 23 SEP 2022 4:27PM by PIB Bengaluru

ಮಾಜಿ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರು ಇಂದು ಪ್ರಧಾನ ಮಂತ್ರಿಯವರ ಆಯ್ದ ಭಾಷಣಗಳ ಸಂಗ್ರಹವಾದ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಸಬ್ಕಾ ವಿಶ್ವಾಸ್ ಪುಸ್ತಕವನ್ನು ಕೇರಳದ ರಾಜ್ಯಪಾಲ ಶ್ರೀ ಆರಿಫ್ ಮೊಹಮ್ಮದ್ ಖಾನ್ ಮತ್ತು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಠಾಕೂರ್ ಅವರೊಂದಿಗೆ ಬಿಡುಗಡೆ ಮಾಡಿದರು, ಪ್ರಕಟಣಾ ನಿರ್ದೇಶನಾಲಯ ವಿಭಾಗ ಸಮಾರಂಭವನ್ನು ಆಯೋಜಿಸಿತ್ತು. ಈ ಪುಸ್ತಕವು ಮೇ 2019 ರಿಂದ ಮೇ 2020 ರವರೆಗೆ ವಿವಿಧ ವಿಷಯಗಳ ಕುರಿತು ಪ್ರಧಾನ ಮಂತ್ರಿಯವರ 86 ಭಾಷಣಗಳ ಸಂಕಲನವಾಗಿದೆ.

 

 

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಉಪರಾಷ್ಟ್ರಪತಿಯವರು, ರಾಷ್ಟ್ರವು ಎದುರಿಸುತ್ತಿರುವ ಸವಾಲುಗಳನ್ನು ಮತ್ತು ಅವುಗಳನ್ನು ನಿವಾರಿಸಲು ಸಂಘಟಿತ ಪ್ರಯತ್ನಗಳನ್ನು ಅರ್ಥಮಾಡಿಕೊಳ್ಳಲು ಈ ಪುಸ್ತಕವು ಮಹತ್ವದ ಕೊಡುಗೆಯಾಗಿದೆ. ಪ್ರಸ್ತುತ ಸರ್ಕಾರವು ‘ಸರ್ವೇ ಜನ ಸುಖಿನೋ ಭವಂತು’ ಎಂಬ ವಿಶಾಲ ತತ್ವದಡಿ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಈ ಹಿಂದೆಯೂ ಉತ್ತಮ ಯೋಜನೆಗಳನ್ನು ಪ್ರಾರಂಭಿಸಲಾಗಿದೆ, ಆದರೆ ಪ್ರಸ್ತುತ ಇರುವ ಪ್ರಧಾನ ಮಂತ್ರಿಯವರು ಮಾತ್ರ ಮುಂಚೂಣಿಯಲ್ಲಿ ನಿಂತು ಮುನ್ನಡೆಸುತ್ತಿದ್ದಾರೆ, ಎಲ್ಲಾ ಕಾರ್ಯಕ್ರಮಗಳು ನಿಗದಿತ ಸಮಯ ಮತ್ತು ಗುರಿಗಳಿಗೆ ಬದ್ಧವಾಗಿರುವುದನ್ನು ಖಾತ್ರಿಪಡಿಸುತ್ತಿದ್ದಾರೆ, ಅವರು ನಿರಂತರ ಮೇಲ್ವಿಚಾರಣೆ ಮತ್ತು ಅಂತಿಮವಾಗಿ ವಿತರಣೆಯನ್ನು ಖಾತ್ರಿಪಡಿಸಿದ್ದಾರೆ ಎಂದು ಅವರು ಹೇಳಿದರು. ತಮ್ಮ ಅಗಾಧವಾದ ಸಂವಹನ ಕೌಶಲ್ಯದಿಂದ ಪ್ರಧಾನಿ ಮೋದಿಯವರು ದೇಶದ ಎಲ್ಲಾ ಜನರೊಂದಿಗೆ ಒಂದೇ ರೀತಿಯಲ್ಲಿ ಸಂಪರ್ಕ ಸಾಧಿಸಬಹುದು ಎಂದು ಶ್ರೀ ನಾಯ್ಡು ಹೇಳಿದರು.

