ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ಪ್ರಧಾನ ಮಂತ್ರಿಗಳ ಸ್ವಚ್ಛ ಭಾರತ ದೃಷ್ಟಿಕೋನವು ಜನಾಂದೋಲನದ ರೂಪು ಪಡೆದುಕೊಂಡಿದೆ – ಶ್ರೀ ಕೌಶಲ್ ಕಿಶೋರ್, ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಖಾತೆ ರಾಜ್ಯ ಸಚಿವರು.
‘ಸ್ವಚ್ಛತಾ ಸ್ಟಾರ್ಟಪ್ ಚಾಲೆಂಜ್’ ವಿಜೇತರಿಗೆ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದಿಂದ ಸನ್ಮಾನ
ಟಾಪ್ 10 ವಿಜೇತರಿಗೆ ಫ್ರೆಂಚ್ ತಂತ್ರಜ್ಞಾನ ಕಂಪನಿಯಿಂದ ಸಿಗಲಿದೆ ಪ್ರೋತ್ಸಾಹಕ ಹೂಡಿಕೆ ನಿಧಿ(ಈಕ್ವಿಟಿ ಬಂಡವಾಳ) ಮತ್ತು ಸಮರ್ಪಿತ ಇನ್ ಕ್ಯುಬೇಷನ್ ಸೆಂಟರ್(ಪೋಷಣಾ ಕೇಂದ್ರ)ನ ಬೆಂಬಲ
ಟಾಪ್ 20 ಸ್ಟಾರ್ಟಪ್ ಗಳಿಗೆ ಭಾರತ ಸರ್ಕಾರದಿಂದ ಸಿಗಲಿದೆ ತಲಾ 20 ಲಕ್ಷ ರೂ. ಆರ್ಥಿಕ ನೆರವಿನ (ಹೂಡಿಕೆ ಪ್ರೋತ್ಸಾಹ) ಬೆಂಬಲ
Posted On:
21 SEP 2022 11:42AM by PIB Bengaluru
ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯ ದೆಹಲಿಯಲ್ಲಿ ನಿನ್ನೆ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಸ್ವಚ್ಛತಾ ಸ್ಟಾರ್ಟಪ್ ಚಾಲೆಂಜ್’ ವಿಜೇತರನ್ನು ಸನ್ಮಾನಿಸಿತು. ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಕೌಶಲ್ ಕಿಶೋರ್, ಭಾರತದಲ್ಲಿರುವ ಫ್ರಾನ್ಸ್ ರಾಯಭಾರಿ ಇಮ್ಯಾನುಯೆಲ್ ಲೆನೈನ್, ಸಚಿವಾಲಯದ ಕಾರ್ಯದರ್ಶಿ ಶ್ರೀ ಮನೋಜ್ ಜೋಶಿ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವಾರು ಸ್ಟಾರ್ಟಪ್‌ಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಾತನಾಡಿದ ಸಚಿವ ಶ್ರೀ ಕೌಶಲ್ ಕಿಶೋರ್, ಸ್ವಚ್ಛ ಭಾರತ ನಿರ್ಮಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿ ಹೊಂದಿರುವ ಸ್ವಚ್ಛ ಭಾರತ್ ಮಿಷನ್- ನಗರ ಕಾರ್ಯಕ್ರಮ(ಮಿಷನ್) ಪ್ರಾರಂಭಿಸುವುದರೊಂದಿಗೆ ಇದು ಜನಾಂದೋಲನದ ರೂಪು ಪಡೆದುಕೊಂಡಿದೆ. ಈ ಮಿಷನ್ ಅಡಿ, ತ್ಯಾಜ್ಯವನ್ನು ಮರುಬಳಕೆ ಮಾಡುವುದು ಮತ್ತು ಉಪಯುಕ್ತ ಉತ್ಪನ್ನಗಳನ್ನಾಗಿ ಪರಿವರ್ತಿಸುವ ಉದಾತ್ತ ಚಿಂತನೆಯು ಕಸ ಮುಕ್ತ ನಗರಗಳನ್ನು ರೂಪಿಸುವ ದಿಕ್ಕಿನಲ್ಲಿ ಸಾಗಲು ಸಹಾಯ ಮಾಡುವ ಜತೆಗೆ, ಬೃಹತ್ ಪ್ರಮಾಣದಲ್ಲಿ ಉದ್ಯೋಗವನ್ನು ಸೃಷ್ಟಿಸಲು ಸಹಾಯ ಮಾಡುತ್ತಿದೆ ಎಂದರು.
