ಪ್ರಧಾನ ಮಂತ್ರಿಯವರ ಕಛೇರಿ
ಕೇಂದ್ರ-ರಾಜ್ಯ ವಿಜ್ಞಾನ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಭಾಷಾಂತರ
Posted On:
10 SEP 2022 3:51PM by PIB Bengaluru
ಗುಜರಾತಿನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಜೀ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಡಾ. ಜಿತೇಂದ್ರ ಸಿಂಗ್ ಜೀ, ವಿವಿಧ ರಾಜ್ಯ ಸರ್ಕಾರಗಳ ಸಚಿವರೇ, ನವೋದ್ಯಮಗಳ ಜಗತ್ತಿನ ಎಲ್ಲಾ ಸಹೋದ್ಯೋಗಿಗಳೇ, ವಿದ್ಯಾರ್ಥಿಗಳೇ, ಇತರ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ!
ಈ ಮಹತ್ವದ ಕಾರ್ಯಕ್ರಮ 'ಕೇಂದ್ರ-ರಾಜ್ಯ ವಿಜ್ಞಾನ ಸಮಾವೇಶ'ಕ್ಕೆ ನಾನು ನಿಮ್ಮೆಲ್ಲರನ್ನು ಸ್ವಾಗತಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ. ಇಂದಿನ ನವಭಾರತದಲ್ಲಿ 'ಸಬ್ ಕಾ ಪ್ರಯಾಸ್' (ಎಲ್ಲರ ಪ್ರಯತ್ನ) ಸ್ಫೂರ್ತಿಗೆ ಈ ಘಟನೆ ಜೀವಂತ ಸಾಕ್ಷಿಯಾಗಿದೆ.
ಸ್ನೇಹಿತರೇ,
ವಿಜ್ಞಾನವು 21ನೇ ಶತಮಾನದ ಭಾರತದ ಅಭಿವೃದ್ಧಿಯ ಚೈತನ್ಯವಾಗಿದ್ದು, ಇದು ಪ್ರತಿಯೊಂದು ಪ್ರದೇಶ ಮತ್ತು ಪ್ರತಿಯೊಂದು ರಾಜ್ಯದ ಅಭಿವೃದ್ಧಿಯನ್ನು ವೇಗಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಭಾರತವು ನಾಲ್ಕನೇ ಕೈಗಾರಿಕಾ ಕ್ರಾಂತಿಯ ಹೊಸ್ತಿಲಲ್ಲಿರುವ ಹೊತ್ತಿನಲ್ಲಿ, ಭಾರತದ ವಿಜ್ಞಾನ ಮತ್ತು ಈ ಕ್ಷೇತ್ರಕ್ಕೆ ಸಂಬಂಧಿಸಿದ ಜನರ ಪಾತ್ರವು ಬಹಳ ಮುಖ್ಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನೀತಿ ನಿರೂಪಕರು ಮತ್ತು ಆಡಳಿತ ಮತ್ತು ಆಡಳಿತದೊಂದಿಗೆ ಸಂಬಂಧ ಹೊಂದಿರುವ ನಮ್ಮ ಜವಾಬ್ದಾರಿ ಹೆಚ್ಚಾಗುತ್ತದೆ. ಅಹ್ಮದಾಬಾದ್ ನ ವಿಜ್ಞಾನ ನಗರಿಯಲ್ಲಿ ನಡೆಯತ್ತಿರುವ ಈ ಚಿಂತನ ಮಂಥನದ ಅಧಿವೇಶನವು ನಿಮಗೆ ಹೊಸ ಸ್ಫೂರ್ತಿಯನ್ನು ನೀಡುತ್ತದೆ ಮತ್ತು ವಿಜ್ಞಾನವನ್ನು ಪ್ರೋತ್ಸಾಹಿಸುವ ಉತ್ಸಾಹವನ್ನು ನಿಮ್ಮಲ್ಲಿ ತುಂಬುತ್ತದೆ ಎಂದು ನಾನು ಭಾವಿಸುತ್ತೇನೆ.