 

 

ಕೋಟ್ಯಂತರ ಬ್ಯಾಂಕ್ ಖಾತೆಗಳನ್ನು ತೆರೆಯುವ ಕೆಲಸವನ್ನು ಸಾಧಿಸಲಾಗುವುದಿಲ್ಲ ಎಂದು ಹೇಳುತ್ತಿದ್ದ ಸಮಯವನ್ನು ನೆನಪಿಸಿಕೊಂಡ ಶ್ರೀ ನಾಯ್ಡು, ಆದರೆ ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಆ ಗುರಿಯನ್ನು ತ್ವರಿತವಾಗಿ ಸಾಧಿಸಲಾಯಿತು ಎಂದರು. ನೇರ ಲಾಭ ವರ್ಗಾವಣೆಯನ್ನು ಸರ್ಕಾರದ ದೊಡ್ಡ ಸಾಧನೆ ಎಂದು ಬಣ್ಣಿಸಿದ ಶ್ರೀ ನಾಯ್ಡು, ಇದು ಜನರನ್ನು ಮಧ್ಯವರ್ತಿಗಳ ಸಂಕೋಲೆಯಿಂದ ಮುಕ್ತಗೊಳಿಸಿತು, ಕಲ್ಯಾಣ ಕ್ರಮಗಳು ಅಂತಿಮ ಹಂತವನ್ನು ತಲುಪಲು ಸಾಧ್ಯವಾಗಿಸಿತು ಎಂದು ಹೇಳಿದರು. ಈ ಹಿಂದೆ ಯೋಜನೆಗಳನ್ನು ಸರ್ಕಾರಿ ಅಥವಾ ರಾಜಕಾರಣದ ಯೋಜನೆಗಳೆಂದು ಗುರುತಿಸಲಾಗುತ್ತಿತ್ತು, ಆದರೆ ಪ್ರಧಾನಿ ಮೋದಿಯವರು ಗುರಿಯ ಸಾಕ್ಷಾತ್ಕಾರವು ಜನರ ಒಳಗೊಳ್ಳುವಿಕೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂದು ಅರ್ಥಮಾಡಿಕೊಂಡರು. ಸ್ವಚ್ಛ ಭಾರತ ಅಭಿಯಾನವನ್ನು ಪ್ರಧಾನ ಮಂತ್ರಿಯವರು ಜನಾಂದೋಲನವಾಗಿ ಮಾಡಿದರು ಎಂದು ಅವರು ಹೇಳಿದರು.

ಭಾರತವು ತನ್ನ ಶಕ್ತಿ ಮತ್ತು ಎತ್ತರದ ಸ್ಥಾನದಿಂದ ಅಧಿಕಾರಯುತವಾಗಿ ಮಾತನಾಡುವುದಿಲ್ಲ ಎಂದು ಬಹಳ ಕಾಲದಿಂದಲೂ ಜನರು ಹೇಳುತ್ತಿದ್ದರು. ಆದರೆ ಪ್ರಧಾನಿ ಮೋದಿಯವರ ಆಗಮನದೊಂದಿಗೆ, ಭಾರತವು ಈಗ ಪರಿಗಣಿಸುವ ಶಕ್ತಿಯಾಗಿದೆ ಮತ್ತು ಭಾರತದ ಧ್ವನಿಯನ್ನು ಎಲ್ಲರೂ ಕೇಳುತ್ತಿದ್ದಾರೆ ಎಂದು ಶ್ರೀ ನಾಯ್ಡು ಹೇಳಿದರು.