‘ಸ್ವಚ್ಛತಾ ಸ್ಟಾರ್ಟಪ್ ಚಾಲೆಂಜ್’ ಅಡಿ, ಆಯ್ಕೆ ಮಾಡಲಾದ 30 ಸ್ಟಾರ್ಟಪ್ ಗಳ ಪೈಕಿ ಅಂತಿಮವಾಗಿ ಆಯ್ಕೆಯಾದ 10 ಸ್ಟಾರ್ಟಪ್ ಗಳು ತಲಾ 25 ಲಕ್ಷ ರೂ. ಆರ್ಥಿಕ ನೆರವು ಪಡೆಯಲಿದೆ ಎಂದು ಸಚಿವರು ಮಾಹಿತಿ ನೀಡಿದರು. ಸ್ಟಾರ್ಟಪ್‌ಗಳನ್ನು ಉತ್ತೇಜಿಸಲು ಫ್ರಾನ್ಸ್ ಸರ್ಕಾರ ಕೈಗೊಂಡಿರುವ ಉಪಕ್ರಮದ ಅಡಿ, ಫ್ರೆಂಚ್ ತಂತ್ರಜ್ಞಾನ ಕಂಪನಿಗಳು ಈ ಆರ್ಥಿಕ ನೆರವು ಒದಗಿಸಲಿವೆ. ಇನ್ನುಳಿದ 20 ಸ್ಟಾರ್ಟಪ್‌ಗಳಿಗೆ ಭಾರತ ಸರ್ಕಾರ ತಲಾ 20 ಲಕ್ಷ ರೂ.ಆರ್ಥಿಕ ಬೆಂಬಲ ಒದಗಿಸಲಿದೆ ಎಂದು ಸಚಿವರು ಪ್ರಕಟಿಸಿದರು.
ಈ ಸವಾಲಿನ ಮೂಲಕ ಸ್ಟಾರ್ಟಪ್‌ಗಳಿಗೆ ನೀಡುತ್ತಿರುವ ಉತ್ತೇಜನವು ‘ಮೇಕ್ ಇನ್ ಇಂಡಿಯಾ’ ಕಡೆಗೆ ಸಾಗುತ್ತಿದೆ ಎಂದು ಶ್ರೀ ಕೌಶಲ್ ಕಿಶೋರ್ ಹೇಳಿದರು.
ಮರುಬಳಕೆಯ ಉತ್ಪನ್ನಗಳ ಅಗಾಧ ಮಾರುಕಟ್ಟೆಯತ್ತ ಗಮನ ಸೆಳೆದ ಸಚಿವರು, ಈ ಉತ್ಪನ್ನಗಳನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ವಿಪುಲ ಮಾರುಕಟ್ಟೆ ಅವಕಾಶಗಳ ಬಗಗೆ ಸ್ಟಾರ್ಟಪ್‌ಗಳಿಗೆ ಜಾಗೃತಿ ಮೂಡಿಸುವುದು ಹೆಚ್ಚಿನ ಮಹತ್ವದ್ದಾಗಿದೆ ಎಂದು ಹೇಳಿದರು. ಸ್ಥಳೀಯ ಭಾಷೆಗಳನ್ನು ಬಳಸಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಅವರು ಸ್ಟಾರ್ಟಪ್‌ಗಳಿಗೆ ಸಲಹೆ ನೀಡಿದರು.
ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದಿಂದ ಕಾರ್ಯಗತಗೊಳ್ಳುತ್ತಿರುವ ಸ್ವಚ್ಛ ಭಾರತ್ ಮಿಷನ್ – ನಗರ ಕಾರ್ಯಕ್ರಮವು ಸ್ಥಳೀಯವಾಗಿ ಹೊಸತನದ ಶೋಧ, ಕಾರ್ಯಗತಗೊಳಿಸಬಹುದಾದ ಪರಿಹಾರಗಳು ಮತ್ತು ವ್ಯವಹಾರ ಮಾದರಿಗಳನ್ನು ಅಳವಡಿಸಿಕೊಳ್ಳಲು ಮತ್ತು ಪರಿಪೂರ್ಣ ತ್ಯಾಜ್ಯ ನಿರ್ವಹಣೆ ಉತ್ತೇಜಿಸುವ ಪ್ರಯತ್ನದಲ್ಲಿ ಹೊಸತನ ಮತ್ತು ಉತ್ತೇಜನಕ್ಕೆ ವಿಶೇಷ ಗಮನವನ್ನು ನೀಡುತ್ತಿದೆ. ಈ ದೀರ್ಘಾವಧಿಯ ವಿಧಾನದೊಂದಿಗೆ ಹೊಂದಾಣಿಕೆಯಾಗಿ, ಸಚಿವಾಲಯವು, 2022 ಜನವರಿಯಿಂದ ಸ್ವಚ್ಛ ಭಾರತ್ ಮಿಷನ್-ಅರ್ಬನ್ ವ್ಯಾಪ್ತಿಯ ಅಡಿ, ಸ್ವಚ್ಛತಾ ಸ್ಟಾರ್ಟಪ್ ಚಾಲೆಂಜ್ ಪ್ರಶಸ್ತಿ ನೀಡಿಕೆ ಕಾರ್ಯಕ್ರಮ ಪ್ರಾರಂಭಿಸಿದೆ. ಈ ಕಾರ್ಯಕ್ರಮಕ್ಕೆ ಏಜೆನ್ಸ್ ಫ್ರಾಂಚೈಸ್ ಡಿ ಡೆವಲಪ್ ಮೆಂಟ್(ಎಎಫ್ ಡಿ) ಹಾಗೂ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆ ಕೈಜೋಡಿಸಿವೆ. ಈ ಕಾರ್ಯಕ್ರಮವು ಭಾರತದಲ್ಲಿ ತ್ಯಾಜ್ಯ ನಿರ್ವಹಣಾ ಕ್ಷೇತ್ರದ ಉದ್ಯಮಶೀಲತೆಯ ಸಾಮರ್ಥ್ಯ ಬಳಸಿಕೊಳ್ಳಲು ಮತ್ತು ಉದ್ಯಮ ಅಭಿವೃದ್ಧಿಗೆ ಅನುವು ಮಾಡಿಕೊಡುವ ಪರಿಸರವನ್ನು ಉತ್ತೇಜಿಸುವ ಗುರಿ ಹೊಂದಿದೆ. ಆಸಕ್ತಿದಾಯಕವಾಗಿ, 2021 ಡಿಸೆಂಬರ್ ನಲ್ಲಿ ಪರಿಚಯಿಸಲಾದ ಸ್ವಚ್ಛ ತಂತ್ರಜ್ಞಾನ ಚಾಲೆಂಜ್ ಮೂಲಕ ಸಚಿವಾಲಯವು ಕೆಳ ಮಟ್ಟದಿಂದ ಅಭಿವೃದ್ಧಿಪಡಿಸುವ ವಿಧಾನವನ್ನು ಅಳವಡಿಸಿಕೊಂಡಿದೆ. ಎನ್‌ಜಿಒಗಳು, ಸಿಎಸ್‌ಒಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸ್ಟಾರ್ಟಪ್‌ಗಳು ಸೇರಿದಂತೆ ನೈರ್ಮಲ್ಯ ವಲಯದಲ್ಲಿ ಕೆಲಸ ಮಾಡುವ ಎಲ್ಲ ಪಾಲುದಾರರಿಂದ ಟೆಕ್ನಾಲಜಿ ಚಾಲೆಂಜ್ ಎಂಟ್ರಿಗಳು ಮತ್ತು ಪರಿಹಾರಗಳನ್ನು ಆಹ್ವಾನಿಸಲಾಗಿತ್ತು. ಸ್ಟಾರ್ಟಪ್‌ಗಳಿಂದ ಸ್ವೀಕರಿಸಿದ ಟೆಕ್ನಾಲಜಿ ಚಾಲೆಂಜ್ ವಿಜೇತ ಎಂಟ್ರಿಗಳನ್ನು 2022 ಜನವರಿಯ ಸ್ವಚ್ಛತಾ ಸ್ಟಾರ್ಟ್‌ಅಪ್ ಚಾಲೆಂಜ್‌ನಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿತ್ತು.