ಸ್ನೇಹಿತರೇ,
ಇದನ್ನು ನಮ್ಮ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ - ज्ञानम् विज्ञान सहितम् यत् ज्ञात्वा मोक्ष्यसे अशुभात्।। ಅಂದರೆ, ಜ್ಞಾನ ಮತ್ತು ವಿಜ್ಞಾನದ ಸಮ್ಮಿಲನವಾದಾಗ, ನಾವು ಜ್ಞಾನ ಮತ್ತು ವಿಜ್ಞಾನಕ್ಕೆ ಪರಿಚಿತರಾದಾಗ, ಅದು ಸ್ವಯಂಚಾಲಿತವಾಗಿ ಪ್ರಪಂಚದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ವಿಜ್ಞಾನವು ಪರಿಹಾರ, ವಿಕಸನ ಮತ್ತು ನಾವೀನ್ಯತೆಯ ತಳಹದಿಯಾಗಿದೆ. ಈ ಸ್ಫೂರ್ತಿಯೊಂದಿಗೆ, ಇಂದಿನ ನವ ಭಾರತವು ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಮತ್ತು ಜೈ ಅನುಸಂಧಾನ್ ಕರೆಯೊಂದಿಗೆ ಮುಂದುವರಿಯುತ್ತಿದೆ.
ಸ್ನೇಹಿತರೇ,
ಗತಕಾಲದ ಒಂದು ಪ್ರಮುಖ ಅಂಶವಿದೆ, ಅದರೆಡೆಗೆ ನಾನು ನಿಮ್ಮ ಗಮನವನ್ನು ಸೆಳೆಯಲು ಬಯಸುತ್ತೇನೆ. ಇತಿಹಾಸದ ಆ ಪಾಠವು ಕೇಂದ್ರ ಮತ್ತು ರಾಜ್ಯಗಳ ಭವಿಷ್ಯವನ್ನು ರೂಪಿಸುವಲ್ಲಿ ಬಹು ದೂರ ಸಾಗುತ್ತದೆ. ಕಳೆದ ಶತಮಾನದ ಆರಂಭಿಕ ದಶಕಗಳನ್ನು ನಾವು ನೆನಪಿಸಿಕೊಂಡರೆ, ಜಗತ್ತು ವಿನಾಶ ಮತ್ತು ದುರಂತದ ಕಾಲಘಟ್ಟದಲ್ಲಿ ಹೇಗೆ ಸಾಗಿತ್ತು ಎಂಬುದನ್ನು ನಾವು ಅರಿಯುತ್ತೇವೆ. ಆದರೆ ಆ ಸಮಯದಲ್ಲೂ, ಪೂರ್ವವೇ ಇರಲಿ ಅಥವಾ ಪಶ್ಚಿಮವೇ ಇರಲಿ - ಎಲ್ಲೆಡೆಯ ವಿಜ್ಞಾನಿಗಳು ತಮ್ಮ ಗಮನಾರ್ಹ ಆವಿಷ್ಕಾರಗಳಲ್ಲಿ ನಿರತರಾಗಿದ್ದರು. ಪಾಶ್ಚಿಮಾತ್ಯ ದೇಶಗಳಲ್ಲಿ, ಐನ್ ಸ್ಟೈನ್, ಫರ್ಮಿ, ಮ್ಯಾಕ್ಸ್ ಪ್ಲಾಂಕ್, ನೀಲ್ಸ್ ಬೋರ್ ಮತ್ತು ಟೆಸ್ಲಾ ಅವರಂತಹ ಅನೇಕ ವಿಜ್ಞಾನಿಗಳು ತಮ್ಮ ಪ್ರಯೋಗಗಳಿಂದ ಜಗತ್ತನ್ನು ಆಶ್ಚರ್ಯಚಕಿತಗೊಳಿಸಿದರು. ಇದೇ ಅವಧಿಯಲ್ಲಿ, ಸಿ.