ಕೇರಳ ರಾಜ್ಯಪಾಲ ಶ್ರೀ ಆರಿಫ್ ಮೊಹಮ್ಮದ್ ಖಾನ್ ಅವರು ಮಾತನಾಡಿ, ಪುಸ್ತಕದುದ್ದಕ್ಕೂ ಒಂದು ಸಾಮಾನ್ಯ ಎಳೆಯು ಹಾದು ಹೋಗುತ್ತದೆ. ಅದು ವಂಚಿತ ವರ್ಗ ಮತ್ತು ಮಹಿಳಾ ಸಬಲೀಕರಣದ ಬಗ್ಗೆ ಪ್ರಧಾನ ಮಂತ್ರಿಯವರ ಕಾಳಜಿಯಾಗಿದೆ ಎಂದು ಹೇಳಿದರು. ಶೌಚಾಲಯಗಳ ಲಭ್ಯತೆ ಮತ್ತು ನೀರಿನ ಸಂಪರ್ಕದಂತಹ ಅವಳಿ ಸಮಸ್ಯೆಗಳಿಗೆ ಬಹಳ ಸಮಯದಿಂದ ಸರ್ಕಾರದ ತುರ್ತು ಹಸ್ತಕ್ಷೇಪದ ಅಗತ್ಯವಿತ್ತು ಆದರೆ ಅನೇಕ ಸರ್ಕಾರಗಳು ಬಂದು ಹೋದರೂ ಅದು ಕೈಗೂಡಿರಲಿಲ್ಲ. ಈ ಅಭಿಯಾನವನ್ನು ಆರಂಭದಿಂದಲೂ ಯುದ್ಧೋಪಾದಿಯಲ್ಲಿ ಕೈಗೆತ್ತಿಕೊಂಡ ಏಕೈಕ ಸರ್ಕಾರ ಇದು ಎಂದು ಅವರು ಹೇಳಿದರು.

 

 

ತ್ರಿವಳಿ ತಲಾಖ್ ಕುರಿತು ಮಾತನಾಡಿದ ಅವರು, ಶತಮಾನಗಳಿಂದ ಪ್ರವರ್ಧಮಾನವಾಗಿ ಬೆಳೆದಿದ್ದ ಈ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಿದ್ದು ಸಣ್ಣ ಸಾಧನೆಯಲ್ಲ. ಇದರಿಂದಾಗಿ ವಿವಾಹಿತ ಮುಸ್ಲಿಂ ಮಹಿಳೆಯರು ವಿಚ್ಛೇದನದ ನಿರಂತರ ಬೆದರಿಕೆಯಲ್ಲಿಯೇ ಬದುಕುತ್ತಿದ್ದರು. ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ಮುಸ್ಲಿಂ ಮಹಿಳೆಯರಿಗೆ ಹಿಂದೂ ಮಹಿಳೆಯರಿಗೆ ಸಮಾನವಾದ ಹಕ್ಕುಗಳನ್ನು ನೀಡಲು ಅಸಮರ್ಥರಾಗಿದ್ದು ತಮ್ಮ ದೊಡ್ಡ ವೈಫಲ್ಯ ಎಂದು ಹೇಳಿದ್ದನ್ನು ಅವರು ನೆನಪಿಸಿಕೊಂಡರು. ಈ ಐತಿಹಾಸಿಕ ನಿರ್ಧಾರವನ್ನು ಚಿಂತಕರು ವಿಶ್ಲೇಷಣೆ ಮಾಡಿದ ಹಲವು ವರ್ಷಗಳ ನಂತರ ಅದರ ಪರಿಣಾಮವು ರಾಜಕೀಯ ಮತ್ತು ಸಾಮಾಜಿಕವಾಗಿ ಅನುಭವಕ್ಕೆ ಬರುತ್ತದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಸ್ಲಿಂ ಮಹಿಳೆಯರ ವಿಮೋಚಕ ಎಂದು ನೆನಪಿಸಿಕೊಳ್ಳಲಾಗುತ್ತದೆ ಎಂದು ಅವರು ಹೇಳಿದರು. ಎಲ್ಲಾ ವಿರೋಧಾಭಾಸಗಳು ಮತ್ತು ವಿರೋಧಗಳನ್ನು ಧೈರ್ಯದಿಂದ ಎದುರಿಸಿ ಈ ಭರವಸೆಯನ್ನು ಈಡೇರಿಸಿದ ಕೀರ್ತಿ ಪ್ರಧಾನಿಯವರಿಗೆ ಸಲ್ಲುತ್ತದೆ ಎಂದು ಅವರು ಹೇಳಿದರು.