ಸ್ಟಾರ್ಟಪ್ ಚಾಲೆಂಜ್ ಪ್ರಶಸ್ತಿಗೆ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣಾ ವಲಯದ ಸಂಸ್ಥೆಗಳಿಂದ 4 ವಿಭಾಗಗಳಲ್ಲಿ ಅರ್ಜಿಗಳನ್ನು ಸಲ್ಲಿಸುವಂತೆ (ಎಂಟ್ರೀಸ್) ಕೋರಲಾಗಿತ್ತು. ಅವುಗಳೆಂದರೆ. (i)ಸಾಮಾಜಿಕ ಸೇರ್ಪಡೆ, (ii) ಶೂನ್ಯ ತ್ಯಾಜ್ಯ(ಡಂಪ್) ನಿರ್ವಹಣೆ, (iii)ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಮತ್ತು (iv) ಡಿಜಿಟಲ್ ತಂತ್ರಜ್ಞಾನ ಸಕ್ರಿಯಗೊಳಿಸುವಿಕೆಯ ಮೂಲಕ ಪಾರದರ್ಶಕತೆ. ಆಕಾಂಕ್ಷಿತ ಸ್ಟಾರ್ಟಪ್‌ಗಳಿಂದ ಒಟ್ಟು 244 ಎಂಟ್ರಿಗಳನ್ನು ಸ್ವೀಕರಿಸಲಾಗಿತ್ತು. ದೇಶದ ಪ್ರಮುಖ ಶೈಕ್ಷಣಿಕ ಸಂಸ್ಥೆಗಳು ಮತ್ತು ಇನ್‌ಕ್ಯುಬೇಟರ್‌ಗಳು, ಉದ್ಯಮ ಮತ್ತು ಸರ್ಕಾರಿ ಸಂಸ್ಥೆಗಳಿಂದ ಆಯ್ಕೆ ಮಾಡಿದ 20 ಸದಸ್ಯರ ತೀರ್ಪುಗಾರರ ತಂಡದಿಂದ 30 ಸ್ಟಾರ್ಟಪ್‌ಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ. ತ್ಯಾಜ್ಯ ಮೌಲ್ಯ ಸರಪಳಿಯಲ್ಲಿ ಈ 30 ಸ್ಟಾರ್ಟಪ್ ಗಳು ಕಾರ್ಯನಿರತವಾಗಿವೆ. ತ್ಯಾಜ್ಯ ಸಂಗ್ರಹಣೆಗಾಗಿ ಸ್ವಯಂಚಾಲಿತ ಪರಿಹಾರದಿಂದ ಹಿಡಿದು ಪ್ರತ್ಯೇಕಗೊಳಿಸುವುದು, ಸಾಗಣೆ ಮತ್ತು ಮೌಲ್ಯವರ್ಧನೆಯವರೆಗೆ ವಿವಿಧ ವಲಯಗಳಲ್ಲಿ ಅಂದರೆ ಜವಳಿ ತ್ಯಾಜ್ಯ, ಕೃಷಿ ಮತ್ತು ಆಹಾರ ತ್ಯಾಜ್ಯ, ಕಟ್ಟಡ ನಿರ್ಮಾಣ ಮತ್ತು ಕಟ್ಟಡ ನೆಲಸಮದಿಂದ ಸಿಗುವ ಅವಶೇಷಗಳ ತ್ಯಾಜ್ಯ ಇತ್ಯಾದಿ ವಲಯಗಳಲ್ಲಿ ಇವು ಕೆಲಸ ಮಾಡುತ್ತಿವೆ. ಈ ವ್ಯಾಪಾರ ಮಾದರಿಗಳು ಜಾಗತಿಕ ಮಟ್ಟದಲ್ಲಿ ಭಾರತದ ತ್ಯಾಜ್ಯ ಮರುಬಳಕೆ, ಉತ್ಕೃಷ್ಟ ಗುಣಮಟ್ಟದ ಬಳಕೆ ಸಾಮರ್ಥ್ಯವನ್ನು ಸುಧಾರಿಸುವ ಗೌರವಯುತ ಜೀವನೋಪಾಯವನ್ನು ಸೃಜಿಸುವ ಸಾಮರ್ಥ್ಯ ಹೊಂದಿವೆ.
ತೀರ್ಪುಗಾರರ ತಂಡದಿಂದ ಆಯ್ಕೆಯಾಗಿರುವ 30 ಸ್ಟಾರ್ಟಪ್ ಗಳ ಪೈಕಿ ಟಾಪ್ 10 ವಿಜೇತರನ್ನು ಗುರುತಿಸಲಾಗಿದೆ. ಟಾಪ್ 10 ವಿಜೇತರಿಗೆ ಫ್ರೆಂಚ್ ತಂತ್ರಜ್ಞಾನ ಕಂಪನಿಯಿಂದ ಪ್ರೋತ್ಸಾಹಕ ಹೂಡಿಕೆ ನಿಧಿ(ಈಕ್ವಿಟಿ ಬಂಡವಾಳ) ಮತ್ತು ಸಮರ್ಪಿತ ಇನ್ ಕ್ಯುಬೇಷನ್ ಸೆಂಟರ್(ಪೋಷಣಾ ಕೇಂದ್ರ)ನ ಬೆಂಬಲ ಸಿಗಲಿದೆ. ಇದು ಸ್ಟಾರ್ಟಪ್‌ಗಳನ್ನು ಉತ್ತೇಜಿಸುವ ಫ್ರೆಂಚ್ ಸರ್ಕಾರದ ಉಪಕ್ರಮವಾಗಿದೆ.
*****
(Release ID: 1861230)
Visitor Counter : 178