ವಿ. ರಾಮನ್, ಜಗದೀಶ್ ಚಂದ್ರ ಬೋಸ್, ಸತ್ಯೇಂದ್ರನಾಥ್ ಬೋಸ್, ಮೇಘನಾದ್ ಸಹಾ, ಎಸ್. ಚಂದ್ರಶೇಖರ್ ಮುಂತಾದ ಅಸಂಖ್ಯಾತ ಭಾರತೀಯ ವಿಜ್ಞಾನಿಗಳು ತಮ್ಮ ಹೊಸ ಸಂಶೋಧನೆಗಳನ್ನು ಜಗತ್ತಿನ ಮುಂದೆ ತಂದಿದ್ದರು. ಈ ಎಲ್ಲಾ ವಿಜ್ಞಾನಿಗಳು ಭವಿಷ್ಯವನ್ನು ಉತ್ತಮಪಡಿಸಲು ಅನೇಕ ಮಾರ್ಗಗಳನ್ನು ತೆರೆದರು. ಆದರೆ ಪೂರ್ವ ಮತ್ತು ಪಶ್ಚಿಮದ ನಡುವಿನ ಒಂದು ಪ್ರಮುಖ ವ್ಯತ್ಯಾಸವೆಂದರೆ ನಾವು ನಮ್ಮ ವಿಜ್ಞಾನಿಗಳ ಕಾರ್ಯದ ಬಗ್ಗೆ ಹೆಚ್ಚು ಸಂಭ್ರಮಿಸಲಿಲ್ಲ. ಇದರ ಪರಿಣಾಮವಾಗಿ, ವಿಜ್ಞಾನದ ಬಗ್ಗೆ ನಮ್ಮ ಸಮಾಜದ ಹೆಚ್ಚಿನ ಭಾಗದಲ್ಲಿ ಉದಾಸೀನತೆಯ ಪ್ರಜ್ಞೆ ಬೆಳೆಯಿತು.
ನಾವು ಸ್ಮರಿಸಬೇಕಾದ ಒಂದು ವಿಷಯವೆಂದರೆ ನಾವು ಕಲೆಯನ್ನು ಆರಾಧಿಸುವಾಗ, ನಾವು ಹೆಚ್ಚು ಹೊಸ ಕಲಾವಿದರನ್ನು ಪ್ರೇರೇಪಿಸುತ್ತೇವೆ ಮತ್ತು ಸೃಷ್ಟಿಸುತ್ತೇವೆ. ನಾವು ಕ್ರೀಡೆಗಳನ್ನು ಉತ್ತೇಜಿಸುವಾಗ, ನಾವು ಹೊಸ ಆಟಗಾರರನ್ನು ಪ್ರೇರೇಪಿಸುತ್ತೇವೆ ಮತ್ತು ಸೃಷ್ಟಿಸುತ್ತೇವೆ. ಅಂತೆಯೇ, ನಾವು ನಮ್ಮ ವಿಜ್ಞಾನಿಗಳ ಸಾಧನೆಗಳ ಬಗ್ಗೆ ಸಂಭ್ರಮಿಸಿದಾಗ, ವಿಜ್ಞಾನವು ನಮ್ಮ ಸಮಾಜದ ಸಹಜ ಅಂಗವಾಗುತ್ತದೆ ಮತ್ತು ಅದು ಸಂಸ್ಕೃತಿಯ ಒಂದು ಭಾಗವಾಗುತ್ತದೆ. ಆದ್ದರಿಂದ, ಇಂದು ನಾನು ಎಲ್ಲಾ ರಾಜ್ಯಗಳಿಂದ ಬಂದಿರುವ ಎಲ್ಲಾ ಜನರನ್ನು ನಮ್ಮ ದೇಶದ ವಿಜ್ಞಾನಿಗಳ ಸಾಧನೆಗಳನ್ನು ಗೌರವಿಸಿ ಸಂಭ್ರಮಿಸಲು ಮತ್ತು ವೈಭವೀಕರಿಸಲು ವಿನಂತಿಸುತ್ತೇನೆ. ಪ್ರತಿ ಹಂತದಲ್ಲೂ, ನಮ್ಮ ದೇಶದ ವಿಜ್ಞಾನಿಗಳು ಸಹ ತಮ್ಮ ಸಂಶೋಧನೆಗಳ ಮೂಲಕ ನಮಗೆ ಈ ಅವಕಾಶವನ್ನು ನೀಡುತ್ತಿದ್ದಾರೆ. ಭಾರತವು ಕೊರೊನಾಗೆ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಸಮರ್ಥವಾಗಿದ್ದರೆ ಮತ್ತು 200 ಕೋಟಿಗೂ ಹೆಚ್ಚು ಲಸಿಕೆ ಡೋಸ್ ಗಳನ್ನು