ಪ್ರಧಾನಿ ಮೋದಿಯವರಿಗೆ ದೇಶದ ಅಭಿವೃದ್ಧಿ ಮಾತ್ರ ಸರ್ಕಾರ ಮತ್ತು ಅದರ ಅಧಿಕಾರಶಾಹಿಯ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ಆದಾಗ್ಯೂ, ಪ್ರಧಾನಿ ಮೋದಿಯವರು ದೇಶದ ಅಭಿವೃದ್ಧಿಯು ಜನ ಭಾಗೀದಾರಿಯ ಕಾರ್ಯಕ್ರಮವಾಗುವುದನ್ನು ಖಚಿತಪಡಿಸಿದ್ದಾರೆ, ಅಲ್ಲಿ ದೇಶದ ಜನರು ಪ್ರಕ್ರಿಯೆ ಮತ್ತು ಫಲಿತಾಂಶಗಳಲ್ಲಿ ಸಮಾನ ಪಾಲುದಾರರಾಗಿರುತ್ತಾರೆ ಮತ್ತು ಇದು ನಿಜವಾದ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಸಾಕಾರಗೊಳಿಸಿದೆ ಎಂದರು.

ಪುಸ್ತಕ ಕುರಿತು ಮಾತನಾಡಿದ ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್, ಪುಸ್ತಕವು 10 ಅಧ್ಯಾಯಗಳಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ 86 ಭಾಷಣಗಳನ್ನು ಸಂಗ್ರಹಿಸಿದೆ ಮತ್ತು ಸಂಕೀರ್ಣ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅವರ ಆಳವಾದ ತಿಳಿವಳಿಕೆ ಮತ್ತು ಅವರ ಸ್ಪಷ್ಟ ದೃಷ್ಟಿಕೋನವನ್ನು ವಿವರಿಸುತ್ತದೆ. ಭವಿಷ್ಯದ ಇತಿಹಾಸಕಾರರಿಗೆ ಈ ಪುಸ್ತಕವು ತುಂಬಾ ಉಪಯುಕ್ತವಾಗಲಿದೆ ಎಂದರು.
ಈ ಭಾಷಣಗಳಲ್ಲಿ, ಸಂಕೀರ್ಣವಾದ ರಾಷ್ಟ್ರೀಯ ವಿಷಯಗಳ ಕುರಿತು ಪ್ರಧಾನಮಂತ್ರಿಯವರ ಆಲೋಚನೆಗಳು ಮತ್ತು ಅವರ ನಾಯಕತ್ವವನ್ನು ಕಾಣಬಹುದು, ಇದರಿಂದಾಗಿ ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ನಿಂತಿದೆ ಎಂದು ಅವರು ಹೇಳಿದರು. ತಮ್ಮ ಸೇವಾ ಮನೋಭಾವ ಮತ್ತು ಮಧ್ಯವರ್ತಿಗಳ ಹಾವಳಿಯಿಲ್ಲದೆ ಕೊನೆಯ ಮೈಲಿಯವರೆಗೆ ವಿತರಣೆಯನ್ನು ಖಚಿತಪಡಿಸಿಕೊಳ್ಳುವ ಅವರ ಉತ್ಸಾಹದ ಜೊತೆಗೆ ಈ ಕ್ರಮಗಳು ಜನರು ಅವರ ಮೇಲೆ ಅಚಲವಾದ ನಂಬಿಕೆಯನ್ನು ಇಡಲು ಕಾರಣವಾಗಿವೆ ಎಂದು ಅವರು ಹೇಳಿದರು.

ಸಮಾಜದ ಎಲ್ಲಾ ವರ್ಗದ ಜನರೊಂದಿಗೆ ಸಂಪರ್ಕ ಸಾಧಿಸುವ ಶ್ರೀ ನರೇಂದ್ರ ಮೋದಿಯವರ ಅಸಾಧಾರಣ ಸಾಮರ್ಥ್ಯದ ಬಗ್ಗೆ ಮಾತನಾಡಿದ ಶ್ರೀ ಠಾಕೂರ್, ವಿದ್ಯಾರ್ಥಿಗಳಿಂದ ಮಹಿಳೆಯರವರೆಗೆ, ರೈತರಿಂದ ಗಡಿಯಲ್ಲಿರುವ ಸೈನಿಕರವರೆಗೆ, ಕ್ರೀಡಾಪಟುಗಳಿಂದ ಉದ್ಯಮಿಗಳವರೆಗೆ, ಪ್ರಧಾನಮಂತ್ರಿಯವರ ಮಾತುಗಳನ್ನು ಕೇಳುವ ಯಾರಾದರೂ ಅವರ ಭಾಷಣಗಳು ಮತ್ತು ವಿವಿಧ ಅಂತರರಾಷ್ಟ್ರೀಯ ಸಮೀಕ್ಷೆಗಳ ಮೂಲಕ ಪ್ರಧಾನಿ ಮೋದಿ ಅವರನ್ನು ವಿಶ್ವದ ಅತ್ಯಂತ ನೆಚ್ಚಿನ ಪ್ರಧಾನಿ ಎಂದು ಕರೆದಿರುವುದನ್ನು ಕಾಣಬಹುದು. ನರೇಂದ್ರ ಮೋದಿ ಎಂದರೆ ಏನೆಂದು ವಿಶ್ವದ ಪ್ರಬಲ ನಾಯಕರು ವಿವರವಾಗಿ ಹೇಳಿದ್ದಾರೆ ಎಂದು ಅವರು ತಿಳಿಸಿದರು.

ಈ ಪುಸ್ತಕವು ವಿದೇಶಿ ಸಂಬಂಧಗಳ ಬಗ್ಗೆ ಅವರ ಭಾಷಣಗಳು, ಆರ್ಥಿಕತೆಯ ಬಗ್ಗೆ ಅವರ ಆಲೋಚನೆಗಳು ಮತ್ತು ಕಾಶಿ ವಿಶ್ವನಾಥ ಧಾಮ, ಕೇದಾರನಾಥ ಧಾಮ, ಅಯೋಧ್ಯೆ, ದಿಯೋಘರ್ ಇತ್ಯಾದಿಗಳಲ್ಲಿ ನಮ್ಮ ಸಾಂಸ್ಕೃತಿಕ ಪರಂಪರೆಯ ಮರುಸ್ಥಾಪನೆಯನ್ನು ಒಳಗೊಂಡಿದೆ. ಪುಸ್ತಕವು ಭಾರತದ ಪರಿಸರದ ಕುರಿತು ಓದುಗರಿಗೆ ಪ್ರಧಾನಿಯವರ ಆಲೋಚನೆಗಳು ಮತ್ತು ಹಸಿರು ಭಾರತವನ್ನು ನಿರ್ಮಿಸಲು ತೆಗೆದುಕೊಂಡ ಕ್ರಮಗಳು, ವಿವಿಧ ಸಚಿವಾಲಯಗಳ ಸಾಧನೆಗಳು, ಫಿಟ್‌ನೆಸ್‌ನ ಮುಖ್ಯವಾಹಿನಿ, ಯೋಗ ಮತ್ತು ಕ್ರೀಡೆಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಕೃಷಿ ಮತ್ತು ಕೃಷಿ ಉದ್ಯಮ, ಉದ್ಯೋಗ, ಗ್ರಾಮೋದಯದಿಂದ ರಾಷ್ಟ್ರೋದಯದವರೆಗೆ, ಸ್ವಾವಲಂಬಿಯಾಗಲು ಭಾರತದ ಪಯಣದಲ್ಲಿ ಸರ್ಕಾರದ ಸಾಧನೆಗಳನ್ನು ತಿಳಿಸುತ್ತದೆ ಎಂದು ಅವರು ಹೇಳಿದರು.