ನೀಡಲು ಸಮರ್ಥವಾಗಿದ್ದರೆ, ಅದರ ಹಿಂದೆ ನಮ್ಮ ವಿಜ್ಞಾನಿಗಳ ದೊಡ್ಡ ಸಾಮರ್ಥ್ಯವಿದೆ. ಅಂತೆಯೇ, ಇಂದು ಭಾರತದ ವಿಜ್ಞಾನಿಗಳು ಪ್ರತಿಯೊಂದು ಕ್ಷೇತ್ರದಲ್ಲೂ ಅದ್ಭುತಗಳನ್ನು ಮಾಡುತ್ತಿದ್ದಾರೆ. ಭಾರತದ ವಿಜ್ಞಾನಿಗಳ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಸಾಧನೆಯನ್ನು ಆಚರಿಸುವ ಮೂಲಕ, ದೇಶದಲ್ಲಿ ವಿಜ್ಞಾನದೆಡೆಗೆ ಬೆಳೆಯುವ ಸಾಮರ್ಥ್ಯವು ಈ 'ಅಮೃತ ಕಾಲ'ದಲ್ಲಿ ನಮಗೆ ಸಾಕಷ್ಟು ಸಹಾಯ ಮಾಡುತ್ತದೆ.
ಸ್ನೇಹಿತರೇ,
ನಮ್ಮ ಸರ್ಕಾರವು ವಿಜ್ಞಾನ ಆಧಾರಿತ ಅಭಿವೃದ್ಧಿ ವಿಧಾನದೊಂದಿಗೆ ಮುಂದುವರಿಯುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. 2014 ರಿಂದ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ. ಸರ್ಕಾರದ ಪ್ರಯತ್ನಗಳಿಂದಾಗಿ, ಇಂದು ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಭಾರತವು 46 ನೇ ಸ್ಥಾನದಲ್ಲಿದೆ, ಆದರೆ ಭಾರತವು 2015 ರಲ್ಲಿ 81 ನೇ ಸ್ಥಾನದಲ್ಲಿತ್ತು. ಇಷ್ಟು ಕಡಿಮೆ ಸಮಯದಲ್ಲಿ ನಾವು 81 ರಿಂದ 46 ರವರೆಗಿನ ದೂರವನ್ನು ಕ್ರಮಿಸಿದ್ದೇವೆ, ಆದರೆ ನಾವು ಇಲ್ಲಿ ನಿಲ್ಲಬೇಕಾಗಿಲ್ಲ, ನಾವು ಈಗ ಹೆಚ್ಚಿನ ಗುರಿಯನ್ನು ಹೊಂದಬೇಕಾಗಿದೆ. ಇಂದು ಭಾರತದಲ್ಲಿ ದಾಖಲೆಯ ಸಂಖ್ಯೆಯ ಪೇಟೆಂಟ್ ಗಳನ್ನು ನೀಡಲಾಗುತ್ತಿದೆ ಮತ್ತು ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಇಂದು ವಿಜ್ಞಾನ ಕ್ಷೇತ್ರದ ಅನೇಕ ನವೋದ್ಯಮಗಳು ಈ ಸಮಾವೇಶದಲ್ಲಿ ಭಾಗವಹಿಸುತ್ತಿರುವುದನ್ನು ನೀವು ನೋಡಬಹುದು. ದೇಶದಲ್ಲಿ ನವೋದ್ಯಮಗಳ ಅಲೆಯು ಈ ಬದಲಾವಣೆ ಎಷ್ಟು ವೇಗವಾಗಿ ಬರುತ್ತಿದೆ ಎಂಬುದನ್ನು ಸಾರುತ್ತಿದೆ.
ಸ್ನೇಹಿತರೇ,
ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಗಳು ಇಂದಿನ ಯುವ ಪೀಳಿಗೆಯ ರಕ್ತ(ಡಿಎನ್ಎ) ದಲ್ಲಿವೆ. ಅವರು ತಂತ್ರಜ್ಞಾನಕ್ಕೆ ಬಹಳ ವೇಗವಾಗಿ ಹೊಂದಿಕೊಳ್ಳುತ್ತಾರೆ. ನಾವು ಈ ಯುವ ಪೀಳಿಗೆಯನ್ನು ನಮ್ಮ ಸಂಪೂರ್ಣ ಶಕ್ತಿಯಿಂದ ಬೆಂಬಲಿಸಬೇಕು. ಇಂದಿನ ನವ ಭಾರತದಲ್ಲಿ, ಯುವ ಪೀಳಿಗೆಗಾಗಿ ಸಂಶೋಧನೆ ಮತ್ತು ನಾವಿನ್ಯತೆ ಕ್ಷೇತ್ರದಲ್ಲಿ ಹೊಸ ವಲಯಗಳನ್ನು ತೆರೆಯಲಾಗುತ್ತಿದೆ. ಬಾಹ್ಯಾಕಾಶ ಅಭಿಯಾನ, ಅಳ ಸಮುದ್ರ ಅಭಿಯಾನ, ರಾಷ್ಟ್ರೀಯ ಸೂಪರ್ ಕಂಪ್ಯೂಟಿಂಗ್ ಅಭಿಯಾನ, ಸೆಮಿಕಂಡಕ್ಟರ್ ಅಭಿಯಾನ, ಹೈಡೋಜನ್ ಅಭಿಯಾನ, ಡ್ರೋನ್ ಟೆಕ್ನಾಲಜಿಯಂತಹ ಅನೇಕ ಅಭಿಯಾನಗಳಲ್ಲಿ ಕಾರ್ಯ ವೇಗವಾಗಿ ನಡೆಯುತ್ತಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿಶೇಷ ಒತ್ತು ನೀಡಲಾಗಿದ್ದು, ಇದರಿಂದ ವಿಜ್ಞಾನ ಮತ್ತು ತಂತ್ರಜ್ಞಾನದ ಶಿಕ್ಷಣವನ್ನು ವಿದ್ಯಾರ್ಥಿಗೆ ಅವರ ಮಾತೃಭಾಷೆಯಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತಿದೆ.
ಸ್ನೇಹಿತರೇ,
ಭಾರತವನ್ನು ಸಂಶೋಧನೆ ಮತ್ತು ನಾವಿನ್ಯತೆಯ ಜಾಗತಿಕ ಕೇಂದ್ರವನ್ನಾಗಿ ಮಾಡಲು ನಾವೆಲ್ಲರೂ ಈ 'ಅಮೃತ ಕಾಲ'ದಲ್ಲಿ ಅನೇಕ ರಂಗಗಳಲ್ಲಿ ಒಟ್ಟಿಗೆ ಶ್ರಮಿಸಬೇಕಾಗಿದೆ. ನಾವು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ನಮ್ಮ ಸಂಶೋಧನೆಯನ್ನು ಸ್ಥಳೀಯ ಮಟ್ಟಕ್ಕೆ ಕೊಂಡೊಯ್ಯಬೇಕು. ಪ್ರತಿಯೊಂದು ರಾಜ್ಯವು ತಮ್ಮ ಸ್ಥಳೀಯ ಸಮಸ್ಯೆಗಳಿಗೆ ಅನುಗುಣವಾಗಿ ಸ್ಥಳೀಯ ಪರಿಹಾರಗಳನ್ನು ರಚಿಸಲು ನಾವೀನ್ಯತೆಯತ್ತ ಗಮನ ಹರಿಸಬೇಕು ಎಂಬುದು ಇಂದಿನ ಅಗತ್ಯವಾಗಿದೆ. ಈಗ ನಿರ್ಮಾಣದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಹಿಮಾಲಯದ ಪ್ರದೇಶಗಳಿಗೆ ಸೂಕ್ತವಾದ ತಂತ್ರಜ್ಞಾನವು ಪಶ್ಚಿಮ ಘಟ್ಟಗಳಲ್ಲಿ ಅಷ್ಟೇ ಪರಿಣಾಮಕಾರಿಯಾಗಿರಬೇಕೆಂದೇನಿಲ್ಲ. ಮರುಭೂಮಿಗಳು ತಮ್ಮದೇ ಆದ ಸವಾಲುಗಳನ್ನು ಹೊಂದಿವೆ ಮತ್ತು ಕರಾವಳಿ ಪ್ರದೇಶಗಳು ತಮ್ಮದೇ ಆದ ಸಮಸ್ಯೆಗಳನ್ನು ಹೊಂದಿವೆ. ಆದ್ದರಿಂದ, ಇಂದು ನಾವು ಅಗ್ಗದ ವಸತಿಗಾಗಿ ಲೈಟ್ ಹೌಸ್ (ಹಗುರ ಮನೆ) ಯೋಜನೆಗಳಲ್ಲಿ ಶ್ರಮಿಸುತ್ತಿದ್ದೇವೆ, ಇದರಲ್ಲಿ ಅನೇಕ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಅಂತೆಯೇ, ನಾವು ಹವಾಮಾನ ತಾಳಿಕೊಳ್ಳುವ ಬೆಳೆಗಳನ್ನು ಸ್ಥಳೀಯಗೊಳಿಸಿದ್ದು, ನಾವು ಉತ್ತಮ ಪರಿಹಾರಗಳನ್ನು ಪಡೆಯುತ್ತಿದ್ದೇವೆ. ವರ್ತುಲಾಕಾರದ (ಸರ್ಕ್ಯುಲರ್) ಆರ್ಥಿಕತೆಯಲ್ಲಿ, ನಮ್ಮ ನಗರಗಳ ತ್ಯಾಜ್ಯ ಉತ್ಪನ್ನಗಳನ್ನು ಮರುಬಳಕೆ ಮಾಡುವಲ್ಲಿ ವಿಜ್ಞಾನವು ದೊಡ್ಡ ಪಾತ್ರವನ್ನು ವಹಿಸುತ್ತದೆ. ಅಂತಹ ಪ್ರತಿಯೊಂದು ಸವಾಲನ್ನು ಎದುರಿಸಲು, ಪ್ರತಿಯೊಂದು ರಾಜ್ಯವು ವಿಜ್ಞಾನ, ಆವಿಷ್ಕಾರ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಆಧುನಿಕ ನೀತಿಯನ್ನು ರೂಪಿಸುವುದು ಮತ್ತು ಅನುಷ್ಠಾನಗೊಳಿಸುವುದು ಅಗತ್ಯವಾಗಿದೆ.
ಸ್ನೇಹಿತರೇ,
ಒಂದು ಸರ್ಕಾರವಾಗಿ, ನಾವು ನಮ್ಮ ವಿಜ್ಞಾನಿಗಳೊಂದಿಗೆ ಹೆಚ್ಚು ಹೆಚ್ಚು ಸಹಕರಿಸಬೇಕು ಮತ್ತು ಸಹಯೋಗ ನೀಡಬೇಕು. ಇದು ದೇಶದಲ್ಲಿ ವೈಜ್ಞಾನಿಕ ಆಧುನಿಕತೆಯ ವಾತಾವರಣವನ್ನು ಸುಧಾರಿಸುತ್ತದೆ. ಆವಿಷ್ಕಾರವನ್ನು ಉತ್ತೇಜಿಸುವ ಸಲುವಾಗಿ, ರಾಜ್ಯ ಸರ್ಕಾರಗಳು ಹೆಚ್ಚು ಹೆಚ್ಚು ವೈಜ್ಞಾನಿಕ ಸಂಸ್ಥೆಗಳ ರಚನೆ ಮತ್ತು ಪ್ರಕ್ರಿಯೆಗಳ ಸರಳೀಕರಣಕ್ಕೆ ವಿಶೇಷ ಒತ್ತು ನೀಡಬೇಕು. ರಾಜ್ಯಗಳ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಾವೀನ್ಯತೆ ಪ್ರಯೋಗಾಲಯಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಇಂದು ಹೈಪರ್ ಸ್ಪೆಷಲೈಸೇಶನ್ ಯುಗ. ರಾಜ್ಯಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ತಜ್ಞ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಅಂತಹ ಪ್ರಯೋಗಾಲಯಗಳಿಗೆ ಹೆಚ್ಚಿನ ಅವಶ್ಯಕತೆಯಿದೆ. ರಾಷ್ಟ್ರೀಯ ಸಂಸ್ಥೆಗಳ ಪರಿಣತಿಯ ಮೂಲಕ ಈ ನಿಟ್ಟಿನಲ್ಲಿ ಕೇಂದ್ರ ಮಟ್ಟದಲ್ಲಿ ಪ್ರತಿಯೊಂದು ರಾಜ್ಯಕ್ಕೂ ಸಹಾಯ ಮಾಡಲು ನಮ್ಮ ಸರ್ಕಾರ ಸಿದ್ಧವಿದೆ. ಶಾಲೆಗಳಲ್ಲಿ ಆಧುನಿಕ ವಿಜ್ಞಾನ ಪ್ರಯೋಗಾಲಯಗಳ ಜೊತೆಗೆ, ನಾವು ಅಟಲ್ ಟಿಂಕರಿಂಗ್ ಲ್ಯಾಬ್ ಗಳನ್ನು ನಿರ್ಮಿಸುವ ಅಭಿಯಾನವನ್ನು ಸಹ ಹೆಚ್ಚಿಸಬೇಕಾಗಿದೆ.