ಈ ಪುಸ್ತಕವು ಸರ್ಕಾರದ ವಿವಿಧ ಯೋಜನೆಗಳ ಕುರಿತು ಶ್ರೀ ನರೇಂದ್ರ ಮೋದಿಯವರ ವಿಚಾರಗಳ ವಿಶ್ವಕೋಶವಾಗಿದೆ. ಈ ಸಂಕಲನದಲ್ಲಿ, ಅವರು ಐತಿಹಾಸಿಕ ಸಂದರ್ಭಗಳಲ್ಲಿ ನೀಡಿದ ಭಾಷಣಗಳನ್ನು ಕಾಣಬಹುದು. ಉದಾಹರಣೆಗೆ ರಾಜ್ಯಸಭೆಯ 250 ನೇ ಅಧಿವೇಶನ, 8 ಆಗಸ್ಟ್ 2019 ರಂದು ಆರ್ಟಿಕಲ್ 370 ಅನ್ನು ರದ್ದುಪಡಿಸಿದ ನಂತರದ ಭಾಷಣ,  ಅಸೋಚಾಮ್‌ 100 ವರ್ಷಗಳನ್ನು ಪೂರ್ಣಗೊಳಿಸಿದ ಕುರಿತು ನೀಡಿದ ಭಾಷಣ, ಕೋವಿಡ್ ಕುರಿತು 19 ಮಾರ್ಚ್ 2020 ರಂದು ರಾಷ್ಟ್ರಕ್ಕೆ ನೀಡಿದ ಸಂದೇಶ, ಫಿಟ್ ಇಂಡಿಯಾ ಆಂದೋಲನದ ಚಾಲನೆಯ ಸಂದರ್ಭದಲ್ಲಿ ನೀಡಿದ ಭಾಷಣ, ಅಯೋಧ್ಯೆಯಲ್ಲಿ ಶ್ರೀ ರಾಮ ಜನ್ಮಭೂಮಿ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ ರಾಷ್ಟ್ರಕ್ಕೆ ಅವರ ಸಂದೇಶ ಇತ್ಯಾದಿಗಳು ಇವೆ ಎಂದರು.

370ನೇ ವಿಧಿ ರದ್ದತಿಯ ನಂತರ ಭಾರತ ಉಳಿಯಲು ಸಾಧ್ಯವಿಲ್ಲ, ಕಾಶ್ಮೀರದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಯಾರೂ ಹಾರಿಸಲಾಗುವುದಿಲ್ಲ ಎಂದು ಹೇಳಿದ್ದ ವಿವಿಧ ರಾಜಕೀಯ ನಾಯಕರ ಭವಿಷ್ಯವಾಣಿಗಳಿಗೆ ಪುಸ್ತಕದಲ್ಲಿ ಪ್ರತಿಕ್ರಿಯೆ ಇದೆ ಎಂದು ಸಚಿವರು ಹೇಳಿದರು. ಇಂದು ಹರ್ ಘರ್ ತಿರಂಗಾ ಅಭಿಯಾನವು ಕಾಶ್ಮೀರದಲ್ಲಿ ದೇಶದ ಇತರ ಭಾಗಗಳಂತೆಯೇ ಸಮಾನ ಯಶಸ್ಸನ್ನು ಕಂಡಿದೆ ಮತ್ತು ಕಾಶ್ಮೀರವು ಹಿಂದೆಂದೂ ಕಾಣದಂತಹ ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ವಾರ್ತಾಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ, ಪ್ರಕಟಣೆಗಳ ನಿರ್ದೇಶನಾಲಯದ ಮಹಾನಿರ್ದೇಶಕಿ ಶ್ರೀಮತಿ ಮೋನಿದೀಪ ಮುಖರ್ಜಿ ಮತ್ತು ಸಚಿವಾಲಯದ ವಿವಿಧ ಮಾಧ್ಯಮ ಘಟಕಗಳ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಬ್ಕಾ ಸಾಥ್ ಸಬ್ಕಾ ವಿಕಾಸ್ ಸಬ್ಕಾ ವಿಶ್ವಾಸ್ ಪುಸ್ತಕ ಕುರಿತು ಮೇ 2019 ರಿಂದ ಮೇ 2020 ರವರೆಗೆ ವಿವಿಧ ವಿಷಯಗಳ ಕುರಿತು ಪ್ರಧಾನ ಮಂತ್ರಿಯವರ 86 ಭಾಷಣಗಳ ಮೇಲೆ ಪುಸ್ತಕವು ಕೇಂದ್ರೀಕರಿಸುತ್ತದೆ.

ಇವುಗಳನ್ನು ಹತ್ತು ವಿಷಯಾಧಾರಿತ ವಿಭಾಗಗಳಾಗಿ ವಿಂಗಡಿಸಲಾಗಿದೆ, ಈ ಭಾಷಣಗಳು 'ನವ ಭಾರತ'ದ ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತವೆ. ಈ ವಿಭಾಗಗಳೆಂದರೆ - ಆತ್ಮನಿರ್ಭರ ಭಾರತ: ಆರ್ಥಿಕತೆ, ಜನರೇ ಮೊದಲು ಆಡಳಿತ, ಕೋವಿಡ್-19 ವಿರುದ್ಧ ಹೋರಾಟ, ಉದಯೋನ್ಮುಖ ಭಾರತ: ವಿದೇಶಾಂಗ ವ್ಯವಹಾರಗಳು, ಜೈ ಕಿಸಾನ್, ಟೆಕ್ ಇಂಡಿಯಾ-ನವ ಭಾರತ, ಹಸಿರು ಭಾರತ-ಚೇತರಿಸಿಕೆಯ ಭಾರತ-ಸ್ವಚ್ಛ ಭಾರತ, ಫಿಟ್ ಇಂಡಿಯಾ- ಸಮರ್ಥ ಭಾರತ, ಸನಾತನ ಭಾರತ-ಆಧುನಿಕ ಭಾರತ: ಸಾಂಸ್ಕೃತಿಕ ಪರಂಪರೆ ಮತ್ತು ಮನ್ ಕಿ ಬಾತ್.

ಈ ಪುಸ್ತಕವು ಸ್ವಾವಲಂಬಿ, ಚೇತರಿಕೆಯ ಮತ್ತು ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿರುವ ನವ ಭಾರತದ ಪ್ರಧಾನಿಯವರ ದೃಷ್ಟಿಕೋನವನ್ನು ಹೇಳುತ್ತದೆ. ಪ್ರಧಾನಮಂತ್ರಿಯವರು ತಮ್ಮ ಅಸಾಧಾರಣ ಭಾಷಣ ಶೈಲಿಯ ಮೂಲಕ ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸುವ ನಾಯಕತ್ವದ ಗುಣಗಳು, ದೂರದೃಷ್ಟಿಯ ಚಿಂತನೆ ಮತ್ತು ದೂರದೃಷ್ಟಿಯನ್ನು ಅತ್ಯುತ್ತಮ ಸಂವಹನ ಸಾಮರ್ಥ್ಯಗಳೊಂದಿಗೆ ಸಂಯೋಜಿಸುತ್ತಾರೆ. ಇವೆಲ್ಲವೂ ಈ ಪುಸ್ತಕದಲ್ಲಿ ಪ್ರತಿಫಲಿಸಿವೆ.

ಇಂಗ್ಲಿಷ್ ಮತ್ತು ಹಿಂದಿ ಪುಸ್ತಕಗಳು ಪಬ್ಲಿಕೇಷನ್ಸ್ ವಿಭಾಗದ ಮಾರಾಟ ಮಳಿಗೆಗಳಲ್ಲಿ ಮತ್ತು ನವ ದೆಹಲಿಯ ಸಿಜಿಒ ಕಾಂಪ್ಲೆಕ್ಸ್‌ನಲ್ಲಿರುವ ಸೂಚನಾ ಭವನದಲ್ಲಿರುವ ಪುಸ್ತಕಗಳ ಗ್ಯಾಲರಿಯಲ್ಲಿ ಲಭ್ಯವಿವೆ. ಅವುಗಳನ್ನು ಪ್ರಕಟಣಾ ವಿಭಾಗದ ವೆಬ್‌ಸೈಟ್ ಮತ್ತು ಭಾರತ್‌ಕೋಶ್ ಪ್ಲಾಟ್‌ಫಾರ್ಮ್ ಮೂಲಕ ಆನ್‌ಲೈನ್‌ನಲ್ಲೂ ಖರೀದಿಸಬಹುದು. ಇ-ಪುಸ್ತಕಗಳು Amazon ಮತ್ತು Google Play ನಲ್ಲಿಯೂ ಲಭ್ಯವಿವೆ.

*******



(Release ID: 1861860) Visitor Counter : 148