ಸ್ನೇಹಿತರೇ,
ರಾಜ್ಯಗಳಲ್ಲಿ ಅನೇಕ ರಾಷ್ಟ್ರೀಯ ಮಟ್ಟದ ವೈಜ್ಞಾನಿಕ ಸಂಸ್ಥೆಗಳು ಮತ್ತು ಪ್ರಯೋಗಾಲಯಗಳಿವೆ. ರಾಜ್ಯಗಳು ತಮ್ಮ ಸಾಮರ್ಥ್ಯ ಮತ್ತು ಪರಿಣತಿಯ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕು. ನಾವು ನಮ್ಮ ವಿಜ್ಞಾನ ಸಂಬಂಧಿತ ಸಂಸ್ಥೆಗಳ ನಡುವಿನ ಕಂದಕದ ಸ್ಥಿತಿಯಿಂದ ಹೊರತೆಗೆಯಬೇಕು. ರಾಜ್ಯದ ಸಾಮರ್ಥ್ಯ ಮತ್ತು ಸಂಪನ್ಮೂಲಗಳ ಉತ್ತಮ ಬಳಕೆಗಾಗಿ ಎಲ್ಲಾ ವೈಜ್ಞಾನಿಕ ಸಂಸ್ಥೆಗಳ ಗರಿಷ್ಠ ಬಳಕೆಯೂ ಅಷ್ಟೇ ಅಗತ್ಯವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ತಳಮಟ್ಟದಿಂದ ಮುಂದಕ್ಕೆ ಕೊಂಡೊಯ್ಯುವ ಇಂತಹ ಕಾರ್ಯಕ್ರಮಗಳ ಸಂಖ್ಯೆಯನ್ನು ನಿಮ್ಮ ರಾಜ್ಯಗಳಲ್ಲಿ ನೀವು ಹೆಚ್ಚಿಸಬೇಕು. ಜೊತೆಗೆ ನಾವು ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಉದಾಹರಣೆಗೆ, ಅನೇಕ ರಾಜ್ಯಗಳಲ್ಲಿ ವಿಜ್ಞಾನ ಉತ್ಸವಗಳು ನಡೆಯುತ್ತವೆ ಆದರೆ ಅನೇಕ ಶಾಲೆಗಳು ಅದರಲ್ಲಿ ಭಾಗವಹಿಸುವುದಿಲ್ಲ ಎಂಬುದು ಸಹ ನಿಜ. ನಾವು ಅದಕ್ಕೆ ಕಾರಣಗಳನ್ನು ಹುಡುಕಬೇಕು ಮತ್ತು ಹೆಚ್ಚು ಹೆಚ್ಚು ಶಾಲೆಗಳನ್ನು ಅಂತಹ ವಿಜ್ಞಾನ ಉತ್ಸವಗಳ ಭಾಗವಾಗಿಸಬೇಕು. ನಿಮ್ಮ ರಾಜ್ಯದ ಮತ್ತು ಇತರ ರಾಜ್ಯಗಳ 'ವಿಜ್ಞಾನ ಪಠ್ಯಕ್ರಮ'ದ ಮೇಲೆ ನಿಕಟ ನಿಗಾ ಇಡುವಂತೆ ನಾನು ಎಲ್ಲಾ ಸಚಿವರಿಗೆ ಸೂಚಿಸುತ್ತೇನೆ. ಇತರ ರಾಜ್ಯಗಳಲ್ಲಿನ ಉತ್ತಮವಾದ್ದನ್ನು ನೀವು ನಿಮ್ಮ ರಾಜ್ಯದಲ್ಲಿ ಪುನರಾವರ್ತಿಸಬಹುದು. ದೇಶದಲ್ಲಿ ವಿಜ್ಞಾನವನ್ನು ಉತ್ತೇಜಿಸಲು, ಪ್ರತಿಯೊಂದು ರಾಜ್ಯದಲ್ಲೂ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ನಿರ್ಮಿಸುವುದು ಅಷ್ಟೇ ಅಗತ್ಯವಾಗಿದೆ.
ಸ್ನೇಹಿತರೇ,
ಈ 'ಅಮೃತ ಕಾಲ'ದಲ್ಲಿ, ಭಾರತದ ಸಂಶೋಧನೆ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯು ವಿಶ್ವದ ಅತ್ಯುತ್ತಮವಾಗಲು ನಾವು ಹೃದಯಾಂತರಾಳದಿಂದ ಶ್ರಮಿಸಬೇಕಾಗಿದೆ. ಈ ದಿಶೆಯಲ್ಲಿ ಅರ್ಥಪೂರ್ಣ ಮತ್ತು ಸಮಯೋಚಿತ ಪರಿಹಾರಗಳೊಂದಿಗೆ ಈ ಸಮಾವೇಶವು ಹೊರಬರಲಿ ಎಂಬ ಆಶಯದೊಂದಿಗೆ, ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ಈ ಚಿಂತನ ಮಂಥನದ ಸಮಯದಲ್ಲಿ ವಿಜ್ಞಾನದ ಪ್ರಗತಿಯಲ್ಲಿ ಹೊಸ ಆಯಾಮಗಳು ಮತ್ತು ನಿರ್ಣಯಗಳನ್ನು ಸೇರಿಸಲಾಗುವುದು ಎಂಬ ಖಾತ್ರಿ ನನಗಿದೆ. ಭವಿಷ್ಯದಲ್ಲಿ ಇರುವ ಅವಕಾಶವನ್ನು ನಾವು ಕಳೆದುಕೊಳ್ಳುವುದಿಲ್ಲ. ನಾವು ಬಹಳ ಅಮೂಲ್ಯವಾದ 25 ವರ್ಷಗಳನ್ನು ಹೊಂದಿದ್ದೇವೆ. ಈ 25 ವರ್ಷಗಳು ಭಾರತವು ಹೊಸ ಅಸ್ಮಿತೆ, ಚೈತನ್ಯ ಮತ್ತು ಸಾಮರ್ಥ್ಯದೊಂದಿಗೆ ವಿಶ್ವದಲ್ಲಿ ಎದ್ದು ಕಾಣುತ್ತದೆ. ಆದ್ದರಿಂದ ಸ್ನೇಹಿತರೇ, ಈ ಸಮಯವು ನಿಜವಾದ ಅರ್ಥದಲ್ಲಿ ನಿಮ್ಮ ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಒಂದು ಶಕ್ತಿಯಾಗಬೇಕು. ಈ ಚಿಂತನ ಮಂಥನದ ಅಧಿವೇಶನದಿಂದ ನೀವು ಆ ಜೇನನ್ನು ಹೊರತೆಗೆಯುತ್ತೀರಿ ಎಂಬ ಖಾತ್ರಿ ನನಗಿದೆ., ಇದು ನಿಮ್ಮ ಆಯಾ ರಾಜ್ಯಗಳಲ್ಲಿನ ಸಂಶೋಧನೆಯ ಜೊತೆಗೆ ದೇಶದ ಪ್ರಗತಿಯನ್ನು ಹೆಚ್ಚಿಸುತ್ತದೆ. ಅಭಿನಂದನೆಗಳು! ಧನ್ಯವಾದಗಳು!
ಘೋಷಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ
*****
(Release ID: 1858480)
Visitor Counter : 161
Read this release in:
Bengali
,
English
,
Urdu
,
Marathi
,
Hindi
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam